"ಸಾವಿರ ಅಚ್ಚರಿಗಳನ್ನು ಹುಟ್ಟುಹಾಕಿದ, ತಣಿಯದ ಕುತೂಹಲವನ್ನು ಹುಟ್ಟಿಸಿದ, ಮುಗಿಯದಷ್ಟು ಪ್ರಶ್ನೆಗಳನ್ನೆಬ್ಬಿಸಿದ ಇಂತಹದ್ದೊಂದು ಅನುಪಮ ಪುಸ್ತಕ ಕೊಟ್ಟ ಸ್ವಸ್ತಿ ಪ್ರಕಾಶನಕ್ಕೂ, ಗಂಗೋತ್ರಿಯವರಿಗೂ ಅಕ್ಷರದೇವತೆಯ ಅಕ್ಕರೆ ಮುಗಿಯದಷ್ಟಿರಲಿ" ಎನ್ನುತ್ತಾರೆ ವಿಮರ್ಶಕಿ ವಿಭಾ ಅಡಿಗ. ಅವರು ಲೇಖಕ ನವೀನ ಗಂಗೋತ್ರಿ ಅವರ "ಕಥಾಗತ" ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ...
ಪುಸ್ತಕ ಕೈಗೆ ಸಿಕ್ಕಿದಾಗಿಂದ ಆಗೀಗ ಅಂತ ಒಂದೊಂದು ಕಥೆ ಓದುತ್ತಾ ಸಾಗಿದ್ದೆ. ಇವತ್ತು ಎರಡನೇಯ ಬಾರಿಗೆ ಪೂರ್ತಿ ಓದಿ ಮುಗಿಸಿದ ಈ ಹೊತ್ತಗೆ ಕೈಯಲ್ಲಿದ್ದರೆ ತಲೆಯಲ್ಲಿ ಸಾವಿರ ಪ್ರಶ್ನೆಗಳು, ತಳಮುಟ್ಟದ ಯೋಚನೆಗಳು, ಅಚ್ಚರಿ, ವಿಷಾದ. ಇತಿಹಾಸ ಅನ್ನುವ ಹೆಸರಲ್ಲಿ ಅದೇನೆಲ್ಲ ಓದಿಕೊಂಡೆವು! ನಮಗೇ ಅರಿಯದಂತೆ ತಲೆಯೊಳಗೆ ಹೇಗೆಲ್ಲಾ ಸುಳ್ಳನ್ನು ತುಂಬಿಕೊಂಡೆವು ಎಂದು ಯೋಚಿಸಿದರೆ ಖೇದವಾಗುತ್ತದೆ. ಯಾವ ಯಾವನದ್ದೋ ನಾಲಗೆ ಹೊರಳದ ಹೆಸರುಗಳನ್ನು ವೀರ ಧೀರ ಪರಾಕ್ರಮಿಗಳೆಂದು ಉರು ಹೊಡೆದಿದ್ದೇಕೆ?! ನಮ್ಮದೇ ದೇವಾಲಯಗಳ ಮೇಲೆ ಕಟ್ಟಿದ ಮಹಲುಗಳನ್ನು ಜಗತ್ತಿನ ಅದ್ಭುತಗಳೆಂದು ನಂಬಿಕೊಂಡದ್ದೇಕೆ.. ಮೊಘಲ ದೊರೆಗಳು ನಮ್ಮ ಜೀವನವನ್ನು ಉದ್ಧರಿಸಿದವರೆಂದು ಪರಮ ಧರ್ಮ ಸಹಿಷ್ಣುಗಳೆಂದು ಹಾಡಿ ಹೊಗಳಿದ್ದೇಕೆ? ನಲಂದಾದಂತಹ ವಿಶ್ವವಿದ್ಯಾಲಯದ ಬಗ್ಗೆ ಕೇವಲ ಎರಡು ವಾಕ್ಯಗಳಷ್ಟೇ ಯಾಕೆ ಸಿಗುತ್ತವೆ? ಶಾಲೆಯುದ್ದಕ್ಕೂ ಇತಿಹಾಸ ಎಂದರೆ ಬರೀ ಯುದ್ಧಗಳೇ ಎಂಬಂತೆ ಬಿಂಬಿಸಿದ್ದೇಕೆ? ಪರಿಚಯವಾಗಬೇಕಿದ್ದ ಹಂತದಲ್ಲೇ ಅವಜ್ಞೆಗೆ ಒಳಗಾದ ವಿಷಯವಿದ್ದರೆ ಅದು ಬಹುಶಃ ಇತಿಹಾಸವೇ. ಅರ್ಧಕ್ಕರ್ಧ ಜನಕ್ಕೆ ಇತಿಹಾಸ ಎಂದರೆ ತಲೆನೋವು, ಆದರೆ ಕಥಾಗತ ಅದಕ್ಕೆ ಮದ್ದಾಗಿ ದೊರಕಬಲ್ಲಂಥ ಪುಸ್ತಕ.
ಮಹಾಬಲಿಪುರಂ ಎನ್ನುವ ಹೆಸರನ್ನು ಬಹಳಷ್ಟು ಜನ ಬಹುಶಃ ಮೋದಿ ಅಲ್ಲಿಗೆ ಬಂದ ಮೇಲೆಯೇ ಕೇಳಿದ್ದೇನೋ! ಅದರ ಮಹತ್ವ ಮಾತ್ರ ಈ ಪುಸ್ತಕ ಓದಿದರೆ ಬಹಳವೇ ಚನ್ನಾಗಿ ಅರ್ಥವಾಗುತ್ತದೆ. ಬಹುಶಃ ಆ ಕಾಲದ ಚೀನಾ ಭಾರತದ ಸಂಬಂಧದ ಕೊಂಡಿಯಾಗಿತ್ತೆನ್ನುವ ಕಾರಣಕ್ಕೆಯೇ ನಮ್ಮ ಪ್ರಧಾನಿಗಳು ಮತ್ತೆ ಅಲ್ಲಿಯೇ ಒಂದು ಭೇಟಿಯನ್ನೇರ್ಪಡಿಸಿರಬೇಕೆಂದು ಬಹಳವಾಗಿ ಅನ್ನಿಸಿತು. ಎಲ್ಲಕ್ಕಿಂತ ಹೆಚ್ಚಾಗಿ, ಭಾರತ ಎನ್ನುವ ಈ ದೇಶ ವಿಶ್ವಕ್ಕೆ ಕೊಟ್ಟ ಅತೀ ದೊಡ್ಡ ಕೊಡುಗೆಗಳೆರಡರ ಬಗ್ಗೆ ಅರಿವೇ ಇಲ್ಲ. ಸುಮ್ಮನೇ ಬೌದ್ಧ ಜೈನಗಳೆಂಬೆರಡು ಧರ್ಮಗಳು ಇಲ್ಲಿ ಉದಿಸಿದ್ದವು ಅಂತಷ್ಟೇ ಎಲ್ಲೋ ಎರಡು ಅಂಕದ ಪ್ರಶ್ನೆಗೆ ಓದಿಕೊಂಡದ್ದು, ಹೆಚ್ಚೆಂದರೆ ಅವು ವೈದಿಕ ಸಂಸ್ಕೃತಿಯ ಕಂದಾಚಾರಗಳನ್ನು ವಿರೋಧಿಸಲು ಹುಟ್ಟಿಕೊಂಡವು ಎಂದೆಲ್ಲ ಓದಿರಬಹುದು. ಈ ಪುಸ್ತಕದೊಳಗೆ ಆ ಧರ್ಮಗಳಿಗಾಗಿ ಜೀವವನ್ನೂ ಲೆಕ್ಕಿಸದೆ ವರುಷಗಟ್ಟಲೆ ಪಯಣಿಸಿದ ಹಿಂದೂ ಬೌದ್ಧ ಧರ್ಮಗಳೆರಡರ ಬಗೆಗೂ ಉಲ್ಲೇಖಿಸಿದ ಯಾತ್ರಿಗಳು ಸಿಕ್ಕರು ಬಿಟ್ಟರೆ ಅಲ್ಲೆಲ್ಲೂ ಅಸಹನೆಯ ದ್ವೇಷದ ಮಾತುಗಳಾಗಲಿ ಕಾರಣಗಳಾಗಲೀ ಸಿಕ್ಕಲಿಲ್ಲ. ಮಹಾಮಹಿಮರಾದ ಹಲವು ರಾಜರು ಈ ಧರ್ಮಾನುಯಾಯಿಗಳಾಗಿದ್ದು ಬುದ್ಧನ ಜಿನನ ಹೆಸರಿನ ಮಹಾ ಮಹಾ ನಿರ್ಮಿತಿಗಳು ಸಿಕ್ಕವೇ ಹೊರತು ಅವರ ಹೆಸರಿನಿಂದ ಇಲ್ಯಾವ ಅವನತಿಗಳೂ ಆಗಲಿಲ್ಲ. ಇನ್ನೂ ಹೆಚ್ಚೆಂದರೆ ಆಗಿನ ಭಾರತಕ್ಕೆ ಬುದ್ಧನ ಹೆಸರಿನಿಂದಲೇ ವ್ಯಾಪಾರ ವಹಿವಾಟುಗಳು ಹೆಚ್ಚಾದವೇ ಹೊರತು ಇನ್ಯಾವ ಕಷ್ಟ ನಷ್ಟಗಳುಂಟಾಗಲಿಲ್ಲ. ಮತ್ತೆ ನಮ್ಮ ಮನದಲ್ಲೇಕೆ ಶಾಂತಿ ಅಹಿಂಸೆಗಳನ್ನುಸಿರಾಡುವ ಆ ಧರ್ಮಗಳ ಬಗ್ಗೆ ಕೊಸರು? ಯಾರಿದನ್ನು ಹುಟ್ಟುಹಾಕಿದವರು? ಏನಿದಕ್ಕೆ ಕಾರಣ?
ಇತಿಹಾಸದ ಬಗೆಗಿನ ಹೊಸ ಹೊಳಹೊಂದು ಈ ಪುಸ್ತಕದಲ್ಲಿ ಕಾಣಿಸುತ್ತದೆ ಎಂದರೆ ಉತ್ಪ್ರೇಕ್ಷೆಯಲ್ಲ. ಇತಿಹಾಸವನ್ನು ನಾವು ನೋಡುವ ಸರಿಯಾದ ದೃಷ್ಟಿ ಅಥವಾ ದಾರಿ ಇದೇ ಇರಬೇಕು, ಕಥೆಗಳು. ಇನ್ನೊಬ್ಬರಿಗೆ ಸರಳವಾಗಿ ಆಸಕ್ತಿದಾಯಕವಾಗಿ ತೋರುವ ಮಾಧ್ಯಮವೂ ಇದೇ. ಕಥಾಸಂಕಲನವೊಂದು ನೈಜ ಇತಿಹಾಸದ ಕಥೆಗಳನ್ನು ತನ್ನ ಕಲ್ಪನೆಯ ಪಾತ್ರಗಳ ಮೂಲಕ ಎಷ್ಟು ಚಂದಕ್ಕೆ ಕಟ್ಟಿಕೊಟ್ಟಿದೆ! ಹೆಸರು ಕೇಳಿದಾಗ ಅಥವಾ ಕಥಾಸಂಕಲನವೆಂದಾಗ ಕಲ್ಪನೆಯೂ ಬಾರದಂತಹ ವಸ್ತುವಿದೆ ಇದರೊಳಗೆ. ಇತಿಹಾಸ ಎಂದರೆ ಮಾರು ದೂರ ಹಾರುವವರೂ ಕೂಡ ಮುಂದ್ಯಾವ ಕಥೆ ಎಂದು ಪುಟ ತಿರುವಿ ನೋಡುವಂತಹ ನಿರೂಪಣೆ, ಕಥಾವಸ್ತು. ಅದೆಷ್ಟು ರಾಜವಂಶಗಳ ಕಥೆ, ಅದೆಷ್ಟು ನಿರ್ಮಿತಿಗಳ ಕಥೆ, ಒಂದಿಷ್ಟು ವಿಷಾದ ತುಂಬಿಕೊಳ್ಳುವುದಿಲ್ಲ ಎನ್ನುತ್ತಿಲ್ಲ ನಾನು. ಗತ ಎಂದಿದ್ದರೂ ವಿಷಾದದ್ದೇ ಆದರೆ ಅದರ ಜೊತೆಗಿನ ಹೆಮ್ಮೆಯಿದೆಯಲ್ಲಾ ಅದು ಬೆಲೆಕಟ್ಟಲಾಗದ್ದು. ನಂಬಿಕೆದ್ರೋಹದ ಕಥೆಯಿದೆಯಲ್ಲಾ ಅದು ಎಚ್ಚರಿಕೆಯದ್ದು.
ವಿಜಯನಗರ ಇದೆಲ್ಲದಕ್ಕೂ ಜೀವಂತ ಉದಾಹರಣೆಯಂಥದ್ದು. ಎಲ್ಲ ರಾಜವಂಶಗಳ ಅಂತ್ಯಗಳೂ ಬಹಳವೇ ಕಾಡುತ್ತವೆ, ಅವರ ನಿರ್ಮಿತಿಗಳ ಬಗೆಗಿನ ವರ್ಣನೆ ಓದುವಾಗೆಲ್ಲ ಅಲ್ಲಿಯೇ ಹೋಗಿ ನಿಂತು ಮತ್ತೆ ಈ ಕಥೆಗಳನ್ನು ಓದಿಕೊಳ್ಳುವ ಮನಸಾಗುತ್ತದೆ. ವಿಶಿಷ್ಟ ಹೆಸರಿನ ಕಥೆಗಳಿರುವ ಇದೇ ಪುಸ್ತಕವನ್ನು ಇನ್ನೊಂದು ನಾಲ್ಕು ಸಲವಾದರೂ ಓದಬೇಕೇನೋ ಕಥಾವಸ್ತು ತಲೆಯೊಳಗೆ ಗಟ್ಟಿಯಾಗಿ ನಿಲ್ಲಲು. ಅಯ್ಯೋ, ಕಥಾಸಂಕಲನವಲ್ವಾ ಒಂದೇ ಗುಕ್ಕಿಗೆ ಓದಿ ಮುಗಿಸಿಬಿಡುತ್ತೇನೆಂದುಕೊಳ್ಳುವವರಿಗೆ ಸುಲಭದ ತುತ್ತಲ್ಲ ಇದು. ಒಂದು ಕಥೆ ಮುಗಿಯುತ್ತಲೇ ತಲೆಯೊಳಗೆ ಸಾವಿರ ಯೋಚನೆಗಳ ಮಹಾಪೂರ. ಮತ್ತೊಮ್ಮೆ ಓದಿ ಬಿಡುವಾ ಅದೇ ಕಥೆಯನ್ನು ಎಂದೆನಿಸಿದರೆ ಆಶ್ಚರ್ಯವಿಲ್ಲ. ಅದೇ, ಇತಿಹಾಸದ ಆಸಕ್ತಿಯಿರದವರಿಗೂ ಆಸಕ್ತಿ ಹುಟ್ಟಿಸುವ ಕಥಾನಕ. ನಮ್ಮ ನೆಲದ ಕಥೆ, ನಮ್ಮದೇ ಕಥೆ, ನಾವೆಲ್ಲ ತಿಳಿಯಬೇಕಿರುವ ಕಥೆ. ಮತ್ತೆ ಎಂದಿಗೂ ಮರೆಯಬಾರದ ಕಥೆ, ಮೈಮರೆವೆಯಲ್ಲಿರುವವರಿಗೆ ಎಚ್ಚರಿಕೆಯ ಕಥೆ. ಇಷ್ಟೂ ದಿನವೂ ಇತಿಹಾಸವೆಂದರೆ ಸಿಂಧೂ ನದಿ ನಾಗರಿಕತೆಯ ಆರ್ಯ ದ್ರಾವಿಡ ವಾದಗಳದ್ದು, ಅದಲ್ಲದಿದ್ದರೆ ಪರದೇಶಿಗಳೆದುರು ಅದೆಷ್ಟೋ ಸಲ ಗೆದ್ದು ಕೊನೆಗೆ ಮೋಸದಾಟಕ್ಕೆ ಬಲಿಯಾಗಿ ಹೀನಾಯವಾಗಿ ಸೋತ ರಾಜರ ಕಥೆ, ಆಮೇಲೆ ಗಾಂಧೀ ನೆಹರೂ ಸ್ವಾತಂತ್ರ್ಯ ತಂದು ದೇಶವಾಳಿದ ಕಥೆ ಅದಕ್ಕೂ ತೀರಾ ಈಚೆಗೆ ಕಾಶ್ಮೀರದ ನಿವಾಸಿಗಳು ಅವರ್ಯಾರೋ ಅಲ್ಪಸಂಖ್ಯಾತರನ್ನು ಕೊಲ್ಲಬಹುದೆನ್ನುವ ಊಹೆಯ ಮೇಲೆಯೇ ನಡೆದ ಅಲ್ಲಿನ ಪಂಡಿತರ ಬರ್ಬರ ಹತ್ಯಾಕಾಂಡದ ಕಥೆಯೆಂದು ನಂಬಿ ಕುಳಿತವರಿಗೆ ಈ ಹೆಮ್ಮೆಯ ಕಥೆಗಳು ತಲುಪಬೇಕು.
ನಮ್ಮದೆನಲು ಏನೇನಿದೆ ಇಲ್ಲಿ ಎನ್ನುವುದು ಅರಿವಾಗಬೇಕು. ದೇಶೋದ್ಧಾರಕರೆಂಬ ಪಟ್ಟಹೊತ್ತ ದೊರೆಗಳ ಹೇಯ ಕೆಲಸಗಳ ಅರಿವಾಗಬೇಕು. ಓದಿಕೊಂಡ ಸುಳ್ಳು ಇತಿಹಾಸದ ಮೇಲೊಂದು ಸತ್ಯದ ಮೊಹರು ಬೀಳಬೇಕು. ಇನ್ನೆಷ್ಟೋ ಜನ ಸುಳ್ಳನ್ನೇ ನಂಬಿ ಕೂರುವ ಸ್ಥಿತಿ ಬದಲಾಗಬೇಕು. ಇಂತಹ ನೈಜ ಇತಿಹಾಸದ ಇನ್ನಷ್ಟು ಮತ್ತಷ್ಪು ಕಥಾನಕಗಳು ಬರಬೇಕು, ಭಾರತೀಯ ನಿಜವಾದ ಇತಿಹಾಸಕ್ಕೊಂದು ವಿಶ್ವಕೋಶದಂಥ ಪುಸ್ತಕ ಬರಬೇಕು. ಮುಂದಿನ ಪೀಳಿಗೆಯಾದರೂ ಸುಳ್ಳಿನ ಮುಸುಕಿಂದ ಹೊರಬರಬೇಕು. ಸತ್ಯದ ಅರಿವು ರಾಷ್ಟ್ರಪ್ರೇಮದ ಕಿಚ್ಚನ್ನು ಹಚ್ಚಿ, ಭಾರತೀಯರೆಂದು ತಲೆಯಿತ್ತಿ ನಡೆಯಲು ದೀವಿಗೆಯಾಗುವುದಲ್ಲಾ, ಅಂತಹ ಪುಸ್ತಕಗಳು ಬರಬೇಕು. ಈಗೆಲ್ಲ ಹೇಗೆ ಒತ್ತಾಯಕ್ಕೆ ಸುಳ್ಳು ಸುಳ್ಳೇ ಇತಿಹಾಸವನ್ನು ಓದಿಕೊಂಡಿದ್ದೇವಲ್ಲ ಹಾಗೆಯೇ ಸತ್ಯವನ್ನೂ ವಿದ್ಯಾಲಯಗಳಲ್ಲಿ ಕುಡಿಸುವ ಕೆಲಸವಾಗಲಿ. ನಮ್ಮ ಕಥೆಗಳು ಸಾಕು ನಮ್ಮನ್ನು ಒಗ್ಗೂಡಿಸಲು, ಹಾಗಾಗಿ ಈ ಕಥೆಗಳು ದಿಕ್ಕುಗಳನ್ನು ತಲುಪಲಿ. ವಂದೇ ಮಾತರಂ ಎನ್ನುವ ಜಯಘೋಷ ಮೊಳಗಲಿ…
ಸಾವಿರ ಅಚ್ಚರಿಗಳನ್ನು ಹುಟ್ಟುಹಾಕಿದ, ತಣಿಯದ ಕುತೂಹಲವನ್ನು ಹುಟ್ಟಿಸಿದ, ಮುಗಿಯದಷ್ಟು ಪ್ರಶ್ನೆಗಳನ್ನೆಬ್ಬಿಸಿದ ಇಂತಹದ್ದೊಂದು ಅನುಪಮ ಪುಸ್ತಕ ಕೊಟ್ಟ ಸ್ವಸ್ತಿ ಪ್ರಕಾಶನಕ್ಕೂ, ಗಂಗೋತ್ರಿಯವರಿಗೂ ಅಕ್ಷರದೇವತೆಯ ಅಕ್ಕರೆ ಮುಗಿಯದಷ್ಟಿರಲಿ…
- ವಿಭಾ ಅಡಿಗ
"ಎರಡನೆಯವರು ಅನ್ವಯಿಕ ಮನೋವಿಜ್ಞಾನದ ಪ್ರವರ್ತಕರು. ಇವೆರಡು ಮನೋವಿಜ್ಞಾನದ ಎರಡು ಕಣ್ಣುಗಳಿದ್ದಂತೆ. ಪ್ರಸ್ತುತ ಗ್ರ...
“ಈ ರೀತಿಯ ಪ್ರಯೋಗ ಕನ್ನಡ ಸಾಹಿತ್ಯದಲ್ಲಿ ಅತೀ ವಿರಳವಾಗಿರುವಾಗ ಈ ಪ್ರಯೋಗಕ್ಕೆ ಒಂದು ಚಪ್ಪಾಳೆ ಕೊಡಲೇಬೇಕು,&rdq...
“ಪ್ರಣೀತ್, ಪ್ರತೀಕ್ಷಾ ದಕ್ಷ ಆಡಳಿತ ಸೇವೆ, ಜಯ ಚಂದ್ರ ಸಾಗರ್ ಕುಟುಂಬ ಪರಿಚಯ, ರಾಜಕೀಯ ಹಿನ್ನಲೆ, ಮುಂತಾದ ವಿಷಯಗ...
©2025 Book Brahma Private Limited.