Date: 28-01-2025
Location: ಬೆಂಗಳೂರು
ಬೆಂಗಳೂರು: ‘ಬೇಂದ್ರೆ ಕೃಷ್ಣಪ್ಪ’ ಎಂದೇ ಜನಪ್ರಿಯರಾಗಿದ್ದ ಸಾಹಿತ್ಯ ಪರಿಚಾರಕ ಡಾ. ಜಿ.ಕೃಷ್ಣಪ್ಪ ಅವರು ವಯೋಸಹಜ ಅನಾರೋಗ್ಯದಿಂದ 2025 ಜ. 28 ಮಂಗಳವಾರದಂದು ನಿಧನರಾದರು.
1948ರಲ್ಲಿ ಬೆಂಗಳೂರಲ್ಲಿ ಜನಿಸಿದ ಇವರು ಪ್ರಮುಖ ಬೇಂದ್ರ ಸಾಹಿತ್ಯ ಪರಿಚಾರಕರಾಗಿ ಸಾಹಿತ್ಯ ವಲಯದಲ್ಲಿ ಪರಿಚತರಾಗಿದ್ದರು. ಇವರು 'ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ: ಒಂದು ಅಧ್ಯಯನ ಕುರಿತು ಪಿಎಚ್ಡಿ ಪದವಿಯನ್ನು ಪಡೆದಿದ್ದರು.
ಸಾಹಿತ್ಯದ ಓದು, ಬೇಂದ್ರೆ ಕಾವ್ಯದ ಗುಂಗೇ ಇವರ ಬರವಣಿಗೆಗೆ ಪ್ರೇರಣೆಯಾಗಿತ್ತು. ಬೇಂದ್ರೆ ಅಭಿಮಾನಿ-ಧ್ಯಾನಿ, ಸತತ ಮೂರು ದಶಕಗಳಿಂದ ಶಾಲಾ-ಕಾಲೇಜುಗಳಲ್ಲಿ 600ಕ್ಕೂ ಅಧಿಕ ಬೇಂದ್ರೆ ಕಾವ್ಯಗಾಯನ ಸ್ಪರ್ಧೆ ಆಯೋಜನೆಯನ್ನು ಮಾಡಿದ್ದರು. ಅಷ್ಟೇಅಲ್ಲದೆ ನಾಡಿನಾದ್ಯಂತ ಸಂಚಾರ ಮಾಡಿ, ಬೇಂದ್ರೆ ಕಾವ್ಯಾನುಭವವನ್ನು ಅಕ್ಷರಕ್ಕೆ ಅಕ್ಷರಶಃ ಇಳಿಸಿದ್ದ ಭಗೀರಥರು ಹೌದು. ಬೇಂದ್ರೆ ಕಾವ್ಯ ಕೂಟ ಸ್ಥಾಪಿಸಿದ ಇವರು, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೇಂದ್ರೆ ಕಾವ್ಯ ವಿಮರ್ಶೆ ಆಯೋಜಿಸಿ ಬಹುಮಾನ ವಿತರಣೆ ಮಾಡಿದ್ದರು.
ಹಾಡುಹಕ್ಕಿ ಅಂಬಿಕಾತನಯದತ್ತ, ನಾಕುತಂತಿ-ಒಂದು ಟಿಪ್ಪಣಿ, ಬೇಂದ್ರೆ ಕಾವ್ಯ: ಪದನಿರುಕ್ತ, ಸರಳ ಕನ್ನಡದಲ್ಲಿ ಲಕ್ಷ್ಮೀಶನ ವಚನ ಜೈಮಿನಿ ಭಾರತ, ರಾಘವಾಂಕನ ವಚನ ಹರಿಶ್ಚಂದ್ರ ಚಾರಿತ್ರ ಹಾಗೂ ಕನಕದಾಸರ ನಳದಮಯಂತಿ ಪ್ರೇಮಕಥೆ ಕೃತಿಗಳನ್ನು ರಚಿಸಿದ್ದಾರೆ. ಬೇಂದ್ರೆಯವರ 'ಜಾತ್ರೆ' ನಾಟಕದ ನಿರ್ದೇಶನ, 'ಕುಣಿಯೋಣು ಬಾರಾ ಬೇಂದ್ರೆಯೊಡನೆ' ರೂಪಕ, ಕಂಸಾಳೆಯಲ್ಲಿ ಬೇಂದ್ರೆ ಕಾವ್ಯಪ್ರಯೋಗ ಕೃಷ್ಣಪ್ಪ ಅವರ ಮಹತ್ವದ ಕಾರ್ಯ. ಸಾಹಿತ್ಯ ಸೇವೆಗೆ ಡಾ.ಜಿ.ಪಿ.ರಾಜರತ್ನಂ ಕನ್ನಡ ಸಾಹಿತ್ಯ ಪರಿಚಾರಕ ಪ್ರಶಸ್ತಿ, ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಮತ್ತಿತರ ಗೌರವಗಳಿಗೆ ಇವರು ಪಾತ್ರರಾಗಿದ್ದರು.
ಬೇಂದ್ರೆ ಸಾಹಿತ್ಯದ ತಲಸ್ಪರ್ಶಿ ಅಧ್ಯಯನಕಾರರಾದ ಡಾ. ಜಿ. ಕೃಷ್ಣಪ್ಪ ಅವರ ಸಾಹಿತ್ಯ ಪರಿಚಾರಿಕೆ-ಸಾಧನೆಗೆ ಮನ್ನಣೆ ನೀಡಿ 2018 ನೇ ಸಾಲಿನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ನೇ ಸಾಲಿನ ಪುಸ್ತಕ ಬಹುಮಾನ ಕೂಡ ಇವರಿಗೆ ಲಭಿಸಿತ್ತು.
ಬೆಂಗಳೂರು: ಪ್ರಸಿದ್ಧ ಪುಸ್ತಕ ಮಾರಾಟ ಸಂಸ್ಥೆಯಾದ ಸೆಲೆಕ್ಟ್ ಬುಕ್ ಶಾಪ್ ನ ಮಾಲೀಕ ಕೆಕೆಎಸ್ ಮೂರ್ತಿ (95) ಅವರು ಸೋಮವಾರ...
ಕಲಬುರಗಿ: ಕಲ್ಯಾಣ ಕರ್ನಾಟಕ ರಾಷ್ಟ್ರೀಯ ಸಾಹಿತ್ಯೋತ್ಸವದಲ್ಲಿ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ ಎರಡನೇ ಗೋಷ್ಠಿಯಲ್ಲಿ ಕವ...
ಕಲಬುರಗಿ: ರಂಗಭೂಮಿಯ ಚರಿತ್ರೆಯಲ್ಲಿ ಸ್ವಾತಂತ್ರ್ಯಪೂರ್ವದಿಂದ ಹಿಡಿದು ಸ್ವಾತಂತ್ರ್ಯೋತ್ತರ ಕಾಲಘಟ್ಟದವರೆಗೂ ನಾಟಕಗಳ ಹರವ...
©2025 Book Brahma Private Limited.