ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುವ ಕೃತಿಯಿದು


“ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕುಗಳಲ್ಲಿ ವಿಸ್ತರಿಸುವತ್ತ ಹೆಜ್ಜೆ ಹಾಕಿದೆ” ಎನ್ನುತ್ತಾರೆ ಸಂಗಮೇಶ ಬಾದವಾಡಗಿ. ಅವರು ‘ಅಂಡಮಾನ್’ ಪ್ರವಾಸ ಕಥನಕ್ಕೆ ಬರೆದ ನನ್ನುಡಿ.

ಇತ್ತೀಚೆಗೆ ಕನ್ನಡ ಭಾಷೆ ಸೇರಿದಂತೆ ಎಲ್ಲಾ ಭಾಷೆಗಳಲ್ಲೂ ಪ್ರವಾಸ ಕಥನಗಳು ಲೇಖಕರಿಂದ ಪ್ರಕಟಗೊಳ್ಳುತ್ತಲೇ ಇರುತ್ತವೆ. ಅಂಡಮಾನ್ ಪ್ರವಾಸ ಕುರಿತಾಗಿ ಕನ್ನಡದಲ್ಲಿ ಅನೇಕ ಕೃತಿಗಳು ಈಗಾಗಲೇ ಬಂದಿರಬಹುದು. ಆದರೆ ಒಬ್ಬೊಬ್ಬರದು ಒಂದೊಂದು ಅನುಭವ. ಒಬ್ಬೊಬ್ಬರದು ಭಿನ್ನ ಅನಿಸಿಕೆಗಳ ಮೂಲಕ ಕಥನಗಳಲ್ಲಿ ಹೊಸ ಹೊಸ ನಾವಿನ್ಯಗಳು ಬೆಳಕಿಗೆ ಬರಬಹುದಾದರಿಂದ ಅವುಗಳು ವಿಶಿಷ್ಟವೆನಿಸುತ್ತವೆ. ಪ್ರವಾಸ ಸಾಹಿತ್ಯ ಅದೊಂದು ವ್ಯಕ್ತಿ ಪರಿಚಯದಂತಹ ಕೃತಿಯಂತಿದೆಯಂತಲೋ ಮತ್ತು ಯಥಾವತ್ ಸ್ಥಳ ಅದರ ಮಹಿಮೆ ಚರಿತ್ರೆ ಇವುಗಳ ಸುತ್ತಲೇ ಅವುಗಳನ್ನು ಪರಿಚಯಿಸುವ ಕ್ರಿಯೆ ಒಂದೇ ರೀತಿ ಆಗಿರುವುದೆಂತಲೋ ಪ್ರವಾಸ ಕಥನವೆನ್ನುವುದು ಸಾಹಿತ್ಯಕ ಪ್ರಕಾರವೆಂದು ಪರಿಗಣಿಸಲು ಹಿಂದೇಟು ಹಾಕುತ್ತಾರೆ. ಆದರೆ ಬದಲಾದ ಕಾಲದಲ್ಲಿ ಪ್ರತಿಯೊಬ್ಬರಲ್ಲೂ ಪ್ರವಾಸ ಮಾಡಬೇಕು. ವಿಸ್ಮಯಗಳನ್ನು ಕಣ್ಣಾರೆ ಕಾಣಬೇಕು. ಸೌಂದರ್ಯವನ್ನು ಆನಂದಿಸಬೇಕು ಎನ್ನುವ ಅಭಿಪ್ಸೆಗಳು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಲೇಖಕರಾದವರು ಭೇಟಿ ನೀಡಿದಾಗ ಅದರ ಕುರಿತಾಗಿ ಪ್ರವಾಸ ಕಥನ ಬರೆಯುವ ಸಾಹಸಕ್ಕೆ ಕೈ ಹಾಕುತ್ತಾರೆ. ಕೃತಿ ಪರಿಚಯದ ಏಕತಾನತೆಯಿಂದ ತಪ್ಪಿಸಿಕೊಳ್ಳಲು ಪ್ರವಾಸದ ಕಾಲದಲ್ಲಿ ಸಮಕಾಲೀನ ವಿಚಾರಗಳು, ಹೊಸ ಹೊಸ ಅನುಭವಗಳ ಸಂವೇದನೆಗಳು ನೋಡುವ ದೃಷ್ಟಿಯಲ್ಲಿ ಭಿನ್ನತೆಯ ದೃಷ್ಟಿ ಕೋನಗಳು ಇವೆಲ್ಲವುಗಳ ಮಿಶ್ರಣದಿಂದ ರಚನೆಯಾಗುತ್ತಿರುವ ಕಾರಣ ಇಂತಹ ಕೃತಿಗಳು ಕಾದಂಬರಿಯ ಸ್ವರೂಪದಂತೆ ಅನಿಸಬಹುದು. ಕಥಾ ಮಂಜರಿಯೂ ಆಗಬಹುದು. ಒಟ್ಟಾರೆ ಓದುಗರನ್ನ ಸರಾಗವಾಗಿ ಓದಿಸಿಕೊಂಡು ಹೋಗುವಂತಹ ತಾಕತ್ತು ಇದ್ದರೆ ಅದೊಂದು ಉತ್ತಮ ಕೃತಿಯಾಗುತ್ತದೆ ಮತ್ತು ಓದಿನ ಜೊತೆಗೆ ಕೃತಿ ಒಳ್ಳೆಯ ಮಾರ್ಗದರ್ಶನದಂತೆ ಮಾರ್ಗದರ್ಶಿಯಾಗಿ ಕೆಲಸ ಮಾಡುವುದರಿಂದ ಇದೊಂದು ಪ್ರವಾಸಿ ಸಾಹಿತ್ಯದಲ್ಲಿ ಆಶಾದಾಯಕ ಬೆಳವಣಿಗೆಯನ್ನು ಮೂಡಿಸುತ್ತದೆ. ಪ್ರವಾಸ ಸಾಹಿತ್ಯ ಬರಹಗಾರನ ಕೌಶಲ್ಯತೆಯಿಂದ ಇಲ್ಲಿಯವರೆಗೆ ಏಕತಾನತೆಯ ಏಕಮುಖದ ದಿಕ್ಕನ್ನು ತಪ್ಪಿಸಿ ಎಲ್ಲಾ ದಿಕ್ಕುಗಳಲ್ಲಿ ವಿಸ್ತರಿಸುವತ್ತ ಹೆಜ್ಜೆ ಹಾಕಿದೆ.

ನಾವು ನೋಡುವ ದೇಶ, ಚರಿತ್ರಾರ್ಹ ಸ್ಥಳ, ಅವಶೇಷಗಳ ಕಟ್ಟಡ ವಿಸ್ಮಯಗಳ ಸ್ವರೂಪ, ಧಾರ್ಮಿಕ ಕ್ಷೇತ್ರ. ಸುಂದರ ಪರಿಸರದ ತಾಣಗಳು. ಇವೆಲ್ಲಾ ಸ್ವರೂಪದಲ್ಲಿ ಒಂದೇ ತರನಾಗಿದ್ದು ಅದನ್ನೇ ಯಥಾವತ್ತಾಗಿ ಪರಿಚಯಿಸಿದರೆ ಅದು ಏಕತಾನತೇ ಅಷ್ಟೇ ಅಲ್ಲ ಇನ್ಯಾರೋ ಲೇಖಕನು ಸಂದರ್ಶಿಸಿ ಬರೆದ ಪ್ರವಾಸ ಕಥನದ ನಕಲಾಗಿ ಕಾಣಿಸಬಹುದು. ಆದುದರಿಂದ ಅದರ ಯಥಾವತ್ತತೆಯ ಜೊತೆಗೆ ಆ ನೆಲದ ಸಂಸ್ಕೃತಿ ಆಚಾರ, ವಿಚಾರ, ಆಸಕ್ತಿ, ಆಸ್ಥೆಗಳನ್ನು ಪ್ರಜ್ಞಾಪೂರ್ವಕವಾಗಿ ವಿಮರ್ಶಿಸಿಕೊಂಡು ಹದವಾಗಿ ಬೆರೆಸುತ್ತಾ ಹೋದರೆ ಅದೊಂದು ಉತ್ತಮ ಕೃತಿಯಾಗಿ ಮಾರ್ಪಾಟಾಗುವುದು. ಮೂರ್ತಿಯನ್ನು ಕೆತ್ತುವ ಬಂಡೆ ಒಂದೆಯಾದರೆ ಅದರಲ್ಲಿ ವಿಭಿನ್ನ ಮೂರ್ತಿಗಳು ಕೆತ್ತಲ್ಪಡುತ್ತವೆ. ಪ್ರತಿಯೊಂದು ವಸ್ತು ಮತ್ತು ಸ್ಥಳಗಳಲ್ಲಿ ದೊರೆಯುವ ಸೌಂದರ್ಯ ಪ್ರಜ್ಞೆಯು ಒಬ್ಬರಿಗಿಂತ ಒಬ್ಬರಿಗೆ ಭಿನ್ನತೆ ಇರಬಹುದು. ಒಬ್ಬನಿಗೆ ಸಮುದ್ರ ಕಂಡಾಗ ಅಲ್ಲೇನಿದೆ ಬರೀ ಉಪ್ಪು ನೀರೆಂದು ನಿರ್ಲಕ್ಷಿಸಬಹುದು. ಇನ್ನೊಬ್ಬನಿಗೆ ಇದೊಂದು ತುಂಬಾ ಮಜಾ ನೀಡುವಂತ ಸೌಂದರ್ಯದ ಖಜಾನೆಯೆಂದು ಅನಿಸಬಹುದು. ಆದುದರಿಂದ ಬರೀ ವರ್ಣನೆಗೆ ಮರುಳಾಗಲು ಸಾಧ್ಯವಾಗದು.

ಅಂಡಮಾನಿನ ಪ್ರವಾಸ ಸಮಾನ ಮನಸ್ಕರು, ಸಮಾನ ವಯಸ್ಕರರು ಸೇರಿ ಕೈಗೊಂಡ ಪ್ರವಾಸ ಯಾತ್ರೆಯಾಗಿತ್ತು. ಎಲ್ಲರೂ ನೌಕರಿಯಿಂದ ನಿವೃತ್ತರಾಗಿದ್ದು ಜೀವನದ ಸಾಂಸಾರಿಕ ಅಂಗದಲ್ಲಿ ಎಲ್ಲಾ ಜವಾಬ್ದಾರಿಗಳು ತೀರಿಹೋಗಿದ್ದರಿಂದ ನಾವೂ ಕೂಡ ಸ್ವತಂತ್ರರಾಗಿ ದೇಶ ಸುತ್ತಬೇಕೆನ್ನುವ ಮನೋಭಿಲಾಷೆ ಉಳ್ಳವರು ಮತ್ತು ಸೇವಾವಧಿಯಲ್ಲಿ ಪ್ರವಾಸಗಳಿಗೆ ಹೋಗಲು ಅನೇಕ ಅಡೆತಡೆಗಳಿದ್ದುದರಿಂದ ಎಷ್ಟೋ ಸಲ ಕಂಡ ಕನಸುಗಳು ನನಸಾಗಿ ಉಳಿದುಬಿಟ್ಟಿರುತ್ತವೆ. ಅವುಗಳನ್ನು ನನಸಾಗಿ ಮಾಡಲು ಇದೊಂದು ಪರ್ವಕಾಲ ಆಗಿರುವುದರಿಂದ ಪ್ರವಾಸ ಅಗತ್ಯವೆನಿಸುತ್ತದೆ. ಈ ವಯಸ್ಸಿನಲ್ಲಿ ಪ್ರವಾಸವೆನ್ನುವುದು ಜೀವನೋತ್ಸಾಹಕ್ಕೆ ನೀಡುವ ಟಾನಿಕ್ ಕೂಡ ಹೌದು. ಸೇವಾವಧಿಯಲ್ಲಿದ್ದು ನಿವೃತ್ತಿ ಅಂಚಿಗೆ ಬಂದಾಗ ನಾವುಗಳು ಬೇರೆ ಬೇರೆ ಊರುಗಳಲ್ಲಿದ್ದರೂ ಕೊನೆಯ ದಿನಮಾನಗಳಲ್ಲಿ ಬೆಂಗಳೂರಿಗೆ ವರ್ಗಾಯಿಸಿಕೊಂಡು ಇಲ್ಲಿಯೇ ಸೆಟಲ್ ಆಗಬೇಕು ಎಂಬ ಎಲ್ಲರೂ ಬಂದವರಾಗಿದ್ದೇವೆ ಮತ್ತು ಇಲ್ಲಿ ಮನೆ ಮಠ ಮಾಡಿಕೊಂಡು ಸ್ವಂತ ಮನೆಯ ವಿಳಾಸ ಹೊಂದಿರುತ್ತೇವೆ. ನಿವೃತ್ತಿಯ ನಂತರ ಓಡಾಟದ ಪ್ರವೃತ್ತಿಗೆ ಬ್ರೇಕ್ ಬಿದ್ದುದ್ದನ್ನು ನಿವಾರಿಸಿ ತೀರ್ಥಯಾತ್ರೆ, ಜಾತ್ರೆ, ದೇವಸ್ಥಾನಗಳಿಗೆ ಭೇಟಿಯನ್ನು ಸಹಜವಾಗಿ ನೀಡುತ್ತಿದ್ದೇವೆ. ಆದರೆ ಪ್ರವಾಸದಲ್ಲೂ ಎರಡು ವರ್ಗದ ಪ್ರವಾಸಿಗಳಿದ್ದು ಇಂತಹ ಯಾತ್ರೆಗಳಿಗೆ ಸಹಜವಾಗಿ ಪತ್ನಿ ಸಮೇತರಾಗಿ ಭೇಟಿ ನೀಡುತ್ತಾರೆ. ಇನ್ನು ಮೋಜು ಮಸ್ತಿಯ ಜೊತೆಗೆ ನೌಕರಿಯಲ್ಲಿದ್ದಾಗ ಅನುಭವಿಸಲು ಸಿಗದ ವಂಚಿತ ಚಟುವಟಿಕೆಗಳನ್ನು ಕ್ರಿಯಾಶೀಲವಾಗಿಡಲು ಸ್ನೇಹಿತರ ಜೊತೆ ವಿದೇಶಗಳಿಗೆ ಭೇಟಿ ನೀಡುವವರಿದ್ದಾರೆ. ಹಾಗೆಂದಾಕ್ಷಣ ಕಲ್ಬರ್ಡ್ ಸ್ಥಳಗಳೇ ಬೇರೆ ಅನ್‌ಕಲ್ಬರ್ಡ್ ಸ್ಥಳಗಳೇ ಬೇರೆ ಎನ್ನಲಾಗದು. ಅದು ಅವರವರ ಮನಸ್ಥಿತಿಗೆ ಅವಲಂಬಿತವಾಗಿದೆ. ಇನ್ನೂ ಕೆಲವರಲ್ಲಿ ಪ್ರವಾಸವೆಂದರೆ ಇದೊಂದು ದುಂದು ವೆಚ್ಚದ ಕೆಲಸವೆಂದು, ಮನೆಯಲ್ಲಿಯೇ ಇದ್ದು ಬಿಡುತ್ತಾರೆ. ಗಳಿಸಿದ್ದನ್ನು ಉಳಿಸಿದ್ದನ್ನು ಕಾಯುವುದೇ ಅವರ ಕೆಲಸ ಆಗುವುದಾದರೆ ಮನಸ್ಸು ಮತ್ತು ದೇಹಗಳು ರಿಲ್ಯಾಕ್ಷೇಷನ್ ಆಗುವುದು ಯಾವಾಗ? ಅದಕ್ಕಾಗಿ ನಾವು ಗಳಿಸಿದ್ದನ್ನು ಉಳಿಸಿದ್ದನ್ನು ಸ್ವಲ್ಪವನ್ನಾದರೂ ನಮಗಾಗಿಯೇ ಬಳಸಿಕೊಳ್ಳಬೇಕಾದದ್ದು ಅವಶ್ಯಕವಲ್ಲವೇ, ಅದಕ್ಕೆ ಗಾಳಿ ಬಿಟ್ಟಲ್ಲಿ ತೂರಿಕೊಳ್ಳಿರಯ್ಯಾ, ಗಾಳಿ ನಿನ್ನ ಆಧೀನವಲ್ಲವಯ್ಯಾ, ನಾಳೆ ತೂರಿಹನೆಂದರೆ ಇಲ್ಲವಯ್ಯಾ ಎನ್ನುವ ಮಾತಿನಂತೆ ವಯಸ್ಸು ಮತ್ತು ದೇಹ ಸುಸ್ತಿತಿಯಲ್ಲಿದ್ದಾಗ ಪ್ರವಾಸದ ಅಗತ್ಯತೆ ಇದೆ.

ನಮ್ಮ ಪೂರ್ವಿಕರಾಗಲಿ, ಪ್ರಕೃತಿಯಾಗಲಿ ನಮಗೆ ಬಿಟ್ಟು ಹೋಗಿರುವ ಸಾಹಿತ್ಯ, ಕಲೆ, ಸಂಗೀತ, ಸಂಸ್ಕೃತಿ ಆಚರಣೆಯ ವಿಧಿ ವಿಧಾನಗಳು ಇವೆಲ್ಲವುಗಳ ನಿಗೂಢತೆಯನ್ನು ಅನಾವರಣ ಮಾಡುತ್ತಾ ಹೃದಯಕ್ಕೆ ಸಂತೃಪ್ತಿ ನೀಡುತ್ತದೆ. ಮನಸ್ಸಿಗೆ ಮುದ ನೀಡುವ ಸ್ಥಳ ಹಾಗೂ ಕೃತಿಯನ್ನು ನೋಡುವಿಕೆಯಿಂದ, ಸ್ಪರ್ಶಾನಂದದಿಂದ, ಕೇಳುವಿಕೆಯಿಂದ ಉನ್ನತ ವ್ಯಕ್ತಿತ್ವ ನಿರ್ಮಾಣಕ್ಕೆ ಕೂಡ ಸಹಾಯಕವೆನಿಸುತ್ತದೆ. ಗುಂಪು ಪ್ರವಾಸದಿಂದ ಹಿಂಸೆ, ಜಾತಿ, ಅಸಹಿಷ್ಣುತೆ, ಸಂಕುಚಿತ ಮನೋಭಾವನೆಯನ್ನು ಕಿತ್ತು ಹಾಕಿ ಭಾತೃತ್ವ ಬೆಳೆಸಬಲ್ಲದು. ಪ್ರತೀ ಪಯಣ ಸೌಂದರ್ಯದ ಆಸ್ವಾದನೆಯಾಗಿರುತ್ತದೆ. ಬೆರಗು, ಬೆಡಗು, ಅಸಾಧಾರಣ, ಸೌಂದರ್ಯ, ಘನತೆಯ ಪ್ರತೀಕಗಳೆನಿಸಿರುವ ಪ್ರಕೃತಿ ತಾಣಗಳು, ಸಹೃದಯ ಪ್ರವಾಸಿಗರಿಗೆ ಒಂದು ಸುಂದರ ಅನುಭವದ ಕಥನವನ್ನು ಕಟ್ಟಿಕೊಡುತ್ತದೆ. ಆದ್ದರಿಂದ ನಾವುಗಳು ಜಲ, ಲಹರಿಯ ಸಮುದ್ರ ರಾಶಿ, ಮರುಳು ರಾಶಿ, ಗುಡ್ಡ ಬೆಟ್ಟಗಳ ಕಾಶಿ ಆಗಿರುವ ಅಂಡಮಾನಕ್ಕೆ ಈ ಹಿಂದೆ ಹೇಳಿದಂತೆ ಕೂಡಿ ಈ ಪ್ರವಾಸ ಕೈಗೊಂಡಿದ್ದೆವು. ಅವರುಗಳು ನಾವೆಲ್ಲಾ ಕೂಡಿ ಹೋದ ಈ ಪ್ರವಾಸದ ಸಂದರ್ಭವನ್ನು ಕಥನ ರೂಪವಾಗಿ ಪ್ರಕಟಿಸಲೇಬೇಕೆಂದು ನನಗೆ ಬೆಂಬಲ ಮತ್ತು ಪ್ರೇರಣೆ ನೀಡಿದರು. ಆದುದರಿಂದ ಅವರ ಸಹಕಾರದಿಂದ ಈ ಪ್ರವಾಸ ಕಥನ ಸಾಹಿತ್ಯ ಕ್ಷೇತ್ರಕ್ಕೆ ಪ್ರವೇಶ ಪಡೆದಿದೆ. ಅದಕ್ಕಾಗಿ ಗೆಳೆಯರಾದ ಶ್ರೀ ದಾಮೋದರ್, ಶ್ರೀ ವೆಂಕಟರಮಣಸ್ವಾಮಿ, ಶ್ರೀ ಕೃಷ್ಣಾರೆಡ್ಡಿ, ಶ್ರೀ ಡಾಕಪ್ಪ, ಶ್ರೀ ನಾಗೇಂದ್ರಪ್ಪ, ಶ್ರೀ ಲೋಕಪ್ಪ, ಶ್ರೀ ಲಗಮೇಶ್ ಮಾವನೂರು, ಶ್ರೀ ನಿಂಗಪ್ಪ ಕಣಬರಿಗಿ, ಶ್ರೀ ಡಿ.ಕೆ. ವೆಂಕಟೇಶ್ ರವರಿಗೆ ಅತ್ಯಂತ ಕೃತಜ್ಞತೆಗಳು. ಇವರುಗಳೇ ಈ ಪುಸ್ತಕದ ಪ್ರಕಾಶಕರೂ ಹೌದು.

ನಿವೃತ್ತ ಕೆ.ಎ.ಎಸ್. ಅಧಿಕಾರಿಗಳು, ಖ್ಯಾತ ಬರಹಗಾರರಾದ ಶ್ರೀ ವೆಂಕಟೇಶ್ ಮಾಚಕನೂರವರು, ಈ ಪ್ರವಾಸ ಕಥನಕ್ಕೆ ಒಪ್ಪುವಂತಹ ಉತ್ತಮ ಮುನ್ನುಡಿ | ಬರೆದುಕೊಟ್ಟಿದ್ದಕ್ಕೆ ಅವರಿಗೆ ಅನಂತಾನಂತ ಧನ್ಯವಾದಗಳು. ಈ ಪ್ರವಾಸವನ್ನು ಸುವ್ಯವಸ್ಥಿತ ರೀತಿಯಲ್ಲಿ ನಡೆಸಲು ಸಹಕರಿಸಿದ ಗೆಳೆಯ ಶ್ರೀ ಕೃಷ್ಣಾರೆಡ್ಡಿಯವರ ಚಿರಂಜೀವಿ ಅವರಿಗೆ ಧನ್ಯವಾದಗಳು. ಉಂಟಾದ ಪ್ರವಾಸದ ಸಂದರ್ಭದಲ್ಲಿ ಅನಿರೀಕ್ಷಿತ ಆತಂಕವನ್ನು ನಿವಾರಣೆ ಮಾಡಿದಂತಹ ಶ್ರೀ ಡಾಕಪ್ಪನವರ ಪುತ್ರ ಡಾ. ಡಿ. ಅಹಿಸ್ ಎಂ.ಡಿ. ಅವರಿಗೂ ವಂದನೆಗಳು. ಬರಹವನ್ನು ಅವಲೋಕಿಸಿ ತಿದ್ದಿ ತೀಡಿ ಮುದ್ರಣದ ಯೋಗ್ಯತೆಗೆ ಅಣಿಗೊಳಿಸಿಕೊಟ್ಟ ಡಾ. ವಿ.ಎಸ್. ಹಿರೇಮಠ ರವರಿಗೂ ವಂದನೆಗಳು. ಅಂದವಾಗಿ ಮುದ್ರಿಸಿಕೊಟ್ಟ ಕರ್ನಾಟಕ ಆಫ್‌ಸೆಟ್ ಪ್ರಿಂಟರ್ಸ್, ಚಾಮರಾಜಪೇಟೆ, ' ಬೆಂಗಳೂರು. ಇವರಿಗೆ ಧನ್ಯವಾದಗಳು.

- ಸಂಗಮೇಶ ಬಾದವಾಡಗಿ

MORE FEATURES

ಕೆನಡಾದಲ್ಲಿರುವ ಅಚ್ಚ ಕನ್ನಡಿಗ ಲೇಖಕ ಡಾ. ರಾಮಭಟ್ ಬಾಳಿಕೆ

17-10-2024 ಬೆಂಗಳೂರು

"ಅಂತಾರಾಷ್ಟ್ರೀಯ ಜರ್ನಲ್ ಗಳಲ್ಲಿ ಮುನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳನ್ನು ಪ್ರಕಟಿಸಿದರು. ಅನೇಕ ವಿಜ್ಞಾ...

ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ

16-10-2024 ಬೆಂಗಳೂರು

"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅ...

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ

16-10-2024 ಬೆಂಗಳೂರು

"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rat...