ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...


“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳ ವಿಶ್ಲೇಷಣೆ ಅಗತ್ಯವಾಗಿದೆ. ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಸಮಕಾಲೀನ ಮಾಧ್ಯಮಗಳ ವಿಕಾಸ ಹಾಗೂ ವೃದ್ಧಿಯ ಆಶಯಗಳ ದಾಖಲೆ ಅಪೇಕ್ಷಣೀಯ,” ಎನ್ನುತ್ತಾರೆ ಎ.ಎಸ್. ಬಾಲಸುಬ್ರಹ್ಮಣ್ಯ. ಅವರು ‘ಪತ್ರಿಕೋದ್ಯಮದ ಪಲ್ಲಟಗಳು’ ಕೃತಿಗೆ ಬರೆದ ಅನಿಸಿಕೆ ನಿಮ್ಮ ಓದಿಗಾಗಿ.

ಜಾಗತಿಕ ಗ್ರಾಮದಲ್ಲಿ...

ಮಾನವ ಸಂಘಜೀವಿ, ಯಶಸ್ವಿ ಸಂವಹನ ಕಲೆಯಿಂದ ಮಾತ್ರ ಆತನ ಪರಸ್ಪರ ಅವಲಂಬಿತ ಜೀವನ ಸಫಲತೆಯನ್ನು ಕಾಣಲು ಸಾಧ್ಯ. ಸನ್ನೆ, ಸೂಚನೆಗಳಿಂದ ಆರಂಭವಾದ ಆತನ ಸಂವಹನ ಕಲೆ, ವರುಷಗಳು ಉರುಳಿದಂತೆ ಭಾಷಾ ಬೆಳವಣಿಗೆಯಲ್ಲಿ ಸ್ಪಷ್ಟತೆಯ ಮಜಲನ್ನು ಪ್ರವೇಶಿಸಿತು. ಮುಂದಿನ ಮಹತ್ವದ ಹೆಜ್ಜೆ, ಆಲೋಚನೆಗಳನ್ನು ದಾಖಲಿಸುವ ಲಿಪಿ ಅಭಿವೃದ್ಧಿ, ಶಿಲೆ, ಮರದ ಹಲಗೆ, ತಾಮ್ರದ ತಗಡು, ವಸ್ತ್ರ, ಕಪ್ಪೆಚಿಪ್ಪು, ಬಿದಿರು ಮುಂತಾದ ಸಾಧನಗಳನ್ನು ಬಳಸಿ ಸುತ್ತಲಿನ ವಿಕಸನಗಳು ದಾಖಲೆಗೊಂಡವು. ಹದಿನೈದನೆಯ ಶತಮಾನದ ಮುದ್ರಣ ತಂತ್ರಜ್ಞಾನ ಕಲೆಯ ವೃದ್ಧಿ, ಸಂವಹನ ಇತಿಹಾಸದಲ್ಲಿ ಬಹುನಿರ್ಣಾಯಕ. ಮುದ್ರಣ ತದನಂತರ ಛಾಯಾಗ್ರಹಣ, ಸಿನಿಮಾ, ಬಾನುಲಿ, ಟೆಲಿವಿಷನ್ ಹಾಗೂ ನೂತನ ಅಂತರ್ಜಾಲ ಆಧಾರಿತ ಸಂವಹನ ವಿಶ್ವವನ್ನೇ ಜಾಗತಿಕ ಗ್ರಾಮವಾಗಿ ಪರಿವರ್ತಿಸಿವೆ.

ಶಾಸನ, ತಾಮ್ರದ ತಗಡು, ತಾಳೆಗರಿ, ಪತ್ರ ಬರವಣಿಗೆಗೆ ಸೀಮಿತವಾಗಿದ್ದ ದೇಶದ ಸಂವಹನ ಕಲೆಗೆ ಬದಲಾವಣೆ ತಂದವರು ಕ್ರಿಶ್ಚಿಯನ್ ಮಿಷನರಿಗಳು. ಭಾರತದಲ್ಲಿ 1556ರಲ್ಲಿ ಆಧುನಿಕ ಮುದ್ರಣ ಕಲೆ ಪರಿಚಯಿಸಿದ ಅವರು ಕರಪತ್ರ, ಕಿರುಹೊತ್ತಿಗೆ ನಂತರ ಪುಸ್ತಿಕೆಗಳನ್ನು ದೇಶ ಭಾಷೆಗಳಲ್ಲಿ ಮುದ್ರಿಸಿ, ಓದುವಿಕೆ ಮೂಲಕ ಜ್ಞಾನ ವಿಕಸನದ ಹೆಬ್ಬಾಗಿಲನ್ನೇ ತೆರೆದರು. ಇದರಿಂದ ಹೊಸ ನಾಗರಿಕತೆಯ ಪರಿಚಯ ವಿಭಿನ್ನ ಬದಲಾವಣೆಗಳಿಗೆ ಇಂಬು ನೀಡಿತು. ನಮ್ಮ ದೇಶದಲ್ಲಿ ಪತ್ರಿಕಾ ಮುದ್ರಣ 1780ರಲ್ಲಿ ಆರಂಭವಾಗಿ ಇಂದು ವಿಶ್ವದ ಎರಡನೇ ಅತಿದೊಡ್ಡ ಪತ್ರಿಕಾ ಪ್ರಕಟಣೆ ದೇಶವಾಗಿ ಹೊರಹೊಮ್ಮಿದೆ. 188 ವಿವಿಧ ಭಾಷೆಗಳಲ್ಲಿ ಹೊರಬರುವ ದೈನಿಕಗಳು ಮತ್ತು ನಿಯತಕಾಲಿಕೆಗಳು ವಿಶ್ವದ ಬೃಹತ್ ಪ್ರಜಾಸತ್ತೆಯ ರಕ್ಷಣೆಯಲ್ಲಿ ಮತ್ತು ಅಸಾಮ್ಯ ಭಿನ್ನಾಭಿಪ್ರಾಯಗಳನ್ನು ದಾಖಲಿಸುವ ಮಹತ್ತರ ಮಾಧ್ಯಮ.

1921ರಲ್ಲಿ ಶುರುವಾದ ಬಾನುಲಿ ಪ್ರಸಾರ ಇಂದು 1115 ಕೇಂದ್ರಗಳ ಮೂಲಕ ನಾಡಿನ ಬಹುತೇಕ ಎಲ್ಲರನ್ನು, ತಮ್ಮ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ರಂಜಿಸುತ್ತಿವೆ. ಮಾಹಿತಿ ನೀಡುತ್ತಿವೆ. ದೇಶದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿವೆ. 1959ರಲ್ಲಿ ದೇಶಕ್ಕೆ ಕಾಲಿರಿಸಿದ ಆಧುನಿಕ ದೂರದರ್ಶನ ಮಾಧ್ಯಮ. ಮನರಂಜನೆ ಮತ್ತು ಮಾಹಿತಿ ನೀಡುವ ಅತಿದೊಡ್ಡ ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿದೆ. ವಿಭಿನ್ನ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಮೂಲಕ ಈ ಪರಿಣಾಮಕಾರಿ ಶ್ರವ್ಯ-ದೃಶ್ಯ ಮಾಧ್ಯಮ ದೇಶದಲ್ಲಿಂದು ಅತಿಹೆಚ್ಚು ಜನರನ್ನು ಮುಟ್ಟುತ್ತಿದೆ.

ಜಗತ್ತಿನ ಅಧಿಕ ಕಥಾಚಿತ್ರಗಳನ್ನು ನಿರ್ಮಿಸುವ ನಮ್ಮ ದೇಶ, ಸಿನಿಮಾ ನಿರ್ಮಾಣದಲ್ಲಿ ಮುಂಚೂಣಿಯಲ್ಲಿದೆ. ಸುಮಾರು 9,500 ಪರದೆಗಳ ಮೂಲಕ, ಹಾಗೂ ಟಿವಿ, ಕಂಪ್ಯೂಟರ್, ಮೊಬೈಲ್ ಪರದೆಗಳ ಮೂಲಕ ಪ್ರೇಕ್ಷಕರಿಗೆ ಭರಪೂರ ಮನೋರಂಜನೆ ನೀಡುತ್ತಿವೆ. ಕೇಂದ್ರ ಸಿನಿಮಾ ಪ್ರಮಾಣಪತ್ರ ಮಂಡಳಿಯ (CBFC) 2021ರ ವರದಿಯ ಪ್ರಕಾರ 18,138 ವಿಡಿಯೋ ಹಾಗೂ ಸಿನಿಮಾಗಳು ಪ್ರದರ್ಶನಕ್ಕಾಗಿ ಪ್ರಮಾಣಪತ್ರ ಪಡೆದವು. ಇವುಗಳಲ್ಲಿ 1230 ವಿದೇಶಿ ಕಥಾ ಮತ್ತು ಕಿರುಚಿತ್ರಗಳು ಸೇರಿವೆ. ದೇಶದ 20ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಕಥಾಚಿತ್ರಗಳು ನಿರ್ಮಾಣವಾಗುತ್ತಿವೆ. ಪ್ರಮುಖವಾಗಿ ಹಿಂದಿ, ತೆಲುಗು, ತಮಿಳು, ಕನ್ನಡ, ಮಲಯಾಳಂ, ಮರಾಠಿ ಮತ್ತು ಗುಜರಾತಿ ಭಾಷೆಗಳಲ್ಲಿ ಕಥಾಚಿತ್ರಗಳು ತಯಾರಾಗುತ್ತವೆ. ಓಟಿಟಿ ವಾಹಿನಿಗಳು ವಿಸ್ತಾರಗೊಳ್ಳುತ್ತಿದ್ದಂತೆ ಬಹುಭಾಷೆಗಳಲ್ಲಿ ಸಿನಿಮಾ ವೀಕ್ಷಣೆ ಸಾಧ್ಯವಾಗುತ್ತಿದೆ. ಡಬ್ಬಿಂಗ್ ಇಲ್ಲವೇ ಉಪಶೀರ್ಷಿಕೆ ಬಳಸಿ, ಪ್ರಾದೇಶಿಕತೆಯ ಸೊಗಡನ್ನು ಇಡೀ ವಿಶ್ವಕ್ಕೆ ಪರಿಚಯಿಸಲು ಇಂದು ಸಾಧ್ಯವಾಗುತ್ತಿದೆ.

ಎಲ್ಲ ಪರಂಪರಾಗತ ಮಾಧ್ಯಮಗಳನ್ನು ಒಗ್ಗೂಡಿಸಿ ಪಸರಿಸುತ್ತಿರುವ ಅತ್ಯಾಧುನಿಕ ತಾಂತ್ರಿಕ ಆವಿಷ್ಕಾರ ಅಂತರ್ಜಾಲ. ಈ ಜಾಲಕ್ಕೆ ಮಾರುಹೋಗದವರಿಲ್ಲ. ಅಕ್ಷರ, ದೃಶ್ಯ, ಶ್ರವ್ಯ ಮತ್ತು ವಿಶೇಷ ಚಮತ್ಕಾರಗಳ ಮೂಲಕ ಇದು ಜಗತ್ತಿನ 500 ಕೋಟಿ ಜನರನ್ನು ಆಕರ್ಷಿಸಿದೆ. ಅಂದರೆ ಜನಸಂಖ್ಯೆಯ ಶೇ. 63. 2021ರ ಮಾಹಿತಿಯ ಪ್ರಕಾರ ದೇಶದ 64.6 ಕೋಟಿ ಜನ ಅಂತರ್ಜಾಲವನ್ನು ಬಳಸುತ್ತಿದ್ದಾರೆ. ನಗರ ಪ್ರದೇಶದ 29.4 ಕೋಟಿ ಮತ್ತು ಗ್ರಾಮೀಣ ಭಾಗದ 36.2 ಕೋಟಿ ಇದರಲ್ಲಿ ಸೇರಿದ್ದಾರೆ. ಬಹುಪಾಲು ಬಳಕೆದಾರರು ಸ್ಮಾರ್ಟ್‌ ಫೋನ್ ಮೂಲಕ ಲಭ್ಯವಿರುವ ಅಂತರ್ಜಾಲ ಸೇವೆಯ ಸದುಪಯೋಗ ಪಡೆಯುತ್ತಿದ್ದಾರೆ.

ಉಳಿದಂತೆ ಕಂಪ್ಯೂಟರ್ ಹಾಗೂ ಟ್ಯಾಬ್ ಮೂಲಕ ಈ ಸೇವೆಯನ್ನು ಬಳಸುತ್ತಿದ್ದಾರೆ. ಅಂತರ್ಜಾಲ ಸಂಪರ್ಕದ ಮೂಲಕ ಟಿವಿ, ಓಟಿಟಿ ಹಾಗೂ ಬಾನುಲಿ ಕೇಂದ್ರಗಳ ಸೇವೆಗಳನ್ನು ಉಪಯೋಗಿಸಲು ಈಗ ಸಾಧ್ಯವಾಗಿದೆ.

ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ದೇಶದ ನೂತನ ಆರ್ಥಿಕ ನೀತಿ ವೇಗವರ್ಧಕವಾಗಿ ಕೆಲಸ ಮಾಡಿದೆ. ಅತಿಹೆಚ್ಚು ಯುವಜನ ಸಂಖ್ಯೆ ಹೊಂದಿರುವ ಭಾರತ, ವಿಶ್ವದ ಬೃಹತ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳ ವಿಶ್ಲೇಷಣೆ ಅಗತ್ಯವಾಗಿದೆ. ವಿಶೇಷವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಸಮಕಾಲೀನ ಮಾಧ್ಯಮಗಳ ವಿಕಾಸ ಹಾಗೂ ವೃದ್ಧಿಯ ಆಶಯಗಳ ದಾಖಲೆ ಅಪೇಕ್ಷಣೀಯ.

ನನ್ನ ಪತ್ರಿಕೋದ್ಯಮ ಕಲಿಕೆ 1970ರಲ್ಲಿ ಆರಂಭ. ಮೈಸೂರಿನ ಮಹಾರಾಜಾ ಕಾಲೇಜಿನ ಬಿ.ಎ. ಪತ್ರಿಕೋದ್ಯಮ ತರಗತಿಗಳಲ್ಲಿ ಪತ್ರಿಕೆಗಳ ಇತಿಹಾಸ ಮತ್ತು ಪತ್ರಿಕೋದ್ಯಮದ ವಿವಿಧ ಆಯಾಮಗಳ ಉಪಕ್ರಮಿಕೆ ಇಂದಿಗೂ ಮುಂದುವರೆದಿದೆ. ಆ ಕಲಿಕೆಯ ಮೊದಲ ಗುರು ಡಾ. ನಾಡಿಗ ಕೃಷ್ಣಮೂರ್ತಿ ಅವರು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅವರ ಮಾರ್ಗದರ್ಶನ ಮಹತ್ತರ ಪ್ರಭಾವ ಬೀರಿತು. ಮಾನಸಗಂಗೋತ್ರಿಯಲ್ಲಿ ಎಂ.ಎ. ಪದವಿಯ ಅಭ್ಯಾಸದ ಎರಡು ವರ್ಷಗಳ ಅವಧಿಯಲ್ಲಿ ನನ್ನ ಬವಣೆಗಳನ್ನು ಮನಗಂಡು ಕ್ಯಾಂಪಸ್ ಕ್ಯಾಂಟೀನ್‌ನಲ್ಲಿ ನನಗೆ ಉಚಿತ ಊಟಕ್ಕೆ ವ್ಯವಸ್ಥೆ ಮಾಡಿದ್ದ ಅವರ ಮಹದುಪಕಾರವನ್ನು ನಾನು ಸದಾ ಸ್ಮರಿಸುವೆ. ಮೊದಲ ದರ್ಜೆ ಮತ್ತು ಮೊದಲ ರ್ಯಾಂಕ್ ಪಡೆದು ನಾನು ಎಂ.ಎ. ಪಾಸು ಮಾಡಿದೆ. ಅವರ ಜನ್ಮಶತಮಾನೋತ್ಸವ ಅಂಗವಾಗಿ ಬರೆದ ಲೇಖನದಿಂದ ಈ ಹೊತ್ತಿಗೆಯ ಪಯಣ ಆರಂಭ.

ಈ ಸಂಗ್ರಹದಲ್ಲಿರುವ ಬಹುತೇಕ ಲೇಖನಗಳು ಪತ್ರಿಕೆಗಳನ್ನು ಕುರಿತವುಗಳಾಗಿವೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳು, ಬದಲಾಗುತ್ತಿರುವ ಪತ್ರಿಕೋದ್ಯಮದ ಆಯಾಮಗಳ ಮೇಲೆ ಬೆಳಕು ಬೀರುತ್ತವೆ. ಡಿಜಿಟಲ್ ತಂತ್ರಜ್ಞಾನದ ಅಗಾಧ ಪ್ರಭಾವಗಳಿಂದಾಗಿ ಪತ್ರಿಕೆಗಳು ಹೊಸ ಸವಾಲುಗಳನ್ನು ಎದುರಿಸುತ್ತಿವೆ. ಪತ್ರಿಕೆಗಳ ಪ್ರಸಾರ ಇಳಿಮುಖವಾಗುತ್ತಿದೆ. ಜಾಹಿರಾತು ಆದಾಯ ಕ್ಷೀಣಿಸುತ್ತಿದೆ. ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ.

ಈ ಎಲ್ಲ ಮಾರ್ಪಾಡುಗಳ ನಡುವೆಯೂ ನಮ್ಮ ದೇಶದ ಪತ್ರಿಕೆಗಳು ಎದೆಗುಂದದೆ ಮುನ್ನುಗ್ಗಿವೆ. ಆದರೆ ದಿನದ 24 ಘಂಟೆಯೂ ಮಾಹಿತಿ ನೀಡುವ ಮೊಬೈಲ್ ಮತ್ತು ಟಿವಿ ವಾಹಿನಿಗಳು ಓದುಗರ ಮೇಲೆ ಎಷ್ಟರಮಟ್ಟಿಗೆ ಪತ್ರಿಕೆಗಳ ಮೇಲಿನ ಅವಲಂಬನೆಯನ್ನು ದೂರ ಮಾಡಬಲ್ಲವು ಎಂಬುದು ಕೌತುಕದ ಸಂಗತಿ. ಪ್ರಸಕ್ತ ಪತ್ರಿಕಾ ಓದುಗರ ಆಸಕ್ತಿಗಳನ್ನು ಗಮನದಲ್ಲಿರಿಸಿ ಯುವಪೀಳಿಗೆಯನ್ನು ಪತ್ರಿಕೆಗಳತ್ತ ಸೆಳೆಯುವುದು, ಪತ್ರಿಕಾ ಪ್ರಕಾಶಕರಿಗೆ ಬಹುದೊಡ್ಡ ಸವಾಲು. ಆನ್‌ಲೈನ್ ಪತ್ರಿಕಾ ಓದುಗರಿಂದ ಆದಾಯ ನಿರೀಕ್ಷೆ ಮತ್ತು ಜಾಹಿರಾತು ಗಳಿಕೆ ಕೂಡ ಮಹತ್ವದ ಅಂಶಗಳಾಗಿವೆ.

ಮುಂದುವರಿದ ದೇಶಗಳಲ್ಲಿ ಪತ್ರಿಕೆಗಳ ಸ್ಥಿತಿ ಗಂಭೀರವಾಗಿದೆ. ಅನೇಕ ಬೃಹತ್ ನಗರಗಳಲ್ಲಿ ಕೇವಲ ಒಂದು ಇಲ್ಲವೇ ಎರಡು ಪತ್ರಿಕೆಗಳು ಮಾತ್ರ ಹೊರಬರುತ್ತಿವೆ. ಕೆಲವು ಪತ್ರಿಕೆಗಳು ವಾರದಲ್ಲಿ ಎರಡು ಇಲ್ಲವೇ ಮೂರು ಸಲ ಮಾತ್ರ ಪ್ರಕಟವಾಗುತ್ತಿವೆ. ಉಳಿದಂತೆ ವೆಬ್ ಜಾಲತಾಣದಲ್ಲಿ ಸುದ್ದಿಯನ್ನು ಓದಿಕೊಳ್ಳಿ ಎಂದು ಓದುಗರಲ್ಲಿ ಮನವಿ ಮಾಡುತ್ತಿವೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಸಮುದಾಯ ಪತ್ರಿಕೆಗಳು ಕಣ್ಮರೆಯಾಗುತ್ತಿವೆ. ಸ್ಥಳೀಯ ಮಟ್ಟದಲ್ಲಿ 'ಸುದ್ದಿ ಮರುಭೂಮಿ' ಸೃಷ್ಟಿಯಾಗುತ್ತಿದೆ. ಹಲವಾರು ಸ್ವಯಂ ಸೇವಾಸಂಸ್ಥೆಗಳು ಮತ್ತು ದಾನಿಗಳು ಸಮುದಾಯ ಪತ್ರಿಕೆಗಳ ನೆರವಿಗೆ ಧಾವಿಸಿದ್ದಾರೆ. ಈ ಪ್ರಯತ್ನಗಳು ಪತ್ರಿಕೆಗಳ ಮಹತ್ವವನ್ನು ಮತ್ತೆಮತ್ತೆ ಸಾಬೀತುಪಡಿಸುತ್ತಿವೆ. ಈ ವಿಷಯಕ್ಕೆ ಸಂಬಂಧಿಸಿದ ಹಲವು ಲೇಖನಗಳು ಈ ಕೃತಿಯಲ್ಲಿವೆ. ಭವಿಷ್ಯದಲ್ಲಿ ಪತ್ರಿಕೋದ್ಯಮದ ಸ್ಥಿತಿ ಹೇಗಿರುತ್ತದೆ ಎಂಬುದರ ಮುನ್ನೋಟ ನೀಡುತ್ತವೆ. ಡಿಜಿಟಲ್ ತಂತ್ರಜ್ಞಾನದ ವ್ಯಾಪಕತೆಯಿಂದ ಬದಲಾಗುತ್ತಿರುವ ನೂತನ ಪ್ರಸಾರ ವ್ಯವಸ್ಥೆಗಳಾದ; ಓಟಿಟಿ, ಪಾಡ್ ಕಾಸ್ಟಿಂಗ್, ಆನ್‌ಲೈನ್ ಟಿವಿ ಮತ್ತು ಬಾನುಲಿ ಪ್ರಸಾರ ಕುರಿತ ಲೇಖನಗಳು ಈ ಹೊತ್ತಿಗೆಯಲ್ಲಿವೆ. ಸ್ಮಾರ್ಟ್‌ ಫೋನ್ ನೆರವಿನಿಂದ ಈ ಎಲ್ಲ ಪ್ರಸಾರದ ಲಾಭಗಳನ್ನು ಜನತೆ ಪಡೆಯಬಹುದಾಗಿದೆ. ಅಂತರ್ಜಾಲ, ಮುಕ್ತ ಜ್ಞಾನ ಮತ್ತು ಮನರಂಜನೆಗೆ ಹೆಬ್ಬಾಗಿಲನ್ನೇ ತೆರೆದಿದೆ. ಈ ಸಂಚಲನಗಳು ಮಾಧ್ಯಮಗಳ ಸ್ವರೂಪಗಳನ್ನೇ ಬದಲಿಸುತ್ತಿವೆ. ಮುಕ್ತ ಅಭಿವ್ಯಕ್ತಿ ಇಂದು ಮುಗಿಲು ಮುಟ್ಟಿದೆ. ಫೇಸ್ಟುಕ್, ಯುಟ್ಯೂಬ್, ಟ್ವಿಟರ್ ಮುಂತಾದ ಜಾಲತಾಣಗಳ ಮೂಲಕ ತಮ್ಮ ನಿಲುವುಗಳನ್ನು ಬಹಿರಂಗಪಡಿಸುವ ಪ್ರವೃತ್ತಿ ಗಟ್ಟಿಗೊಳ್ಳುತ್ತಿದೆ.

ಯಾವುದೇ ಮಾಧ್ಯಮದ ಸ್ವರೂಪ, ಉದ್ದೇಶಗಳು ಮತ್ತು ಕಾರ್ಯನಿರ್ವಹಣೆ ಸದಾ ಬದಲಾಗುತ್ತಿರುತ್ತವೆ. ಯಾವುದೂ ಸ್ಥಿರವಲ್ಲ. ಈ ಹೊತ್ತಿಗೆಯಲ್ಲಿರುವ ಲೇಖನಗಳು ಈ ಬದಲಾವಣೆಗಳಿಗೆ ಹಿಡಿದ ಕನ್ನಡಿ ಎಂದು ನಾನು ಭಾವಿಸುತ್ತೇನೆ. ಇಲ್ಲಿನ ಲೇಖನಗಳು ಬಹುಪಾಲು 'ಸಮಾಜಮುಖಿ' ಮಾಸಿಕ. 'ಭೂಮಾತು' ಪಾಕ್ಷಿಕ ಹಾಗೂ 'ಪ್ರಜಾವಾಣಿ' ಮತ್ತು 'ವಿಶ್ವವಾಣಿ' ದೈನಿಕಗಳಲ್ಲಿ ಪ್ರಕಟವಾದವುಗಳು. ಈ ಪತ್ರಿಕೆಗಳ ಸಂಪಾದಕರಾದ ಚಂದ್ರಕಾಂತ್ ವಡ್ಡು, ಸಾಯಿರಾಂ ಪ್ರಸಾದ್, ರವೀಂದ್ರ ಭಟ್ ಮತ್ತು ವಿಶ್ವೇಶ್ವರ ಭಟ್ ಅವರುಗಳಿಗೆ ನಾನು ಕೃತಜ್ಞ, ಪತ್ರಿಕೋದ್ಯಮ ಕಲಿಕೆಯ ಐದು ವರ್ಷಗಳ ಅವಧಿಯಲ್ಲಿ ಮಾರ್ಗದರ್ಶನ ಮಾಡಿದ ಗುರುವೃಂದವನ್ನು ನೆನೆಸಿಕೊಳ್ಳುವುದು ನನ್ನ ಧರ್ಮ. ಡಾ. ನಾಡಿಗ ಕೃಷ್ಣಮೂರ್ತಿ, ಶ್ರೀ. ಸಯ್ಯದ್ ಇಟ್ಬಾಲ್ ಖಾದ್ರಿ, ಶ್ರೀ. ಶ್ರೀಕರ್ ಎಲ್. ಭಂಡಾರ್ಕರ್, ಡಾ.ಎಚ್.ಎಸ್. ಈಶ್ವರ, ಡಾ.ಕೆ.ವಿ. ನಾಗರಾಜ್ ಮತ್ತು ಪ್ರೊ. ಅನಂತಕೃಷ್ಣ ಅವರೆಲ್ಲರ ವಿದ್ವತ್ ಪೂರ್ಣ ಉಪನ್ಯಾಸಗಳು ಮತ್ತು ಪ್ರಾಯೋಗಿಕ ತರಬೇತಿ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ. ಅವರೆಲ್ಲರಿಗೂ ನಾನು ನನ್ನ ತಂದೆ ತಾಯಂದಿರಾದ ಎ.ಎನ್. ಸುಬ್ಬಣ್ಣ ಮತ್ತು ನಾಗಮ್ಮ ಅವರುಗಳನ್ನು ಈ ಸಂದರ್ಭದಲ್ಲಿ ನೆನೆಸುತ್ತೇನೆ. ಕ್ರಿಯಾಶೀಲ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುವ ಪತ್ನಿ ಶ್ರೀಮತಿ ಕೆ.ವಿ. ಲತಾ, ಮಕ್ಕಳಾದ ಬಿ. ಶಿಲ್ಪಾ, ಬಿ. ಸಂತೋಷ್, ಸೊಸೆ ವಿನಯಾ ಮತ್ತು ಅಳಿಯಂದರಾದ ವಿ. ತೇಜೋಕುಮಾ‌ರ್, ಮೊಮ್ಮಗ ಅಧೀಕ್ಷಿತ್ ಅವರೆಲ್ಲರ ಉತ್ತೇಜನ ಈ ಬರವಣಿಗೆಗೆ ಸ್ಫೂರ್ತಿ.

ಈ ಲೇಖನ ಸಂಗ್ರಹಗಳನ್ನು ಪ್ರಕಟಿಸುವಲ್ಲಿ ನೆಚ್ಚಿನ ವಿದ್ಯಾರ್ಥಿ ಹಾಗೂ ಸ್ನೇಹಿತ ಡಾ. ಓಂಕಾರ ಕಾಕಡೆ ಪ್ರಮುಖ ಪಾತ್ರವಹಿಸಿದ್ದಾರೆ. ಹಲವಾರು ಸಲ ಲೇಖನಗಳನ್ನು ಓದಿ, ಅಲ್ಲಿನ ಓರೆಕೋರೆಗಳನ್ನು ತಿದ್ದಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ಮುಖ್ಯಸ್ಥರಾಗಿ, ಸಕ್ರಿಯ ಶಿಕ್ಷಕರಾಗಿ, ಸಂಶೋಧಕರಾಗಿ ಇತರರಿಗೆ ಮಾದರಿಯಾಗಿದ್ದಾರೆ.

ಹಿರಿಯ ಸಂವಹನ ಶಿಕ್ಷಕರು, ಗುರುಗಳು ಮತ್ತು ಹಿತೈಷಿಗಳಾದ ಡಾ.ಎಚ್. ಎಸ್. ಈಶ್ವರ ಅವರು ಈ ಲೇಖನಗಳ ಸಂಗ್ರಹಕ್ಕೆ ಮುನ್ನುಡಿ ಬರೆದು, ಈ ಕೃತಿಗೆ ಮೆರುಗನ್ನು ನೀಡಿದ್ದಾರೆ. ಅವರ ಬರವಣಿಗೆ ಸದಾ ಸಮಚಿತ್ತದಿಂದ ಕೂಡಿರುತ್ತದೆ. ಅವರಿಗೆ ನಾನು ಆಭಾರಿ.

- ಡಾ. ಎ.ಎಸ್. ಬಾಲಸುಬ್ರಹ್ಮಣ್ಯ

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...

ನೆಲದಿಂದ ಮುಗಿಲಿಗೇರಿದ ಒಂದು ವೃತ್ತಿ ಪಯಣ, ಪತ್ರಿಕೆಯ ಪಯಣ..

29-09-2024 ಬೆಂಗಳೂರು

"ನಾವೆಲ್ಲ ಮನಸಿನಲ್ಲಿ ಅಂದುಕೊಳ್ಳುತ್ತಿದ್ದ ಒಂದು ಅಭಿಪ್ರಾಯಕ್ಕೆ ಲೇಖಕರು ಇಲ್ಲಿ ಅಧಿಕೃತ ಮುದ್ರೆ ಒತ್ತಿದ್ದಾರೆ. ...