Date: 01-01-2025
Location: ಬೆಂಗಳೂರು
ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ಸುತ್ತ ಸಾಗುತ್ತದೆ ಎಂಬ ವಿಷಯ ಗೊತ್ತಿರಬಹುದು. ಈ ವಿಷಯವನ್ನು ನಾಗಶೇಖರ್ ಅವರೇ ಈ ಹಿಂದೆ ಹೇಳಿಕೊಂಡಿದ್ದರು. ಈ ಕಥೆ ಹುಟ್ಟಿದ್ದು ಹೇಗೆ? ಎಂಬ ಪ್ರಶ್ನೆಗೆ ಅವರು ಇದೀಗ ಉತ್ತರಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರಕ್ಕೆ ಕಥೆ ಕೊಟ್ಟಿದ್ದು ಸುದೀಪ್ ಅಂತೆ. ಹಾಗಂತ ಸ್ವತಃ ನಾಗಶೇಖರ್ ಹೇಳಿಕೊಂಡಿದ್ದಾರೆ.
ಇತ್ತೀಚೆಗೆ ‘ಸಂಜು ವೆಡ್ಸ್ ಗೀತಾ 2’ ಚಿತ್ರಕ್ಕೆ ಕವಿರಾಜ್ ಬರೆದ ‘ಮಳೆಯಂತೇ ಬಾ …’ ಎಂಬ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿದೆ. ‘ಮಳೆಯಂತೆ ಬಾ, ಬೆಳಕಂತೆ ಬಾ …’ ಎಂದು ಸಾಗುವ ಈ ಹಾಡಿಗೆ ಸಂಗೀತ ರವೀಂದ್ರನಾಥ್ ಧ್ವನಿಯಾಗಿದ್ದಾರೆ. ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡನ್ನು ಸುದೀಪ್ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿರುವುದಷ್ಟೇ ಅಲ್ಲ, ಚಿತ್ರಕ್ಕೆ ಕಥೆ ಕೊಟ್ಟವರೂ ಅವರೇ ಎನ್ನುತ್ತಾರೆ ನಾಗಶೇಖರ್.
ಈ ಕುರಿತು ಮಾತನಾಡಿರುವ ಅವರು, ‘ರೇಶ್ಮೆ ಬೆಳೆಗಾರರ ಕುರಿತ ಒಂದು ಪ್ರಮುಖ ವಿಷಯವನ್ನು ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಆ ವಿಷಯದ ಜೊತೆಗೆ ಒಂದು ಪ್ರೇಮಕಥೆಯೂ ಇದೆ. ಈ ಚಿತ್ರದ ಎಳೆಯನ್ನು ಸುದೀಪ್ ಅವರು ‘ಮಾಣಿಕ್ಯ’ ಚಿತ್ರೀಕರಣ ಸಮಯದಲ್ಲಿ ನನಗೆ ಕೊಟ್ಟಿದ್ದರು. ಇಂಥ ಕಥೆಗಳನ್ನು ನೀನು ಚೆನ್ನಾಗಿ ಮಾಡುತ್ತೀಯ ಎಂದಿದ್ದರು. ಅದನ್ನು ಬೆಳೆಸಿ ಚಿತ್ರಕಥೆ ಮಾಡಿದ್ದೆ. ‘ಸಂಜು ವೆಡ್ಸ್ ಗೀತಾ 2’ ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ’ ಎಂದರು.
ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್‌ವರೆಗೂ ಹೋಗಿ ಮುಟ್ಟುತ್ತದೆ ಎನ್ನುವ ನಾಗಶೇಖರ್, ‘ಚಿತ್ರದಲ್ಲಿ ರೇಶ್ಮೆ ಬೆಳೆಗಾರರಾಗಿ ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಅಭಿನಯಿಸಿದ್ದಾರೆ. ಅವರಿಬ್ಬರೂ ಸಂಜು ಮತ್ತು ಗೀತಾ ಆಗಿ ಕಾಣಿಸಿಕೊಂಡಿದ್ದಾರೆ. ಶಿಡ್ಲಘಟ್ಟದಲ್ಲಿ ಅತಿಹೆಚ್ಚು ರೇಶ್ಮೆ ಬೆಳೆಯುತ್ತಾರೆ. ಆದರೆ, ಅದರ ಕ್ರೆಡಿಟ್ ಬೇರೊಂದು ಕಡೆ ಹೋಗುತ್ತಿದೆ. ಇದೇ ವಿಷಯವನ್ನು ಚಿತ್ರದಲ್ಲಿ ತೆಗೆದುಕೊಂಡಿದ್ದೇನೆ. ಇದು ಬೇರೆಯದೇ ಶೈಲಿಯ ಸಿನಿಮಾ’ ಎಂದರು.
ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ರೇಶ್ಮೆ ಶ್ರೀನಗರ ಕಿಟ್ಟಿ, ರಚಿತಾ ರಾಮ್, ರಂಗಾಯಣ ರಘು, ಸಾಧುಕೋಕಿಲ, ತಬಲಾನಾಣಿ ಸಂಪತ್, ರಾಗಿಣಿ, ಚೇತನ್ ಚಂದ್ರ ಮುಂತಾದವರು ನಟಿಸಿದ್ದಾರೆ. ಸತ್ಯ ಹೆಗಡೆ ಛಾಯಾಗ್ರಹಣ ಮತ್ತು ಶ್ರೀಧರ್ ಸಂಭ್ರಮ್ ಸಂಗೀತ ಈ ಚಿತ್ರಕ್ಕಿದೆ.
‘ಸಂಜು ವೆಡ್ಸ್ ಗೀತಾ 2’ ಚಿತ್ರವು ಜನವರಿ 10ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
‘ಅವಳ ಅಂದಕ್ಕೆ ಸೋತವರು, ಮಾತಿಗೆ ಮರುಳಾದವರು, ನಡಿಗೆಗೆ ನಡುಗಿದವರಾರೂ, ಭೂಮಿ ಮೇಲೆ ಉಳಿದೇ ಇಲ್ಲ. ...
ಕೆಲವು ವರ್ಷಗಳಿಂದ ಯಶ್ ತಮ್ಮ ಹುಟ್ಟುಹಬ್ಬವನ್ನು (ಜನವರಿ 08) ಅಭಿಮಾನಿಗಳೊಂದಿಗೆ ಆಚರಿಸಿಕೊಳ್ಳುವುದನ್ನು ಬಿಟ್ಟಿದ...
ನಟ-ನಿರ್ಮಾಪಕ ಧನಂಜಯ್ ಮದುವೆ ತಯಾರಿಯಲ್ಲಿದ್ದಾರೆ. ಫೆಬ್ರವರಿ 16ರಂದು ಅವರು ಮೈಸೂರಿನಲ್ಲಿ ಧನ್ಯತಾ ಜೊತೆಗೆ ವಿವಾಹ...
©2025 Book Brahma Private Limited.