'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು


“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ್‌ ಗೂ ಮುಂಚೆ ಒಂದು ಚಿಕ್ಕ ಪ್ರಾಕ್ಟಿಸ್ ಮ್ಯಾಚ್ ಆಡಿದಂತೆ ಈ 'ಸದರಬಜಾರ್' ಕಾದಂಬರಿಯ ರಚನೆ ಎನ್ನಬಹುದು” ಎನ್ನುತಾರೆ ಡಿ.ಎಸ್. ಚೌಗಲೆ ಅವರು ‘ಸದರ ಬಜಾರ್’ ಕಾದಂಬರಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

'ಸದರಬಜಾರ್' ನನ್ನ ಚೊಚ್ಚಲು ಕಾದಂಬರಿ. 1999ರಲ್ಲಿ 'ನೆರಳುಗಳು' (ಮೂಲ ಮರಾಠಿ: ಜಯವಂತ ದಳವಿ) ಅನುವಾದ ಕಾದಂಬರಿ ಬಂದಿತ್ತು. ಅದು ಮೊದಲು 'ಸುಧಾ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ನಂತರ ಪುಸ್ತಕ ರೂಪ ಪಡೆಯಿತು. ನಾಲ್ಕೈದು ಕಥಾಸಂಕಲನಗಳನ್ನು ನೀಡಿದ ನನ್ನಲ್ಲಿ ಕಾದಂಬರಿ ರಚಿಸುವ ಉಮೇದು ಮೊದಲಿನಿಂದಲೂ ಇದ್ದೇ ಇತ್ತು. ನಾಟಕ, ಚಿತ್ರಕಲೆ ನನ್ನ ಮೊದಲ ಪ್ರೀತಿ ಆಗಿದ್ದರೂ ಆಗಾಗ ನನ್ನ ಒಳಗುದಿಗೆ ಸೃಜನ ರೂಪ ನೀಡಲು ಕತೆಗಳನ್ನು ಬರೆಯುವ ಆಸರೆಯನ್ನು ಬಿಟ್ಟಿರಲಿಲ್ಲ. ಅದು ಇಂದಿಗೂ ಮುಂದುವರೆದಿದೆ.

ಗಡಿಯಂಚಿನ ನನ್ನ ಗ್ರಾಮೀಣ ಅನುಭವವನ್ನು ಒಂದು ಬೃಹತ್ ಕ್ಯಾನ್‌ವಾಸ್‌ನ ಕಾದಂಬರಿಯಲ್ಲಿ ರಚಿಸುವ ಆಸೆ ಹಲವಾರು ವರ್ಷಗಳಿಂದಲೂ ನನ್ನೊಳಗೆ ಬತ್ತದೇ ಒರತೆಯಾಗಿ ಜಿನುಗುತ್ತಲೇ ಇದೆ. ಆದರೆ ನಾಟಕ ಮತ್ತು ಚಿತ್ರಕಲೆಗಳ ಒತ್ತಡದಲ್ಲಿ ಅದನ್ನು ಮುಂದೂಡುತ್ತ ಬಂದಿರುವೆ. ಪಿಯುನಲ್ಲಿ ನನಗೆ ಕನ್ನಡ ಪಾಠ ಮಾಡಿದ ವಿದ್ಯಾ ಗುರುಗಳು ಮತ್ತು ಹಿರಿಯ ಸಾಹಿತಿಗಳಾದ ಚಂದ್ರಕಾಂತ ಪೋಕಳೆಯವರು, 'ಖರೆಗೂ ನೀನು ಕಂಡುಂಡ ಅನುಭವ ಜಗತ್ತು ದೊಡ್ಡದು...ಅದು ಇನ್ನೂ ಹಂಗ ನಿನ್ನೊಳಗ ಉಳದದ... ಕನ್ನಡ ಸಾಹಿತ್ಯ ಲೋಕಕ್ಕೆ ಬರಬೇಕು... ನಿನ್ನಲ್ಲಿ ಆ ಸೃಜನಶೀಲತೆಯ ಶಕ್ತಿ ಅದ... ಬರೀ...' ಎಂದು ಹೇಳುತ್ತಲೇ ಬಂದಿದ್ದರು. ಅದರ ಮೊದಲ ಹೆಜ್ಜೆಯಾಗಿ ಈ ಕಾದಂಬರಿ ರಚನೆ ಎನ್ನಬಹುದು.

ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ್‌ ಗೂ ಮುಂಚೆ ಒಂದು ಚಿಕ್ಕ ಪ್ರಾಕ್ಟಿಸ್ ಮ್ಯಾಚ್ ಆಡಿದಂತೆ ಈ 'ಸದರಬಜಾರ್' ಕಾದಂಬರಿಯ ರಚನೆ ಎನ್ನಬಹುದು. ತದನಂತರ ಮಹಾಕಾದಂಬರಿಯ ಕನಸು ಶೀಘ್ರ ನನಸಾಗುವುದು.

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದಲ್ಲಿಯದು. ಅಂದಿನ ಗಡಿಯ ಈಚೆ ಮತ್ತು ಗಡಿಯ ಆಚೆಯ ಬದುಕು ಮತ್ತು ಸಮಾಜವು ಭಾಷೆಯ ಎಲ್ಲೆಯನ್ನು ಮೀರಿ ಜೀವಿಸಿದೆ. ಆ ಬದುಕಿನ ಹಲವು ಮಗ್ಗುಲಗಳ ಮಾನವೀ ಸಂಘರ್ಷ, ಅಸ್ಮಿತೆ, ಅಸಹಾಯಕ ಸ್ಥಿತಿಗಳು, ಹಸಿವು, ಕಾಮ, ಉದ್ಯೋಗ, ರಾಜಕಾರಣ, ಅರ್ಥ ಕಾರಣಗಳನ್ನು ಹಿಡಿದಿಡುವ ಪ್ರಾಮಾಣಿಕ ಯತ್ನವು ಕಾದಂಬರಿಯಲ್ಲಿದೆ. ಕಥಾನಾಯಕ ಒಂದು ಅಸೈನ್‌ಮೆಂಟ್‌ಗಾಗಿ ಗಡಿಯ ಆಚೆ ಸಂಚರಿಸುತ್ತಾನೆ. ಆತನು ಅನುಭವಿಸಿದ, ಅನುಭವಿಸುತ್ತ ಸಾಗುವ ಬದುಕು 'ಟ್ರಾವಲಾಗ್' ಮೂಲಕ ಕಾದಂಬರಿಯಲ್ಲಿ ತೆರೆದುಕೊಳ್ಳುತ್ತ ಸಾಗುತ್ತದೆ. ಬೆಡಗಿನಹಳ್ಳಿಯಿಂದ ಸದರಬಜಾರ್ ತನಕದ ಪಯಣವದು.

ಸದರ ಎಂದರೆ ಮುಖ್ಯ, ಪ್ರಧಾನವೆಂದರ್ಥ. ಮುಖಿಯಾ, ಪ್ರಮುಖ ಎಂತಲೂ ಆಗುತ್ತದೆ. ಉದಾಹರಣೆಗೆ ಮಸಜಿದ್ ಅಥವಾ ಅಂಜುಮನ್ ಕಾ ಸದರ, ಅಂದರೆ ಮಸೀದಿ ಅಥವಾ ಆಂಜುಮನ್ ಮುಖ್ಯಸ್ಥ ಎಂದಂತೆ. ಇದು ಪರ್ಶಿಯನ್ ಪದ. ಕಾಲಾಂತರದಲ್ಲಿ ಸದರ ಪದ ಬಜಾರ್ ಸಂಗಡ ಕೂಡಿ ಭಿನ್ನ ರೂಪಾರ್ಥಕ್ಕೆ ಹೊರಳಿರಬಹುದು. ದೇಶದ ಬಹುತೇಕ ಸದರಬಜಾರ್‌ಗಳು ವೇಶ್ಯೆಯರ ಅಡ್ಡಾಗಳಾಗಿರಲೂಬಹುದು.

ಕನ್ನಡದ ಹೆಸರಾಂತ ವಿಮರ್ಶಕರು ಮತ್ತು ಮಿತ್ರರಾದ ಡಾ.ರಾಜೇಂದ್ರ ಚೆನ್ನಿ ಅವರು ಈ ಕೃತಿಗೆ ಸೊಗಸಾದ ಬೆನ್ನುಡಿ ಬರೆದುಕೊಟ್ಟಿದ್ದಾರೆ. ಈ ಬೆನ್ನುಡಿಯು ಕಾದಂಬರಿಯ ಸತ್ವವನ್ನು ಹಿಡಿದಿಟ್ಟಿದೆ. ತಮ್ಮ ಮೌಲಿಕ ಸಮಯವನ್ನು ನನ್ನ ಕಾದಂಬರಿಯ ಓದಿಗೆ ಮೀಸಲಿರಿಸಿ, ಗ್ರಹಿಸಿ, ಕೃತಿಯ ಆತ್ಮವನ್ನು ಸ್ಪರ್ಶಿಸಿದ ಅವರು ಅನೇಕ ಒಳನೋಟಗಳ ಬರಹವನ್ನು ನೀಡಿದ್ದಾರೆ. ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳು.

ಈ ಕಾದಂಬರಿ ರಚನೆಗೆ ಒತ್ತಾಸೆಯಾಗಿ ನಿಂತು ಬರೆದುಕೊಡಲು ಬೆನ್ನು ಬಿದ್ದವರು ಮಿತ್ರ ವೀರಲೋಕ ಪ್ರಕಾಶನದ ವೀರಕಪುತ್ರ ಶ್ರೀನಿವಾಸ ಮತ್ತು ಅವರ ಬಳಗದ ಆನಂತ ಕುಣಿಗಲ್ ಅವರು. ಚೆಂದವಾಗಿ ಪ್ರಕಟಿಸಿ ಕನ್ನಡದ ಓದುಗರಿಗೆ ತಲುಪಿಸುವ ಅವರ ಪುಸ್ತಕ ಪ್ರೀತಿ ಮತ್ತು ಕಾಳಜಿ ಅನನ್ಯ ಅವರಿಬ್ಬರಿಗೂ ಆಭಾರಿಯಾಗಿರುವೆ. ವಿಭಿನ್ನವಾದ, ಅಂದದ ಮುಖಪುಟ ರಚಿಸಿದ ಕಿರಣ್ ಮಾಡಾಳು ಅವರಿಗೆ, ಮುದ್ರಕರಿಗೆ ಧನ್ಯವಾದಗಳು. ನನ್ನ ಆಪ್ತ ಗೆಳೆಯರಾದ ಡಾ. ಸಿ.ಎಸ್. ದ್ವಾರಕಾನಾಥ್, ರವೀಂದ್ರ ಭಟ್ಟ, ಚಂದ್ರಕಾಂತ ಪೋಕಳೆ, ಆರ್.ಎಚ್. ನಟರಾಜ್, ದಿಲಾವರ ರಾಮದುರ್ಗ, ಕತೆಗಾರ ಮತ್ತು ವೈದ್ಯ ಡಾ. ಸಲೀಂ ನದಾಫ್, ಮಂಜುನಾಥ ಲತಾ, ಡಾ. ಎ.ಬಿ. ಘಾಟಗೆ, ಮರಾಠಿ ಲೇಖಕ ಗುಣವಂತ ಪಾಟೀಲ, ರಂಗಕರ್ಮಿ ಮತ್ತು ಕಲಾವಿದ ಸೂರಜ್ ಸ್ಟಿಫನ್ ಡಿಸೋಜ, ಪತ್ರಕರ್ತ ನೌಶಾದ ಬಿಜಾಪುರ ಇವರುಗಳ ಪ್ರೀತಿ ಮತ್ತು ವಿಶ್ವಾಸಕ್ಕೆ ಕೃತಜ್ಞತೆಗಳು. ಕಾದಂಬರಿ ಬರೆಯುತ್ತಿರುವ ವಿಚಾರವನ್ನು ವಿಜಯ ಕರ್ನಾಟಕ 'ಲವಲವಿಕೆ' ಪುರವಣಿಯಲ್ಲಿ ಪ್ರಕಟಿಸಿದ ವಿದ್ಯಾರಶ್ಮಿ ಪೆಲ್ಲತ್ತಡ್ಕ ಅವರಿಗೆ ವಂದನೆಗಳು. ಮನೆಯೊಡತಿ ಅನುಪಮಾ ಹಾಗು ಕರುಳು ಕುಡಿಗಳಾದ ವಿನುತಾ ಶ್ರೇಯಾ ಅವರಿಗೆ ಅಪಾರ ಪ್ರೀತಿ.

- ಡಿ.ಎಸ್. ಚೌಗಲೆ

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...

ಮೂರೂ ಕಥನಗಳು ಮೂರು ದಿಕ್ಕಿನವು

20-10-2024 ಬೆಂಗಳೂರು

"ಮೂರೂ ಕಥನಗಳು ಮೂರು ದಿಕ್ಕಿನವು. ಹಾಗಾಗಿ, ಒಟ್ಟು ಓದು ಸ್ವಲ್ಪ ಚದುರಿದಂತೆ ಅನ್ನಿಸಿದರೂ ಕುತೂಹಲಕರವಾಗಿತ್ತು,&qu...