ದೂರಪೂರ್ವ ಪ್ರವಾಸ ಟಿಪ್ಪಣಿಗಳ ಸಂಗ್ರಹ Ja ne ಜಪಾನ್


"ಇಂದು ಪ್ರವಾಸಿ ವ್ಲಾಗ್‌ಗಳ ಕೈಗೆ ಸಿಲುಕಿ, ಕನ್ನಡದಲ್ಲಿ ಪ್ರವಾಸ ಕಥನಗಳು ಸಂಪೂರ್ಣ ಅಪ್ರಸ್ತುತ ಅನ್ನಿಸತೊಡಗಿವೆ. ವಾರ-ಹದಿನೈದು ದಿನಗಳ ಕಾಲ ಒಂದು ದೇಶದ ಶೋಕೇಸ್‍ ಜಾಗಗಳ ಎದುರು ನಿಂತು ನೋಡಿ ಬಂದದ್ದನ್ನು ದಾಖಲಿಸಿದ ಕನ್ನಡದ ಬಹುತೇಕ ಪ್ರವಾಸಿ ಕಥನಗಳು ಇಂದು ಪ್ರಸ್ತುತವಾಗಿ ಉಳಿದಿಲ್ಲ.," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಅಂಜಲಿ ರಾಮಣ್ಣ ಅವರ ʻJa ne ಜಪಾನ್‌ʼ ಕೃತಿ ಕುರಿತು ಬರೆದ ಅನಿಸಿಕೆ.

ಜಪಾನಿಗೆ ಹೋಗೋದು/ಕಳಿಸೋದು ಅಂದರೆ ಅದು ಮೂರು ದಶಕಗಳ ಹಿಂದೆ ಬೇರೆಯೇ ಅರ್ಥ ಹೊಮ್ಮಿಸುತ್ತಿತ್ತು. ಇಂದು ಹಾಗಿಲ್ಲ.

ವಕೀಲರು, ಸಾಮಾಜಿಕ ಕಾರ್ಯಕರ್ತೆ ಮತ್ತು ಲೇಖಕಿ ಅಂಜಲಿ ರಾಮಣ್ಣ ಅವರು ತಮ್ಮ ಜಪಾನ್ ಪ್ರವಾಸ ಟಿಪ್ಪಣಿಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದಾರೆ. ಅದನ್ನು ತರಿಸಿಕೊಳ್ಳುವ ಹಿಂದೆ ಎರಡು ಉದ್ದೇಶಗಳಿದ್ದವು. ಒಂದು, ಈ ಪುಸ್ತಕದ ಖರೀದಿಯ ಮೊತ್ತ ಅಶಕ್ತ ಮಕ್ಕಳ ಶೈಕ್ಷಣಿಕ ಪ್ರವಾಸಕ್ಕೆ ಹೋಗಲಿದೆ ಎಂಬುದಾದರೆ, ಇನ್ನೊಂದು- ಈ ದೂರಪೂರ್ವದ ಪ್ರವಾಸದ ಎಕ್ಸಾಟಿಕ್ ಅನುಭವವನ್ನು ನನ್ನ ಅಂತಹದೊಂದು ಪ್ರವಾಸದ ಜೊತೆ ಹೋಲಿಸಿ ನೋಡುವ ಆಸಕ್ತಿ.

ಇಂದು ಪ್ರವಾಸಿ ವ್ಲಾಗ್‌ಗಳ ಕೈಗೆ ಸಿಲುಕಿ, ಕನ್ನಡದಲ್ಲಿ ಪ್ರವಾಸ ಕಥನಗಳು ಸಂಪೂರ್ಣ ಅಪ್ರಸ್ತುತ ಅನ್ನಿಸತೊಡಗಿವೆ. ವಾರ-ಹದಿನೈದು ದಿನಗಳ ಕಾಲ ಒಂದು ದೇಶದ ಶೋಕೇಸ್‍ ಜಾಗಗಳ ಎದುರು ನಿಂತು ನೋಡಿ ಬಂದದ್ದನ್ನು ದಾಖಲಿಸಿದ ಕನ್ನಡದ ಬಹುತೇಕ ಪ್ರವಾಸಿ ಕಥನಗಳು ಇಂದು ಪ್ರಸ್ತುತವಾಗಿ ಉಳಿದಿಲ್ಲ. ಉದಾರೀಕರಣದ ಹಿನ್ನೆಲೆಯಲ್ಲಿ ಈಗ ಪ್ರವಾಸಗಳೂ ಹೆಚ್ಚುತ್ತಿವೆ, ಅನುಭವಗಳ ಹಂಚಿಕೆಗೆ ತಂತ್ರಜ್ಞಾನಗಳೂ ಬದಲಾಗಿವೆ. ಹಾಗಾಗಿ ಡೀಪ್ ಡೈವ್ ಇಲ್ಲದ ಅಥವಾ ನಿರ್ದಿಷ್ಟ ಅನ್ವೇಷಣೆಯ ಉದ್ದೇಶ ಇಲ್ಲದ ಪ್ರವಾಸಕಥನಗಳು ಆಸಕ್ತಿ ಹುಟ್ಟಿಸುವುದಿಲ್ಲ.

ಯುರೋಪು, ಅಮೆರಿಕದಂತಹ ಪ್ರವಾಸಗಳಿಗೆ ಹೋಲಿಸಿದರೆ, ದೂರ ಪೂರ್ವದ ಪ್ರವಾಸದ “ಪ್ಯಾಲಟ್” ಸಂಪೂರ್ಣ ಬೇರೆ. ಅಲ್ಲಿನ ಜನ ಜೀವನ, ಬದುಕು, ಆಹಾರ ಎಲ್ಲವೂ ಭಿನ್ನ. ಹಾಗಾಗಿ ಅಂಜಲಿ ಅವರ ಪುಸ್ತಕ ಓದುವ ಆಸಕ್ತಿ ಮೂಡಿತ್ತು. ಜಾ ನೆ ಜಪಾನ್‌ನಲ್ಲಿ ಪ್ರವಾಸದ ವಿವರಗಳಿಲ್ಲ, ಬದಲಾಗಿ ಪ್ರವಾಸಿಯೊಬ್ಬರ ಆಬ್ಸರ್ವೇಶನ್ ಟಿಪ್ಪಣಿಗಳಿವೆ. ತಮ್ಮ ಪ್ರವಾಸದ ಒಂದು ಲೇಯರನ್ನು ಅವರು ಗೂಗಲ್ ಮೂಲಕ ಮುಗಿಸಿರುವುದರಿಂದ ಸ್ವಲ್ಪ ಆಳದ ಲೇಯರಿಗೆ ತಲುಪುವುದು ಅವರಿಗೆ ಸಾಧ್ಯವಾಗಿದೆ ಎಂಬುದು ಈ ಪುಸ್ತಕದ ಹೆಚ್ಚುಗಾರಿಕೆ.

ಈ ಲೇಯರುಗಳ ಆಳಕ್ಕಿಳಿದಷ್ಟೂ ಪ್ರವಾಸದ ಅನುಭವಗಳು ಹೆಚ್ಚು. ನಾನು ಕೆಲ ವರ್ಷಗಳ ಹಿಂದೆ ಕೊರಿಯಾದಲ್ಲಿ ಒಂದು ತಿಂಗಳ ಆಸುಪಾಸು ಕಳೆದಿದ್ದೆ. ಅಲ್ಲಿ ನನ್ನ ತಮ್ಮನ ಸ್ವಂತ ಮನೆ ಇರುವುದರಿಂದಾಗಿ, ಒಂದು ದೇಶದ ಶೊಕೇಸ್‌ಗೆ ಹೊರತಾದ, ಸಾಮಾನ್ಯ ನಗರದ ಬದುಕು ಎಕ್ಸ್‌ಪ್ಲೋರ್ ಮಾಡುವುದು, ಅಲ್ಲಿನ ಸಾಮಾಜಿಕ, ಆರ್ಥಿಕ, ಧಾರ್ಮಿಕ ತಾರತಮ್ಯಗಳು, ಆಂತರಿಕ ತುಮುಲಗಳು, ರಾಜಕೀಯ ಎಲ್ಲವನ್ನೂ ಸ್ವಲ್ಪ ಹೆಚ್ಚು ಗಮನಿಸುವುದು ಸಾಧ್ಯ ಆಗಿತ್ತು. ಆ ಅನುಭವ ನನಗೆ ಸಹಜವಾಗಿಯೇ ಒಂದು ಹೋಲಿಕೆಯ ಮಾನದಂಡವನ್ನು ಒದಗಿಸಿತು.

ಯುದ್ಧ- ಪುನರುತ್ಥಾನಗಳೇ ಬದುಕಾಗಿದ್ದರೂ ಮತ್ತೆ ಮತ್ತೆ ಪುಟಿದೇಳುವ ಕೊರಿಯಾ, ಜಪಾನ್ ಸಾವಿರಾರು ವರ್ಷಗಳ ಚರಿತ್ರೆ ಇದ್ದರೂ ಅದನ್ನು ಆಸಕ್ತರಿಗೆ ತೋರಿಸುವ ಸ್ಥಿತಿಯಲ್ಲಿ ಇಲ್ಲ. ಅವು ಜಗತ್ತಿನ ಬೇರೆ ದೇಶಗಳಿಗೆ ಹೋಲಿಸಿ ನೋಡಿದರೆ ಹೊಚ್ಚಹೊಸ ನಾಗರಿಕತೆಗಳು. ಅಲ್ಲಿ ಅದ್ಭುತ ವಾಸ್ತುಶೈಲಿಯ ಮ್ಯೂಸಿಯಂಗಳಿವೆ, ಆದರೆ ಆ ಮ್ಯೂಸಿಯಂ ತುಂಬಲು “ಚಾರಿತ್ರಿಕ” ಸರಕುಗಳ ಕೊರತೆ ಇದೆ ಎಂದರೆ, ಭಾರತದಲ್ಲಿರುವ ನಮಗೆ ಅರ್ಥ ಆದೀತು. ಏಕೆಂದರೆ ಇಲ್ಲಿ ತದ್ವಿರುದ್ಧ ಸ್ಥಿತಿ ಇದೆ. ಜಪಾನ್, ಕೊರಿಯಾದಂತಹ ಆಧುನಿಕ, ಯಶಸ್ವೀ ದೇಶಗಳ ಪ್ರವಾಸದ ವೇಳೆ, ಎಲ್ಲೆಡೆ ಈ ವಿಚಾರ ಗಮನಕ್ಕೆ ಬರುವುದು ಸಹಜ.

ಅಂಜಲಿ ಅವರ ಜಪಾನ್ ತಿರುಗಾಟ “ಶೋಕೇಸ್” ಆಸುಪಾಸಲ್ಲೇ ಇದೆಯಾದರೂ, ಒಂದೆರಡು ಲೇಯರ್ ಆಳಕ್ಕಿಳಿದು ಪರಿಶೀಲಿಸಿದೆ. ನನ್ನ ಪ್ರಕಾರ ಅವರು ಮಿಸ್ ಮಾಡಿಕೊಂಡದ್ದು, ಅಲ್ಲಿನ ಫುಡ್ ಪ್ಯಾಲಟ್! ತಮಾಷೆಯ ಸಂಗತಿ ಎಂದರೆ, ಮೀನು-ಮಾಂಸ ಇಷ್ಟಪಟ್ಟು ತಿನ್ನುವ ನನ್ನ ತಂದೆಗೆ, ಕೊರಿಯಾದಲ್ಲಿ ಮೀನು ಮಾರುಕಟ್ಟೆಗೆ ಹೋದಾಗ, ಅಲ್ಲಿನ ವಾಸನೆ ಸಹಿಸಲಾಗಿರಲಿಲ್ಲ. ಅಡುಗೆಯ ನಮ್ಮ ಊಹಿತ “ಪರಿಮಳ”ಗಳಿಗೂ ಅಲ್ಲಿ ನಮಗೆ ಎದುರಾಗುವ ಪರಿಮಳಗಳಿಗೂ ಸಂಬಂಧವೇ ಇಲ್ಲ ಎಂಬುದು ನನ್ನ ಅನುಭವ ಕೂಡ. ವೆಜಿಟೇರಿಯನ್ ಆಹಾರಕ್ಕೆ ಸೀಮಿತಗೊಳಿಸಿಕೊಂಡು ಜಪಾನ್-ಕೊರಿಯಾದಂತಹ ಪ್ರವಾಸಗಳು ಬಹಳ ಇಕ್ಕಟ್ಟಿನವು.

ತಮ್ಮ ಪೂರ್ವ ಅಧ್ಯಯನದ ಕಾರಣದಿಂದಾಗಿ ಲೇಖಕಿ ಹಲವೆಡೆ, ತನ್ನ ಟಿಪ್ಪಣಿಯಲ್ಲಿ ಟೀಸರ್ ಗಳನ್ನು ನೀಡಿ, ಉಳಿದದ್ದನ್ನು ಗೂಗಲ್ ಮಾಡಲು ಹೇಳುತ್ತಾರೆ. ಓದುಗರನ್ನೂ ಹೀಗೆ ಮತ್ತೊಂದು ಲೇಯರಿಗೆ ಸೆಳೆಯುವುದು ಪುಸ್ತಕದ ನರೇಷನ್‌ನಲ್ಲಿ ನನಗೆ ಇಷ್ಟವಾದ ಸಂಗತಿ.

ಪುಸ್ತಕದ ವಿವರಗಳನ್ನು ನಾನಿಲ್ಲಿ ಚರ್ಚಿಸಲು ಹೋಗುವುದಿಲ್ಲ. ನೀವೂ ಕೊಂಡು ಓದಿ, ಲೇಖಕಿಯ ಸದುದ್ದೇಶದಲ್ಲಿ ಪಾಲ್ಗೊಳ್ಳಿ. ಒಟ್ಟಿನಲ್ಲಿ ಲೇಖಕಿಯ ಆಸಕ್ತಿಗಳು, ಕುತೂಹಲಗಳು ಇಲ್ಲಿ ಟಿಪ್ಪಣಿ ರೂಪದಲ್ಲಿ ಬಂದು, ನಿಮಗೂ ಜಪಾನ್‌ಗೆ ಹೋಗಿಬರಬಹುದು ಅನ್ನಿಸಿದರೆ ಅವರ ಪ್ರಯತ್ನ ಸಾರ್ಥಕ. ಇಂತಹ ಪ್ರಯತ್ನಗಳು ಪುಸ್ತಕರೂಪದಲ್ಲಿರುವುದಕ್ಕಿಂತಲೂ ಡಿಜಿಟಲ್ ರೂಪದಲ್ಲಿ ಹೆಚ್ಚು ಉಪಯುಕ್ತ ಎಂಬುದು ನನ್ನ ಅನ್ನಿಸಿಕೆ.

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...