ಶರೀಫಗಿರಿಯು ಸರ್ವ ಧರ್ಮದ ಭಾವೈಕ್ಯತೆಯ ಕ್ಷೇತ್ರವಾಗಿದೆ. ಇಲ್ಲಿ ಜಾತಿ ಮತಯನ್ನದೆ ಸರ್ವ ಜನಾಂಗದವರು ಬರುತ್ತಾರೆ. ಆದ್ದರಿಂದ ಮೂಲಭೂತ ಸೌಕರ್ಯ ಹೆಚ್ಚಿಗೆ ಮಾಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ ಎನ್ನುತ್ತಾರೆ ಲೇಖಕ ಶರೀಫ ಗಂಗಪ್ಪ ಚಿಗಳ್ಳಿ ಅವರು ಶರೀಫಗಿರಿಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.
"ಬೋಧ ಒಂದೇ ಬ್ರಹ್ಮನಾದ ಒಂದೇ
ಸಾಧನೆ ಮಾಡುವ ಹಾದಿ ಒಂದೇ
ಆದಿಪರ ಒಂದೇ ಶಿಶುನಾಳಧೀಶನ ಭಾಷೆ ಒಂದೇ"
ಅಂತಾ ಹೀಗೆ ಸಾವಿರಾರು ಪದ್ಯಗಳನ್ನು ರಚನೆ ಮಾಡಿ ಜಗದಗಲ ಬಿತ್ತರಿಸಿದ ಆಧ್ಯಾತ್ಮಿಕ ಸಂತ, ಕವಿ, ತತ್ವಪದಕಾರ, ಯೋಗಿ, ಪವಾಡ ಪುರುಷ ಶರೀಫ ಸಾಹೇಬರು ಕನ್ನಡ ನೆಲದಲ್ಲಿ ಜಗಜಾಹಿರಾಗಿದ್ದಾರೆ. ಗುರು ಗೋವಿಂದ ಭಟ್ಟರ ಪರಮ ಶಿಷ್ಯರಾಗಿ ಜಾತಿ, ಮತ, ಪಂಥ, ಧರ್ಮವನ್ನು ಮೀರಿ ಎಲ್ಲರೂ ಒಂದೇ ಅಂತಾ ಮನುಕುಲ ಉದ್ಧರಿಸಿದ ಮಹಾನುಭಾವರಾಗಿದ್ದಾರೆ. ಅಂತಹ ಮಹಾ ಯತಿಯ ಸ್ಥಳವೇ ಶಿಶುವಿನಹಾಳದ ಶರೀಫಗಿರಿಯಾಗಿದೆ. ವಿಶಾಲವಾದ ಪ್ರದೇಶದಲ್ಲಿ, ಆಧ್ಯಾತ್ಮಿಕ ಕಂಪನದಲ್ಲಿ, ಸಾವಿರಾರು ಭಕ್ತರ ಸಡಗರ ಸಂಭ್ರಮದಲ್ಲಿ ಶರೀಫಗಿರಿಯು ನಾಡಿನ ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಅನ್ನ ದಾಸೋಹ, ಭಕ್ತಿ ಸೇವೆ, ಸಾಂಸ್ಕೃತಿಕತೆಯಿಂದ ಶರೀಫಗಿರಿಯು ಆಧ್ಯಾತ್ಮಿಕತೆಯನ್ನು ಮತ್ತು ಶರೀಫ ಸಾಹೇಬರನ್ನು ಮತ್ತೆ ಮತ್ತೆ ನೆನಪಿಸುತ್ತಿದೆ.
ಜೀವನ-
ಸಂತ ಶಿಶುವಿನಹಾಳಧೀಶ ಶರೀಫ ಸಾಹೇಬರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕು ಶಿಶುವಿನಹಾಳದಲ್ಲಿ 1819 ಜುಲೈ 3 ರಂದು ಹುಲಗೂರು ಖಾದರಲಿಂಗನ ಕೃಪಾಶೀರ್ವಾದದಿಂದ ದೇವಕಾರ ಮನೆತನದಲ್ಲಿ ಇಮಾಮ ಹಜರತ್ ಸಾಹೇಬರ ಮತ್ತು ಹಜ್ಜೂಮಾ ಇವರ ಉದರದಲ್ಲಿ ಏಕೈಕ ಮಗನಾಗಿ ಜನಸಿದರು. ಕಳಸದ ಗುರು ಗೋವಿಂದ ಭಟ್ಟರ ಪರಮ ಶಿಷ್ಯರಾಗಿದ್ದರು. ಹೆಂಡತಿ ಫಾತಿಮಾ, ಒಬ್ಬ ಮಗಳು ಇದ್ದಳು. ಅಂಕಲಿಗೇಯ ಅಡವಿ ಸ್ವಾಮಿ, ನವಲಗುಂದದ ನಾಗಲಿಂಗ, ಗರಗದ ಮಡಿವಾಳೇಶ್ವರ, ಹುಬ್ಬಳ್ಳಿಯ ಸಿದ್ದಾರೋಡ, ಅಣ್ಣಿಗೇರಿಯ ಅಜಾತಲಿಂಗ ಇವರ ಸಮಕಾಲೀನ ಶರಣರಾಗಿದ್ದರು. ಗುಡಿಯ ನೋಡಿರಣ್ಣಾ ದೇಹದ ಗುಡಿ, ಅಳಬೇಡಾ ತಂಗಿ ಅಳಬೇಡ, ಬಿದ್ದಿಯಬ್ಬೇ ಮುದುಕಿ ಬಿದ್ದಿಯಬ್ಬೇ, ಮೋಹದ ಹೆಂಡತಿ ತೀರಿದ ಬಳಿಕ, ಸೋರುತಿರುವ ಮನೆಯ ಮಾಳಿಗೆ, ಎಂಥಾ ಮೋಜಿನ ಕುದುರಿ, ಕೋಡಗನ್ನ ಕೋಳಿ ನುಂಗಿತ್ತಾ ಇತ್ಯಾದಿ ಜನಮನ ಮೆಚ್ಚಿದ ತತ್ತ್ವಪದಗಳಾಗಿವೆ.
-: *ಸ್ಥಳ ಮಹಿಮೆ*:-
ಶಿಶುವಿನಹಾಳವು. ಆಧ್ಯಾತ್ಮ ಪುರುಷ ಶರೀಫ ಸಾಹೇಬರ ಜನಸಿದ ಪುಣ್ಯ ಜನ್ಮ ಭೂಮಿಯಾಗಿದೆ. ಹಿಂದೂ ಮುಸ್ಲಿಂ ಭಾವೈಕ್ಯತೆಯನ್ನು ನಾಡಿಗೆ ಸಾರಿದ ಸಾಂಕೇತಿಕ ಗ್ರಾಮವಾಗಿದೆ. ಶಿಗ್ಗಾಂವದಿಂದ ಸುಮಾರು 17 ಕಿ.ಮಿ, ಸವಣೂರಿನಿಂದ 18 ಕಿ.ಮಿ ಮತ್ತು ಹುಬ್ಬಳ್ಳಿಯಿಂದ 44 ಕಿ.ಮಿ ಅಂತರದಲ್ಲಿ ಶಿಶುವಿನಹಾಳ ಇದೆ. ಕಳಸದ ಗುರು ಗೋವಿಂದ ಭಟ್ಟರ ಕೃಪೆ ಶರೀಫ ಸಾಹೇಬರ ಮೇಲೆ ಇದ್ದ ಕಾರಣ ಈ ಗ್ರಾಮದ ಮೇಲೆ ಅವರ ಕೃಪಾಶೀರ್ವಾದ ಇದೆ. ಗ್ರಾಮದಲ್ಲಿರುವ ಶಿಶುನಾಳದೀಶನ (ಬಸವಣ್ಣನ) ಕೃಪೆಯಿಂದ ಗ್ರಾಮ ಲೋಕ ವಿಖ್ಯಾತವಾಗಿದೆ. ಗುಡುಗೇರಿ ದ್ಯಾಮವ್ವ, ತ್ರಿವೇಣಿ ಸಂಗಮ, ಹುಲಗೂರು ಖಾದರಲಿಂಗ, ಕಾರಡಗಿ ವೀರಭದ್ರೆಶ್ವರ ಈ ಕ್ಷೇತ್ರಗಳು ಶಿಶುವಿನಹಾಳದ ಸುತ್ತಮುತ್ತಲಿನ ಹಳ್ಳಿಗಳಾಗಿವೆ. ಆದ್ದರಿಂದ ಈ ಪ್ರದೇಶವನ್ನು ಶರಣರು, ಸಂತರು, ಮಹಿಮಾ ಪುರುಷರು ಜನ್ಮವೆತ್ತಿ ನಡೆದಾಡಿದ ಶರಣರ ನಾಡು ಅಂತಾ ಕರೆದಿದ್ದಾರೆ.
ಗದ್ದುಗೆ ಶೋಧಿಸಿದ ಅವಧೂತ
ಕರಿಬಾಯಿ ಶರೀಫ, ಹಿಂದೂ - ಮುಸ್ಲಿಂ ಒಂದೇ ಮಾಡಿ ಐಕ್ಯತೆ ಸಾಧಿಸಿದ, ಜಾತಿ, ಧರ್ಮ ಸೇರಿಸಿ ಪರಂಪರೆ ಅಂತಾ ಸ್ಥಳೀಯರು, ಅಗ್ರಜರು ಶರೀಫನನ್ನು ಸದಾ ಕಡೆಗಣಿಸುತ್ತಿದ್ದರು. ಶರೀಫ ಸಾಹೇಬರ ಗೋವಿಂದ ಭಟ್ಟರ ಶಿಷ್ಯರಾಗಿದ್ದಾಗ ಕಳಸದಲ್ಲಿ ಬಹಳಷ್ಟು ಅವಮಾನ ಎದುರಿಸಿದರು. ಶರೀಫರು ಮರಣಿಸಿದ ನಂತರ ಶಿಶುವಿನಹಾಳದಲ್ಲಿನ ಹೊರ ವಲಯದ ಜಮೀನಿನಲ್ಲಿ ದಪನ ಮಾಡಲಾಯಿತು. ನಂತರ ಒಂದು ಬೇವಿನ ಮರವನ್ನು ನೆಡಲಾಯಿತು. ಅಲ್ಲಿಂದ ಶರೀಫ ಸಾಹೇಬರ ಸಮಾಧಿಗೆ ಯಾರು ಹೋಗುತ್ತಿರಲಿಲ್ಲಾ. ಮುಸ್ಲಿಂ ಧರ್ಮದವರು ಧರ್ಮ ಕೆಡಸಿದ ಅಂತಾ ಹಿಂದೂ ಧರ್ಮದವರು ಜನಿವಾರ ಹಾಕಿದ ಅಂತಾ ಇವರ ಶಾಪ, ಕರಿಬಾಯಿಗೆ ಹೆದರಿ ಯಾರು ಸಮಾಧಿಗೆ ಹೋಗದ ಕಾರಣ. ಶರೀಫ ಸಾಹೇಬರ ಗದ್ದುಗೆ ಕಂಟೆ ಕಸದಲ್ಲಿ ಬೆಳೆದು ಅಗೋಚರವಾಯಿತು.
ಆಗ ಶಿರಹಟ್ಟಿಯ ಸಂಸ್ಥಾನ ಮಠದ ಫಕ್ಕೀರೇಶ್ವರ ಸಿದ್ದರಾಮೇಶ್ವರರ ಅಣತಿಯಂತೆ ಕುಂದಗೋಳ ತಾಲೂಕಿನ ಇಂಗಳಗಿ ಗ್ರಾಮದ ಆಧ್ಯಾತ್ಮ ಪುರುಷ, ದಿವ್ಯ ಜ್ಞಾನಿ ಅವಧೂತ ವೀರೇಶ್ವರ ಸ್ವಾಮಿಗಳು ಶಿಶುವಿನಹಾಳಕ್ಕೆ ಬಂದು ಗುರು ಪಕ್ಕೀರೇಶ್ವರರ ಪ್ರೇರೇಪಣೆಯಂತೆ ಕನಸಿನಲ್ಲಿ ಬಂದು ಆಜ್ಞಾಪಿಸಿದ ವಾಕ್ಯದಂತೆ ಶರೀಫ ಸಾಹೇಬರ ಕರ್ತೃ ಸಮಾಧಿ ಸ್ವಚ್ಛ ಮಾಡಿ ಗದ್ದುಗೆಯನ್ನು ಸಮಾಧಿಯ ಮೇಲೆ ಕಟ್ಟಿ ಪಂಚಾಕ್ಷರಿಯ ಮಂತ್ರ ಪಟಿಸಿದರು. ಅಂದಿನಿಂದ ಶಿಶುನಾಳದೀಶನ ಗದ್ದುಗೆ ಲೋಕ ವಿಖ್ಯಾತವಾಯಿತು. ಆಗ ಅವಧೂತ ವೀರೇಶ್ವರ ಮಾಡಿದ ಭಕ್ತಿ ಪರಿಶ್ರಮದ ಕಾರ್ಯದಿಂದ ಸಧ್ಯ ಶರೀಫಗಿರಿಯಾಗಿ ಬಹಳಷ್ಟು ಬದಲಾಗಿ ಹೋಗಿದೆ. ಅವಧೂತ ವೀರೇಶ್ವರರು ಗದ್ದುಗೆ ಕಟ್ಟಿ ಜಗದ ಬೆಳಕಿಗೆ ತರದೆ ಹೋಗಿದ್ದರೆ ಶರೀಫರ ಸಮಾಧಿ ಕತ್ತಲಲ್ಲಿ ಇರಬೇಕಾಗಿತ್ತು. ಶರೀಫರ ವರದ ಹಸ್ತದಿಂದ ಜನಸಿದ ಅವಧೂತ ವೀರೇಶ್ವರ ಶರೀಫರ ನಾಡಿನಲ್ಲಿ ದಾನ, ಧರ್ಮ, ದಾಸೋಹ ಮಾಡಿ ಆಧ್ಯಾತ್ಮಿಕ ಚಿಂತನೆ ಬಿತ್ತರಿಸಿದರು.
-: *ಕೈ ಬೀಸಿ ಕರೆಯುತ್ತಿದೆ ಶರೀಫಗಿರಿ*:-
ಶರೀಫಗಿರಿ ಪ್ರವೇಶ ಮಾಡುವಾಗ ಬೃಹದಾಕಾರವಾಗಿ ಸುಂದರ ಕಮಾನು ನಿರ್ಮಿಸಲಾಗಿದೆ. ಅಲ್ಲಿ ಕಮಾನಿನ ದ್ವಾರದಲ್ಲಿ ಗುರು ಗೋವಿಂದ ಭಟ್ಟರ ಮತ್ತು ಶರೀಫ ಸಾಹೇಬರ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಇಲ್ಲಿಂದಲೆ ಶರೀಫರ ತತ್ತ್ವಪದ ಗುರು ಗೋವಿಂದ ಭಟ್ಟರ ಜ್ಞಾನ ಕಂಪನ ನಮಗೆ ದರ್ಶನವಾಗುತ್ತದೆ. ನಂತರ ಶಾಲೆ, ವಸತಿ ಗೃಹ ಬಲ ಭಾಗಕ್ಕೆ ಬರುತ್ತವೆ. ತದನಂತರ ಶರೀಫರ ಗದ್ದುಗೆ ಆವರಣಕ್ಕೆ ಬರುತ್ತದೆ.
ದೀಪ ಮಾಲಿಕೆ ಕಂಬದಿಂದ ನೋಡಿದರೆ ಗುರುಶಿಷ್ಯರ ದರ್ಶನ ಅಲ್ಲಿಂದಲೆ ಆಗುತ್ತದೆ. ಭಕ್ತ ಪ್ರವಾಸಿಗರಿಗೆ ಬರಲು ಸುಂದರವಾಗಿ ಪ್ಲಾಟ್ ಫಾರ್ಮ್ ನಿರ್ಮಿಸಲಾಗಿದೆ. ಅಲ್ಲಿಂದ ಶರೀಫರ ಗದ್ದುಗೆ ಬರಬಹುದು. ಮೊದಲಿಗೆ ನಮಗೆ ದರ್ಶನವಾಗುವದು ಕವಿ ಕಬೀರ್ ಮಾನವತಾವಾದಿ ಶರೀಫ ಸಾಹೇಬರ ಕರ್ತೃ ಗದ್ದುಗೆ ಬರುತ್ತದೆ. ಈ ಗದ್ದುಗೆ ಬಹಳ ವಿಶಾಲವಾಗಿದ್ದು ಪೂರ್ವ ಕಡೆ ಮೂಖ ಮಾಡಿ ಬಿಳಿ ಅಮೃತ ಶಿಲೆಯಲ್ಲಿ ಗುರು ಗೋವಿಂದ ಭಟ್ಟರ ಮತ್ತು ಶರೀಫ ಸಾಹೇಬರ ಮೂರ್ತಿ ನಿರ್ಮಾಣ ಮಾಡಿ ಇಡಲಾಗಿದೆ. ಇಲ್ಲಿ ಸದಾಕಾಲ ಪೂಜೆ ಮತ್ತು ಓದಿಕೆ ನಡಿಯುತ್ತದೆ.
ಶರೀಫ ಸಾಹೇಬರ ವಂಶಸ್ಥರಿಂದ ಓದಿಕೆ ಮತ್ತು ಗುರುಗೋವಿಂದ ಭಟ್ಟರ ಬ್ರಾಹ್ಮಣ ಸಂಪ್ರದಾಯದಂತೆ ಪೂಜೆ ನಡಿಯುತ್ತದೆ. ಶತಮಾನಕ್ಕಿಂತ ಹಳೆಯದಾದ ಬೇವಿನ ಮರವು ಗದ್ದುಗೆಗೆ ಸದಾ ನೆರಳಾಗಿದೆ. ಇದು ಅತ್ಯಂತ ಹಳೆಯ ಮರವಾಗಿದ್ದು ಮುಂದೆ ಐತಿಹಾಸಿಕ ಪರಂಪರೆಗೆ ಸೇರುವ ಮರವಾಗಿದೆ. ಗದ್ದುಗೆ ಸುತ್ತ ಗ್ರೇನೈಟ್ ಕಲ್ಲಿನಲ್ಲಿ ನೆಲಹಾಸು ನಿರ್ಮಿಸಲಾಗಿದೆ. ಗೇಟ್ ಅಳವಡಿಸಲಾಗಿದೆ. ಸುತ್ತಲು ಭಕ್ತರು ಪ್ರದಕ್ಷಿಣೆ ಹಾಕಲು ಸ್ಥಳಾವಕಾಶ ಕಲ್ಪಿಸಲಾಗಿದೆ. ಬಂದ ಭಕ್ತರು ವಿಶ್ರಾಂತಿ ಪಡೆಯಲು ಸ್ಥಳವಿದೆ. ಇಲ್ಲಿ ಬಂದು ಶರೀಫರ ದರ್ಶನ ಪಡೆದು ಪುನೀತರಾಗಿದ್ದಾರೆ. ಭಕ್ತರು ತಮ್ಮ ಹರಕೆ ಬೇಡಿಕೆಗನುಗುಣವಾಗಿ ಭಕ್ತಿ ಸೇವೆ, ಭಜನೆ, ದಾನ, ಅನ್ನ ಸಂತರ್ಪಣೆ, ಸಾದು ಸಂತರ ಸೇವೆ ಮಾಡುತ್ತಾರೆ.
ಗದ್ದುಗೆಯ ಹಿಂದಿನ ಭಾಗದಲ್ಲಿ ಗುರು ಗೋವಿಂದ ಭಟ್ಟರ ದೇವಾಲಯವಿದೆ. ಈ ದೇವಾಲಯದದಲ್ಲಿ ಗುರು ಗೋವಿಂದ ಭಟ್ಟರ ಮತ್ತು ಶರೀಫ ಸಾಹೇಬರ ಜೀವನ ದೃಷ್ಟಾಂತಗಳ ತೈಲ ಚಿತ್ರ ಬಿಡಿಸಿ ಹಾಕಲಾಗಿದೆ. ಚಾಕಲಬ್ಬಿ ಯಲ್ಲಮ್ಮನಿಂದ ಬೆಂಕಿ ಪಡದಿದ್ದು, ಗುಡುಗೇರಿ ದ್ಯಾಮವ್ವನಿಂದ ನತ್ತು( ಮೂಗತಿ) ಪಡದಿದ್ದು, ಅಮಾವಾಸ್ಯೆಯನ್ನು ಹೋಗಿ ಹುಣ್ಣಿಮೆಯ ಮಾಡಿದ್ದು, ನವಲಗುಂದ ನಾಗಲಿಂಗನ, ಹುಬ್ಬಳ್ಳಿಯ ಸಿದ್ದಾರೋಡನ ಬೇಟಿ, ಶರೀಫರು ಕೆಟ್ಟವರಿಗೆ ನೀಡಿದ ಶಾಪ, ಒಳ್ಳೆಯವರಿಗೆ ನೀಡಿದ ಸಹಾಯ, ಪವಾಡ, ತತ್ತ್ವಪದ ಹಾಡಿದ್ದು, ಜನಪದ, ದೊಡ್ಡಾಟ, ಸಣ್ಣಾಟ, ಆಲಾವಿಪದ, ಪಾಠ ಪ್ರವಚನ, ಪ್ರಭುಲಿಂಗ ಲೀಲೆ ಹೇಳಿದ್ದು ಇತ್ಯಾದಿ ಚಿತ್ರ ಬಿಡಿಸಲಾಗಿದೆ. ಇವು ಅವರ ಪವಾಡ ಮತ್ತು ಜೀವನವನ್ನು ಮತ್ತೆ ಮತ್ತೆ ತಿಳಿಸಿಕೊಡುತ್ತವೆ.
ಗುರು ಗೋವಿಂದ ಭಟ್ಟರ ಗುಡಿಯ ಎಡಗಡೆ ಉಗ್ರಾಣ ಮಳಿಗೆ ಮತ್ತು ಅನ್ನದ ಸಂತರ್ಪಣೆಯ ಛತ್ರವಿದೆ. ಪ್ರತಿದಿನ ಅನ್ನ ದಾಸೋಹ ನಡಿಯುತ್ತದೆ. ಬಲಗಡೆ ಆಡಳಿತ ಮಂಡಳಿಯ ಕಾರ್ಯಾಲಯವಿದೆ. ಇದರ ಹಿಂದೆ ಗೋಶಾಲೆ ಇದ್ದು ಇಲ್ಲಿ ಹಸುಗಳನ್ನು ಮತ್ತ ಕೆಲವು ಪ್ರಭೇದಗಳ ಸಾಕು ಪ್ರಾಣಿ ಸಾಕಲಾಗಿದೆ. ಗೋಶಾಲೆಯ ಬಲಗಡೆ ನೀರಿನ ಕೊಳ ನಿರ್ಮಾಣ ಮಾಡಲಾಗಿದೆ. ಸುಂದರ ಪರಿಸರ, ಸ್ವಚ್ಛ ವಾತಾವರಣ ಇಡಲು ಶರೀಫರ ಸ್ವಯಂ ಸೇವಕ ಭಕ್ತರ ವರ್ಗ ಸದಾ ಕಾಲ ಕಸ ಗುಡಿಸುತ್ತಾರೆ. ಇವರು ಶರೀಫರ ಕೃಪೆಗೆ ಒಳಗಾಗುತ್ತಾರೆ.
ಶರೀಫರ ಗದ್ದುಗೆ ಬಲ ಭಾಗಕ್ಕೆ ರಂಗ ಮಂದಿರ ಗ್ಯಾಲರಿಯಿದೆ. ಇಲ್ಲಿ ಹಲವಾರು ಶರೀಫರಿಗೆ ಸಂಬಂಧಿಸಿದ ಆಧ್ಯಾತ್ಮಿಕ ಚಿಂತನ ಮಂತನ, ನೃತ್ಯ, ಹಾಡು, ಸಂಗೀತ, ನಾಟಕ, ಸಾಹಿತ್ಯ, ಕಲೆ, ಸಾಂಸ್ಕೃತಿಕ ವೈಚಾರಿಕತೆ, ಆಧ್ಯಾತ್ಮ ನಡೆಯುತ್ತವೆ. ಇಲ್ಲಿ ಶರೀಫರು ಕುಳಿತು ತಂಬೂರಿ ಬಾರಿಸುವ ಉಬ್ಬು ಚಿತ್ರ ನೋಡಬಹುದು. ಹಾಗೆ ಆವರಣದ ಮುಂದೆ ಬಂದರೆ ಪೂಜಾ ಪುನಸ್ಕಾರ ಸಾಮಗ್ರಿಯ ಅಂಗಡಿ, ಹೋಟೆಲ್, ನೀರಿನ ವ್ಯವಸ್ಥೆ ಕಾಣಬಹುದು. ಬರಹೋಗುವ ಭಕ್ತರು ತಂದ ಆಹಾರ ಸೇವಿಸಲು ಕಟ್ಟೆ, ಬಿಡಾರ ಇದೆ. ಜವಳ ತೆಗೆಸುವರು, ಮಕ್ಕಳ ತೂಲಾಬಾರದ ಬೇಡಿಕೆ ಹರಿಕೆ ತೀರಿಸಲು ಬರುತ್ತಾರೆ. ಈ ಶರೀಫಗಿರಿಗೆ ಬಂದು ಆಧ್ಯಾತ್ಮದಲ್ಲಿ ತಲೀನರಾದರೆ ಚಿಂತೆ, ಬೇಸರ, ನಕಾರಾತ್ಮಕ ಶಕ್ತಿ ಬಿಟ್ಟು ಹೋಗುತ್ತವೆ. ಅಷ್ಟೊಂದು ಶಕ್ತಿ ಸ್ಥಳವಾಗಿದೆ ಈ ಶರೀಫಗಿರಿ. ಪ್ರತಿ ವರ್ಷ ಶಿವರಾತ್ರಿಯ ಅಮವಾಸ್ಯೆ ಮುಗಿದ ನಂತರ 10 ನೇ ದಿನಕ್ಕೆ ಶರೀಫ ಸಾಹೇಬರ ಜಾತ್ರೆ ನಡೆಯುತ್ತದೆ. ಅನೇಕ ಕಲಾವಿದರ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿ ಕೊಡುತ್ತವೆ. ಅಸಂಖ್ಯಾತ ಭಕ್ತರು ಈ ಜಾತ್ರೆಗೆ ಸೇರುತ್ತಾರೆ. ಈ ಜಾತ್ರೆ ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಯಲ್ಲಿ ಒಂದಾಗಿದೆ.
-: *ಸೌಕರ್ಯಕ್ಕೆ ಒತ್ತು* :-
ಶರೀಫಗಿರಿಯು ಸರ್ವ ಧರ್ಮದ ಭಾವೈಕ್ಯತೆಯ ಕ್ಷೇತ್ರವಾಗಿದೆ. ಇಲ್ಲಿ ಜಾತಿ ಮತಯನ್ನದೆ ಎಲ್ಲ ಸರ್ವ ಜನಾಂಗದವರು ಬರುತ್ತಾರೆ. ಆದ್ದರಿಂದ ಮೂಲಭೂತ ಸೌಕರ್ಯ ಹೆಚ್ಚಿಗೆ ಮಾಡಿ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕಿದೆ. ಬಂದು ಹೋಗುವರಿಗೆ ವಸತಿ, ಶೌಚಾಲಯ, ಕುಡಿಯುವ ನೀರು, ಸಾರಿಗೆ ಸಂಪರ್ಕ, ನೈರ್ಮಲ್ಯ ಇತ್ಯಾದಿ ಕಲ್ಪಿಸಬೇಕು. ಈ ಪ್ರದೇಶದ ಸೌಂದರ್ಯಕರಣ ಮತ್ತು ಪ್ರಚಾರಕ್ಕೆ ಒತ್ತು ನೀಡಬೇಕು. ಶರೀಫ ಸಾಹೇಬರು ಸಾವಿರಾರು ಹಾಡು ಹಾಡಿದ್ದಾರೆ. ಅದರಲ್ಲಿ ಕೆಲವು ಮಾತ್ರ ಸಿಕ್ಕಿವೆ. ಉಳಿದ ಪದಗಳು ಜನಪದದಲ್ಲಿ ಉಳದಿವೆ. ಕೆಲವು ಇನ್ನೂ ಹಾಡಿನಲ್ಲಿ ಜನರ ಬಾಯಲ್ಲೆ ಇವೆ. ಅವುಗಳನ್ನು ಸಂಗ್ರಹಿಸಿ ಪುಸ್ತಕ ರೂಪಕ್ಕೆ ತರಬೇಕಿದೆ. ಅವರ ಜೀವನ ಕುರಿತು ಬಹಳಷ್ಟು ಅಧ್ಯಯನ ವಾಗಬೇಕಿದೆ. ಶರೀಫರ ಸಾಹಿತ್ಯ ಜನರಿಗೆ ಪರಿಚಯಿಸಲು ಗ್ರಂಥಾಲಯ ರಚನೆ ಮಾಡಿ ಪ್ರವಾಸಿಗರಿಗೆ ನೀಡಬೇಕು. ಸಾಕ್ಷ ಚಿತ್ರ, ಜೀವನ ಕುರಿತು ಪೋಟೋ ಗ್ಯಾಲರಿ, ಮಾದರಿ, ಪ್ರತಿಮೆಯ ರಚನೆ ಮಾಡಿ ಜೀವನ ವೃತ್ತಾಂತ ನಿರ್ಮಿಸಬೇಕಿದೆ. ಯುವ ಜನರಿಗೆ ಶರೀಫರ ತತ್ತ್ವ ಮತ್ತು ಸರ್ವ ಧರ್ಮದ ಅರಿವಿನ ಅಗತ್ಯವಿದೆ. ಆದ್ದರಿಂದ ಇಲ್ಲಿ ಪ್ರವಾಸೋದ್ಯಮ ಮತ್ತು ಅಧ್ಯಯನಕ್ಕೆ ಒತ್ತು ನೀಡಬೇಕು. ಒಟ್ಟಿನಲ್ಲಿ ಶರೀಫಗಿರಿ ಅತ್ಯದ್ಭುತವಾಗಿದೆ.
ಲೇಖಕರು:- ಶರೀಫ ಗಂಗಪ್ಪ ಚಿಗಳ್ಳಿ(ಸಾಹಿತಿ)
ಸಾ/ಬೆಳಗಲಿ ತಾ/ಹುಬ್ಬಳ್ಳಿ ಜಿ/ಧಾರವಾಡ
9902065126
"'ಹವೇಲಿ ದೊರೆಸಾನಿ 'ಕಥಾ ಸಂಕಲನದ ಮೊದಲ ಕಥೆ,'ಅನ್ಪಡ ಕಂಟೆವ್ವ ', ಊರಿಗೆ ಶಾಲೆ ಬರಬೇಕೆಂದು ಊರ...
"ಜಮ್ಮು-ಕಾಶ್ಮೀರದ ಬೇಸಿಗೆ ತಂಗು ಧಾಮವಾದ ದಲ್ ಲೇಕ್ ಶ್ರೀನಗರದ ಒಳಗಿರುವ ಒಂದು ಸಿಹಿನೀರಿನ ಸರೋವರ. ಪ್ರವಾಸಿಗರು ಮ...
"ಭುಜಂಗಾಚಾರ್ಯ ಎನ್ನುವುದು ಒಂದು ಶಕ್ತಿಯಾಗಿ ಆ ಕುಟುಂಬವನ್ನು ಕಾಪಾಡುತ್ತದೆ. ಒಂದು ಆದರ್ಶವಾಗಿ ಮನೆಯ ಹಿರಿ ಮಗನ ಕ...
©2025 Book Brahma Private Limited.