ಇದೊಂದು ವೈಜ್ಞಾನಿಕ ಕೃತಿಯಾದರೂ ಓದುಗರಿಗೆ ಹಾಗೆನಿಸುವುದಿಲ್ಲ


""ಕಲ್ಲಲಿ ಮಣ್ಣಲಿ ಎಲ್ಲೆಲ್ಲಿಯು ಚೈತನ್ಯ... ತೆಗೆ ಜಡವೆಂಬುದೆ ಸುಳ್ಳು"ಎನ್ನುತ್ತಾರೆ ಕುವೆಂಪು. ತೇಜಸ್ವಿಯವರಿಗೆ ಒಂದು ಸಣ್ಣ ಹುಳ ಹುಪ್ಪಟೆ, ಹಕ್ಕಿ, ಮಣ್ಣುಗುಡ್ಡೆ, ಬಿದ್ದಿರುವ ಬಂಡೆ ಇವುಗಳು ಕೂಡ ನಮ್ಮ ಪರಿಸರದ ಭಾಗವಾಗುತ್ತದೆ. ಇವುಗಳ ಜೊತೆ ಪ್ರೀತಿಯಿಂದ ಇರುವುದೇ ಬದುಕು. ಹೀಗೆ ನಮ್ಮ ವಿಶ್ವ ಒಂದು ಇನ್ನೊಂದನ್ನು ಸಂಕೀರ್ಣ ಸಂಬಂಧದ ಜಾಲದೊಳಗೆ ಬಂಧಿಸಿದೆ," ಎನ್ನುತ್ತಾರೆ ಗಿರಿಜಾ ಶಾಸ್ತ್ರಿ. ಅವರು ‘ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು’ ಕೃತಿ ಕುರಿತು ಬರೆದ ಅನಿಸಿಕೆ.

ವಿದ್ಯೆ ಕಲಿಯಲು ಬಂದ ಜಾಬಾಲಳ ಮಗ ಸತ್ಯಕಾಮನ ಉತ್ಸಾಹ, ಪ್ರಾಮಾಣಿಕತೆಯನ್ನು ಕಂಡ ಗುರು ಹಾರೀತ ಮುನಿ ಅವನಿಗೆ ನಾನೂರು ಹಸುಗಳನ್ನು ಕೊಟ್ಟು ಅವುಗಳನ್ನು ಮೇಯಿಸಿಕೊಂಡು ಬರಲು ಕಾಡಿಗೆ ಕಳುಹಿಸುತ್ತಾನೆ ಮತ್ತು ಅವು ಸಾವಿರ ಸಂಖ್ಯೆಗಳಾಗುವವರೆಗೂ ಕಾಡಿನಲ್ಲಿಯೇ ಇರಬೇಕು ಎಂದು ಷರತ್ತು ಹಾಕುತ್ತಾನೆ. ಒಂದು ಗೂಳಿ, ಹಂಸ, ಹಕ್ಕಿ ಮತ್ತು ಬೆಂಕಿಯೊಡನೆ ಮಾಡಿದ ಸಂಭಾಷಣೆಯ ಮೂಲಕ ಅವನಿಗೆ‌ ಬ್ರಹ್ಮ ಜ್ಞಾನ ಪ್ರಾಪ್ತವಾಗುತ್ತದೆ, ಬ್ರಹ್ಮ ಸ್ವರೂಪ ವಿಶ್ವದ ಎಲ್ಲಾ ಜಡ ಚೇತನಗಳಲ್ಲೂ ಇದೆ ಎಂಬುದರ ಜ್ಞಾನೋದಯವಾಗುತ್ತದೆ, ಎಂಬ ಕಥೆ ಇದೆ.

ಅಂದರೆ ವಿಶ್ವದ ಸಮಸ್ತ ಜೀವಜಾಲಗಳಲ್ಲೂ ಪ್ರವಹಿಸುತ್ತಿರುವ ತತ್ವವೊಂದೇ‌ ಅವು ಒಂದಕ್ಕೊಂದು ಸಂಬಂಧಿಸಿವೆ. ಅವುಗಳ ಅಳಿವು ಉಳಿವು ಪಾರಸ್ಪರಿಕವಾದುದು ಎಂಬುದೇ ಆತ್ಯಂತಿಕ ವಾಸ್ತವ ಇದೇ ಸತ್ಯಕಾಮನಿಗೆ ಆದ ಜ್ಞಾನೋದಯ. ನಿಸರ್ಗಕ್ಕಿಂತ ದೊಡ್ಡ ಗುರು ಇನ್ನೊಂದಿಲ್ಲ. ನಮ್ಮ ಸುತ್ತಮುತ್ತಲಿನ ಅದನ್ನು ಅದಮ್ಯವಾಗಿ ಪ್ರೀತಿಸುವ ಮನಸ್ಸಿರಬೇಕಷ್ಟೇ!

ಅಷ್ಟೇ ಏಕೆ ನಾವೂ ಅದರ ಭಾಗವೇ ಆಗಿದ್ದೇವಲ್ಲ! ಈ ಅರಿವಿನ ಆಸ್ಫೋಟದಿಂದ, ಅದನ್ನು ನಿರಂತರವಾಗಿ ಜಾಗೃತವಾಗಿ ಇಟ್ಟುಕೊಳ್ಳುವುದರಿಂದ, ಆಗ ಯಾರೂ ಕೂಡ ಬ್ರಹ್ಮಜ್ಞಾನಿಯಾಗಬಹುದು. "ಕಾಡಮೂಲಕವೇ ಪಥ ಆಗಸಕ್ಕೆ" ಎನ್ನುತ್ತಾರೆ ಅಡಿಗರು.

"ಕಲ್ಲಲಿ ಮಣ್ಣಲಿ ಎಲ್ಲೆಲ್ಲಿಯು ಚೈತನ್ಯ... ತೆಗೆ ಜಡವೆಂಬುದೆ ಸುಳ್ಳು"ಎನ್ನುತ್ತಾರೆ ಕುವೆಂಪು. ತೇಜಸ್ವಿಯವರಿಗೆ ಒಂದು ಸಣ್ಣ ಹುಳ ಹುಪ್ಪಟೆ, ಹಕ್ಕಿ, ಮಣ್ಣುಗುಡ್ಡೆ, ಬಿದ್ದಿರುವ ಬಂಡೆ ಇವುಗಳು ಕೂಡ ನಮ್ಮ ಪರಿಸರದ ಭಾಗವಾಗುತ್ತದೆ. ಇವುಗಳ ಜೊತೆ ಪ್ರೀತಿಯಿಂದ ಇರುವುದೇ ಬದುಕು. ಹೀಗೆ ನಮ್ಮ ವಿಶ್ವ ಒಂದು ಇನ್ನೊಂದನ್ನು ಸಂಕೀರ್ಣ ಸಂಬಂಧದ ಜಾಲದೊಳಗೆ ಬಂಧಿಸಿದೆ. ಆದುದರಿಂದಲೇ ವಿಶ್ವದೊಳಗಿನ ನಮ್ಮ ಅಸ್ತಿತ್ವಕ್ಕೆ ವ್ಯಕ್ತಿ ವಿಶಿಷ್ಟತೆ ಇಲ್ಲವಾದರೂ, ವಿಶ್ವವನ್ನು ನೋಡುವ, ಗ್ರಹಿಸುವ ಕ್ರಮಕ್ಕೆ ಇದೆ.

ಇಂತಹ ಸಂಶ್ಲೇಷಣಾತ್ಮಕ ದೃಷ್ಟಿಕೋನವನ್ನು ಪುರುಷೋತ್ತಮ ರಾವ್ ಅವರ 'ಪೆದ್ದನ್ನನ ಇಕಾಲಜಿ ಮತ್ತು ಪರಿಸರ ಲೇಖನಗಳು' ಕೃತಿ ದಯಪಾಲಿಸುತ್ತದೆ. ಭೂಮಿಯಿರುವುದು ತನಗೊಬ್ಬನಿಗೆ ಮಾತ್ರ ಎಂಬ ಅಜ್ಞಾನ ಅಹಂಕಾರದಲ್ಲಿ, ಮನುಷ್ಯ ತನ್ನ ಉಪಯೋಗಕ್ಕೆ ಅನುವು ಮಾಡಿಕೊಡುವ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳುತ್ತಿದ್ದಾನೆ. ಅವನಿಗೇನಾದರೂ ಸತ್ಯಕಾಮನ ಕಾಣ್ಕೆ ಇದ್ದಿದ್ದೇ ಆದರೆ ಜಗತ್ತಿನ ಜೀವಜಾಲದಲ್ಲೇ ತಾನೆಂತಹ ಸ್ವಾರ್ಥಿ ಮತ್ತು‌ನಿಕೃಷ್ಟಪ್ರಾಣಿ ಎಂಬ ಅರಿವಾಗುತ್ತಿತ್ತು. 'ಪೆದ್ದನ್ನನ ಇಕಾಲಜಿ' ಓದುಗರಿಗೆ ಸತ್ಯಕಾಮನ ಕಣ್ಣುಗಳನ್ನು ದಯಪಾಲಿಸುತ್ತವೆ. ಭೂಮಿಗೆ ಕನ್ನ ಹಾಕಿ "ಪಾತಾಳ ಕಾಣುತ್ತಿರುವ ತಾಯ್ಗಂಡರ" ವಿಷ ವರ್ತುಲದಲ್ಲಿ ಇಂತಹ ಪುಸ್ತಕಗಳು ಎಷ್ಟು ಬಂದರೂ ಸಾಲದು.

ಪರಿಸರವೆಂದರೆ ನದಿ ಜಲಪಾತಗಳು ಗುಡ್ಡ ಗುಹೆಗಳು, ನೀರಿನ ಒರತೆಗಳು, ಕಾಡುಗಳು, ಪ್ರಾಣಿಗಳು, ಸಸ್ಯರಾಶಿ, ನಿಸರ್ಗದ ಭಾಗವೇ ಆದ ಮನುಷ್ಯ ಸಂಬಂಧಗಳ ಆರ್ದ್ರತೆ, ಪ್ರೀತಿ ಎಲ್ಲವೂ ಇಲ್ಲಿ ಲೇಖಕರ ಕ್ಯಾಮರಾ ಕಣ್ಣಿಗೆ ಸಿಕ್ಕಿ ಒಂದು ವಿಸ್ಮಯ ಲೋಕವನ್ನು ಸೃಷ್ಟಿಸಿವೆ. ಕಾಡಿನಲ್ಲಿ ಚಾರಣ ಮಾಡುತ್ತಾ ಸೃಷ್ಟಿಯ ವಿಸ್ಮಯಗಳನ್ನು, ಅವುಗಳ ಬಗಗೆ ಬೇರೂರಿರುವ ಭ್ರಮೆಗಳನ್ನು ಹರಿಸುತ್ತಾ ಲೇಖಕರು ಕಾಡುಗುಡ್ಡಗಳಲ್ಲಿ ಚಾರಣ ಮಾಡುವಾಗ ಓದುಗರೂ ಅವರ ಜೊತೆ ಹೈಕಿಂಗ್ ಹೊರಡುತ್ತಾರೆ.

ಇದೊಂದು ವೈಜ್ಞಾನಿಕ ಕೃತಿಯಾದರೂ ಓದುಗರಿಗೆ ಹಾಗೆನಿಸುವುದಿಲ್ಲ. 'ಕಾಂತಾ ಸಂಹಿತೆಯ' ಕಥಾ ಗುಣ ಇದಕ್ಕಿದೆ. ಲೇಖಕರ ಕಾಂತೆ ಮತ್ತು ಅತ್ತೆ ಲಲಿತಮ್ಮನವರ ಮಾತೃಹೃದಯ ಈ ಜೀವಜಾಲವನ್ನು ಪೊರೆಯುವ ಪ್ರತೀಕಗಳಾಗಿಯೂ ಬಂದಿರುವುದೇ ಇದಕ್ಕೆ ಕಾರಣ. ಕತ್ತಾಳೆ, ಲಾಂಟಾನ, ಕಲಗಚ್ಚು, ಮುಂತಾದ ನಿಷ್ಪ್ರಯೋಜಕವೆಂದು ಕೊಂಡ ವಸ್ತುಗಳ ಶಕ್ತಿ, ಮಲೆನಾಡ ಕಾಡು, ಬಯಲು ಸೀಮೆಯ ಬಂಜರು , ಅವರ ಜನ ಜೀವನ ಹಾಗೂ ಅವರ ಭಾಷೆಯಲ್ಲಿರುವ ವ್ಯತ್ಯಾಸ ಇವುಗಳ ಸುತ್ತ ಸ್ವಾರಸ್ಯಕರ ಕಥೆಗಳು ಚಲ್ಲವರಿದಿವೆ.

ಕಾಡಿನಲ್ಲಿ ಸಿಗುವ ಅನೇಕ ಕಾಡು ಸಸ್ಯಗಳು ಅವುಗಳ ವೈಜ್ಞಾನಿಕ ಹಿನ್ನೆಲೆ, ಉಪಯೋಗ, ಅದರ ಚರಿತ್ರೆ, ಅವುಗಳ ವಲಸೆಯ ಸ್ವರೂಪ, ಅವುಗಳ ವೈಜ್ಞಾನಿಕ ಹೆಸರುಗಳು ಎಲ್ಲವನ್ನೂ ಇಲ್ಲಿ ಕೊಟ್ಟಿರುವುದು ಲೇಖಕರ ಸ್ಪಷ್ಟ ಗ್ರಹಿಕೆಗೆ ಉದಾಹರಣೆಯಾಗಿದೆ.

ಪ್ರಾಗೈತಿಹಾಸಿಕ ಗುಹೆಗಳು, ಮಾರಕ ಸಯನೈಡ್ ಗುಡ್ಡವೊಂದನ್ನು ಹಸಿರು ಮುಕ್ಕಳಿಸುವ ಗುಡ್ಡವನ್ನಾಗಿಸುವಲ್ಲಿ ಪರಿಸರ ಪ್ರೇಮಿ ತ್ಯಾಗರಾಜು ಮುಂತಾದವರ ಶ್ರಮ ಪರಿಸರಕ್ಕಾಗಿ ತೆತ್ತುಕೊಳ್ಳುವ ಪ್ರೀತಿ ಅನನ್ಯವಾಗಿ ಚಿತ್ರಣಗೊಂಡಿವೆ.

ಪ್ರಾಣಿಗಳ ಮೇಲಾಗುವ ಕಾಡ್ಗಿಚ್ಚಿನ ಪರಿಣಾಮಗಳು, ಜಿಂಕೆಯನ್ನು ರಕ್ಷಿಸಿದ ಪ್ರಸಂಗ ನೀರಿನಗೋಪುರಗಳು, ಆನೆಗಳು, ಹಾವುಗಳು, ಕರಡಿ, ನವಿಲುಗಳು, ಚಿರತೆ,ನಾಯಿ ಬೆಕ್ಕುಗಳು, ಬಾವುಲಿಗಳು, ಮುಳ್ಳುಹಂದಿ, ಮುಂಗುಸಿ ಮುಂತಾದ ಪ್ರಾಣಿಗಳ ಗುಣ ಸ್ವಭಾವಗಳು, ಅವುಗಳ ಸ್ವಭಾವಕ್ಕೆ ಅಂಟಿರುವ ತಪ್ಪುಕಲ್ಪನೆಗಳು, (ಲೇಖಕರು ಅವುಗಳಿಗೆ ಎದುರಾದಾಗ ಅನುಭವಿಸುವ ಸೂಕ್ಷ್ಮ ಸಂವೇದನೆ) ಕಾಡಿನೊಳಗೆ ಚಾರಣ ಮಾಡಿಸುವ ಸ್ಥಳೀಯ ಮುಗ್ಧ ಜ್ಞಾನಿಗಳು (ಕರ್ವಾಲೋದ ಮಂದಣ್ಣನನ್ನು ಹೋಲುವ ಪದ್ದನ್ನ ಮುಂತಾದ ಸ್ಥಳೀಯರು) ಈ ಎಲ್ಲವುಗಳ ಅಸ್ತಿತ್ವವನ್ನು ಸಾಮಾಜಿಕವಾಗಿ ಮತ್ತು‌ ವೈಜ್ಞಾನಿಕ ನೆಲೆಗಳಲ್ಲಿ ಸ್ಪಷ್ಟಪಡಿಸುತ್ತಾ ಅವುಗಳನ್ನು ಒಂದು ಅಖಂಡವಾದ ಕಾಣ್ಕೆಯೊಳಗೆ ಬಂಧಿಸುವುದು ಈ ಕೃತಿಯ ಹೆಗ್ಗಳಿಕೆ ಯಾಗಿದೆ.

MORE FEATURES

ಈ ಪುಸ್ತಕ ಓದುವಾಗ ಇಲ್ಲಿಂದಲೇ ಶುರುಮಾಡಬೇಕೆಂಬದು ಇಲ್ಲ

09-05-2025 ಬೆಂಗಳೂರು

"ಎಲ್ಲೊ ಒಂದು ಮಾತು ಕೇಳಿದ್ದೆ 'ಈಗಿನ ಕಾಲದಲ್ಲಿ ಯಾರಾದರೂ ಏನಾದರೂ ಬರೆದರೆ ಅದು ಹಿಂದೆ ಎಂದೋ ಯಾರೋ ಬರೆದು ಸೈ...

ಭವಿಷ್ಯದ ದಿನಗಳನ್ನು ಭರವಸೆಯ ದಿನಗಳನ್ನಾಗಿ ಮಾಡಿಕೊಳ್ಳುವುದೇ ಸ್ನೇಹ

08-05-2025 ಬೆಂಗಳೂರು

"ಕಥಾ ನಾಯಕಿಯ ಜೀವನ ಯಾವ ರೀತಿ ಬದಲಾಗುತ್ತದೆ? ಅವಳು ಇಷ್ಟಪಟ್ಟ ಜೀವನ ಅವಳಿಗೆ ಸಿಗುತ್ತದೆಯೋ? ಎನ್ನುವ ಪ್ರಶ್ನೆಗಳೊ...

ಇಲ್ಲಿಯ ನಿರೂಪಣೆಯ ಸೊಬಗು, ಸಂಭಾಷಣೆಯ ಹರಿವು ಚೇತೋಹಾರಿಯಾಗಿದೆ

09-05-2025 ಬೆಂಗಳೂರು

"ಈ ಮುನ್ನುಡಿಯ ಆರಂಭದಲ್ಲೇ ಸೂಚಿಸಿದಂತೆ ಮ ಸ್ವಾಮಿ ಕಪ್ಪಸೋಗೆ ಅವರಿಗೆ ಕತೆ ಹೇಳುವ ಕಲೆ ಗೊತ್ತಿದೆ. ಸುಲಲಿತವಾಗಿ ನ...