ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮ


"ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅವಳೆದುರು ಹೇಳಲು ಯಾವ ಅಳತೆಗೋಲು ಸಿಗದೇ ಒದ್ದಾಡಲು, ಒಮ್ಮುಖ ಪ್ರೇಮಿಗೂ ಒಂದೊಂದು ಸಲ ಇಂತಹಾ ಕಾದಂಬರಿಗಳು ಪ್ರೇಮ ಗೀತೆಗಳು ಯಾವುದೋ ಗಳಿಗೆಯಲ್ಲಿ ಅಂತರಾತ್ಮದೊಳಿಗಿನ ಹೃದಯದ ಕೋಣೆಗೆ ದೀಪ ಹಚ್ಚಿ ಬೆಳಕು ಚೆಲ್ಲಿ ಹೋಗಿ ಬಿಡುತ್ತವೆ. ಅಂತಹದೊಂದು ಅದ್ಭುತ ಎನ್ನುವಂಥ ಪ್ರೇಮದ ಕಾದಂಬರಿ ಮಾಂಡೋವಿ," ಎನ್ನುತ್ತಾರೆ ರವಿ ಶಿವರಾಯಗೋಳ. ಅವರು ರವಿ ಬೆಳಗೆರೆ ಅವರ ‘ಮಾಂಡೋವಿ’ ಕೃತಿ ಕುರಿತು ಬರೆದ ವಿಮರ್ಶೆ.

ಪ್ರೇಮ ಅನ್ನೋದೊಂದು ಇರದೇ ಇದ್ದಿದ್ರೆ ಮನುಷ್ಯರೆನ್ನುವ ನಾವು ಹೇಗಿರ್ತಾ ಇದ್ವಿ. ಸಾವಿರ ಸಾವಿರ ಸಲ ಯೋಚಿಸಿದರೂ ಸಿಗುವ ಉತ್ತರ ಅಸ್ಪಷ್ಟವೇ. ಭಯಾನಕವೇ. ಮನುಷ್ಯ ಹಗುರ ಆಗಲಿಕ್ಕೂ ಭಾರ ಆಗಲಿಕ್ಕೂ ಕೊನೆಗೆ ಉತ್ಕಟವಾದ ಅನುಭವಕ್ಕೂ, ಆತ್ಮದ ಅಸ್ತಿತ್ವವನ್ನು ಅಳೆಯಲಿಕ್ಕೂ ಪ್ರೇಮವೆಂಬುದೊಂದು ಇರಲೇ ಬೇಕು ಅಲ್ವಾ? ನಮಗೆ ಅಂತೇಳಿ ಪ್ರೀತಿಸುವ ಜೀವ ಇರದೇ ಹೋದರು, ಮುನಿಸಿಕೊಂಡು ಕೂರಲು, ಸಮಾಧಾನ ಮಾಡಲು, ಸಂತೈಸಲು, ವಿರಹದ ತಕ್ಕಡಿ ಹಿಡಿದು ತೂಗಲು, ಸಂಜೆಯ ಹೊತ್ತಿಗೆ ನೆನಪು ಮಾಡಿಕೊಂಡು ಕನಸು ಕಾಣಲು, ಎಷ್ಟು ಪ್ರೀತಿಸ್ತೀನಿ ಅಂತ ಅವಳೆದುರು ಹೇಳಲು ಯಾವ ಅಳತೆಗೋಲು ಸಿಗದೇ ಒದ್ದಾಡಲು, ಒಮ್ಮುಖ ಪ್ರೇಮಿಗೂ ಒಂದೊಂದು ಸಲ ಇಂತಹಾ ಕಾದಂಬರಿಗಳು ಪ್ರೇಮ ಗೀತೆಗಳು ಯಾವುದೋ ಗಳಿಗೆಯಲ್ಲಿ ಅಂತರಾತ್ಮದೊಳಿಗಿನ ಹೃದಯದ ಕೋಣೆಗೆ ದೀಪ ಹಚ್ಚಿ ಬೆಳಕು ಚೆಲ್ಲಿ ಹೋಗಿ ಬಿಡುತ್ತವೆ. ಅಂತಹದೊಂದು ಅದ್ಭುತ ಎನ್ನುವಂಥ ಪ್ರೇಮದ ಕಾದಂಬರಿ ಮಾಂಡೋವಿ.

ನಮಗೊಬ್ಬರು ಗೆಳೆಯ ಗೆಳತಿ ಇರದೇ ಹೋದರು ಇಳಿ ಸಂಜೆಯಲಿ ಕೇಳುವ ಹಾಡು ರೋಮಾಂಚನ ಮೂಡಿಸುತ್ತದೆ. ರೀಲ್ಸುಗಳಲ್ಲಿ ಯಾವುದೋ ವಿರಹದ ನಾಲ್ಕು ಸಾಲು ವಾವ್ ಅನ್ನಿಸುತ್ತದೆ. ಯಾರೋ ಬರೆದ ಕವಿತೆ ನಮ್ಮದೇ ಎಂದು ಓದಿಕೊಳ್ಳುತ್ತೇವೆ. ಇನ್ಯಾರದೋ ಪ್ರೇಮ ಕಥೆ ಇರುವ ಸಿನಿಮಾದುದ್ದಕ್ಕೂ ನಾವೇ ನಾಯಕ ನಾಯಕಿ ಆಗಿರುತ್ತೇವೆ. ಅವರು ಅತ್ತಾಗ ನಮ್ಮ ಕಣ್ಣೂ ತೇವ, ಅವನಿಗೆ ಬಂದ ಕಷ್ಟ ನಮ್ಮದೇ ಅನ್ನುವಷ್ಟು ಆತಂಕ. ಅವನಿಗೆ ಅವನ ಹುಡುಗಿ ಕೈಕೊಟ್ಟು ಹೋದರೆ ನಮ್ಗೂ ವಿರಹ. ಇದೆಲ್ಲಾ ಬಹುಶಃ ಯಾಕಾಗುತ್ತದೇ ನಮ್ಮೊಳಗೂ ಪ್ರೇಮ ವಾತ್ಸಲ್ಯ ಎಂಬ ಎರಡಕ್ಷರ ಇರುವುದರಿಂದಲೋ ಹೇಗೆ?

ಅಂತಹಾ ಸಂಜೆಗೆ ಹಾಡು ಕೇಳಿದಾಗ, ಭಾವಗೀತೆಯ ಯಾವ್ದೋ ಎರಡು ಸಾಲು ಎದೆಗೆ ಇಳಿದಾಗ, ಯಾರೋ ಯಾರನ್ನೋ ಪ್ರೀತಿಸ್ತಿದಾರೆ ಅಂತ ಕೇಳ್ದಾಗ, ಯಾರೋ ಯಾರನ್ನೋ ಬಿಟ್ಟೋದ್ರು ಅಂದಾಗ ಆಗುವ ದುಗುಡ ದುಃಖ ನೋವು, ಸಂತಸ, ಉನ್ಮಾದ ಎಲ್ಲವೂ ಈ ಮಾಂಡೋವಿ ಓದವಾಗ ಅನುಭವಕ್ಕೆ ಬರುತ್ತದೆ. ಎಂಥಾ ಒಳ್ಳೆಯ ಕಾದಂಬರಿ ಗೊತ್ತಾ? ಓದ್ಬೇಕು ನೀವು ಒಂದ್ಸಲಿ. ತಪ್ಪದೇ.

ಅಂತಹಾ ಪ್ರೇಮದ ಸಾಫಲ್ಯಕ್ಕಾಗಿ ತನ್ನೀಡಿ ವೃದ್ಧಾಪ್ಯದ ಗೆರೆಗಳ ತನಕವೂ ಕಾಯುತ್ತಲೇ ಉಳಿದ ವೆಂಕಟಚಲಪತಿ ಉರ್ಫ್ ಚಲಂ ಎಂಬ ಕಥಾನಾಯಕ ನಿಜಕ್ಕೂ ತುಂಬಾ ದಿನಗಳ ವರೆಗೂ ನೆನಪಿನಲ್ಲಿ ಉಳಿಯುವ ಅಸಾಮಿ. ಅವನ ತಾಯಿಯಾದರೂ ಅಷ್ಟೇ ಗಟ್ಟಿಗಿತ್ತಿ ವಾತ್ಸಲ್ಯ ಮಗನೆಡಿಗಿನ ವಿಶ್ವಾಸ ಅವನ ಇಷ್ಟದಲ್ಲೇ ತನ್ನ ಸುಖವಿದೆ ಎಂಬಂತೆ ಬದುಕಿದ ಆ ಜೀವ ಓದುಗನನ್ನು ಕಾಡದೇ ಇರದು. ಇನ್ನೂ ಮಾಂಡೋವಿ ಅನ್ನೋ ಹುಡುಗಿಯಾದರೂ ಅಷ್ಟೇ ಒಬ್ಬನನ್ನು ಪ್ರೀತಿಸಿ ಪ್ರೀತಿಸಿದವನ ನಡು ಬೀದಿಯಲ್ಲಿ ನಿಲ್ಲಿಸಿ ಹಠಾತ್ತನೆ ಇನ್ನೊಬ್ಬನ ಜೊತೆ ಮದುವೆ ಸಂಸಾರ.ಅವಳ ತಪ್ಪು ಒಪ್ಪುಗಳು ಅಳೆಯುವ ಮಾನದಂಡ ಯಾವುದು ಕಾದಂಬರಿ ಮುಗಿಯುವರೆಗೂ ಕುತೂಹಲವೇ ಅದು. ಇನ್ನೂ ಚನ್ನಬಸವನಗೌಡ, ಮಂಗಳಗೌರಿ, ಕಾಂಚನಮಾಲಾ ಕಥೆಯ ಕೊನೆಯವರೆಗೂ ಕಾಡುವ ಪಾತ್ರಗಳು.

ಒಂದು ಪ್ರೇಮ ಕಾದಂಬರಿಯನ್ನು ಇಷ್ಟು ಶುದ್ಧವಾದ ತಾಯ್ತನ ಅಂತಃಕರಣದಲ್ಲಿ ಅದ್ದಿ ತೆಗೆದ ಅಕ್ಷರಗಳ ಮುಖಾಂತರ ಹೇಳುವುದು ಬಹುಶಃ ರವಿ ಬೆಳಗೆರೆಗೆ ಮಾತ್ರ ಸಾಧ್ಯವಿತ್ತೇನೋ. ಬರೊಬ್ಬರಿ ಇನ್ನೂರು ಪುಟದ ಕಾದಂಬರಿ ಒಂದೇ ಸಿಟ್ಟಿಂಗ್ ಅಲ್ಲಿ ಅದೂ ತುಂಬಾ ದಿನಗಳ ನಂತರ ಓದಿದ ಅನುಭವ ಆಯ್ತು ನನಗೆ. ನಿಧಾನಗತಿಯ ನನ್ನ ಓದಿಗೆ ಮತ್ತೆ ಒಂದು ಸಣ್ಣ ಕಿಡಿ ತಾಕಿಸಿ ಬೆಳಕಾಗಿಸಿದ ಶ್ರೇಯಸ್ಸು ಈ ಕಾದಂಬರಿಗೆ ಸಲ್ಲುತ್ತದೆ. ತುಂಬಾ ಕಾದಂಬರಿ ಬಗ್ಗೆ ಬರೆದರೆ ಚೆಂದವಲ್ಲವೇನೋ. ಓದಿಯೇ ಅನುಭವಿಸಬಹುದಾದ ಒಂದೊಳ್ಳೆಯ ಶುದ್ಧವಾದ ಪ್ರೇಮದ ಯಾರಿಗೇ ಆಗಲೀ ಇಷ್ಟವಾಗಿಬಿಡಬಹುದಾದ ಕಥೆ ‌ಎಂದು ಹೇಳಬಹುದು ಅಷ್ಟೇ. ಸಾಧ್ಯವಾದರೆ ಯಾವತ್ತಾದರೂ ಕೊಂಡು ಓದಿ. ಮಾಂಡೋವಿಯ ಪ್ರೇಮದ ನದಿಯಲ್ಲಿ ಈಜಲು ಹೋಗಿ ಕಳೆದು ಹೋದರೆ ಜವಾಬ್ದಾರಿ ನಾವಲ್ಲ. ಬೆಳೆಗೆರೆಯ ಒಂದೊಳ್ಳೆಯ ಕೃತಿ ಇದು.

- ರವಿ ಶಿವರಾಯಗೋಳ

MORE FEATURES

ವೈಚಾರಿಕತೆಗಿಂತ ಕವಿಗೆ ಭಾಷೆಯೇ ಮುಖ್ಯ

16-10-2024 ಬೆಂಗಳೂರು

"ಅಡಿಗರ ಕಾವ್ಯದಲ್ಲಿ ಆದ ಈ ಬದಲಾವಣೆಗೆ ಸಾಧಾರವಾಗಿ, ನವ್ಯಕಾವ್ಯದ ಸಂದರ್ಭದಲ್ಲಿ ಅವರು ಬರೆದ ಕಾವ್ಯದಲ್ಲಿ ಅವರ rat...

ಕನ್ನಡದ ಕೊರತೆಯಿರುವ ಪ್ರದೇಶದಲ್ಲಿ, ಕನ್ನಡವನ್ನು ಎತ್ತಿ ಹಿಡಿದವರು ಭಾಲಚಂದ್ರ ಜಯಶೆಟ್ಟಿ

15-10-2024 ಬೆಂಗಳೂರು

“ಐವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿ ಸಾಹಿತ್ಯ ಲೋಕದಲ್ಲಿ ತಮ್ಮದೆಯಾದ ವ್ಯಕ್ತಿತ್ವದ ಛಾಪು ಮೂಡಿಸಿದ್ದಾರೆ...

ಡಯಾಬಿಟಿಸ್ ಗೆ ಕಾರಣಗಳೇನು? ಅದರ ನಿವಾರಣೆಗಿರುವ ಪರಿಹಾರಗಳೇನು?

15-10-2024 ಬೆಂಗಳೂರು

“ಸಕ್ಕರೆ ಪ್ರಮಾಣದ ಹೆಚ್ಚಳದ‌‌ ದೈಹಿಕ ಏರುಪೇರುಗಳನ್ನು ಹೊಸತೊಂದು ಸಂಶೋಧನೆ Diabetes Reversal ಎಂಬ...