Date: 08-01-2025
Location: ಬೆಂಗಳೂರು
‘ಹೊಂದಿಸಿ ಬರೆಯಿರಿ’ ಚಿತ್ರದ ನಂತರ ರಾಮೇನಹಳ್ಳಿ ಜಗನ್ನಾಥ್ ನಿರ್ದೇಶನದ ಮತ್ತೊಂದು ಚಿತ್ರ ‘ತೀರ್ಥರೂಪ ತಂದೆಯವರಿಗೆ’. ಈ ಚಿತ್ರ ಕಳೆದ ವರ್ಷವೇ ಪ್ರಾರಂಭವಾಗಿ ಒಂದಿಷ್ಟು ಚಿತ್ರದ ಚಿತ್ರೀಕರಣ ಸಹ ಆಗಿತ್ತು. ಆದರೆ, ಚಿತ್ರದ ನಾಯಕಿ ಯಾರು ಎಂಬ ವಿಷಯವನ್ನು ಚಿತ್ರತಂಡದವರು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಚಿತ್ರಕ್ಕೆ ರಚನಾ ಇಂದರ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
‘ಡಾರ್ಲಿಂಗ್’ ಕೃಷ್ಣ ಅಭಿನಯದ ಮತ್ತು ನಿರ್ದೇಶನದ ‘ಲವ್ ಮಾಕ್ಟೇಲ್’ ಚಿತ್ರದ ಮೂಲಕ ಜನಪ್ರಿಯರಾದವರು ರಚನಾ ಇಂದರ್. ಆ ಚಿತ್ರದಲ್ಲಿ ಅವರ ‘ಹೆಂಗೆ ನಾವು …’ ಎಂಬ ಸಂಭಾಷಣೆಯಿಂದ ಜನಪ್ರಿಯರಾದ ರಚನಾ, ಆ ನಂತರ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಇದೀಗ ‘ತೀರ್ಥರೂಪ ತಂದೆಯವರಿಗೆ’ ಚಿತ್ರದ ನಾಯಕಿಯಾಗಿದ್ದಾರೆ.
ರಚನಾ ಈ ಚಿತ್ರದಲ್ಲಿ ನಾಯಕ ನಿಹಾರ್ ಮುಖೇಶ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಅಕ್ಷರ ಪಾತ್ರದಲ್ಲಿ ರಚನಾರನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದ್ದು, ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಹಿರಿಯ ನಟ ಸಿತಾರಾ, ರಾಜೇಶ್ ನಟರಂಗ ಚಿತ್ರತಂಡ ಸೇರಿಕೊಂಡಿದ್ದು, ಇದೀಗ ಜಗನಾಥ್ ಅವರು ನಾಯಕಿಯನ್ನು ಪರಿಚಯಿಸಿದ್ದಾರೆ.
‘ತೀರ್ಥರೂಪ ತಂದೆಯವರಿಗೆ’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೈಸೂರು, ಕೊಚ್ಚಿ, ಮೂಡಿಗೆರೆ ಸುತ್ತಮುತ್ತ ಶೇ. 50ರಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸಂಕ್ರಾಂತಿ ಬಳಿಕ ನಾಲ್ಕನೇ ಹಂತದ ಚಿತ್ರೀಕರಣವನ್ನು ಮೂಡಿಗೆರೆಯಲ್ಲಿ ಮಾಡಲು ಯೋಜನೆ ಹಾಕಿಕೊಂಡಿದೆ. ಆ ನಂತರ ಉತ್ತರ ಭಾರತದ ಕಡೆ ಚಿತ್ರೀಕರಣ ನಡೆಸಲಿದೆ.
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ‘ತೀರ್ಥರೂಪ ತಂದೆಯವರಿಗೆ’ ಚಿತ್ರ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಹೊಂದಿಸಿ ಬರೆಯಿರಿ’ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಚಿತ್ರವನ್ನು ಅರ್ಪಿಸುತ್ತಿದೆ. ತೆಲುಗಿನಲ್ಲಿ ‘ಗುಪ್ಪೆಡಂತ ಮನಸು ಸೀರಿಯಲ್’ ಖ್ಯಾತಿಯ ನಿಹಾರ್ ಮುಕೇಶ್ ನಾಯಕನಾಗಿ ನಟಿಸುತ್ತಿದ್ದಾರೆ.
‘ತೀರ್ಥರೂಪ ತಂದೆಯವರಿಗೆ’ ಚಿತ್ರವು ಏಕಕಾಲಕ್ಕೆ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಮೂಡಿಬರುತ್ತಿದೆ.. ತೆಲುಗಿನಲ್ಲಿ ‘ಪ್ರಿಯಮೈನ ನಾನ್ನಕು’ ಎಂಬ ಶೀರ್ಷಿಕೆ ಇಡಲಾಗಿದೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಗ್ರಹಣ, ಜೋ ಕೋಸ್ಟ್ ಸಂಗೀತ ಸಂಯೋಜಿಸುತ್ತಿದ್ದು, ಪ್ರಶಾಂತ್ ರಾಜಪ್ಪ ಸಂಭಾಷಣೆ ರಚಿಸಿದ್ದಾರೆ.
ನಾಗಶೇಖರ್ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2’ ಚಿತ್ರವು ನಾಳೆ (ಜನವರಿ 10)ರಂದು ರಾಜ್ಯಾದ್ಯಂತ ಬಿಡ...
ಮಿಲಿಂದ್ ಮತ್ತು ರಚೆಲ್ ಡೇವಿಡ್ ಅಭಿನಯದ ‘ಅನ್‍ಲಾಕ್ ರಾಘವ’ ಚಿತ್ರವು ಫೆಬ್ರವ...
ಉಪೇಂದ್ರ ಅಭಿನಯದ ಮತ್ತು ನಿರ್ದೇಶನದ ‘UI’ ಚಿತ್ರವು ಡಿಸೆಂಬರ್ 20ರಂದು ಬಿಡುಗಡೆಯಾಗಿ, ಚಿತ್ರಕ್ಕೆ ...
©2025 Book Brahma Private Limited.