ಅಮ್ಮನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಕೃತಿಯಿದು


"ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯಕ್ತಿ ಮಾಧ್ಯಮವಾದ ಆಂಗಿಕ ಮತ್ತು ಭಾಷಿಕ ಚಿತ್ರಗಳ ಮುಖೇನ ಒಂದು ಸನ್ನಿವೇಶ, ಸಂದರ್ಭವನ್ನು ಚಿತ್ರಿಸಿ ತನ್ಮೂಲಕ ಅದು ಏನನ್ನು ಸೂಚಿಸಬೇಕೋ ಅದನ್ನು ಪರೋಕ್ಷವಾಗಿಯೇ ಕಟ್ಟಿಕೊಡುವ ಕ್ರಮ ನಿಮ್ಮದಲ್ಲ. ಬದಲಿಗೆ ನೀವು ವಾಚ್ಯವಾಗಿಯೇ ಘಟನೆಗಳನ್ನು, ಮಾತುಗಳನ್ನು, ನಡೆದುದನ್ನು ಹೇಳುತ್ತೀರಿ," ಎನ್ನುತ್ತಾರೆ ನರೇಂದ್ರ ಪೈ. ಅವರು ವಿದ್ಯಾ ಭರತನಹಳ್ಳಿ ಅವರ ‘ಬೇಸೂರ್’ ಕೃತಿ ಕುರಿತು ಬರೆದ ವಿಮರ್ಶೆ.

ಕನ್ನಡ ಸಣ್ಣಕತೆಗಳ ಪರಂಪರೆ ಮತ್ತು ಪ್ರಯೋಗಶೀಲತೆಯ ಬಗ್ಗೆ ಗಮನಿಸಿ ಹೇಳುವುದಾದರೆ ನೀವು ಕತೆಗಳನ್ನು ಹೇಳುತ್ತೀರಿ, ಕಾಣಿಸುತ್ತಿಲ್ಲ. ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯಕ್ತಿ ಮಾಧ್ಯಮವಾದ ಆಂಗಿಕ ಮತ್ತು ಭಾಷಿಕ ಚಿತ್ರಗಳ ಮುಖೇನ ಒಂದು ಸನ್ನಿವೇಶ, ಸಂದರ್ಭವನ್ನು ಚಿತ್ರಿಸಿ ತನ್ಮೂಲಕ ಅದು ಏನನ್ನು ಸೂಚಿಸಬೇಕೋ ಅದನ್ನು ಪರೋಕ್ಷವಾಗಿಯೇ ಕಟ್ಟಿಕೊಡುವ ಕ್ರಮ ನಿಮ್ಮದಲ್ಲ. ಬದಲಿಗೆ ನೀವು ವಾಚ್ಯವಾಗಿಯೇ ಘಟನೆಗಳನ್ನು, ಮಾತುಗಳನ್ನು, ನಡೆದುದನ್ನು ಹೇಳುತ್ತೀರಿ.

‘ಮರದೊಳಗಣ ಬೆಂಕಿ’ ಕತೆಯಲ್ಲಿ ಮಾಧವನ ಮೌನ ಗಮನಿಸಿ. ಇಡೀ ಕತೆಯಲ್ಲಿ ಕೊನೆಗೂ ಅವನು ತನ್ನ ಮನಸ್ಸನ್ನು ಬಿಚ್ಚಿಡುವುದಿಲ್ಲ. ಇದು ಇಷ್ಟವಾಗುತ್ತದೆ. ಆದರೆ ಅವನ ವರ್ತನೆಯ ಮೂಲಕ ಅವನು ಏನನ್ನೋ ಅತ್ಯಂತ ಸ್ಪಷ್ಟವಾಗಿ ಹೇಳುತ್ತಿರುತ್ತಾನೆ, ಅದು ನಮ್ಮ ನಿಜಜೀವನದ ಬದುಕು. ಕತೆಯಲ್ಲಿ ಅಂಥ ವಿವರಗಳು ಬರುವುದಿಲ್ಲ. ಬದಲಿಗೆ ಕಲಾಶ್ರೀ ಎಲ್ಲವನ್ನೂ ವಾಚ್ಯವಾಗಿ ಬಿಚ್ಚಿಡುತ್ತಾಳೆ.

ಹಾಗಿದ್ದೂ ಈ ಕತೆಯ ಕೊನೆಯ ವಾಕ್ಯ ನನಗೆ ತುಂಬ ಇಷ್ಟವಾಯಿತು. ಇಂಥದ್ದೇ ಒಂದು ಕೊನೆಯ ವಾಕ್ಯ ನಿಮ್ಮ "ಅನೂಹ್ಯ" ಕತೆಯಲ್ಲೂ ಇದ್ದು ಮನುಷ್ಯನ ಮನಸ್ಸಿನ ಅತಂತ್ರ ಮತ್ತು ಅನೂಹ್ಯ ಒದ್ದಾಟವನ್ನು ಅದು ಕಾಣಿಸುತ್ತದೆ, ಅಚ್ಚರಿಗೊಳಿಸುವ ಹಾಗೆ. ಇಂಥ ಸೂಕ್ಷ್ಮಗಳನ್ನು ನೀವು ಇನ್ನೂ ಹೆಚ್ಚು ದುಡಿಸಿಕೊಳ್ಳುವ ಕಡೆ ಗಮನ ಕೊಡಬೇಕು ಎನ್ನುವುದು ನನ್ನ ಇಚ್ಛೆ. ಇಲ್ಲವಾದಲ್ಲಿ ಘಟನೆಗಳನ್ನು, ಸನ್ನಿವೇಶಗಳನ್ನು ಚಿತ್ರಿಸುವುದಷ್ಟೇ ಕತೆಗಾರಿಕೆಯ ಕಸುಬು ಎನ್ನುವಂತಾಗುತ್ತದೆ. ಕತೆಗಾರಿಕೆ ಒಂದು ಕಲೆಯೂ ಆಗಿ ನಿಲ್ಲುವುದು ಅದು ಹೇಳಿರುವುದರ ಜೊತೆಗೆ ಹೇಳದೇ ಇರುವುದನ್ನು ಕೂಡ ಓದುಗನ ಸಂವೇದನೆಯಲ್ಲಿ ಮೀಟಿದಾಗ. ನಾನು ಕಂಡಂತೆ ಲಂಕೇಶರ ಕತೆಗಳು ಇಂಥ ರಿದಂ ಅರಿಯುವಲ್ಲಿ ಸಹಾಯಕ್ಕೆ ಬರುವ ಉತ್ಕೃಷ್ಟ ರಚನೆಗಳು. ಅವರ ಮೊತ್ತ ಮೊದಲ ಕತೆಗಳಲ್ಲಿ ಒಂದಾದ "ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ"ಯಲ್ಲಿಯೇ ಅವರಿದನ್ನು ಸಾಧಿಸಿಬಿಟ್ಟಿದ್ದರು.

"ಮೈಸವರಿದ ಬಣ್ಣ" ಕತೆ ವಿಶೇಷ ಪೋಷಣೆ ಪಡೆದ ಕತೆಗಳಲ್ಲಿ ಒಂದು. ಇಲ್ಲಿನ ಪಾತ್ರಗಳ ಹೆಸರೇ ಧ್ವನಿಪೂರ್ಣವಾಗಿವೆ. ಗಂಡ ಪ್ರದ್ಯುಮ್ನ ಹಾಸಿಗೆ ಹಿಡಿದಿದ್ದಾನೆ. ಪತ್ನಿ ಮುಕ್ತಾ ಅತ್ತ ಅಸಹಾಯ ಪತಿಯಿಂದ ಮುಕ್ತಳಾಗುತ್ತಿದ್ದಾಳೆಯೇ ಅಥವಾ ಪುರುಷ ಪ್ರಪಂಚದ ಹಪಹಪಿಕೆಗಳಿಂದಲೇ ಮುಕ್ತಳಾಗಲಿದ್ದಾಳೆಯೇ ಎಂಬುದು ಇಲ್ಲಿನ ಮುಖ್ಯ ಮುದ್ದೆಯಾಗಿದೆ. ಇಡೀ ಕತೆಯ ಉದ್ದಕ್ಕೂ "ನಿರ್ಗಮನ" ಕತೆಯಂತೆಯೇ ಯಕ್ಷಗಾನ ಪ್ರಸಂಗಗಳ, ಯಕ್ಷಗಾನದ ಕಂಪು ಇಲ್ಲಿಯೂ ಹರಡಿದೆ. ವಿವಾಹಿತೆ ಮುಕ್ತಾಳನ್ನು ಬಯಸುತ್ತಿರುವ ಪಾತ್ರದ ಹೆಸರು ವಾಸುಕಿ! ಪ್ರದ್ಯುಮ್ನ ನಿಮಗೆಲ್ಲ ತಿಳಿದಿರುವಂತೆ ಕೃಷ್ಣನ ಮಗ, ಸುಟ್ಟು ಹೋದ ಕಾಮನ ಪುನರುತ್ಥಾನ! ಈ ಕತೆಯ ನಿರೂಪಣೆ ಕೂಡ ನವಿರಾಗಿದೆ. ಮಗಳು ಭಾಮಿನಿ ಇಲ್ಲಿ ಮುಕ್ತಾಳ ಸಾಕ್ಷಿಪ್ರಜ್ಞೆಯಂತೆ ಕಾಣಿಸಿಕೊಳ್ಳುವ, ಒಂದು ಹಂತದ ನಿರ್ಲಿಪ್ತ ಪಾತ್ರ.

ಇದೇ ಬಗೆಯ ತಂತ್ರವನ್ನು ಬಳಸಿಕೊಂಡರೂ ಇನ್ನೂ ಹೆಚ್ಚು ಸಂತುಲಿತವಾಗಿ ಬಂದಿರುವ ಕತೆ "ಬೇಸೂರ್". ಇಲ್ಲಿ ಯಕ್ಷಗಾನದ ಬದಲಿಗೆ ಸಂಗೀತವಿದೆ. ಅಭೋಗಿ ಕಾನ್ಹಡಾ, ಕೋಮಲ ಗಾಂಧಾರದ ಜೊತೆ ಜೊತೆಗೇ ಹಾರಿ ಬರುವ ಅಂಗಿ ದಾಂಪತ್ಯದ ಬಿಸಿಗಾಳಿ, ಬಿರುಗಾಳಿಯ ಮೇಲುಸಿರು, ಏದುಸಿರು ತಂದರೆ ಇವಳ ಮನ ತುಂಬ ತುಂಬಿ ನಿಂತ ಶರತ್ ದೀರ್ಘದಲ್ಲಿ ನಿಂತ ಷಡ್ಜದ ಮೆಲ್ಲುಸಿರಾಗಿ ಬರುತ್ತಾನೆ. ನಡುವೆ ಗುರುವಿನ ದಾಂಪತ್ಯ ಪಾಠ ಸಾಗಿದೆ. ‘ಮದುವೆ ಆಗಲೇ ಬೇಡ’ ಎನ್ನುತ್ತಿದ್ದಾರೆ ಅವರು. ಸೊಗಸಾಗಿ ಮೂಡಿ ಬರಲಿದ್ದ ಅಹಿರ್ ಭೈರವ್ ಮುಂದೆ ದೋಸೆಯ ಚಟ್ನಿಗೆ ಉಪ್ಪು ಸ್ವಲ್ಪ ಕಡಿಮೆಯಾಗಿದ್ದು ದೊಡ್ಡ ವಿಷಯವೇ ಎನ್ನುವಲ್ಲಿಂದ ದಾಂಪತ್ಯ ಎನ್ನುವುದು ಹೆಣ್ಣಿನ ಸಾಧನೆಗೆ ಕಲ್ಲು ಹಾಕಿದ ಹಾಗೆ ಎನ್ನುವ ವಿಚಾರವಿದೆ. ಜೀವನ್‌ಪುರಿಯ ಚೀಸ್ ಬರೆದುಕೋ ಎನ್ನುವ ಹೊತ್ತಿಗೆ ಸಂಗೀತ ಗುರು ವರ್ಷಾ ದೇಶಪಾಂಡೆಯವರ ಉಪದೇಶದ ಮಳೆಗೊಂದು ಹದ ಬಂದು ಬಿಡುವುದನ್ನು ಗಮನಿಸುತ್ತೀರಿ. ಶರತ್ ನನ್ನ ಬದುಕಿನ ಶ್ರುತಿಯಾಗಿ ಬರುತ್ತಾನೆ ಎಂದು ಇವಳು ಅಂದುಕೊಳ್ಳುತ್ತಿರುವಾಗಲೇ ‘ನಿನಗೆ ಸರಿ ಸೂರ್ ಹಚ್ಚುವವನನ್ನೇ ಮದುವೆಯಾಗು" ಎಂಬ ನಿಲುವಿಗೆ ಅವರೂ ಬಂದಿದ್ದಾರೆ. ಇಡೀ ಕತೆ ಒಂದು ಸಂಗೀತದ ಲಹರಿಯಲ್ಲಿಯೇ ಇರುವುದು ಮುದ ನೀಡುತ್ತದೆ.

"ನಿರ್ಗಮನ" ಮತ್ತೆ ಯಕ್ಷಗಾನ ಅಥವಾ ಪುರಾಣದ ಛಾಯೆಯನ್ನು ಜೊತೆ ಜೊತೆಗೇ ಸೆಳೆದುಕೊಂಡು ಸಾಗುವ ಕತೆ. ಒಂದರ್ಥದಲ್ಲಿ ಈ ನಿರ್ಗಮನ ಶ್ರೀಕೃಷ್ಣನ "ಗೋಕುಲ ನಿರ್ಗಮನ"ದ ಜೊತೆ ತಳುಕು ಹಾಕಿಕೊಂಡಿದೆ. ಆದರೆ ಅದು ರಾಧೆಯನ್ನು ಬಿಟ್ಟು ಹೊರಟ ಕತೆಯಲ್ಲ, ವೇಣೀ ಪರಿತ್ಯಾಗವೂ ಅಲ್ಲ. ಬದಲಿಗೆ ಶ್ರೀಕೃಷ್ಣ ದ್ವಾರಕೆಗೆ ಹೋದ ಮೇಲೆ ನಂದ ಯಶೋದೆಯರ ಕಥೆ ಏನಾಯಿತು ಎನ್ನುವುದು ಇಲ್ಲಿನ ಕೇಂದ್ರ. ತಮ್ಮ ತಮ್ಮ ನಿಜವಾದ ತಂದೆ ತಾಯಿ ಯಾರೆಂದು ತಿಳಿದ ಮಕ್ಕಳು ಸಾಕಿದ ಅಪ್ಪ ಅಮ್ಮನನ್ನು ಬಿಟ್ಟು ಹೊರಟರೆ ಅವರ ಪರಿಸ್ಥಿತಿ ಏನಾಗಬೇಡ ಎನ್ನುವ ಪ್ರಶ್ನೆಯನ್ನು ಈ ಕತೆ ಅತ್ಯಂತ ಮಂದ್ರಸ್ಥಾಯಿಯಲ್ಲಿ ಎತ್ತುತ್ತಿದೆ.

ನಿರೂಪಣೆಯ ಕುಶಲ ತಂತ್ರಗಾರಿಕೆ ಮತ್ತು ಓದುಗರನ್ನು ತನ್ಮೂಲಕ ರಂಜಿಸಬಲ್ಲ ಕತೆಗಳು ಈ ಸಂಕಲನದಲ್ಲಿ ಹೇರಳವಾಗಿಯೇ ಇವೆ. "ವಿಕಲ್ಪ" ಕೂಡ ಅಂಥ ಒಂದು ಕತೆಯೇ. "ವಿಭಕ್ತ" ಒಂದು ಸಂಕೀರ್ಣ ಕೌಟುಂಬಿಕ ಚೌಕಟ್ಟು ಹೊಂದಿರುವ, ಸಾಕಷ್ಟು ಬೆಳೆಸುವ ಅವಕಾಶ ಹೊಂದಿದ್ದ ಕತೆ. ಇಂಥ ವಸ್ತುವನ್ನಿಟ್ಟುಕೊಂಡು ಸಮೃದ್ಧವಾದ ಕತೆಯನ್ನು ಕನ್ನಡದಲ್ಲಿ ಅನೇಕರು ಕಟ್ಟಿದ್ದಿದೆ. ಆದರೆ ಇಲ್ಲಿ ಸಂಕ್ಷೇಪಕ್ಕೆ ಹೆಚ್ಚಿನ ಆದ್ಯತೆ ದೊರಕಿದಂತಿದ್ದು, ವಿವರಗಳಲ್ಲಿ, ಘಟನೆಗಳ ವೇಗ ನಿಯಂತ್ರಣದಲ್ಲಿ ಕತೆ ಚುಟುಕಾಗುತ್ತ ಸಾಗುತ್ತದೆ. ಬಹುಶಃ "ಗಿಂಡಿ ತುಂಬಿದ ಹಾಲು" ಕತೆಯನ್ನು ಈ ಕತೆಯೊಂದಿಗೆ ನೇಯ್ದು ಬಿಡುವುದು ಸಾಧ್ಯವಾಗಿದ್ದರೆ ಅದೊಂದು ಬೇರೆಯೇ ತರದ ಕತೆಯಾಗುತ್ತಿತ್ತೇನೋ.

ಒಂದೆರಡು ಕುಟುಂಬದ ಕತೆಗಳನ್ನು ಬಿಟ್ಟರೆ ಇಲ್ಲಿನ ಎಲ್ಲಾ ಕತೆಗಳೂ ಮದುವೆಯಾಗಲಿರುವ ಹೆಣ್ಣಿಗೆ ತನ್ನನ್ನು ಮದುವೆಯಾಗಲಿರುವ ಗಂಡಿನ ಬಗ್ಗೆ ಇರುವ ಗೊಂದಲ, ಅನುಮಾನ ಅಥವಾ ಮದುವೆಯಾಗಿರುವ ಹೆಣ್ಣು ಅಥವಾ ಗಂಡು ಪತಿ ಪತ್ನಿ ಔರ್ ವೋ - ತರದ ಮೂರನೆಯ ವ್ಯಕ್ತಿಯ ಬಗ್ಗೆ ಇರುವ ಗೊಂದಲ, ಅನುಮಾನದ ಸುತ್ತ ಇರುವುದು ಒಂದು ವಿಶೇಷ. ಅಂತಿಮವಾಗಿ ಇವು ಮನುಷ್ಯ ಸಂಬಂಧದ ಗಟ್ಟಿತನ, ಪ್ರೀತಿಯ ಅಮರತ್ವವನ್ನು ಬಯಸುವ ಮತ್ತು ಅದೇ ಕಾಲಕ್ಕೆ ಅದನ್ನು ಅನುಮಾನಿಸುವ ಒಂದು ಮನಸ್ಥಿತಿಯನ್ನು ಅದರ ವಿಭಿನ್ನ ಪರಿಸ್ಥಿತಿಗಳಲ್ಲಿ ಕಟ್ಟಿಕೊಡುತ್ತವೆ. ಸಹಜವಾಗಿಯೇ ಇಂಥ ಕತೆಗಳು ಒಂದು ಕೌಟುಂಬಿಕ, ವೈಯಕ್ತಿಕ ನೆಲೆಯ ಚೌಕಟ್ಟನ್ನು ಮೀರಿ ಬೆಳೆಯಲಾರವು. ನಿಮ್ಮಿಂದ ಮುಂದೆ ಹೆಚ್ಚು ಸೂಕ್ಷ್ಮವಾದ, ಸಾಮಾಜಿಕ ನೆಲೆಯನ್ನೂ ಹೊಂದಿರುವ, ಸಮೃದ್ಧ ವಿವರಗಳಿಂದ ಕತೆಯನ್ನು ಹೆಚ್ಚು ಸೂಚ್ಯವಾಗಿ ಹೇಳುವ ರಚನೆಗಳು ಬರಲಿ ಎಂದು ಹಾರೈಸುವೆ.

- ನರೇಂದ್ರ ಪೈ

MORE FEATURES

ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿಯಿದು

29-11-2024 ಬೆಂಗಳೂರು

"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ...

ಈ ಸಂಕಲನದ ಹೆಚ್ಚಿನ ಕವಿತೆಗಳ ಕೇಂದ್ರ ‘ಹಿಂಸೆ’

28-11-2024 ಬೆಂಗಳೂರು

"ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾ...

ದೇವರನಾಡಿನ ಪಯಣಕ್ಕೊಂದು ಕಾಲುದಾರಿ....

28-11-2024 ಬೆಂಗಳೂರು

"ಸಾಮಾನ್ಯವಾಗಿ ಪ್ರವಾಸ ಕಥನಗಳು ಗದ್ಯದಲ್ಲಿರುತ್ತವೆ. ಆದರೆ ವಿ.ಕೃ. ಗೋಕಾಕರ ‘ಸಮುದ್ರಗೀತೆಗಳು’ ಪದ್...