ಎರಡು ಬಾಶೆಗಳ ನಡುವೆ ನಂಟು ಹೇಗೆ ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತದೆ?

Date: 16-03-2024

Location: ಬೆಂಗಳೂರು


"ಒಂದು ಕಾಲಗಟ್ಟದಲ್ಲಿ ಒಂದು ಸಮಾಜ ಇನ್ನೊಂದು ಸಮಾಜದೊಂದಿಗೆ ಎಂತದೆ ಸಂಬಂದವನ್ನು ಬೆಳೆಸಿಕೊಂಡಾಗಲೂ ಅದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಬಂದಗಳು ಇರುತ್ತವೆ. ಈಗ ಬ್ರಿಟೀಶರ ಜೊತೆಗಿನ ಸಂಬಂದವನ್ನು ಸೊಲ್ಪ ಮಾತಾಡೋಣ," ಎನ್ನುತ್ತಾರೆ ಬಸವರಾಜ ಕೋಡಗುಂಟಿ. ಅವರು ತಮ್ಮ ‘ತೊಡೆಯಬಾರದ ಲಿಪಿಯ ಬರೆಯಬಾರದು’ ಅಂಕಣದಲ್ಲಿ ‘ಬೇರೆ ಬಾಶೆಗಳ ನಂಟಿಲ್ಲದೆ ಬದುಕಬಹುದೆ?’ ಕುರಿತು ಬರೆದಿರುವ ಲೇಖನ.

ಕನ್ನಡ ಬಾಶೆಗೆ ಹಲವು ಬಾಶೆಗಳ ನಂಟು ಬೆಳೆದಿರುವುದು ಸ್ಪಶ್ಟ. ಯಾಕೆ ಈ ನಂಟು ಬೆಳೆದಿರಬಹುದು ಮತ್ತು ಯಾವಾಗ ಹೇಗೆ ಎಂದು ಯೋಚಿಸುವುದು ತುಸು ಅವಶ್ಯ. ಯಾವುದೆ ಬಾಶೆಯ ನಂಟು ಅಂದಂದಿನ ಅವಶ್ಯಕತೆಯಾಗಿಯೆ ಬಂದಿರುತ್ತದೆ ಎನ್ನವುದು ನಿಜವೆ. ನಾವು ಇವತ್ತು ಸಾಮಾನ್ಯವಾಗಿ ಕೇಳುವ ‘ಹೇರಲಾಗಿದೆ’ ಎನ್ನುವುದು ಮಾತ್ರವೆ ವಾಸ್ತವವಾಗಿರಲು ಸಾದ್ಯವಿಲ್ಲ. ಯಾಕೆಂದರೆ, ಒಂದು ಕಾಲಗಟ್ಟದಲ್ಲಿ ಒಂದು ಸಮಾಜ ಇನ್ನೊಂದು ಸಮಾಜದೊಂದಿಗೆ ಎಂತದೆ ಸಂಬಂದವನ್ನು ಬೆಳೆಸಿಕೊಂಡಾಗಲೂ ಅದರಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕ ಸಂಬಂದಗಳು ಇರುತ್ತವೆ. ಈಗ ಬ್ರಿಟೀಶರ ಜೊತೆಗಿನ ಸಂಬಂದವನ್ನು ಸೊಲ್ಪ ಮಾತಾಡೋಣ.

ಇದು ಇನ್ನೂ ಸಮಾಜದ ನೆನಪಿನಲ್ಲಿ ಇದೆ ಮತ್ತು ಅದರ ಸಂಬಂದದ ಬೆಳವಣಿಗೆಯನ್ನು ಸಮಾಜ ಇನ್ನೂ ಪಡೆದುಕೊಳ್ಳುತ್ತಿದೆ. ಹಾಗಾಗಿ ಇಂಗ್ಲೀಶು ಮಾತಾಡುವ ಬ್ರಿಟೀಶರು ಮತ್ತು ಕನ್ನಡ ಮಾತುಗ ಸಮುದಾಯಗಳು ಪರಸ್ಪರ ಎದುರಾದಾಗ ಯಾವ ಬಗೆಯ ಸಂಬಂದಗಳು ಇದ್ದವು ಮತ್ತು ಅವು ಕ್ರಮೇಣವಾಗಿ ಹೇಗೆ ಬೆಳೆದವು ಎನ್ನುವದನ್ನು ನೋಡಬೇಕು. ಇದು ಎಲ್ಲ ಬಾಶೆಗಳ ನಡುವಿನ ನಂಟಿನಲ್ಲಿಯೂ ಹೀಗೆ ಇರುತ್ತದೆ ಎಂದಲ್ಲದಿದ್ದರೂ ಇದರಂತದೆ ಪರಿಸ್ತಿತಿ, ವಾತಾವರಣ ಇರುತ್ತವೆ ಎನ್ನುವುದು ಸ್ಪಶ್ಟ.

ಯುರೋಪಿಯನ್ನರು ಬಾರತಕ್ಕೆ ಮೊದಲು ವ್ಯಾಪಾರಕ್ಕೆಂದು ಬಂದಾಗ ದೊಡ್ಡ ಪ್ರಮಾಣದ ಮತ್ತು ದೂರವ್ಯಾಪಾರ ಮಾಡುತ್ತಿದ್ದವರ ಜೊತೆಗೆ ಮತ್ತು ಈ ದೂರವ್ಯಾಪಾರವನ್ನು ನೇರ ನಿಯಂತ್ರಿಸುತ್ತಿದ್ದ ಅಂದಿನ ಸ್ತಳೀಯ ಅದಿಕಾರಶಾಹಿ ಇವರುಗಳ ಜೊತೆ ಸಹಜವಾಗಿ ನೇರ ಸಂಪರ‍್ಕವನ್ನು ಇಟ್ಟುಕೊಂಡಿರುತ್ತಾರೆ. ಇವರ ವ್ಯಾಪಾರ ಮತ್ತು ಯುರೋಪಿಯನ್ನರ ಮಹತ್ವ ಬೆಳೆಯುತ್ತ ಕ್ರಮೇಣ ಮೇಲಿನ ಅದಿಕಾರದಲ್ಲಿದ್ದವರು, ರಾಜರುಗಳು ಕೂಡ ಯುರೋಪಿಯನ್ನರ ಜೊತೆ ನೇರ ಸಂಬಂದವನ್ನು ಬೆಳೆಸಿಕೊಂಡರು. ಅಂದರೆ ಯುರೋಪಿಯನ್ನರು ಇವರೆಲ್ಲರ ಜೊತೆ ಮಾತನಾಡಲು ಶುರು ಮಾಡಿದ್ದರು ಎಂದೆನ್ನಬಹುದು. ಹೀಗೆ ವ್ಯಾಪಾರ ಬೆಳೆಯುತ್ತಾ ಈ ನೆಲದಲ್ಲಿ ಅವರು ಮಾತನಾಡುವ ವಾತಾವರಣವೂ ಹಿಗ್ಗುತ್ತಾ ಹೋಯಿತು. ನಂತರ ಅದಿಕಾರ ಹಂಚಿಕೊಂಡ ಮೇಲೆ ಸಹಜವಾಗಿ ಅವರ ಅದಿಕಾರವನ್ನು ನಡೆಸುವುದಕ್ಕೆ ಅನುಕೂಲವಾಗುವ, ಅವರ ಆಡಳಿತವನ್ನು ತಲೆ ಮೇಲೆ ಹೊತ್ತುಕೊಂಡ ಬಹುತೇಕ ಮೇಲ್ಮಟ್ಟದ ಅದಿಕಾರವರ‍್ಗ ಇಂಗ್ಲೀಶನ್ನು ಮಾತನಾಡತೊಡಗಿತು. ಇಲ್ಲಿ ಮುಕ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಇಲ್ಲಿನ ಅದಿಕಾರವರ‍್ಗ ಇಡಿಯಾಗಿ ಇಂಗ್ಲೀಶನ್ನು ಕಲಿಯಲಿಲ್ಲ, ಇಲ್ಲವೆ ಯುರೋಪಿನಿಂದ ಬಂದವರೆಲ್ಲರೂ ಇಲ್ಲಿನವರೊಡನೆ ಮಾತನಾಡಲಿಲ್ಲ. ಬದಲಿಗೆ ಸಹಜವಾಗಿ ಮೊದಮೊದಲು ಕೆಲವರು ದ್ವಿಬಾಶಿಕರು ಎರಡೂ ಮಾತುಗ ಸಮುದಾಯದವರ ನಡುವೆ ಕೊಂಡಿಯ ಹಾಗೆ ಕೆಲಸ ಮಾಡುತ್ತಿದ್ದರು. ಇದು ಕ್ರಮೇಣ ಹಿಗ್ಗುತ್ತಾ ವಿವಿದ ವಿನ್ಯಾಸಗಳನ್ನು ಪಡೆಯುತ್ತಾ ಹೋಗುತ್ತದೆ.

ನಾವಿಲ್ಲಿ ಮುಕ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಇಂಗ್ಲೀಶಿನವರು ನಮಗೆ ಬಂದದ್ದು ಹೊರಗಿನಿಂದ. ಸಹಜವಾಗಿಯೆ ಹೊರಗಿನಿಂದ ಬಂದವರನ್ನು ಬೆರಗಿನಿಂದ ನೋಡುವ ಕಣ್ಣು ಇದ್ದೆ ಇರುತ್ತದೆ. ಶ್ರೀಮಂತರಾಗಿ, ದೊಡ್ಡ ವ್ಯಾಪಾರದವರಾಗಿ ಬಂದ ಯುರೋಪಿಯನ್ನರನ್ನು ಸಹಜವಾಗಿ ಬೆರಗುಕಣ್ಣಿನಿಂದ ನೋಡುವುದು ಸಹಜವೂ ಕೂಡ. ಈ ಪರಿಸ್ತಿತಿಯಲ್ಲಿ ಹೊರಗಿನವರಾಗಿ, ಸ್ತಿತಿವಂತರಾಗಿ ಇಂಗ್ಲೀಶರು ಪ್ರಬಾವ ಬೀರುವವರಾಗಿಯೆ ಬೆಳೆದರು. ಇಂಗ್ಲೀಶರನ್ನು ಅವರ ಬದುಕನ್ನು, ಬದುಕಿನ ಶಯ್ಲಿಯನ್ನು ಪ್ರಬಾವವಾಗಿ ಅನುಕರಣೆ ಮಾಡುವುದಕ್ಕೆ ಇಲ್ಲಿನ ಮಂದಿ ಶುರು ಮಾಡುತ್ತಾರೆ. ಇದರಲ್ಲಿ ಬಾಶೆ ಮುಕ್ಯವಾಗಿಲ್ಲದೆ ಅವರ ಬದುಕಿನ ಪ್ರಬಾವವೆ ಮುಕ್ಯ ಆಗಿರುತ್ತದೆ. ಅದರ ಬಾಗವಾಗಿ ಬಾಶೆಯೂ ಇರುತ್ತದೆ ಎಂಬುದು ಸ್ಪಶ್ಟ.

ಈ ಪ್ರಬಾವವನ್ನು ಎಲ್ಲೆಲ್ಲಿ ನೋಡುವುದಕ್ಕೆ ಸಾದ್ಯವಾಗುತ್ತದೆ? ಇಂಗ್ಲೀಶರು ತಮ್ಮ ಬಾಶೆಯನ್ನು ಮಾತಾಡಿ ಎಂದು ಕಂಡಿತವಾಗಿಯೂ ಕೇಳಿರಲಿಕ್ಕಿಲ್ಲ. ಅವರ ಸಾಮಾಜಿಕ, ರಾಜಕೀಯ ಮತ್ತು ವ್ಯಾಪಾರದ ಸಂಬಂದಗಳು, ಚಟುವಟಿಕೆಗಳು ಸಹಜವಾಗಿ ಆದ್ಯತೆಯಾಗಿದ್ದವೆ ಹೊರತು ತಮ್ಮ ಬಾಶೆಯನ್ನು ಹೇರುವುದು ಆದ್ಯತೆ ಆಗಿರುವುದಿಲ್ಲ. ಬದಲಿಗೆ, ಅವರ ಪ್ರಬಾವವನ್ನು ತೋರಿಸುವ, ಹೇರುವ ಬಾಗವಾಗಿ ಅವರ ಬಾಶೆಯೂ ಬರುತ್ತದೆ ಮಾತ್ರ.

ಅಂದರೆ, ಸಹಜವಾಗಿ ಅವರ ಉಡುಗೆ-ತೊಡುಗೆ, ಆಹಾರ ಪದ್ದತಿ, ಬದುಕಿನ ಶಯ್ಲಿ ಇವೆಲ್ಲವನ್ನು ಅನುಸರಿಸುತ್ತಾರೆ, ಅನುಕರಿಸುತ್ತಾರೆ. ಅವರು ಅನುಕರಣೆ ಮಾಡುತ್ತಿದ್ದ ಉಡುಗೆ-ತೊಡುಗೆಯಿಂದ ಮೊದಲ್ಗೊಂಡು ಎಲ್ಲವುಗಳಿಗೆ ಸಂಬಂದಿಸಿದ ಶಬ್ದಗಳು ನಿದಾನವಾಗಿ ಇವರ ಬಾಶೆಯಲ್ಲಿ ಸೇರಿಕೊಳ್ಳುತ್ತವೆ. ಇಂಗ್ಲೀಶರಂತೆ ಕಾಣುವುದಕ್ಕೆ ಇಂಗ್ಲೀಶಿನ ಶಬ್ದಗಳು ಸಹಾಯ ಮಾಡುತ್ತವೆ. ಇಂಗ್ಲೀಶಿಗರನ್ನು, ಇಂಗ್ಲೀಶನ್ನು ಸಹಿಸಿಕೊಳ್ಳದವರೂ ಅವರ ಬದುಕಿನ ಶಯ್ಲಿಯನ್ನು ಅನುಸರಿಸಿದಾಗ ಇಂಗ್ಲೀಶಿನ ಶಬ್ದಗಳನ್ನು ಬಳಸತೊಡಗುತ್ತಾರೆ. ಇದು ಮುಂದುವರಿಕೆಯಾಗಿ ಇಂಗ್ಲೀಶಿನ ಶಬ್ದಗಳನ್ನು ಬಳಸುವವರು ತಮ್ಮ ಜೊತೆಯಲ್ಲಿರುವ, ಸಂಪರ‍್ಕದಲ್ಲಿರುವವರ ಮೇಲೆ ಪ್ರಬಾವ ಬೀರಲು ತೊಡಗುತ್ತಾರೆ. ಹೀಗೆ ಅವರಿಂದ ಇನ್ನೂ ಹಲವರಿಗೆ ಆ ಇಂಗ್ಲೀಶಿನ ಶಬ್ದಗಳು ಪಸರಿಸಿಕೊಂಡು, ಸಾಮಾಜಿಕ ಚಲನೆಯನ್ನು ಪಡೆದುಕೊಳ್ಳುತ್ತವೆ. ಇಂಗ್ಲೀಶಿನ ಶಬ್ದಗಳು ಇಂದಿಗೂ ಹಳ್ಳಿಹಳ್ಳಿಗಳಿಗೆ ಹೇಗೆ ಪಸರಿಸಿಕೊಳ್ಳುತ್ತಿವೆ ಎನ್ನುವುದನ್ನು ಅವಲೋಕಿಸಿದಾಗ ಈ ಪಸರಣದ ಅರಿವು ನಮಗೆ ಒದಗಬಹುದು. ಇಂಗ್ಲೀಶರ ಬಗೆಗೆ ಯಾವುದೆ ಪರಿಚಯವೂ ಇಲ್ಲದ ದೂರದವರಿಗೂ ಈ ಶಬ್ದಗಳು ತಲುಪುತ್ತವೆ. ಆದರೆ, ಈ ವೇಳೆಗೆ ಅವು ಇಂಗ್ಲೀಶಿನ ಶಬ್ದಗಳಾಗಿ ಉಳಿದಿರುವುದಿಲ್ಲ ಬದಲಿಗೆ ಅವು ಬದುಕಿನ, ಸಮಾಜದ ಹೊಸ ಶಯ್ಲಿಯಾಗಿ, ಪ್ರಬಾವವಾಗಿ ಬೆಳೆದಿರುತ್ತವೆ. ಇನ್ನೂ ಮುಂದುವರೆದು ಅವು ಕನ್ನಡದ್ದೆ ಪದಗಳಾಗಿ ಬೆಳೆದುಬಿಟ್ಟಿರುತ್ತವೆ. ಕನ್ನಡದ್ದೆ ದ್ವನಿವಿಗ್ನಾನದಲ್ಲಿ, ಅರ‍್ತವಿಗ್ನಾನದಲ್ಲಿ ಇಂಗ್ಲೀಶಿನ ಶಬ್ದಗಳು ತಮ್ಮದೆ ಜಾಗವನ್ನು ಮಾಡಿಕೊಂಡು ಬೆಳೆದುಬಿಟ್ಟಿರುತ್ತವೆ. ದೂರದೂರಕ್ಕೆ ಶಬ್ದಗಳು ಪಸರಿಸಿಕೊಳ್ಳುತ್ತಿದ್ದಂತೆ ಅವು ಮೂಲ ಇಂಗ್ಲೀಶಿನ ದ್ವನಿಗಳನ್ನೂ, ಅರ‍್ತವನ್ನೂ ಬಿಟ್ಟೂ ದೂರಕ್ಕೆ ಬಂದಿರಬಹುದು.

ಇಲ್ಲಿ, ಒಂದು ಕತೆಯ ರೀತಿಯಲ್ಲಿ ಎರಡು ಸಮುದಾಯಗಳ ನಡುವಿನ ಸಂಬಂದವನ್ನು ಹೇಳಲಾಯಿತು ಎನ್ನುವುದು ನಿಜ. ಆದರೆ, ಈ ಬಗೆಯ ಸಾಮಾಜಿಕ ವಾಸ್ತವವೊಂದು ಸಮಾಜದಲ್ಲಿ ಇರುತ್ತದೆ ಎಂಬುದನ್ನು ನಾವು ಅರ‍್ತ ಮಾಡಿಕೊಳ್ಳಬೇಕು. ಪ್ರಬಾವ ಬೀರುವ ಬಾಶೆ ಮನುಶ್ಯ ಬದುಕಿನ ಮತ್ತು ಸಮಾಜದ ಯಾವ ವಲಯದಲ್ಲಿ ಪ್ರಬಾವ ಬೀರಿದೆ ಎನ್ನುವುದು ಮತ್ತು ಹೇಗೆ, ಎಶ್ಟು ಪ್ರಬಾವ ಬೀರಿದೆ ಎನ್ನುವುದು ಈ ಶಬ್ದಗಳು ಎಶ್ಟು ಮಟ್ಟಿಗೆ ಆ ಬಾಶೆಯೊಳಗೆ, ಬಾಶೆಯೊಳಕ್ಕೆ ಸೇರಿಕೊಳ್ಳುತ್ತವೆ ಎನ್ನುವುದನ್ನು ನಿರ‍್ದರಿಸುತ್ತದೆ. ಅಂದರೆ, ವಿದ್ವತ್ತಿನ ವಲಯದಲ್ಲಿ ಬಂದ ಶಬ್ದಗಳಿಗೆ ಸಹಜವಾಗಿ ಪಸರಣ ಅಶ್ಟು ಇರುವುದಿಲ್ಲ. ಮೀಮಾಂಸೆ, ವ್ಯಾಕರಣ ಮೊದಲಾದ ವಲಯಗಳಲ್ಲಿ ಸುಮಾರು ಒಂದೂವರೆ-ಎರಡು ಸಾವಿರ ವರುಶಗಳ ಹಿಂದೆಯೆ ಕನ್ನಡಕ್ಕೆ ಬಂದ ಪದಗಳು ಇಂದಿಗೂ ಸಾಮಾನ್ಯರ ನಡುವೆ ಬಂದಿಲ್ಲ ಎಂಬುದನ್ನು ಗಮನಿಸಬೇಕು. ಆದರೆ, ಸಾಮಾನ್ಯ ಬದುಕಿನ ಬಾಗವಾಗಿ ಬಂದ ಶಬ್ದಗಳು ಹೆಚ್ಚು ಪಸರಣವನ್ನು ಪಡೆದುಕೊಳ್ಳುತ್ತವೆ. ಇದು ಅತಿ ಸಹಜ ಕೂಡ. ಅದರಂತೆಯೆ ವ್ಯಾಪಾರ, ರಾಜಕೀಯ ಮೊದಲಾದ ವಲಯಗಳಲ್ಲಿ ಬಳಕೆಯಾಗುವ ಶಬ್ದಗಳಿಗೂ ತುಸು ಹೆಚ್ಚಿನ ಪಸರಣ ಇರುತ್ತದೆ.

ಇಲ್ಲಿ ಬಾಶೆಯ ನೇರ ಸಂಬಂದ, ಸಂಪರ‍್ಕ ಇಲ್ಲದವರಿಗೆ ಈ ಶಬ್ದಗಳು ತಲುಪುವುದು ಒಂದು ಬಾಶೆಯಾಗಿ ಅಲ್ಲ. ಇಂದಿಗೂ ಒಂದು ಬಾಶೆಯಲ್ಲಿ, ಬಾಶೆಯ ಬಳಕೆಯಲ್ಲಿ ಹೊಸ ಪದಗಳನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದನ್ನು ಅವಲೋಕಿಸಬಹುದು. ಆ ಶಬ್ದ ಎಲ್ಲಿಂದ ಯಾಕೆ ಹೇಗೆ ಬಂದಿದೆ ಎಂದು ಯಾರೂ ಯೋಚಿಸುವುದಿಲ್ಲ. ಬದಲಿಗೆ, ಅದು ಏನು ಕೆಲಸ ಮಾಡುವುದಕ್ಕೆ ಬಂದಿದೆ, ಹೇಗೆ ಮುಕ್ಯವಾಗುತ್ತದೆ ಎಂಬುದನ್ನು ನೋಡುತ್ತಾರೆ. ಹಾಗಾಗಿ, ಯಾವುದೆ ಬಾಶೆಗಳ ನಡುವಿನ ನಂಟನ್ನು ಸುಲಬವಾಗಿ, ಸರಳ ರೇಕೆಯ ಹಾಗೆ ಹೇಳುವುದು ತಪ್ಪಾಗುತ್ತದೆ. ಈ ವಿಚಾರಗಳನ್ನು ಇಟ್ಟುಕೊಂಡು ಎರಡು ಬಾಶೆಗಳ ನಡುವಿನ ನಂಟು ಹೀಗೆ ಹಲವು ಸ್ತರಗಳಲ್ಲಿ, ಆಯಾಮಗಳಲ್ಲಿ, ವಲಯಗಳಲ್ಲಿ ಸಣ್ಣ ನೀರದಾರೆಯಂತೆ ಹರಿಯುತ್ತಲಿರುತ್ತದೆ. ಅದು ದೊಡ್ಡ ನದಿಯಂತೆ ಹರಿಯುವುದಿಲ್ಲ.

ನಿಜ, ಇದು ಸ್ತೂಲವಾದ ಮಾತುಕತೆಯೆ, ಆದರೂ ಎರಡು ಬಾಶೆಗಳ ನಡುವಿನ ನಂಟಿನ ಬಗೆಗೆ ಮಾತನಾಡುವುದಕ್ಕೆ ಇದು ಕಂಡಿತವಾಗಿಯೂ ಸಹಾಯ ಮಾಡುತ್ತದೆ.

MORE NEWS

ಕನ್ನಡ ವಿಮರ್ಶೆ 3

22-11-2024 ಬೆಂಗಳೂರು

“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...