ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ


"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rationality ಇದ್ದ ಪ್ರಾಮುಖ್ಯತೆಯನ್ನು ಅವರು ಬಳಸುವ ಸಂಕಲ್ಪ ಬಲ, ಕೆತ್ತನೆ, ಪರಂಪರೆಯನ್ನು ಕುರಿತ ಅವರ ಗ್ರಹಿಕೆಗಳ ಮೂಲಕ ವ್ಯಕ್ತಪಡಿಸಿದರೆ, ನಂತರ "ಈ ದೊಡ್ಡವರ ಸಹವಾಸ ಸಾಕೋ ಸಾಕು," ಆದರ್ಶ ವ್ಯಕ್ತಿಗಳಿಂದ, ಸಾಮಾನ್ಯರ ಕಡೆಗೆ ಅವರ ಗಮನ ಹರಿಸಿದರು," ಎನ್ನುತ್ತಾರೆ ರಘುನಾಥ್ ಕೃಷ್ಣಾಮಾಚಾರ್. ಅವರು ಕೆ. ಸತ್ಯನಾರಾಯಣ ಅವರ ‘ಮರುಕಳಿಸಿದ ಮಾರ್ದವತೆ’ ಕೃತಿ ಕುರಿತು ಬರೆದ ವಿಮರ್ಶೆ.

ಅಡಿಗರ ಕಾವ್ಯ ದಲ್ಲಿ ಮೊದಲ ಘಟ್ಟ ದಲ್ಲಿ ಇದ್ದ ಭಾವಾಭಿವ್ಯಕ್ತಿ ನಡುವೆ ಬುದ್ದಿ ಗಮ್ಯತೆಯ ಕಡೆಗೆ ತಿರುಗಿ ನಂತರ ಮೊದಲಿನ ಭಾವಗಮ್ಯತೆಯ ಕಡೆಗೆ ತಿರುಗಿದ್ದನ್ನು ಮರಳಿ ಬಂದ ಮಾರ್ದವತೆ ಎಂದು ಲೇಖಕರು ಸಾಧಾರವಾಗಿ ಗುರುತಿಸಿರುವುದು ಈ ಕೃತಿಯ ಕೇಂದ್ರ. ಆದರೆ ಅಡಿಗರ ಕಾವ್ಯದಲ್ಲಿ ಇದೊಂದು ಎಳೆ ಮಾತ್ರ ಎಂಬ ಅರಿವು ಕೂಡ ಲೇಖಕರಿಗೆ ಇರುವುದು ಅವರ ಸಮತೋಲನ ಗ್ರಹಿಕೆಗೆ ಸಾಕ್ಷಿ.

ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rationality ಇದ್ದ ಪ್ರಾಮುಖ್ಯತೆಯನ್ನು ಅವರು ಬಳಸುವ ಸಂಕಲ್ಪ ಬಲ, ಕೆತ್ತನೆ, ಪರಂಪರೆಯನ್ನು ಕುರಿತ ಅವರ ಗ್ರಹಿಕೆಗಳ ಮೂಲಕ ವ್ಯಕ್ತಪಡಿಸಿದರೆ, ನಂತರ "ಈ ದೊಡ್ಡವರ ಸಹವಾಸ ಸಾಕೋ ಸಾಕು," ಆದರ್ಶ ವ್ಯಕ್ತಿಗಳಿಂದ, ಸಾಮಾನ್ಯರ ಕಡೆಗೆ ಅವರ ಗಮನ ಹರಿಸಿದರು. ಅದರಿಂದಾಗಿ ಅವರ ಕಣ್ಣಿಗೆ ಈಗ ಹರಕಂಗಿಯ ರೈತ ಭಾಗವತ, ಕಾರ್ಖಾನೆಯ ಕೂಲಿಗಳ ಕಡೆಗೆ ತಿರುಗಿತು. ಅವರ ಸುವರ್ಣ ಪುತ್ಥಳಿಯಲ್ಲಿ ಚೆಲುವೆ ಹೆಣ್ಣು, ನಾಯಿ ಮರಿಗಳು ಕೂಡ ಅವರ ಕಾವ್ಯವಸ್ತುಗಳಾಗಿದ್ದು ಅವರ ಕಾವ್ಯದಲ್ಲಿ ಮರಳಿ ಬಂದ ಮಾರ್ದವತೆಗೆ ನಿದರ್ಶನಗಳು ಎಂದು ಸಮರ್ಥವಾಗಿ ಮಂಡಿಸಿದ್ದಾರೆ.

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ ಎಂಬ ಅಡಿಗರ ನಿಲುವನ್ನು ಇಲ್ಲಿ ಎತ್ತಿ ಹಿಡಿದು ತೋರಿಸಲಾಗಿದೆ. ಅದರ ಸಮರ್ಥ ಬಳಕೆಯ ಮೂಲಕ ಮಾತ್ರ ಕವಿಯಾದವನು, ತನ್ನ ಸಮಾಜದ ಸೇವೆ ಸಲ್ಲಿಸಲು ಸಾಧ್ಯ, ಎಂದು ಅದನ್ನು ತನ್ನ ಕಾವ್ಯ ಸಾಧಿಸಿದೆ, ಎಂಬ ಅವರ ಆತ್ಮ ವಿಶ್ವಾಸವನ್ನು ಉಲ್ಲೇಖ ಮಾಡಿದ್ದಾರೆ.

ಅಡಿಗರ ಕಾವ್ಯ ಮತ್ತು ನವೋದಯ ಕಾಲದ ಕವಿಗಳಾದ ಕುವೆಂಪು ಮತ್ತು ಬೇಂದ್ರೆಯವರ ಮತ್ತು ಕಾರಂತರ ನಡುವಿನ ಸಂಬಂಧಾಂತರಗಳ ಚರ್ಚೆ ಕೂಡ ಇಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾರೆ. ಕಾವ್ಯದಲ್ಲಿ rational ಆದ ಅಡಿಗರು ಅದನ್ನು, ಕುವೆಂಪು ಅವರ ಹಾಗೆ ಸಾಮಾಜಿಕ ಹಾಗೂ ರಾಜಕೀಯಕ್ಕೆ ಅನ್ವಯಿಸುವುದಿಲ್ಲ. ಈ ದೃಷ್ಟಿಯಿಂದ ಅಡಿಗರ ಮತ್ತು ಕಾರಂತರಲ್ಲಿ ಸಾಮ್ಯವಿದೆ. ಅವರಿಬ್ಬರದು ವೈಯಕ್ತಿಕ ವೈಚಾರಿಕತೆ ಎಂಬ ಬಸವರಾಜ ಕಲ್ಗುಡಿ ಅವರ ನಿಲುವನ್ನು ಇವರು ಸಮರ್ಥಿಸುತ್ತಾರೆ. ಇದಕ್ಕೆ ಅವರು ಕೊಡುವ ಕಾರಣವೆಂದರೆ ಸ್ವಾತಂತ್ರೋತ್ತರವನ್ನು ಇಬ್ಬರೂ ಆದರ್ಶಗಳ ಅಧಃಪತನವಾಗಿ ಮಾತ್ರ ಕಂಡಿರುವುದು.ಅವರ 'ನೆಹರೂ ನಿವೃತ್ತರಾಗುವುದಿಲ್ಲ' ಕವನವನ್ನು ಇದಕ್ಕೆ ನಿದರ್ಶನ ಎಂದು ಉಲ್ಲೇಖ ಮಾಡಿದ್ದಾರೆ. ಬೇಂದ್ರೆಯವರ ಕಾವ್ಯದಲ್ಲಿ ಸಮೃದ್ಧವಾದ ಪರಂಪರೆ ಅಡಿಗರಲ್ಲಿ ಕಾಣೆಯಾಗಿದ್ದು, ಇವರ ಏಕಮುಖ ಗ್ರಹಿಕೆಯ ಮಿತಿಯನ್ನು ಸರಿಯಾಗಿ ಗುರುತಿಸಿದ್ದಾರೆ. ಅಡಿಗರ ಸುವರ್ಣ ಪುತ್ಥಳಿ ಕವನ ಸಂಕಲನದ ಪ್ರಕಟಣೆಯಲ್ಲಿ ಇವರ ಪಾತ್ರ, ಮತ್ತು ಅದಕ್ಕೆ ಸಿಕ್ಕ ಒಳ್ಳೆಯ ಸ್ಪಂದನವನ್ನು ದಾಖಲಿಸಿದ್ದಾರೆ.

ಅವರ ಜತೆ ಇವರಿಗೆ ಇದ್ದ ವೈಯಕ್ತಿಕ ಸಂಬಂಧವನ್ನು ಇಲ್ಲಿ ನಿರೂಪಿಸಿದ್ದಾರೆ. ಪ್ರಭುತ್ವದ ಜತೆಗೆ ಯಾವುದೇ ಬಗೆಯ ರಾಜಿಯನ್ನು ಮಾಡಿಕೊಳ್ಳದ ಅವರ ಧೀರ ನಿಲುವನ್ನು ಸಾಧಾರವಾಗಿ ಮಂಡಿಸಿದ್ದಾರೆ. ಆದರೆ ಪ್ರಜಾಪ್ರಭುತ್ವವಾದಿಯಾದ ಅಡಿಗರು, ಅದಕ್ಕೆ ವಿರುದ್ಧವಾದ ಜನಸಂಘದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ ವಿರೋಧಾಭಾಸವನ್ನು ದಾಖಲಿಸಿರುವುದು, ಇವರ ವಸ್ತುನಿಷ್ಠೆಗೆ ಸಾಕ್ಷಿ. ಈ ಕೃತಿಯ ಸಾಧನೆ ಎಂದರೆ ಅಡಿಗರ ಕಾವ್ಯದ ನವ್ಯಾನಂತರದ ಬೆಳವಣಿಗೆಯನ್ನು ,ಹೊಸ ಪರಿಪ್ರೇಕ್ಷ್ಯದಿಂದ ನೋಡಲು ಒತ್ತಾಯಿಸಿರುವುದು. ಮತ್ತು ಅದಕ್ಕೆ ಬೇಕಾದ ಮಾನದಂಡಗಳನ್ನು ಅವರ ಕಾವ್ಯದ ಆಧಾರದ ಮೇಲೆ ನಿರೂಪಿಸಿರುವುದು. ಅವರ ಕಾವ್ಯದ ಸಾಧನೆ ಮತ್ತು ಮಿತಿಗಳೆರಡನ್ನು ಅವರ ವ್ಯಕ್ತಿತ್ವದ ಅಭಿವ್ಯಕ್ತಿಯಾಗಿ ಗುರುತಿಸಿರುವುದು. ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಲೇಖನಗಳನ್ನು ಇಲ್ಲಿ ಒಟ್ಟಿಗೆ ತಂದು ಪ್ರಕಟಿಸಿರುವುದರಿಂದ, ಸಹಜವಾಗಿಯೇ ಇವುಗಳ ಉಲ್ಲೇಖಗಳ ಪುನರುಕ್ತಿ ದೋಷ ಎದ್ದು ಕಾಣುತ್ತದೆ.

MORE FEATURES

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...

ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?

15-10-2024 ಬೆಂಗಳೂರು

“ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂಬ...