"ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಅವರ ಕವಿತೆಗಳನ್ನು ಪ್ರಕಟಿಸುವ ಮೂಲಕ) 80ರ ದಶಕದಲ್ಲಿ ಪರಿಚಯಿಸಿದ್ದಕ್ಕಾಗಿ," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಪತ್ರಕರ್ತ ಪ್ರೀತೀಶ್ ನಂದಿ ಅವರಿಗೆ ಸಲ್ಲಿಸಿದ ನುಡಿನಮನ..
ಭಾರತೀಯ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ನಾನು ನೆನಪಿಟ್ಟುಕೊಳ್ಳಬಯಸುವ ನನ್ನ ಕಾಲದ ಎರಡು ಸ್ವರ್ಣಿಮ ಅವಧಿಗಳೆಂದರೆ ಒಂದು, 80ರ ದಶಕದಲ್ಲಿ ಪ್ರೀತೀಶ್ ನಂದಿ ಅವರ ಸಂಪಾದಕತ್ವದ “ಇಲಸ್ಟ್ರೇಟೆಡ್ ವೀಕ್ಲಿ” ಮತ್ತು ಇನ್ನೊಂದು ವಿನೋದ್ ಮೆಹ್ತಾ ಅವರ “ಔಟ್‌ಲುಕ್” ಅವಧಿ.
ಪ್ರೀತೀಶ್ ಇನ್ನಿಲ್ಲ ಎಂಬ ಸುದ್ದಿ ಕೇಳಿದೆ.
ಕನ್ನಡಿಗರಿಗೆ ಪ್ರೀತೀಶ್ ನೆನಪಾಗುವುದು ಕನ್ನಡದ ಮಹತ್ವದ ಕವಿ-ಕಥೆಗಾರ ಲಂಕೇಶರನ್ನು ಭಾರತೀಯ ಸಾಹಿತ್ಯವಲಯಕ್ಕೆ (ತಮ್ಮ ಇಲಸ್ಟ್ರೇಟೆಡ್ ವೀಕ್ಲಿಯಲ್ಲಿ ಅವರ ಕವಿತೆಗಳನ್ನು ಪ್ರಕಟಿಸುವ ಮೂಲಕ) 80ರ ದಶಕದಲ್ಲಿ ಪರಿಚಯಿಸಿದ್ದಕ್ಕಾಗಿ.
ಜಾಹೀರಾತು ರಂಗದಿಂದ ಪತ್ರಿಕಾ ಸಂಪಾದಕರಾಗಿ ಬಂದ ಪ್ರೀತೀಶ್ ಕಾಲದ ಇಲಸ್ಟ್ರೇಟೆಡ್ ವೀಕ್ಲಿ, ಪತ್ರಿಕೆಯ ವಿನ್ಯಾಸಕ್ಕೆ ಸಂಬಂಧಿಸಿದಂತೆ 80ರ ದಶಕದಲ್ಲೇ ತನ್ನ ಕಾಲಕ್ಕಿಂತ 50 ವರ್ಷ ಮುಂದಿತ್ತು ಎಂದರೆ ತಪ್ಪಾಗದು. ನಾನು ಸುದ್ದಿಮನೆಗೆ ಕಾಲಿಟ್ಟದ್ದೇ 80ರ ದಶಕದ ಕೊನೆಯಲ್ಲಿ. ಆದರೆ ವಿದ್ಯಾರ್ಥಿಯಾಗಿಯೇ ಇಲಸ್ಟ್ರೇಟೆಡ್ ವೀಕ್ಲಿಯನ್ನು ಕಾಲೇಜು ಲೈಬ್ರರಿಯಲ್ಲಿ ನೋಡಿ ಬೆರಗಾಗುತ್ತಿದ್ದೆ. ಉದ್ಯೋಗಕ್ಕೆ ಸೇರಿದ ತಕ್ಷಣ ಮಾಡಿದ ಕೆಲಸ, ಇಲಸ್ಟ್ರೇಟೆಡ್ ವೀಕ್ಲಿ ಚಂದಾದಾರನಾದುದು. ಅದರ ಕೊನೆಯ ಸಂಚಿಕೆಯ ತನಕವೂ ಚಂದಾದಾರನಾಗಿದ್ದೆ. ಆದರೆ, ದುರದೃಷ್ಟವಶಾತ್ ಸಂಗ್ರಹದಲ್ಲಿದ್ದ ಆ ಎಲ್ಲ ಸಂಚಿಕೆಗಳೂ 35 ವರ್ಷ ಹಿಂದೆ ಗೆದ್ದಲಿಗೆ ಆಹಾರವಾದವು... ಅದರ ಪುಟಗಳಲ್ಲಿ ಕಪ್ಪು-ಬಿಳುಪಿನಲ್ಲೇ ಸಾಧಿಸುತ್ತಿದ್ದ ಪುಟ ವಿನ್ಯಾಸದ ಸೊಬಗು, ಆ ಕಾಲಕ್ಕಿಂತ ಬಹಳ ಮುಂದಿದ್ದ ಡಿಸೈನ್ ಪ್ರಯೋಗಗಳು, ಮುಖಪುಟದಲ್ಲಿ ಒಂದಿಷ್ಟು ಕಾಲ ಬರುತ್ತಿದ್ದ ವ್ಯಕ್ತಿಗಳ ವಾಟರ್ ಕಲರ್ ಪೋರ್ಟ್ರೈಟ್‌ಗಳು... ಈಗಿನ ಅತ್ಯಾಧುನಿಕ ತಂತ್ರಜ್ಞಾನ ಬಳಸುವ ಗ್ರಾಫಿಕ್ ಡಿಸೈನರ್‌ಗಳೂ ನಾಚುವಂತಿದ್ದವು.
ಕನ್ನಡದಲ್ಲಿ ಕೆಲವರು “ಪೇಜ್ ಡಿಸೈನ್” ಅರ್ಹತೆಗೇ ಸಂಪಾದಕರಾದ “ಡಿಸೈನರ್ ಸಂಪಾದಕರು” ಇದ್ದಾರೆ. ಅವರು ಇಂದು ಅಟ್ಟ ಹತ್ತಿ ಕೂತಮೇಲೆ ಹೊರತರುತ್ತಿರುವ, ವಾಕರಿಕೆ ತರಿಸುವ “ರದ್ದಿ” ವಿನ್ಯಾಸಗಳನ್ನು ಕಂಡರೆ “ವ್ಯಾಕ್” ಅನ್ನಿಸುತ್ತದೆ. ಎಲ್ಲಿ ಒಂದು ಸೆಂಟಿ ಮೀಟರ್ ಜಾಗ ಖಾಲಿ ಬಿಟ್ಟರೆ “ಭಾರೀ ನಷ್ಟ” ಸಂಭವಿಸೀತು ಎಂಬ ಯೋಚನೆಯಲ್ಲಿ ಪುಟ ವಿನ್ಯಾಸ ಮಾಡುವ ನಮ್ಮ ಕನ್ನಡ ಪತ್ರಿಕೆಗಳ ಪುಟ ಕಟ್ಟುವ ಮಂದಿ ಸಾಧ್ಯವಾದರೆ, ಎಲ್ಲಾದರೂ ಲಭ್ಯವಿದ್ದರೆ, ಹಳೆಯ ಇಲಸ್ಟ್ರೇಟೆಡ್ ವೀಕ್ಲಿ ಪುಟಗಳನ್ನು ನೋಡಬೇಕು. ಅಲ್ಲಿ, ಪುಟ ವಿನ್ಯಾಸದಲ್ಲಿ "ಖಾಲಿ ಜಾಗದ" ಮಹತ್ವ ಅರಿಯಬೇಕು. ಆ ಕಾಲದಲ್ಲೇ ಫ್ಯಾಷನ್ ಫೊಟೋಗ್ರಾಫರ್ ಗೌತಮ್ ರಾಜಾಧ್ಯಕ್ಷ (ಇವರು ನನಗೆ ನೆನಪಿರುವಂತೆ ಇಲಸ್ಟ್ರೇಟೆಡ್ ವೀಕ್ಲಿ ಮುಚ್ಚುವ ಕಾಲಕ್ಕೆ ಅದರ ಸಂಪಾದಕರಾಗಿದ್ದರು) ಜೊತೆ ಸೇರಿ ಮಾಡಿದ ಕೆಲವು ಕಪ್ಪು-ಬಿಳುಪು ಪುಟಗಳ ವಿನ್ಯಾಸ ಪ್ರಯೋಗಗಳನ್ನು ಗಮನಿಸಬೇಕು.
ಹಾಗಿದ್ದರೆ, ಜಾಹೀರಾತು ರಂಗದ ಹಿನ್ನೆಲೆಯ ಪ್ರೀತೀಶ್ ನಂದಿ ಬರೇ ಪುಟ ವಿನ್ಯಾಸ ಮಾಡಿದ್ದೇ? ಅಲ್ಲ. ಸ್ವತಃ ಪತ್ರಕರ್ತರಾಗಿ ಇಲಸ್ಟ್ರೇಟೆಡ್ ವೀಕ್ಲಿಗೆ ಅವರು ಮಾಡಿದ ಕೆಲವು ಸಂದರ್ಶನಗಳು ಭಾರತದ ರಾಜಕೀಯರಂಗದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದವು. ಓಷೊ ರಜನೀಶ್ ಸಂದರ್ಶನ, ಕರ್ನಾಟಕದ ಮಾಜೀ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಒಂದು ಹಗರಣದ ಕಾಲದ ಸಂದರ್ಶನ, ಮಾಜೀ ಪ್ರಧಾನಿ ಚಂದ್ರಶೇಖರ್ ಅವರ ಕಾಲದ ಟೆಲಿಫೋನ್ ಟ್ಯಾಪಿಂಗ್ (?) ಹಗರಣ, ಬೊಫೋರ್ಸ್ ಕಾಲದಲ್ಲಿ ಅಮಿತಾಬ್-ಅಜಿತಾಬ್ ಸಂದರ್ಶನ, ಓದಿಶಾ ಮುಖ್ಯಮಂತಿರ್ ಜೆ. ಬಿ. ಪಟ್ನಾಯಕ್ ಸಂದರ್ಶನ... ಹೀಗೆ ಅವರು ಸಂದರ್ಶನ ಮಾಡಿದರೇ ಅದು "ಬಾಂಬ್!".
ಪ್ರೀತೀಶ್ ನಂದಿ ಅವರನ್ನು ಭಾರತೀಯ ಪತ್ರಿಕೋದ್ಯಮ ಅವರ ಸಾಮರ್ಥ್ಯದಷ್ಟು ಬಳಸಿಕೊಳ್ಳಲಿಲ್ಲ, ಅಥವಾ ಆ ಕಾಲಕ್ಕೆ ಅವರು ಭಾರತೀಯ ಪತ್ರಿಕೋದ್ಯಮ ಇದ್ದಲ್ಲಿಗಿಂತ ಬಹಳ ಮುಂದಿದ್ದರು ಅನ್ನಿಸುತ್ತದೆ. ಹೋಗಿಬನ್ನಿ ಪ್ರೀತೀಶ್ ನಂದಿ
"ಗಂಡಸಾಗಿ ಕವಿತೆ ಬರೆಯುವುದು ಸುಲಭ ಕೃತಿಯ ಕವಿತೆಗಳು ಎಲ್ಲ ಗಂಡಸರ ಮತ್ತು ಹೆಂಗಳೆಯರ ಬದುಕಿನ ಅನುಭವದ ಪ್ರತಿಫಲನಗಳ...
“ನನ್ನ ಈ 'ನಾಡವರ್ಗಳ್' ಪುಸ್ತಕವನ್ನು ಸಿದ್ದಗೊಳಿಸುತ್ತಿರುವಾಗ ನಾನು ಇನ್ನೂ ಎಷ್ಟೊಂದು ಸಂಪನ್ನರ ಬಗ್ಗೆ...
“ಶ್ರೀ ಶಾಂತಿನಾಥ ದಿಬ್ಬದ ಅವರು ಮಾಡಿರುವ ಈ ಕೆಲಸವನ್ನು ಕನ್ನಡ ಸಾಹಿತ್ಯ ಲೋಕ ಹೆಮ್ಮೆಯಿಂದ ಸ್ಮರಿಸುತ್ತದೆ,&rdqu...
©2025 Book Brahma Private Limited.