Date: 02-12-2022
Location: ಬೆಂಗಳೂರು
“ಶಿಕ್ಷಕರು ಶಿಬಿರಗಳಲ್ಲಿ ಪಾಲ್ಗೊಳ್ಳುವ ಬಗ್ಗೆ ಹಾಗೂ ಅವರ ಯೋಜನೆ, ಗುರಿ ಏನು ಅನ್ನುವ ಪ್ರಶ್ನೆಯನ್ನು ಮೊದಲಿಗೆ ತಮಗೆ ತಾವೇ ಕೇಳಬೇಕು. ಸಾಹಿತ್ಯಾತ್ಮಕವಾದ ಶಿಬಿರಗಳು, ಅಧ್ಯಯನವನ್ನು ಸುಲಭಗೊಳಿಸುದರ ಜೊತೆಗೆ ಜ್ಞಾನವನ್ನು ವಿಸ್ತರಿಸಿ, ಬತ್ತಳಿಕೆಯಲ್ಲಿ ವಿಚಾರಗಳನ್ನು ಪೋಣಿಸಿಡುತ್ತದೆ. ಇದರಿಂದ ಶಿಕ್ಷಕರು ಕಾಲಕ್ಕೆ ತಕ್ಕಂತೆ ಬದಲಾಗಬಹುದು,” ಎಂದು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ತಿಳಿಸಿದರು.
“ಕಾವ್ಯದ ಒಡನಾಟ ನಮಗೆ ಆತ್ಮಾವಲೋಕನವನ್ನು ಕಲಿಸುತ್ತದೆ. ಅಂತರಂಗದ ಜಗತ್ತು, ಭಾವ ಜಗತ್ತು, ನಮಗೆ ಅರ್ಥವಾಗಬೇಕಾದರೆ ಒಳಗಣ್ಣು ತೆರೆಯಬೇಕು. ಇದರಿಂದ ಸಾಹಿತ್ಯ, ನಮ್ಮ ಮೇಲೆ ಪ್ರಭಾವ ಬೀರುವುದರ ಜೊತೆಗೆ ಹದವಾಗಿ ಜಗತ್ತಿನ ಸವಾಲಿಗೆ ಎದೆಯೊಡ್ಡುವಂತೆ ರೂಪುಗೊಳಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಕುವೆಂಪು. ಅವರ ಕಾಲಘಟಕ್ಕೆ ಅವರು ಎದುರಿಸಿದ ಸವಾಲುಗಳು ಸಾಮಾನ್ಯವಲ್ಲ. ಕೆಳ ವರ್ಗದಿಂದ ಬಂದ ಕುವೆಂಪು ಮೇಲ್ವಾರ್ಗದವರ ಅನೇಕ ಸವಾಲುಗಳನ್ನು 20ನೇ ಶತಮಾನದಲ್ಲಿ ಎದುರಿಸಿದ್ದರು. ಆದರೆ ಅವರ ಅದೃಷ್ಟವಾದ ರಾಮಕೃಷ್ಣ ಆಶ್ರಮ ಬಾಲ್ಯದಲ್ಲಿಯೇ ಉನ್ನತ ಭವಿಷ್ಯವನ್ನು ರೂಪುಗೊಳಿಸಿತು,” ಎಂದು ಅಭಿಪ್ರಾಯಪಟ್ಟರು.
ಭಾರತೀಯ ಪರಂಪರೆಯಲ್ಲಿ ಗುರುವಿಗೆ ಮತ್ತು ವೈದ್ಯರಿಗೆ ಪ್ರಮುಖ ಸ್ಥಾನವಿದೆ. ಕಾರಣ, ಬದುಕಿನಲ್ಲಿ ಆರೋಗ್ಯ ಹಾಗೂ ಶಿಕ್ಷಣ ಬಹಳ ಮುಖ್ಯ. ಇದನ್ನು ಬಲಪಡಿಸಿದವರು ಕ್ರಿಶ್ಚಿಯನ್ ಮಿಷನರಿಗಳ ಮೂಲಕ ಬ್ರಿಟೀಷರು. ತಮ್ಮ ರಾಜಕೀಯ ಕ್ರಮದಿಂದ ಮಾತ್ರವಲ್ಲದೇ ಸಾಂಸ್ಕೃತಿಕವಾಗಿ ಶಿಕ್ಷಣ ಹಾಗೂ ವೈದ್ಯ ಸಂಸ್ಥೆಗಳನ್ನು ಬಲಪಡಿಸಿ ನಮ್ಮನ್ನು ಗೆದ್ದರು. ಪ್ರಸ್ತುತ ಇಂದಿನ ತಲೆಮಾರಿನವರು ಪಾಶ್ಚತ್ಯ ಸಂಸ್ಕೃತಿಗೆ ಒಲಿದಿದ್ದಾರೆ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಆನೇಕಲ್ ಶಾಲಾ ಶಿಕ್ಷಣ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಚಂದಾಪುರ ತಿರುಮನಗೊಂಡಹಳ್ಳಿಯ ರಮಣ ಮಹರ್ಷಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ‘ಕಾವ್ಯದ ಒಡನಾಟ-2022' ಶಿಕ್ಷಕರಿಗೆ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ಲೇಖಕ ಎಚ್.ಎಸ್. ಶಿವಪ್ರಕಾಶ್, ಹಿರಿಯ ಕವಿ ಬಿ.ಆರ್. ಲಕ್ಷ್ಮಣರಾವ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ವಿನೋದ ಸಾಹಿತ್ಯ: ಹಾಸ್ಯ ಭಾಷಣಕಾರ ವೈ.ವಿ.ಗುಂಡೂರಾವ್ ಮಾತನಾಡುತ್ತಾ, “ಪ್ರಸ್ತುತ ವಿನೋದ ಸಾಹಿತ್ಯದಲ್ಲಿ ಬಹಳ ಗೊಂದಲವಿದೆ. ನಗುವೊಂದು ರಸಪಾಕ, ಅಳುವೊಂದು ರಸಪಾಕ, ಜೀವನದಲ್ಲಿ ನಗು -ಅಳು ಎರಡನ್ನು ನಾವು ಸಮಪ್ರಮಾಣದಲ್ಲಿ ಸೇವಿಸಿದಾಗ ಜೀವನಕ್ಕೆ ಒಳ್ಳೆಯ ಸ್ವಾದ ಸಿಗಲು ಸಾಧ್ಯವಾಗುತ್ತದೆ. ಜೀವನದಲ್ಲಿ ನಡೆಯುವ ಘಟನೆಗಳನ್ನು ವಕ್ರ ದೃಷ್ಟಿಯಲ್ಲಿ ನೋಡಿದರೆ ಹಾಸ್ಯ ಹುಟ್ಟುತ್ತೆ, ಜೀವನವನ್ನೇ ವಕ್ರ ದೃಷ್ಟಿಯಲ್ಲಿ ನೋಡಿದರೆ ಫಿಲಾಸಫಿ ಹುಟ್ಟುತ್ತದೆ,” ಎಂದು ತಿಳಿಸಿ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿದರು.
ಆಧುನಿಕ ಮಹಿಳಾ ಕಾವ್ಯ: ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ, ಖ್ಯಾತ ಕವಯಿತ್ರಿ ಪ್ರತಿಭಾ ನಂದಕುಮಾರ್ ಹೀಗೆ ಹೇಳಿದರು, “ಹೆಣ್ಣೆಂದರೆ ಮಗಳು, ಹೆಂಡತಿ, ತಾಯಿ. ನಮ್ಮಲ್ಲಿ ಯಾವಾಗ ವರ್ಣ ಪದ್ಧತಿ ಇತ್ತೋ ಆಗ ಸಮಾಜವನ್ನು ಗಮನಿಸಿದರೆ, ಅಲ್ಲಿ ಶಿಕ್ಷಣ ನಾಸ್ತಿ ಹಾಗೂ ಅಭಿವ್ಯಕ್ತಿ ನಾಸ್ತಿಕವಾಗಿತ್ತು. ಇನ್ನು ಮಹಿಳಾ ಕಾವ್ಯಾದಲ್ಲಿ ಕಟ್ಟುಪಾಡುಗಳ ನಿರೀಕ್ಷೆ ಏಕೆ ಬೇಕು? ಎಚ್.ಎಸ್. ಶಿವಪ್ರಕಾಶ್ ‘ಶೃಂಗಾರ’ ಬರೆದರೆ ಯಾರು ಕಿರಿಕಿರಿ ಮಾಡುವುದಿಲ್ಲ. ಆದರೆ ನಾನು ಬರೆದರೆ ಯಾಕೆ ತಪ್ಪು? ಎಂದು ಪ್ರಶ್ನಿಸಿದರು.
“ಹೆಣ್ನು ತನ್ನ ಲೈಂಗಿಕತೆಯ ಬಗೆಗೆ ಬರವಣಿಗೆಯನ್ನು ಬರೆದರೆ ಒಪ್ಪಿಕೊಳ್ಳದ ಸಮಾಜ, ಆಕೆಯನ್ನು ಬೋಲ್ಡ್ ಎನ್ನುತ್ತದೆ. ಆದರೆ ಇವತ್ತಿನ ಕಾಲಘಟ್ಟದ ಹುಡುಗಿಯರು ಇವೆಲ್ಲವನ್ನೂ ಮೀರಿ ತಮಗನಿಸ್ಸಿದನ್ನು ಬರೆಯುತ್ತಿದ್ದಾರೆ. ಮಹಿಳಾ ಕಾವ್ಯ ಇವತ್ತು ಎಲ್ಲಾ ರೀತಿಯ ಸಂಕೋಲೆಗಳನ್ನು ಮೀರಿ ಸಾಹಿತ್ಯದಲ್ಲಿ ದಾಪುಗಾಲಿಡುತ್ತಿದೆ. “ಆ ಹಾ.. ಪುರುಷಕಾರಂ ಅನ್ನುವ ಪದ್ಯವನ್ನು ನಾನು ಬರೆದಿದ್ದೆ. ಅದು ಪತಂಜಲಿಯ ಯೋಗ ಸ್ತೋತ್ರದ ಮೊದಲ ವಾಕ್ಯ. ಆದರೆ ನಾನು ಇಲ್ಲಿ ಆ ವಾಕ್ಯವನ್ನು ಬರೆದುದರ ಒಳವನ್ನು ಯಾರು ಗಮನಿಸಿಲ್ಲ. ಅದರ ಕುರಿತು ತುಂಬಾ ಜನರು ಆಕ್ರೋಶವನ್ನು ವ್ಯಕ್ತಪಡಿಸಿದ್ದರು,” ಎಂದು ತಿಳಿಸಿದರು.
ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ....
ಮುಂಬಯಿ: ಹಿರಿಯ ಸಾಹಿತಿ, ಲೇಖಕ, ಪ್ರಾಧ್ಯಾಪಕ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದಿಂದ ಕೊಡಮಾಡುವ 2023-24ನೇ ಸಾಲಿನ ...
ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಚಿತ್ರೀಕರಣ ಬೆಂಗಳೂರಿನ ನಂತರ ಮುಂಬೈನಲ್ಲಿ ಮುಂದುವರೆದಿದೆ....
‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ...
©2025 Book Brahma Private Limited.