“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನದಿಯೋ - ಕಡಲೋ ಅನ್ನುವಂತಹ ಡೆಲ್ಟಾ ರೀಜನಿನಲ್ಲೇ ನಿಂತು ಹರಿಯುತ್ತಲೂ ಭೋರ್ಗರೆಯುತ್ತಲೂ ಕಥೆ ಗೆಲ್ಲುತ್ತದೆ,” ಎನ್ನುತ್ತಾರೆ ಮುನವ್ವರ್ ಜೋಗಿಬೆಟ್ಟು ಅವರು ಜಯರಾಮಾಚಾರಿ ಅವರ “ಕಿಲಿಗ್” ಕೃತಿ ಕುರಿತು ಬರೆದ ವಿಮರ್ಶೆ.
"ನಿಮ್ದು ಆಯ್ತಾ- ನಮ್ದು ಸಿಕ್ತಾ" ಅಂತ ಸದಾ ಡುಬಾಕ್ ಮೆಸೇಜ್ ಗಳನ್ನೇ ಹಾಕುತ್ತಿದ್ದವರು ಯಾವ ಪೂರ್ವಾಪರಗಳಿಲ್ಲದೆ ಒಂದು ಕಾದಂಬರಿಯೇ ಬರೆದು ಬಿಟ್ಟದ್ದು ನನ್ನ ಅರಿವಿಗೆ ಬಂದಿರಲೇ ಇಲ್ಲ. ಓದುಗರಿಗೆ ಒತ್ತಡವಾಗದ ರೀತಿಯಲ್ಲಿ ಇಡೀ ಕಥೆಯನ್ನು ಸೂಕ್ಷ್ಮವಾಗಿ ಇಲ್ಲಿ ಹಣೆಯಲಾಗಿದೆ. ಇದು ಕಾದಂಬರಿ ಅನಿಸಿಕೊಳ್ಳುವುದಕ್ಕಿಂತ ಹೆಚ್ಚಾಗಿ ನೀಳ್ಗತೆ ಅನಿಸಿಕೊಳ್ಳಬಹುದು. ನಗರದ ಮನುಷ್ಯ ಜೀವನದ ಕಥೆಯನ್ನು ಸರಳ ಕಥಾ ಹಂದರದ ಮೇಲೆ ಚಿತ್ರ ಕಾವ್ಯದಂತೆ ಇಲ್ಲಿ ಕಥೆ ಕಟ್ಟಲಾಗಿದೆ. ಅವಿವಾಹಿತ- ವಿವಾಹಿತ ಓದುಗರಿಗೆ ಬೇರೆ ಬೇರೆ ಅನುಭವಗಳನ್ನು ಈ ಕಥೆ ಕೊಡಬಲ್ಲದು ಎಂಬುವುದನ್ನು ನಾನು ಬಲವಾಗಿ ನಂಬುತ್ತೇನೆ. ತಂದೆತನ ಅನ್ನುವುದು ಅನುಭವದಿಂದಲೇ ಬರಲು ಸಾಧ್ಯವಾಗುವುದರಿಂದ ಈ ರೀತಿ ಹೇಳುವುದು ಮುಖ್ಯವಾಗುತ್ತದೆ.
ವಿವಾಹದ ಮೊದಲು ಮತ್ತು ನಂತರ ಇದೇ ಕಥೆಯನ್ನು ಓದುಗನೊಬ್ಬ ಓದುವುದಾದರೆ ಅವನ ಕಣ್ಣಮುಂದೆ ಭಿನ್ನ ಭಾವಗಳು ರೂಪುಗೊಳ್ಳಬಹುದು.
ಇಲ್ಲಿ ಭಿನ್ನವಾದ ಕಥೆಯಿದೆ- ಜೀವಾನುನಭವವಿದೆ. ಕಣ್ಣ ಮುಂದೆಯೇ ನಡೆಯುವ ಘಟನೆ ಅನಿಸುವಷ್ಟು ಸಹಜತೆ ಇದೆ. ಪ್ರೇಮ- ಕಾಮಗಳ ನಡುವೆ ಸಣ್ಣ ಎಳೆ ಇದೆ. ಲಂಕೇಶರ "ಬಿರುಕು" ಕಾದಂಬರಿಯನ್ನೊಮ್ಮೆ ನೆನಪಿಸುತ್ತದೆ. ವಿಶೇಷವಾಗಿ ಬರೆದರೇ ಜನ ಓದುತ್ತಾರೆ ಎಂಬುವುದನ್ನು ಗಮನದಲ್ಲಿಟ್ಟುಕೊಂಡು ಕಥೆಗಾರ ವಿಶಿಷ್ಟವಾಗಿಯೇ ಇಲ್ಲಿ ಬರೆದಿದ್ದಾರೆ. ಎಲ್ಲಿ ಕಥೆ ತೂಕ ಕಳೆದುಕೊಳ್ಳುತ್ತದೋ ಅನಿಸುವಷ್ಟರಲ್ಲಿ ಫಿಲಾಸಫಿ ಮಾತನಾಡಿ ಕಥೆಯ ಅಯಾಮವನ್ನೊಮ್ಮೆ ಸರಿದೂಗಿ ಕಥೆಗಾರ ಕಥೆಯನ್ನು ಸಮರ್ಥಿಸಿಕೊಳ್ಳುತ್ತಾರೆ.
ಓದುಗ ಮತ್ತು ಕಥೆಗಾರನ ಸಂವಾದಂತೆ ಕಥೆ ಸಾಗುತ್ತದೆ. ಪಾತ್ರಗಳು ಕಣ್ಣ ಮುಂದೆ ಉಳಿಯುತ್ತದೆ. ಕಥೆ ಗಂಭೀರವಾಗುವ ಹೊತ್ತಿಗೆ ಹಾಸ್ಯಕ್ಕೆ ಹೊರಳಿಕೊಂಡು ಬ್ಯಾಲನ್ಸ್ ಕಾಪಾಡಿಕೊಳ್ಳುತ್ತದೆ. ಕನ್ನಡದ ಪ್ರಾಥಮಿಕ ಹಂತದ ಓದುಗನಿಗೂ ಕಥೆ ದಾಟುತ್ತದೆ. ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನದಿಯೋ - ಕಡಲೋ ಅನ್ನುವಂತಹ ಡೆಲ್ಟಾ ರೀಜನಿನಲ್ಲೇ ನಿಂತು ಹರಿಯುತ್ತಲೂ ಭೋರ್ಗರೆಯುತ್ತಲೂ ಕಥೆ ಗೆಲ್ಲುತ್ತದೆ.
- ಮುನವ್ವರ್ ಜೋಗಿಬೆಟ್ಟು
“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...
"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...
"“ಖಾಲಿ ಜೋಳಿಗೆಯ ಕನವರಿಕೆಗಳು“ ಯಲ್ಲಿ ಹುದುಗಿರುವ ಬಹುತೇಕ ಕವಿತೆಗಳು ಸ್ತ್ರೀ ಸಂವೇದನೆಯನ್ನು ಹೊಂದ...
©2024 Book Brahma Private Limited.