"ಈಗಿನ ಹಿರಿಯ ತರಗತಿಗಳ ಭಾಷೆಯ ಪಠ್ಯಪುಸ್ತಕಗಳನ್ನು ಗಮನಿಸಿದಾಗ ಮಕ್ಕಳಿಗೆ ಸಾಹಿತ್ಯದ ಎಲ್ಲ ಪ್ರಾಕಾರಗಳ ಅರಿವು, ಅಧ್ಯಯನವಾಗಲಿ ಎನ್ನುವ ಉದ್ದೇಶದಿಂದ ಪಠ್ಯಪುಸ್ತಕ ರಚನಾ ಸಮಿತಿಯು ಕವಿತೆ, ಕಥೆ, ನಾಟಕ, ವಚನ, ಲೇಖನ, ಪ್ರವಾಸಕಥನ, ಜೀವನ ಚರಿತ್ರೆ, ಹಾಸ್ಯ ಲೇಖನಗಳು ಹೀಗೆ ಬೇರೆ ಬೇರೆ ಆಯಾಮಗಳ ಪಾಠಗಳನ್ನು ನಾವು ಕಾಣಬಹುದು," ಎನ್ನುತ್ತಾರೆ ವೈ. ಜಿ. ಭಗವತಿ. ಅವರು ಕಂಚುಗಾರನಹಳ್ಳಿ ಸತೀಶ್ ಅವರ ‘ಭೈರ’ ಕಾದಂಬರಿ ಕುರಿತು ಬರೆದ ವಿಮರ್ಶೆ.
"ಭೈರ" ಎಂಬ ಕಾದಂಬರಿಯ ಪುಟಗಳನ್ನು ತಿರುವಿ ಹಾಕಿದಾಗ…
ಮಕ್ಕಳು ಸೃಜನಶೀಲರಾಗಿ ಬೆಳೆಯಬೇಕಾದರೆ ಕೇವಲ ಪಠ್ಯಪುಸ್ತಕದ ಓದೇ ಸಾಲದು. ಅವರು ಪಠ್ಯದಾಚೆಯ ಸಾಹಿತ್ಯವನ್ನು ಓದಬೇಕು. ಪಠ್ಯಕ್ಕೆ ಪೂರಕವಾದ ಕಥೆ, ಕಾದಂಬರಿ, ಕವನ, ನಾಟಕ ಕೃತಿಗಳನ್ನು ಓದಲು ಮಕ್ಕಳಿಗೆ ಶಿಕ್ಷಕರು, ಪಾಲಕರು ಅಂತಹ ವಾತಾವರಣ ಕಲ್ಪಿಸಿಕೊಡಬೇಕು. ಮಕ್ಕಳಿಗೆ ಓದಿನ ಅಭಿರುಚಿ ಬೆಳೆಸುವಂತಾಗಬೇಕು. ಹೀಗಾದಾಗ ಮಕ್ಕಳು ಬೌದ್ದಿಕವಾಗಿ, ಮಾನಸಿಕವಾಗಿ, ಸಧೃಢರಾಗಿ ಬೆಳೆಯಬಲ್ಲರು. ಮಕ್ಕಳ ಜ್ಞಾನ ವಿಕಾಸಕ್ಕಾಗಿ ಮಕ್ಕಳಿಗೆ ಓದು ಬಹುಮುಖ್ಯವಾಗಿದೆ. ಆದರೆ ಮಕ್ಕಳು, ಹಿರಿಯರು ಮೊಬೈಲ್ ಬಳಕೆಯ ಪರಿಣಾಮ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವಗಳು ಓದಿನಿಂದ ಹಿಮ್ಮುಖವಾಗುವಂತೆ ಮಾಡಿವೆ. ಆದರೆ ಪುಸ್ತಕದ ಓದಿನ ಸೊಗಸೇ ಬೇರೆ. ಆ ತನ್ಮತೆಯ ಸಾವಧಾನದ ಓದಿನ ಅನುಭವ ವಿಶಿಷ್ಠವಾದುದು. ಆ ಅಭಿರುಚಿಯತ್ತ ಮಕ್ಕಳ ಜೊತೆಯಲ್ಲಿ ಶಿಕ್ಷಕರು, ಹಿರಿಯರು ಹೆಜ್ಜೆ ಹಾಕಬೇಕಾಗಿದೆ. ಓದುವ ಸಂಸ್ಕೃತಿ ಬೆಳೆಸಬೇಕಿದೆ.
ಈಗಿನ ಹಿರಿಯ ತರಗತಿಗಳ ಭಾಷೆಯ ಪಠ್ಯಪುಸ್ತಕಗಳನ್ನು ಗಮನಿಸಿದಾಗ ಮಕ್ಕಳಿಗೆ ಸಾಹಿತ್ಯದ ಎಲ್ಲ ಪ್ರಾಕಾರಗಳ ಅರಿವು, ಅಧ್ಯಯನವಾಗಲಿ ಎನ್ನುವ ಉದ್ದೇಶದಿಂದ ಪಠ್ಯಪುಸ್ತಕ ರಚನಾ ಸಮಿತಿಯು ಕವಿತೆ, ಕಥೆ, ನಾಟಕ, ವಚನ, ಲೇಖನ, ಪ್ರವಾಸಕಥನ, ಜೀವನ ಚರಿತ್ರೆ, ಹಾಸ್ಯ ಲೇಖನಗಳು ಹೀಗೆ ಬೇರೆ ಬೇರೆ ಆಯಾಮಗಳ ಪಾಠಗಳನ್ನು ನಾವು ಕಾಣಬಹುದು. ಈ ನಿಟ್ಟಿನಲ್ಲಿ ಮಕ್ಕಳಿಗೆ ಶಾಸ್ತ್ರೀಯವಾಗಿ ಸಾಹಿತ್ಯ ರಚನೆಯ ಪ್ರಯತ್ನಗಳ ಮೂಲಕ ರಾಜ್ಯದ ವಿವಿಧ ಪ್ರಾಂತ್ಯಗಳಲ್ಲಿನ ಬಹಳಷ್ಟು ಶಿಕ್ಷಕರು ಹಾಗೂ ಇನ್ನಿತರ ವೃತ್ತಿಯಲ್ಲಿನ ಅನೇಕರು ತೊಡಗಿಕೊಂಡಿದ್ದಾರೆ. ಮೊದಲೆಲ್ಲ ಅನೇಕ ಹಿರಿಯರು ರಚಿಸಿದ ಮಕ್ಕಳ ಸಾಹಿತ್ಯವನ್ನು ಗಮನಿಸಿದಾಗ ಬಹುತೇಕ ಕಥೆ, ಕಾವ್ಯ ಸಾಂಪ್ರದಾಯಿಕ ಬರಹದಿಂದ ಕೂಡಿತ್ತು. ಜಾನಪದೀಯ ಹಾಗೂ ನೀತಿಬೋಧಕ ಅಂಶಗಳೇ ಹೆಚ್ಚಾಗಿದ್ದವು. ಆ ಕಾಲಘಟ್ಟಕ್ಕೆ ಅವು ಸಹಜವೂ, ಅನಿವಾಯ೯ವೂ ಆಗಿತ್ತು. ಆದರೆ ಇತ್ತೀಚಿನ ಬಹುತೇಕ ಎಲ್ಲ ಮಕ್ಕಳ ಬರಹಗಾರರು ಸಾಂಪ್ರದಾಯಿಕ ಬರವಣಿಗೆಯ ಶೈಲಿಯನ್ನು ಬದಲಾಯಿಸಿಕೊಂಡು ನವೀನ ರೀತಿಯಲ್ಲಿ ಕಥೆಗಳನ್ನು, ಕಾದಂಬರಿಗಳನ್ನು ರಚಿಸುತ್ತಿದ್ದಾರೆ. ಹೀಗಾಗಿ ಮಕ್ಕಳ ಸಾಹಿತ್ಯದಲ್ಲಿ ಹೊಸ ಹರಿವು ಕಾಣುವಂತಾಗಿದೆ.
ಇಂದಿನ ಮಕ್ಕಳ ಮಾನಸಿಕ ಸ್ಥಿತಿ, ಅವರ ಆಲೋಚನಾ ಲಹರಿ ವಿಭಿನ್ನವಾಗಿದೆ. ಅದಕ್ಕೆಲ್ಲಾ ಕಾರಣ ಅವರಿಗೆ ಈಗ ಲಭ್ಯವಿರುವ ತಂತ್ರಜ್ಞಾನದ ಅರಿವು. ಅದನ್ನು ಗಮನದಲ್ಲಿಟ್ಟುಕೊಂಡು ಬಹು ಎಚ್ಚರಿಕೆಯಿಂದ ಭಿನ್ನವಾಗಿ ಸಾಹಿತ್ಯ ರಚಿಸಬೇಕಿದೆ. ನಾನು ಇತ್ತೀಚಿನ ಹೊಸ ಲೇಖಕರುಗಳ ಕೃತಿಗಳನ್ನು ಗಮಿಸುತ್ತಿದ್ದೇನೆ. ನನಗೆ ಕೈಗೆಟುಕಿದ ಒಂದಿಷ್ಟು ಮಕ್ಕಳ ಕೃತಿಗಳನ್ನು ಓದಿದಾಗ ಇತ್ತೀಚಿಗೆ ಪ್ರಕಟವಾಗುತ್ತಿರುವ ಅನೇಕ ಮಕ್ಕಳ ಕೃತಿಗಳು ಕನ್ನಡ ಭಾಷೆಯ ಮಕ್ಕಳ ಸಾಹಿತ್ಯವನ್ನು ಶ್ರೀಮಂತಗೊಳಿಸುವಂತಿವೆ. ಅದಕ್ಕೆ ಕಾರಣಗಳು ಎಂದರೆ ಲೇಖಕರುಗಳು ಅಳವಡಿಸಿಕೊಂಡಿರುವ ಕೆಲವು ಸೂತ್ರಗಳು. ಪ್ರಯೋಗಕ್ಕೆ ಒಳಪಡಿಸಿದ ರೀತಿಯ ಬರವಣಿಗೆಯ ಶೈಲಿ. ಬರವಣಿಗೆಯಲ್ಲಿನ ಭಾಷಾ ವೈವಿಧ್ಯತೆ, ಕಥಾ ತಂತ್ರಗಳು, ವಿಷಯವಸ್ತುವಿನಲ್ಲಿ ವಿಭಿನ್ನ ರೀತಿಯ ಆಯ್ಕೆ. ಉತ್ತಮ ಗುಣಮಟ್ಟದ ಮುದ್ರಣ ಹೀಗೆಲ್ಲಾ ಅಂಶಗಳಿಗೆ ಇಂದಿನ ಲೇಖಕರು ಗಮನ ಹರಿಸುತ್ತಿದ್ದಾರೆ. ಓವ೯ ಮಕ್ಕಳ ಬರಹಗಾರನಾಗಿ ನನ್ನ ಓದಿಗೆ ದಕ್ಕಿದ ಹಲವಾರು ಕೃತಿಗಳನ್ನು ಗಮನಿಸಿ ಈ ಎಲ್ಲಾ ಮಾತುಗಳನ್ನು ಹೇಳುತ್ತಿದ್ದೇನೆ. ಡಾ. ಬಸು ಬೇವಿನಗಿಡದ ಅವರ "ಒಳ್ಳೆಯ ದೆವ್ವ", ರೂಪಾ ಜೋಶಿ ಅವರ "ಚಿಗುರು ಬುತ್ತಿ", ನಾಗರಾಜ ಹುಡೇದ ಅವರ "ಬೆರಗು", ನಾನು ಬರೆದ "ಮಕ್ಕಳು ಓದಿದ ಟೀಚರ್ ಡೈರಿ" ಹೀಗೆ ಒಂದಿಷ್ಟುಉದಾಹರಣೆಗಳನ್ನು ನೀಡಬಹುದು.
ಇದೀಗ ನನ್ನೆದುರಿಗೆ "ಭೈರ" ಎನ್ನುವ ಮಕ್ಕಳ ಕಾದಂಬರಿ ಇದೆ. ಇದನ್ನು ʼಕಂಸʼ ಎಂಬ ಕಾವ್ಯನಾಮದಿಂದ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಕಂಚುಗಾರನಹಳ್ಳಿ ಸತೀಶ್ ಅವರು ರಚಿಸಿದ್ದಾರೆ. ಕೃತಿಯ ಕುರಿತಾಗಿ ಅವರು ಒಂದಿಷ್ಟುಅಭಿಪ್ರಾಯಗಳನ್ನು ಮುನ್ನುಡಿಯ ರೂಪದಲ್ಲಿ ಹಂಚಿಕೊಳ್ಳಲು ಭಿನ್ನವಿಸಿಕೊಂಡಿದ್ದಾರೆ. ಹೀಗಾಗಿ ಸಮಯವನ್ನು ಸರಿದೂಗಿಸಿಕೊಂಡು ಒಂದಿಷ್ಟು ಸಾವಧಾನದ ಓದು ಆಗಿದೆ.
ಚಿಕ್ಕದಾದ, ಒಂದಿಷ್ಟು ಹೊಸತನ ಮೈಗೂಡಿಸಿಕೊಂಡ ಮಕ್ಕಳ ಕಾದಂಬರಿಯೊಂದನ್ನು ಈ ನಾಡಿನ ಮಕ್ಕಳ ಕೈಗೆ ನೀಡುತ್ತಿರುವುದಕ್ಕೆ ಸತೀಶ್ ಅವರನ್ನು ಮೊದಲಿಗೆ ಅಭಿನಂದಿಸುವೆ. ಇಂಥಹದೊಂದು ದೀಘ೯ ಬರವಣಿಗೆಗೆ ತೊಡಗಿಕೊಳ್ಳುವುದು ಒಂದು ಸಾಹಸವೇ ಎನ್ನಬೇಕು. ಮಕ್ಕಳ ಕಾದಂಬರಿ ಬರೆಯುವವರು ತುಂಬಾ ವಿರಳ. ಗದ್ಯ ಸಾಹಿತ್ಯದಲ್ಲಿ ವಿಷಯದ ವಿಸ್ತಾರ, ಕತೆಯನ್ನು ಸಾಗಿಸಿಕೊಂಡು ಹೋಗುವ ಧಾಟಿ, ಓದುಗನಿಗೆ ನೀರಸವೆನಿಸದಂತಹ ಅಚ್ಚರಿ, ಕುತೂಹಲದ ಅಂಶಗಳು ಕೃತಿಯಲ್ಲಿ ತರುವಂತಹ ಕೆಲಸ ಲೇಖಕರು ಮಾಡಬೇಕಾಗುತ್ತದೆ. ಸತೀಶ್ ಅವರು ಆ ಕೆಲಸವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. ಅವರು ಓವ೯ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದುಕೊಂಡು ಓದು ಮತ್ತು ಬರವಣಿಗೆಯಲ್ಲಿ ತೊಡಗಿಕೊಂಡಿರುವುದು ನನಗೆ ಖುಷಿ ತಂದಿದೆ. ಚಿಕ್ಕಮಗಳೂರಿನ ಕಂಚುಗಾರನಹಳ್ಳಿಯವರು. ಈಗ ವೃತ್ತಿಯಿಂದಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಶಿಕ್ಷಕರಾಗಿದ್ದಾರೆ. ಮಕ್ಕಳ ಮಧ್ಯೆ ಇರುವ ಶಿಕ್ಷಕರು ಮಕ್ಕಳಿಗಾಗಿ ಒಂದಿಷ್ಟು ಖಚಿತವಾದ ಸಾಹಿತ್ಯ ನಿಮಿ೯ಸಬಹುದು. ಮಕ್ಕಳು ಎಂಥಹ ಪರಿಸರದಲ್ಲಿ ಬೆಳೆಯುತ್ತಿದ್ದಾರೆ? ಎಂಥಹ ಪರಿಸರದ ಹಿನ್ನಲೆಯಿಂದ ಮಕ್ಕಳು ಶಾಲೆಗೆ ಬರುತ್ತಿರುತ್ತಾರೆ? ಅವರ ಆಶಯಗಳು, ಕುತೂಹಲ, ಅವರುಗಳ ಅಚ್ಚರಿಯ ಸಂಗತಿಗಳು ಇವನ್ನೆಲ್ಲಾ ಗಮನಿಸಿಕೊಂಡೆ ಸಾಹಿತ್ಯ ರಚಿಸಬೇಕಾಗುತ್ತದೆ.
ಸತೀಶ್ ಅವರು ಈಗಾಗಲೇ "ಸ್ಯಾನಿಟರಿ ಪ್ಯಾಡ್" (ಕಾದಂಬರಿ), "ಮುಂದೇನಾಯ್ತು" (ಕಥಾಸಂಕಲನ), "ಬಂಗಾರದ ಹನಿಗಳು" (ಕವನ ಸಂಕಲನ) "ಚಿಂಟು –ಪಿಂಟು ಮತ್ತು ಮಿಂಚುವಿನ ಸಂಚಲನ" (ಮಕ್ಕಳ ಕಾದಂಬರಿ), "ನನ್ನವಳು ನಕ್ಕಾಗ" ( ಗಝಲ್ ಸಂಕಲನ).......ಕೃತಿಗಳನ್ನು ಪ್ರಕಟಿಸಿದ್ದಾರೆ. ಹೀಗೆ ಇವರ ಸಾಹಿತ್ಯ ಸೃಷ್ಠಿ ಸಮೃದ್ಧಿಯಿಂದ ಸಾಗುತ್ತಿದೆ. ಹೀಗೆಯೇ ಸಾಗುತ್ತಿರಲಿ ಎಂದು ಆಶಿಸುವೆ. "ಭೈರ" ಇದೊಂದು ಮಕ್ಕಳಿಗಾಗಿ ಬರೆದಿರುವ ಒಂದು ವಿಶಿಷ್ಠ ಕಾದಂಬರಿಯಾಗಿದೆ. ಮಕ್ಕಳ ಕಾದಂಬರಿ ಲೋಕದಲ್ಲಿ ಒಂದು ವಿಭಿನ್ನ ಪ್ರಯತ್ನ ಅಂತಾನೇ ಹೇಳಬೇಕು. ಒಂದಿಷ್ಟು ವಾಸ್ತವದ ಎಳೆಗಳನ್ನು ಇಟ್ಟುಕೊಂಡು ಬರೆದ ಕಾದಂಬರಿ ಇದು. ತಮ್ಮೂರಾದ ಚಿಕ್ಕಮಗಳೂರಿನ ಮಲೆನಾಡ ಪರಿಸರವನ್ನು ಅಲ್ಲಿ ಹೆಚ್ಚಾಗಿ ವಾಸಿಸುವ ಆನೆಗಳ ಪ್ರಪಂಚವನ್ನು ಓದುಗರ ಮುಂದಿಡುವ ಪ್ರಯತ್ನ ಈ ಲೇಖಕರದ್ದಾಗಿದೆ. ಬಹುತೇಕ ಕಾದಂಬರಿಗಳು ಶಾಲೆಯ ಸುತ್ತಮುತ್ತ ನಡೆದ ಘಟನೆಗಳ ಸುತ್ತ ಚಲಿಸುತ್ತವೆ. ಆದರೆ "ಭೈರ" ಈ ಕಾದಂಬರಿ ಒಂದಿಷ್ಟು ಪ್ರಾಣಿ ಪ್ರಪಂಚದ ಒಡನಾಟದ ಹೊಸತನವನ್ನು ತೋರಿಸುತ್ತದೆ. ಮಕ್ಕಳಲ್ಲಿ ಭಾಷಾಪ್ರೇಮ, ಭಾಷಾ ಸೌಂದಯ೯, ಪ್ರಕೃತಿಯನ್ನು ವಣಿ೯ಸುವ ರೀತಿಯನ್ನು ಈ ಕೃತಿಯಿಂದ ಪಡೆಯಬಲ್ಲರು.
ಈ ಕಾದಂಬರಿ ಭೈರ ಎನ್ನುವ ಆನೆಯ ಸುತ್ತ ಹೆಣೆದ ಕತೆಯಾಗಿದೆ. ದೇವ್, ವಾಸೀಮ್, ನವೀನ, ರಚನಾ, ಕುಮಾರ, ನದಿಯಾ, ಅರುಣ್, ಸಾತ್ವಿಕ್ ಈ ಮಕ್ಕಳೇ ಸಾಹಸ ಮಾಡಿ ಆಳವಾದ ಗುಂಡಿಗೆ ಬಿದ್ದ ಭೈರ ಎನ್ನುವ ಒಂಟಿ ಸಲಗದ ಆನೆಯನ್ನು ಸಂಕಷ್ಟದಿಂದ ಪಾರು ಮಾಡುವ ಆ ಪ್ರಯತ್ನ ಮಕ್ಕಳಲ್ಲಿ ಪ್ರಾಣಿ ದಯೆ ಮೂಡಿಸುತ್ತದೆ. ಸಾಹಸ ಗುಣ ಮಕ್ಕಳಲ್ಲಿ ಸಹಜವಾಗಿಯೇ ಬಂದಿರುತ್ತದೆ. ಪ್ರಸಂಗಗಳಿಂದ ಅವು ಅನಾವರಣಗೊಳ್ಳುತ್ತವೆ. ಮಕ್ಕಳ ತುಂಟಾಟ, ಚೇಷ್ಟೆ, ಸಹಜ ನಡುವಳಿಕೆಗಳು ಕಾದಂಬರಿಯುದ್ದಕ್ಕೂ ಕಾಣಬಹುದು. ಗೀಜಗ ಹಕ್ಕಿಯನ್ನು ರಕ್ಷಿಸಿಸುವ ದೇವ್ ಹುಡುಗನ ಪಕ್ಷಿ ಪ್ರೀತಿ ಅನನ್ಯವಾದುದು. ಶಾಲೆಗೆ ಹೊಸ ಮೇಷ್ಟ್ರು ಬರುತ್ತಾರೆ ಎನ್ನುವ ಕುತೂಹಲದಿಂದ ಈ ಕಾದಂಬರಿ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಬರುವ ಮೇಷ್ಟ್ರು ಹೇಗಿದ್ದರೆ ಚೆನ್ನ ಎನ್ನುವ ಅವರುಗಳ ಆಲೋಚನಾ ಲಹರಿಗಳು ನಗೆಯುಕ್ಕಿಸುತ್ತದೆ. ಮರುದಿನ ಹೊಸದಾಗಿ ಬಂದ ಶಿಕ್ಷಕರು ದೇವ್ ಹಾಗೂ ಆತನ ಗೆಳೆಯರು ಆನೆಯ ಸವಾರಿ ಮೇಲೆ ಶಾಲೆಗೆ ಬರುವ ರೀತಿ ಅವರಲ್ಲಿ ಭಯ ಮೂಡಿಸುತ್ತದೆ. ಅವರ ಭಯ ನಿವಾರಣೆಗಾಗಿ ಈ ಭೈರ ಆನೆಯ ಕತೆಯನ್ನು ಹೇಳುವ ಧಾಟಿಯಲ್ಲಿನ ಕಾದಂಬರಿಯ ತಂತ್ರಗಾರಿಕೆಯನ್ನು ಲೇಖಕರು ವಿಶಿಷ್ಟವಾಗಿ ಬಳಿಸಿಕೊಂಡಿದ್ದಾರೆ. ಆನೆಯ ಕುರಿತಾದ ಹಲವು ಸಂಗತಿಗಳು ಓದುಗರಿಗೆ ಅಚ್ಚರಿ ಮೂಡಿಸುತ್ತವೆ.
ಒಂಟಿ ಸಲಗಕ್ಕೆ ಭೈರ ಎಂಬ ಹೆಸರೇಕೆ ಬಂತು? ಊರಿನ ಪ್ರಮುಖ ವ್ಯಕ್ತಿ ಬೋರೆಗೌಡರ ಮತ್ತೊಂದು ಮುಖವನ್ನು ದೇವ್ ಹಾಗೂ ಅವರಪ್ಪ ಕಳಿಚಿದ ರೀತಿ, ಅರಣ್ಯ ಇಲಾಖೆಯವರು ಆನೆಗಳನ್ನು ಕಾಯಾ೯ಚರಣೆ ಮಾಡಿ ಹಿಡಿಯವ ಬಗೆ..... ಇವೆಲ್ಲವುಗಳನ್ನು ಕಾದಂಬರಿ ಓದಿಯೇ ತಿಳಿದುಕೊಳ್ಳಬೇಕು. ಓದುಗರಿಗೆ ಬೇಸರವೆನಿಸದ ರೀತಿಯಲ್ಲಿ ಕಾದಂಬರಿ ಸಾಗುತ್ತದೆ. ಆನೆಯ ದಂತಗಳ ಮಾರಾಟಕ್ಕಾಗಿ ಅವುಗಳನ್ನು ಕೊಲ್ಲುವ ಪರಿ, ಆನೆಯ ದಾಳಿಗೆ ಸಿಕ್ಕಿ ಆಗುವ ಮಾನವ ಸಾವುಗಳು ಮನಸ್ಸಿಗೆ ಕಸವಿಸಿಯಾಗುತ್ತವೆ. ಎಲ್ಲ ಭಾವಗಳನ್ನು ಮನುಷ್ಯ ಸಹಜವಾಗಿ ಸ್ವೀಕರಿಸಬೇಕು ಎನ್ನುವುದನ್ನು ಈ ಕೃತಿ ಹೇಳುತ್ತಾ, ಪ್ರೀತಿಯಿಂದ, ಸಹಾಯ ಹಸ್ತ ಗುಣದಿಂದ ಎಂಥ ಕ್ರೂರರನ್ನು ಬದಲಿಸಬಹುದು ಎನ್ನುವುದಕ್ಕೆ ಬದಲಾದ ಭೈರ ಆನೆಯೇ ಸಾಕ್ಷಿ. ಈ ಬದಲಾವಣೆಗೆ ಸಾಕ್ಷಿಯಾಗಿ ಮಕ್ಕಳು ಮಾದರಿಯಾಗಿ ಊರ ಜನರ ಮುಂದೆ ನಿಲ್ಲುತ್ತಾರೆ. ಊರವರ ಪ್ರೀತಿ ಗಳಿಸುತ್ತಾರೆ. ಓದುಗರು ಉಲ್ಲಾಸದಿಂದ ಈ ಕಾದಂಬರಿಯನ್ನು ಓದಬಹುದು.
ಈ ಕಾದಂಬರಿಯನ್ನು ಸತೀಶ್ ಅವರು ಇನ್ನಷ್ಟು ವಿಸ್ತಾರ ಮಾಡಿ ಬರೆಯಬಹುದಾದ ಅನೇಕ ಸಾಧ್ಯತೆಗಳು ಇದ್ದವು ಎನಿಸುತ್ತದೆ. ಆದಾಗ್ಯೂ ಈ ಕಾದಂಬರಿ ಓದುಗರಿಗೆ ನಿರಾಸೆ ಮಾಡದು. ಈ ಕಾದಂಬರಿ ಸಿನಿಮಾ ರೀತಿಯಲ್ಲಿ ಅಂತ್ಯವಾಗುತ್ತದೆ. ಒಂದೇ ವೇಗದಲ್ಲಿ ಓದಬಹುದಾದ, ಪ್ರಾದೇಶಿಕ ವಿಶಿಷ್ಟತೆಗಳನ್ನು ಇಟ್ಟುಕೊಂಡು ಪರಿಸರ ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲಾ ಪ್ರಾಣಿಗಳಿಗೂ ಪಾಲಿದೆ. ಈ ಭುವಿಯಲ್ಲಿ ಎಲ್ಲರಿಗೂ ಜಾಗವಿದೆ, ಪ್ರಾಣಿ ಜೀವನವನ್ನು ಗೌರವಿಸಬೇಕು ಎನ್ನುವ ಹಲವಾರು ಉದಾತ್ತ ಅಂಶಗಳನ್ನು ಇಟ್ಟುಕೊಂಡು ಹೆಣೆದ ಈ ಕಾದಂಬರಿ ಮಕ್ಕಳಿಗೆ ಹಲವಾರು ಸಂವೇದನೆಗಳನ್ನು ಪರಿಚಯಿಸುತ್ತದೆ.
ಶಿಕ್ಷಕ ಕಂಚುಗಾರನಹಳ್ಳಿ ಸತೀಶ್ ಓವ೯ ಭರವಸೆಯ ಮಕ್ಕಳ ಕಾದಂಬರಿಕಾರ. ಅವರು ಇನ್ನಷ್ಟು ಹೊಸ ಹರವು ಇರುವ ಸಂಗತಿಗಳನ್ನು ಆಯ್ಕೆ ಮಾಡಿಕೊಂಡು ಕೃತಿಗಳನ್ನು ರಚಿಸುವಂತಾಗಲಿ. ಗಟ್ಟಿ ಕೃತಿಗಳಿಂದ ನಾಡಿನ ಎಲ್ಲಾ ಓದುಗರ ಮನ ಮುಟ್ಟಲಿ ಎಂದು ಆಶಿಸುತ್ತಾ ಈ ಕಾದಂಬರಿ ಓದುಗರ ಗಮನ ಖಂಡಿತಾ ಸೆಳೆಯುತ್ತದೆ. ಸತೀಶ್ ಅವರಿಗೆ ಶುಭ ಕೋರುವೆ.
- ವೈ. ಜಿ. ಭಗವತಿ (ಕಲಘಟಗಿ)
ಶಿಕ್ಷಕ ಸಾಹಿತಿಗಳು
“ಪುಸ್ತಕದಲ್ಲಿ ಬಾಲ್ಯವಿದೆ, ಹರೆಯವಿದೆ, ಯೌವನವಿದೆ, ವೃದ್ಧಾಪ್ಯವೂ ಇದೆ. ಎಲ್ಲ ಕಾಲದಲ್ಲೂ ಮನುಷ್ಯನನ್ನು ಕಾಡುವ, ...
“ಸಿನಿಮಾ ಹುಚ್ಚು ನಮ್ಮನ್ನು ಪುಸ್ತಕ ಬರೆಯುವ ಹರಸಾಹಸಕ್ಕೆ ನೂಕಿತ್ತು. ಪ್ರತೀ ಪುಸ್ತಕ ಓದಿದಾಗಲೂ ಪುಸ್ತಕ ಬರೆಯುವ...
“ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಹಾಗೆ ಬ್ಲಾಗ್ ರೂಪದಲ್ಲಿ ಬರೆದಂತಹವು. ಕೆಲವು ಕಥೆಗಳು ಮತ್ತೆ ಮತ್ತೆ ಕಾಡುವಂ...
©2024 Book Brahma Private Limited.