"ಕಾದಂಬರಿಯ ಬರಹಕ್ಕೆ ಬರಹಗಾರರ ವೈಯಕ್ತಿಕ ಸೃಜನಶೀಲತೆಯೇ ಬಹುದೊಡ್ಡ ಅಸ್ತ್ರ ಹಾಗೂ ಆಸ್ತಿ. ಹಾಗಾಗಿ ಇಂತಹ ಕಾದಂಬರಿ ರಚನೆಯ ಸಂದರ್ಭದಲ್ಲಿ, ಕಾದಂಬರಿಕಾರರಿಗೆ ಮೂಲ ವಸ್ತುವಿನೊಂದಿಗೆ, ಅನೇಕ ಸನ್ನಿವೇಶಗಳ ಊಹೆ, ಮತ್ತದರ ಪುನರ್ ಸೃಷ್ಟಿಗೆ ಬಹಳಷ್ಟು ಸ್ಪೇಸ್ ದೊರೆಯುತ್ತದೆ. ಆ ಅವಕಾಶ ಮತ್ತು ಸ್ವಾತಂತ್ರ್ಯವನ್ನು, ಮೂಲ ಕತೆಯ ಎಳೆಯ ಜೊತೆಜೊತೆಯಲ್ಲೇ ಬಹಳ ಅರ್ಥಪೂರ್ಣವಾಗಿ ಡಾ. ಅನುಪಮಾ ಅವರು ಕೊಂಚ ಹೆಚ್ಚು ಬೆಳೆಸಿ, ಬಳಸಿಕೊಂಡಿದ್ದಾರೆ," ಎನ್ನುತ್ತಾರೆ ಕಾವ್ಯಶ್ರೀ ಮಹಾಗಾಂವಕರ(ಸಿಕಾ). ಅವರು ಎಚ್.ಎಸ್. ಅನುಪಮಾ ಅವರ ‘ಬೆಳಗಿನೊಳಗು ಕಂಡ ಅಕ್ಕ’ ಕೃತಿ ಕುರಿತು ಬರೆದ ವಿಮರ್ಶೆ.
ಡಾ. ಎಚ್. ತಿಪ್ಪೇರುದ್ರಸ್ವಾಮಿಯವರ ‘ಕದಳಿಯ ಕರ್ಪುರ’, ಮಾತೆ ಮಹಾದೇವಿಯವರ ‘ತರಂಗಿಣಿ’, ಜಚನಿ ಅವರ ‘ಮಾದೇವಿ’, ಸು. ರುದ್ರಮೂರ್ತಿ ಶಾಸ್ತ್ರಿಯವರ ‘ಅಕ್ಕಮಹಾದೇವಿ’, ಆಶಾ ರಘು ಅವರ ‘ಮಾಯೆ’, ಮುಂತಾದ ಕೃತಿಗಳು ಅಕ್ಕನ ಕುರಿತು ಹೊರಬಂದಿವೆ, ಇನ್ನು ಬರುತ್ತಲೇ ಇವೆ. ಅದು ಹಾಗೆಯೇ… ಅಕ್ಕಮಹಾದೇವಿಯ ಜೀವನ, ಸಾಹಿತ್ಯ ಮತ್ತು ಸಾಧನೆ, ಯಾವತ್ತೂ ತೆರೆದಷ್ಟು ತೆರೆದುಕೊಳ್ಳುವ, ಬಗೆದಷ್ಟು ಬಗೆಯಿಸಿಕೊಳ್ಳುವ, ಅರಿತಷ್ಟು ಅರಿಯಿಸಿಕೊಳ್ಳುವ ಒಂದು ವಿಶಿಷ್ಟ ವ್ಯಕ್ತಿತ್ವ. ಅದಕ್ಕಿಂತಲೂ ಸ್ಪಷ್ಟವಾಗಿ ಹೇಳಬೇಕೆಂದರೆ ಅಕ್ಕ ಒಂದು ದಿವ್ಯ ಚೇತನ. ಇಂತಹ ನಿತ್ಯ ಚೇತನವು, ಪ್ರತಿನಿತ್ಯ ಪ್ರತಿಯೊಬ್ಬರಿಗೂ ಪ್ರೇರಣೆ, ಸ್ಪೂರ್ತಿಯಾಗಿ ಪ್ರಭಾವಿಸುತ್ತಲೇ ಸಾಗಿದೆ. ಅದೆಷ್ಟು ಜನರು ಅಕ್ಕನ ಕುರಿತು ಬರೆದರೂ, ವಿಷಯ, ವಸ್ತುವಿನ ಹರವು ಮುಗಿಯದ ಅಕ್ಷಯ. ಮತ್ತೆ ಮತ್ತೆ ಹೊಸ ಹೊಸ ಹೊಳವುಗಳು ಗೋಚರಿಸುತ್ತ, ಬುದ್ಧಿಮತ್ತೆಯನ್ನು ಪ್ರಚೋದಿಸುತ್ತಲೇ ಸಾಗಿದೆ. ಅಂತಹ ನಿತ್ಯ ನೂತನವಾದ ಜೀವ ಚೈತನ್ಯ ಅಕ್ಕಮಹಾದೇವಿ.
ಇಂದು ಅಕ್ಕ ಇಷ್ಟೊಂದು ಆಳವಾಗಿ ಆವರಿಸಿಕೊಳ್ಳಲು ಕಾರಣ, ಇದೀಗ ಓದಿ ಮುಗಿಸಿ ಬದಿಗಿಟ್ಟ ಕಾದಂಬರಿ, ಡಾ. ಎಚ್. ಎಸ್. ಅನುಪಮಾ ಅವರ ‘ಬೆಳಗಿನೊಳಗು ಮಹಾದೇವಿಯಕ್ಕ’. ಇದೊಂದು ಬೃಹತ್ಕೃತಿ! ಏಳುನೂರಾ ಎಪ್ಪತ್ತಾರು ಪುಟಗಳ ಸುಧೀರ್ಘ ಕಾದಂಬರಿ. ಅಕ್ಕನ ಹುಡುಕಾಟದಲ್ಲಿ ಸದಾ ಯಾವುದಾದರೊಂದು ಓದು-ಬರಹದಲ್ಲಿ ತೊಡಗಿರುತ್ತಿದ್ದ ನನಗೆ, ಈ ಕೃತಿಯನ್ನು ಬಿಟ್ಟೂ ಬಿಡದಂತೆ ಅನಿವಾರ್ಯವಾಗಿ ಓದಿದೆ.
ಕಾದಂಬರಿಯ ಬರಹಕ್ಕೆ ಬರಹಗಾರರ ವೈಯಕ್ತಿಕ ಸೃಜನಶೀಲತೆಯೇ ಬಹುದೊಡ್ಡ ಅಸ್ತ್ರ ಹಾಗೂ ಆಸ್ತಿ. ಹಾಗಾಗಿ ಇಂತಹ ಕಾದಂಬರಿ ರಚನೆಯ ಸಂದರ್ಭದಲ್ಲಿ, ಕಾದಂಬರಿಕಾರರಿಗೆ ಮೂಲ ವಸ್ತುವಿನೊಂದಿಗೆ, ಅನೇಕ ಸನ್ನಿವೇಶಗಳ ಊಹೆ, ಮತ್ತದರ ಪುನರ್ ಸೃಷ್ಟಿಗೆ ಬಹಳಷ್ಟು ಸ್ಪೇಸ್ ದೊರೆಯುತ್ತದೆ. ಆ ಅವಕಾಶ ಮತ್ತು ಸ್ವಾತಂತ್ರ್ಯವನ್ನು, ಮೂಲ ಕತೆಯ ಎಳೆಯ ಜೊತೆಜೊತೆಯಲ್ಲೇ ಬಹಳ ಅರ್ಥಪೂರ್ಣವಾಗಿ ಡಾ. ಅನುಪಮಾ ಅವರು ಕೊಂಚ ಹೆಚ್ಚು ಬೆಳೆಸಿ, ಬಳಸಿಕೊಂಡಿದ್ದಾರೆ. ಆ ಕಲ್ಪನೆಗೆ ವಾಸ್ತವದ ಮೆರುಗು ನೀಡುವಲ್ಲಿ ಹೆಚ್ಚುಕಡಿಮೆ ಯಶ ಸಾಧಿಸಿದ್ದಾರೆ ಎಂದೇ ಹೇಳಬೇಕು. ಅಕ್ಕ ಎನ್ನುವ ವೈಭವೀಕರಣವನ್ನು ಸರಳೀಕೃತಗೊಳಿಸುವ ಧಾವಂತದಲ್ಲಿ, ಕೆಲವೊಮ್ಮೆ ಅತಿಯಾಗಿ ಸರಳೀಕರಿಸಿದ್ದೂ ಇದೆ.
ಈ ಕಾದಂಬರಿಯನ್ನು ಇಡಿಯಾಗಿ ಗಮನಿಸಿದಾಗ ಅದರ ಪ್ಲಾಟ್ ಗಮನ ಸೆಳೆಯುತ್ತದೆ. ಡಾ. ಎಚ್. ಎಸ್. ಅನುಪಮಾ ಅವರು ವಿಶ್ವವಿದ್ಯಾಲಯದ ರಿಸರ್ಚ್ ಸ್ಕಾಲರ್ ರೀತಿಯಲ್ಲಿ ಸಂಶೋಧನೆ ನಡೆಸಿದ್ದಾರೆ. ಈ ಅಧ್ಯಯನಶೀಲತೆಯು ಅವರ ಜ್ಞಾನ ದಾಹ ಮತ್ತು ಓದಿನ ಕ್ಷಮತೆಯನ್ನು ಬಿಂಬಿಸುತ್ತದೆ. ಅಕ್ಕನಿಗೆ ಸಂಬಂಧಿಸಿದ ಅನೇಕ ಪುಸ್ತಕಗಳ ಓದು, ಸಹಜವಾಗಿಯೆ ಓದಿನ ಹರವನ್ನು ವಿಸ್ತರಿಸಿದೆ. ಕೃತಿಯ ಕೊನೆಯ ಪುಟಗಳಲ್ಲಿ ಸಮಗ್ರ ಪುಸ್ತಕಗಳ ಪಟ್ಟಿಯನ್ನು ನಮೂದಿಸಿದ್ದಾರೆ. ಇದು ಆಸಕ್ತರಿಗೆ ಉಪಯುಕ್ತವೂ ಹೌದು.
ಅಕ್ಕಮಹಾದೇವಿಯ ಇಡಿಯಾದ ಬದುಕನ್ನು ಕಣ್ಮುಂದೆ ತರಿಸಿಕೊಂಡರೆ, ಉಡುತಡಿ, ಅರಮನೆ ವಾಸ, ಕಲ್ಯಾಣದತ್ತ ಪಯಣ, ಶರಣರ ಸಂಗ, ಕದಳಿಯಲ್ಲಿ ಐಕ್ಯ, ಹೀಗೆ ಐದು ಭಾಗಗಳಾಗಿ ವಿಂಗಡಿಸಲಾಗಿದೆ. ಅದನ್ನು ಅನುಪಮಾ ಅವರು ಕಲ್ಲರಳಿ, ಹೂವಾಗಿ, ಎಲ್ಲರಿಗೂ ಬೇಕಾಗಿ, ಶಿಖರಕ್ಕೆ ಬೆಳಕಾಗಿ, ಬಲ್ಲವರಿದ ಪೇಳಿ ಎನ್ನುವ ಐದು ಹಂತಗಳಲ್ಲಿ ಕಾದಂಬರಿ ಬೆಳೆಸಿದ್ದಾರೆ. ಹೀಗೆ ಹಂತ ಹಂತವಾಗಿ ಅಕ್ಕನ ಜೀವನದ ಸುರುಳಿ ಬಿಚ್ಚಿಕೊಳ್ಳುತ್ತ ಸಾಗುತ್ತದೆ.
ಕಾದಂಬರಿ ರಚನೆಯ ಆರಂಭದಲ್ಲಿ ಅವರಿಗೆ ಮೊಟ್ಟ ಮೊದಲು ಕಾಡಿದ ಪ್ರಶ್ನೆ ‘ಅಕ್ಕ ನಡೆದು ಹೋದ ಮಾರ್ಗ ಯಾವುದು?’ ಎಂದು. ಆ ದಾರಿಯಲ್ಲಿ ಎದುರಾದ ಸಮಸ್ಯೆಗಳು ಏನಿರಬಹುದು? ಎಂತೆಂತಹ ಘಟನೆಗಳು ನಡೆದಿರಬಹುದು? ಎನ್ನುವ ಸಾಧ್ಯಾಸಾದ್ಯತೆಯ ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಶ್ರಮವಹಿಸಿ ಉತ್ತರ ಕಂಡುಕೊಂಡಿದ್ದಾರೆ. ಹಾಗೆ ಅಕ್ಕ ನಡೆದು ಹೋದ ದಾರಿಗಳು, ಮಾರ್ಗಗಳು, ಊರುಗಳು, ಎಲ್ಲಾ ತಿಳಿದುಕೊಂಡ ನಂತರ ಅಲ್ಲಿಯ ಭಾಷೆ, ಆಹಾರ ಪದ್ಧತಿ, ಕೃಷಿ, ಬೆಳೆ, ಹವಾಮಾನ, ಹಬ್ಬಗಳು, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕೂಲಂಕಷವಾಗಿ ಅವಲೋಕಿಸಿ ನಿರೂಪಿಸಿರುವುದು ಆಕರ್ಷಕ.
ಹನ್ನೆರಡನೇ ಶತಮಾನದ ಕಾಲ ಘಟ್ಟದಲ್ಲಿ ಪ್ರಭಾವ ಬೀರಿರಬಹುದಾದ ಕೌಳಾ, ಶಾಕ್ತ, ಶೈವ, ಬೌದ್ಧ, ಜೈನ ಪರಂಪರೆಗಳ ಆಧಾರದ ವಿವರಣೆಯೂ ಇದೆ. ಡಾ. ಅನುಪಮಾ ಅವರು ಇವುಗಳ ಕುರಿತು ಸ್ಪಷ್ಟ ಅಭಿಪ್ರಾಯ ಹೊಂದಿರುವುದು ವೇದ್ಯವಾಗುತ್ತದೆ.
ಅಕ್ಕನ ವಸ್ತ್ರದ ಕುರಿತು ಅನೇಕ ವಿದ್ವಾಂಸರ, ಸಂಶೋಧಕರ ಭಿನ್ನಭಿನ್ನ ಅಭಿಪ್ರಾಯಗಳಿವೆ. ಡಾ. ಅನುಪಮ ಅವರು ಜೈನ ಧರ್ಮದ ದಿಗಂಬರತ್ವದ ಹಿನ್ನೆಲೆಯಲ್ಲಿ ಆಲೋಚಿಸಿ ಮುಂದುವರಿದಿರುವುದು ಸೂಕ್ತ. ಜಿ.ಎಸ್. ಶಿವರುದ್ರಪ್ಪನವರ ಅಭಿಪ್ರಾಯವೂ ಇದಕ್ಕೆ ಹತ್ತಿರವಾಗಿದೆ. ಶೂನ್ಯ ಸಂಪಾದನಕಾರರು ಬಿಂಬಿಸಿರುವ ಹುಟ್ಟುಡುಗೆ, ಕೇಶರಾಶಿ ಸುಧೀರ್ಘ ಪಯಣದ ಭಾಗವಾಗಿರಲು ಅಸಾಧ್ಯ ಮತ್ತು ಅವಾಸ್ತವ. ಇದೇ ಮಾತು ಅನುಪಮಾ ಅವರ ಅಧ್ಯಯನದ ಮೂಲಕ ಕಾದಂಬರಿಯುದ್ದಕ್ಕೂ ಪ್ರತಿಬಿಂಬಿತವಾಗಿದೆ.
ಡಾ. ಎಚ್. ಎಸ್. ಅನುಪಮಾ ಅವರು ತಮ್ಮ ಮಾತು ಬರೆಯುವಾಗ, “ದಾರಿ ದೇವತೆಯೊಡನೆ ನಡಿಗೆ” ಶಿರೋನಾಮೆ ಕೊಟ್ಟಿದ್ದಾರೆ. ಅದರಂತೆಯೆ ಇಡೀ ಕಾದಂಬರಿಯಲ್ಲಿ ಅಕ್ಕನ ಬಾಹ್ಯ ಪಯಣವನ್ನೇ ಗಮನಿಸುತ್ತ, ತಿಳಿಯುತ್ತ, ಅರಿಯುತ್ತ ಹೋಗುವ ಓದಿನ ಪಯಣ ಸಾರ್ಥಕ್ಯ ಮೆರೆದಿದೆ.
ಅವರೇ ಹೇಳುವಂತೆ, ‘ನಡೆಯುತ್ತ ನಡೆಯುತ್ತ ಉಡುತಡಿಯ ಮಹಾದೇವಿ ಅಕ್ಕಮಹಾದೇವಿಯಾದಳು’ ಈ ಮಾತು ನಿಜವಾದರೂ, ಅದಕ್ಕೆ ಅಕ್ಕನ ಅಂತರಂಗದ ಪಯಣ ಸೇರಬೇಕಾದುದು ಅವಶ್ಯಕ. ಅಕ್ಕನ ಒಳಪಯಣ ಉಡುತಡಿಯಲ್ಲೆ ಗಟ್ಟಿಗೊಂಡು ನೆಲೆಯಾಗಿತ್ತು. ಆದರೂ ಅಕ್ಕನ ಹುಡುಕಾಟ ನಿಲ್ಲಲಿಲ್ಲ. ಅದೇ ಹುಡುಕಾಟ ಬಾಹ್ಯ ಪಯಣವಾಗಿ ಕೊನೆಗೆ ಲಿಂಗಧ್ಯಾನದಲ್ಲಿ ಗಮ್ಯ ಕಂಡುಕೊಂಡು ಕದಳಿಯತ್ತ ಪಯಣಿಸುತ್ತದೆ. ಅದು ಕಲ್ಯಾಣದಲ್ಲಿ, ಬಸವಾದಿ ಶರಣರ ಸಂಗದೊಲುಮೆಯ ಕರ್ಪೂರಗಿರಿಯಲ್ಲಿ ಇನ್ನಷ್ಟು ಪಕ್ವವಾಗಿ,
“ಲಿಂಗವೆನ್ನೆ ಲಿಂಗೈಕ್ಯವೆನ್ನೆ
ಸಂಗವೆನ್ನೆ ಸಮರಸವೆನ್ನೆ
ಆಯಿತೆನ್ನೆ ಆಗದೆನ್ನೆ
ನೀನೆನ್ನೆ ನಾನೆನ್ನೆ ಚೆನ್ನಮಲ್ಲಿಕಾರ್ಜುನಯ್ಯಾ
ಲಿಂಗೈಕ್ಯವಾದ ಬಳಿಕ ಏನೂ ಎನ್ನೆ”
ಎಂದು ಹೇಳಲು ಅಕ್ಕನಿಗೆ ಸಾಧ್ಯವಾಯಿತು.
ಶರಣರ ಬಹುಮುಖ್ಯವಾದ “ಅನುಭಾವ” ಎಂದರೆ ಲಿಂಗ ಧ್ಯಾನದಲ್ಲಿ ಬದುಕಿದ್ದಾಗಲೇ ಲಿಂಗೈಕ್ಯವಾಗುವುದು. ಅದನ್ನು ‘ಶರಣ ಸತಿ ಲಿಂಗ ಪತಿ’, ‘ಲಿಂಗಾಂಗ ಸಾಮರಸ್ಯ’ ಎನ್ನುವ ಪಾರಿಭಾಷಿಕ ಪದಗಳ ಉಕ್ತಿಯಿಂದ ವರ್ಣಿಸಿದ್ದಾರೆ. ಅಲ್ಲದೆ ಅಷ್ಟಾವರಣ, ಪಂಚಾಚಾರ, ಷಟಸ್ಥಲ ಮುಂತಾದ ಶರಣ ತತ್ವಗಳು ಈ ಕಾದಂಬರಿಯಲ್ಲಿ ಯಾಕೋ ಮಿಸ್ಸಿಂಗ್ ಎನ್ನುವಂತೆ ಕಾಡುತ್ತದೆ. ‘ಶರಣ ಪಥ’ ಎನ್ನುವ ಎರಡೇ ಶಬ್ದಗಳನ್ನು ಬಳಸಿ, ಅದನ್ನು ಅಷ್ಟಕ್ಕೇ ಕೈಬಿಟ್ಟಂತೆ ತೋರುತ್ತದೆ.
ಇದರಲ್ಲೇ ಇಡಿಯಾದ ಶರಣ ತತ್ವಗಳ ಪ್ರಕ್ರಿಯೆ ಅಡಗಿದಂತೆ ತಿಳಿದುಕೊಳ್ಳಬೇಕಾಗಿದೆ.
ವಚನಕಾರರ ಚಳುವಳಿಯ ಕುರಿತು ಸಮಾಧಾನಕರ ಚರ್ಚೆಯೂ ನಡೆದಿದೆ. ಸ್ತ್ರೀ ಸ್ವಾತಂತ್ರ್ಯ, ಸಮಾನತೆ, ಅಸ್ಮಿತೆಗಳ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ. ಆದರೆ ಒಂದು ಶತಮಾನಕ್ಕೂ ಹೆಚ್ಚು ಪ್ರಭಾವ ಬೀರಿರುವ ಸ್ತ್ರೀವಾದದ ಪ್ರೇರಣೆ, ಇಲ್ಲಿಯ ನಿರೂಪಣೆಯಲ್ಲಿ ಢಾಳಾಗಿ ವಿಜ್ರಂಭಿಸಿ ಮೂಲ ಆಶಯಕ್ಕೆ ಧಕ್ಕೆಯಾಗಿದೆ. ಅಕ್ಕಮಹಾದೇವಿಯ ಇಡೀ ಬದುಕಿನ ಚಿತ್ರಣವನ್ನು, ಸುದೀರ್ಘವಾಗಿ ತಮ್ಮದೇ ಆದ ಶೈಲಿಯಲ್ಲಿ ಓದುಗರ ಮುಂದೆ ತೆರೆದಿಡಲು ಯಶ ಸಾಧಿಸಿರುವಾಗಲೂ, ಬರಹದ ಲಂಬಿಸುವಿಕೆಯನ್ನು ಸಂಕ್ಷೇಪಗೊಳಿಸಬಹುದಿತ್ತು ಎನ್ನುವ ಭಾವ ಮೂಡುತ್ತದೆ. ಆದರೂ ಒಂದು ಅಪರೂಪದ, ಅರ್ಥಪೂರ್ಣ ಕಾದಂಬರಿ ಓದಿದ ದಿವ್ಯ ಅನುಭೂತಿ ಪ್ರಾಪ್ತವಾಗುತ್ತದೆ. ಅದಕ್ಕೆ ಕಾರಣರಾದ ಡಾ. ಎಚ್. ಎಸ್. ಅನುಪಮಾ ಅವರನ್ನು ಅಭಿವಂದಿಸುವೆ.
“ಆಲಿವರ್'ರ ಕವಿತೆಗಳನ್ನು ಆಂತರ್ಯದಲ್ಲಿ ಅನುಭವಿಸಿ, ಅನುವಾದಿಸುವದರ ಮೂಲಕ ಮೂಲ ಕವಿತೆಗಳ ಆಶಯಕ್ಕೆ ಮತ್ತಷ್ಟು...
ಕಥನ ಕೌಶಲದ ಬಗ್ಗೆ ನಮ್ಮ ಅನೇಕ ವಿದ್ವಾಂಸರು ಬರೆದಿದ್ದಾರೆ, ನಮ್ಮ ಕಥನ ಪರಂಪರೆಯ ಅನೇಕರು ಅನೇಕ ಯಶಸ್ವಿ ಪ್ರಯೋಗಗಳನ್ನ ಸೃ...
"ಸಣ್ಣ ಕಲ್ಪನೆಯ ಎಳೆಯ ಜೊತೆಗೆ ಅನೇಕ ಸೂಕ್ಷ್ಮ ಸಂಗತಿಗಳನ್ನು ಈ ಕೃತಿಯಲ್ಲಿ ಅತ್ಯಂತ ಸಮರ್ಥವಾಗಿ ಲೇಖಕರು ಅನಾವರಣಗೊ...
©2025 Book Brahma Private Limited.