Date: 22-10-2022
Location: ಬೆಂಗಳೂರು
ಒಟ್ಟು ಕನ್ನಡ ಪದಕೋಶದಲ್ಲಿ ಯಾವ ಅಕ್ಶರದ ಎಶ್ಟು ಪದಗಳು ಇವೆ ಎಂಬುದು ಗೊತ್ತಿಲ್ಲ. ಅಂತದೊಂದು ವಿಸ್ತ್ರುತವಾದ ಅದ್ಯಯನ ಅವಶ್ಯವಿದೆ ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಕನ್ನಡ ಪದಗಳ ಸ್ವರೂಪವನ್ನು ಚರ್ಚಿಸಿದ್ದಾರೆ.
ಕನ್ನಡದಾಗ ಪದಗಳು ಇವೆ. ಮನಿ, ಹೊಲ ಇಂತವು, ಹೋಗು, ಬರು ಇಂತವು, ಕರಿ, ಬಿಳಿ ಇಂತವು, ನಾನು, ನೀನು ಇಂತವು, ಒಂದು, ಎರಡು ಇಂತವು ಹೀಗೆ ಇನ್ನೂ ಮೊದಲಾದವು. ದಿನಜೀವನದಲ್ಲಿ ಈ ಮತ್ತು ಇಂತ ಸಾವಿರಾರು ಪದಗಳನ್ನು ನಾವು ಬಳಸುತ್ತಿರುತ್ತೇವೆ. ಬರವಣಿಗೆಯನ್ನು ಉಜ್ಜುಗವಾಗಿಸಿಕೊಂಡವರು ಇನ್ನೂ ಹೆಚ್ಚಿನ ಪದಗಳನ್ನು ಬಳಸುತ್ತಿರುತ್ತಾರೆ. ಇವತ್ತು ನಾವು ಬಳಸುವ ಪದಗಳಲ್ಲಿ ಎಶ್ಟು ಅಕ್ಶರಗಳ ಪದಗಳು ಇವೆ ಎಂಬುದನ್ನು ವಿಚಾರಿಸೋಣ.
ಕೇಶಿರಾಜ ಒಂದೆಡೆ ಕನ್ನಡದ ನಾಮಪದಗಳನ್ನು ಮಾತನಾಡುತ್ತ ಒಂದಕ್ಕರದಿಂದ ಅಯ್ದಕ್ಕರದವರೆಗೆ ಕನ್ನಡದಾಗ ಪದಗಳು ಇವೆ ಎಂದು ಹೇಳುತ್ತಾನೆ. ಕಲ್, ಕಾಲು, ಕವಣೆ, ಕಸವರ, ಕಸಬರಿಗೆ ಹೀಗೆ ಒಂದಕ್ಕರದಿಂದ ಅಯ್ದಕ್ಕರದವರೆಗಿನ ಪದಗಳನ್ನು ನೋಡಬಹುದು. ಅಂದರೆ ಒಂದು ಪದದಲ್ಲಿ ಎಶ್ಟು ಅಕ್ಶರಗಳು ಇರುತ್ತವೆ ಎಂಬುದು ಇಲ್ಲಿ ವಿಚಾರ. ಇಂದಿನ ಕನ್ನಡದವನ್ನು ಗಮನದಲ್ಲಿ ಇಟ್ಟುಕೊಂಡು ಕನ್ನಡದ ಪದಗಳು ಎಶ್ಟು ಅಕ್ಶರದವು ಇವೆ ಎಂಬುದನ್ನು ಯೋಚಿಸಬಹುದು.
ಒಂದು ಅಕ್ಶರದ ಪದಗಳು ಇಂದಿನ ಕನ್ನಡದಲ್ಲಿ ಇವೆಯೆ ಎಂದಾಗ ಉತ್ತರ ತುಸು ಕಶ್ಟ. ಬಾ, ತಾ, ಈ (ಜನ್ಮಕೊಡು) ಇಂತ ಕೆಲವೆ ಕೆಲವು ಕ್ರಿಯಾಪದಗಳನ್ನು ಬಿಟ್ಟರೆ ಇಂದಿನ ಕನ್ನಡದಲ್ಲಿ ಒಂದಕ್ಕರದ ಪದಗಳು ಇಲ್ಲ. ಹೂ ಇಂತ ಒಂದೆರಡು ನಾಮಪದಗಳು ಸಿಗಬಹುದು. ಪಡುಗನ್ನಡದ ಕೆಲವು ಕನ್ನಡಗಳಲ್ಲಿ ಆ (ಆಕಳು) ಎಂಬ ಪದ ಇದೆ ಎಂಬ ಮಾಹಿತಿ ಇದೆ. ಆದರೆ ಎಲ್ಲೆಡೆ ಅದು ಬಳಕೆಯಲ್ಲಿಲ್ಲ. ಹಾಗಾದರೆ ಕನ್ನಡದಾಗ ಒಂದಕ್ಕರದ ಪದಗಳು ತೀರಾ ಕೆಲವೆ ಎಂದೆನ್ನಬಹುದು.
ಹಳಗನ್ನಡದಾಗ ಒಂದು ಅಕ್ಶರದ ರಚನೆಯನ್ನು ಹೊಂದಿರುವ ದೊಡ್ಡ ಸಂಕೆಯ ಪದಗಳು ಬಳಕೆಯಲ್ಲಿದ್ದವು. ಪದದ ಕೊನೆಯಲ್ಲಿ ವ್ಯಂಜನವು ಇದ್ದು ಒಂದೆ ಸ್ವರವನ್ನು ಹೊಂದಿರುವ ಸ್ವರಮೊದಲಿನ ಅಳ್, ಆಳ್, ಎನ್, ಏನ್, ಉಣ್, ಊರ್ ಮೊದಲಾದ ಪದಗಳು ವ್ಯಂಜನಮೊದಲಿನ ಕಣ್, ಕಾಣ್, ಕಲ್, ಕಾಲ್, ಸಲ್, ಸಾಲ್, ಸೊಲ್, ಸೋಲ್ ಮೊದಲಾದ ಪದಗಳು ಇದ್ದವು. ಕನ್ನಡದಲ್ಲಿ ಬಹುಹಿಂದೆ ವ್ಯಂಜನಕೊನೆ ಪದಗಳು ಅಂದರೆ ಪದದ ಕೊನೆಯಲ್ಲಿ ವ್ಯಂಜನವನ್ನು ಹೊಂದಿರುವ ಪದಗಳೆಲ್ಲವೂ ಸ್ವರಕೊನೆಯಾಗಿ ಅಂದರೆ ಪದದ ಕೊನೆಯ ವ್ಯಂಜನದ ಮೇಲೆ ಒಂದು ಸ್ವರವನ್ನು ಪಡೆದುಕೊಂಡು ಬೆಳೆದಿವೆ. ಅಂದರೆ ಅಳ್>ಅಳು, ಆಳ್>ಆಳು, ಉಣ್>ಉಣ್ಣು, ಊರ್>ಊರು, ಎನ್>ಎನ್ನು, ಏನ್>ಏನು ಮೊದಲಾದ ಪದಗಳು ವ್ಯಂಜನಮೊದಲಿನ ಕಣ್>ಕಣ್ಣು, ಕಾಣ್>ಕಾಣು, ಕಲ್>ಕಲ್ಲು, ಕಾಲ್>ಕಾಲು, ಸಲ್>ಸಲ್ಲು, ಸಾಲ್>ಸಾಲು, ಸೊಲ್>ಸೊಲ್ಲು, ಸೋಲ್>ಸೋಲು ಎಂದು ಬೆಳೆದಿವೆ.
ಕನ್ನಡ ನಿಗಂಟಿನಲ್ಲಿ ಕಂಡುಬರುವ ಅತಿ ದೊಡ್ಡ ಸಂಕೆಯ ಪದಗಳು ಎರಡಕ್ಕರದ ಮತ್ತು ಮೂರಕ್ಕರದವು ಆಗಿವೆ. ಕಟ್ಟೆ, ತಟ್ಟೆ, ಕಟ್ಟು, ಕುಟ್ಟು ಮೊದಲಾದ ಎರಡಕ್ಕರದ ಮತ್ತು ಕಡಲು, ಕಮಲ, ಕೊನರು, ಕೊಸರು ಎಂಬ ಮೂರಕ್ಕದ ಪದಗಳನ್ನು ಕಾಣಬಹುದು.
ಈ ಮೇಲೆ ಹೇಳಿದಂತೆ ಹೆಚ್ಚಿನ ಒಂದಕ್ಕರದ ಪದಗಳು ಪದಕೊನೆಯಲ್ಲಿ ಸ್ವರವೊಂದನ್ನು ಪಡೆದುಕೊಂಡು ಎರಡಕ್ಕರದ ಪದಗಳಾಗಿ ಬೆಳೆದಿವೆ. ಆದರೆ ಎಲ್ಲ ಎರಡಕ್ಕರದ ಪದಗಳ ಬೆಳವಣಿಗೆಯನ್ನು ಹೀಗೆ ಸಾಮಾನ್ಯೀಕರಿಸಲು ಬಾರದು. ವಿಬಿನ್ನ ಆಕ್ರುತಿಮಾತ್ಮಕ ಪ್ರಕ್ರಿಯೆಗಳಲ್ಲಿ ಬೆಳೆದ ಎರಡಕ್ಕರದ ಪದಗಳೂ ಇವೆ.
ಇನ್ನು ಮೂರಕ್ಕರದ ಪದಗಳನ್ನು ಗಮನಿಸಿದರೆ, ಸಹಜವಾಗಿ ಇವು ಕೂಡ ಎಂತದೊ ಇತಿಹಾಸಿಕ ಬೆಳವಣಿಗೆಯಲ್ಲಿ ಬೆಳೆದು ಬಂದಿವೆ. ಕೊರಳ್ ಎಂಬ ಪದವು ಎರಡು ಸ್ವರಗಳನ್ನು ಹೊಂದಿ ಎರಡಕ್ಕರದ ಪದವಾಗಿ ಹಳಗನ್ನಡದಲ್ಲಿ ಬಳಕೆಯಲ್ಲಿದ್ದಿತು. ಆನಂತರ ಕೊನೆಯಲ್ಲಿ ಸ್ವರವನ್ನು ಪಡೆದುಕೊಂಡು ಕೊರಳು ಎಂದು ಬೆಳೆದು ಮೂರಕ್ಕರದ ಪದವಾಗಿದೆ. ಇಂತದೆ ಬೆಳವಣಿಗೆಯನ್ನು ಹೆಚ್ಚಿನ ಪದಗಳಿಗೆ ಹೇಳಬಹುದು. ಇನ್ನೂ ಹೆಚ್ಚಿನ ಮೂರಕ್ಕರದ ಪದಗಳು ವಿಬಿನ್ನವಾದ ಆಕ್ರುತಿಮಾ ಹಂತದ ಪ್ರಕ್ರಿಯೆಗಳಲ್ಲಿ ಬೆಳೆದಿವೆ. ಇವುಗಳನ್ನು ವಿಶದವಾಗಿ ಅವಗಾಹಿಸಬೇಕು. ಒಂದೊಂದು ರಚನೆಯೂ ಒಂದೊಂದು ವಿಬಿನ್ನ ಚರಿತ್ರೆಯನ್ನು ಒಳಗೊಂಡಿರುತ್ತದೆ. ಉಗುಳು, ಉರುಳು, ಕರುಳು, ಮರುಳು, ಒಡಲು, ಕಡಲು, ಮಡಿಲು, ಸೊಂಡಿಲು ಇಂತ ಹಲಬಗೆಯ ರಚನೆಗಳನ್ನು ಹೊಂದಿರುವವು ಇವೆ. ಈ ಎಲ್ಲ ಪದಗಳಲ್ಲಿ –ಅಲು ಎಂಬ ರೂಪವೊಂದು ಸಾಮಾನ್ಯವಾಗಿ ಕಂಡುಬರುತ್ತದೆ. ಇಂತದೆ ರಚನೆಯ ನೂರಾರು ಪದಗಳು ಕಾಣಿಸುತ್ತವೆ. –ಗೆ, -ಸು, -ಕೆ ಹೀಗೆ ಹಲವು ರೂಪಗಳು ಇಂತಾ ಪದರೂಪಸರಣಿಯನ್ನು ಕಟ್ಟುತ್ತವೆ. ಇವುಗಳು ಪ್ರತ್ಯಯಗಳಾಗಿದ್ದು ಪದಗಳ ಮೇಲೆ ಬಂದು ಸೇರಿ ಪದರೂಪವನ್ನು ಬೇರೆಯಾಗಿಸಿ ಬೆಳೆಸಿವೆ. ಇವುಗಳೊಟ್ಟಿಗೆ ಸಮಾಸ ಪ್ರಕ್ರಿಯೆಯಲ್ಲಿ ಬೆಳೆದ ದೊಡ್ಡ ಸಂಕೆಯ ಮೂರಕ್ಕರದ ಪದಗಳೂ ಇವೆ. ಅಂದರೆ ಎರಡು ಪದಗಳು ಸೇರಿ ಇನ್ನೊಂದು ಪದವಾಗುವ ಸಮಾಸ ಪ್ರಕ್ರಿಯೆ. ಅಂಗಾಲು, ಇದ್ದಿಲು, ಬಾಗಿಲು, ಹಿತ್ತಿಲು ಮೊದಲಾದವು ತಮ್ಮೊಳಗೆ ಎರಡೆರಡು ಪದಗಳನ್ನು ಹೊಂದಿ ಸಮಾಸಪದಗಳಾಗಿವೆ.
ಇದಕ್ಕಿಂತ ಕಡಿಮೆ ಪದಗಳು ನಾಲ್ಕಕ್ಕರದವು ಇರುತ್ತವೆ. ಕಸವರ, ಕಳವಳ ಮೊದಲಾದವು. ಇವು ಸಾಮಾನ್ಯವಾಗಿ ವಿಬಿನ್ನ ರಚನೆಯನ್ನು ಪಡೆದುಕೊಂಡಿರುತ್ತವೆ. ಇದರಲ್ಲಿ ಪದ ಮತ್ತು ಪ್ರತ್ಯಯಗಳು ಸೇರಿರುವ ಪದಗಳು ಇರಬಹುದು. ಉದಾ.: ಕನಸಿಗ, ಕೂಲಿಕಾರ. ಎರಡು ಪದಗಳು ಸೇರಿ ಸಮಾಸವಾದ ಪದಗಳು ಇರಬಹುದು. ಉದಾ.: ಕುಡುಗೋಲು, ಸುಡುಗಾಡು, ಹರಿಗೋಲು.
ಇನ್ನು ನಾಲ್ಕಕ್ಕರದ ಪದಗಳಿಗಿಂತ ಕಡಿಮೆ ಪದಗಳು ಅಯ್ದಕ್ಕರದ ಕನಸುಗಾರ, ಕರುಣಾಮಯಿ ಇಂತ ಪದಗಳು ಇರುತ್ತವೆ. ಅಯ್ದಕ್ಕರಕ್ಕಿಂತ ಹೆಚ್ಚು ಅಕ್ಕರ ಇರುವ ಪದಗಳು ತುಂಬಾ ಕಡಿಮೆ ಇರುತ್ತವೆ. ಇಲ್ಲಿಯೂ ಪದ ಮತ್ತು ಪ್ರತ್ಯಯಗಳು ಸೇರಿರುವ ಮತ್ತು ಎರಡು ಪದಗಳು ಸೇರಿ ಬೆಳೆದ ಪದಗಳನ್ನು ಕಾಣಬಹುದು. ಪದ+ಪ್ರತ್ಯಯ ರಚನೆ ಇರುವ ಅಯ್ದಕ್ಕರದ ಪದಗಳು, ಸೊಗಸುಗಾರ, ಮೆರವಣಿಗೆ ಮೊ. ಎರಡು ಪದಗಳು ಸೇರಿ ಆದವುಗಳು, ಪಳೆಯುಳಿಕೆ, ಕಲಬೆರಕೆ ಮೊ.
ಆರಕ್ಕರದ ಪದಗಳೂ ಇಂದು ಕನ್ನಡದಾಗ ಕಡಿಮೆ ಸಂಕೆಯಲ್ಲಾದರೂ ಸಾಮಾನ್ಯವಾಗಿ ಕಂಡುಬರುತ್ತವೆ. ಕರುಣಾಜನಕ, ಕಳವಳಕಾರಿ ಇಂತಾ ಪದಗಳನ್ನು ಕಾಣಬಹುದು. ಹಸಿರೀಕರಣ, ಡಾಂಬರೀಕರಣ, ಜಾಗತೀಕರಣ ಮೊದಲಾದಂತ ಇತ್ತೀಚಿನ ಪದಗಳ ಬೆಳವಣಿಗೆಯಲ್ಲಿ ಇಂತ ಪದಗಳು ದೊಡ್ಡ ಸಂಕೆಯಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು. ಎರಡು ಪದಗಳನ್ನು ಸೇರಿಸಿ ಕಗೋಳವಿಗ್ನಾನ ಇಂತ ಸಾಕಶ್ಟು ಪದಗಳನ್ನು ಕೂಡ ಇಂದು ಬಳಸಲಾಗುತ್ತಿದೆ.
ಆದರೆ, ಒಟ್ಟು ಕನ್ನಡ ಪದಕೋಶದಲ್ಲಿ ಯಾವ ಅಕ್ಶರದ ಎಶ್ಟು ಪದಗಳು ಇವೆ ಎಂಬುದು ಗೊತ್ತಿಲ್ಲ. ಅಂತದೊಂದು ವಿಸ್ತ್ರುತವಾದ ಅದ್ಯಯನ ಅವಶ್ಯವಿದೆ.
ಇದರಿಂದ ಏನು ಉಪಯೋಗ ಎಂಬ ಪ್ರಶ್ನೆ ಸಹಜವಾಗಿ ಬರಬಹುದು. ಇಂದಿನ ತಂತ್ರಗ್ನಾನಕ್ಕೆ, ಅಂದರೆ ವಿದ್ಯನ್ಮಾನ ಸಾದನಗಳಲ್ಲಿ ಕನ್ನಡವನ್ನು ಬಳಸುವುದಕ್ಕೆ ಪೂರಕವಾಗಿ ಮಾಡಬೇಕಾದ ಶೋದಗಳಿಗೆ, ಅಂತರ‍್ಜಾಲದಲ್ಲಿ ಕನ್ನಡ ಬಳಕೆಯನ್ನು ಇನ್ನಶ್ಟು ಹೆಚ್ಚಿಸುವುದಕ್ಕೆ ಈ ಬಗೆಯ ಅದ್ಯಯನಗಳು ಅವಶ್ಯ. ಇನ್ನೊಂದೆಡೆ ಈ ಪದಗಳ ರಚನೆಯನ್ನು ತಿಳಿದುಕೊಳ್ಳುವುದರಿಂದ ಕನ್ನಡ ಬಾಶೆಯ ರಚನೆ, ಇತಿಹಾಸ ಮತ್ತು ಬೆಳವಣಿಗೆಯನ್ನು ತಿಳಿದುಕೊಳ್ಳುವುದಕ್ಕೆ ಸಾದ್ಯವಾಗುತ್ತದೆ.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಪದ ರಚನೆಯ ಗಟಕಗಳು
ದ್ವನಿ ಎಂಬ ಜಗತ್-ವಲಯ
ಇಂದಿನ ಬಳಕೆ ಕನ್ನಡಗಳ ದ್ವನಿವಿಶಿಶ್ಟತೆ
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...
"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...
"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...
©2024 Book Brahma Private Limited.