ಆಸ್ಟ್ರೇಲಿಯನ್ನರು ಬಹಳ ಸ್ನೇಹಪರರು...


"ಪರಮೇಶ್ವರ ಗುರುಸ್ವಾಮಿಯವರ ಈ ಕೃತಿ, ಆಸ್ಟ್ರೇಲಿಯಾದ ಚರಿತ್ರೆಯನ್ನು ಅವರ ಪ್ರವಾಸದ ಆಧಾರದಲ್ಲಿ ಸರಳವಾಗಿ ಮತ್ತು ಸಚಿತ್ರವಾಗಿ ಮಂಡಿಸುತ್ತದೆ. ಜೊತೆಗೆ ಅಲ್ಲಲ್ಲಿ ಅದಕ್ಕೊಂದು ಪರ್ಸನಲ್ ಟಚ್ ಇರುವುದು, ಪುಸ್ತಕವನ್ನು ಹೆಚ್ಚು ಆಪ್ತಗೊಳಿಸುತ್ತದೆ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಪರಮೇಶ್ವರ ಗುರುಸ್ವಾಮಿಯವರ ‘ಸಿಡ್ನಿ ಸುತ್ತಾಟ’ ಪ್ರವಾಸ ಕಥನದ ಕುರಿತು ಬರೆದ ವಿಮರ್ಶೆ.

ಇಂಟರ್ನೆಟ್ ಪೂರ್ವ ಯುಗದಲ್ಲಿ ವಿದೇಶ ಪ್ರವಾಸವೇ ಅಪರೂಪವಾಗಿದ್ದಾಗ ಬರುತ್ತಿದ್ದ ಪ್ರವಾಸಕಥನಗಳದ್ದು ಒಂದು ತೂಕವಾದರೆ, ಮುಂದೆ ಲೋನ್ಲಿ ಪ್ಲಾನೆಟ್ ಯುಗದ್ದು ಇನ್ನೊಂದು ತೂಕ. ಅವೆರಡೂ ಈಗ ವಾಯಿದೆ ತೀರಿವೆ. ಈಗ ಕರ್ನಾಟಕದಲ್ಲಿ ಬಹುತೇಕ ಮಧ್ಯಮವರ್ಗದ ಮನೆಗೊಬ್ಬರು “ಐಟಿ ಪಂಟರು” ಜಗತ್ತಿನ ಮೂಲೆಮೂಲೆಗಳಲ್ಲಿರುವಾಗ, ಪ್ರತೀ ಮನೆಯಲ್ಲಿ/ಕುಟುಂಬದಲ್ಲಿ “ನಾನ್-ರೆಸಿಡೆಂಟ್ ಇಂಡಿಯನ್ಸ್” ಇದ್ದಾರೆ. ಹಾಗಾಗಿ ಅವರ ಕುಟುಂಬಿಕರು ವಿದೇಶ ಪ್ರವಾಸಕ್ಕೆಂದು ಹೊರಟಾಗ ಸಿಗುವ ಅನುಭವ ಮೊದಲಿನ ಎರಡರದಕ್ಕಿಂತಲೂ ಭಿನ್ನ. ಅತಿಥಿ ಆಗಿ ಅಥವಾ ಪ್ರವಾಸಿ ಆಗಿ ಒಂದು ದೇಶಕ್ಕೆ ಹೋಗಿ, ಅಲ್ಲಿನ ಅನುಭವಗಲನ್ನು ದಾಖಲಿಸಿದಾಗ, ಅವು ತೀರಾ ಮೇಲ್ಪದರದವಾಗಿರುತ್ತವೆ. ಲೋನ್ಲಿ ಪ್ಲಾನೆಟ್ ಯುಗದ ಪ್ರವಾಸಗಳು “ವಾಟ್ ಟು ಎಕ್ಸ್‌ಪೆಕ್ಟ್” ಕಲ್ಪನೆ ಕೊಟ್ಟುದರಿಂದ ಒಂದೆರಡು ಪದರ ಕೆಳೆಗಿಳಿದು ಪ್ರವಾಸ ಸಾಧ್ಯ ಆಗುತ್ತಿತ್ತು. ಆದರೆ ಈಗ ಮನೆಯವರೇ ಅಲ್ಲಿ ವಾಸಿಗಳಾಗಿರುವಾಗ ಪ್ರವಾಸಕ್ಕೆ ಮೊನಚು ಬಂದಿರುತ್ತದೆ. ಪದರಗಳ ಆಳಿಕ್ಕಿಳಿದು ಒಂದು ದೇಶದ ಚರಿತ್ರೆ-ಅದನ್ನಾಧರಿಸಿದ ಜನಪದ-ದೈನಂದಿನ ಬದುಕು ಇವೆಲ್ಲ ಹೆಚ್ಚಿನ ಪ್ರಮಾಣದಲ್ಲಿ ಕೈಗೆಟಕುತ್ತವೆ. (ಇಷ್ಟಿದ್ದರೂ ಅಲ್ಲಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಇತ್ಯಾದಿ ಸ್ತರಗಳ ಆಳವಾದ ಒಳನೋಟಗಳು ದಕ್ಕುವುದಿಲ್ಲ – ಇದು ನನ್ನದೇ ಅನುಭವ)

ಸ್ನೇಹಿತರಾದ ಪರಮೇಶ್ವರ ಗುರುಸ್ವಾಮಿಯವರು ಪ್ರೀತಿಯಿಂದ ಕಳುಹಿಸಿದ “ಸಿಡ್ನಿ ಸುತ್ತಾಟ”ದ ಬರೆಹಗಳನ್ನು ಅವರು ಸಿಡ್ನಿಯಿಂದಲೇ ಚಿತ್ರ ಸಮೇತ ಇಲ್ಲಿ ಫೇಸ್‌ಬುಕ್‌ನಲ್ಲೇ ಪೋಸ್ಟ್ ಮಾಡುತ್ತಿದ್ದಾಗಲೇ ಗಮನಿಸಿದ್ದೇನೆ. ಅವನ್ನೆಲ್ಲ ಒಟ್ಟಾಗಿ, ಇನ್ನಷ್ಟು ಆಳವಾಗಿ ಮತ್ತು ತರ್ಕಬದ್ಧವಾಗಿ ಜೋಡಿಸಿ ಈ ಪುಸ್ತಕ ಬಂದಿದೆ. ಆಸ್ಟ್ರೇಲಿಯನ್ನರು ಸಾಮಾನ್ಯವಾಗಿ “ರೂಡ್” ಎಂಬುದು ನಮ್ಮ (ಕ್ರಿಕೆಟ್ ಆಧರಿತ – ಮೊದಲೆಲ್ಲ ಅದೊಂದೇ ಇಂಟರಾಕ್ಷನ್ ಅನುಭವ ಮೂಲ) ಕಲ್ಪನೆ. ಅದಕ್ಕೆ, ಅವರ ಪೂರ್ವಜರು ತಮ್ಮ ಅಪರಾಧಗಳಿಗೆ ಶಿಕ್ಷೆಯ ಭಾಗವಾಗಿ ಅಲ್ಲಿಗೆ ತಲುಪಿದ್ದು ಕಾರಣ ಎಂಬ ತರ್ಕ ಇತ್ತು. ಈ “ಸ್ಯಾಂಪಲ್ ಸರ್ವೇ” ಎಷ್ಟು ತಪ್ಪೆಂಬುದು ಆ ಮೇಲೆ ಗೊತ್ತಾಗಿದೆ. ಹಲವರು ಗೆಳೆಯರು ಈಗ ಅಲ್ಲಿದ್ದಾರೆ, ಸ್ವತಃ ನನ್ನ ತಮ್ಮನ ಕಲಾಕೃತಿಯೊಂದನ್ನು (Aurophobia) ಅಲ್ಲಿನ ಬ್ರಿಸ್ಬನ್‌ನಲ್ಲಿ ಕ್ವೀನ್ಸ್‌ಲ್ಯಾಂಡ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ ಮ್ಯೂಸಿಯಂ ಶಾಶ್ವತ ಪ್ರದರ್ಶನಕ್ಕಾಗಿ ಪಡೆದಿದೆ. ಆಸ್ಟ್ರೇಲಿಯನ್ನರು ಬಹಳ ಸ್ನೇಹಪರರು ಎಂಬುದನ್ನು ಲೇಖಕರು ಇಲ್ಲಿ ಅನುಭವಗಳ ಆಧಾರದಲ್ಲಿ ದಾಖಲಿಸಿದ್ದಾರೆ.

ಪರಮೇಶ್ವರ ಗುರುಸ್ವಾಮಿಯವರ ಈ ಕೃತಿ, ಆಸ್ಟ್ರೇಲಿಯಾದ ಚರಿತ್ರೆಯನ್ನು ಅವರ ಪ್ರವಾಸದ ಆಧಾರದಲ್ಲಿ ಸರಳವಾಗಿ ಮತ್ತು ಸಚಿತ್ರವಾಗಿ ಮಂಡಿಸುತ್ತದೆ. ಜೊತೆಗೆ ಅಲ್ಲಲ್ಲಿ ಅದಕ್ಕೊಂದು ಪರ್ಸನಲ್ ಟಚ್ ಇರುವುದು, ಪುಸ್ತಕವನ್ನು ಹೆಚ್ಚು ಆಪ್ತಗೊಳಿಸುತ್ತದೆ. ಲೇಖಕರ ಮಗಳು ಅಲ್ಲೇ ಇರುವುದರಿಂದ ಇನ್ನು ಪ್ರತೀ ಬಾರಿ ಮಗಳ ಭೇಟಿಗೆ ಹೋದಾಗ, ಅವರಿಗೆ ಇನ್ನಷ್ಟು ಆಳವಾಗಿ ಸಿಡ್ನಿ ದಕ್ಕಲಿ ಹಾಗೂ ಈ ಪುಸ್ತಕಕ್ಕೆ ಇನ್ನಷ್ಟು ಮಾಹಿತಿಗಳು ಸೇರುವಂತಾಗಲಿ.

ಸಂಪೂರ್ಣ ವರ್ಣಚಿತ್ರಗಳಿಂದೊಡಗೂಡಿ, ಆರ್ಟ್‌ಪೇಪರ್ ಬಳಸಿ ಕಾಫಿ ಟೇಬಲ್ ಬುಕ್ ಮಾಡುವ ಹವಣಿಕೆಯಲ್ಲಿ ಈ ಪುಸ್ತಕ ಮುದ್ರಣಗೊಂಡಿದೆ. ಆ ಹಿನ್ನೆಲೆಯಲ್ಲಿ ಮುದ್ರಣದ ಬಗ್ಗೆ ಎರಡು ಮಾತು. ಅಚ್ಚರಿ ಅನ್ನಿಸುವಂತೆ, ಈ ಪುಸ್ತಕದ ಮುಖಪುಟ ಕಪ್ಪು-ಬಿಳುಪಿನಲ್ಲಿದೆ! ಸಂಪೂರ್ಣ CMYK ಮುದ್ರಣ ಆಗುವಾಗ ಕಪ್ಪುಬಿಳುಪು ಚಿತ್ರಗಳು, ಅದರಲ್ಲೂ ರೇಖಾಚಿತ್ರಗಳು CMYKಯಲ್ಲಿ ರಿಜಿಸ್ಟರ್ ಆಗುವುದೇ ದೊಡ್ಡ ಸವಾಲು. ನಾಲ್ಕೂ ಬಣ್ಣಗಳು ಒಂದರ ಮೇಲೊಂದು 100% ರಿಜಿಸ್ಟರ್ ಆಗದಿದ್ದಾಗ, ಅದು ಪುಸ್ತಕದ ಗುಣಮಟ್ಟದ ಮೇಲೇ ಪ್ರಭಾವ ಬೀರಿಬಿಡುತ್ತದೆ. ಎರಡನೆಯದಾಗಿ, ಆರ್ಟ್‌ಪೇಪರ್ ಮೇಲೆ ಆಫ್‌ಸೆಟ್ ಯಂತ್ರದಲ್ಲಿ ಮುದ್ರಿಸುವಾಗ ಯಂತ್ರದ ಗುಣಮಟ್ಟ, ಬಳಸುವ ಶಾಯಿಯ ಗುಣಮಟ್ಟ ಮತ್ತು ಮುದ್ರಣ ಆದ ಬಳಿಕ ಅದನ್ನು ಒಣಗಲು ಬಿಡುವ ಅವಧಿ... ಇವೆಲ್ಲವೂ ಅಂತಿಮವಾಗಿ ಮುದ್ರಣದ ಒಟ್ಟು ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ. ನಾನಿದನ್ನು ದಾಖಲಿಸುತ್ತಿರುವುದು ನನಗೆ ತಲುಪಿದ ಪ್ರತಿಯ ಆಧಾರದಲ್ಲಿ.

ಕೊನೆಯದಾಗಿ, ಪುಟ ವಿನ್ಯಾಸಕರ ಸಹಕಾರ ಸಮರ್ಪಕವಾಗಿ ಸಿಗದ್ದಕ್ಕೆ ತಾನೇ ಸ್ವತಃ ಈ ಪುಸ್ತಕವನ್ನು ವಿನ್ಯಾಸ ಮಾಡಿರುವುದಾಗಿ ಲೇಖಕರು ಹೇಳಿಕೊಂಡಿದ್ದಾರೆ. ಅದು ಕಾಣಿಸುತ್ತಿದೆ. ಹೆಚ್ಚಿನಂಶ ಪುಸ್ತಕದ ಗಾತ್ರವನ್ನೂ, ವೆಚ್ಚವನ್ನೂ ಗಮನದಲ್ಲಿ ಇಟ್ಟುಕೊಂಡದ್ದರಿಂದ, ಹಲವು ಒಳ್ಳೆಯ ಚಿತ್ರಗಳಿಗೆ ಸಿಗಬೇಕಾದ ಟ್ರೀಟ್‌ಮೆಂಟ್ ಸಿಗಲಿಲ್ಲ ಎಂಬುದು ಪುಸ್ತಕದ ಬಗ್ಗೆ ನನ್ನ ದೂರು. ಇದನ್ನು ಮರುಮುದ್ರಿಸುವುದಿದ್ದಲ್ಲಿ, ವೆಬ್‌ನಲ್ಲಿ ಲಭ್ಯವಿರುವ ಚಿತ್ರಗಳನ್ನು ಮತ್ತೆ ಇಲ್ಲಿ ಪ್ರಕಟಿಸುವ “ಸಮಗ್ರ” ಕಲ್ಪನೆ ಸಾಕಾರಗೊಳಿಸುವ ಬದಲು ಪರಮೇಶ್ವರ ಗುರುಸ್ವಾಮಿ ಅವರ “ಪರ್ಸನಲ್ ಟಚ್” ಇರುವ ಚಿತ್ರಗಳು ಇಲ್ಲಿ ಇನ್ನಷ್ಟು ಸಾವಕಾಶ ಮೂಡುವಂತಾದರೆ ಇದೊಂದು ಅದ್ಭುತ, ಉಪಯುಕ್ತ ಪುಸ್ತಕ.

MORE FEATURES

ಕಾದಂಬರಿಯಲ್ಲಿ ಮೂರು ತಲೆಮಾರುಗಳ ಕತೆಯಿದೆ..

31-10-2024 ಬೆಂಗಳೂರು

“ಕಾಲ ಕಾಲದಲ್ಲಿ ಆಗುತ್ತ ಬರೋ ಬದುಕು, ಶೈಲಿ, ನಡವಳಿಕೆ, ಹವ್ಯಾಸ, ವಾತಾವರಣಗಳ ಬದಲಾವಣೆ ಈ ಕಾದಂಬರಿಯ ಮೂರು ತಲೆಮಾ...

ರೇಷ್ಮೆಯೆನ್ನುವುದು ಖಂಡದಾದ್ಯಂತ ಹೇಗೆ ಹರಿದಾಡಿತು ಎನ್ನುವುದರ ವಿವರವಿಲ್ಲಿದೆ..

31-10-2024 ಬೆಂಗಳೂರು

“ಸಾಮಾನ್ಯವಾಗಿ ಐತಿಹಾಸಿಕ ಕಾದಂಬರಿಗಳ ರಚನೆಯ ಮುಖ್ಯ ಸಮಸ್ಯೆಯೆಂದರೆ ಅದರ ಓಘ. ಓದುಗನ ಓದುಗ ಸಾಮರ್ಥ್ಯವನ್ನು, ಅವನ...

ಲೇಖಕನಿಗೆ ಈ ಪ್ರಜ್ಞೆ ಬಂದಾಗ ಉಂಟಾಗುವ ಕಸಿವಿಸಿ ಅಷ್ಟಿಷ್ಟಲ್ಲ

31-10-2024 ಬೆಂಗಳೂರು

“ಇದು ಚಳುವಳಿಯದ್ದಲ್ಲ, ಹೋರಾಟದ್ದಲ್ಲ, ಸ್ಲೋಗನ್ನಿದಲ್ಲ. ಇದು ಮೂಲತಃ ಒಂದು ಹಟ್ಟಿಯ, ಅಣ್ಣತಮ್ಮಂದಿರ ಬದುಕಿನ ಕತೆ...