“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

Date: 05-01-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಸ್ಪೇನ್ ನ ಕಾನ್ಸೆಪ್ಚುವಲ್ ಆರ್ಟ್ ಕಲಾವಿದ ಸಾಂಟಿಯಾಗೊ ಸಿಯೆರಾ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಸಾಂಟಿಯಾಗೊ ಸಿಯೆರಾ (Santiyago Sierra)
ಜನನ: 1966
ಶಿಕ್ಷಣ: ಯೂನಿವರ್ಸಿದಾಸ್ ಕೊಂಪ್ಲುಟೆನ್ಸ್, ಮ್ಯಾಡ್ರಿಡ್ ನಲ್ಲಿ ಮತ್ತು ಯೂನಿವರ್ಸಿಟಿ ಆಫ್ ಫೈನ್ ಆರ್ಟ್ಸ್ ಹ್ಯಾಂಬರ್ಗ್, ಜರ್ಮನಿ (1989-91), ಅಕಾಡೆಮಿ ಆಫ್ ಸಾನ್ ಕಾರ್ಲೋ, ಮೆಕ್ಸಿಕೊ (1995-97) ಗಳಿಂದ ಫೈನ್ ಆರ್ಟ್ ಪದವಿ.
ವಾಸ: ಮ್ಯಾಡ್ರಿಡ್, ಸ್ಪೇನ್
ಕವಲು: ಕಾನ್ಸೆಪ್ಚುವಲ್ ಆರ್ಟ್
ವ್ಯವಸಾಯ: ಪರ್ಫಾರ್ಮೆನ್ಸ್ ಆರ್ಟ್

ಸಾಂಟಿಯಾಗೊ ಸಿಯೆರಾ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಸಾಂಟಿಯಾಗೊ ಸಿಯೆರಾ ಅವರ ಅಧಿಕೃತ ವೆಬ್ ಸೈಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಕಣ್ಣೆದುರಲ್ಲೇ ನಡೆಯುತ್ತಿರುವ “ಅನಾಗರಿಕ” ಸಂಗತಿಯೊಂದನ್ನು ನಮ್ಮ ಬದುಕಿನ ಸಹಜ ಭಾಗ ಎಂದು ನಾವು ಬಿಂಬಿಸಿಕೊಂಡು, ಏನೂ ಆಗೇ ಇಲ್ಲ ಎಂಬಂತೆ ಮುನ್ನಡೆಯುವ “ನಾಗರಿಕ” ಸಮಾಜದ ಮುಖಕ್ಕೆ ಅಡ್ಡಲಾಗಿ ನಿಂತು ಹಠಾತ್ತಾಗಿ ತಣ್ಣೀರು ಎರಚಿ ಬೆಚ್ಚಿ ಬೀಳಿಸುವ ಕಲಾವಿದ ಸಾಂಟಿಯಾಗೋ ಸಿಯೆರಾ. “ಒಳ್ಳೆಯ ಗುಣಮಟ್ಟ ಆದರೆ ಬಾರೀ ಕಡಿತ ದರ” ಎಂಬ ಮಾರುಕಟ್ಟೆ ವಿಜಯದ ಹಿಂದಿರುವ ಕಾರ್ಮಿಕರ ಶೋಷಣೆ, ದೇಶಗಳ ನಡುವೆ ಗೋಡೆ ಎಬ್ಬಿಸಿಕೊಂಡು ನಡೆಯುವ ರಾಜಕೀಯ ಮೇಲಾಟಗಳು, ಅನುಕೂಲಕ್ಕಾಗುತ್ತದೆ ಎಂದರೆ ನಾಜೀ ನರಮೇಧದಂತಹ ಹೇಯ ಕೃತ್ಯಗಳನ್ನು ಕೂಡ ಹೊಟ್ಟೆಗೆ ಹಾಕಿಕೊಂಡು ಏನೂ ಆಗೇ ಇಲ್ಲ ಎಂಬಂತೆ ವರ್ತಿಸುವ ಸಮಾಜ… ಇಂತಹವೆಲ್ಲ ಸಿಯೆರಾ ಅವರ ಕಲಾಕೃತಿಗಳು ಚರ್ಚಿಸುವ ಸಂಗತಿಗಳು. ಪ್ರತಿಯೊಂದು ಕಲಾಕೃತಿಯಲ್ಲಿಯೂ ನೋಡುಗನಲ್ಲಿ ವೈಯಕ್ತಿಕವಾಗಿ ಮತ್ತು ಒಟ್ಟು ಸಮಾಜವೊಂದರಲ್ಲಿ ಸಾಮೂಹಿಕವಾಗಿ ವ್ಯಗ್ರತೆಯನ್ನು ಮತ್ತು ಅದೇ ವೇಳೆಗೆ ಮುಜುಗರವನ್ನೂ ಹುಟ್ಟುಹಾಕುವಷ್ಟು ತೀವ್ರವೂ, ಸೈದ್ಧಾಂತಿಕವಾಗಿ ಅಷ್ಟೇ ಶಕ್ತಿಶಾಲಿಯೂ ಆದ “ಪರ್ಫಾರ್ಮೆನ್ಸ್” ಗಳ ಮೂಲಕ ಸಾಂಟಿಯಾಗೊ ಸಿಯೆರಾ ಜಗತ್ಪ್ರಸಿದ್ಧ.

ಮ್ಯಾಡ್ರಿಡ್ ನಲ್ಲಿ ಬೀದಿ ವೇಶ್ಯೆಯರಿಗೆ ಒಂದು ಡೋಸ್ ಮಾದಕ ದ್ರವ್ಯಕ್ಕಾಗುವಷ್ಟು ದುಡ್ಡು ಕೊಡುತ್ತೇನೆ, ಅದಕ್ಕಾಗಿ ಬೆನ್ನಿಗೆ ಟಾಟೂ ಹಾಕಿಸಿಕೊಳ್ಳಬೇಕು ಎಂಬ ಶರತ್ತು ಒಡ್ಡಿ ಕರೆತಂದು ಅವರ ಬೆನ್ನಿಗೆ ಅಡ್ಡ ಗೆರೆಯ ಟಾಟೂ ಎಳೆದು ಆ ಪರ್ಫಾರ್ಮೆನ್ಸಿಗೆ 160 cm Line Tattooed on 4 People, 2000 ಎಂದು ಹೆಸರಿಟ್ಟ ಸಿಯೆರಾ (ಕೆಳಗೆ ಈ ಪರ್ಫಾರ್ಮೆನ್ಸ್ ನ ವೀಡಿಯೊ ಇದೆ), ಈ ವಿವಾದಾತ್ಮಕ ಪರ್ಫಾರ್ಮೆನ್ಸ್ ಗೆ ಪ್ರತಿಕ್ರಿಯಿಸುತ್ತಾ,“ನಾನು ಎಳೆಸಿದ ಟಾಟೂ ಗೆರೆ ಸಮಸ್ಯೆ ಅಲ್ಲ, ಇಂತಹದೊಂದು ಸಾಮಾಜಿಕ ಸನ್ನಿವೇಶ ನಮ್ಮ ನಡುವೆಯೇ ಇದೆ ಎಂಬುದು ಚರ್ಚೆಯಾಗಬೇಕು” ಎನ್ನುತ್ತಾರೆ.

ಕಳೆದೆರಡು ದಶಕಗಳಿಂದ ಇಂತಹದೇ ರಾಜಕೀಯ ಆಕ್ಟಿವಿಸಂ ಸಹಿತ ಪರ್ಫಾರ್ಮೆನ್ಸ್ ಗಳಲ್ಲಿ ತೊಡಗಿರುವ ಸಿಯೆರಾ ಅವರ ಇನ್ನೊಂದು ಕೃತಿ ಪ್ರಾಜೆಕ್ಟ್ 22ನಲ್ಲಿ, 600 x 60x60ಸೆಂಮೀ ಗಾತ್ರದ ಶವ ಪೆಟ್ಟಿಗೆಯಂತೆ ಕಾಣುವ ತೊಲೆಗಳನ್ನು 28ಮಂದಿ ಕೂಲಿಗಳು ಹೊತ್ತು ನಿಲ್ಲಬೇಕು. ದಿನವಿಡೀ ಅವರು ಹೀಗೆ ನಿಂತಿರುವುದೇ ಪರ್ಫಾರ್ಮೆನ್ಸ್. ಈ ಪ್ರದರ್ಶನ ನಡೆಯುವಾಗ ಗ್ಯಾಲರಿಯಲ್ಲಿ ಹೊತ್ತು ನಿಂತ ಶ್ರಮಿಕರು ಮತ್ತು ಅದನ್ನು ನೋಡುತ್ತಾ ನಿಂತ ಸಭಿಕರು ಪ್ರತ್ಯೇಕವಾಗಿ ಕಂಡೂ ಪರ್ಫಾರ್ಮೆನ್ಸ್ ನ ಭಾಗವಾಗಿಬಿಡುತ್ತಾರೆ.

2015ರಲ್ಲಿ ತನ್ನ ಬಾಡಿಗೆ ಜನರನ್ನು ಕಳಿಸಿ ಉತ್ತರ ದ್ರುವ ಮತ್ತು ದಕ್ಷಿಣ ದ್ರುವಗಳಲ್ಲಿ ಕರಿ ಪತಾಕೆ ನೆಡಿಸುವ ಸಿಯೆರಾ, ಅಲ್ಲಿ ದೇಶಗಳು-ಸರ್ಕಾರಗಳು ತಮ್ಮ ಪತಾಕೆಗಳನ್ನು ನೆಟ್ಟು ಎಲ್ಲರದೂ ಆಗಿರುವ ಭೂಮಿಯನ್ನು ತಮ್ಮದೆಂದು ಧ್ವಜ ಊರುವ, ಮಾಲಕತ್ವ ಸ್ಥಾಪಿಸುವ ಪ್ರಯತ್ನಗಳನ್ನು ಗೇಲಿ ಮಾಡುತ್ತಾರೆ. “ ಈವರೆಗೆ ತಲುಪದ ಜಾಗಗಳಿಗೆ ಹೋಗಿ ಧ್ವಜ ನೆಟ್ಟು ಬರುವುದು ಅಮಾಯಕತೆ ಅಲ್ಲ, ವಸಾಹತುಶಾಹಿಗಳು ಹುಟ್ಟಿದ್ದೇ ಹೀಗೆ” ಎನ್ನುತ್ತಾರೆ ಅವರು.

ಜರ್ಮನಿಯಲ್ಲಿ 2006ರಲ್ಲಿ ತನ್ನ 245 Cubic Metres ಕಲಾಕೃತಿಯಲ್ಲಿ ಅವರು ಯಹೂದ್ಯ ಪ್ರಾಥನಾಮಂದಿರವೊಂದಕ್ಕೆ ಆರು ಕಾರುಗಳ ಹೊಗೆಯುಗುಳುವ ನಳಿಕೆಗಳನ್ನು ಸಂಪರ್ಕಿಸಿ, ಆ ಗ್ಯಾಸ್ ಚೇಂಬರಿಗೆ ವೀಕ್ಷಕರು ಆಮ್ಲಜನಕದ ಮಾಸ್ಕ್ ಧರಿಸಿ, ಸೂಕ್ತ ರಕ್ಷಣೆಯೊಂದಿಗೆ ಐದು ನಿಮಿಷಗಳ ಕಾಲ ಹೋಗಿ ಒಳಗಿದ್ದು ಬರಲು ಅವಕಾಶ ಮಾಡಿಕೊಡುತ್ತಾರೆ. ಜರ್ಮನಿಯ ಕೊಲೋನ್ ನಗರದಲ್ಲೇ ನಡೆದ ಈ ಪರ್ಫಾರ್ಮೆನ್ಸ್, ನಾಜಿ ನರಮೇಧದ ಬಗ್ಗೆ ಜರ್ಮನಿಯ ಈಗಿನ ಮೌನವನ್ನು ಪ್ರಶ್ನಿಸುವಂತಹದಾಗಿತ್ತು. ಅದಕ್ಕೆ ಯಹೂದ್ಯ ಸಮಾಜದ ವಿರೋಧ ಬಂದಾಗ ಸಿಯೆರಾ “It is meant to be a work about the industrialised and institutionalised death from which the European peoples of the world have lived and continue to live.” ಎನ್ನುತ್ತಾರೆ.

ವಲಸೆ ಕಾರ್ಮಿಕರಿಗೆ ದುಡ್ಡು ಕೊಟ್ಟು ಪ್ರದರ್ಶನ ಗ್ಯಾಲರಿಯಲ್ಲಿ ಪುಟ್ಟ ರಟ್ಟಿನ ಪೆಟ್ಟಿಗೆಯೊಳಗೆ ನಾಲ್ಕೈದು ತಾಸು ಕೂಡಿಹಾಕುವುದು, ಒಬ್ಬ ವ್ಯಕ್ತಿಯನ್ನು ಕೂಲಿ ಕೊಟ್ಟು ಗ್ಯಾಲರಿಯೊಳಗೆ ಗೋಡೆಕಟ್ಟಿ ದಿನಗಟ್ಟಲೆ ಕೂಡಿಹಾಕಿ, ಆಹಾರವನ್ನು ಸಣ್ಣ ತೆರವಿನ ಮೂಲಕ ಒದಗಿಸುವುದು, ಅರಬ್ ವಲಸೆ ಕಾರ್ಮಿಕರ ಮೈಗೆ ಪಾಲಿಯುರ್ತ್ರೀನ್ ರಾಸಾಯನಿಕ ಹೊಡೆದು ಬೆನ್ನು ಹಾಕಿ ಗಂಟೆಗಟ್ಟಲೆ ಕುಳಿತಿರುವಂತೆ ಮಾಡುವುದು… ಹೀಗೆ ಹಲವು ವಿವಾದಾತ್ಮಕ “ಪರ್ಫಾರ್ಮೆನ್ಸ್”ಗಳನ್ನು ಕಟ್ಟಿಕೊಟ್ಟಿರುವ ಸಾಂಟಿಯಾಗೊ ಸಿಯೆರಾ ತನ್ನ ಈ ಪರ್ಫಾರ್ಮೆನ್ಸ್ ಗಳ ಮೂಲಕ ಬಂಡವಾಳಶಾಹಿ ಜಗತ್ತಿನ ಸ್ವಾರ್ಥಗಳನ್ನು ಬಿಚ್ಚಿಡುತ್ತಾರೆ. ಒಬ್ಬ ಕಲಾವಿದರಾಗಿ ಸಿರಿವಂತ ಕಲಾಜಗತ್ತಿನಲ್ಲೂ ಇಂತಹದೇ “ನಯವಂಚನೆ” ಇದೆ ಎಂಬುದನ್ನು ಕೂಡಾ ಅಷ್ಟೇ ಪರಿಣಾಮಕಾರಿಯಾಗಿ ಸಿಯೆರಾ ಬಿಂಬಿಸಿದ್ದು ಹೇಗೆಂದರೆ, 2002ರ ವೆನೀಸ್ ಬಯೆನಾಲ್ ತೆರೆಯುವ ದಿನ, ಲಿಸ್ಸನ್ ಗ್ಯಾಲರಿಯ ಮಹಾದ್ವಾರವನ್ನು ತಗಡು ಹೊಡೆದು ಮುಚ್ಚಿದ್ದು!

ನಾಲ್ವರು ವೇಶ್ಯಾವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿಗೆ ಅವರ ಮಾದಕದ್ರವ್ಯದ ದುಡ್ಡಿಗಾಗಿ ಬೆನ್ನಿಗೆ ಟಾಟೂ ಬರೆ ಹಾಕಿದ ಪರ್ಫಾರ್ಮೆನ್ಸ್:

ಸಾಂಟಿಯಾಗೊ ಸಿಯೆರಾ, ಯಾನೀಸ್ ಕುನೆಲೀಸ್ ಮತ್ತು ಗಿಲ್ಬರ್ಟೊ ಝೊರಿಯೊ ಅವರ ಜೊತೆ ಕಲಾವಿದರ ಚರ್ಚೆ ಆರ್ಟ್ ಬಾಸೆಲ್‌ನಲ್ಲಿ.

ಸಾಂಟಿಯಾಗೊ ಸಿಯೆರಾ ಅವರ ಒಂದು ಸಂದರ್ಶನ ಇಲ್ಲಿದೆ:

ಚಿತ್ರ ಶೀರ್ಷಿಕೆಗಳು

ಸಾಂಟಿಯಾಗೊ ಸಿಯೆರಾ ಅವರ . black flag north pole and south pole (2015)


ಸಾಂಟಿಯಾಗೊ ಸಿಯೆರಾ ಅವರ Car exhaust emissions enter the synagogue in Stommein, Germany, in 2006 for Sierra’s 245 Cubic Metres. Photograph: Alamy Stock Photo


ಸಾಂಟಿಯಾಗೊ ಸಿಯೆರಾ ಅವರ Santiago Sierra – 160 cm Line Tattooed on 4 People (Línea de 160 cm tatuada sobre 4 personas), 2000, still image, El Gallo Arte Contemporáneo, Salamanca, Spain


ಸಾಂಟಿಯಾಗೊ ಸಿಯೆರಾ ಅವರ Santiago Sierra, Impenetrable Structure, Lisson Gallery, London 14 July–26 August 2017. Lisson Gallery, London.


ಸಾಂಟಿಯಾಗೊ ಸಿಯೆರಾ ಅವರ Santiago Sierra, Person remunerated for a period of 360 consecutive hours, 2000. Installation view, P.S.1 Contemporary Art Center, New York. Courtesy of Lisson Gallery, Lisson.


ಸಾಂಟಿಯಾಗೊ ಸಿಯೆರಾ ಅವರ Santiago Sierra, Space Closed by Corrugated Metal, 2002. Installation view, Lisson Gallery, London. Courtesy of Lisson Gallery, London.


ಸಾಂಟಿಯಾಗೊ ಸಿಯೆರಾ ಅವರ Santiago Sierra, Trabajadores que no pueden ser pagados rumenerados para permanecer en el interior de cajas carton (Workers who cannot be paid, remunerated to remain inside cardboard boxes), 2000. Courtesy of Lisson Gallery, London.

ಸಾಂಟಿಯಾಗೊ ಸಿಯೆರಾ ಅವರ Santiago Sierra's 7 forms measuring 600 x 60 x 60cm constructed to be held horizontal to a wall, Gallery of Modern Art, Brisbane. Photo: Ray Fulton


ಸಾಂಟಿಯಾಗೊ ಸಿಯೆರಾ ಅವರ Veterans of war facing the corner, 2017


ಸಾಂಟಿಯಾಗೊ ಸಿಯೆರಾ ಅವರ Work in progress on Santiago Sierra’s Polyurethane Spread on the Backs of 10 Workers at the Lisson Gallery, London, in 2004. Photograph: Courtesy of the artist

ಈ ಅಂಕಣದ ಹಿಂದಿನ ಬರೆಹಗಳು:

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಬಾಶೆಗಳ ಸಾವು ಮತ್ತು ತಾಯ್ಮಾತಿನ ಶಿಕ್ಶಣ

08-12-2024 ಬೆಂಗಳೂರು

"ಕರ‍್ನಾಟಕದ ಹಲವಾರು ಬುಡಕಟ್ಟುಗಳು ತಮ್ಮ ಬಾಶೆಯನ್ನು ಬಿಟ್ಟು ಕನ್ನಡ ಬಳಸಲು ಮುಂದಾಗುತ್ತಿವೆ. ಬಾರತದ ಹೊರಗೆ ...

ಅಜ್ಞಾತವಾಸಿ ಕಥೆಯಲ್ಲಿ ಅಡಗಿರುವ ಕ್ರೌರ್ಯ 

05-12-2024 ಬೆಂಗಳೂರು

"ಸಾಮಾನ್ಯವಾಗಿ ಪ್ರಗತಿಶೀಲ ಬರವಣಿಗೆಗೆ ಎಂದರೆ ಅಬ್ಬರದ ಧ್ವನಿ ರೊಚ್ಚಿನ ಕಿಚ್ಚಿನ ಸನ್ನಿವೇಶಗಳು ಪಾತ್ರಗಳು ಸಮಾಜದಲ...

ಕಡಕೋಳ ಅವರದು ಯಾವ ನಾಟಕ ಕಂಪನಿ ಮತ್ತು ಯಾವ ಪ್ರಮುಖ ಪಾತ್ರ?

02-12-2024 ಬೆಂಗಳೂರು

"ಕನ್ನಡವನ್ನು ಸುಲಿದ ಬಾಳೆಹಣ್ಣು, ಉಷ್ಣವಳಿದ ಉಗುರು ಬೆಚ್ಚಗಿನ ಹಾಲು, ಸಿಪ್ಪೆ ಸುಲಿದ ಕಬ್ಬು ಮುಂತಾಗಿ ಸುಲಭ, ಸುಲ...