Date: 23-12-2024
Location: ಬೆಂಗಳೂರು
“ಕವಿತೆಗಳು ಗಾಳಿಯ ಕಿರಿ ಸುಳಿಯಂತೆ ನಮ್ಮನ್ನು ಸ್ಪರ್ಶಿಸುತ್ತವೆ, ಕಚಗುಳಿ ಇಡುತ್ತವೆ. ಸುಖ-ದುಃಖ, ನೋವು- ನಲಿವು, ಸಾಮಾಜಿಕ-ವೈಯಕ್ತಿಕ, ಏನೇ ಇರಲಿ, ಇಲ್ಲಿರುವ ಕವಿತೆಗಳು ನಯವಾದ ಮಾತುಗಳಲ್ಲಿ ಸಂವಾದಕ್ಕಿಳಿಯುತ್ತವೆ. ಪ್ರಶ್ನಿಸುತ್ತವೆ,” ಎನ್ನುತ್ತಾರೆ ಗುರುರಾಜ್ ಎಸ್ ದಾವಣಗೆರೆ ಅವರು ಮಧುರಾ ಮೂರ್ತಿ ಅವರ “ನೀರ ಮೇಲಣ ನೆರಳು” ಕವನ ಸಂಕಲನದ ಕುರಿತು ಬರೆದ ಮುನ್ನುಡಿ
ಅರ್ಥಗಳ ಪರಂಪರೆಯನ್ನು ಹುಟ್ಟಿಸುವ ಕವಿತೆಗಳ ರಚನೆ ಅಷ್ಟೊಂದು ಸುಲಭವಲ್ಲ ಎಂಬ ರೂಢಿ ಮಾತಿಗೆ ಬದ್ಧನಾಗಿ ಗದ್ಯಕ್ಕೆ ತೆರೆದುಕೊಂಡವನು ನಾನು. ಅದರಲ್ಲೂ ವಿಜ್ಞಾನ ಮತ್ತು ಪರಿಸರ ಎಂದು ಬರೆದು ಕರೆದುಕೊಂಡಿರುವವನಿಗೆ ಕವನ ಸಂಕಲನಕ್ಕೆ ಮುನ್ನುಡಿ ಬರೆದು ಕೊಡುತ್ತೀರಾ ಎಂಬ ಕೋರಿಕೆ ಕವಯಿತ್ರಿ ಮಧುರಾ ಭಟ್ ಅವರಿಂದ ಬಂದಾಗ ಅಚ್ಚರಿಯ ಜೊತೆ ಸಂಕೋಚವಾಯಿತು. ಬರೆದುಕೊಡುತ್ತೇನೆ ಎಂದು ನೇರವಾಗಿ ಹೇಳಲು ಧೈರ್ಯವಾಗಲಿಲ್ಲ. ಪ್ರಯತ್ನ ಮಾಡಿ ನೋಡುತ್ತೇನೆ ಎಂದು ಹೇಳುವಷ್ಟರಲ್ಲಿ ಸಾಕಷ್ಟು ಸಾಹಿತ್ಯ ಓದಿಕೊಂಡಿರುವ ನಿಮಗೆ ಇದೇನು ಕಷ್ಟವಾಗಲಿಕ್ಕಿಲ್ಲ ಎಂದು ಶಹಭಾಸ್ ಗಿರಿ ನೀಡಿ ಬರೆದುಕೊಡಲು ಒಪ್ಪಿಸಿಯೇ ಬಿಟ್ಟರು.
ಬರೆಯಲು ಕೂತವನಿಗೆ ವರಕವಿ ಬೇಂದ್ರೆಯವರ
'ಗಾಳಿ ಕಿರಿ ಸುಳಿ ಹುಟ್ಟಿತು
ಕವನ ವೇಷವ ತೊಟ್ಟಿತು'
ಎಂಬ ಮಾತು ನೆನಪಾಯಿತು. ಬೇಂದ್ರೆ ಅಜ್ಜ ಕಾವ್ಯವನ್ನು ವ್ಯಾಖ್ಯಾನಿಸುವ ರೀತಿ ಅದು. ಬದುಕಿನ ಹಲವು ವಿಷಯಗಳ ಕುರಿತು ಮಾತನಾಡುವ ಮಧುರಾ ಅವರ ಕವಿತೆಗಳು ಗಾಳಿಯ ಕಿರಿ ಸುಳಿಯಂತೆ ನಮ್ಮನ್ನು ಸ್ಪರ್ಶಿಸುತ್ತವೆ, ಕಚಗುಳಿ ಇಡುತ್ತವೆ. ಸುಖ-ದುಃಖ, ನೋವು- ನಲಿವು, ಸಾಮಾಜಿಕ-ವೈಯಕ್ತಿಕ, ಏನೇ ಇರಲಿ, ಇಲ್ಲಿರುವ ಕವಿತೆಗಳು ನಯವಾದ ಮಾತುಗಳಲ್ಲಿ ಸಂವಾದಕ್ಕಿಳಿಯುತ್ತವೆ. ಪ್ರಶ್ನಿಸುತ್ತವೆ, ರೇಗುತ್ತವೆ ಮತ್ತು ಕೊನೆಗೆ ಸಮಾಧಾನ ಹೇಳುತ್ತವೆ. ಇವರು ಬರೆದ ಕವನಗಳೆಲ್ಲವೂ ಅಂತಃಸ್ಫೂರ್ತಿ ಮತ್ತು ಆಪ್ತತೆಯನ್ನು ಒಳಗೊಂಡ ಕವಿತೆಗಳು. ಸಂಕಲನದ ಮೊದಲ 'ಅರಿತು ಬಾಳು' ಮತ್ತು ಎರಡನೆಯ 'ಬುದ್ಧನಂತಾಗಲಿಲ್ಲ' ಕವಿತೆಗಳ ಸ್ಥಾಯಿ ಇಡೀ ಸಂಕಲನದ ಒಳ ನದಿಯಾಗಿ ಇಡೀ ಪುಸ್ತಕವನ್ನು ಪ್ರವಹಿಸಿವೆ. ನೀರು ಸದಾ ಚಲನಶೀಲತೆಯುಳ್ಳ ಚೇತನ. ಅದರ ಮೇಲಿನ ನೆರಳನ್ನು ಹಿಡಿಯುವ, ಅಳೆಯುವ, ಚಿತ್ರಿಸುವ ಕೆಲಸವನ್ನು ಮಧುರಾ ಅವರು ತುಂಬಾ ನಾಜೂಕಾಗಿ ಮಾಡಿದ್ದಾರೆ. 'ಆತ್ಮದ ಗೋಳು' ಕವನದ-
`ಇದ್ದಾಗ ಬಂದು ಮಾತಾಡದ ಬಂಧುಗಳು
ಸತ್ತವನೆದುರು ನಿಂತು ಬಿಕ್ಕುತಿಹರು’
ಎಂಬ ಸಾಲುಗಳು ಮನುಷ್ಯ ಎಷ್ಟು- ನೀಚ ಮತ್ತು ಕುಬ್ಬ ಎಂಬುದನ್ನು ನೆನಪಿಸುತ್ತವೆ.
ನರರು ನೀಡಿದ ಯಾತನೆಯನ್ನು ಹೇಗೆ ಸಹಿಸಿದೆ ದೇವ ಎಂದು ಮರುಗುತ್ತಾ ಯೇಸುವನ್ನು ಪ್ರಶ್ನಿಸುವ ಕವಿಯು-
'ನಮ್ಮ ನುದ್ಧರಿಸಲು ಮತ್ತೆ ಹುಟ್ಟಿ ಬಾ' ಎಂದು ಪ್ರಾರ್ಥಿಸುತ್ತಾರೆ. 'ಇಷ್ಟೇ ಸಾಕು' ಎಂಬ ಕವನ ನಮ್ಮ ಪರ್ಸನಾಲಿಟಿ ಡೆವಲಪ್ಮೆಂಟ್‌ಗೆ ಬೇಕಾದ ಟೆಂಪ್ಲೇಟ್‌ನಂತಿದೆ.
"ಇಂದು ಇರುವವರು ನಾಳೆ ಮರೆಯಾಗುವರು
ಬಿಟ್ಟು ಹೋಗುವರೊಂದಷ್ಟು ನೆನಪು ಮಾತ್ರ
ಬೂದಿಯಾದರೂ ದೇಹ ಮಾಸದೇ ಉಳಿವಂತೆ
ದೊಡ್ಡದಿರಲಿ ಕೊಟ್ಟ ಪ್ರೀತಿ ಮಮತೆಯ ಗಾತ್ರ"
ಅನಿತ್ಯ ಬದುಕಿನ ಸತ್ಯವನ್ನು ಬಿಚ್ಚಿಡುವ 'ವಾಸ್ತವಕೆ ತೆರೆದು' ಎನ್ನುವ ಕವಿತೆಯ ಈ ಮೇಲಿನ ಸಾಲುಗಳು ಹೇಳುವುದು ನೇರವಾಗಿ ತಲೆಯ ಮೇಲೆ ಹೊಡೆದಂತಿದೆ. ಎಲ್ಲರೂ ಒಂದಲ್ಲ ಒಂದು ದಿನ ಮರಣ ಹೊಂದಲೇ ಬೇಕು. ಆದರೆ ದೇಹ ಬೂದಿಯಾದರೂ ಅಚ್ಚಳಿಯದಂತಹ ನೆನಪುಗಳ ಉಳಿಸಿ ಹೋಗುವವರು ಕೆಲವರು ಮಾತ್ರ. ಅದು ಹಿರಿದಾದ ಪ್ರೀತಿ ಮತ್ತು ಮಮತೆಗಳಿಂದ ಮಾತ್ರ ಸಾಧ್ಯ. ನಿಜ, ಭರಪೂರ ಪ್ರೀತಿ ನೀಡಿದವರು ಸದಾ ನೆನಪಿನಲ್ಲುಳಿಯುವುದು ಸಹಜ. ಹೀಗೆ ಮುಂದಕ್ಕೆ ಸಾಗುವ 'ವಾಸ್ತವಕೆ ತೆರೆದು' ಎನ್ನುವ ಈ ಕವಿತೆ ಓದುಗನನ್ನು ಸಾತ್ವಿಕ ಚಿಂತನೆಗೆ ಒಡ್ಡುವುದರಲ್ಲಿ ಅನುಮಾನವಿಲ್ಲ.
"ನಶಿಸುವೆನೆಂಬ ಭಯ ತೊರೆದು
ಕತ್ತಲೆಯ ನುಂಗಿ ಉರಿದುರಿದು
ಬೆಳಕ ನೀಡುವ ಹಣತೆಯಾಗಿ
ಸಾರ್ಥಕ್ಯ ಪಡೆಯುತಿರುವೆ"
ಒಂದು ಹಣತೆ ತನ್ನ ಕುರಿತು ಮಾತನಾಡಿದರೆ ಹೇಗಿರುತ್ತೆ ಎನ್ನುವುದು 'ಹಣತೆಯ ಸ್ವಗತ'. ಗಂಧದ ಕೊರಡು ತಾನು ಸವೆದರೂ ಪರಿಮಳವನ್ನೇ ಪಸರಿಸುವುದು. ಅದರಂತೆ ಉರಿದುರಿದು ತಾನು ಆರಿ ಹೋಗುವೆನೆಂಬ ಸತ್ಯದ ಅರಿವಿದ್ದರೂ ಹಣತೆ ಕೊನೆಯ ತನಕ ಬೆಳಕನ್ನೇ ನೀಡುತ್ತದೆ. ಅದರಲ್ಲಿಯೇ ಹಣತೆಗೆ ಏನೋ ಒಂದು ಧನ್ಯತಾಭಾವ, ಅದೆಷ್ಟೋ ಮಂದಿ ಸಜ್ಜನರು ತಮ್ಮ ಬದುಕಿನಲ್ಲಿ ಇನ್ನೊಬ್ಬರಿಗೆ ಒಳಿತನ್ನೇ ಬಯಸುತ್ತಾರೆ ಮತ್ತು ಹಾಗೆ ಬದುಕುತ್ತಾರೆ ಕೂಡ. ಹಣತೆಯನ್ನು ಬದುಕಿಗೆ ಹೋಲಿಸಿಕೊಂಡು ಈ ಕವಿತೆಯನ್ನು ಓದಿದಾಗ ಓದುಗನ ಪ್ರಜ್ಞೆ ಇನ್ನೊಂದು ಎತ್ತರಕ್ಕೆ ತೆರೆದುಕೊಳ್ಳುತ್ತದೆ
'ಆಸಕ್ತಿ ಅಳೆಯಲು ವಿಮರ್ಶೆ ಬೇಕಿಲ್ಲ, ಶ್ರದ್ದೆ ಸಾಕು'
ವ್ಯಕ್ತಿತ್ವ ನಿರ್ಮಿಸಲು ಹೆಣಗಬೇಕಿಲ್ಲ, ಪ್ರಾಮಾಣಿಕತೆ ಸಾಕು'
ಎಂಬ ಸಾಲುಗಳು ನಮ್ಮನ್ನೆಲ್ಲ ಆತ್ಮ ವಿಮರ್ಶೆ ಮಾಡಿಕೊಳ್ಳುವಂತೆ ಕಿವಿ ಮಾತು ಹೇಳುತ್ತವೆ. ಯಾವ ತಂತ್ರಕ್ಕೂ ಅಂಟಿಕೊಳ್ಳದೆ ಉತ್ಕಟ ಭಾವವನ್ನು ಸರಳವಾಗಿ ಆಪ್ತವಾಗಿ ದಾಟಿಸುವ ಇಲ್ಲಿನ ಕವನಗಳು ಓದುಗನನ್ನು ನೇರವಾಗಿ ತಟ್ಟುತ್ತವೆ.
ಬದುಕನ್ನು ಸುತ್ತಿದ ದಾರವನ್ನು ಬಿಚ್ಚಿಕೊಳ್ಳುವ ಬುಗುರಿಗೆ ಹೋಲಿಸುವ ಕವಿ ಅದು-
ಹೊಳೆಯಬೇಕು ಬೆಂಕಿ ಇಟ್ಟ ಬಂಗಾರದಂತೆ
ಮಣ್ಣು ಮಡಕೆಯಾಗಿ ಸಾರ್ಥಕತೆ ಪಡೆದಂತೆ
ಎಂದು ಜೀವನದ ಪರಮ ಸತ್ಯವನ್ನು ಸರಳ ಸಾಲುಗಳಲ್ಲಿ ಹೇಳಿ ಬೆರಗು ಹುಟ್ಟಿಸುತ್ತಾರೆ.
ಪರಿಸರ ಪ್ರೀತಿಯ 'ಹಸಿರು-ಉಸಿರು' ಮಹಿಳಾ ಸ್ವಾವಲಂಬನೆಯ 'ಮಹಿಳೆ', 'ಇಳೆ-ಮಳೆ' ಸಂಬಂಧದ 'ಆಧಾರ' ಕವಿತೆಗಳು ಸಮಾಜದ ದೃಷ್ಟಿಕೋನ ಮತ್ತು ಜವಾಬ್ದಾರಿಯನ್ನು ಎತ್ತಿ ಹೇಳುತ್ತವೆ. ಸಂಕಲನದಲ್ಲಿ ಆನೆ ಕುಸ್ತಿ ಕಲಿತ ಪ್ರಸಂಗದ ಕವಿತೆ ಇದೆ. ಕುಸ್ತಿ ಆಟವನ್ನು ನೋಡುವ ಆನೆ ತಾನು ಕುಸ್ತಿ ಕಲಿತು ಇನ್ನೇನು ಜನರ ಮೇಲೆ ಆಕ್ರಮಣ ಮಾಡಬೇಕು ಎನ್ನುವಷ್ಟರಲ್ಲಿ ಮಾವುತ ಅದರ ಜಾಗ ಬದಲಾಯಿಸುತ್ತಾನೆ. ಆನೆ ತನ್ನ ಸಹಜ ಗುಣಕ್ಕೆ ಮರಳುತ್ತದೆ. ಮನುಷ್ಯ ಪ್ರತಿನಿತ್ಯ ಏನನ್ನು ನೋಡುತ್ತಾನೋ ಅದೇ ಆಗುತ್ತಾನೆ ಎಂಬುದನ್ನು ಸ್ವಚ್ಛವಾಗಿ ಹೇಳುವ ಕವಯಿತ್ರಿ ಇಂದಿನ ದಿನಮಾನದ ಸಮಾಜದಲ್ಲಿ ನಡೆಯುತ್ತಿರುವ ಹಿಂಸೆ, ಮೋಸ, ದಬ್ಬಾಳಿಕೆ, ಅಸಹಿಷ್ಣುತೆಗಳನ್ನು ಕಾಣುವ ನಾವೂ ಸಹ ಅದರ ಪ್ರತಿನಿಧಿಯಾಗಿ ಬಿಡುತ್ತೇವೆ ಎಂಬ ಆತಂಕವನ್ನು ಪ್ರತಿಮಾ ರೂಪದಲ್ಲಿ ಹೇಳಿದ್ದಾರೆ.
ಪ್ರಸ್ತುತ ಸಮಾಜದ ಎಲ್ಲ ವಿಷಯಗಳ ಕುರಿತು ಕವನಗಳಿವೆ. ಪ್ರೀತಿ, ಸ್ನೇಹ, ಮನುಷ್ಯ ಸಂಬಂಧ, ಅಂತಃಕರಣ, ಅನುಭೂತಿ, ಜವಾಬ್ದಾರಿಯ ಹಲವು ರೂಪಕಗಳು ಇಲ್ಲಿವೆ. ಪ್ರತಿ ಕವನದಲ್ಲಿ ಹೊಸತನವಿದೆ.
ಈಗಾಗಲೇ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿರುವ ಅಪ್ಪಟ ಕವಿತಾಪ್ರತಿಭೆ ಮಧುರಾ ಭಟ್, ತಮ್ಮ ಲೇಖನಿಯಲ್ಲಿ ಸಾಕಷ್ಟು ಮಸಿ ಇದೆ ಎಂಬುದನ್ನು ಇಲ್ಲಿ ಪ್ರಮಾಣೀಕರಿಸಿದ್ದಾರೆ. ಇಲ್ಲಿನ ಕವಿತೆಗಳ ಮತ್ತೊಂದು ಆಕರ್ಷಣೆ ಎಂದರೆ ಸಹಜತೆ ಮತ್ತು ಉದ್ವೇಗ ರಹಿತ ನಿರಾಳ ಭಾವ. ಉಪದೇಶ-ಆದೇಶಗಳು ಇಲ್ಲವೇ ಇಲ್ಲ. ಇದನ್ನು ಮೀರಲು ಹರಸಾಹಸ ಪಡುವ ಕವಿಗಳು ಅನೇಕರಿದ್ದಾರೆ. ಕೆ.ಎಸ್.ನ, ಜಿ.ಎಸ್.ಎಸ್ ಕವಿತೆಗಳಲ್ಲಿರುವ ಸರಳತೆ ಮಧುರಾ ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ಅದೇ ಕಾರಣಕ್ಕೆ ಓದುಗನಿಗೆ ತುಂಬಾ ಇಷ್ಟವಾಗುತ್ತದೆ. ತಾಯಿಯಾಗಿ, ಪತ್ನಿಯಾಗಿ, ಶಿಕ್ಷಕಿಯಾಗಿ ಮತ್ತು ಸಮಾಜಮುಖಿ ಕವಿಯಾಗಿ ಬದುಕಿನ ಒಳತೋಟಿಗಳನ್ನು ಗ್ರಹಿಸಿರುವ ಪರಿ ಅನನ್ಯವಾದದ್ದು.
ತನ್ನೂರು ಹೊನ್ನಾವರದಲ್ಲಿ ಸಮುದ್ರ ಸೇರುವ ಶರಾವತಿ ನದಿಯಂತೆ ಸುಲಲಿತವಾಗಿ ಹರಿಯುವ, ಅಲ್ಲಲ್ಲಿ ಜಲಪಾತದಂತೆ ಧುಮ್ಮಿಕ್ಕುವ, ಹಸಿದ ಹೊಟ್ಟೆಗೆ ಅನ್ನ ನೀಡುವ, ನೋಡುಗರಲ್ಲಿ ಸೌಂದರ್ಯ ಪ್ರಜ್ಞೆ ಉಕ್ಕಿಸುವ ಶುದ್ಧ ನದಿ ನೀರಿನಂತಿರುವ ಇಲ್ಲಿನ ಕವನ ಗಳೆಲ್ಲವನ್ನು ಓದುಗರು ಬೊಗಸೆಗೆ ತುಂಬಿಕೊಳ್ಳಬೇಕು. ಹತ್ತಿರದಿಂದ ನೋಡಬೇಕು. ಕುಡಿದು ತೃಪ್ತರಾಗಬೇಕು.
ಆಗ ಕವಿಯು ನದಿಯ ಮತ್ತೊಂದು ಕವಲಾಗುತ್ತಾರೆ. ಮತ್ತಷ್ಟು ನೀರು ಹರಿಯುತ್ತದೆ. ಹೊಸ ಬದುಕಿನ ಬೀಜ ಮೊಳೆಯುತ್ತದೆ.
- ಗುರುರಾಜ್ ಎಸ್ ದಾವಣಗೆರೆ
ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್, ಇ...
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶಿವರಾಜಕುಮಾರ್, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ...
ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕ...
©2025 Book Brahma Private Limited.