ಗೋಡೆಗಿಡವೆಂದರೆ ಒಂದು ಹೆಣ್ಣಲ್ಲದೆ ಇನ್ನಾರು?


"ಎಲ್ಲ ಜೀವಜಂತುಗಳಲ್ಲೂ ಚನ್ನನ ದನಿಯೇ ಅಣುರಣಿಸುವಾಗ, ನಳನಳಿಸುವ ಪುಷ್ಪಗಳಲ್ಲಿ ಅವನಾತ್ಮದ ಸುಗಂಧವಿರುವುದನ್ನು ಅರಿಯುವ ಲಾವಣ್ಯರ ಅಕ್ಕಮ್ಮ, ಎಲ್ಲರೊಳಗಿರುವವನು ನನ್ನೊಳಗೆ ಬರಲಾರನೇ ಅವನೇ ಬರಲಿ ಎನ್ನುತ್ತ ಮಹಿಳಾವಾದಕ್ಕಿಳಿಯುತ್ತಾಳೆ, ನನ್ನೊಳಗೆ ತುಡಿಯುವ ಹೃದಯ ಅವನದ್ದೂ ಅಲ್ಲವೇ? ಎನ್ನುವ ಅಕ್ಕಮ್ಮ, ಒಳದನಿಯಲ್ಲಿ ಚನ್ನನೊಂದಿಗಿನ ತಾದಾತ್ಮಯ ಭಾವವನ್ನು ಸ್ಫುರಿಸುತ್ತಾಳೆ," ಎನ್ನುತ್ತಾರೆ ಬಿ.ಕೆ. ಮೀನಾಕ್ಷಿ, ಮೈಸೂರು. ಅವರು ಲಾವಣ್ಯಪ್ರಭಾ ಅವರ ‘ಗೋಡೆಗಿಡ’ ಕೃತಿ ಕುರಿತು ಬರೆದ ಅನಿಸಿಕೆ.

ಮೈಸೂರಿನ ವಿಶೇಷ ಪ್ರತಿಭಾವಂತ ಕವಯತ್ರಿ ಡಾ.ಕೆ.ಎನ್.ಲಾವಣ್ಯಪ್ರಭಾ. ಲಾವಣ್ಯಪ್ರಭಾ ಅವರು ತಮ್ಮ ಸುತ್ತಲೂ ಪುಟ್ಟದಾದ ಒಂದು ಭಾವಕೋಶವನ್ನು ನಿರ್ಮಿಸಿಕೊಂಡು ಅದರಲ್ಲಿಯೇ ವಿಹರಿಸುವ ಭಾವತೀವ್ರತೆಯ ಕವಿ. ಸೂಕ್ಷ್ಮ ಸಂವೇದನೆಯುಳ್ಳ ಲಾವಣ್ಯಪ್ರಭಾ ಅವರು ತಮ್ಮ ಸುತ್ತಲನ್ನು ಎಳೆಎಳೆಯಾಗಿ ಗ್ರಹಿಸಿ ಅಕ್ಷರ ರೂಪಕ್ಕಿಳಿಸುತ್ತಾರೆ. ಕೋಮಲಭಾವ, ಮೃದುತನ, ಇವರ ಕವಿತೆಗಳ ಜೀವಾಳ. ಪ್ರತಿಮೆ, ರೂಪಕ, ಉಪಮೆಗಳಲ್ಲಿ ಕವಿತೆಗಳನ್ನು ಕಟ್ಟುವ ಕವಯತ್ರಿ, ತಮ್ಮ ಕವಿತೆಗಳಲ್ಲಿ ಹೆಣ್ತನದ, ಹೆಣ್ಮನಸಿನ ಹೊಳಹುಗಳನ್ನು ನೇಯುವುದರ ಜೊತೆಗೆ ಅಧ್ಯಾತ್ಮದೊಂದೆಳೆಯನ್ನು ಸೂಕ್ಷ್ಮವಾಗಿ ಹಿಡಿದಿಡುವುದು ಇವರ ಕವನಗಳಲ್ಲಿ ಕಾಣಸಿಗುತ್ತದೆ. ಕವಯತ್ರಿಯ ಮತ್ತು ನಮ್ಮೆಲ್ಲರ ಅಚ್ಚುಮೆಚ್ಚಿನ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿಯವರಿಗೆ ಅರ್ಪಿಸಿರುವ `ಗೋಡೆಗಿಡ’ ಸಂಕಲನದ ಕವನಗಳನ್ನೋದಿದಾಗ ಅವುಗಳ ಬಗ್ಗೆ ನಾಲ್ಕು ಮಾತು ಬರೆಯಲೇಬೇಕೆಂಬ ತುಡಿತ ಈ ಬರೆಹವನ್ನು ಬರೆಯಿಸಿದೆ.

ಅಕ್ಕಮಹಾದೇವಿಯ `ನೀವು ಕಾಣಿರೇ ನೀವು ಕಾಣಿರೇ’ ಎಂಬ ವಚನವನ್ನು ಲಾವಣ್ಯಪ್ರಭಾ ತಮ್ಮ ಕವನದಲ್ಲಿ ಕಟ್ಟಿಕೊಟ್ಟಿರುವ ಬಗೆ ಸೋಜಿಗವೆನಿಸಿತು.
`ಅಕ್ಕನ ಹೊಸ ವರಸೆ’ ಕವನದ ಕೆಲವು ಸಾಲುಗಳು
ಕೇಳಿಸುತ್ತಿದೆ ನಿಮ್ಮ ಉಲಿವು
ಅದರೊಳಗೆ ಚನ್ನನ ಆತ್ಮದ ನಲಿವು
ಒಲಿದುಕೋ ಮಹಾದೇವಿ
ಎಂದು ದನಿಸುತ್ತಿದ್ದಾನೆ.

ಇಲ್ಲಿ ಮಹಾದೇವಿ ಚನ್ನಮಲ್ಲಿಕಾರ್ಜುನನ್ನು ಹುಡುಕಿ ಹೊರಟಿಲ್ಲ, ಬದಲಾಗಿ ಅವನೇ ಒಲಿದುಕೋ ಮಹಾದೇವಿ ಎನ್ನುತ್ತಿದ್ದಾನೆ.

ಎಲ್ಲ ಜೀವಜಂತುಗಳಲ್ಲೂ ಚನ್ನನ ದನಿಯೇ ಅಣುರಣಿಸುವಾಗ, ನಳನಳಿಸುವ ಪುಷ್ಪಗಳಲ್ಲಿ ಅವನಾತ್ಮದ ಸುಗಂಧವಿರುವುದನ್ನು ಅರಿಯುವ ಲಾವಣ್ಯರ ಅಕ್ಕಮ್ಮ, ಎಲ್ಲರೊಳಗಿರುವವನು ನನ್ನೊಳಗೆ ಬರಲಾರನೇ ಅವನೇ ಬರಲಿ ಎನ್ನುತ್ತ ಮಹಿಳಾವಾದಕ್ಕಿಳಿಯುತ್ತಾಳೆ, ನನ್ನೊಳಗೆ ತುಡಿಯುವ ಹೃದಯ ಅವನದ್ದೂ ಅಲ್ಲವೇ? ಎನ್ನುವ ಅಕ್ಕಮ್ಮ, ಒಳದನಿಯಲ್ಲಿ ಚನ್ನನೊಂದಿಗಿನ ತಾದಾತ್ಮಯ ಭಾವವನ್ನು ಸ್ಫುರಿಸುತ್ತಾಳೆ. ಒಬ್ಬರೊಳಗೊಬ್ಬರು ಲೀನವಾದ ಅರ್ಧನಾರೀಶ್ವರ ತತ್ವವನ್ನು ಪ್ರತಿಪಾದಿಸುತ್ತಾಳೆ. ತನ್ನ ಕಟ್ಟುಪಾಡುಗಳ ಮಿತಿಯಲ್ಲಿಯೇ ತನ್ನ ಹಕ್ಕಿನೆಡೆಗೆ ವಾಲುವ ಭಾವದ ಜೊತೆಗೆ `ಚನ್ನ ಮತ್ತು ಅಕ್ಕ’ನ ಅದ್ವೈತ ಭಾವವನ್ನು ಈ ಕವನ ಪ್ರತಿನಿಧಿಸುತ್ತದೆ.

ಸಂಕಲನದ ಶೀರ್ಷಿಕೆಯ `ಗೋಡೆಗಿಡ’ ಕವನ ಮಾರ್ಮಿಕವಾಗಿದೆ. ಈ ಕವನ ಕೂಡ ಹೆಣ್ಣಿನ ಮಹತ್ತನ್ನೇ ಹೇಳುತ್ತದೆ. ಒಂದು ನಿರ್ಜೀವ ವಸ್ತುವನ್ನಾಶ್ರಯಿಸಿಕೊಂಡು ಹಬ್ಬಿಕೊಳ್ಳುವ ಗಿಡ, ತಾನು ನೆಚ್ಚಿದ ವಸ್ತುವಿಗೂ ಸೌಂದರ್ಯ ನೀಡಿ, ತಾನೂ ಬದುಕಿ, ಉಸಿರಿರದ ಗೋಡೆಗೆ ಜೀವ ತುಂಬುವ ಗೋಡೆಗಿಡವೆಂದರೆ ಒಂದು ಹೆಣ್ಣಲ್ಲದೆ ಇನ್ನಾರು?
ಈ ಸಾಲುಗಳನ್ನು ನೋಡಿ;
ಮುಗಿಲ ನೋಡುವ ಕನಸಿಗೆ
ಹಬ್ಬಿ ಹರಿವ ಪ್ರಕ್ರಿಯೆಗೆ
ಭದ್ರ ಬೇರು ಹುಗಿದಿಡುವ
ಹಸಿಮಣ್ಣ ಕಣ್ಣ ತೇವವಿಲ್ಲದೆ
ಯೂ ಹಠ ಬಿಡದ ತ್ರಿವಿಕ್ರಮ
ತೆವಳುತ್ತಲೇ ಚಿಗುರುವುದು ಗಿಡದ ಜೀವಛಲ
ಮನೆಯಾತನ ಕಲಾತ್ಮಕ ಮನಸಿನ
ಫಲ!

ವೇದನೆಯನ್ನು ಸಂವೇದನೆಯನ್ನು ಸಮ್ಮಿಳನಗೊಳಿಸಿ ತಮ್ಮ ಆತ್ಮಕ್ಕೊಪ್ಪಿದ ಭಾವದಲ್ಲಿ ಹಿಡಿದಿಡುವ ಕವಿಯ ಪದ- ಸಾಲುಗಳೆಲ್ಲವು ತೇವವುಳ್ಳವು, ಓದುಗರ ಮನಸ್ಸನ್ನು ಆರ್ದ್ರಗೊಳಿಸುವಂತಹವು. `ಕಣ್ಣ ತೇವವಿಲ್ಲದೆಯೂ ಹಠ ಬಿಡದ ತ್ರಿವಿಕ್ರಮ, ತೆವಳುತ್ತಲೇ ಚಿಗುರುವುದು ಗಿಡದ ಜೀವಛಲ.’ ಸ್ತ್ರೀ ತನ್ನ ಅಸ್ತಿತ್ವಕ್ಕಾಗಿ, ಉಳಿವಿಗಾಗಿ ತೆವಳುತ್ತಲಾದರೂ ಬದುಕಿನೆಡೆಗೆ ಸಾಗುವ ಪಯಣ ಸರಾಗವಲ್ಲವೆನ್ನುವುದನ್ನು ನಾನಿಲ್ಲಿ ಕಂಡೆ.

`ಇಲ್ಲಿ ನಾನು ಅಲ್ಲಿ ಮಲ್ಲಿಗೆ’ ಎಂಬ ಕವನದ ಕೆಲವು ಸಾಲುಗಳನ್ನು ಕೇಳಿ;
ನನ್ನ ಕಣ್ಣುಗಳೀಗ ಬೆನ್ನಲ್ಲಿ
ಸಿಲುಕಿಕೊಂಡಿವೆ
ಅರಳಿ ಕಾಯುತ್ತಲೇ ಇದೆ
ಮಲ್ಲಿಗೆ ನನ್ನಷ್ಟೇ ಆಸೆ
ತವಕದಿಂದ

ತಿರುತಿರುಗಿ ಮಲ್ಲಿಗೆಯನ್ನೇ ನೋಡುತ್ತಾ ಸಾಗುವ ಹೆಣ್ಣು, ತನ್ನಂತೆ ಒಳಗೇ ನೋಯುತ್ತಿರುವ, ಅವಳನ್ನೇ ಆಸೆಯಿಂದ ನೋಡುತ್ತಾ ಬಳಲಿದ ಮಲ್ಲಿಗೆ! ಇಬ್ಬರ ಒಳಗನ್ನು ಈ ಕವನ ತೆರೆದಿಡುತ್ತದೆ. ಸುಂದರವಾದ ಹೆಣ್ಣಿನ ಮುಡಿಗೇರದ ಮಲ್ಲಿಗೆ, ಮಲ್ಲಿಗೆ ಮುಡಿವ ತನ್ನದೊಂದು ಚಿಕ್ಕ ಆಸೆಯನ್ನೂ ನೆರವೇರಿಸದೆ ನಡೆದು ಬಿಡುವ ನಿರ್ಭಾವುಕ ಗಂಡ, ಮೃದುತನವೇ ಮೈವೆತ್ತಂತ ಹೆಣ್ಣು ಮತ್ತು ಮಲ್ಲಿಗೆ, ಪುಟ್ಟ ಆಸೆಯನ್ನೂ ತೀರಿಸಿಕೊಳ್ಳದೆ ಮುದುಡಿಹೋಗುವ ಪರಿ ಸುಡುವ ಗಂಡಸಿನ ತಣ್ಣಗಿನ ಭಾವವನ್ನು ಸೂಚಿಸುತ್ತವೆ. ಹೆಂಡತಿಯ ಸೂಕ್ಷ್ಮ ಭಾವವನ್ನರಿಯದೆ, ಯಾಂತ್ರಿಕವಾಗಿ ಬದುಕುವ ಗಂಡನ ನಡವಳಿಕೆಯಿಂದ ಇಬ್ಬರ ನಡುವೆ ಉದ್ಭವಿಸುವ ಒಂದು ಸಮಾನಾಂತರ ರೇಖೆ ಅವರೀರ್ವರ ನಡುವಿನ ಅಂತರವನ್ನು ಮುಂದುವರಿಸುತ್ತಲೇ ಹೋಗುತ್ತದೆ. ಪ್ರತಿಯೊಬ್ಬ ಹೆಣ್ಣಿನ ಕೊರಗು ಇದು. ಮಲ್ಲಿಗೆಯನ್ನು ಪ್ರತಿಮೆಯಾಗಿಟ್ಟುಕೊಂಡು ಘಮಲಿರದ ಗಂಡಹೆಂಡತಿಯರ ಸಂಬಂಧವನ್ನು ತೆರೆದಿಡುವ ಈ ಕವನ ಕ್ಷಣಕಾಲ ವಿಷಾದಕ್ಕೆಡೆ ಮಾಡುತ್ತದೆ ಖಾಸಗಿಯಾಗಬಹುದಾದ ಭಾವಗಳನ್ನು ಅತ್ಯಂತ ಸೂಕ್ಷ್ಮವಾಗಿ ಕವನಕ್ಕೆಳೆತಂದಿರುವ ಲಾವಣ್ಯರ ಪ್ರತಿಭೆ ಅನುಪಮವಾದದ್ದು. ಕ್ಷುಲ್ಲಕವೆನಿಸಿಬಿಡಬಹುದಾದದ್ದು ಇಲ್ಲಿ ಮುದುಡಿದ ಮನಸ್ಸುಗಳ ಸಂಕೇತವಾಗಿ ನಿಲ್ಲುತ್ತದೆ. ಇದೊಂದು ಹೊಸ ಭಾವದೊರತೆ.

`ಚುಕ್ಕಿ ರಂಗೋಲಿ’ ಎಂಬ ಕವನದಲ್ಲಿ;
ರಚ್ಚೆಯ ಅಳು, ಊರುಗೋಲಿನ ಉಬ್ಬಸ
ಹೊಸ್ತಿಲಿನ ಒಳಗೇ ಕರಗಿ ಹೋದ ಬಿಕ್ಕಳಿಕೆ
ಗೋಡೆಗೊರಗಿದ ಮುನಿಸು
ನೆಲದ ಹಾಸಿನ ಮೇಲೆ ಹೆಜ್ಜೆಯುಲಿತದ ತೊದಲ್ನುಡಿ

ಇಂತಹ ಹತ್ತು ಹಲವು ಚುಕ್ಕಿಗಳನ್ನು ತನ್ನ ಭಾವದೆಳೆಗಳಿಂದ, ಮಧುರವಾಗಿ ತಾಳ್ಮೆಯಿಂದ ಜೋಡಿಸಿ ಕುಟುಂಬವೆಂಬ ರಂಗೋಲಿಯ ಅನುಬಂಧವನ್ನು ರಚಿಸಿ ಕಾಪಿಟ್ಟುಕೊಳ್ಳುವ ಮಹಿಳೆಯ ಸಾಮರ್ಥ್ಯ ಈ ಕವನದಲ್ಲಿ ಸಮರ್ಥವಾಗಿ ಚಿತ್ರಿತವಾಗಿದೆ.
`ಸದಾ ಕನಸೊಂದ ಕಾಣುತ್ತೇನೆ’ ಶೀರ್ಷಿಕೆಯ ಕವನದಲ್ಲಿ ಅಕ್ಕಮಹಾದೇವಿ, ಮೀರಾಳಂತೆ, ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದ ಭಕ್ತೆ, ಗರ್ಭಗುಡಿ ಹೊಕ್ಕು ಎಲ್ಲರೂ ಹಂಬಲಿಸುವ ಆ ಮೂರ್ತಿಯನ್ನೊಮ್ಮೆ ತಡವಿ, ತನ್ನ ಆಸೆಯನ್ನು ತೀರಿಸಿಕೊಳ್ಳಬಯಸುತ್ತಾಳೆ. ದೇವರಿಂದ ಮಾರುದೂರ ನಿಲ್ಲುವ ಜನರ ಬಗ್ಗೆ, ಮುಗಿ ಬಿದ್ದು ತೇರನೆಳೆವ ಭಕ್ತರ ಬಗ್ಗೆ ಈಕೆಗೊಂದು ಕನಿಕರವಿದೆ. ಹಾಗಾಗಿ ಅವರೆಲ್ಲರಂತೆ ದೇವರಿಂದ ಅಂತರವನ್ನಿರಿಸಿಕೊಳ್ಳದೆ ಗರ್ಭಗುಡಿಗೆ ಲಗ್ಗೆಯಿಟ್ಟು, ಅವನನ್ನು ತಡವುವ ಕನಸ ಕಾಣುವ ಕವಯತ್ರಿಯ ಪಾರಮಾರ್ಥಿಕ ಭಾವ ಅನನ್ಯವಾದುದು.

ನನ್ನ ನಿನ್ನ ನಡುವೆ ಕವನ ಓದುತ್ತಿದ್ದಂತೆ ಎಚ್.ಎಸ್.ವಿ. ಅವರ `ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವಾ’ ಕವನವನ್ನು ಥಟ್ಟಂತ ನೆನಪಿಗೆ ತರುವ ಕವನ.
ನೀನಿದ್ದೀಯೆ, ನಾನೂ ಇದ್ದೇನೆ
ಭೂಮಿ ಆಕಾಶಗಳ ಅಂತರದಲ್ಲಿ
ನಾವಿಲ್ಲ
ನಡುವೆ ಸುನಾಮಿ, ಭೂಕಂಪ, ಲಾವಾ
ಪ್ರಕೃತಿ ವಿಕೋಪ
ಮಿಕ್ಕಂತೆ ಮುಖವಾಡಗಳ ಹಿಂದೆ
ಗನ್ನು ಬಾಂಬುಗಳ ಧೂಮಧೂ

ಕಾಲ ಸರಿದಂತೆ ಒಬ್ಬರಿಗೊಬ್ಬರು ಅರ್ಥವಾಗುವ ಬದಲಿಗೆ ತಮ್ಮ ಒಂದಾಗದ ಮನಸುಗಳ ನಡುವೆ ಅಂತರವನ್ನು ಕಾಯ್ದುಕೊಳ್ಳುವ ಗಂಡಹೆಂಡತಿಯರನ್ನು ಈ ಕವನ ಚಿತ್ರಿಸುತ್ತದೆ. ಹತ್ತಿರವಿದ್ದೂ ದೂರ ನಿಂತಿರುವ ಪರಕೀಯತೆಯಲ್ಲೇ ಜೀವನ ಸವೆಸಿಬಿಡುವ, ಪರಸ್ಪರ ಅರ್ಥೈಸಿಕೊಳ್ಳುವುದರಲ್ಲಿ ಸೋತು ತಮ್ಮ ನಡುವೆ ಸೃಷ್ಟಿಸಿಕೊಳ್ಳುವ ಬಿರುಕನ್ನು ಲಾವಣ್ಯ ಅವರು ಬಹು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ.. ಇದೊಂದು ಮುಖವಾಡ ಧರಿಸಿಕೊಂಡು ಬದುಕುವ ಕ್ರಿಯೆಯಾಗಿ ಮುಖವಾಡ ಕಿತ್ತೆಸೆವ ಸಮಯ ಬರುವುದು ದುಸ್ತರವೆಂಬ ನಿರಾಶಾಭಾವ ಎದ್ದು ಕಾಣುತ್ತದೆ.

ಇವರ ಇನ್ನೊಂದು ಕವನ ಜಗುಲೀಕಟ್ಟೆ;
ಮನುಷ್ಯ ಸಂಘಜೀವಿ. ಅವನು ಒಂಟಿಯಾಗಿರಲು ಬಯಸಲಾರ. ತನ್ನ ತಾನು ನಿರಾಳಗೊಳಿಸಿಕೊಳ್ಳಲು ಹಂಚಿಕೊಳ್ಳುವಿಕೆ ಅಗತ್ಯವೆಂಬುದನ್ನು ಜಗುಲೀಕಟ್ಟೆ ವಿಷದ ಪಡಿಸುತ್ತದೆ. ಎಲ್ಲರ ಮನೆಯ ದೋಸೆಯೂ ತೂತೇ ಎಂಬ ಸಮಾಧಾನದ ಸಮಾನ ಭಾವ ಮೂಡಿ ಮನಸ್ಸು ಹೂ ಹಗುರ, ನಿದ್ದೆ ಖಾಯಂ.. ಎಂಬಲ್ಲಿಗೆ ಮನುಷ್ಯನಿಗೆ ಅಗತ್ಯವೇನೆಂಬುನ್ನು ಈ ಕವನ ಗುರುತಿಸುತ್ತದೆ. ತನ್ನ ಮನೆಗೂ ಒಂದು ಜಗುಲೀಕಟ್ಟೆಯಿರಬೇಕಿತ್ತು ಎಂಬ ಚಿಂತೆಯಲ್ಲಿ, ನಿರಾಳವಾಲೇಬೇಕಾದ ಅನಿವಾರ್ಯತೆಯನ್ನು ಸೂಚಿಸುತ್ತಾ, ಜಗುಲೀಕಟ್ಟೆಯೆಂಬ ಪ್ರತಿಮೆಯ ಮೂಲಕ ಸಾಮಾಜಿಕ ಬದುಕಿನ ಚಿತ್ರಣಗಳು ಕಣ್ಣ ಮುಂದೆ ಹಾಯುತ್ತವೆ.

ಅಮ್ಮ ಮತ್ತು ಸಮುದ್ರ ಕವನವು ತಾಯಿಯ ಅಗಾಧತೆಯನ್ನು ಸೂಚಿಸುತ್ತಲೇ ತಾಯಿ, ಸಮುದ್ರೆ! ಮುತ್ತು ರತ್ನ ಹವಳಗಳಂತೆ ಹತ್ತು ಹಲವು ಹಳವಂಡಗಳನ್ನು ನುಂಗಿಕೊಂಡು ಕರುಣಾಮಯಿಯಾಗುವ ತಾಯಿಯನ್ನು ಸಮುದ್ರದ ರೂಪಕವಾಗಿಸುತ್ತಾರೆ. ಮಳೆ, ಪ್ರಕೃತಿ, ತನ್ನಲ್ಲೇ ತನ್ನದಾದ ಭಾವ ಸಂತೃಪ್ತಗೊಳ್ಳುವ ಗುಣಗಳಿಂದ ಗೋಡೆಗಿಡದ ಸಾಕಷ್ಟು ಕವನಗಳು ಆತ್ಮಕ್ಕೆ ಹತ್ತಿರವಾಗುತ್ತವೆ. ಸೂಕ್ಷ್ಮ ಓದಿಗೆ ಒಳಪಡುವ ಈ ಕವನಗಳು, ಕ್ಷಣ ಹತಾಶೆಗೆ ಓದುಗನನ್ನು ತಳ್ಳುತ್ತವೆ. ಮತ್ತರೆಕ್ಷಣ ನೆಮ್ಮದಿಯಲ್ಲಿ ಮೀಯಿಸುತ್ತವೆ, ಮತ್ತೊಮ್ಮೆ ಯಾವುದೋ ಹೆಸರಿರದ ಲೋಕಕ್ಕೆ ಕರೆದೊಯ್ಯುತ್ತವೆ. ಬಹುತೇಕ ಕವನಗಳಲ್ಲಿ ಸ್ತ್ರೀಪರ ನಿಲುವೇ ಪ್ರಮುಖವಾಗಿದ್ದು, ಎಲ್ಲ ಕವಿತೆಗಳೂ ಭಾವನಾ ಪ್ರಪಂಚದ ವಿಹಾರಿಗಳಾಗಿವೆ. ಲಾವಣ್ಯಪ್ರಭಾರ ಕಾವ್ಯಕೃಷಿ ಇನ್ನೂ ಉನ್ನತಮಟ್ಟಕ್ಕೇರಲಿ, ಕಾವ್ಯಪ್ರೇಮಿಗಳ ಮನದಲ್ಲಿ ಇವರ ಕಾವ್ಯದ ಗುಂಗು ಅಣುರಣವಾಗಲೆಂಬುದೇ ಈ ಬರೆಹದ ಮೂಲ ಉದ್ದೇಶ.


MORE FEATURES

ಬದುಕಿನ ಬೇಗೆಯ ಉದರದಲಿ ಹುಟ್ಟಿದ ಕಾವಿನ ಕತೆಗಳು

04-05-2025 ಬೆಂಗಳೂರು

"ನಂಬಿಕೆಯ ನೆಲೆಯಲ್ಲಿ ಕೌಟುಂಬಿಕವಾಗಿ ಯೋಚಿಸುವಂತೆ ಮಾಡುವ "ಅಪ್ಪ ಬರ್ತಾನ" ಕತೆಯು ಮಕ್ಕಳ ಮನೊಬಲವನ್ನು...

ಕಥಾ ಪಾತ್ರವಾದರೂ ಜನರ ಭಾವುಕತೆಯ ಭಾವವಾಗಿದ್ದವನು ಆತ

04-05-2025 ಬೆಂಗಳೂರು

"ಅದೊಂದು ಕಾಲ್ಪನಿಕ ಪಾತ್ರವೇ ಆಗಿದ್ದರೂ ಜನ ಅವನಿಗಾಗಿ ಹುಡುಕಾಡಿಬಿಟ್ಟಿದ್ದರಂತೆ. ಅವನ ಅಡ್ರೆಸ್ ಹುಡುಕ ಹೋಗಿ ನಿರ...

ಗಜಲ್ ಎಂಬುದು ಒಂದು ಧ್ಯಾನಸ್ಥ ಸ್ಥಿತಿ

04-05-2025 ಬೆಂಗಳೂರು

"ಮಿತ್ರ ಆನಂದ ಭೋವಿಯವರ ಗಜಲ್ ಗಳಲ್ಲಿ ನಾನು ಹೆಚ್ಚಾಗಿ ಕಂಡಿದ್ದು ವಿಷಾದದ ಭಾವ ಇಲ್ಲಿ ನನ್ನದೆನ್ನುವುದು ಯಾವುದೂ ಇ...