Date: 01-10-2022
Location: ಬೆಂಗಳೂರು
ಕನ್ನಡದೊಳಗೆ ಹಲವು ದ್ವನಿಗಳು ಬಿನ್ನವಿಬಿನ್ನವಾಗಿ ಬೇರೆಬೇರೆ ಕಡೆ ಬಳಕೆಯಲ್ಲಿವೆ. ಆದರೆ, ವಿಚಿತ್ರವೆಂದರೆ ಕನ್ನಡದ ಈ ದ್ವನಿಗಳ ಬಗೆಗೆ, ಇವುಗಳ ವಿನ್ಯಾಸ, ಬಳಕೆ ಮೊದಲಾದವುಗಳ ಬಗೆಗೆ ಅದ್ಯಯನಗಳು ಇಲ್ಲ, ಅವಲೋಕನೆಯೂ ಇಲ್ಲ. ಕನ್ನಡ ದ್ವನಿಗಳ ಮೇಲೆ ಒಂದು ಅತ್ಯಂತ ವಿಸ್ತ್ರುತವಾದ ಅದ್ಯಯನ ಬೇಕು ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಬಳಕೆ ಕನ್ನಡದ ಧ್ವನಿವಿಶಿಷ್ಟತೆ ಕುರಿತು ಬರೆದಿದ್ದಾರೆ.
ಕನ್ನಡ ಬಹುವ್ಯಾಪಕವಾದ ಪರಿಸರದಲ್ಲಿ ಬಳಕೆಯಲ್ಲಿದೆ, ಹಾಗೆಯೆ ಬಹುಕಾಲದಿಂದ ಕನ್ನಡ ನಿರಂತರ ಬಳಕೆಯಲ್ಲಿದೆ. ಕನ್ನಡ ಬಳಕೆಯಲ್ಲಿರುವ ಪ್ರದೇಶವು ಪ್ರಾಕ್ರುತಿಕವಾಗಿ ಬಿನ್ನಬಗೆಯದಾಗಿದೆ. ಒಂದು ಬಾಶೆ ರೂಪುಗೊಳ್ಳುವುದಕ್ಕೆ, ನಿರ‍್ದಿಶ್ಟವಾಗಿ ಬೆಳೆಯುವುದಕ್ಕೆ ಇವು ಒಂದು ಕಾರಣವಾಗಿರುತ್ತವೆ. ಬೆಟ್ಟಗುಡ್ಡಗಳು, ಹೊಳೆಹಳ್ಳಗಳು, ಬಯಲುಸೀಮೆ, ನೆಲದ ಪಲವತ್ತತೆ ಈ ಮೊದಲಾದ ಅಂಶಗಳು ಬಾಶೆಯ ಬೆಳವಣಿಗೆಗೆ ಪೂರಕ ಕಾರಣವಾಗಿರುತ್ತವೆ. ಈ ಪ್ರದೇಶವು ಇತಿಹಾಸದ ಉದ್ದಕ್ಕೂ ಬಿನ್ನ ಮತ್ತು ವಯಿವಿದ್ಯಮಯವಾದ ಬೆಳವಣಿಗೆಗಳನ್ನು ಕಂಡಿವೆ. ಅದು, ರಾಜಕೀಯ, ಸಾಮಾಜಿಕ, ಆರ‍್ತಿಕ ಹೀಗೆ ವಿಬಿನ್ನ ಆಯಾಮಗಳಲ್ಲಿಯೂ ಪ್ರಾದೇಶಿಕ ಬಿನ್ನತೆಯು ಕಂಡುಬರುತ್ತದೆ. ಈ ಬಿನ್ನತೆ ಕೂಡ ಬಾಶೆಯೊಂದರ ಬೆಳವಣಿಗೆಗೆ, ಅದರೊಳಗಿನ ಬಿನ್ನತೆಗೆ ಬಹುಮುಕ್ಯವಾಗಿ ಕಾರಣವಾಗಿರುತ್ತವೆ. ಇತಿಹಾಸದ ಉದ್ದಕ್ಕೂ ಈ ಬಿನ್ನ ಪ್ರದೇಶಗಳಲ್ಲಿ ವಿವಿದ ವಲಯಗಳು ಬೆಳೆದಿವೆ. ಈ ವಲಯಗಳು
ಬಾಶೆಯ ನಿರ‍್ದಿಶ್ಟ ಬೆಳವಣಿಗೆಗೆ ಕಾರಣವಾಗಿರುತ್ತವೆ. ಇದರೊಟ್ಟಿಗೆ ಕರ‍್ನಾಟಕದಲ್ಲಿನ ಸಾಮಾಜಿಕ ರಚನೆಯೂ ಬಾಶೆಯ ವಿಬಿನ್ನ ಬೆಳವಣಿಗೆಗೆ ಕಾರಣವಾಗಿರುತ್ತದೆ. ಅಂದರೆ ಮುಕ್ಯವಾಗಿ ಜಾತಿಯಂತ ಹಲವು ರಚನೆಗಳು. ಈ ಎಲ್ಲ ಕಾರಣಗಳಿಂದಾಗಿ ಕನ್ನಡ ಬಾಶೆಯು ಅದು ಬಳಕೆಯಲ್ಲಿರುವ ಎಲ್ಲ ಪರಿಸರಗಳಲ್ಲಿ ಹಲವಾರು ಬಿನ್ನತೆಗಳನ್ನು ಬೆಳೆಸಿಕೊಂಡಿದೆ. ದ್ವನಿಗೆ ಸಂಬಂದಿಸಿದ ಕೆಲವು ಬಿನ್ನತೆಗಳನ್ನು ಇವತ್ತಿನ ಬರವಣಿಗೆಯಲ್ಲಿ ನೋಡಬಹುದು.
ಅ್ಯ, ಆ್ಯ, ಅ್ವ, ಆ್ವ ದ್ವನಿಗಳು ಬಹುತೇಕ ಹಲವು ಕನ್ನಡಗಳಲ್ಲಿ ಬಳಕೆಯಲ್ಲಿವೆ. ಕುತೂಹಲವೆಂದರೆ ಗಿಡ್ಡ ಸ್ವರ ಮತ್ತು ಉದ್ದ ಸ್ವರ ಹೀಗೆ ಜೋಡಿಯಲ್ಲಿ ಇವೆರಡು ಸಿಗುತ್ತವೆ. ಅ್ಯ, ಆ್ಯ ಇವುಗಳ ಬಗೆಗೆ ಬೇರೊಂದು ಬರವಣಿಗೆಯಲ್ಲಿ ನೋಡಿದೆ. ಅ್ವ ಮತ್ತು ಆ್ವ ದ್ವನಿಗಳೂ ಕೂಡ ಬಹುತೇಕ ಕನ್ನಡಗಳಲ್ಲಿ ಬಳಕೆಯಲ್ಲಿವೆ. ಇವುಗಳಿಗೆ ಲಿಪಿ ಇಲ್ಲದಿರುವುದರಿಂದ ಸಹಜವಾಗಿ ಗುರುತಿಸುವುದು ಆಗುವುದಿಲ್ಲ. ಈ ಕೆಳಗಿನ ಪದಜೋಡಿಗಳನ್ನು ಗಮನಿಸಿ, ಇಲ್ಲಿ ಅ್ವ ದ್ವನಿಯ ಉಚ್ಚರಣೆ ಅನುಬವಕ್ಕೆ ಬರುವ ಹಾಗೆ ಅದಕ್ಕೆ ಹತ್ತಿರದ ಅ ಮತ್ತು ಒ ದ್ವನಿ ಇರುವ ಪದಗಳನ್ನು ಜೋಡಿಪದಗಳನ್ನಾಗಿ ತೋರಿಸಿದೆ.
ಅ್ವ | ಅ | ಒ |
ಕ್ವಲ್ಲು ‘ಕಲ್ಲು’ | ಕಲ್ಲು | ಕೊಲ್ಲು |
ಕ್ವರಿ ‘ತುಣುಕು’ ; | ಕರಿ | ಕೊರಿ |
ಕ್ವಡು ‘ಕೊಡು’ ; | ಕಡು | ಕೊಡು |
ಆ್ವ | ಆ | ಓ |
ಕ್ವಾಣ ‘ಕೋಣ‘ | ಕಾಣು | ಕೋಣ |
ಕ್ವಾರಿ ‘ಗಣಿ’ ; | ಕಾರು | ಕೋರು |
ಕ್ವಾಟೆ ‘ಕೋಟೆ’ ; | ಕಾಟ | ಕೋಟೆ |
ಇದರೊಟ್ಟಿಗೆ ಎಲ್ಲ ಒಳನುಡಿಗಳಲ್ಲಿ’ಅ’ ದ್ವನಿ ಬಳಕೆಯಲ್ಲಿದೆ. ಅ-ಆ ಎಂಬ ದ್ವನಿಗಳ ಉಚ್ಚರಣೆಯಲ್ಲಿ ಕನ್ನಡದ ಒಳನುಡಿಗಳಲ್ಲಿ ಒಂದೆ ಕಾಲಮವುಲ್ಯ ಇಲ್ಲ. ಉತ್ತರ ಕರ‍್ನಾಟಕದಲ್ಲಿ ಇರುವ ಬಡಗನ್ನಡಗಳಲ್ಲಿ ‘ಆ’ ಉಚ್ಚರಣೆಗೆ ಬೇಕಾಗುವ ಕಾಲವನ್ನು ದಕ್ಶಿಣ ಕರ‍್ನಾಟಕಗಳಲ್ಲಿ ಇರುವ ತೆಂಗನ್ನಡಗಳಲ್ಲಿ ‘ಅ’ ಉಚ್ಚರಣೆಗೆ ತೆಗೆದುಕೊಳ್ಳುವಂತೆ ಅನಿಸುತ್ತದೆ. ಇವೆರಡರ ಜೊತೆಗೆ ‘ಅ’ ಉಚ್ಚರಣೆಗಿಂತ ಅರ‍್ದಕಾಲ ತೆಗೆದುಕೊಳ್ಳುವ ಇನ್ನೊಂದು ‘ಅ’ ಕೂಡ ಇದೆ. ಇದನ್ನು ಕೆಳಗೆ ಚುಕ್ಕಿಯೊಂದನ್ನು ಇಡುವುದರ ಮೂಲಕ ‘ಅ’ ಎಂದು ಗುರುತಿಸಬಹುದು. ಕೆಳಗಿನ ಪದಗಳನ್ನು
ಗಮನಿಸಿ,
ಅವ್ವ | ಅತ್ತಿ/ಅತ್ತೆ |
ಕಬ್ಬು | ಕತ್ತಿ/ಕತ್ತೆ |
ಇದರಲ್ಲಿ’;ಅವ್ವ’ ಪದದಲ್ಲಿ ಮೊದಲಿಗೆ ಬರುವ ‘ಅ’ ದ್ವನಿ ಮತ್ತು ‘ಅತ್ತಿ/ಅತ್ತೆ’ ಪದದಲ್ಲಿ ಮೊದಲು ಬರುವ ‘ಅ’ ದ್ವನಿ ಒಂದೆ ಆಗಿಲ್ಲ.’;ಅವ್ವ’ ಪದದಲ್ಲಿನ ‘ಅ’ ತೆಗೆದುಕೊಳ್ಳುವ ಕಾಲಕ್ಕಿಂತ ಕಡಿಮೆ ಕಾಲವನ್ನು ‘ಅತ್ತಿ/ಅತ್ತೆ’ ಪದದಲ್ಲಿನ ‘ಅ’ ದ್ವನಿ ತೆಗೆದುಕೊಳ್ಳುತ್ತದೆ. ಹಾಗೆಯೆ ‘ಕಬ್ಬು’ ಮತ್ತು ‘ಕತ್ತಿ/ಕತ್ತೆ’ ಪದಗಳಲ್ಲಿಯೂ ಇದು ಅನುಬವಕ್ಕೆ ಬರುತ್ತದೆ. ನಿದಾನವಾದ ಉಚ್ಚರಣೆಗೆ ಇದನ್ನು ಗಮನಿಸಲು ಸಾದ್ಯವಾಗುತ್ತದೆ.
ಕನ್ನಡದ ಬಹುತೇಕ ಒಳನುಡಿಗಳಲ್ಲಿ ಕಂಡುಬರುವ ಇನ್ನೊಂದು ದ್ವನಿ,’;ಉ’. ಸಾಮಾನ್ಯವಾಗಿ ‘ಉ’ ದ್ವನಿಯನ್ನು ತುಟಿಯನ್ನು ದುಂಡಗೆ ಮಾಡಿ ಉಚ್ಚರಿಸಲಾಗುತ್ತದೆ. ಆದರೆ, ಕನ್ನಡದಲ್ಲಿ ತುಟಿಯನ್ನು ದುಂಡಗೆ ಮಾಡದ ಇನ್ನೊಂದು ‘ಉ’ ದ್ವನಿಯೂ ಇದೆ. ಇದನ್ನು ಕೆಳಗೆ ಚುಕ್ಕಿ ಇಡುವ ಮೂಲಕ ಗುರುತಿಸಬಹುದು. ‘ಹೂ’;, ‘ಹುವ್ವ’;,’ ಉವ್ವ ಮೊದಲಾದ ಪದಗಳಲ್ಲಿ ’ಉ’ ದ್ವನಿ ಇದೆ. ಈ ದ್ವನಿಯ ಉಚ್ಚರಣೆ ತುಟಿ ದುಂಡಗೆ ಮಾಡಿ ಉಚ್ಚರಿಸಬೇಕು. ಆದರೆ, ಹೆಚ್ಚಿನ ಕನ್ನಡಗಳಲ್ಲಿ ತುಟಿಯನ್ನು ದುಂಡಾಗಿಸದೆ ಇದನ್ನು ಉಚ್ಚರಿಸಲಾಗುತ್ತದೆ.
ರಾಯಚೂರು ಕನ್ನಡದಾಗ ’ಹ್’ ದ್ವನಿ ಸಂಪೂರ‍್ಣವಾಗಿ ಉಚ್ಚಾರವಾಗುವುದಿಲ್ಲ, ತುಮಕೂರು ಮೊದಲಾದ ಕನ್ನಡಗಳಲ್ಲಿ ’ಹ್’ ಇಲ್ಲದಲ್ಲಿ ’;ಹ್’ ದ್ವನಿಯನ್ನು ಬಳಸುತ್ತಾರೆ. ಚಾಮರಾಜನಗರ ಕನ್ನಡದಲ್ಲಿ ’ಶ್’ ದ್ವನಿ ಇಲ್ಲ. ಕಲಬುರಗಿ ಮೊದಲಾದ ಕೆಲವು ಕನ್ನಡಗಳಲ್ಲಿ ’ಶ್’ ದ್ವನಿ ’ಸ್’ ದ್ವನಿಯೊಂದಿಗೆ ವ್ಯತ್ಯಯದಲ್ಲಿ ಬಳಕೆಯಲ್ಲಿದೆ. ಬಾಗಲಕೋಟೆ ಸುತ್ತಲಿನ ಕೆಲವು ಕನ್ನಡಗಳಲ್ಲಿ ’ನ್’ ದ್ವನಿಯೊಂದು ಇದೆ. ಇದು ’ನ್’ ಮತ್ತು ’ಣ್’ ಎರಡೂ ಅಲ್ಲದ ಇನ್ನೊಂದು ದ್ವನಿ. ಇದು ಕೋಲಾರ ಕನ್ನಡದಲ್ಲೂ ಇದೆ. ಕಾಸರಗೋಡು ಕನ್ನಡದಲ್ಲಿ ’ಞ್’ ದ್ವನಿ ಬಳಕೆಯಲ್ಲಿ ಇದೆ. ಈ ದ್ವನಿ ಹಳಗನ್ನಡದಲ್ಲಿ ಹೆಚ್ಚು ಸಹಜವಾಗಿ ಬಳಕೆಯಲ್ಲಿದ್ದಿತು. ಇದರೊಂದಿಗೆ ’ಙ್’ ದ್ವನಿ ಕೂಡ ಬಳಕೆಯಲ್ಲಿದ್ದಿತು.
ಬಡಗನ್ನಡಗಳಲ್ಲಿ ’ಚ್’ ಮತ್ತು ’ಜ್’ ದ್ವನಿಗಳು ’ಚ್’ ಮತ್ತು ’ಜ್’ ದ್ವನಿಗಳ ಜೊತೆಗೆ ಬಳಕೆಯಲ್ಲಿವೆ.
ದಾರವಾಡದಿಂದ ಬೀದರಿನವರೆಗಿನ ಕೆಲವು ಕನ್ನಡಗಳಲ್ಲಿ ’ಕ್’, ’ಚ್’, ’ಟ್’;,’ತ್’; ಮತ್ತು ’ಪ್’ ಈ ವರ‍್ಗೀಯಗಳಿಗೆ ಎರಡು ಉಪದ್ವನಿಗಳು ಇವೆ. ಅವುಗಳನ್ನು’;ಕ್’ ಮತ್ತು ’ಕ್’ ಎಂದು ಗುರುತಿಸಬಹುದು. ಈ ಕನ್ನಡಗಳಲ್ಲಿ ಕಂಡುಬರುವ ಈ ಇನ್ನೊಂದು ದ್ವನಿ ತುಸು ಹ್ ಕಾರದ ಗುಣವನ್ನು, ಇಲ್ಲವೆ ತುಸು ಹೆಚ್ಚಿನ ಉಸಿರನ್ನು ಪಡೆದುಕೊಂಡಿರುವಂತೆ ಇರುತ್ತದೆ. ತುಸು ಹೆಚ್ಚಿನ ಉಸಿರನ್ನು ತೆಗೆದುಕೊಂಡರೂ ಇದು ದೊಡ್ಡ ಉಸಿರಿನ ಅಂದರೆ ಮಹಾಪ್ರಾಣ ದ್ವನಿ ಅಲ್ಲ.
ಬಡಗನ್ನಡದ ಕೆಲವು ಕನ್ನಡಗಳಲ್ಲಿ’;ಫ್’ ದ್ವನಿಯೊಂದು ಬಳಕೆಯಲ್ಲಿದೆ. ಇದು ಮಹಾಪ್ರಾಣ ದ್ವನಿ ಅಲ್ಲ. ಬದಲಿಗೆ, ತುಟಿಗಳೆರಡನ್ನು ಎರಡೂ ಬದಿಯಲ್ಲಿ ಒತ್ತಿ ತುಟಿಯನ್ನು ದುಂಡಗೆ ಮಾಡಿ ಗಾಳಿಯನ್ನು ನಡುವೆ ಹಾದುಹೋಗಲು ಅನುವು ಮಾಡಿ ಉಚ್ಚರಿಸುವ ದ್ವನಿಯಾಗಿದೆ. ಇದನ್ನು ಇಂಗ್ಲೀಶಿನಿಂದ ಬಂದಿದೆ ಎಂದು ಕೆಲವರು ಹೇಳಿದ್ದಾರೆ.ಆದರೆ, ಅದರ ಬದಲಿಗೆ ’ಪ್’ ದ್ವನಿಯ ಎಂತದೊ ಪಲ್ಲಟದಲ್ಲಿ ಈ ದ್ವನಿ ಅತ್ಯಂತ ಸಹಜವಾಗಿ ಕಂಡುಬರುತ್ತದೆ. ಈ ದ್ವನಿಯ ಬಳಕೆ ಬಹುಶಾ ಹಲಕಾಲದಿಂದ ಹೀಗೆ ಆಗುತ್ತಿರುವಂತೆ ಇದೆ. ’ಪಟ್ಟಣ’>’;ಫಟ್ಟಣ’, ’ರೂಪಾಯಿ>ರಾಫಾಯಿ’
ಹೀಗೆ ದ್ವನಿ ಬದಲಾಗಿ ಬಳಕೆ ಆಗುತ್ತಿದೆ. ಬೆಂಗಳೂರಿನಿಂದ ಚೆನ್ನಯ್ ಕಡೆಗೆ ಹೋಗುವ ರೇಲಿನಲ್ಲಿ ’ಕಾಫಿ’ ಮಾರುವ ಕನ್ನಡದವರೂ ’ಕಾಪಿ’ ಮಾರುವ ತಮಿಳರೂ ಒಟ್ಟಿಗೆ ಸಿಗುತ್ತಾರೆ.
ಉರ‍್ದುವಿನಿಂದ ಬಂದು ಕಲಬುರಗಿ ಮೊದಲಾದ ಕನ್ನಡಗಳಲ್ಲಿ ಇದೆ ಎಂದು ಹೇಳಲಾಗುವ ’ಖ್’ ದ್ವನಿಯೊಂದನ್ನು ಇಲ್ಲಿ ಹೇಳಬಹುದು. ಇದು ಮಹಾಪ್ರಾಣ ’ಖ್’ ಅಲ್ಲ, ಗಂಟಲಿನಲ್ಲಿ ಹುಟ್ಟುವ ಇದನ್ನು ಉಚ್ಚರಿಸುವಾಗ ಗಾಳಿಯನ್ನು ಪೂರ‍್ಣವಾಗಿ ನಿಲ್ಲಿಸುವುದಿಲ್ಲ. ಪರ‍್ಶಿಯನ್ ಪ್ರಬಾವದಿಂದ ಬಂದಿದೆ ಎಂದು ಹೇಳುವ ’ಸ್’ ದ್ವನಿಯೊಂದೂ ಹೆಚ್ಚೂಕಡಿಮೆ ಎಲ್ಲೆಡೆ ಇದೆ. ಆದರೆ, ಇಂಗ್ಲೀಶಿನ ಪ್ರಬಾವ ಹೆಚ್ಚಿರುವ ಕಡೆ ಹೆಚ್ಚು ಬಳಕೆಯಲ್ಲಿದೆ. ಇದನ್ನು ’ಡಸ.ನ್’ ಮೊದಲಾದ ಪದಗಳಲ್ಲಿ ಕೇಳಬಹುದು. ಈ ದ್ವನಿಗಳನ್ನು ಸಾಮಾಜಿಕ ಒಳನುಡಿಗಳಲ್ಲಿ ಗುರುತಿಸಲು ಸಾದ್ಯ. ಖ್ ದ್ವನಿ
ಪರ‍್ಶಿಯನ್ ಹಿನ್ನೆಲೆಯ ಕೆಲವು ಮುಸಲ್ಮಾನರಲ್ಲಿ ಕಾಣಬಹುದು, ಸ್. ದ್ವನಿ ಮೇಲ್ವರ‍್ಗದ ಕೆಲ ಮಂದಿಯಲ್ಲಿ ಕಾಣಬಹುದು. ಕರಾವಳಿಯ ಹವ್ಯಕ ಮೊದಲಾದ ಕನ್ನಡಗಳಲ್ಲಿ ಹಳಗನ್ನಡದಲ್ಲಿ ಇದ್ದ’;ೞ್’ ದ್ವನಿ ಬಳಕೆಯಲ್ಲಿದೆ. ಮಂಡ್ಯ ಪರಿಸರದ ಪರಿಸರದ ಹೊಲೆ-ಮಾದಿಗರು ಸ್ ದ್ವನಿಯನ್ನು ಉಚ್ಚರಿಸಿದರೆ ಅದೆ ಪರಿಸರದ ಬ್ರಾಹ್ಮಣ, ಲಿಂಗಾಯತರು ಕೆಲ ಪದಗಳಲ್ಲಿನ ಆ ದ್ವನಿಯ ಜಾಗದಲ್ಲಿ ಶ್ ದ್ವನಿಯನ್ನು ಉಚ್ಚರಿಸುತ್ತಾರೆ. ಬಳ್ಳಾರಿಯ ಹೊಲೆಮಾದಿಗರು ಹ್ ದ್ವನಿಯನ್ನು ಉಚ್ಚರಿಸುವುದಿಲ್ಲವಾದರೆ ಅಲ್ಲಿನ ಬ್ರಾಹ್ಮಣರು ಆ ದ್ವನಿಯನ್ನು ಉಚ್ಚರಿಸುತ್ತಾರೆ. ಹೀಗೆ ಹಲವು ಸಾಮಾಜಿಕ ವ್ಯತ್ಯಾಸಗಳನ್ನೂ ಕಾಣಬಹುದು.
ಹೀಗೆ ಕನ್ನಡದೊಳಗೆ ಎಶ್ಟೆಲ್ಲ ವಯಿವಿದ್ಯ. ಇಲ್ಲಿ ಉಲ್ಲೇಕಿಸಿದವು ಹಾಗೆಯೆ ಇನ್ನೂ ಹಲವು ದ್ವನಿಗಳು
ಬಿನ್ನವಿಬಿನ್ನವಾಗಿ ಬೇರೆಬೇರೆ ಕಡೆ ಬಳಕೆಯಲ್ಲಿವೆ. ಆದರೆ, ವಿಚಿತ್ರವೆಂದರೆ ಕನ್ನಡದ ಈ ದ್ವನಿಗಳ ಬಗೆಗೆ, ಇವುಗಳ ವಿನ್ಯಾಸ, ಬಳಕೆ ಮೊದಲಾದವುಗಳ ಬಗೆಗೆ ಅದ್ಯಯನಗಳು ಇಲ್ಲ, ಅವಲೋಕನೆಯೂ ಇಲ್ಲ. ಕನ್ನಡ ದ್ವನಿಗಳ ಮೇಲೆ ಒಂದು ಅತ್ಯಂತ ವಿಸ್ತ್ರುತವಾದ ಅದ್ಯಯನ ಬೇಕು. ಇವೆಲ್ಲವೂ ಕನ್ನಡದ ವಿಶಿಶ್ಟ ಲಕ್ಶಣಗಳು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ನಾಲಿಗೆ ಮಡಿಚಿ ಉಚ್ಚರಿಸುವ ದ್ವನಿಗಳು
ಕನ್ನಡದ ವ್ಯಾಪಕ ಬಳಕೆಯ ದ್ವನಿಗಳು ಅ್ಯ-ಆ್ಯ
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.