ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್


“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿಷ್ ಕಾದಂಬರಿಗಳ ಅನುವಾದ ಇತ್ಯಾದಿ, ಇತ್ಯಾದಿ ಹವ್ಯಾಸಗಳೊಂದಿಗೆ ನನ್ನ ನೆನಪುಗಳನ್ನೂ ದಾಖಲಿಸಿದ್ದು ಅದು ಈಗ ಪುಸ್ತಕದ ರೂಪ ಪಡೆದಿದೆ” ಎನ್ನುತ್ತಾರೆ ಪಿ. ಶ್ರೀಧರ್ ನಾಯಕ್ ಅವರು ‘ಹೇಳದೇ ಇದ್ದ ವಾಸ್ತವಗಳು’ ಕೃತಿಗೆ ಬರೆದ ಲೇಖಕರ ಅನಿಸಿಕೆ.

ನಾನು ನಿವೃತ್ತನಾದ ಬಳಿಕ ನನ್ನ ಮಿತ್ರರು ಕೆಲವರು ಸಿಕ್ಕಿದಾಗಲೆಲ್ಲ "ಹೇಗೆ ಕಾಲ ಕಳೆಯುತ್ತಿದ್ದೀರಿ ನಾಯಕರೇ?" ಎಂದು ಸಾಮಾನ್ಯವಾಗಿ ಪ್ರಶ್ನಿಸುವುದಿತ್ತು. ಈಗಲೂ ಕೂಡ. ವಿಷಮಶೀತ ಜ್ವರದಿಂದ ಬಳಲಿ ಗುಣಮುಖರಾದವರನ್ನು "ಈಗ ಹೇಗಿದೆ ನಿಮ್ಮ ಆರೋಗ್ಯ ಸ್ಥಿತಿ? ಎಂದು ವಿಷಾದಪೂರ್ಣ ಧ್ವನಿಯಲ್ಲಿ ಪ್ರಶ್ನಿಸಿದಂತೆ ಅವರು ಪ್ರಶ್ನಿಸಿದಾಗ ನಾನು ನನ್ನ ನಗುವನ್ನು ತಡೆದು "ದಿನದ ಇಪ್ಪತ್ತನಾಲ್ಕು ಗಂಟೆಗಳೂ ಸಾಲುವುದಿಲ್ಲ" ಎಂದು ಉತ್ತರಿಸಿದ್ದೂ ಇದೆ.

"ಪ್ರಜಾವಾಣಿ"ಯಿಂದ ನಿವೃತ್ತನಾದ ಬಳಿಕ ನನ್ನ ಬದುಕೇ ಮುಗಿದು ಹೋದಂತೆ ಅಂದುಕೊಂಡವರಿಗೆ ನನ್ನ ಉತ್ತರದಿಂದ ಗಲಿಬಿಲಿ ಉಂಟಾದುದು ಕಂಡಾಗ ನನಗೆ ಅಚ್ಚರಿಯಾಗುತ್ತಿರಲಿಲ್ಲ. ಇದರಲ್ಲಿ ಅವರದ್ದೇನೂ ತಪ್ಪಿಲ್ಲ ಬಿಡಿ. ಏಕೆಂದರೆ ಎಷ್ಟೋ ಮಂದಿ ತಾವು ಉದ್ಯೋಗದಿಂದ ನಿವೃತ್ತರಾದ ಮರುದಿನವೇ ತಮ್ಮನ್ನು ಮುದಿತನ ಆವರಿಸಿತು ಎಂದು ಭಾವಿಸಿ ಮೂಲೆ ಹಿಡಿಯುವುದಿದೆ. ಮೂರು ದಶಕಗಳ ಕಾಲ "ಪ್ರಜಾವಾಣಿ"ಯ ಸಂಪಾದಕೀಯ ವಿಭಾಗದಲ್ಲಿ ದುಡಿದ ಬಳಿಕ (ನಾನು ಸೇವೆ ಎಂಬ ಪದ ಬಳಸುವುದಿಲ್ಲ. ಏಕೆಂದರೆ ನಾನು ಪ್ರತೀ ತಿಂಗಳು ಸಂಬಳ ತೆಗೆದುಕೊಂಡಿದ್ದೇನೆ.) ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿಷ್ ಕಾದಂಬರಿಗಳ ಅನುವಾದ ಇತ್ಯಾದಿ, ಇತ್ಯಾದಿ ಹವ್ಯಾಸಗಳೊಂದಿಗೆ ನನ್ನ ನೆನಪುಗಳನ್ನೂ ದಾಖಲಿಸಿದ್ದು ಅದು ಈಗ ಪುಸ್ತಕದ ರೂಪ ಪಡೆದಿದೆ.

ಪತ್ರಕರ್ತನಿಗೆ ಎಲ್ಲವನ್ನೂ ಸುದ್ದಿಯಲ್ಲಿ ಅಡಕಗೊಳಿಸಲು ಸಾಧ್ಯವಿಲ್ಲ. ಹೇಳದೇ ಇರುವ ವಿಷಯಗಳು ಹತ್ತು ಹಲವು ಇರುತ್ತವೆ. ಅವುಗಳನ್ನು ಇಲ್ಲಿ ಬರೆದಿದ್ದೇನೆ. ಬರೆಯಬಾರದವುಗಳನ್ನು ಬರೆದಿಲ್ಲ. ಹಳೆಯ ಗಾಯಗಳನ್ನು ಕೆದಕುವುದು ನನ್ನ ಉದ್ದೇಶವಲ್ಲ. ಕಲಬುರಗಿ ಮತ್ತು ಹಾಸನದಲ್ಲಿ ಹತ್ತು ವರ್ಷಗಳ ಕಾಲ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ್ದೇನೆ. ಅಂದಿನ ಅನುಭವಗಳಿಗೆ ಇಲ್ಲಿ ಅಕ್ಷರ ರೂಪ ಕೊಟ್ಟಿದ್ದೇನೆ.

ಬೆಂಗಳೂರಿನಲ್ಲಿ ಸಹೋದ್ಯೋಗಿಗಳಾಗಿದ್ದವರು, ಕಲಬುರಗಿ ಮತ್ತು ಹಾಸನದಲ್ಲಿದ್ದಾಗ ವಿವಿಧ ಪತ್ರಿಕೆಗಳ ವರದಿಗಾರರಾಗಿದ್ದವರು, ಸ್ಥಳೀಯ ಲೇಖಕರು, ನನ್ನ ಮೆಚ್ಚಿನ ಪ್ರಮುಖ ಲೇಖಕರು, ನನ್ನ ಹಿತೈಷಿಗಳು, ಚರಿತ್ರೆ ಮತ್ತು ವಾಸ್ತುಶಿಲ್ಪದ ಬಗ್ಗೆ ಆಸಕ್ತಿ ಉಳ್ಳವರು ಕಲಬುರಗಿಯಲ್ಲಿ ಮತ್ತು ಹಾಸನದಲ್ಲಿ ನಾನು ಕಳೆದ ದಿನಗಳನ್ನು, ಸ್ವಾತಂತ್ರ್ಯ ಹೋರಾಟಗಾರ, ಪತ್ರಕರ್ತ ರಾಘು ಜಾಗೀರದಾರ ಅವರ ವ್ಯಕ್ತಿಚಿತ್ರ, ಅಲ್ಲಿನ ಚಾರಿತ್ರಿಕ ಸ್ಮಾರಕಗಳ ಕುರಿತು ಫೇಸ್‌ಬುಕ್‌ನಲ್ಲಿ ಬರೆದುದನ್ನು ಅಪಾರವಾಗಿ ಮೆಚ್ಚಿ ಮುಂದುವರಿಸುವಂತೆ ಒತ್ತಾಯಿಸಿದ್ದರು. ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆಯೂ ಒತ್ತಾಯಿಸಿದ್ದರು. ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದಕ್ಕೆ ಅವರ ಪ್ರೀತಿಪೂರ್ವಕ ಒತ್ತಾಯ ಕೂಡ ಕಾರಣ.

ಮಹಾಭಾರತದಲ್ಲಿ ಶ್ರೀಕೃಷ್ಣ ಭೀಷ್ಮನಿಗೆ ಹೇಳಬೇಕಾದುದನ್ನು ಹೇಳಿ ಹೋಗು ಎನ್ನುತ್ತಾನೆ. ನಾನು ಹೇಳಬೇಕಾದುದನ್ನು ಹೇಳಿಯೇ ಹೋಗಬೇಕು. ಬಾಕಿ ಉಳಿಸಿದರೆ ಸ್ಮೃತಿ ಪಟಲದಲ್ಲಿ ಉಳಿದು ಯಾರಿಗೂ, ಕೊನೆಗೆ ನನಗೂ ಲಾಭವಿಲ್ಲದಂತೆ ಆಗುತ್ತದೆ. ಫೇಸ್‌ಬುಕ್‌ನಲ್ಲಿ ನಾನು ಈ ಲೇಖನಗಳನ್ನು ಬರೆದಾಗ ತುಂಬಾ ಮಂದಿ ದೂರವಾಣಿಯ ಮೂಲಕ ಸಂಪರ್ಕಿಸಿ ನನ್ನ ಹಾಸ್ಯ ಮನೋಭಾವವನ್ನು ಮೆಚ್ಚಿ ಅಭಿನಂದಿಸಿದ್ದಾರೆ. "ಪಂಚ್ ಚೆನ್ನಾಗಿದೆ. ವಿಷಯ ಸಂಗ್ರಹ ಅಪಾರ ಮತ್ತು ನಿಮ್ಮ ನೆನಪಿನ ಶಕ್ತಿ ಅಗಾಧ." ಎಂದಿದ್ದಾರೆ. ನನಗೆ ಯಾವುದೇ ಜಿಲ್ಲೆಯ ಜನರ ಬಗ್ಗೆ, ಅವರ ಸಂಸ್ಕೃತಿ, ಆಚರಣೆಗಳ ರೀತಿ ಯಾವುದೇ ಪೂರ್ವಗ್ರಹದ ದೃಷ್ಟಿಕೋನ ಇಲ್ಲದ ಕಾರಣ ಬರೆಯುವಾಗ ಹಿಂಜರಿಕೆ ಇಲ್ಲ. ಮೆಚ್ಚುಗೆ ವ್ಯಕ್ತಪಡಿಸಬೇಕಾದಾಗ ಜಿಪುಣನಾಗುವುದಿಲ್ಲ. ಹುಸಿಪ್ರೀತಿ ತೋರಿಸಲು ನನ್ನಿಂದ ಅಸಾಧ್ಯ. "ನಿಮ್ಮ ಹಬ್ಬ ಅಲ್ವಾ, ನನ್ನನ್ನು ಕರೆಯುವುದಿಲ್ವಾ" ಎಂದು ಕೃತಕವಾಗಿ ಪ್ರೀತಿ ಮತ್ತು ದೈನ್ಯ ತೋರಿಸುವವರಂತೆ ಕೃತಕ ಪ್ರೇಮವನ್ನು ಯಾವುದೇ ಜಿಲ್ಲೆಯ ಬಗ್ಗೆ ಅಥವಾ ಜಿಲ್ಲೆಯವರ ಬಗ್ಗೆ ತೋರಿಸುವುದು ನನ್ನಿಂದ ಅಸಾಧ್ಯ. ಹಳೆಯ ಗಾಯಗಳನ್ನು ಕೆದಕಬಾರದು ಎಂದು ಕೆಲವು ವಿಷಯಗಳನ್ನು ಸೂಚ್ಯವಾಗಿ ಪ್ರಸ್ತಾಪಿಸಿದ್ದೇನೆ.

ನಾನು ಈ ರೀತಿ ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ. 2020ರ ಜುಲೈ ತಿಂಗಳಿನಲ್ಲಿ ಪಟ್ಟುಬಿಡದೆ ಪ್ರತೀ ದಿನ ಫೇಸ್‌ಬುಕ್‌ನ ನನ್ನ ಖಾತೆಗೆ ವ್ರತದಂತೆ ಕೂತು ಇವನ್ನು ಬರೆದಿದ್ದೇನೆ.

ಕೊರೊನಾದ ಮೊದಲ ಅಲೆಯ ಆ ದುರ್ದಿನಗಳಲ್ಲಿ ದಿನನಿತ್ಯ ಸಾವಿನ ಸುದ್ದಿಗಳು. ಆಸ್ಪತ್ರೆಯಲ್ಲಿ ಪ್ರವೇಶ ನಿರಾಕರಿಸಿದ ಕಾರಣ ಗರ್ಭಿಣಿಯರು ಆಂಬುಲೆನ್ಸ್‌ನಲ್ಲಿಯೇ ಹೆತ್ತ ಸುದ್ದಿ: ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಿಸಿದ ಕಾರಣ ಮನೆಯಲ್ಲಿ ತೀವ್ರ ಅಸ್ವಸ್ಥ ರೋಗಿಗಳ ಸಾವು: ಪುಟ್ಟ ಮಗುವಿಗೆ ಚಿಕಿತ್ಸೆಗೆ ಕನಿಷ್ಠ ಎಂಟು ಆಸ್ಪತ್ರೆಗೆ ಹೋಗಿ ಬೇಡಿಕೊಂಡರೂ ಚಿಕಿತ್ಸೆ ಸಿಗದೆ ಅದು ಕೊನೆಯುಸಿರು ಎಳೆದ ಸುದ್ದಿ; ಆಂಬುಲೆನ್ಸ್‌ಗೆ ಕಾದು ಕೊನೆಗೆ ಅದು ಬಾರದೇ ಹೋದಾಗ ನಡೆದುಕೊಂಡೇ ಹೋದ ಕೊರೊನಾ ಪೀಡಿತ ಆಟೋ ಚಾಲಕ ರಸ್ತೆಯಲ್ಲಿಯೇ ಬಿದ್ದು ಸತ್ತ ಘಟನೆ... ಇಂತಹ ಕೆಟ್ಟ ಸುದ್ದಿಗಳಿಂದ ವ್ಯಥಿತನಾಗಿದ್ದಾಗ ಕೆಲ ಸಮಯ ವಾದರೂ ದೂರ ನಿಂತು ಬರಹದಲ್ಲಿ ನನ್ನನ್ನು ತೊಡಗಿಸಿಕೊಳ್ಳಬೇಕು. ಅದರಲ್ಲಿ ಮನಶ್ಯಾಂತಿ ಕಾಣಬೇಕು ಎಂದು ನನ್ನ ನೆನಪುಗಳಿಗೆ ಬರಹದ ರೂಪ ಕೊಟ್ಟೆ.

ಇವನ್ನು ಬರೆದುದರಿಂದ ನನಗೆ ಆದ ಇನ್ನೊಂದು ಲಾಭ ಎಂದರೆ ಹತ್ತು ಹಲವು ಪ್ರಿಯ ಮಿತ್ರರನ್ನು ಮತ್ತೆ ಈ ಲೇಖನಗಳಿಂದಾಗಿ, ಫೇಸ್‌ಬುಕ್ ಮೂಲಕ ಭೇಟಿಯಾಗುವುದಕ್ಕೆ ಸಾಧ್ಯವಾಗಿರುವುದು. ಇದನ್ನು ಅಂದು ಓದಿ ಮೆಚ್ಚುಗೆ ವ್ಯಕ್ತಪಡಿಸಿದವರಲ್ಲಿ ಬಹುತೇಕ ಮಿತ್ರರು ಪುಸ್ತಕ ರೂಪದಲ್ಲಿ ಪ್ರಕಟಿಸುವಂತೆ ಒತ್ತಾಯಿಸಿದ್ದರು.

ಹಾಸನದಲ್ಲಿ, ಮುಖ್ಯವಾಗಿ ಕಲಬುರಗಿಯಲ್ಲಿ ನಾನು ವರದಿಗಾರನಾಗಿದ್ದಾಗ ಸಂಪರ್ಕ ಮಾಧ್ಯಮಗಳು ಈಗಿನಷ್ಟು ಬೆಳೆದಿರಲಿಲ್ಲ. ಈಗಿನ ಸಂಪರ್ಕ ವ್ಯವಸ್ಥೆಗಳಿಗೆ ಹೋಲಿಸಿದರೆ ಬಾಲ್ಯಾವಸ್ಥೆಯಲ್ಲಿದ್ದವು ಎಂದರೆ ತಪ್ಪಾಗಲಾರದು. ಈಗ ಭೂಮಿಯ ಯಾವುದೇ ಮೂಲೆಯಲ್ಲಿ ಮಹತ್ತರವಾದುದು ಸಂಭವಿಸಿದರೆ ತಕ್ಷಣ ಪತ್ರಕರ್ತರ ಗಮನಕ್ಕೆ ಬರುವುದು ಸಲೀಸು. ಹಿಂದೆ ಸುದ್ದಿಯ ಬೇಟೆಗೆ ಹೋದಾಗ ಮನೆಗೆ ಮರಳುವುದು ಎಷ್ಟು ಹೊತ್ತಿಗೆ ಅಥವಾ ಯಾವ ಕಾರಣ ತಡವಾಗಿದೆ ಎಂದು ತಿಳಿಸಲು ಯಾವುದೇ ಸಂಪರ್ಕ ವ್ಯವಸ್ಥೆ ಇಲ್ಲದ ಗ್ರಾಮಗಳಿಗೆ ಹೋದಾಗ ಮನೆಯವರಿಗೆ ಆತಂಕ. ಹಿಂಸಾಚಾರ ನಡೆದಿದೆ ಎನ್ನುವುದನ್ನು ತಿಳಿಸಿ ಹೋದ ಬಳಿಕ ಮಾಹಿತಿ ಇಲ್ಲದಿದ್ದರೆ ಮನಸ್ಸು ಕೆಡುಕು ಸಂಭವಿಸಿರಬೇಕು ಎಂದೇ ಯೋಚಿಸುತ್ತದೆ. ಹೊತ್ತುಗೊತ್ತು ಇಲ್ಲದ ಆ ದಿನಗಳಲ್ಲಿ ಇದಕ್ಕೆ ಸಾಧ್ಯವಾದಷ್ಟು ಹೊಂದಿಕೊಂಡು ಹೋದ ಪತ್ನಿ ಶಿಲ್ಪಾ, ಪುತ್ರ ರಾಹುಲ್ ಮತ್ತು ಮಗಳು ಶ್ರುತಿ ಅವರ ಸಹಕಾರ ಧನ್ಯವಾದಗಳು. ಅಭೂತಪೂರ್ವವಾದುದು. ಅವರಿಗೆ ನನ್ನ ಅನಂತ ಧನ್ಯವಾದಗಳು.

ಕಲಬುರಗಿಯ ಅಂದಿನ ಸಾಮಾಜಿಕ ಜೀವನ, ಸಾಮಾನ್ಯ ಜನರು ಪಟ್ಟಪಾಡು, ಊಟೋಪಚಾರ, ರಾಜಕೀಯ, ಐತಿಹಾಸಿಕ ಸ್ಥಳ ಕುರಿತಾದ 20 ಲೇಖನಗಳು ಈ ಪುಸ್ತಕದ ಒಳಗೆ ಅಡಕವಾಗಿವೆ. ನವೀರಾದ ಹಾಸ್ಯ ಬೆರೆಸಿ ಕೆಲವನ್ನು ಪ್ರಬಂಧದ ಮಾದರಿಯಲ್ಲಿ ಬರೆದಿದ್ದೇನೆ. ಅಲ್ಲಿನ ಬದುಕು ಸಹ್ಯವಾಗಿರುವುದಕ್ಕೆ, ವಿವಿಧ ಸಂದರ್ಭಗಳಲ್ಲಿ ನನಗೆ ನಾನು ಕೇಳುವ ಮುನ್ನವೇ ನೆರವು ನೀಡಿದ, ಸೋದರ ಪ್ರೀತಿ ತೋರಿಸಿದ ಹಿರಿಯ ಪತ್ರಕರ್ತರಾದ ಶ್ರೀಕಾಂತ್ ಆಚಾರ್ ಮಣೂರ ಮತ್ತು ಮಲ್ಲಿನಾಥ ಮರಂಕಲ್ ಹಾಗೂ ಇತರರು ಕಾರಣ. ಅವರಿಗೆ ಪ್ರೀತಿಪೂರ್ವಕ ವಂದನೆಗಳು. "ಪ್ರಜಾವಾಣಿ"ಯ ಮುಖ್ಯ ಉಪಸಂಪಾದಕ ಆತ್ಮೀಯ ಮಿತ್ರ ಗವಿ ಬ್ಯಾಳಿ ಅವರ ನೆರವನ್ನು ಪ್ರೀತಿಪೂರ್ವಕವಾಗಿ ಸ್ಮರಿಸುವೆ.

ನನ್ನ ಹಾಸನದ ದಿನಗಳಲ್ಲಿ ಅಲ್ಲಿನ ಸ್ಥಳೀಯ ಪತ್ರಕರ್ತರಾದ ಎಸ್. ರಂಗನಾಥ್ ಮತ್ತು ಕೆ.ಆರ್. ಮಂಜುನಾಥ್ ಅವರ ಸಹಕಾರ, ನೆರವನ್ನು ಮರೆಯುವಂತಿಲ್ಲ. ಅಪರಿಚಿತ ಊರಿಗೆ ಅಪರಿಚಿತನಾಗಿ ಹೋದ ನನ್ನನ್ನು ಅಲ್ಲಿಯವರಲ್ಲಿ ನಾನೂ ಒಬ್ಬ ಎಂಬ ಭಾವ ಮೂಡುವಂತೆ ಸ್ನೇಹ ತೋರಿದ್ದಾರೆ. ಇವರನ್ನು ಕೃತಜ್ಞತಾಪೂರ್ವಕವಾಗಿ ನೆನೆಯುವೆ. "ಪ್ರಜಾವಾಣಿ"ಯ ಸುದ್ದಿ ಸಂಪಾದಕ ಪಿ. ನಾಗೇಶ್ ಶೆಣೈ ಅವರು ಈ ಕೃತಿಯನ್ನು ಪ್ರಟಣೆಗೆ ಮುನ್ನವೇ ಓದಿ ಆಡಿದ ಮೆಚ್ಚುಗೆಯ ನುಡಿಗಳು ನನಗೆ ಸಂತಸ ತಂದಿದೆ.

ಲೇಖಕ ಎಸ್. ದಿವಾಕರ್ ವಿಶ್ವದ ಕಥಾಕಣಜ ಎಂದೇ ಕನ್ನಡಿಗರಿಗೆ ಪರಿಚಿತರು. ಯಾವ ಉತ್ತಮ ಕಥೆಯೂ, ಲೇಖಕನೂ ಅವರ ಕಣ್ಣು ತಪ್ಪಿಸಿ ಇದ್ದಂತಿಲ್ಲ. ಈ ಕಥಾಮೋಹಿ ನಾನು ಇಲ್ಲಿ ಬರೆದ ವಾಸ್ತವ ಕಥನಗಳನ್ನು ಓದಿ ಮುನ್ನುಡಿಯಲ್ಲಿ ಬರೆದ ಮೆಚ್ಚುನುಡಿಗಳು ಈ ಕೃತಿಗೆ ಹೊನ್ನಕಿರೀಟ ತೊಡಿಸಿದಂತೆ ಆಗಿದೆ. ನನ್ನಂತಹ ಲೇಖಕರಿಗೆ ಮಾರ್ಗದರ್ಶಕರಂತಿರುವ ಅವರಿಗೆ ಆಭಾರಿ.

ನನ್ನ ಕೃತಿಗೆ ವ್ಯಂಗ್ಯಪೂರ್ಣ ಚಿತ್ರಗಳನ್ನು ನಾನು ಕೇಳಿದ ತಕ್ಷಣ ಒಪ್ಪಿ ರಚಿಸಿದ ನನ್ನ ಹಿರಿಯ ಸನ್ನಿತ್ರ, ಅಂತರ ರಾಷ್ಟ್ರೀಯ ಮಟ್ಟದ ಕಲಾವಿದ ಚಂದ್ರನಾಥ ಆಚಾರ್ಯ ಅವರಿಗೆ ಹೃತ್ತೂರ್ವಕ ಕೃತಜ್ಞತೆಗಳು. ನನ್ನ ಭಾವಚಿತ್ರವನ್ನು ಸಶಕ್ತ ರೇಖೆಗಳಿಂದ ರಚಿಸಿದ ನನ್ನ ಆತ್ಮೀಯ ಕಲಾವಿದ ಮಿತ್ರ ಸುನೀಲ್ ಮಿಶ್ರಾ ಅವರಿಗೆ, ಮರಳು ಶಿಲ್ಪ, ಆವೆಮಣ್ಣಿನ ಕಲಾಕೃತಿ ರಚನೆ, ಮಕ್ಕಳಿಗೆ ಕಲಾ ಶಿಬಿರ, ಮುಖವಾಡ ರಚನೆಯ ಶಿಬಿರ ಹೀಗೆ ಒಂದೇ, ಎರಡೇ ? ಹತ್ತು ಹಲವು ಕಲಾ ಚಟುವಟಿಕೆಗಳ ಮಧ್ಯೆ ನನಗೆ ಕಲಾತ್ಮಕ ಚಿತ್ರ ರಚಿಸಿಕೊಟ್ಟು ಕೃತಿಯ ಸೊಗಸು ಹೆಚ್ಚಿಸಿದ ಕಲಾವಿದ ವೆಂಕಿ ಪಲಿಮಾರು ಅವರಿಗೆ ಅನಂತ ಧನ್ಯವಾದಗಳು. ನನ್ನ ಪತ್ನಿ, ಕಲಾವಿದೆ ಶಿಲ್ಪಾ ನಾಯಕ್ ಕೂಡ ಈ ಕೃತಿಗೆಂದೇ ಚಿತ್ರಗಳನ್ನು ರಚಿಸಿದ್ದಾರೆ. ಅವರಿಗೂ ಧನ್ಯವಾದಗಳು. ಈ ಪುಸ್ತಕವನ್ನು ಪ್ರೀತಿಯಿಂದ ತಮ್ಮ ಪ್ರಕಾಶನದ ಮೂಲಕ ಪ್ರಕಟಿಸುತ್ತಿರುವ ಗೀತಾಂಜಲಿ ಪಬ್ಲಿಕೇಷನ್ಸ್‌ನ ಶ್ರೀಮತಿ ಸುಶೀಲಾ ಹಾಗೂ ಅಂದವಾಗಿ ಮುದ್ರಿಸಿದ ಜಾಗೃತಿ ಪ್ರಿಂಟರ್ಸ್ ಮಾಲಿಕರಾದ ಶ್ರೀ ನಿಡಸಾಲೆ ಪಿ. ವಿಜಯ್ ಹಾಗೂ ಜಾಗೃತಿ ಪ್ರಿಂಟರ್ಸ್‌ ನ ಕಾರ್ಯನಿರ್ವಾಹಕರಾದ ಶ್ರೀ ಮಹೇಶ್ ಕುಮಾರ್ ಬಿ. ಮತ್ತು ಆಕರ್ಷಕ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕಿರಣ್ ಮಾಡಾಳು ಅವರಿಗೂ ನನ್ನ ಕೃತಜ್ಞತೆಗಳು.

 

- ಪಿ. ಶ್ರೀಧರ್ ನಾಯಕ್

MORE FEATURES

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...

ಮೂರೂ ಕಥನಗಳು ಮೂರು ದಿಕ್ಕಿನವು

20-10-2024 ಬೆಂಗಳೂರು

"ಮೂರೂ ಕಥನಗಳು ಮೂರು ದಿಕ್ಕಿನವು. ಹಾಗಾಗಿ, ಒಟ್ಟು ಓದು ಸ್ವಲ್ಪ ಚದುರಿದಂತೆ ಅನ್ನಿಸಿದರೂ ಕುತೂಹಲಕರವಾಗಿತ್ತು,&qu...