ಪಾಲಿ ಭಾಷೆಯ ಕುರಿತು ನಾವು ಸಾಗಬೇಕಾದ ದಾರಿ ದೀರ್ಘವಾಗಿದೆ; ಹಂಪನಾ

Date: 19-10-2024

Location: ಬೆಂಗಳೂರು


ಬೆಂಗಳೂರು: ಕಲಬುರಗಿಯ ಪಾಲಿ ಇನ್ಸ್‌ಟಿಟ್ಯೂಟ್‌, ಬೆಂಗಳೂರಿಯನ ಭಾರತೀಯ ವಿದ್ಯಾಭವನ ಹಾಗೂ ಮಹಬೋಧಿ ಸಂಶೋಧನ ಕೇಂದ್ರದಿಂದ ‘ಪಾಲಿ-ಕನ್ನಡ ಶಬ್ದಕೋಶ’ ಮೂರು ಸಂಪುಟಗಳ ಲೋಕಾರ್ಪಣೆ, ಪಾಲಿ-ಪ್ರಾಕೃತ- ಸಂಸ್ಕೃತ ನಿಘಂಟುಗಳ ಕುರಿತ ಉಪನ್ಯಾಸ ಮತ್ತು ಹಿರಿಯ ವಿದ್ವಾಂಸರಿಗೆ ಗೌರವ-ಸಮ್ಮಾನ ಕಾರ್ಯಕ್ರಮವು 2024 ಅ.19 ಶನಿವಾರದಂದು ನಗರದ ಭಾರತೀಯ ವಿದ್ಯಾಭವನದ ಇ.ವಿ.ಎಸ್. ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಗಾಂಧಿನಗರದ ಮಹಾಬೋಧಿ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಅವರು, "ಪಾಳಿ ಭಾಷೆಯು ಬಹಳ ಸುಂದರವಾದ ಪುರಾತನ ಭಾಷೆ. ನಮ್ಮ ಭಾರತದಲ್ಲಿ ಪಾಲಿ-ಸಂಸ್ಕೃತ-ಪ್ರಾಕೃತ ಭಾಷೆಗಳು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬಂದಿವೆ. ಸಂಸ್ಕೃತ ಭಾಷೆಯಲ್ಲಿ ಹಿಂದೂ ಧರ್ಮದ ಶಾಸನಗಳು ಗ್ರಂಥಗಳು, ಪಾಲಿ ಭಾಷೆಯಲ್ಲಿ ಬೌದ ಗ್ರಂಥಗಳು ಶಾಸ್ತ್ರಗಳಿವೆ, ಪ್ರಾಕೃತ ಭಾಷೆಯಲ್ಲಿ ಜೈನ ಧರ್ಮದ ಗ್ರಂಥ ಶಾಸ್ತ್ರಗಳಿವೆ. ಒಂದೊಂದು ಭಾಷೆ ಎಂದರೆ ಅದೊಂದು ದೊಡ್ಡ ಜ್ಞಾನ, ಸಂಸ್ಕೃತಿ ಮತ್ತು ಮನೋಭಾವವನ್ನು ಒಳಗೊಂಡಿರುವಂತಹ ಸಂವಹನ ಮಾಧ್ಯಮ," ಎಂದು ತಿಳಿಸಿದ್ದಾರೆ.

‘ಪಾಲಿ-ಕನ್ನಡ ಶಬ್ದಕೋಶ’ ಮೂರು ಸಂಪುಟಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಹಿರಿಯ ವಿದ್ವಾಂಸ, ಸಂಶೋಧಕ ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ, "ಪಾಲಿ ಭಾಷೆಯ ಕುರಿತು ನಾವು ಸಾಗಬೇಕಾದ ದಾರಿ ದೀರ್ಘವಾಗಿದೆ. ಹಾಗೆಯೇ ನಾವು ಮಾಡಬೇಕಾದಂತಹ ಕೆಲಸ ಅನಂತವಾಗಿದೆ. ಈಗ ಕೇಂದ್ರ ಸರಕಾರ ಕೊಟ್ಟಂತಹ ‘classical language recognistion' ಇದೊಂದು ನಮಗೆ ದಾರಿಯಾಗಿದೆ. ಇದನ್ನು ಉಪಯೋಗಿಸಿಕೊಂಡು ನಾವು ಇನ್ನಷ್ಟು ವಿಸ್ತಾರವಾಗಿ ಪಾಲಿ-ಪ್ರಾಕೃತ- ಸಂಸ್ಕೃತ ಭಾಷೆಗಳ ಬಗ್ಗೆ ಕಾರ್ಯಪ್ರವೃತ್ತರಾಗಬೇಕು," ಎಂದರು.

"ಒಂದು ಭಾಷೆಗೆ ತಳಪಾಯ ನಿಘಂಟು. ಮಲ್ಲೇಪುರಂ ಅವರು ನಿಘಂಟು ಮಾಡುವಂತಹ ಕೆಲಸವನ್ನು ಬಹಳ ನಿಷ್ಠೆಯಿಂದ ಮಾಡಿದ್ದು, ನಿಜಕ್ಕೂ ಅವರ ಈ ಕಾರ್ಯ ಶ್ಲಾಘನೀಯ. ಒಂದು ಕೃತಿಗೆ ಎಂತಹ ಕಾಗದದ ಅವಶ್ಯಕತೆಯಿದೆ, ಅದರ ಬಳಕೆ, ಆಕಾರ ಇವೆಲ್ಲವನ್ನೂ ಬಹಳ ಅಚ್ಚುಕಟ್ಟಿನಿಂದ ಮಾಡಿದ್ದು, ಇದು ಅವರ ಕೆಲಸದ ಕುರಿತಿರುವಂತಹ ನೈಪುಣ್ಯತೆಯನ್ನು ತೋರಿಸುತ್ತಿದೆ. ಇನ್ನು ಪಾಳಿ ಭಾಷೆಯ ಮಹತ್ವ ನಮ್ಮ ವಿದ್ವತ್ತಿನ ಬೆಳವಣಿಗೆಯಲ್ಲಿ ಮಾತ್ರವಲ್ಲದೇ, ನಮ್ಮ ಹಿಂದೆ ಇದ್ದಂತಹ ಕೆಲವು ಸಂಪ್ರದಾಯಗಳನ್ನು ಪುನರ್ ರಚಿಸಿಕೊಳ್ಳುವುದಕ್ಕೆ ಸಂಸ್ಕೃತದಲ್ಲೂ, ಪ್ರಾಕೃತದಲ್ಲೂ ಇಲ್ಲದೇ ಇರುವಂತಹ ಸಾಮಾಗ್ರಿಯನ್ನು ನಾವು ಪಾಲಿ ಭಾಷೆಯನ್ನು ಕಾಣಬಹುದು," ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ನಾಡೋಜ ಡಾ. ವೂಡೇ ಪಿ. ಕೃಷ್ಣ ಮಾತನಾಡಿ, "ಇದೊಂದು ಸಾಂಸ್ಕೃತಿಕವಾದಂತಹ ಕೆಲಸ. ಸಂಸ್ಕೃತ ಕಲಿತವರು ಕೂಡ ಪಾಲಿಯ ಬಗ್ಗೆ ವಿಶೇಷವಾದ ಆಸಕ್ತಿಯನ್ನು ತೋರಿಸುತ್ತಿರುವುದು ಒಳ್ಳೆಯ ಸೂಚನೆ. ಪಾಲಿ ಭಾಷೆ ಇಂದು classical language ಆಗಿರುವಂತಹದ್ದು ನಮ್ಮ ದೇಶದಲ್ಲಿ ನಡೆದ ದೊಡ್ಡ ಐತಿಹಾಸಿಕ ಹಾಗೂ ಚಾರಿತ್ರಿಕ ಘಟನೆ. ನಮ್ಮ ಹಳೆಯ ಸಂಸ್ಕೃತಿ, ಪರಂಪರೆ ಉಳಿಯಬೇಕಾದರೆ ಅದಕ್ಕೆ ಸೂಕ್ತವಾದಂತಹ ಮಾನ್ಯತೆ ಆಡಳಿತದಿಂದ ಸಿಗವುದು ಅವಶ್ಯಕ," ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಬುರಗಿಯ ಪಾಲಿ ಇನ್‌ಸ್ಟಿಟ್ಯೂಟ್‌ ನ ಅಧ್ಯಕ್ಷ ರಾಹುಲ್‌ ಎಂ. ಖರ್ಗೆ ಅವರು ವಹಿಸಿದ್ದರು. ವೇದಿಕೆಯಲ್ಲಿ ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್‌.ಎನ್‌. ಸುರೇಶ್‌ ಉಪಸ್ಥಿತರಿದ್ದರು.

ನಂತರದಲ್ಲಿ ಪಾಲಿ-ಪ್ರಾಕೃತ-ಸಂಸ್ಕೃತ ನಿಘಂಟುಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ಪಾಲಿ ನಿಘಂಟು ಕುರಿತು ತುಮಕೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಎಸ್‌.ಪಿ. ಪದ್ಮಪ್ರಸಾದ್‌, ಪ್ರಾಕೃತ ನಿಘಂಟು ಕುರಿತು ಬೆಂಗಳೂರಿನ ಬಿ.ಎಂ. ಶ್ರೀ ಪ್ರತಿಷ್ಠಾನದ ಮಾಜಿ ಅಧ್ಯಕ್ಷ ಪ್ರೊ. ಆರ್‌. ಲಕ್ಷ್ಮೀನಾರಾಯಣ, ಸಂಸ್ಕೃತ ನಿಘಂಟು ಕುರಿತು ಬೆಂಗಳೂರಿನ ಜೈನ್‌ ವಿಶ್ವವಿದ್ಯಾಲಯದ ಸಂಸ್ಕೃತ ಸಹಾಯಕ ಪ್ರಾಧ್ಯಾಪಕ ಡಾ. ಕೇಯೂರ ರಾಮಚಂದ್ರ ಕರಿಗುದರಿ ಅವರು ಉಪನ್ಯಾಸ ನೀಡಿದರು. ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿಯ ಬೌದ್ಧವಿದ್ವಾಂಸ ಹಾಗೂ ತಂತ್ರಾಂಶ ತಜ್ಞ ಡಾ. ಕೆ.ಪಿ. ರಾವ್‌ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರಾದ ಪ್ರೊ. ಹಂ.ಪ. ನಾಗರಾಜಯ್ಯ, ಪ್ರೊ. ಆರ್‌. ಲಕ್ಷ್ಮೀನಾರಾಯಣ, ಪ್ರೊ. ಎ.ವಿ. ನಾವಡ, ಡಾ. ಕೆ.ಪಿ. ರಾವ್‌, ಡಾ. ಎಸ್‌.ಪಿ. ಪದ್ಮಪ್ರಸಾದ್‌, ಡಾ. ವೈ.ಎಸ್‌. ಗಾಯತ್ರಿ ಅವರಿಗೆ ಗೌರವ-ಸಮ್ಮಾನವನ್ನು ನೆರವೇರಿಸಿದರು.

ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ವೀಕ್ಷಿಸಲು ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

MORE NEWS

‘ಸಾಹಿತ್ಯ ಬಂಗಾರ ಪ್ರಶಸ್ತಿ’ ಗೆ ಕುಂ.ವಿ, ಸುಶೀಲಮ್ಮ, ಪ್ರತಿಭಾ ಆಯ್ಕೆ

22-10-2024 ಬೆಂಗಳೂರು

ಬೆಂಗಳೂರು: ಎಸ್. ಬಂಗಾರಪ್ಪ ವಿಚಾರ ವೇದಿಕೆಯಿಂದ ಕೊಡಮಾಡುವ 2024ನೇ ಸಾಲಿನ ’ಸೇವಾ ಬಂಗಾರ ಪ್ರಶಸ್ತಿ’ ಗೆ ...

ಆಮೂರ ಅವರು ಬರವಣಿಗೆಯ ಬದುಕನ್ನು ತಪಸ್ಸಿನಂತೆ ಸಾಗಿಸಿದರು; ರಾಘವೇಂದ್ರ

21-10-2024 ಬೆಂಗಳೂರು

ಧಾರವಾಡ: ಜಿ.ಬಿ. ಜೋಶಿ ಮೆಮೊರಿಯಲ್‌ ಟ್ರಸ್ಟ್‌ ಹಾಗೂ ಡಾ.ಜಿ.ಎಸ್ ಆಮೂರ ಜನ್ಮ ಶತಮಾನೋತ್ಸವ ಸಮಿತಿಯಿಂದ &lsq...

‘ಶ್ರೀಮಧ್ವ ವಿಜಯ’ ಪ್ರಶಸ್ತಿ ಪ್ರದಾನ ಸಮಾರಂಭ

21-10-2024 ಬೆಂಗಳೂರು

ಬೆಂಗಳೂರು: ಶ್ರೀಮಧ್ವ ಜಯಂತಿ ಅಂಗವಾಗಿ ವ್ಯಾಸ-ದಾಸ ಸಾಹಿತ್ಯದಲ್ಲಿ ಅಪ್ರತಿಮ ಸೇವೆ ಸಲ್ಲಿಸುತ್ತಿರುವ ವಿದ್ವನ್ಮಣಿಗಳಿಗೆ ...