Date: 23-12-2024
Location: ಬೆಂಗಳೂರು
“ಜಯಂತಿಪುರದ ಒಂದು ಸಮಗ್ರ ಚಿತ್ರಣ ಅನಾವರಣಗೊಳ್ಳುತ್ತದೆ. ಗೋರೂರು ರಾಮಸ್ವಾಮಿ ಅಯ್ಯಂಗಾರರ 'ನಮ್ಮೂರಿನ ರಸಿಕರು', ಆರ್.ಕೆ.ನಾರಾಯಣ್‌ರ 'ಮಾಲ್ಗುಡಿ ಡೇಸ್' ನಂತೆ ಈ ಪ್ರಕಾರದಲ್ಲಿ ಇದು ಒಂದು ಯಶಸ್ವಿ ಪ್ರಯತ್ನ,” ಎನ್ನುತ್ತಾರೆ ಬನವಾಸಿ ವೆಂಕಟೇಶ ದೀಕ್ಷಿತ್ ಅವರು ಶ್ರೀಧರ ಬನವಾಸಿ ಅವರ “ಜಯಂತಿಪುರದ ಕತೆಗಳು” ಕೃತಿ ಕುರಿತು ಬರೆದ ಮುನ್ನುಡಿ.
ನಿರಂತರ ಚಲನೆ ಸಮಯದ ಲಕ್ಷಣವಾದರೆ; ಘಟನೆಗಳು ಇತಿಹಾಸವನ್ನು ನಿರ್ಮಿಸುತ್ತವೆ. ಜೀವಿಗಳಿಂದ ಪಂಚಭೂತಗಳಿಂದ ತುಂಬಿದ ಈ ಜಗತ್ತಿನಲ್ಲಿ ಪ್ರತಿಕ್ಷಣ ಘಟನೆಗಳು ಜರುಗುತ್ತಲೇ ಇರುತ್ತವೆ. ತೂಕದವು ದಾಖಲೆಗೆ ಸೇರಿದರೆ ಗೌಣವಾದದ್ದು ಲಕ್ಷ್ಯಕ್ಕೆ ಬರದೇ ಹೋಗುತ್ತವೆ. ಆದರೆ ದೊಡ್ಡ ಗೋಡೆಯೊಂದರ ಭಾಗವಾದ ಇಟ್ಟಿಗೆಗಳಂತೆ ಅವುಗಳ ಯೋಗದಾನ ಇದ್ದೇ ಇರುತ್ತದೆ. ಈ ವಿಶಾಲ ಜಗತ್ತಿನ ಒಂದು ಕಣದಂತಿರುವ ಜಯಂತಿಪುರ ಇದಕ್ಕೆ ಅಪವಾದವಲ್ಲ.
ಈಗಾಗಲೆ ಕಾದಂಬರಿಕಾರರಾಗಿ, ಕಥೆಗಾರರಾಗಿ ಪರಿಚಿತರಾಗಿರುವ ಶ್ರೀಧರ ಬನವಾಸಿಯವರು ಇಲ್ಲಿ ಜಯಂತಿಪುರದ ನಡುವೆ ನಿಂತು ಎಲ್ಲ ದಿಕ್ಕುಗಳನ್ನೂ ಸೂಕ್ಷ್ಮವಾಗಿ ವೀಕ್ಷಿಸುತ್ತಾರೆ. ಅಲ್ಲಿಯ ಚಿರಪರಿಚಿತ ವ್ಯಕ್ತಿಗಳು ಚದುರಂಗದ ಹಾಸಿಮೇಲಿನ ಕಾಯಿಗಳಂತೆ ಕ್ರಿಯೆ ಪ್ರತಿಕ್ರಿಯೆಗಳ ಜಾಲದಲ್ಲಿ ಸತತವಾಗಿ ವ್ಯಸ್ತರಾಗಿರುವುದನ್ನು 'ಜಯಂತಿಪುರದ ಕಥೆಗಳು' ಕೃತಿಯಲ್ಲಿ ಬೆರಗಿನಿಂದ ನೋಡುತ್ತಾರೆ. ಜಯಂತಿಪುರ ದೊಡ್ಡಶಹರವಾಗಲಿ ಬಿರುಸಿನ ವ್ಯಾಪಾರಿ ಕೇಂದ್ರವಾಗಲಿ ಅಲ್ಲ; ಆದರೆ ಪುರಾತನ ರಾಜಧಾನಿಯೂ, ಇತಿಹಾಸ ಪ್ರಸಿದ್ಧ ಕ್ಷೇತ್ರವೂ ಆಗಿದ್ದಕ್ಕೆ ನಕಾಶೆಯಲ್ಲಿ ಊರಿಗೆ ಅದರದೇ ಆದ ಮಹತ್ವವೂ ಕೀರ್ತಿಯೂ ಇದೆ. ಇದೇ ಐತಿಹಾಸಿಕ ಕಾರಣಕ್ಕೆ ಅಲ್ಲಿ ವೃತ್ತಿಯನ್ನು ಸೂಚಿಸುವ ಕಂಚುಗಾರ ಓಣಿ, ಉಪ್ಪಾರಕೇರಿ, ಬ್ರಾಹ್ಮಣಕೇರಿ, ರಥಬೀದಿ, ಸಂತೆಪೇಟೆ, ಹೂವಿನಕೊಪ್ಪಲಕೇರಿ, ದೊಡೇರಿಗಳಿವೆ. ಅದೇ ರೀತಿಯಲ್ಲಿ ಅನ್ವರ್ಥಕವಾಗಿ ತಗ್ಗಿನಕೇರಿ, ಕಾಮನಗಲ್ಲಿ, ಸೊರಬ ರಸ್ತೆಯ ಕೇರಿಗಳೂ ಇವೆ.
ಈ ಎಲ್ಲಾ ಕೇರಿಗಳಲ್ಲಿ ಘಟಿಸುವ ಸಂಗತಿಗಳನ್ನು ಪಾತ್ರಗಳ ನೋವು, ಖುಷಿ, ಸಿಟ್ಟು, ವಾತ್ಸಲ್ಯ, ಹತಾಶೆ ಮುಂತಾಗಿ ಮನುಷ್ಯ ಸಹಜ ಕ್ರಿಯೆ ಪ್ರತಿಕ್ರಿಯೆಗಳನ್ನು ಭಾವನಾತ್ಮಕ ನೆಲೆಗಳಲ್ಲಿ ದಾಖಲಿಸುತ್ತ ಹೋಗುತ್ತಾರೆ. ಕೆಲವು ಅದೇ ಕೇರಿಗೆ ಸೀಮಿತವಾದದ್ದಾದರೆ ಹಲವು ಪರಸ್ಪರ ಕೇರಿಗಳವರನ್ನು ಪ್ರಭಾವಿಸುವವಾಗಿವೆ. ವಿವರಗಳು ಹೀಗೆ ಕಥೆಗಳಲ್ಲಿ ತೆರೆದುಕೊಳ್ಳುತ್ತಾ ಜಯಂತಿಪುರದ ಚಿತ್ರಣವೊಂದು ರೂಪುಗೊಳ್ಳುವುದನ್ನು ಇಲ್ಲಿ ನೋಡಬಹುದು. ಇಲ್ಲಿ ಒಟ್ಟೂ ಹನ್ನೆರಡು ಕಥೆಗಳಿವೆ. ಪ್ರೇಮ-ಕಾಮ, ದುರಾಸೆ, ಮೂಢನಂಬಿಕೆ, ಅಸಹಾಯಕತೆ ಹೀಗೆ ವಿವಿಧ ನೆಲೆಗಳಲ್ಲಿ ಘಟಿಸುವ ಸಂಗತಿಗಳನ್ನು ಲೇಖಕರು ಗ್ರಹಿಸುತ್ತಾರೆ.
'ಎಲ್ಲಿಂದಲೋ ಬಂದವನು' ಕಥೆಯಲ್ಲಿ ಜೈಲಿನಿಂದ ತಪ್ಪಿಸಿಕೊಂಡ ಖೈದಿಯೊಬ್ಬ ಮಧ್ಯಾಹ್ನದ ಹೊತ್ತು ಇದ್ದಕ್ಕಿದ್ದಂತೆ ಕೃಷ್ಣಪ್ಪನ ಮನೆಗೆ ಓಡಿಬಂದು ರಂಗನಾಥನನ್ನು ಆರ್ತನಾಗಿ ಕರೆಯತೊಡಗುತ್ತಾನೆ. ಹತ್ತು ವರ್ಷಗಳ ಹಿಂದೆ ತೀರಿಕೊಂಡ. ಕೃಷ್ಣಪ್ಪನ ತಮ್ಮ ರಂಗನಾಥ ಬದುಕಿದ್ದಾಗ ಅಲೆಮಾರಿಯಾಗಿದ್ದವ, ಊರಿಗೆ ಬಂದಾಗೆಲ್ಲ ಊರವರಿಗೆ ಉಡುಗೊರೆಗಳನ್ನು ತರುತ್ತಿದ್ದ. ಆದರೆ ಏನು ಕೆಲಸ ಮಾಡುತ್ತಿದ್ದ ಅಂತ ಯಾರಿಗು ಗೊತ್ತಿಲ್ಲ. ಈಗ ಬಂದವ ತಾನು ಎರಡೆರಡು ಕೊಲೆ ಮಾಡಿದ್ದಾಗಿಯೂ ರಂಗನಾಥನಿಗೆ ಆಪ್ತ ಅಂತಲೂ ಹೇಳುವುದರಲ್ಲಿ ರಂಗನಾಥನ ಬಗ್ಗೆಯು ಸೂಚನೆಯಿದೆ. ಇದೊಂದು ಜಯಂತಿಪುರದ ಹೊರತಾಗಿಯು ಸ್ವತಂತ್ರ ಕಥೆಯಾಗಬಲ್ಲದು. 'ಸೊನಗಾರ ಶೆಟ್ಟರ ಮಗಳು' ಗಂಡನ ಹಿಂಸೆ ಮತ್ತು ಶೋಷಣೆಯಿಂದ ಬೇಸತ್ತ ಮಾಧವಿಯ ಕಥೆ. ಇನ್ನು ಸಹಿಸಲಸಾಧ್ಯವಾದಾಗ ಮಾಧವಿ ಗಂಡನ ಮನೆ ತೊರೆದು ತವರಿಗೆ ಬರುತ್ತಾಳೆ. ಸರಕಾರಿ ಶಾಲೆಯ ಶಿಕ್ಷಕಿಯಾಗಿದ್ದ ಅವಳು ವಿದ್ಯಾಭ್ಯಾಸ ಮುಂದುವರಿಸಿ ಪಿ.ಎಚ್‌ಡಿಗೆ ತೊಡಗುತ್ತಾಳೆ. ಮನೆಯಲ್ಲೆ ಇರುವ ಬ್ರಾಹ್ಮಣ ಗಂಡುಗಳಿಗೆ ಹೆಣ್ಣು ಸಿಗದ ಕಾಲವದು. ಹೆಣ್ಣಿನ ತಂದೆತಾಯಿಯರಿಗೆ ದೊಡ್ಡಮೊತ್ತದ ಹಣ ಕೊಡಿಸಿ ಬ್ರಾಹ್ಮಣ ಕುಟುಂಬಕ್ಕೆ ಮದುವೆ ಮಾಡಿಸುವ ದಳ್ಳಾಳಿಗಳ ದಂಧೆ ಜೋರಿದ್ದ ಕಾಲವದು. ಅಲ್ಲಿಯೂ ಸೊಸೆಯಾಗಿ ಹೋದವಳಿಗೆ ಆಗುತ್ತಿದ್ದ ತಾರತಮ್ಯದ ಚಿತ್ರಣವಿದೆ. ಆ ಆಮಿಷಕ್ಕೆ ಬಲಿಯಾಗದೆ ಬಚಾವಾಗಿ ಪಿಎಚ್‌ಡಿ ಮತ್ತು ಸಾಹಿತ್ಯ ರಚನೆಯಲ್ಲಿ ಯಶಸ್ವಿಯಾಗುವ ಜಯಂತಿಪುರದ ಹೆಣ್ಣಿನ ಕಥೆಯಿದು. 'ಕಾಡುಪಾಲಾದ ಮಾರಿಬಲಿ' ಯಲ್ಲಿ ಸರಕಾರದ ಕಾನೂನಿನಿಂದಾಗಿ ಬಲಿಯಾಗುವುದನ್ನು ಎರಡೆರಡು ಸಾರಿ ತಪ್ಪಿಸಿಕೊಂಡ ಕೋಣವನ್ನು ಈ ವರ್ಷ ಬಲಿ ಕೊಡಲು ಎಲ್ಲಾ ಹೊಂದಾಣಿಕೆ ಮಾಡಿಕೊಂಡಿದ್ದ ಊರವರಿಗೆ ಚಳ್ಳೆಹಣ್ಣು ತಿನ್ನಿಸಿ ಕೋಣ ತಪ್ಪಿಸಿಕೊಳ್ಳುತ್ತದೆ. 'ಕುದುರೆಹೊಂಡ' ದಲ್ಲಿ ಇವನನ್ನು ತಾಯಿಯಂತೆ ಪ್ರೀತಿಸುವ ನಿಂಗಮ್ಮ ನೆರೆ ಬಂದ ವರದಾನದಿಯಲ್ಲಿ ಹೆಣವಾಗಿ ಕುದುರೆಹೊಂಡದಲ್ಲಿ ಸಿಗುತ್ತಾಳೆ. 'ಕಾಡುಪಾಲಾದ ಮಾರಿಬಲಿ', 'ಕುದುರೆಹೊಂಡ', 'ಮಾಲಿನಿ ಜೀವಂತವಾಗಿದ್ದಾಳೆ', 'ದೇಹವೆಂಬ ಮಡಿಕೆಯೊಳಗೆ', 'ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು' ಕಥೆಗಳಲ್ಲಿ ಪ್ರಥಮ ಪುರುಷದಲ್ಲಿ ನಿರೂಪಣೆಯಿದೆ. ಆದರೆ ನಿರೂಪಕ ಇಲ್ಲಿ ಕಥಾನಾಯಕನಲ್ಲ, ಸಾಕ್ಷಿಪ್ರಜ್ಞೆಯಾಗಿ ಘಟನೆಗಳನ್ನು ವೀಕ್ಷಿಸುತ್ತಾನೆ. ಆದರೆ ಒಂದು ಸಂದರ್ಭದಲ್ಲಿ ಸಾಕ್ಷಿಪ್ರಜ್ಞೆಯಿಂದ ಚಲಿಸಿ ಕಥೆಯಲ್ಲಿ ಸೇರುವುದು, ಅದರ ಭಾಗವಾಗುವುದೂ ಇದೆ. ಉದಾಹರಣೆಗೆ 'ಕಾಡುಪಾಲಾದ ಮಾರಿಬಲಿ' ಯಲ್ಲಿ ಬಾಲಕನಾದ ನಿರೂಪಕ ಎಲ್ಲರನ್ನೂ ಸಲಹುವ ತಾಯಿ ರಕ್ತಬಲಿ ಬಯಸುತ್ತಾಳೆಯೇ ಎಂಬ ಜಿಜ್ಞಾಸೆಗಿಳಿಯುತ್ತಾನೆ. ಇಲ್ಲಿಯ ಕತೆಗಳೆಲ್ಲ ಒಂದಲ್ಲ ಒಂದು ಸಂದರ್ಭದಲ್ಲಿ ಜಯಂತಿಪುರದಲ್ಲಿ ವಾಸ್ತವವಾಗಿ ನಡೆದ ಘಟನೆಗಳನ್ನು ಕುರಿತೇ ಆಗಿದ್ದಲ್ಲದೆ ಪ್ರಸ್ತಾಪಿಸಲ್ಪಡುವ ಸ್ಥಳಗಳೆಲ್ಲ ವಾಸ್ತವವಾಗಿ ಇರುವುದೇ ಆಗಿವೆ. ಹೀಗಾಗಿ ಸಾಕ್ಷಿಪ್ರಜ್ಞೆಯೂ ನಂತರದ ನೇರ ಪ್ರವೇಶವೂ ಜಯಂತಿಪುರದ ವಿವರ ವಿಸ್ತರಣೆಗೆ ಪೂರಕವಾಗೇ ಇದೆ. 'ಹುತ್ತದ ಅರಮನೆಯಲ್ಲಿ ವಿಷದ ಸುಂಟರಗಾಳಿಯು' ಕಥೆ ಕರೋನಾ ಕಾಲದ ಸಂಕಟಗಳನ್ನು ತೆರೆದಿಡುತ್ತದೆ. ಎಲ್ಲೆಲ್ಲೋ ಇದ್ದವರೆಲ್ಲ ಈಗ ಕರೋನಾ ತಂದೊಡ್ಡಿದ ಸಂಕಟಕ್ಕೆ ಜಯಂತಿಪುರಕ್ಕೆ ವಾಪಸು ಬಂದಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧ ಮತ್ತು ಕಳ್ಳುಬಳ್ಳಿಯ ಸಂಬಂಧಗಳನ್ನು ಆಪತ್ಕಾಲದ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸುತ್ತದೆ ಕಥೆ. ನಿರೂಪಕ ಮುಂಬಯಿಯಲ್ಲಿದ್ದಾನೆ. ತಾಯಿಯ ಮೂಲಕ ಇಲ್ಲಿಯ ಸಂಗತಿಗಳನ್ನು ನಿತ್ಯ ತಿಳಿದುಕೊಳ್ಳುತ್ತಾ ಸ್ಪಂದಿಸುತ್ತಿರುತ್ತಾನೆ. ಕಥೆಯ ಕೊನೆಯಲ್ಲಿ ಅವನಲ್ಲೇ ರೋಗಲಕ್ಷಣಗಳು ಕಾಣಿಸಿಕೊಳ್ಳುವುದರೊಂದಿಗೆ ಕಥೆ ಕೊನೆಗೊಳ್ಳುತ್ತದೆ.
ಮಧುಕೇಶ್ವರ ದೇವಸ್ಥಾನ ಮತ್ತು ಎದುರು ಹರಿಯುವ ವರದಾನದಿ ಜಯಂತಿಪುರದ ಆಸ್ಥಿತೆಯಾಗಿವೆ. ಅವುಗಳ ಪ್ರಸ್ತಾಪ ಹೆಚ್ಚುಕಮ್ಮಿ ಎಲ್ಲಾ ಕಥೆಗಳಲ್ಲಿ ಬರುತ್ತದೆ. ಯಾಕೆಂದರೆ ಊರ ಜನರ ದೈನಂದಿನ ಚಟುವಟಿಕೆಗಳಲ್ಲಿ ವರದಾನದಿಯ ನೀರುಣ್ಣುವ ಭತ್ತದ ಗದ್ದೆ ಅಡಕೆತೋಟಗಳು ಅನಾನಸು ಬೆಳೆ, ಸೊರಬದ ರಸ್ತೆಯಲ್ಲಿ ಸಿಗುವ ವರದಾನದಿ ಸೇತುವೆ, ಸಂಕಟದಲ್ಲಿ ಮೊರೆಹೋಗುವ ಮಧುಕೇಶ್ವರ ಹಾಸುಹೊಕ್ಕಾಗಿದ್ದಾರೆ. 'ನಿಗೂಢ ಜಗತ್ತಿನ ಅತಿಥಿಗಳು' ಕಥೆ ಊರ ದೇವಸ್ಥಾನಕ್ಕೆ ಒದಗಿದ ಆಪತ್ತನ್ನು ತೆರೆದಿಡುತ್ತದೆ. ಒಂದು ರಾತ್ರಿ ದೇಗುಲದಲ್ಲಿ ನಡೆದ ದರೋಡೆ ಅಕಸ್ಮಾತ್ತಾಗಿ ಕೊನೆಯ ಕ್ಷಣದಲ್ಲಿ ವಿಫಲವಾಗಿ ಕಳ್ಳರು ಚಿನ್ನಾಭರಣ ತುಂಬಿದ ಚೀಲಗಳನ್ನು ಬಿಟ್ಟು ಓಡಿ ಹೋಗುತ್ತಾರೆ. ವಾರದ ಹಿಂದಿಂದ ಸೊರಬರಸ್ತೆಯಲ್ಲಿ ಸಿಗುತ್ತಿದ್ದ ಯೆಜ್ಜಿ ಬೈಕ್‌ಸವಾರರು, ಅವರು ಒಡ್ಡುತ್ತಿದ್ದ ಬೆದರಿಕೆ ಚರ್ಚೆಗೆ ಗ್ರಾಸವಾಗುತ್ತದೆ. ಕಳ್ಳರು ಪತ್ತೆಯಾಗದಿದ್ದರೂ ಬೈಕ್ ಸವಾರರೆ ಕಾರಣವಿರಬಹುದೆಂಬ ಗುಮಾನಿಯಲ್ಲಿ ಮುಗಿಯುತ್ತದೆ. 'ದೇಹವೆಂಬ ಮಡಿಕೆಯೊಳಗೆ' ಕಾಮ-ಪ್ರೇಮದ ದುರಂತ ತೆರೆದಿಡುತ್ತದೆ. ವ್ಯಾಪಾರ ನಿಮಿತ್ತ ಊರೂರು ತಿರುಗುವ ಮಲೇಷಿಯ ಹೆಂಡತಿ ದೇವೀರಿಗೆ ಚಂದ್ರಕಾಂತನೊಂದಿಗೆ ಶರೀರ ಸಂಬಂಧವಿದೆ. ಸಂದೇಹ ನಿವೃತ್ತಿಗೆಂದೇ ಮದ್ವೇಷಿ ಎರಡು ದಿನ ಮುಂಚಿತವಾಗಿ ಅಚಾನಕ್ಕಾಗಿ ಬಂದು ಪುರಾವೆ ಸಮೇತ ಹಿಡಿಯುತ್ತಾನೆ. ಪಂಚಾಯತಿ ನಡೆದು ದೇವೀರಿಯನ್ನು ಶಾಶ್ವತವಾಗಿ ತವರಿಗೆ ಕಳಿಸಿಬಿಡುತ್ತಾರೆ. ಮಲ್ವೇಷಿ ಮತ್ತೊಂದು ಮದುವೆಯಾಗಿದ್ದು ತಿಳಿದು ದೇವೀರಿ ನೇಣುಹಾಕಿಕೊಳ್ಳುತ್ತಾಳೆ. ಕೋರ್ಟು ಕೇಸು ಅಂತ ಅಲೆದಲೆದು ಮಲೇಷಿಯೂ ನಾಪತ್ತೆಯಾಗುತ್ತಾನೆ. ಸ್ವಲ್ಪ ಕಾಲದ ನಂತರ ಶಾಂತಕುಮಾರ ಎಂಬವನ ಹೆಂಡತಿ ಹೀಗೇ ಓಡಿಹೋದಾಗ ಜಾತ್ಯಸ್ಥರು ಅವಳನ್ನು ವಾಪಸು ಕರೆತಂದು ಸಂಸಾರ ಸುಗಮಗೊಳಿಸಿದ ಸಂಗತಿ ಮೊದಲಿನ ಘಟನೆಯೊಂದಿಗೆ ಹೋಲಿಕೆಯಾಗಿ ದಾಖಲಾಗಿದೆ. ಉತ್ರಿ ಮಲೈಷಿ ನಿರೂಪಕನ ಕೋಣೆಯಲ್ಲಿ ಬರುವ ಘಟನೆಯಿಂದ ಸುರುವಾಗಿ ಮರುದಿನ ದೇವೀರಿ ಕೋಣೆಯಲ್ಲಿ ಬರುವ ಘಟನೆಯೊಂದಿಗೆ ಕೊನೆಗೊಳ್ಳುವಾಗ ಇವೆರಡೂ ನಿರೂಪಕನ ನೆನಪಿನ ಭಾವೋದ್ದೀಪನೆ ಎಂಬುದು ಸ್ಪಷ್ಟವಾಗುತ್ತದೆ. 'ಬರ ಮತ್ತು ಸತ್ತವರ ಸಮಾಧಿಗಳು' ಬರಗಾಲದ ಬವಣೆಗೆ ಕಾರಣ ಹುಡುಕುತ್ತಾ ತೊನ್ನು ಹಿಡಿದು ಸತ್ತವನ ಶವವನ್ನು ಹೂಳಿದ್ದು ಕಾರಣವೆಂಬ ತಲತಲಾಂತರದ ನಂಬಿಕೆಗೆ ಬಂದು ತಲುಪುವ ಊರವರು ಬಸಪ್ಪಜ್ಜನ ಮತ್ತು ಶೌಕತ್ ಅಲಿಯ ದೇಹಗಳನ್ನು ತೆಗೆದು ಸುಡುವುದರಲ್ಲಿ ಸಫಲರಾಗುತ್ತಾರೆ. ಕಾಕತಾಳೀಯವಾಗಿ ಮಳೆಯೂ ಸುರಿಯತೊಡಗುತ್ತದೆ.
'ಭಾನಾಮತಿ' ಎಂಬ ನೀಳತೆಯಲ್ಲಿ ಉಪ್ಪಾರಕೇರಿಯ ಮನೆಗಳ ಮೇಲೆ ಇದ್ದಕ್ಕಿದ್ದಂತೆ ರಾತ್ರಿ ಕಲ್ಲುಗಳು ಬೀಳಲು ಸುರುವಾಗುತ್ತದೆ. ಮೂಲ ಪತ್ತೆ ಮಾಡಲು ಪೋಲೀಸರಿಂದಲೂ ಸಾಧ್ಯವಾಗುವುದಿಲ್ಲ. ಆ ಸಮಯದಲ್ಲಿ ಜಯಂತಿಪುರಕ್ಕೆ ಯಾತ್ರೆಗೆ ಬಂದ ಸಿದ್ಧಪುರುಷರೊಬ್ಬರು ಇದು ಮಾಟಮಂತ್ರದ ಪರಿಣಾಮವೆಂದೂ ತಾವು ಪರಿಹರಿಸುವುದಾಗಿಯೂ ಹೇಳುತ್ತಾರೆ. ಆಗ ಅದೇ ಕೇರಿಯ ಭರಮಪ್ಪನಿಗೆ ಹಿಂದೆ ಅಲ್ಲಿದ್ದ ತಂತ್ರವಿದ್ಯೆ ಗೊತ್ತಿದ್ದ ಪುಟ್ಟಮ್ಮನೂ ನಿಧಿಯ ಅಸೆಗೆ ಅವಳನ್ನು ತಾನೇ ಕೊಲೆ ಮಾಡಿದ ಸಂಗತಿಯೂ ನೆನಪಾಗಿ ಭಯಕ್ಕೆ ತಳ್ಳುತ್ತದೆ. ಆದರೆ ಸಿದ್ಧಪುರುಷರಿಂದಾಗಿ ಎರಡು ದಿನಗಳಲ್ಲಿ ಕಲ್ಲು ಬೀಳುವುದು ನಿತ್ತುಬಿಡುತ್ತದೆ.
'ರಾಕ್ಷಸ ಮೊಸಳೆ ಮತ್ತು ಕಾಡುಹಂದಿಯ ಬೇಟೆಯು' ಕಾಡು ಮತ್ತು ನಾಡಿನ ಕಥೆ, ಜಮೀನು ಖರೀದಿಸಿ ಕೃಷಿ ಮಾಡಲು ಹೊರಟ ಮಾಸ್ತರೊಬ್ಬರ ಬವಣೆ ಇಲ್ಲಿದೆ. ಕಾಡು ಇದ್ದರೆ ನಾಡು ಎಂಬುದು ಸತ್ಯ. ಆದರೆ ಇಲ್ಲಿ ಕಾಡು ಮತ್ತು ನಾಡು ಮುಖಾಮುಖಿಯಾಗಿ ಸಂಘರ್ಷಕ್ಕಿಳಿದು ಮಾಸ್ತರು ಬಸವಳಿದುಹೋಗುತ್ತಾರೆ. ಹಂದಿಗಳು ಅವರಿಗೆ ಏನನ್ನೂ ಬೆಳೆಯಗೊಡದೆ ಅಧಿಕಾರಿಗಳಿಂದಲೂ ಪರಿಹಾರ ಸಿಗದೆ ಕೊನೆಗೆ ದೊಡೈರಿಯ ಹುಡುಗರಿಂದ ವಾಮಮಾರ್ಗದಲ್ಲಿ ಇದಕ್ಕೆ ಪರಿಹಾರ ಸಿಗುತ್ತದೆ. ಅಕ್ರಮಕ್ಕೆ ಅರಣ್ಯ ಇಲಾಖೆಯೂ ಸಹಕರಿಸುವ ವಿಡಂಬನೆ ಇಲ್ಲಿದೆ.
ಕೆಲವು ಕಥೆಗಳಿಗೆ ತಾರ್ಕಿಕ ಅಂತ್ಯ ಸಿಕ್ಕಿಲ್ಲ ಅಂತ ಅನಿಸಬಹುದು, ಆದರೆ ಇವೆಲ್ಲ ಘಟನೆಗಳು ಜಯಂತಿಪುರವೆಂಬುದು ಬೃಹತ್ಕಥೆ ಅಥವಾ ಕಾದಂಬರಿಯ ಬಿಡಿ ಅಧ್ಯಾಯಗಳು. ಒಂದು ಅಧ್ಯಾಯ ಮುಂದಿನ ಅಧ್ಯಾಯಕ್ಕೆ ಪೂರಕವಾಗಿರುವಂತೆ ಇದು. 'ದೇಹವೆಂಬ ಮಡಿಕೆಯೊಳಗೆ' ಕಥೆಯ ದೇವೀರಿಗೆ ಚಂದ್ರಕಾಂತನೊಡನೆ ಸಂಬಂಧ ಬರುವುದರ ಹಿನ್ನೆಲೆ 'ಶುಭೋದಯ ಹೋಟೆಲು' ಕಥೆಯಲ್ಲಿ ಸಿಗುತ್ತದೆ. ಒಂದೊಂದೇ ಕಥೆ ಜಯಂತಿಪುರದ ಅಧ್ಯಾಯಗಳನ್ನು ತೆರೆದಿಡುತ್ತ ಕೊನೆಯಲ್ಲಿ ಜಯಂತಿಪುರದ ಒಂದು ಸಮಗ್ರ ಚಿತ್ರಣ ಅನಾವರಣಗೊಳ್ಳುತ್ತದೆ. ಗೋರೂರು ರಾಮಸ್ವಾಮಿ ಅಯ್ಯಂಗಾರರ 'ನಮ್ಮೂರಿನ ರಸಿಕರು', ಆರ್.ಕೆ.ನಾರಾಯಣ್‌ರ 'ಮಾಲ್ಗುಡಿ ಡೇಸ್' ನಂತೆ ಈ ಪ್ರಕಾರದಲ್ಲಿ ಇದು ಒಂದು ಯಶಸ್ವಿ ಪ್ರಯತ್ನ.
- ಬನವಾಸಿ ವೆಂಕಟೇಶ ದೀಕ್ಷಿತ್
ಕಳೆದ ವರ್ಷ ‘ಕರಟಕ ದಮನಕ’ ಚಿತ್ರದಲ್ಲಿ ಕಾಣಿಸಿಕೊಂಡು ಮರೆಯಾಗಿದ್ದ ಬಹುಭಾಷಾ ನಟಿ ಪ್ರಿಯಾ ಆನಂದ್, ಇ...
ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಟ ಶಿವರಾಜಕುಮಾರ್, ಇದೀಗ ಕ್ಯಾನ್ಸರ್ ಮುಕ್ತರಾಗಿದ್ದಾರೆ. ಹೊಸ ವರ್ಷದ ಮೊದಲ ದಿನ ...
ಬೆಂಗಳೂರು: ಕರ್ನಾಟಕ ಸರ್ಕಾರವು ಅಭಿವೃದ್ಧಿ ಮತ್ತು ಪರಿಸರ ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆ ಮಾಡಿದ ಪತ್ರಕ...
©2025 Book Brahma Private Limited.