“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನೆ; ಹೀಗೂ ಬರೆಯಬಹುದಾ ಎಂದು ಕಣ್ಣರಳಿಸಿಕೊಂಡಿದ್ದೇನೆ; ಬರೆದರೆ ಹೀಗೆ ಬರೆಯಬೇಕು ಎಂದು ಹೆಮ್ಮೆಗೊಂಡಿದ್ದೇನೆ,” ಎನ್ನುತ್ತಾರೆ ಜಗದೀಶ ಶರ್ಮಾ ಸಂಪ ಅವರು ಸಹನಾ ವಿಜಯಕುಮಾರ್ ಅವರ “ಮಾಗಧ” ಕೃತಿ ಕುರಿತು ಬರೆದ ವಿಮರ್ಶೆ.
ಪ್ರತಿಯೊಂದು ವರ್ತಮಾನವೂ ತನ್ನ ಇತಿಹಾಸವನ್ನು ರಿ-ವಿಸಿಟ್ ಮಾಡಬೇಕಾಗುತ್ತದೆ. ಅದು ಮರಕ್ಕೆ ಬೇರಿನೊಡನೆಯ ಸಂಬಂಧದಂಥದ್ದು. ವರ್ತಮಾನವನ್ನು ಗಟ್ಟಿಗೊಳಿಸುವ ಮತ್ತು ಭವಿಷ್ಯತ್ತನ್ನು ಭದ್ರಗೊಳಿಸುವ ಉಪಾಯವೇ ಇತಿಹಾಸದ ಮರುಭೇಟಿ.
ಉದ್ದೇಶವಿದು ಈಡೇರುವುದು ಕಾಣಲು ಹೊರಟ ಇತಿಹಾಸದ ಸತ್ಯ ಅನಾವರಣಗೊಂಡಾಗ. ಭಾರತೀಯ ಇತಿಹಾಸದ ಕ್ಷೇತ್ರದಲ್ಲಿ ಇದು ಬಹಳ ಪ್ರಧಾನ ಅಂಶ. ಯಾಕೆಂದರೆ ನಮ್ಮ ಇತಿಹಾಸವನ್ನು ಶತಮಾನಗಳಿಂದ ತಿರುಚಿಯೇ ಹೇಳಲಾಗುತ್ತಿದೆ.
ಸಹನಾ ವಿಜಯಕುಮಾರ್ ಅವರ ಹೊಸ ಕಾದಂಬರಿ ‘ಮಾಗಧ’ ಓದಿದಾಗ ನನ್ನ ಇತಿಹಾಸದ ಮರುಭೇಟಿ ಸಾರ್ಥಕವೆನಿಸಿತು. ಹಾಗಾಗಿ ಮೇಲಿನ ಮಾತುಗಳು.
‘ಮಾಗಧ’ ಬೃಹತ್ ಕಾದಂಬರಿ. ಇದು ನಮಗೆಲ್ಲ ಪ್ರಧಾನವಾಗಿ ಓದಿಸಿದ ದೇವಾಂನಾಪ್ರಿಯ ಅಶೋಕ ಚಕ್ರವರ್ತಿಯನ್ನು ಕೇಂದ್ರೀಕರಿಸಿಗೊಂಡ ಕಾದಂಬರಿ. ಹಾಗೆಂದು ಇದನ್ನು ಅಶೋಕನ ಚರಿತ್ರೆ ಎಂದಷ್ಟೇ ಭಾವಿಸುವಂತಿಲ್ಲ. ಇದು ಆ ಕಾಲಘಟ್ಟವನ್ನು ಸಮಗ್ರವಾಗಿ ನಮ್ಮೆದುರು ತೆರೆದಿಡುತ್ತದೆ. ರಾಜರ ಬದುಕು ಮತ್ತು ಸಾಮಾನ್ಯರ ಬದುಕು ಎರಡೂ ಇಲ್ಲಿ ನಿರೂಪಿತವಾಗಿದೆ. ಮತಗಳ ಸಿದ್ಧಾಂತ, ಆಚಾರ, ಮನೋಭಾವ, ಬೆಳೆಸುವ ವಿಧಾನ ಇವೆಲ್ಲವೂ ಇಲ್ಲಿವೆ. ಬಹಳ ಮುಖ್ಯವಾಗಿ ಭಾರತೀಯ ಅರ್ಥಶಾಸ್ತ್ರದ ಎಂದರೆ ರಾಜನೀತಿಯ ನಿದರ್ಶನಾತ್ಮಕ ವಿವರಣೆ ಇಲ್ಲಿದೆ. ಇಂದಿನ ಭಾರತ, ಶ್ರೀಲಂಕಾ, ಬಾಂಗ್ಲಾ, ಪಾಕಿಸ್ತಾನ, ಆಫ್ಘನಿಸ್ತಾನ, ಇರಾನ್ ಮೊದಲಾದ ದೇಶಗಳ ವ್ಯಾಪ್ತಿಯನ್ನು ಇದು ತಲುಪಿದೆ. ಜನ-ಜನಾಂಗ, ತಂತ್ರ-ಕುತಂತ್ರ, ಮತ-ಧರ್ಮ, ನೀತಿ-ಅನೀತಿ, ಆಚಾರ-ಅನಾಚಾರ, ಭಾವ-ಬುದ್ಧಿ, ಬದುಕು-ಸಾವು, ಸಾಮಾನ್ಯ-ಅಸಾಮಾನ್ಯ, ಭೇದ-ಐಕ್ಯ ಹೀಗೆ ಅಸಂಖ್ಯ ವಿಚಾರಗಳನ್ನು ಇದು ಸ್ಪರ್ಶಿಸಿದೆ. ಏಳುನೂರಾ ಎಪ್ಪತ್ತೆರಡು ಪುಟಗಳ ಈ ಬೃಹತ್ ಕಾದಂಬರಿಯನ್ನು ಓದಿ ಮುಗಿಸಿದ ಮೇಲೂ ಇನ್ನಷ್ಟು ಬೇಕಿತ್ತು ಎನ್ನಿಸುತ್ತದೆ. ವಸ್ತು ಮತ್ತು ಹೆಣಿಗೆಯ ಸೊಗಸು ಅದು.
‘ಮಾಗಧ’ ಕಾದಂಬರಿ ಈ ಕಾಲಘಟ್ಟದ ದೃಷ್ಟಿಯಿಂದ ಅತ್ಯಂತ ಮಹತ್ತ್ವದ್ದು. ಅಪಾರ್ಥ ಮತ್ತು ಅನ್ಯಾರ್ಥಗಳ ಬಲೆಯಲ್ಲಿ ಭಾರತೀಯನನ್ನು ಸಿಲುಕಿಸಿ ಸ್ವಾರ್ಥ ಸಾಧನೆ ನಡೆಸುತ್ತಿರುವವರ ನೈಜತೆಯನ್ನು ಒರೆಗಲ್ಲಿಗೆ ಹಚ್ಚುವ ಕಾರ್ಯವನ್ನು ಇದು ಮಾಡಿದೆ. ಇತಿಹಾಸದ ಘಟ್ಟಗಳ ಮತ್ತು ವ್ಯಕ್ತಿಗಳ ಕುರಿತಾದ ಸಲ್ಲದ ಅಂಶಗಳನ್ನು ಇದು ಸಾಧಾರವಾಗಿ ನಿರಾಕರಿಸುತ್ತದೆ. ಸುದೀರ್ಘ ಕಾಲದ ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳ ಫಲಿತವಾದ ಕಾದಂಬರಿ ನೈಜ ಇತಿಹಾಸದ ಪುನರ್ಲೇಖನವೇ ಆಗಿದೆ.
ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನೆ; ಹೀಗೂ ಬರೆಯಬಹುದಾ ಎಂದು ಕಣ್ಣರಳಿಸಿಕೊಂಡಿದ್ದೇನೆ; ಬರೆದರೆ ಹೀಗೆ ಬರೆಯಬೇಕು ಎಂದು ಹೆಮ್ಮೆಗೊಂಡಿದ್ದೇನೆ.
‘ಕಾದಂಬರಿಯ ಕಟ್ಟುವಿಕೆ ಮಹಾಭಾರತವನ್ನು ನೆನಪಿಸಿತು’ ಎಂದು ಹೇಳಿದರೆ ಹೇಳಬೇಕಾದ್ದನ್ನು ಹೇಳಿದೆ ಎನ್ನಿಸುತ್ತದೆ ನನಗೆ.
- ಜಗದೀಶ ಶರ್ಮಾ ಸಂಪ
“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನ...
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...
©2024 Book Brahma Private Limited.