ನಾವು ಹುಟ್ಟಿ ಬೆಳೆದ ವಾತಾವರಣದ ಪ್ರಭಾವ ನಮ್ಮ ಮೇಲೆ ಬಹಳಷ್ಟು ಇರುತ್ತದೆ


“ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಹಾಗೆ ಬ್ಲಾಗ್ ರೂಪದಲ್ಲಿ ಬರೆದಂತಹವು. ಕೆಲವು ಕಥೆಗಳು ಮತ್ತೆ ಮತ್ತೆ ಕಾಡುವಂತಹ ಕೆಲವು ಘಟನೆಗಳನ್ನು ಮುಂದುವರಿಸುತ್ತಾ ರೂಪಗೊಂಡದ್ದು. ಇನ್ನು ಕೆಲವು ಕಥೆಗಳು ಬಾಲ್ಯದ ನೆನಪು ಮೂಡಿಸುವ ವಸ್ತುಗಳ ಮೇಲೆ ಬರೆದದ್ದು”, ಎನ್ನುತ್ತಾರೆ ಅಶ್ವಿನಿ ಸುನಿಲ್. ಅವರು ತಮ್ಮ "ಅತೀತಭವ" ಕೃತಿಗೆ ಬರೆದ ಲೇಖಕರ ಮಾತು.

ಬದುಕಿನ ಯಾನದಲ್ಲಿ ವರ್ಷಗಳು ಕಳೆದಂತೆ ಆಸಕ್ತಿಗಳು ಬದಲಾಗುತ್ತಾ ಹೋಗುತ್ತದೆ. ಹೊಸ ಹವ್ಯಾಸಗಳು ಹುಟ್ಟಿಕೊಳ್ಳುತ್ತವೆ. ಒತ್ತಡದ ಬದುಕಿನಲ್ಲಿ ಮುಳುಗಿ ಕೆಲವು ಹವ್ಯಾಸಗಳು ಕಳೆದೇ ಹೋಗುತ್ತವೆ. ಆದರೆ ಬಾಲ್ಯದಿಂದಲೂ ನನಗೆ ಇದ್ದ ಓದುವ ಹವ್ಯಾಸ ನಿರಂತರವಾಗಿ ಮುಂದುವರೆಯಲು ಮನೆಯ ವಾತಾವರಣವೇ ಕಾರಣ ಎನ್ನಬಹುದು. ಪ್ರತೀ ತಿಂಗಳೂ ಒಂದಷ್ಟು ಪುಸ್ತಕ ಕೊಂಡುಕೊಳ್ಳುವ ನನ್ನ ಪತಿಯೇ ನನ್ನ ಓದಿಗೆ ಮುಖ್ಯ ಪ್ರೇರಣೆ. ಬರೆಯುವ ಹವ್ಯಾಸ ಮಾತ್ರ ಕಾಲೇಜು ದಿನಗಳಲ್ಲೇ ಬಹುತೇಕ ಕಳೆದುಹೋಗಿತ್ತು. ಆದರೆ ಎಲ್ಲೋ ಓದಿದ, ಕೇಳಿದ ಘಟನೆಗಳು, ಪಾತ್ರಗಳು ನನ್ನ ಕಲ್ಪನೆಯಲ್ಲಿ, ಮನಸ್ಸಿನಲ್ಲಿಯೇ ಮುಂದುವರಿಸುತ್ತಾ ಹೋಗುತ್ತಿದ್ದರೂ ಅಕ್ಷರ ರೂಪಕ್ಕೆ ಇಳಿಸುವ ಪ್ರಯತ್ನ ಯಾವತ್ತೂ ಮಾಡಿರಲೇ ಇಲ್ಲ.

ಯಾವುದಕ್ಕೂ ಸಮಯ ಕೂಡಿ ಬರಬೇಕು ಎನ್ನುವಂತೆ ಕರೋನ ಕಾಲದಲ್ಲಿ ಮನಸ್ಸಿನ ದುಗುಡ, ಭಯ ತಳಮಳವನ್ನು ದೂರಗೊಳಿಸಿದ್ದೇ ಬರವಣಿಗೆ. ನಾಲ್ಕು ಗೋಡೆಗಳ ಮಧ್ಯೆ ನಾಲ್ವೇ ಜನರ ಮುಖ ನೋಡಿಕೊಂಡು ಇರಬೇಕಾದಾಗ ಉಂಟಾಗುವ ಖಿನ್ನತೆಯ ಜೊತೆಗೆ, ನಾಳೆ ಏನಾಗುತ್ತದೆಯೋ ಎನ್ನುವ ದುಗುಡವೊಂದೆಡೆ. ಹೊಸ ಊರಿನಲ್ಲಿ ನಮ್ಮವರೆಲ್ಲರಿಂದಲೂ ದೂರ ಇರುವ ಭಯ ಮತ್ತೊಂದೆಡೆ. ಇಂತಹ ಸಂದರ್ಭದಲ್ಲಿಯೇ ಬದುಕಿಗೊಂದು ಆಶಾಕಿರಣದಂತೆ ಕಂಡದ್ದು ತಾಯಂದಿರಿಗಾಗಿಯೇ ಇದ್ದ ಮಾಮ್ಸ್ ಪ್ರೆಸ್ಕೋ ಎನ್ನುವ ವೇದಿಕೆ. ಅಲ್ಲಿ ಕೊಡುತ್ತಿದ್ದ ವಿಷಯಗಳಿಗೆ ಬರೆಯಲು ಪ್ರಾರಂಭಿಸಿದ್ದೇ ಹೊಸ ಚೈತನ್ಯ ತಂದಿತು

ಹಾಗೆ ಬರೆಯುತ್ತಿದ್ದ ಲೇಖನಗಳಿಗೆ ದೊರೆತ ಉತ್ತಮ ಪ್ರತಿಕ್ರಿಯೆಯನ್ನು ನೋಡಿ ನಿಧಾನವಾಗಿ ಪತ್ರಿಕೆಗಳಿಗೆ ಲೇಖನಗಳನ್ನು ಕಳುಹಿಸಲು ಪ್ರಾರಂಭಿಸಿದೆ. ಲೇಖನಗಳು ಪತ್ರಿಕೆಯಲ್ಲಿ ಪ್ರಕಟವಾದಾಗ ನಾನೂ ಬರೆಯಬಹುದು ಎನ್ನುವ ಧೈರ್ಯ ಮೂಡಿ ಬಂತು.

ಅದೇ ಧೈರ್ಯದ ಮೇಲೆ ಮಾಮ್ಸ್ಪ್ರಸ್ಸೋ ವೇದಿಕೆಯಲ್ಲಿ ಕೊಡುತ್ತಿದ್ದ ಸಾಲುಗಳನ್ನು ಉಪಯೋಗಿಸಿ ಕಥೆ ಬರೆಯಲು ಪ್ರಾರಂಭಿಸಿದೆ. ಹಾಗೆ ಬರೆದ ಕೆಲವು ಕಥೆಗಳಿಗೆ ಬಂದ ಪ್ರತಿಕ್ರಿಯೆಯನ್ನು ನೋಡಿದಾಗ ನನಗೇ ಆಶ್ಚರ್ಯವಾಗತೊಡಗಿತು. ಪ್ರಾರಂಭದಲ್ಲಿಯೇ ಇದು ಕಾಲ್ಪನಿಕ ಕಥೆ ಎಂದು ಬರೆದಿದ್ದರೂ, ಬಹಳಷ್ಟು ಜನರು ನೈಜ ಘಟನೆ ಇರಬೇಕೆಂದು ಪ್ರತಿಕ್ರಿಯಿಸುತ್ತಿದ್ದರು.

ಈ ಪುಸ್ತಕದಲ್ಲಿರುವ ಕೆಲವು ಕಥೆಗಳು ಹಾಗೆ ಬ್ಲಾಗ್ ರೂಪದಲ್ಲಿ ಬರೆದಂತಹವು. ಕೆಲವು ಕಥೆಗಳು ಮತ್ತೆ ಮತ್ತೆ ಕಾಡುವಂತಹ ಕೆಲವು ಘಟನೆಗಳನ್ನು ಮುಂದುವರಿಸುತ್ತಾ ರೂಪಗೊಂಡದ್ದು. ಇನ್ನು ಕೆಲವು ಕಥೆಗಳು ಬಾಲ್ಯದ ನೆನಪು ಮೂಡಿಸುವ ವಸ್ತುಗಳ ಮೇಲೆ ಬರೆದದ್ದು ಉದಾಹರಣೆಗೆ ಗೊರಬು, ಗೋಲಿ ಸೋಡಾ, ಬಣ್ಣದ ಡಸ್ಟರ್.

ನಾವು ಹುಟ್ಟಿ ಬೆಳೆದ ವಾತಾವರಣದ ಪ್ರಭಾವ ನಮ್ಮ ಮೇಲೆ ಬಹಳಷ್ಟು ಇರುತ್ತದೆ. ಹಾಗಿರುವಾಗ ಬರೆಯುವ ಕಥೆಗಳನ್ನು ಪ್ರಭಾವಿಸದೆ ಇರಲು ಸಾಧ್ಯವೇ? ಮೂಲತಃ ದಕ್ಷಿಣ ಕನ್ನಡದವಳಾದ ಕಾರಣವಾದ್ದರಿಂದ ಹೆಚ್ಚಿನ ಕಥೆಗಳ ಪರಿಸರ ದಕ್ಷಿಣ ಕನ್ನಡದ್ದು. ಒಂದೆರಡು ಕಥೆಗಳಲ್ಲಿ ಮಂಗಳೂರು ಕನ್ನಡವನ್ನೂ ಬಳಸಿದ್ದೇನೆ. ಒಟ್ಟಿನಲ್ಲಿ ನನ್ನ ಈ ಪ್ರಯತ್ನ ಓದುಗರಾದ ನಿಮಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆಯಂತೂ ಇದೆ. ಪುಸ್ತಕವನ್ನು ಓದಿ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕೇಳಿಕೊಳ್ಳುತ್ತೇನೆ.

- ಅಶ್ವಿನಿ ಸುನಿಲ್

MORE FEATURES

ದಾಸಕೂಟದ ದಳವಾಯಿ ‘ಶ್ರೀ ಕನಕದಾಸರು’

18-11-2024 ಬೆಂಗಳೂರು

“ಕನಕದಾಸರು ಸ್ಥಾನಮಾನಗಳ ದೃಷ್ಟಿಯಿಂದ ಸಾಕಷ್ಟು ಶ್ರೀಮಂತ ಕುಟುಂಬವಾದರೂ ಹುಟ್ಟಿನ ದೃಷ್ಟಿಯಿಂದ ಸಮಾಜದ ಕೆಳವರ್ಗಕ್...

ನಮ್ಮ ನೆಲದ ಶ್ರೇಷ್ಠ ದಾರ್ಶನಿಕ ಕವಿ - ಕನಕದಾಸರು

18-11-2024 ಬೆಂಗಳೂರು

"ಈಗ ಕನಕದಾಸರ ಜನ್ಮಭೂಮಿ ಮತ್ತು ಕರ್ಮಭೂಮಿ ಇವೆರಡು ಪುಣ್ಯಸ್ಥಳಗಳಾಗಿ, ಆಧ್ಯಾತ್ಮದ ಕ್ಷೇತ್ರಗಳಾಗಿ ಉಳಿಯುವುದರ ಜೊತ...

ಭಾರತೀಯ ಸಾಹಿತ್ಯದಲ್ಲಿ ಈ ಬಗೆಯ ಇನ್ನೊಂದು ಕಾದಂಬರಿ ಇಲ್ಲ...

17-11-2024 ಬೆಂಗಳೂರು

"ಇದರಲ್ಲಿ ಇರುವ ಲೇಖನಗಳನ್ನು ಪ್ರಾಚೀನ, ಮಧ್ಯಕಾಲೀನ ಹಾಗೂ ಅರ್ವಾಚೀನ ಎಂಬ ಮೂರು ಶೀರ್ಷಿಕೆಗಳ ಅಡಿಯಲ್ಲಿ ಪರಿಶೀಲನೆ...