ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ

Date: 02-08-2023

Location: ಬೆಂಗಳೂರು


''ರಾಜ್ಯಮಟ್ಟದ ಪ್ರಗತಿಪರ ಸಾಹಿತಿಗಳು ಮಾತ್ರವಲ್ಲದೇ ಟೀವಿ ಪತ್ರಕರ್ತರನ್ನು‌ ತನ್ನ ಆಕರ್ಷಕ ಆತಿಥ್ಯದ ಜಿಗುಟು ಬಲೆಗೆ ಕೆಡವಿಕೊಳ್ಳುತ್ತಿದ್ದ. ಹಾಗೆ ಈತನ‌ ಬಲೆಗೆ ಒಮ್ಮೆ ಬಿದ್ದವರು ಅದರಿಂದ ಬಿಡಿಸಿಕೊಳ್ಳಲು ದುಃಸಾಧ್ಯವೇನು ಬಂತು ಆಗುತ್ತಲೇ ಇರಲಿಲ್ಲ. ಹೌದು ಅವನ ರುಚಿಕಟ್ಟಾದ ಆತಿಥ್ಯದ ಹಂಗಿನ ಹಿಡಿತವೇ ಅಂತಹದ್ದು. ಅದೊಂದು ಬಗೆಯ ಉಡದ ಹಿಡಿತ,'' ಎನ್ನುತ್ತಾರೆ ಮಲ್ಲಿಕಾರ್ಜುನ ಕಡಕೋಳ. ಅವರು ತಮ್ಮ `ರೊಟ್ಟಿಬುತ್ತಿ' ಅಂಕಣದಲ್ಲಿ, “ಸಣ್ಣಪ್ಪನೆಂಬ ಸಾಹಿತಿಯೊಬ್ಬನ ಸಣ್ಣಕತೆ” ಕುರಿತು ಲೇಖನವನ್ನು ಬರೆದಿದ್ದಾರೆ.

ಹಾಗೆ ನೋಡಿದರೆ ಸಾಹಿತಿ ಸಣ್ಣಪ್ಪನ ಕತೆ ಸಣ್ಣದೇನಲ್ಲ. ಹೆಸರು ಸಣ್ಣಪ್ಪ ಎಂದಾಗಿದ್ದರೂ ಅವನಿದ್ದುದು ಮಾತ್ರ ಸರಕಾರದ ದೊಡ್ಡಹುದ್ದೆಯಲ್ಲಿ. ಅಷ್ಟಕ್ಕೂ ಹುದ್ದೆ ತೀರಾ ದೊಡ್ಡದೇನಾಗಿರಲಿಲ್ಲ. ಸಣ್ಣಪ್ಪನಿಗೆ ಐಪಿಎಸ್ ಲೆವೆಲ್ಲಿನ ಪೋಲಿಸ್ ಅಧಿಕಾರಿಯಾಗುವ ಜಗದ್ವಿಖ್ಯಾತ ಮಹತ್ವಾಕಾಂಕ್ಷೆ ಇತ್ತು. ಅದಕ್ಕಾಗಿ ಕಲರ್ಫುಲ್ ಕನಸುಗಳನ್ನು ಕಂಡು, ಕಂಡಾಪಟಿ ಪ್ರಯತ್ನಗಳನ್ನು ಮಾಡಿದ. ಪಾಪ ಅವನ ಐಪಿಎಸ್ ಆಸೆ ಈಡೇರಲೇ ಇಲ್ಲ. ಕೊನೆಯಾಸೆ ಎಂಬಂತೆ 'ಕಡೆಯಪಕ್ಷ ಸಣ್ಣದೊಂದು ಸಬ್ ಇನ್ಸಪೆಕ್ಟರ್' ಆದರೂ ಆಗಿಯೇ ತೀರಬೇಕೆಂಬ ಜನ್ಮದಾರಭ್ಯದ ಅಪೇಕ್ಷೆ ಅವನದಾಗಿತ್ತು. ಆದರೆ ಅದ್ಯಾವುದು ಕಡೆಗೂ ಈಡೇರಲಿಲ್ಲ. ಪರಂತು ಅವನಿಗೆ ದೊರೆಕಿರುವ ಸರಕಾರಿ ನೌಕರಿಯಿಂದ ಭರ್ಜರಿ ಆಮದಾನಿ ಮಾತ್ರ ಬರ್ತಿತ್ತು. ಕಸುಬಿಗಿಂತ ಅಡ್ಡ ಕಸುಬಿಗೆ ಅವಕಾಶವಿರುವ ಕೆಲಸಗೇಡಿ ಕೆಲಸ ಅದಾಗಿತ್ತು. ದೊಡ್ಡ ಪ್ರಮಾಣದ ಆಮದಾನಿ ಬರುವ ನೌಕರಿಯಿಂದಾಗಿಯೇ ಅವನದು ದೊಡ್ಡ ಹುದ್ದೆಯೆಂದೇ ಸಾರ್ವತ್ರಿಕ ಪ್ರತೀತಿಯಾಗಿತ್ತು.

ಆಮದಾನಿಗೆ ತಕ್ಕಂತೆ ತಾನು ಸಾಹಿತಿಯೆಂಬ ಕೀರ್ತಿಕಾಮುಕತೆಯ ದುರಾಸೆಯಂತೂ ಅಪರಂಪಾರ ಇತ್ತು. ಸಣ್ಣಪ್ಪ ಗುಮ್ಮಾನ ಗುಸುಕ. ತನ್ನ ಒಳಗುಟ್ಟನ್ನು ಯಾರಿಗೂ ಬಿಟ್ಟು ಕೊಡುತ್ತಿರಲಿಲ್ಲ. ಅದರಲ್ಲೂ ಲಂಚ ರುಷುವತ್ತುಗಳ ತುಡುಗು ವಿದ್ಯೆಯ ಒಳಪೇಚಿನ ಒಂದು ತಟಕು ವಾಸನೆಯೂ ಲೀಕ್ ಆಗದಂತೆ ಹ್ಯಾಂಡಲ್ ಮಾಡುವಲ್ಲಿ ನಿಷ್ಣಾತನಾಗಿದ್ದ. ಕಚೇರಿಯಲ್ಲಿ ಅಕ್ಕಪಕ್ಕ ಇದ್ದವರಿಗೇ ಗೊತ್ತಾಗದಂತೆ ರೊಕ್ಕ ಮುಕ್ಕುವ ದಂಧೆಯಲ್ಲಿ ಭಯಂಕರ ಶ್ಯಾಣೇತ. ಅವನು ಅದೆಷ್ಟು ಹುಶೇರಿಯೆಂದರೆ ತನ್ನ ಎಡಗೈ ಕದ್ದದ್ದು ಬಲಗೈಗೆ ಗೊತ್ತಾಗುತ್ತಿರಲಿಲ್ಲ. ಹೀಗಾಗಿ ಸಾಹಿತಿ ಸಣ್ಣಪ್ಪನ ಕುರಿತು ಅವನ ಕಚೇರಿಯಲ್ಲೇ ಯಾರೊಬ್ಬರಿಗೂ ಕಿಂಚಿತ್ತೂ ಅನುಮಾನಕ್ಕೆ ಅವಕಾಶವೇ ಇರ್ತಿರಲಿಲ್ಲ.

ಬೆಂಗಳೂರು, ಮೈಸೂರು ಕಡೆಗಳಿಂದ ಬರುವ ಹೆಸರಾಂತ ಸಾಹಿತಿಗಳು, ಪತ್ರಿಕೆ ಸಂಪಾದಕರುಗಳ ಕೂದಲು ಕೊಂಕದಂತೆ ಬಹಳೇ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದ. ಅವನು ಮಾಡುವ ಆದರಾತಿಥ್ಯಕ್ಕೆ ಅಂತಹದ್ದೊಂದು ವಿಶೇಷತೆಯೇ ಇರುತ್ತಿತ್ತು. ಅತಿಥಿಗಳೊಂದಿಗೆ ''ಮದ್ಯರಾತ್ರಿ'' ಪಾರ್ಟಿಗಳನ್ನು 'ಭಳಾರೆ ವಿಚಿತ್ರಂ' ಎನ್ನುವಂತೆ ಮಾಡಿ ಭಲೇ ಭಲೇ ಸಾಹಿತಿ, ಸಂಪಾದಕರುಗಳನ್ನು ತನ್ನ ಬಗಲ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ರಾಜ್ಯಮಟ್ಟದ ಪ್ರಗತಿಪರ ಸಾಹಿತಿಗಳು ಮಾತ್ರವಲ್ಲದೇ ಟೀವಿ ಪತ್ರಕರ್ತರನ್ನು‌ ತನ್ನ ಆಕರ್ಷಕ ಆತಿಥ್ಯದ ಜಿಗುಟು ಬಲೆಗೆ ಕೆಡವಿಕೊಳ್ಳುತ್ತಿದ್ದ. ಹಾಗೆ ಈತನ‌ ಬಲೆಗೆ ಒಮ್ಮೆ ಬಿದ್ದವರು ಅದರಿಂದ ಬಿಡಿಸಿಕೊಳ್ಳಲು ದುಃಸಾಧ್ಯವೇನು ಬಂತು ಆಗುತ್ತಲೇ ಇರಲಿಲ್ಲ. ಹೌದು ಅವನ ರುಚಿಕಟ್ಟಾದ ಆತಿಥ್ಯದ ಹಂಗಿನ ಹಿಡಿತವೇ ಅಂತಹದ್ದು. ಅದೊಂದು ಬಗೆಯ ಉಡದ ಹಿಡಿತ. ಎಂಥವರಿಗೂ ಅದರಿಂದ ಬಿಡುಗಡೆಯ ಭಾಗ್ಯವೇ ಇರ್ತಿರಲಿಲ್ಲ.

ಹಾಗೆಯೇ ತಾಲೂಕು, ಜಿಲ್ಲೆಯ ಎಲ್ಲಾ ಬಗೆಯ ಮಾಧ್ಯಮದವರಿಗೆ ಕುಡಿಸಿ, ತಿನಿಸಿ ಜಿಗ್ರಿದೋಸ್ತಿ ಸಂಪಾದಿಸಿದ್ದ. ಹಾಗೆ ಸಂಪಾದಿಸಲು ಅಬ್ಬಾ! ಅವನ ನಡವಳಿಕೆಗಳು ಅವರೊಂದಿಗೆ ಬಹಳೇ ನಾಟಕೀಯ. ಮಾಧ್ಯಮದವರೆದುರು ಅವನ‌ ಸವಿನಯ ನಡತೆ ಎಂಥದೇ ಕಾಡು ಕಟುಕರ ಹೊಟ್ಟೆಯೊಳಗಿನ ಕಲ್ಲು ಸಹಿತ ಕರಗಿ ನೀರಾಗಿ ಹರಿಯುವಂತಹದು. ಅಂತಹದನೇ ವಸ್ತುವಾಗಿಟ್ಟುಕೊಂಡು "ಕಲ್ಲು ಕರಗುವ ಕರಾಮತ್ತು" ಎಂಬ ಹರಟೆಗಳನ್ನು ರಾಜ್ಯಮಟ್ಟದ ದೈನಿಕಗಳಲ್ಲಿ ಧಾರಾವಾಹಿಗಳಂತೆ ಬರೆದು ಕಂಡಾಪಟೆ ಹೊಗಳಿಕೆಗಳಿಗೆ ಅವಕಾಶ ಮಾಡಿಕೊಳ್ಳುತ್ತಿದ್ದ. ಯಾವ ಪತ್ರಿಕೆಗೆ ಯಾವರೀತಿ ಬರೆದರೆ ಪ್ರಕಟವಾಗಬಹುದೆಂಬ ಕಲೆಯನ್ನು ಕರಗತ ಮಾಡಿಕೊಂಡಿದ್ದ.

ತಾನು ಏರ್ಪಡಿಸುವ ಸಾಹಿತ್ಯಕ ಕಾರ್ಯಕ್ರಮಗಳಿಗೆ ಪತ್ರಕರ್ತರು ವರದಿ ಮಾಡಲು ಬಾರದಿದ್ದರೇನಂತೆ ತಾನೇ ಅಚ್ಚುಕಟ್ಟಾಗಿ ವರದಿ ಬರೆದು ಕೊಡುವಲ್ಲಿ ಭಯಂಕರ ನಿಪುಣ. ಹೀಗಾಗಿ ಪತ್ರಕರ್ತರು ಸಣ್ಣಪ್ಪನ ಕಾರ್ಯಕ್ರಮಗಳಿಗೆ ಹೋಗದಿದ್ದರೂ ನಡೆಯುತ್ತಿತ್ತು. ಅವನ ಮೇಲೆ ಪತ್ರಿಕೆಗಳಿಗೂ ಅಂತಹದ್ದೊಂದು ಅಪರೂಪದ ನಂಬುಗೆ. ಅದು ಯಾವ ಲೆವೆಲ್ಲಿಗಂತ ಕೇಳಿದರೆ, ಕಟುಕ ಕೊಲೆಗಡುಕರು ಸಹಿತ ಅವನ ಮ್ಯಾಲ ಮುರಕೊಂಡು ಬೀಳುವಂತಹದು. ಅಂತಹ ಸೊಗದ ಸೋಬತಿಸಂಬಂಧ ಸೋಗಿನ ಸಣ್ಣಪ್ಪನದು. ತಳಸಮುದಾಯ, ನೆಲಧರ್ಮ, ಸಮಸಮಾಜ ಮುಂತಾಗಿ ಅಧ್ಯಯನಶೀಲ ಮತ್ತು ಪ್ರಗತಿಪರ ಫೋಜು ಕೊಡುವಲ್ಲಿ ಪರಮ ಜಾಬಾದಿಯೇ ಆಗಿದ್ದ. ಅಂತೆಯೇ ಆತನ ಕೆಲವು ಆಪ್ತರು, ಚೆಡ್ಡಿ ದೋಸ್ತರು ಅವನನ್ನು 'ಜಾಬಾದಿ ಸಾಹಿತಿ' ಎಂದೇ ಕರೆಯುತ್ತಿದ್ದರು. ಹೌದು ಅಂಥದರಲ್ಲಿ ಅವನನ್ನು ಹಿಮ್ಮೆಟ್ಟಿಸುವುದು ಯಾರಿಂದಲೂ ಸಾಧ್ಯವೇ ಇರಲಿಲ್ಲ.

ಅಷ್ಟಕ್ಕೂ ಸಣ್ಣಪ್ಪ ಸಾಹಿತಿಯಾದುದೇ ಕುತೂಹಲಕಾರಿ ಕತೆ. ಅವನು ನೌಕರಿಗೆ ಸೇರಿದ ಹೊಸತರಲ್ಲಿ ಸಣ್ಣಪ್ಪನ ಭ್ರಷ್ಟಾಚಾರಗಳ ದೊಡ್ಡ ದೊಡ್ಡ ಕತೆಗಳನ್ನು ಬಯಲಿಗೆಳೆದು ಭ್ರಷ್ಟಹೆಗ್ಗಣವೆಂದು ಪತ್ರಿಕೆಯೊಂದು ಅವನ ಫೋಟೋ ಸಮೇತ ವರದಿ ಪ್ರಕಟಿಸಿತ್ತು. ಪ್ರಕರಣದ ವಿಚಾರಣೆಯು ಜರುಗಿ ಕೆಲಕಾಲ ಅಮಾನತುಗೊಂಡಿದ್ದ. ಅದಾದ ನಂತರ ಅಲ್ಲಿಂದ ಅವನು ಎತ್ತಂಗಡಿಯಾಗಿದ್ದ. ದೂರದ ಹೊಸ ಊರಿಗೆ ಬಂದು ಅಕ್ಷರಗಳ ಒಡನಾಟಕ್ಕೆ ಅಮರಿಕೊಂಡ. ಸಣ್ಣಪುಟ್ಟ ಚುಟುಕು, ನಗೆಚಾಟಿಕೆಯ ಪ್ರಹಸನಗಳನ್ನು ಬರೆಯುತ್ತಾ ಬಂದ. ಯೋಗಾಯೋಗ ಎಂಬಂತೆ ದೊಡ್ಡ, ದೊಡ್ಡ ಸಾಹಿತಿಗಳು, ವಿಶ್ವವಿದ್ಯಾಲಯದ ಪ್ರೊಫೆಸರುಗಳ ಒಡನಾಟದಿಂದ ತನ್ನ ಬರಹದ ಹಾದಿ ಸರಾಗ ಮಾಡಿಕೊಂಡ. ಕ್ರಮೇಣ ಕವನ, ಕತೆಗಳಿಗೆ ಗಂಟುಬಿದ್ದ. ಆ ಮೂಲಕ "ಸಾಹಿತಿ ಸಣ್ಣಪ್ಪನೆಂದು" ಪತ್ರಿಕೆಗಳ ಸ್ಥಳೀಯ ಆವೃತ್ತಿಗಳ ಮೂಲಕ ಬಹುದೂರದ ದೊಡ್ಡ ಊರಿನಲ್ಲಿ ತನ್ನ ಹೆಸರು ಚಾಲ್ತಿಗೆ ತಂದುಕೊಂಡ.

ಸೋಜಿಗವೆಂದರೆ ಮೊದಲಿದ್ದ ಊರಿನ ಕಚೇರಿಗಿಂತ ಈಗಿನ ಕಚೇರಿಯಲ್ಲೇ ಯಥೇಚ್ಛವಾಗಿ ಇನ್ಕಮ್ ಬರತೊಡಗಿತು. ಅದಕ್ಕಾಗಿ ಈ ಹಿಂದೆ ತನ್ನ ಭ್ರಷ್ಟಾಚಾರ ಬಯಲುಗೊಳಿಸಿ ಸುದ್ದಿ ಪ್ರಕಟಿಸಿದ ನಿಯತ ಕಾಲಿಕಕ್ಕೆ ಕೃತಜ್ಞತೆ ಸಲ್ಲಿಸಿದ. ಏಕೆಂದರೆ ಅದು ಹಾಗೆ ಮಾಡದಿದ್ದರೆ ತನಗೆ ಹೊಸ ಊರಿಗೆ ಬರುವ ಅವಕಾಶವೇ ಇರುತ್ತಿರಲಿಲ್ಲ. ಅಲ್ಲೇ ಸಣ್ಣ ಲಾಭದ ಕಚೇರಿಯಲ್ಲಿ ಕುಳಿತು ಸಣ್ಣಪ್ಪ ಸಣ್ಣಗೆ ಕೊಳೆತು ನಾರಬೇಕಿತ್ತು. ಈಗ ಈ ಕಚೇರಿಯಲ್ಲಿ ತನಗೆ ಬರುವ ಯಥೇಚ್ಛ ಪ್ರಮಾಣದ ಆಮದಾನಿಯನ್ನು ಖರ್ಚು ಮಾಡಲೆಂದೇ ದೂರದ ಊರಿನ ಸಾಹಿತಿಗಳು, ಹೆಸರಾಂತ ಪತ್ರಕರ್ತರನ್ನು ಮೇಲಿಂದ ಮೇಲೆ ಕರೆಸಿ ಹೆಚ್ಚು ಹೆಚ್ಚು ಕಾರ್ಯಕ್ರಮ ಏರ್ಪಡಿಸಲು ಹೊಂಚುಹಾಕಿ ಕಾರ್ಯಪ್ರವೃತ್ತನಾದ.

ಹೊಸದಾಗಿ ಪುಸ್ತಕ ಪ್ರಕಾಶನ ಸಂಸ್ಥೆಯೊಂದನ್ನು ತನ್ನ ಹೆಂಡತಿ ಹೆಸರಲ್ಲಿ ಶುರುವಿಟ್ಟುಕೊಂಡ. ಕೆಲವೇ ವರ್ಷಗಳಲ್ಲಿ ಅದು ಜನಪ್ರಿಯ ಪುಸ್ತಕ ಪ್ರಕಾಶನ ಸಂಸ್ಥೆ ಎಂದು ರಾಜ್ಯಮಟ್ಟದಲ್ಲಿ ಹೆಸರು ಮಾಡಿತು. ಅದಕ್ಕಾಗಿ ಸರ್ಕಾರದ ಮಟ್ಟದಲ್ಲಿ ಪ್ರಶಸ್ತಿಯನ್ನು ಗಳಿಸಿಕೊಂಡ. ಆರಂಭಕ್ಕೆ ತನ್ನ ಹೆಸರಿನ ಪುಸ್ತಕಗಳು ಪ್ರಕಟಗೊಂಡವು. ಬರಬರುತ್ತಾ ಹೆಸರಾಂತ ಸಾಹಿತಿ, ವಿಮರ್ಶಕರ ಪುಸ್ತಕಗಳ ಪ್ರಕಟಣೆಗೆ ಮತ್ತು ಮಠಾಧೀಶರು, ರಾಜಕಾರಣಿಗಳ ಅಭಿನಂದನ ಗ್ರಂಥಗಳಿಗೆ ಕೈ ಹಾಕಿದ. ಆಗ ನೋಡಿ ಅವನ ನಸೀಬು ಬರೋಬ್ಬರಿ ಖುಲಾಯಿಸಿತು. ಮಠಾಧೀಶರು, ಅಧಿಕಾರಸ್ಥ ರಾಜಕಾರಣಿಗಳನ್ನು ಪುಸ್ತಕ ಬಿಡುಗಡೆ, ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಆಹ್ವಾನಿಸಿ ಬಹಳೇ ಶ್ಯಾಣೇತನಗಳಿಂದ ಅವರನ್ನು ಹೊಗಳುವ ಟ್ರಿಕ್ಸ್ ರೂಢಿಸಿಕೊಂಡ. ಬರ ಬರುತ್ತಾ ಅವನ ಕೀರ್ತಿ ಪತಾಕೆ ಮುಗಿಲೆತ್ತರ ಹಾರಾಡ ತೊಡಗಿತು. ತನ್ಮೂಲಕ ಅವನ ಭ್ರಷ್ಟಾಚಾರದ ಮತ್ತು ಹೆಣ್ಣು ಚೋಲಿನ ಒಳದಂಧೆಗಳೆಲ್ಲ ಮರೆಮಾಚಿ ಸಾಮಾಜಿಕವಾಗಿ ದೊಡ್ಡದೇ ಸ್ಥಾನಮಾನ ದೊರಕ ತೊಡಗಿದವು.

ವಿಶ್ವವಿದ್ಯಾಲಯಗಳ ಬಹುದೊಡ್ಡ ಮತ್ತು ವಾಸಿಯಾಗದ ರೋಗ ಸಣ್ಣಪ್ಪನಿಗೆ ವರವಾಗಿತ್ತು. ಅವನು ಏರ್ಪಡಿಸುವ 'ಮದ್ಯರಾತ್ರಿ' ಪಾರ್ಟಿಗಳ ಮೇಜು ಟೇಬಲ್ಮೇಟ್ ಗೆಳೆಯರಲ್ಲಿ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೇ ಹೆಚ್ಚಿಗೆ. ಹೀಗಾಗಿ ಅವರ ದೆಸೆಯಿಂದ ಅವನ ಕೆಲವು ಹರಟೆ, ಹಾಯ್ಕು, ಕವನ, ಪ್ರವಾಸ ಕಥನ ಮತ್ತು ಕಥೆಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೆ ಪಠ್ಯವಾಗಿದ್ದವು. ತನ್ನ ವಾರಗೆಯ ಇತರೆ ಸಾಹಿತಿಗಳದು ಅದೆಷ್ಟೇ ಗಟ್ಟಿಸಾಹಿತ್ಯ ಇದ್ದರೂ ಅಂತಹ ಅಪರಂಜಿಗಳ ಕತೆ, ಕವನಗಳು ಪಠ್ಯ ಆಗದಂತೆ ಕಾಲೆಳೆಯುವ ಮತ್ತು ಎಳೆಸುವ ಕುತಂತ್ರದಲ್ಲಿ ಸಣ್ಣಪ್ಪ ದೊಡ್ಡಪ್ಪನೇ ಆಗಿದ್ದ. ಅದೆಲ್ಲ ಗುಂಪು ಮತ್ತು ಜಾತಿ ರಾಜಕಾರಣವನ್ನು ವಿ. ವಿ. ಅಧ್ಯಾಪಕರ ಇಲ್ಲವೇ ವಿದ್ಯಾರ್ಥಿಗಳ ಮೂಲಕವೇ ಹುಟ್ಟುಹಾಕುವಲ್ಲಿ ಸಣ್ಣಪ್ಪನದು ಪುಡಾರಿ ವರಸೆಯ ಎತ್ತಿದ ಕೈ.

ಹೀಗಾಗಿ ತಾನೇ ದುಡ್ಡುಕೊಟ್ಟು ತನಗೆ ಬೇಕಾದವರಿಂದ ಬೆದರಿಕೆ ಪತ್ರಗಳನ್ನು ಬರೆಸಿಕೊಂಡು ಪತ್ರಿಕಾಗೋಷ್ಠಿಯಲ್ಲಿ ಅಂತಹ ಕೃತ್ರಿಮ ಬೆದರಿಕೆ ಪತ್ರಗಳನ್ನು ತೋರಿಸಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದ. ದೂರದ ಬೆಂಗಳೂರು, ಮೈಸೂರು ನಗರಗಳ ಸಂಘ ಸಂಸ್ಥೆಗಳು ನೀಡುವ ಪ್ರಶಸ್ತಿ, ಪುರಸ್ಕಾರಗಳನ್ನು ಪಡಕೊಳ್ಳುವ ಇಲ್ಲವೇ ಯಥೇಚ್ಛ ಹಣಕೊಟ್ಟು ಹೊಡಕೊಳ್ಳುವ ಹೊಸ ಹೊಸ ಮೋಡಿ ವಿದ್ಯೆಗಳ ಪ್ರಕಾರಗಳನ್ನೇ ಹುಟ್ಟು ಹಾಕಿದ. ತಾಲೂಕು, ಜಿಲ್ಲಾ ಸಾಹಿತ್ಯ ಸಮ್ಮೇಳನ, ಕವಿ ಸಮ್ಮೇಳನಗಳ ಅಧ್ಯಕ್ಷಗಿರಿಗಳನ್ನು ಖರೀದಿ ಮಾಡುವ ವಿನೂತನ ಕಸುಬುಗಾರಿಕೆಯ ಹರಿಕಾರನಾಗಿ ಬಿಟ್ಟ.

ಹಾಗೆ ಮಾಡುವ ಮೂಲಕ ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷ ಪಟ್ಟಗಳನ್ನು ಹೊಡಕೊಂಡು ಬಿಟ್ಟ. ಅಷ್ಟೇ ಅಲ್ಲದೇ ಬೆಂಗಳೂರು, ಮೈಸೂರು ಭಾಗದ ಸಣ್ಣಪುಟ್ಟ ಸಾಹಿತ್ಯ ಸಮಾವೇಶಗಳ ಅಧ್ಯಕ್ಷಗಿರಿಗಳನ್ನು ದಕ್ಕಿಸಿಕೊಂಡ. ತಾನು ಭಾಗವಹಿಸುವ ಕಾರ್ಯಕ್ರಮಗಳ ಚಿತ್ರಗಳನ್ನು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಮಿತಿಮೀರಿದ ಆತ್ಮರತಿ ಸಣ್ಣಪ್ಪನದು. ಹೀಗೆ ನೋಡ ನೋಡುತ್ತಿದ್ದಂತೆ ಸಣ್ಣಪ್ಪ ರಾಜ್ಯಮಟ್ಟದ ಕವಿಗಳನ್ನೇ ಮೀರಿಸುವಂತಾಗಿ ಬಿಟ್ಟ. ರಾಜ್ಯಮಟ್ಟದ ಸಾಹಿತಿಗಳನ್ನು ಹಿಂದೆ ಹಾಕಿ ದೂರದ ದಿಲ್ಲಿಮಟ್ಟಕ್ಕೆ ಸಣ್ಣಪ್ಪ ಅಡ್ಡಾದಿಡ್ಡಿ ಬೆಳೆದುನಿಂತ.

ಇಂತಹ ಸಾಹಿತಿ ಸಣ್ಣಪ್ಪ ನೌಕರಿಯಿಂದ ನಿವೃತ್ತನಾಗಿದ್ದಾನೆ. ಎಲ್ಲಾ ಪಕ್ಷಗಳ ರಾಜಕಾರಣದ ಪರಮ ಸಖ್ಯವಿರುವ ಸಣ್ಣಪ್ಪ ಇದೀಗ ರಾಜಕೀಯ ಸೇರುವ ಸುದ್ದಿಗಳು ದಟ್ಟವಾಗಿ ಕೇಳಿ ಬರುತ್ತಲಿವೆ. ಹೇಳಲು ಬಾರದು, ಸಣ್ಣಪ್ಪ ರಾಜಕೀಯ ಸೇರಿ ಶಾಸಕನಾಗಿ ಸಚಿವನೂ ಆಗಬಹುದು. ಏಕೆಂದರೆ ಅವನ ಬಳಿ ಚುನಾವಣೆಯಲ್ಲಿ ಗೆಲ್ಲುವಷ್ಟು ಭ್ರಷ್ಟ ಹಣವಿದೆ. ಹೌದು ಗೆಲ್ಲುವ ಬಹುಪಾಲು ರಾಜಕಾರಣಿಗಳು ಸಣ್ಣಪ್ಪನ‌ ಅಣ್ತಮ್ಮಂದಿರಂತೆ ಕಾಣುತ್ತಿರುವಾಗ ಸಾಹಿತಿ ಸಣ್ಣಪ್ಪನ ಕತೆ ಹೊಸ ಕತೆಯೇನಲ್ಲ. ದುರಂತದ ಸಂಗತಿಯೆಂದರೆ ಸಣ್ಣಪ್ಪನಂತಹ ಸಾಹಿತಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ನಡೆದಿದೆ.
ಮಲ್ಲಿಕಾರ್ಜುನ ಕಡಕೋಳ
9341010712

ಈ ಅಂಕಣದ ಹಿಂದಿನ ಬರಹಗಳು:
ಮುಖ್ಯಮಂತ್ರಿ ಜೊತೆಗೆ 'ಜನಮನ' ಸಂವಾದ
ಮೊದಲ ಮುಲಾಖತ್ತಿನ ಡಾವಣಗೇರಿ
ಬರೆಯುವ ನನ್ನ ಬಲಗೈಯೇ ಮುರಿದಿದೆ....
ಹೊಸ ಸರ್ಕಾರ : ಸಾಂಸ್ಕೃತಿಕ ಸೋಗಲಾಡಿಗಳ ಬಗ್ಗೆ ಇರಲಿ ಎಚ್ಚರ
ಜನಸಂಪರ್ಕ ಎಂಬ ಮಾಯಾವಿ ಮತ್ತು ಚುನಾವಣೆ ಕಾಲದ ವಾಸ್ತವಗಳು
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ಬದಲಾವಣೆ ಕಾಣಲು ಇನ್ನೇನು ಹತ್ತು ದಿನಗಳು ಬಾಕಿ ಉಳಿದಿವೆ
ವಿಶ್ವರಂಗಭೂಮಿ ದಿನಾಚರಣೆ ಮತ್ತು ಕುಸಿಯುತ್ತಿರುವ ರಂಗಮೌಲ್ಯಗಳು
ಕಲಬುರ್ಗಿ ಸ್ಥಾನೀಯ ಸಮಾವೇಶದಲ್ಲಿ ಅನಾವರಣಗೊಂಡ ಕಥನಗಳು
ಕಲ್ಯಾಣ ಕರ್ನಾಟಕ ಉತ್ಸವ ಮತ್ತು ಯಡ್ರಾಮಿ ತಾಲೂಕು ಎರಡನೇ ಸಾಹಿತ್ಯ ಸಮ್ಮೇಳನ

ಮೊಟ್ಟಮೊದಲ ಕಥಾ ಸಂಕಲನ‌ 'ಮುಟ್ಟು' ಎಂದರೆ...
ಮೂಡಲಪಾಯ ಯಕ್ಷಗಾನ ಮತ್ತು ದೊಡ್ಡಾಟ ಬಯಲಾಟಗಳೆಂಬ ಜೋಡಿ ಮಕ್ಕಳು
ಸಾಹಿತ್ಯ ಸಮ್ಮೇಳನ ಮತ್ತು ಪ್ರತಿರೋಧ ಸಾಹಿತ್ಯ ಸಮಾವೇಶಗಳು
ಸಾವಿತ್ರಿಬಾಯಿ ಫುಲೆ ಎಂಬ ಅಕ್ಷರತಾಯಿ ಕುರಿತ ಕನ್ನಡದ ಮೊದಲ ನಾಟಕ
ಮಧುವನ ಕರೆದ ಹಾಡಿನಂತೆ ಅವಳ ಹೆಸರೆಲ್ಲೋ ಮರೆತು ಹೋಗಿತ್ತು ...
ಅಣಜಿಗಿ ಗೌಡಪ್ಪ ಸಾಧು ಮತ್ತು ಮಡಿವಾಳಪ್ಪನ ತತ್ವಪದಗಳು
ಮೂರು ಪುಸ್ತಕಗಳು ಮತ್ತು ಉಕ್ಕಿ ಹರಿದ ನರುಗಂಪಿನ ನೆನಹುಗಳು
ಸುರಪುರದ ಕನ್ನಡ ಸಾಹಿತ್ಯ ಸಂಘಕ್ಕೆ ಎಂಬತ್ತರ ಸಂಭ್ರಮ
ಕರ್ನಾಟಕದ ಸೌಹಾರ್ದ ಸಂಸ್ಕೃತಿಯ ನೆಲೆಗಳು
ನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ
ಹಡೆದವ್ವ ಹೇಳಿದ ಬರ್ಥ್ ಸರ್ಟಿಫಿಕೆಟ್ ಕತೆ
ಲೋಕೇಶ್ ಎಂಬ ಬೆಂಗಳೂರಿನ ರಂಗವತ್ಸಲ
ಕಿರುತೆರೆಯ ಕಾಮೆಡಿ ಸ್ಕಿಟ್‌ಗಳು ಮತ್ತು ಕಿಲಾಡಿತನ
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ದಾವಣಗೆರೆಯಲ್ಲಿ ಸಿದ್ಧರಾಮಯ್ಯ ಬರ್ಥ್ ಡೇ ಪಾರ್ಟಿಯ ಅದ್ದೂರಿ ಜಾತ್ರೆ
ಚಂದಿರನ ಜತೆಯಲಿ ಸಹೃದಯ ಪ್ರೇಕ್ಷಕ ಪರಂಪರೆಯ ಕಂಪನಿ ನಾಟಕಗಳು
ಮೀನಾಕ್ಷಿ ಬಾಳಿಯೆಂಬ ಜೀವಧ್ವನಿ
ಸರಕಾರದ ಉನ್ನತ ಪ್ರಶಸ್ತಿಗಳು ಮತ್ತು ವಿಧಾನಸೌಧದ ವಿಲಂಬಿತ ನೀತಿಗಳು
ಸಂತೆಯೊಳಗೆ ಕಂಡ ರೇಣುಕೆಯ ಮುಖ
ಮುಸುಕಿದೀ ಮಬ್ಬಿನಲಿ ಕೈ ಹಿಡಿದ ಉಡುಪಿ ಸಮಾವೇಶದ ನೆನಪುಗಳು
ಅವನು ಹೋರಾಟದ ಅಂತರಗಂಗೆ
ಬಿಡುಗಡೆಯಾಗದ ನೆಲದ ನೆನಪುಗಳು
ಕಡಕೋಳ ನೆಲದ ನೆನಪುಗಳು
ಹೋಗಿ ಬರ್ತೇನ್ರಯ್ಯ ಶರಣಾರ್ಥಿಗಳು
ಕನ್ನಡ ತತ್ವಪದಗಳ ಗಝಲ್ ಕಾಕಾ
ಕಡಕೋಳ ಮಡಿವಾಳಪ್ಪನೆಂಬ ಲೋಕದ ಬೆಳಕು ಮತ್ತು ತತ್ವಪದ ಪ್ರಾಧಿಕಾರ
ತತ್ವಪದಗಳ ಗಾಯನ ಪರಂಪರೆ
ಕಳೆದೈದು ದಿನಗಳಿಂದ ಕೊರೊನಾ ಜತೆ ಕುಸ್ತಿ ಆಡುತ್ತಿರುವೆ...
ದಾವಣಗೆರೆಯೆಂಬ ರಂಗಸಂಸ್ಕೃತಿಯ ನಡುಸೀಮೆ ನಾಡು
ಕಾಟ್ರಹಳ್ಳಿಯೆಂಬ ವಿಸ್ಮಯದ ಗೆಳೆಯ
ಹೇಗೆ ದಿಲ್ಲಿಯೇ ಭಾರತ ಅಲ್ಲವೋ ಹಾಗೇ ಬೆಂಗಳೂರೇ ಕರ್ನಾಟಕವಲ್ಲನಮ್ಮೂರ ಪಿಂಜಾರ ಗೂಡೇಸಾ ಮತ್ತು ಅವನ ಮಗ ದಾವಲಸಾ

MORE NEWS

ಕನ್ನಡ ವಿಮರ್ಶೆ 3

22-11-2024 ಬೆಂಗಳೂರು

“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...