ಗೀತಾ ಅವರ ವಸ್ತು ವೈವಿಧ್ಯ ಬೆರಗು ಹುಟ್ಟಿಸುತ್ತದೆ


“ಕಥೆಯಲ್ಲಿ ಮದುವೆಯ ಬಗ್ಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದೆ ಬದುಕಿನುದ್ದಕ್ಕೂ ಕಷ್ಟ ಪಡುವ ಒಬ್ಬ ಅಸಹಾಯಕ ಹೆಣ್ಣಿನ ಕಥೆಯಿದೆ,” ಎನ್ನುತ್ತಾರೆ ಪಾರ್ವತಿ ಜಿ ಐತಾಳ್‌ ಅವರು ಗೀತಾ ಕುಂದಾಪುರ ಅವರ “ಪಾಂಚಾಲಿಯಾಗಲಾರೆ” ಕಥಾಸಂಕಲನ ಕುರಿತು ಬರೆದ ವಿಮರ್ಶೆ.

'ಪಾಂಚಾಲಿಯಾಗಲಾರೆ ' ಗೀತಾ ಕುಂದಾಪುರ ಅವರ ನಾಲ್ಕನೆಯ ಕಥಾ ಸಂಕಲನ. ತಮ್ಮ ಮೊದಲ ಕಥಾಸಂಕಲನ 'ಅಪ್ರಮೇಯ'ದಿಂದ ಇಲ್ಲಿಯ ವರೆಗೆ ಅದ್ಭುತ ಬೆಳವಣಿಗೆಯನ್ನು ಸಾಧಿಸುತ್ತ ಮುಂದೆ ಸಾಗಿದ ಅವರ ಈ ಹೊಸ ಸಂಕಲನ ಹೆಚ್ಚಿನ ಆಳ- ವಿಸ್ತಾರಗಳನ್ನು ತನ್ನದಾಗಿಸಿಕೊಂಡದ್ದು ನಿಚ್ಚಳವಾಗಿ ಕಾಣುತ್ತಿದೆ. ಇಲ್ಲಿರುವ ಹದಿನಾಲ್ಕು ಕಥೆಗಳು ( ಮತ್ತು ನಾಲ್ಕು ಮಿನಿಕಥೆಗಳು) ನಮ್ಮ ಕೌಟುಂಬಿಕ ಹಾಗೂ ಸಾಮಾಜಿಕ ಬದುಕುಗಳನ್ನು ತೆರೆದ ಕಣ್ಣುಗಳಿಂದ ಮತ್ತು ಸೂಕ್ಷ್ಮ ದೃಷ್ಟಿಯ ಒಳಗಣ್ಣುಗಳಿಂದ ನೋಡುವಲ್ಲಿ ಯಶಸ್ಸು ಸಾಧಿಸಿವೆ.

'ಪಾಂಚಾಲಿಯಾಗಲಾರೆ' ಎಂಬ ಶೀರ್ಷಿಕೆಯ ಕಥೆಯಲ್ಲಿ ಮದುವೆಯ ಬಗ್ಗೆ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದೆ ಬದುಕಿನುದ್ದಕ್ಕೂ ಕಷ್ಟ ಪಡುವ ಒಬ್ಬ ಅಸಹಾಯಕ ಹೆಣ್ಣಿನ ಕಥೆಯಿದೆ. ಸಮಾಜದ ದೃಷ್ಟಿಯಲ್ಲಿ ಹೆಣ್ಣು ಮದುವೆಯಾಗುವ ವ್ಯಕ್ತಿ ಹಣವಿದ್ದವನಾದರೆ ಸಾಕು. ಅವಳು ಆರ್ಥಿಕವಾಗಿ ನೆಲೆಯೂರುವ ಅವಕಾಶವಿದ್ದರೆ ಸಾಕು. ಅವಳು ಅದೃಷ್ಟವಂತೆ. ಇಲ್ಲಿ ಬಡ ಹೆಣ್ಣು ಜಾನಕಿ ಕಾರಣಾಂತರಗಳಿಂದ ಮೂರು ಬಾರಿ ಮದುವೆಯಾಗಬೇಕಾಗಿ ಬಂದಿದೆ. ಮದುವೆಗೆ ಮೊದಲೇ ಒಬ್ಬನನ್ನು ಪ್ರೀತಿಸಿ ಅವನನ್ನು ಕಳೆದುಕೊಂಡಿದ್ದಾಳೆ. ಮೂರನೆಯ ಗಂಡನಿಗೆ ಆಗಲೇ ಇಳಿವಯಸ್ಸು. ಅವನು ಸಾಯುವ ಸ್ಥಿತಿಯಲ್ಲಿದ್ದಾಗ ಅವನ ಮಕ್ಕಳು ತಮ್ಮ ಮಲತಾಯಿಗೆ ಇನ್ನೊಂದು ಮದುವೆ ಮಾಡಿ ಮನೆಯಿಂದ ಸಾಗ ಹಾಕಲು ಹುನ್ನಾರ ಮಾಡುತ್ತಾರೆ. ಐದನೇ ಬಾರಿ ಮದುವೆಯಾಗಲು ಒಪ್ಪಿ ತಾನು ಪಾಂಚಾಲಿಯಾಗಲಾರೆ ಎಂದು ಜಾನಕಿ ಗಂಡನಿಗಿಂತ ಮೊದಲೇ ಸಾಯುತ್ತಾಳೆ. ಪುರುಷಾಹಂಕಾರವು ಒಬ್ಬ ಅಸಹಾಯಕ ಹೆಣ್ಣನ್ನು ಹೇಗೆ ಫುಟ್ಬಾಲ್ ನಂತೆ ಆಡಿಸುವ ಕ್ರೌರ್ಯ ತೋರಿಸುತ್ತದೆ ಅನ್ನುತ್ತದೆ ಈ ಕಥೆ. ಇಲ್ಲಿ ಒಬ್ಬ ಹೆಣ್ಣು ಐದು ಮಂದಿಯ ಹೆಂಡತಿಯಾಗುವುದು ಅನ್ನುವುದಕ್ಕಿಂತಲೂ ಆಯ್ಕೆಯ ಸ್ವಾತಂತ್ರ್ಯವಿಲ್ಲದವಳು ಅನ್ನುವುದರ ಮೇಲೆ ಹೆಚ್ಚು ಫೋಕಸ್ ಇದೆ.

'ಹೆದ್ದಾರಿಯಲ್ಲಿ ನಿಂತ ಬದುಕು' ಸ್ವಂತವಾಗಿ ಬದುಕು ಕಟ್ಟಿಕೊಂಡ ಒಬ್ಬ ದಿಟ್ಟ ಹೆಣ್ಣಿನ ಕಥೆಯಾದರೂ ಕೊನೆಯಲ್ಲಿ ವೃದ್ಧಾಪ್ಯದ ಹೊಸ್ತಿಲಲ್ಲಿ ನಿಂತಾಗ ಅವಳು ಸಾಕಿ ಬೆಳೆಸಿ ನೆಲೆಗಾಣಿಸಿದ ಗಂಡು ಮಕ್ಕಳೇ ಅವಳಿಗೆ ಮೋಸ ಮಾಡುತ್ತಾರೆ ಅನ್ನುವುದನ್ನು ಮನಮುಟ್ಟುವ ರೀತಿಯಲ್ಲಿ ಹೇಳುವ ಕಥೆ. ಬದುಕಿನಲ್ಲಿ ಅವಳಿಗೆ ಯಶಸ್ಸು ನೀಡಿದ ಚಹದಂಗಡಿಯು ಹೇಗೆ ನಾಗರೀಕತೆಯ ನಾಗಾಲೋಟದ ರಭಸಕ್ಕೆ ಸಿಲುಕಿ ನುಚ್ಚು ನೂರಾಗುತ್ತದೆ ಅನ್ನುವುದನ್ನು ಮರಗಳನ್ನು ಕಡಿದು, ಮಣ್ಣನ್ನು ಅಗೆದು, ರಸ್ತೆ ಅಗಲೀಕರಿಸಿ ಅಕ್ಕಪಕ್ಕ ತುಂಬಾ ಆಧುನಿಕ ಶೈಲಿಯ ಕಟ್ಟಡಗಳನ್ನು ಕಟ್ಟುವ ಹೃದಯವಿದ್ರಾವಕ ದೃಶ್ಯಗಳನ್ನು ಚಿತ್ರಿಸುವ ಮೂಲಕ ಗೀತಾ ತೋರಿಸಿದ್ದಾರೆ. ಪರಿಸರ ಸ್ತ್ರೀವಾದವೆಂದರೆ ಇದೇ. ಪ್ರಕೃತಿಯ ಮೇಲೆ ಮಾನವನ ಕ್ರೂರ ದಾಳಿ. ಅದು ಈ ಕಥೆಯಲ್ಲಿ ಮನಮುಟ್ಟುವಂತೆ ಚಿತ್ರಿತವಾಗಿದೆ.

'ತಲ್ಲಣಿಸದಿರು ಮನವೇ' ಪುರುಷ ಪ್ರಧಾನ ಕುಟುಂಬದಲ್ಲಿ ಹೆಣ್ಣು ಹರಿಸುವ ಕಣ್ಣೀರಿನ ಕಥೆ. ತಾನೊಬ್ಬನೇ ಬುದ್ಧಿವಂತ, ಹೆಂಡತಿಗೆ ಅಡುಗೆ ಮಾಡುವುದನ್ನು ಬಿಟ್ಟರೆ ಬೇರೇನೂ ತಿಳಿಯದ ದಡ್ಡಿ ಎಂದು ಸದಾ ಹಂಗಿಸಿ ಚುಚ್ಚಿ ನೋಯಿಸುವ ಗಂಡ ಮಕ್ಕಳಲ್ಲೂ ಅಮ್ಮನ ಬಗ್ಗೆ ತಾತ್ಸಾರ ಹುಟ್ಟುವಂತೆ ಮಾಡುತ್ತಾನೆ. ಅವಳ ಬದುಕನ್ನು ನರಕವಾಗಿಸುತ್ತಾನೆ. ಅದರೆ ಯಾವುದೋ ಕ್ಷಣದಲ್ಲಿ ಅಮ್ಮನೂ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಹೆಸರು ಪಡೆದಾಗ ಮೊದಲು ಹೊಟ್ಟೆಕಿಚ್ಚಿನಿಂದ ಉರಿಯುತ್ತಾನಾದರೂ ಕೊನೆಗೆ ಮನಶ್ಶಾಸ್ತ್ರಜ್ಞೆಯ ಮಾತುಗಳಿಗೆ ತಲೆಬಾಗಿ ಬದಲಾಗುತ್ತಾನೆ.

'ರಂಗಸ್ಥಳ' ಒಬ್ಬ ಪ್ರತಿಭಾವಂತ ಕಲಾವಿದನ ಕಥೆ. ಯಶಸ್ಸಿನ ತುತ್ತ ತುದಿಗೇರಿದ ನಂತರ ತನ್ನ ಮಗನೂ ತನ್ನಂತೆಯೇ ಹೆಸರು ಮಾಡಬೇಕೇಂದು ಆತ ಬಯಸುತ್ತಾನೆ. ಆದರೆ ಮಗ ರಂಗಸ್ಥಳದ ಮೇಲೆ ತಪ್ಪುಗಳ ಮೇಲೆ ತಪ್ಪು ಮಾಡುತ್ತ ವಿಫಲನಾಗುವುದನ್ನು ನೋಡಿ ನಿರಾಶನಾಗುತ್ತಾನೆ. ಅದೇ ಸಮಯದಲ್ಲಿ ಕಲಾವಿದನ ಪೀಕದಾನಿಯನ್ನು ಹಿಡಿಯುತ್ತ ಸದಾ ಅವನ ಹಿಂದೆ ಮುಂದೆಯೇ ಸುತ್ತುತ್ತಿದ್ದ ಅವನ ಸೇವಕನ ಮಗ ರಂಗಸ್ಥಳದ ಮೇಲೆ ಭರ್ಜರಿ ಜಯ ಸಾಧಿಸಿದ್ದನ್ನು ನೋಡಿ ಹೊಟ್ಟೆಯುರಿ ತಾಳಲಾರದೆ ಅವನ ಬೆಳವಣಿಗೆಯನ್ನು ತುಂಡರಿಸಬೇಕೆಂದು ಆಲೋಚಿಸುತ್ತಾನಾದರೂ ಕೊನೆಯ ಕ್ಷಣದಲ್ಲಿ ಅವನೊಳಗಿನ ನಿಜವಾದ ಕಲಾವಿದ ಎಚ್ಚೆತ್ತು ಆ ಹುಡುಗನನ್ನು ಮನದುಂಬಿ ಆಶೀರ್ವದಿಸುತ್ತಾನೆ.

ಬಡತನದ ಬೇಗೆಯಲ್ಲಿ ಬೇಯುತ್ತ ಕಷ್ಟಪಟ್ಟು ದುಡಿದು ಮಕ್ಕಳನ್ನು ಬೆಳೆಸಿ ಬೇಕಾದ ವಿದ್ಯಾಭ್ಯಾಸ ಕೊಟ್ಟು ಅವರು ಬದುಕಿನಲ್ಲಿ ನೆಲೆಯೂರುವಂತೆ ಮಾಡಿದ ತಂದೆಯನ್ನು ಕೊನೆಗಾಲದಲ್ಲಿಆತ ತನ್ನ ಹೆಂಡತಿಯನ್ನು ಕಳೆದುಕೊಂಡು ಒಂಟಿಯಾದ ಸಂದರ್ಭದಲ್ಲಿ ಕಡೆಗಣಿಸುವ ಮತ್ತು ಆತನ ದುಡ್ಡಿಗಾಗಿ ಹೊಂಚು ಹಾಕುವ ಮಕ್ಕಳ ಚಿತ್ರ 'ಯೂ ಟರ್ನ್' ಎಂಬ ಕಥೆಯಲ್ಲಿದೆ. ಆದರೆ ಕಥೆಗಾರ್ತಿ ಇಲ್ಲಿ ತಂದೆ ತನ್ನ ಮನೆಕೆಲಸದವಳನ್ನೇ ಮದುವೆಯಾಗುವ ಮೂಲಕ ಗೆಲ್ಲುವಂತೆ ಮಾಡುತ್ತಾರೆ.

'ಶಶಿಯ ಶರಪಂಜರ' ಒಂದು ಸಾಮಾಜಿಕ ವಸ್ತುವುಳ್ಳ ಕಥೆ. ಬುದ್ದಿವಂತನೂ ಗುಣವಂತನೂ ಅದ ಹುಡುಗನೊಬ್ಬ ತನ್ನದಲ್ಲದ ತಪ್ಪಿಗೆ ಜೀವಾವಧಿ ಜೈಲುವಾಸಕ್ಕೊಳಗಾಗಿ ನರಕಯಾತನೆ ಅನುಭವಿಸುವ ದಾರುಣ ಕಥೆಯಿದು. ಕೊನೆಗೆ ಯಾವುದೋ ರಾಜಕೀಯ ಒತ್ತಡದ ಸಂದರ್ಭ ಬಂದಾಗ ಅವನ ಸನ್ನಡತೆಗಾಗಿ ಅವನನ್ನು ಬಿಡುಗಡೆಗೊಳಿಸುವ ನಾಟಕವಾಡುವ ಅಧಿಕಾರಿಗಳು ಅವನು ಸನ್ಮಾರ್ಗಿಯಾಗಲು ಕಾರಣನಾದವನೆಂದು ಹೇಳಿ ಒಬ್ಬ ಪ್ರಭಾವಿ ಜೈಲು ಅಧಿಕಾರಿಗೆ ಪ್ರಶಸ್ತಿ ನೀಡುವ ಪ್ರಹಸನವೂ ಇಲ್ಲಿ ನಡೆಯುತ್ತದೆ.

'ಬೆಕ್ಕಿನ ಕಣ್ಣು' ಮತ್ತು 'ಕವಡೆಯಾಟವಯ್ಯಾ' ಎಂಬ ಎರಡು ಕಥೆಗಳು ಜನರ ಮೂಡನಂಬಿಕೆಗಳನ್ನು ಬಂಡವಾಳಗಿಸಿಕೊಂಡು ಕೊಬ್ಬುವ ಜ್ಯೋತಿಷಿ ಮತ್ತು ಕವಡೆ ಶಾಸ್ತ್ರಕಾರರ ಕುರಿತಾದ ಕಥೆ. ಅವರನ್ನು ನಂಬುವವರು ತಾವು ಹಾಳಾಗುವುದಲ್ಲದೆ ತಮ್ಮ ಹೆಂಡತಿ-ಮಕ್ಕಳು ಮತ್ತು ಕುಟುಂಬದವರನ್ನೂ ಸಂಕಷ್ಟಕ್ಕೆ ಸಿಲುಕಿಸುವುದು ಇಲ್ಲಿನ ವ್ಯಂಗ್ಯ. ಮೊದಲ ಕಥೆ 'ಆಟಿ ಕಾಲದ ಸ್ವಾಮಿ'ಯಲ್ಲಿ ಒಂದು ಜನಪದ ಆಚರಣೆಯ ಬಗ್ಗೆ ವಿವರಗಳಿವೆಯಾದರೂ ಅಲ್ಲಿಯೂ ಮೈಮೇಲೆ ಬರುವ ದೈವವು ಅವಾಹಿಸಿಕೊಂಡವನ ಮನಸ್ಸಿನೊಳಗೆ ಏನಿದೆಯೋ ಅದನ್ನೇ ಹೇಳುತ್ತದೆ ಮತ್ತು ಜನರು ಅದನ್ನು ಭಕ್ತಿ ಭಾವದಿಂದ ಕಣ್ಣು ಮುಚ್ಚಿ ಅನುಸರಿಸುತ್ತಾರೆ ಅನ್ನುವುದನ್ನು ಕಥೆಗಾರ್ತಿ ಇಲ್ಲಿ ತೆರೆದು ಹೇಳುತ್ತಾರೆ.

ಹೇಳುವುದಾದರೆ ಸಂಕಲನದ ಎಲ್ಲ ಕಥೆಗಳ ಬಗ್ಗೆ ಹೇಳುತ್ತ ಹೋಗಬಹುದು. ಲಂಪಟನೊಬ್ಬ ಹೆಂಡತಿಗೆ ಅನ್ಯಾಯ ಮಾಡುವುದಲ್ಲದೆ ತನ್ನ ಕಾರು ಚಾಲಕನ ಮಗನ ಜೀವವನ್ನೇ ಬಲಿ ತೆಗೆದುಕೊಳ್ಳಲು ಸಂಚುಹೂಡಿ ತಾನು ತೋಡಿದ ಗುಂಡಿಯೊಳಗೆ ತಾನೇ ಬೀಳುವ ಕಥೆ 'ನೆರಳಿನೊಳಗಿನ ಬೆಳಕಿನಾಟ', ತನ್ನ ಕುರುಡು ಮಡಿವಂತಿಕೆಯಿಂದ ಮಗಳನ್ನು ನರ್ಸಿಂಗ್ ಕಲಿಯಲು ಬಿಡದೆ ಅವಳ ಸಾವಿಗೆ ಕಾರಣನಾದ ಅಪ್ಪನೊಬ್ಬ ನೆರೆಯಲ್ಲಿ ಕೊಚ್ಚಿಕೊಂಡು ಹೋಗುವ ಸಂದರ್ಭ ಬಂದರೂ ತನ್ನ ಹಠ ಬಿಡದೆ ಕೊನೆಯ ಕ್ಷಣದಲ್ಲಿ ಅವನ ಅಹಂಕಾರವು ಕರಗಿ ತನ್ನ ಮಗಳ ಪ್ರಾಯದ ಹುಡುಗಿಯೊಬ್ಬಳನ್ನು ರಕ್ಷಿಸುವ ಕಥೆ 'ನೆರೆ', ಹೆಂಡತಿಯನ್ನು ಕಳೆದುಕೊಂಡು ಒಂಟಿತನದ ನೋವನ್ನು ಅನುಭವಿಸುತ್ತಿರುವ ತನ್ನ ಒರಟು ಸ್ವಭಾವದ ಸಾಕು ತಂದೆಗೆ ಬುದ್ಧಿ ಕಲಿಸೋಣವೆಂದು ಅವನನ್ನು ಒಬ್ಬನನ್ನೇ ಬಿಟ್ಟು ಊರಿಗೆ ಹೋಗುವ ಮಗ-ಸೊಸೆ ತಿರುಗಿ ಬಂದು ನೋಡಿದಾಗ ತಂದೆ ಇನ್ನೊಂದು ಮದುವೆಯಾಗಿದ್ದನ್ನು ನೋಡಿ ಆಘಾತಗೊಳ್ಳುವ ಸನ್ನಿವೇಶವಿರುವ 'ನೆರಳಿನಲ್ಲಿ ಕಂಡ ಮುಖ' - ಎಲ್ಲವೂ ಓದಿನ ಸುಖ ಕೊಡುವ ಕಥೆಗಳು. ಕೊನೆಯ ನಾಲ್ಕು ಮಿನಿಕಥೆಗಳೂ ಚಿಕ್ಕ-ಚೊಕ್ಕ ವಿನೂತನ ಶೈಲಿಯ ನವಿರು ಕಥೆಗಳು.

ಗೀತಾ ಅವರ ವಸ್ತು ವೈವಿಧ್ಯ ಬೆರಗು ಹುಟ್ಟಿಸುತ್ತದೆ. ಅವರ ಕಥಾ ಪ್ರಪಂಚದ ಹರಹು ವಿಶಾಲವಾಗಿದೆ. ಪ್ರಕೃತಿಯ ದೃಶ್ಯಗಳು, ಪ್ರಾಣಿ-ಪಕ್ಷಿಗಳ ಓಡಾಟಗಳು, ಪರಿಸರಕ್ಕೆ ಮನುಷ್ಯರು ಮಾಡುವ ಹಾನಿಗಳು, ಜನಪದ ಕಲೆಗಳು, ಯಕ್ಷಗಾನ, ಕೌಟುಂಬಿಕ ಬದುಕಿನ ಚಿತ್ರಣಗಳು, ಗ್ರಾಮೀಣ ಬದುಕು, ನಗರ ಜೀವನಗಳ ಬಗ್ಗೆ ಕಂಡದ್ದನ್ನು-ಕೇಳಿದ್ದನ್ನು-ಓದಿದ್ದನ್ನು ಎಲ್ಲವನ್ನೂ ಕಥೆಯಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ ಮಾತ್ರವಲ್ಲದೆ ತಮ್ಮ ಸುತ್ತಮುತ್ತಲ ಜಗತ್ತಿನ ವಸ್ತುಗಳನ್ನು ಮತ್ತು ವಿದ್ಯಮಾನಗಳನ್ನು ತಮ್ಮ ಸೂಕ್ಷ್ಮ ದರ್ಶಕದಂಥ ಕಣ್ಣುಗಳಿಂದ ವೀಕ್ಷಿಸಿ ಅತ್ಯಂತ ಸಣ್ಣ ವಿವರಗಳನ್ನೂ ದಾಖಲಿಸುವ ಅವರ ಸಾಮರ್ಥ್ಯ ಮೆಚ್ಚತಕ್ಕದ್ದು. ವಿವರಣೆಯಲ್ಲಿ ಅಲ್ಲಲ್ಲಿ ಸೂಕ್ತವಾದ ಉಪಮೆ-ರೂಪಕಗಳ ಮೂಲಕ ವಾಕ್ಯಗಳನ್ನು ಚಂದಗೊಳಿಸುವ ಅವರ ಕಥನ ಶೈಲಿಗೆ ತನ್ನದೇ ಆದ ಆಕರ್ಷಣೆಯಿದೆ.

MORE FEATURES

ಒಂದು ಕಾಲದ ಯುಗಧರ್ಮವು ಎಲ್ಲ ಕಾಲಕ್ಕೂ ಸಲ್ಲಬೇಕೆಂದೇನೂ ಇಲ್ಲ

01-05-2025 ಬೆಂಗಳೂರು

“ಒಟ್ಟು ಕಾದಂಬರಿಯಲ್ಲಿ ಕಾಲಾವಧಿಯನ್ನು (ಟೈಮ್ ಲ್ಯಾಪ್ಸ್) ನಿರ್ವಹಿಸುವಲ್ಲಿ ಲೇಖಕರು ಇನ್ನಷ್ಟು ಜಾಣೆ ತೋರಬೇಕಿತ್...

ಆಧುನಿಕ ಮೈಸೂರು ರಾಜ್ಯದ ರೂವಾರಿ ಹೈದರಾಲಿ

01-05-2025 ಬೆಂಗಳೂರು

“ಬೃಹತ್ ಆಕರ ಗ್ರಂಥಗಳನ್ನು ಅಧ್ಯಯನ ಮಾಡಿ ಅವುಗಳಲ್ಲಿ ಇರುವ ಸಾರವನ್ನು ಹೀರಿ ತಮ್ಮದೇ ದಾಟಿಯಲ್ಲಿ ಓದುಗರಿಗೆ ಉಣಬಡ...

ಸಂಶೋಧನಾ ವಿದ್ಯಾರ್ಥಿಗಳಿಗೆ ಒಂದು ಸಮೃದ್ಧ ಆಕರ ಗ್ರಂಥ

30-04-2025 ಬೆಂಗಳೂರು

"ಪ್ರತಿಯೊಂದು ಲೇಖನವು ಕೃತಿಯ ಸಂಕ್ಷಿಪ್ತ ವಿವರಣೆಯನ್ನು ಕೊಟ್ಟು ಕಾದಂಬರಿಯ ಕನ್ನಡ ಸಾಹಿತ್ಯದ ಚರಿತ್ರೆಯಲ್ಲಿ ಅದರ ...