Date: 21-12-2024
Location: ಮಂಡ್ಯ
ಮಂಡ್ಯ: ಭಾರತ ಬಹು ಭಾಷಾ, ಬಹು ಸಂಸ್ಕ್ರತಿ, ಬಹು ಪದ್ಧತಿಗಳ ದೇಶ. ಇದನ್ನು ಉಳಿಸಿಕೊಂಡು ಹೋಗಬೇಕು. ಒಂದೊಂದು ಜನಾಂಗಕ್ಕೂ ಭಾಷೆಯಿದೆ, ಸೊಗಸಿದೆ, ಸೊಗಡಿದೆ, ಸತ್ವವಿದೆ. ಬಹುತ್ವದ ಸಂಸ್ಕೃತಿ ಮುಂದುವರೆಯಬೇಕು ಎಂದು ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರು ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಜಮಾತೆ ಕೆಂಪನಂಜಮ್ಮಣ್ಣಿ ಮತ್ತು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ಇಂಗ್ಲಿಷ್ ಕಲಿತರೆ ಮಾತ್ರ ಉದ್ಯೋಗ ಎಂಬ ಭ್ರಮೆ ಪೋಷಕರಲ್ಲಿದೆ. ಸರ್ಕಾರ ಅದನ್ನು ಹೋಗಲಾಡಿಸಬೇಕು. ದ್ವಿಭಾಷಾ ಸೂತ್ರ ಕ್ಷೇಮ, ತ್ರಿಭಾಷಾ ಹೇರುವ ಅಗತ್ಯ ಇಲ್ಲ ಎಂದರು.
ಬೇರೆ ಜಿಲ್ಲೆಗಳಲ್ಲಿ ನಿರ್ದೇಶನಾಲಯ ಕಚೇರಿಗಳು ಆಗಬೇಕು. ಅಕಾಡೆಮಿ, ಪ್ರಾಧಿಕಾರಗಳು ಇತರೆ ಜಿಲ್ಲೆಗಳಲ್ಲಿ ಇದ್ದರೆ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಸಮ್ಮೇಳನಾಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು.
12ನೇ ಶತಮಾನದಲ್ಲಿ ಸೃಷ್ಟಿಯಾದ ವಚನ ಸಾಹಿತ್ಯ ಅಂದಿನ ವ್ಯವಸ್ಥೆ ವಿರುದ್ಧದ ಪ್ರತಿಭಟನಾ ಸಾಹಿತ್ಯ. ವಚನ ಸಾಹಿತ್ಯವನ್ನು ವಿಶ್ವವಿದ್ಯಾಲಯಗಳು ಪ್ರಧಾನ ಅಧ್ಯಯನ ವಿಷಯವಾಗಿ ಅಳವಡಿಸಿಕೊಳ್ಳಬೇಕು. ವಚನ ಸಾಹಿತ್ಯ 20-30 ಅಂತಾರಾಷ್ಟ್ರೀಯ ಭಾಷೆಗಳಿಗೆ ಅನುವಾದ ಆಗಿದ್ದು, ವಚನ ಸಾಹಿತ್ಯದ ಪ್ರಸಾರ ವ್ಯಾಪಕವಾಗಬೇಕು. ಸಮಕಾಲೀನ ಸಮಸ್ಯೆಗಳಿಗೆ ವಚನದಲ್ಲಿ ಉತ್ತರವಿದೆ ಎಂದು ಹೇಳಿದರು.
ಜನಪದ ಸಂಸ್ಕೃತಿಯನ್ನು ಸಂರಕ್ಷಣೆ ಮಾಡಬೇಕು. ಜನಪದ ಕಲೆಗಳ ಪ್ರದರ್ಶನಕ್ಕೆ ಅವಕಾಶ ನೀಡಬೇಕು. ಜನಪದ ಕಲೆಗಳಿಗೆ ಮನ್ನಣೆ ಸಿಗಬೇಕು ಎಂದ ಅವರು, ಹಾವೇರಿಯ ಜಾನಪದ ವಿಶ್ವ ವಿದ್ಯಾಲಯ ಜಗತ್ತಿನ ಏಕಮಾತ್ರ ಜಾನಪದ ವಿಶ್ವವಿದ್ಯಾಲಯ. ಇದು ಪ್ರತಿಷ್ಠೆಯ ಸಂಸ್ಥೆ ಆಗಬೇಕು ಎಂದು ಹೇಳಿದರು.
ನನ್ನ ಆರೋಗ್ಯದ ಗುಟ್ಟಿನ ಬಗ್ಗೆ ಬಹಳಷ್ಟು ಜನರು ಕೇಳುತ್ತಾರೆ. ನನಗೆ ಸಾವಿನ ಬಗ್ಗೆ ಚಿಂತೆಯಿಲ್ಲ. ನಾನು 100 ವರ್ಷ ಬದುಕುತ್ತೇನೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದಾರೆ. 3 ರನ್ ಬಾರಿಸಿದರೆ ಅದು ನಿಜವಾಗುತ್ತದೆ ಎಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಗೊ.ರು.ಚನ್ನಬಸಪ್ಪ ನುಡಿದರು.
ಈ ವೇಳೆ ವಿವಿಧ ಕ್ಷೇತಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಬಸವರಾಜ್ ನೆಲ್ಲೀಸರ, ಮಾರುತಿ ಶಿಡ್ಲಾಪುರ, ಪ್ರೊ. ಟಿ.ವಿ.ಸುರೇಶ ಗುಪ್ತ, ಡಾ. ಅನಸೂಯಾ ಹೊಂಬಾಳೆ, ಶಂಕರ ಮಲ್ಲಪ್ಪ ಬೈಚಬಾಳ, ಶಾಂತಲಾ ಧರ್ಮರಾಜ್, ಡಾ. ಪಿ. ನಾಗರಾಜು, ಡಾ. ಕುರುವ ಬಸವರಾಜ್, ಪ್ರೊ. ಎಂ.ವೈ. ಶಿವರಾಂ, ಡಾ. ಸಂತೋಷ್ ಹಾನಗಲ್ ಅವರು ಭಾಗವಹಿಸಿದ್ದರು.
ಮಂಡ್ಯ: ಮಳೆ ತೇವವನ್ನು ಹೊತ್ತಿಟ್ಟ ದಾರಿ, ಕಾಲುಜಾರಿ ಬಿದ್ದ ಪುಟಗಳ ಕಥೆಗಳಂತಿದ್ದವು. ಜನರು ಗಲುಬೆ ಗದ್ದಲಗಳ ನಡುವೆ ಪುಸ...
ಮಂಡ್ಯ: ಹೆಣ್ಣಿಗೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬಲ ತುಂಬಿದ್ದು ಡಾ. ಬಿ.ಆರ್.ಅಂಬೇಡ್ಕರ್. ಸ್ತ್ರೀ ಚಳವಳಿ ಆರಂಭವಾಗಿದ್...
ಮಂಡ್ಯ: ಕಳೆದ ೧೫, ೨೦ ವರ್ಷಗಳಲ್ಲಿ ಪೃವರ್ತಮಾನಕ್ಕೆ ಬರುತ್ತಿರುವಂತಹ ಲೇಖಕರು ಲೇಖಕಿಯರನ್ನು ಹೊಸತಲೆಮಾರು ಎಂದು ನಾವು ಪರ...
©2024 Book Brahma Private Limited.