"ಆರೋಗ್ಯವೇ ಭಾಗ್ಯ ಎನ್ನುವ ಕಾಲ ಒಂದಿತ್ತು. ಆದರೆ ಈಗ ಆರೋಗ್ಯವೇ ಸೌಭಾಗ್ಯ ಎನ್ನುವ ಹಾಗಾಗಿದೆ. ಭೂಮಿಯ ಮೇಲೆ ಜನಿಸಿದ ಪ್ರತಿ ಜೀವಿಗಳಲ್ಲಿಯೂ ಸಾಕಷ್ಟು ಅನಾರೋಗ್ಯ ಕಂಡು ಬರುತ್ತಿದೆ. ಅದಕ್ಕೆ ಕಾರಣ ಸುತ್ತ ಮುತ್ತಲಿನ ವಾತಾವರಣ ಆಗಿರಬಹುದು, ಆಹಾರ ಕ್ರಮಗಳಾಗಿರಬಹುದು, ಜೀವನಶೈಲಿ ಆಗಿರಬಹುದು ಹೀಗೆ ಹಲವಾರು ಕಾರಣಗಳಿಂದ ಮನುಷ್ಯ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ," ಎನ್ನುತ್ತಾರೆ ಸಂಗೀತಾ ಮಠಪತಿ. ಅವರು ತಮ್ಮ ‘ರೋಗ ಮುಕ್ತರಾಗುವುದು ಹೇಗೆ’ ಕೃತಿ ಕುರಿತು ಬರೆದ ಲೇಖಕರ ನುಡಿ. ನಿಮ್ಮ ಓದಿಗಾಗಿ.
ಮುಖಪುಟವನ್ನು ಬಹಳ ಕೌತುಕದಿಂದ ಕಂಡು ರೋಗದಿಂದ ಮುಕ್ತರಾಗುವುದು ಹೇಗೆ? ಎಂದು ತಿಳಿದುಕೊಳ್ಳಲು ಈ ಕೃತಿಯನ್ನು ಕೈಗೆತ್ತಿಕೊಂಡಿರುವ ಪ್ರಿಯ ಓದುಗ ಬಂಧುಗಳಿಗೆ ನನ್ನ ನಮಸ್ಕಾರಗಳು. ಈ ಕೃತಿಯ ಹುಟ್ಟಿನ ಕುರಿತಾಗಿ ಸಂಗತಿಯೊಂದನ್ನು ತಮ್ಮ ಮುಂದೆ ನಾನು ಹಂಚಿಕೊಳ್ಳಲು ಇಷ್ಟ ಪಡುತ್ತೇನೆ. ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದ ಹಾಗೆ ನನ್ನ ದೇಹದ ಉಷ್ಣತೆ ಹೆಚ್ಚಳ ಆಗ್ತಾ ಹೋಯ್ತು, ದಿನದಿಂದ ದಿನಕ್ಕೆ ಹೆಚ್ಚಿಗೆ ಆಗೋಕೆ ಶುರು ಆಯಿತು. ಆಸ್ಪತ್ರೆಗೆ ಹೋಗಿ ಬಂದೆ. ಒಂದಿಷ್ಟು ಉಷ್ಣತೆ ಕಡಿಮೆ ಆದ ಹಾಗಾಗಿ ಮತ್ತೆ ಹೆಚ್ಚಾಗೋಕೆ ಶುರುವಾಯಿತು. ಏನಾಗಿರಬಹುದು ಎಂದು ವಿಚಾರ ಮಾಡಿದಾಗ ತಜ್ಞರ ಸಲಹೆಯಲ್ಲಿ ಗೊತ್ತಾಯ್ತು ವೈರಲ್ ಫೀವರ್ ಆಗಿದೆ ಎಂದು. ಊಟ ಸೇರಲಿಲ್ಲ, ಎದ್ದು ನಿಂತರೆ ತಲೆ ಸುತ್ತು ಬರೋಕೆ ಶುರು ಆಗೋದು, ತಲೆ ನೋವು ಹೀಗೆ ಹಲವಾರು ರೋಗಲಕ್ಷಣಗಳ ಮಧ್ಯೆ ಔಷಧೋಪಚಾರ ಮಾಡಿಸಿಕೊಂಡು ಹುಷಾರಾದೆ. ಮನುಷ್ಯ ಸಂತೋಷದಿಂದ ಬದುಕನ್ನ ಸಾಗಿಸಲು ಮೊದಲು ಅವಶ್ಯವಾಗಿ ಬೇಕಾಗಿರುವುದು ಆರೋಗ್ಯ.
ಆರೋಗ್ಯವೇ ಭಾಗ್ಯ ಎನ್ನುವ ಕಾಲ ಒಂದಿತ್ತು. ಆದರೆ ಈಗ ಆರೋಗ್ಯವೇ ಸೌಭಾಗ್ಯ ಎನ್ನುವ ಹಾಗಾಗಿದೆ. ಭೂಮಿಯ ಮೇಲೆ ಜನಿಸಿದ ಪ್ರತಿ ಜೀವಿಗಳಲ್ಲಿಯೂ ಸಾಕಷ್ಟು ಅನಾರೋಗ್ಯ ಕಂಡು ಬರುತ್ತಿದೆ. ಅದಕ್ಕೆ ಕಾರಣ ಸುತ್ತ ಮುತ್ತಲಿನ ವಾತಾವರಣ ಆಗಿರಬಹುದು, ಆಹಾರ ಕ್ರಮಗಳಾಗಿರಬಹುದು, ಜೀವನಶೈಲಿ ಆಗಿರಬಹುದು ಹೀಗೆ ಹಲವಾರು ಕಾರಣಗಳಿಂದ ಮನುಷ್ಯ ಅನಾರೋಗ್ಯಕ್ಕೆ ಈಡಾಗುತ್ತಿದ್ದಾನೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಯಾಕೆ ರೋಗಕ್ಕೆ ಸಂಬಂಧ ಪಟ್ಟಂತಹ ಒಂದು ಕೃತಿಯನ್ನು ಹೊರಗೆ ತರಬಾರದು ಎಂದುಕೊಂಡು, ಯಾವುದಾದರೂ ಒಂದು ನಿರ್ದಿಷ್ಟ ವಿಷಯವನ್ನು ತೆಗೆದುಕೊಂಡು ನಿರ್ದಿಷ್ಟ ರೋಗ ಲಕ್ಷಣಗಳನ್ನ ವಸ್ತುವಾಗಿಟ್ಟುಕೊಂಡು ಒಂದು ಉಪಯುಕ್ತ ಪುಸ್ತಕವನ್ನು ನಾನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಬೇಕು ಎಂಬ ಮಹಾದಾಸೆಯೊಂದಿಗೆ ಈ ಕೃತಿ ರಚನೆಗೆ ಮುಂದಾದೆ. ಹಾಗೆ ವಿಚಾರ ಮಾಡುತ್ತಾ ಇರಬೇಕಾದರೆ ಯಾವ ರೋಗದ ಕುರಿತು ಬರೆಯಬೇಕು ಅಂದುಕೊಂಡಾಗ ನನಗೆ ನೆನಪಿಗೆ ಬಂದಿದ್ದು ನನ್ನನ್ನು ಕಾಡಿದ ವೈರಲ್ ಫೀವರ್ ಅದಕ್ಕೆ ನಾವು ಟೈಫಾಯಿಡ್ ಎನ್ನುತ್ತೇವೆ. ಅದರ ಕುರಿತೇ ಬರೆಯೋಣ ಎಂದು ನಿರ್ಧರಿಸಿದೆ.
ಆ ಕುರಿತಾಗಿ ಸಾಕಷ್ಟು ಅಧ್ಯಯನಕ್ಕೊಳಗಾದೆ. ಇದೇ ರೋಗಕ್ಕೆ ಸಂಬಂಧ ಪಟ್ಟ ಇನ್ನೂ ನಾಲ್ಕಾರು ರೋಗಗಳನ್ನು ಆಯ್ಕೆ ಮಾಡಬೇಕಾಗಿ ಬಂದಾಗ ನಾನು ಮಲೇರಿಯಾ, ಕ್ಷಯ, ಕಾಲರಾ, ಹೆಪಾಟೈಟಿಸ್ ಬಿ ಮತ್ತು ಏಡ್ಸ್ ರೋಗಗಳನ್ನು ಆಯ್ಕೆ ಮಾಡಿಕೊಂಡೆ. ಎಲ್ಲ ರೋಗಗಳ ಕುರಿತು ಅಧ್ಯಯನ ಮಾಡಿ, ಆ ರೋಗದ ಲಕ್ಷಣಗಳೇನು, ರೋಗಗಳು ಯಾವ ರೀತಿಯಲ್ಲಿ ಕಂಡುಬರುತ್ತವೆ, ಆ ರೋಗಕ್ಕೆ ಸೂಕ್ತ ಪರಿಹಾರ ಕ್ರಮಗಳೇನು? ಸೂಕ್ತ ಆಹಾರ ಕ್ರಮಗಳೇನು? ಆ ರೋಗವನ್ನು ಚಿಕಿತ್ಸೆ ಮಾಡುವ ವಿಧಾನಗಳೇನು? ರೋಗದ ವಿಧಗಳೇನು? ಹರಡುವ ಪ್ರಕಾರಗಳು ಯಾವುವು ಎಂಬ ಎಲ್ಲ ವಿಚಾರಗಳನ್ನು ಆಂಗ್ಲ ಭಾಷೆಯ ವೈಜ್ಞಾನಿಕ ಲೇಖನಗಳಲ್ಲಿ, ಪುಸ್ತಕಗಳಲ್ಲಿ, ಹೀಗೆ ಹಲವಾರು ಮಾಧ್ಯಮಗಳಲ್ಲಿ ಅಧ್ಯಯನ ಮಾಡಿದ ನಂತರ ನಾನು ಒಂದು ಚೌಕಟ್ಟನ್ನು ಹಾಕಿಕೊಂಡು ನನ್ನ ವಿಚಾರಗಳಿಗೆ ಯಾವುದು ಅತಿ ಸಮಂಜಸ ಎನಿಸುವುವು ಆ ವಿಚಾರಗಳನ್ನು ಆಯಾ ರೋಗಕ್ಕೆ ಅನುಗುಣವಾಗಿ ನಾನು ತಮ್ಮೆಲ್ಲರ ಮುಂದೆ ಈ ಕೃತಿಯಲ್ಲಿ ಪ್ರಸ್ತುತಪಡಿಸಿದ್ದೇನೆ. ಇದನ್ನು ಓದಿದ ನಿಮಗೆ ಒಂದಿಷ್ಟಾದರೂ ಉಪಯುಕ್ತ ಮಾಹಿತಿ ತಲುಪಿ ತಾವು ರೋಗದಿಂದ ದೂರ ಉಳಿದರೆ ಅದೇ ನನಗೆ ಆಸ್ಕರ್ ಪ್ರಶಸ್ತಿ ಗಿಟ್ಟಿಸಿಕೊಂಡಷ್ಟು ಸಂತೃಪ್ತಿ.
ಪ್ರತಿದಿನವೂ ನಮ್ಮ ಆರೋಗ್ಯದ ಕಾಳಜಿ ಮಾಡುವ, ಪೌಷ್ಟಿಕ ಆಹಾರವನ್ನು ಸದಾ ಉಣಬಡಿಸುವ ಈ ವಿಷಯದ ಮೇಲೆ ಕೃತಿ ರಚಿಸಲು ಸಾಕಷ್ಟು ಪ್ರೋತ್ಸಾಹ ನೀಡಿದ ಪ್ರೀತಿಯ ಅತ್ತೆಯವರಾದ ಶ್ರೀಮತಿ ಶಂಕ್ರಮ್ಮ ಬಸಪ್ಪ ಅರಬಿ ಮತ್ತು ಮಾವನವರಾದ ಶ್ರೀ ಬಸಪ್ಪ ಈಶ್ವರಪ್ಪ ಅರಬಿಯವರಿಗೆ ನಾನು ಸದಾ ಚಿರಋಣಿ.
ಅನಾರೋಗ್ಯವೇ ತಾಂಡವವಾಡುತ್ತಿರುವ ಈ ಧರಣಿಯಲ್ಲಿ ಆರೋಗ್ಯಯುತವಾಗಿ ಬದುಕು ನಡೆಸಲು ಸದೃಢ ದೇಹ ಮತ್ತು ಮನಸ್ಸನ್ನು ದಯಪಾಲಿಸಿದ ನನ್ನ ಎಲ್ಲ ಹವ್ಯಾಸಗಳಿಗೂ/ಆಸಕ್ತಿಗಳಿಗೂ ಪ್ರೀತಿಯ ನೀರೆರೆದು ಪೋಷಿಸಿದ ನನ್ನ ಪ್ರೀತಿಯ ತಂದೆ-ತಾಯಿಗಳಾದ ಶ್ರೀ ಹಣಮಂತ ಮಡಿವಾಳಯ್ಯ ಮಠಪತಿ ಮತ್ತು ಶ್ರೀಮತಿ ಗುರುಬಾಯಿ ಹಣಮಂತ ಮಠಪತಿಯವರಿಗೆ ಅನಂತ ಕೋಟಿ ನಮನಗಳು.
ಕನ್ನಡಾಂಬೆಯ ಮಡಿಲಿಗೆ ಈಗಾಗಲೇ ತಮ್ಮ ಐದು ಕೃತಿಗಳನ್ನು ಅರ್ಪಿಸಿ ಸಾಹಿತ್ಯಾಸಕ್ತರ ಮನ ಗೆದ್ದು, ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದು, ಹಲವಾರು ಸಮಾಜಮುಖಿ ಉಪನ್ಯಾಸಗಳನ್ನು ನೀಡಿದ ನನ್ನ ಚೇತನಾತ್ಮ, ಬಾಳಿನ ಸೌಭಾಗ್ಯವಾಗಿ ಸದಾ ಬೆನ್ನೆಲುಬಾಗಿ ನಿಂತು ಮುನ್ನಡೆಸುತ್ತಿರುವ, ಇದೀಗ ಈ ಕೃತಿಗೂ ಸಹ ಸಾಕಷ್ಟು ಅಧ್ಯಯನ ಮಾಡಿ ಬೆನ್ನುಡಿ ಬರೆದು, ಸರ್ವಕಾಲಿಕ ಜೊತೆಗಾರಿಕೆ ನೀಡುತ್ತಿರುವ ಪತಿರಾಯವರಾದ ಶ್ರೀ ವಿಶ್ವನಾಥ ಅರಬಿ ಅವರಿಗೆ ಅದೆಷ್ಟು ಧನ್ಯವಾದಗಳನ್ನು ಅರ್ಪಿಸಿದರು ಕಡಿಮೆಯಾಗುತ್ತದೆ.
ಸಂಗೀತಾ ಮಠಪತಿ
"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...
"'ಎಲ್ಲೆಗಳ ದಾಟಿದವಳು' ಯಶಸ್ವಿಯಾದ ಕತೆಯಾಗಿದೆ. ಕತೆಯ ಪ್ರವೇಶದ ಭಾಗವು ಅಜ್ಜಿ ಮತ್ತು ಮೊಮ್ಮಗಳ ಪ್ರೀತಿ ...
“ಈ ಕಾದಂಬರಿ ನಿಮ್ಮನ್ನು ನಾಗಾಲೋಟ ಓಡಿಸಿಕೊಂಡು ಹೋಗದಿರಬಹುದು. ಆದರೆ ಜೀವನವನ್ನು ನಿರ್ವಿಕಾರ ದೃಷ್ಟಿಯಿಂದ...
©2025 Book Brahma Private Limited.