ನ್ಯಾಯಾಂಗ ಕ್ಷೇತ್ರದಲ್ಲಿ ಬರೆದಿರುವ ಬಹಳ ಅಪರೂಪದ ಬರವಣಿಗೆಯಿದು; ಮಲ್ಲೇಪುರಂ

Date: 02-10-2024

Location: ಬೆಂಗಳೂರು


ಬೆಂಗಳೂರು: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಹಾಗೂ ಬೆಂಗಳೂರಿನ ಸ್ಪರ್ಶ್‌ ಫೌಂಡೇಷನ್‌ ವತಿಯಿಂದ ಹಮ್ಮಿಕೊಂಡಿದ್ದ ಬಿ.ಎಸ್ಸಿ. ಪ್ರಥಮ ಸೆಮಿಸ್ಟರ್ ನ ಪಠ್ಯ ಪುಸ್ತಕ ‘ಕಳೆದ ಕಾಲ ನಡೆದ ದೂರ’ ನ್ಯಾಯಮೂರ್ತಿ ಶಿವರಾಜ ವಿ. ಪಾಟೀಲ ಅವರ ಆತ್ಮಕಥನದ ಲೋಕಾರ್ಪಣಾ ಸಮಾರಂಭವು 2024 ಅ.02 ಬುಧವಾರದಂದು ನಗರದ ಸ್ಪರ್ಶ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.

ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, "ಕಳೆದ 25 ವರ್ಷಗಳ ಈಚೆಗೆ ಬಂದಿರುವ ಆತ್ಮಕಥೆಗಳಲ್ಲಿ, ಅಪ್ಪಾಜಿ ಅವರ ಆತ್ಮಕಥೆ ಬಹಳ ಮುಖ್ಯವಾದುದು. ಆತ್ಮಕಥನದಲ್ಲಿ ತಮ್ಮ ಬದುಕಿನ ಏಳು ಬೀಳುಗಳನ್ನು, ಅನೇಕ ಮಹಣೀಯರನ್ನ, ಕುಟುಂಬವನ್ನು, ಸ್ನೇಹಿತರನ್ನ, ರಾಜಕೀಯ ವಲಯ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಅಪ್ಪಾಜಿಯವರೊಂದಿಗೆ ಬೆಳೆದು ಬಂದವರನ್ನ, ಅವರೊಂದಿಗೆ ಕೂಡಿಕೊಂಡವರನ್ನ ಯಾವುದೇ ಅತಿಶೋಕ್ತಿಯಿಲ್ಲದೇ, ಬಹಳ ಸರಳವಾಗಿ ಅವರ ವಿಚಾರಗಳನ್ನು ಇಲ್ಲಿ ಪಸ್ತಾಪಿಸಲಾಗಿದೆ. ಅಪ್ಪಾಜಿ ಅವರ ನ್ಯಾಯತೀರ್ಮಾನದ ಹಲವು ಭಾಗಗಳನ್ನು ಕೂಡ ನಾವಿಲ್ಲಿ ಕಾಣಬಹುದು. ಹೀಗೆ ತಮ್ಮ ನ್ಯಾಯಾಂಗ ಕ್ಷೇತ್ರದಲ್ಲಿ ಅವರು ನಡೆಸಿದಂತಹ ದೊಡ್ಡ ಸಾಧನೆಗಳನ್ನು ಹೇಳುವ ಹೊತ್ತಿನಲ್ಲಿಯೇ, ತಮ್ಮೊಳಗೆ ಅಡಗಿದಂತಹ ಅನಿಸಿಕೆ, ಭಾವನೆಗಳನ್ನು ಕೂಡ ಸ್ಪಷ್ಟವಾಗಿ ಬಿಚ್ಚಿ ಹೇಳುತ್ತಾರೆ. ಇಡೀ ಬರವಣಿಗೆ ಮಹತ್ತರವಾದ ಬೆಳವಣಿಗೆ. ಇಂತಹ ಬರವಣಿಗೆಯನ್ನು ನ್ಯಾಯಾಂಗ ಕ್ಷೇತ್ರದಲ್ಲಿ ಬರೆದಿದ್ದಾರೆ ಎಂದು ಎಲ್ಲಿಯೂ ನಾನು ಧೈರ್ಯದಿಂದ ಹೇಳಬಲ್ಲೇ," ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕಲಬುರಗಿಯ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾದ ಪ್ರೊ. ಎಚ್‌.ಟಿ. ಪೋತೆ ಅವರು ಮಾತನಾಡಿ, "ಇವತ್ತಿನ ಕಲ್ಯಾಣ ಕರ್ನಾಟಕ ಇಡೀ ಕರ್ನಾಟಕದ ಮುಕುಟಪ್ರಾಯ ಇರುವಂತಹ ಪ್ರದೇಶವದು. ಕವಿತರಾಜಮಾರ್ಗ ಕೊಟ್ಟ ಕೃತಿ ಅಲ್ಲಿಯದ್ದು, ವಡ್ಡಾರಾಧನೆ ಕೂಡ ಅಲ್ಲಿಂದಲೇ ಬಂದದ್ದು, ವಚನಕಾರರು, ತತ್ವಪದಕಾರರು, ಸೂಫಿಗಳು ಕೂಡ ಅಲ್ಲಿಯವರೇ, ದಲಿತ ಚಳುವಳಿ, ಬಂಡಾಯ ಚಳುವಳಿ ನಡೆದದ್ದು ಕೂಡ ಅಲ್ಲಿಂದಲೇ. ಅಷ್ಟೇಅಲ್ಲದೇ ಬೌದ್ಧ, ಜೈನ, ಸಿಖ್ ಸೇರಿದಂತೆ ಹಲವಾರು ವಲಯಗಳು ಸೇರಿರತಕ್ಕಂತಹ ಪ್ರದೇಶವದು. ಇವತ್ತು ಕರ್ನಾಟಕಕ್ಕೆ ಏನಾದರೂ ದೊಡ್ಡ ಕೀರ್ತಿ ಸಾಹಿತ್ಯದಲ್ಲಿ ಇದೇ ಅಂದರೆ, ಇಡೀ ಸಾಹಿತ್ಯ ಪರಂಪರೆ ಬೆಳೆದದ್ದು ಅಲ್ಲಿಯೇ, ಆ ಪ್ರದೇಶದಿಂದಲೇ ಮಹಾನ್ ಸಾಹಿತಿಗಳು ಬಂದು ಹೋಗಿದ್ದಾರೆ. ಆದರೆ ಇವತ್ತಿನ ದಿನ ಅನೇಕ ಕಾರಣಗಳಿಂದ ಅಂತಹ ಪ್ರದೇಶವು ವಂಚಿತವಾಗಿದೆ," ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ದೆಹಲಿಯ ಸರ್ವೋಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ್‌ ಮಾತನಾಡಿ,"ಈ ಕಾಲದಲ್ಲಿ ದೊಡ್ಡ ದೊಡ್ಡ ಕೃತಿಗಳನ್ನು ಓದಲು ಸಮಯವೂ ಇಲ್ಲ ಆಸಕ್ತಿಯೂ ಇಲ್ಲ. ಆದರೆ ಕೆಲವೊಂದು ಪ್ರಕಾರಗಳಲ್ಲಿ ದೊಡ್ಡ ಪುಸ್ತಕಗಳು ಅಗತ್ಯವಿದೆ. ಸಾಮಾನ್ಯ ಜನರ ದೃಷ್ಟಿಯಿಂದ ಸಣ್ಣ ಪುಸ್ತಕಗಳ ಅವಶ್ಯಕತೆ ಬಹಳಷ್ಟಿದೆ. ಸಣ್ಣ ಪುಸ್ತಕಗಳು ಜನರ ಕಣ್ಣಿಗೆ ಬೇಗ ಬೀಳುತ್ತದೆ. ಹಾಗೆಯೇ ಅವರು ಕೃತಿಯನ್ನು ಓದಲು ಕೂಡ ಮುಂದೆ ಬರುತ್ತಾರೆ. ಹೀಗೆ ಸಾಮಾನ್ಯ ಜನರಿಗೂ ಎಟಕುವ ದರದಲ್ಲಿ ಈ ಕೃತಿ ಬಂದಿರುವುದು ಬಹಳಷ್ಟು ಖುಷಿ ತಂದಿದೆ. ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಎಲ್ಲರಿಗೂ ಸಂಬಂಧಪಟ್ಟಂತಹ ವಿಚಾರ ಈ ಕೃತಿಯಲ್ಲಿದೆ. ಗ್ರಾಮಾಂತರ ಪ್ರದೇಶ ಮತ್ತು ಬಡತನ ಪುಸ್ತಕದ ಕೇಂದ್ರವಾಗಿದ್ದು, ಅಡೆತಡೆಗಳನ್ನು ಮೀರಿ ವಿದ್ಯಾರ್ಥಿ ತನ್ನ ಜೀವನದಲ್ಲಿ ಹೇಗೆ ಬೆಳೆಯಬೇಕು ಎಂಬುವುದನ್ನು ತಿಳಿಸುತ್ತದೆ," ಎಂದರು.

ಸಮಾರಂಭದಲ್ಲಿ ಸ್ಪರ್ಶ್ ಆಸ್ಪತ್ರೆಯ ಡಾ. ಶರಣ್ ಪಾಟೀಲ, ಸಿದ್ಧಲಿಂಗೇಶ್ವರ ಬುಕ್‌ ಡಿಪೋ ಮಾಲೀಕ ಬಸವರಾಜ ಕೊನೆಕ್‌ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆನ್ ಲೈನ್ ನಲ್ಲಿ ನೋಡಲು ಬುಕ್ ಬ್ರಹ್ಮ ಯುಟ್ಯೂಬ್ ಚಾನೆಲ್ ನ ಈ ಲಿಂಕ್ ಅನ್ನು ಕ್ಲಿಕ್ ಮಾಡಿ..

 

MORE NEWS

‘ಸಂಗೀತ ವಿದ್ವಾನ್ ಪ್ರಶಸ್ತಿ’ಗೆ ಬಸವರಾಜ್ ಭಜಂತ್ರಿ ಆಯ್ಕೆ

03-10-2024 ಬೆಂಗಳೂರು

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಸಂದರ್ಭದಲ್ಲಿ ಪ್ರತಿ ವರ್ಷ ರಾಜ್ಯ ಸಕಾರದಿಂದ ಕೊಡಮಾಡಲಾಗುವ 2024-25ನ...

ಮೈಸೂರು ಅಂದರೆ ದಸರಾ, ದಸರಾ ಅಂದರೆ ಮೈಸೂರು: ಹಂಪ ನಾಗರಾಜಯ್ಯ

03-10-2024 ಬೆಂಗಳೂರು

ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಇಂದು ಉದ್ಘಾಟನೆ ಮಾಡಲಾಯಿತು. ಬೆಳಗ್ಗೆ 9:15 ರಿಂದ 9:40ರ ಶುಭ ವೃಶ್ಚ...

ಪರೋಪಕಾರ ಗುಣ ಇಲ್ಲದ ವ್ಯಕ್ತಿ ಸಮಾಜದಲ್ಲಿ ಉನ್ನತ ವ್ಯಕ್ತಿಯಾಗಲು ಸಾಧ್ಯವಿಲ್ಲ; ಶ್ರೀನಾಥ್​ ಜೋಶಿ

02-10-2024 ಬೆಂಗಳೂರು

ಬೆಂಗಳೂರು: ಭಾರತ ಭೋಗ ಭೂಮಿಯಲ್ಲ, ತ್ಯಾಗ ಭೂಮಿ. ಇಂತಹ ಪುಣ್ಯ ದೇಶದಲ್ಲಿ ನಾವು ಎಷ್ಟು ತ್ಯಾಗ ಮಾಡುತ್ತೇವೆಯೋ, ಅಷ್ಟು ಒಳ...