Date: 05-12-2025
Location: ಬೆಂಗಳೂರು
ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು
ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಇದೇ ಶನಿವಾರ ಮತ್ತು ಭಾನುವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯಲಿದೆ.
ಸಾಹಿತಿ ಬಾನು ಮುಷ್ಕಾಕ್ ಅವರೊಂದಿಗಿನ ಮಾತುಕತೆ 'ಬೀಯಿಂಗ್ ಬಾನು, ಬೀಯಿಂಗ್ ಬಂಡಾಯ' ಗೋಷ್ಠಿಯೊಂದಿಗೆ ಸಾಹಿತ್ಯ-ಸಂವಾದಗಳು ಆರಂಭವಾಗಲಿವೆ. ಲೇಖಕರೊಂದಿಗೆ ಮಾತುಕತೆ, ಸಂವಾದ, ಚರ್ಚೆ, ಸಂಗೀತ, ರಂಗ ಪ್ರಯೋಗಗಳ ಒಳಗೊಂಡು ಎರಡೂ ದಿನ ತಲಾ 54ರಂತೆ ಒಟ್ಟು 108 ಗೋಷ್ಠಿ-ಕಾರ್ಯಕ್ರಮಗಳು ಉತ್ಸವದಲ್ಲಿ ನಡೆಯಲಿವೆ.
ಪ್ರಮುಖ ಕಾರ್ಯಕ್ರಮ ಮತ್ತು ಗೋಷ್ಠಿಗಳು;
ಬಾನು ಮುಷ್ಕಾಕ್ ಅವರ ಬುಕರ್ ಪುರಸ್ಕೃತ ಕೃತಿ 'ಎದೆಯ ಹಣತೆ'ಯನ್ನು ಜನಮನದ ಆಟ ತಂಡವು ರಂಗರೂಪದಲ್ಲಿ ವಾಚಿಸಲಿದೆ. ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಕುರಿತಾಗಿ ಚಿಂತಕ ಜಿ.ಎನ್.ದೇವಿ ಅವರು ತಮ್ಮ ವಿಚಾರ ಮಂಡಿಸಲಿದ್ದಾರೆ. ಸಾಹಿತಿ ಕೃಷ್ಣಮೂರ್ತಿ ಹನೂರು ಅವರು ಎಸ್.ಎಲ್.ಬೈರಪ್ಪ ಅವರ ಕುರಿತು ತಮ್ಮ ಮಾತು ಹಂಚಿಕೊಳ್ಳಲಿದ್ದಾರೆ.
ನಮ್ಮ ನೆಲದ ಸಾಂಪ್ರದಾಯಿಕ ಮತ್ತು ಪಾರಂಪರಿಕ ಅಡಿಗೆ-ತಿನಸುಗಳ ಕುರಿತಾಗಿ ಕಾವೇರಿ ಪೊನ್ನಪ್ಪ, ಟಿಯಾ ಅನಸೂಯ ಮತ್ತು ಮಧು ನಟರಾಜ್ ಅವರು ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿನ ಹೊಸ ಅವಕಾಶಗಳನ್ನು ಪ್ರತಿಭಾ ನಂದಕುಮಾರ್ ಮತ್ತು ಮಾಲಿನಿ ಗೋಯಲ್ ಅವರು 'ಅನ್‌ಬಾಕ್ಸ್' ಮಾಡಲಿದ್ದಾರೆ.
'ದೇಶವು ಒಂದೇ ಭಾಷೆಯನ್ನಾಡುವುದು ತರವೇ' ಎಂಬ ವಿಚಾರವನ್ನು ಜಿ.ಎನ್.ದೇವಿ ಮತ್ತು ದೀಪಾ ಬಸ್ತಿ ಅವರು ಒರೆಗೆ ಹಚ್ಚಲಿದ್ದಾರೆ. 'ಪೊನ್ನಿಯನ್ ಸೆಲ್ವನ್' ಕೃತಿಯ ರಂಗರೂಪದ ಓದು, ಭಾಷೆ-ಪ್ರಾದೇಶಿಕ ಅಸ್ಮಿತೆ, ಕಲೆ-ಅಡುಗೆ-ಸಂಸ್ಕೃತಿ ಕುರಿತಾದ ಚರ್ಚೆ ಮತ್ತು ಪ್ರದರ್ಶನಗಳು ಉತ್ಸವದ ಮೊದಲ ದಿನದ ಆಕರ್ಷಣೆಯಾಗಿವೆ.
ಚೇತನ್ ಭಗತ್ ಅವರ ಇತ್ತೀಚಿನ ಕೃತಿ ಕುರಿತಾದ ಸಂವಾದ, 'ಇಂಗ್ಲಿಷ್-ವಿಂಗ್ಲಿಷ್: ತಾಯಿನುಡಿ-ಅನ್ಯನುಡಿ' ಸಂವಾದ, ಮೊಗಳ್ಳಿ ಗಣೇಶ್ ಕುರಿತಾಗಿ ಅಬ್ದುಲ್ ರಶೀದ್ ಮತ್ತು ಅರುಣ್ ಜೋಳದಕೂಡ್ಲಿಗಿ ಅವರ ಮಾತುಕತೆ, ಕೊರಚ ಮತ್ತು ಸಿದ್ದಿ ಭಾಷೆಗಳ ಅಸ್ಮಿತೆ ಕುರಿತಾಗಿ ಲಕ್ಷ್ಮಿ ಆರ್.ಸಿದ್ದಿ, ನಿರಂಜನಾರಾಧ್ಯ ಅವರ ವಿಚಾರ ಮಂಡನೆ ಉತ್ಸವದ ಎರಡನೇ ದಿನದ ಕೆಲ ಕಾರ್ಯಕ್ರಮಗಳಾಗಿವೆ.
ಪ್ರವೇಶವು ಉಚಿತವಾಗಿದೆ;
ಉತ್ಸವದ ಭಾಗವಾಗಿ ಎರಡೂ ದಿನ ಕತೆಗಳನ್ನು ಚಿತ್ರವಾಗಿಸುವ ಮತ್ತು ಚಿತ್ರಗಳಿಗೆ ಕತೆ ಹೆಣೆಯುವ ಕಾರ್ಯಾಗಾರ ನಡೆಯಲಿದೆ. ಪ್ರತಿ ಗೋಷ್ಠಿಯ ನಂತರ ಓದುಗರು ತಮ್ಮ ನೆಚ್ಚಿನ ಲೇಖಕರ ಜತೆಗೆ ಮಾತುಕತೆ ಮತ್ತು ಪುಸ್ತಕಕ್ಕೆ ಸಹಿ ಪಡೆಯಲು ಅವಕಾಶವಿದೆ. ಉತ್ಸವಕ್ಕೆ ಉಚಿತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗಾಗಿ https://bangaloreliteraturefestival.org
ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...
ಕವಿ ಬಿಆರ್ ಎಲ್ ಗೆ ಇ.ಎಸ್.ಐ.ಸಿ. ಕನ್ನಡ ರತ್ನ ಪ್ರಶಸ್ತಿ ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಮನರಂಜನಾ ಕೂ...
ಉಡುಪಿ: ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ...
©2025 Book Brahma Private Limited.