ಧರ್ಮದ ಸುತ್ತ ಮನುಷ್ಯರ ಚಿತ್ತ


ಧರ್ಮದ ಈ ಮೂರೂ ನೆಲೆಗಳ ಅಸ್ತಿತ್ವದ ನಡುವಿನ ಸಂಘರ್ಷವೇ 'ಧರ್ಮ ಯುದ್ಧ'. ಆದರೆ ಇದರಲ್ಲಿ ಸಂಸ್ಥಾ ರೂಪಿ ಧರ್ಮದ ಪಾತ್ರ ಬಹಳವಿಲ್ಲ. ಸಂಸ್ಥಾ ರೂಪಿ ಧರ್ಮದ ಔದ್ಯಮಿಕ, ರಾಜಕೀಯಾತ್ಮಕ, ಅನೈತಿಕ ವರ್ತನೆಗಳ ಎದುರಿಗೆ ಸಂಘರ್ಷಕ್ಕಿಳಿಯುವುದು ಧರ್ಮದ ವೈಯಕ್ತಿಕ ರೂಪಗಳೇ ಎನ್ನುತ್ತಾರೆ ಸಾಹಿತಿ ಅರವಿಂದ ಚೊಕ್ಕಾಡಿ. ಸಾಹಿತಿ ನಾ. ಮೊಗಸಾಲೆ ಅವರ ‘ಧರ್ಮ ಯುದ್ಧ’ ಕೃತಿಯ ಬಗ್ಗೆ ಅವರು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ..

ಕೃತಿ: ಧರ್ಮ ಯುದ್ಧ
ಲೇ: ಡಾ. ನಾ. ಮೊಗಸಾಲೆ
ಪ್ರ: ಮನೋಹರ ಗ್ರಂಥ ಮಾಲಾ, ಧಾರವಾಡ
ಪು:232
ಬೆಲೆ :₹ 230/-

" ದೇವರೇ ಕಾಪಾಡಬೇಕು ಈ‌ ಜನರನ್ನು! ಎಂದು ಕಾಮತರಿಗೆ ಹೇಳಬೇಕೆನ್ನುವಷ್ಟರಲ್ಲಿ ಕಾಮತರು ದೇವರೂ ಇವರನ್ನು ಕಾಪಾಡಲಾರ ಎಂದು ದೊಡ್ಡದಾಗಿಯೇ ಕೂಗಿ ಜೋರಾಗಿ ಓಡಲಾರಂಭಿಸಿದರು" ಎಂಬ ಕಾದಂಬರಿಯ ಕೊನೆಯ ಸಾಲುಗಳು ನಾ. ಮೊಗಸಾಲೆಯವರ,' ಧರ್ಮ ಯುದ್ಧ' ಕಾದಂಬರಿಯ ಒಟ್ಟೂ ತಾತ್ವಿಕತೆಯನ್ನು ಹಿಡಿದಿಡುತ್ತದೆ.

' ಧರ್ಮ‌ ಯುದ್ಧ' ಎಂಬ ಹೆಸರು ನೋಡಿದಾಕ್ಷಣ ಕಾದಂಬರಿಯು ಘೋರವಾದ ಮತೀಯ ಸಂಘರ್ಷದ ಕುರಿತಾಗಿ ಹೇಳುತ್ತದೆ ಎಂದು ಅನಿಸುತ್ತದೆ. ಆದರೆ ಧರ್ಮ‌ ಆಧಾರಿತವಾದ ಆ ರೀತಿಯ ಯಾವ ಸಂಘರ್ಷವೂ ಕಾದಂಬರಿಯಲ್ಲಿ‌ ಇಲ್ಲ. ಪಂಜುರ್ಲಿ ದೈವದ ಯಾವ ಅಸ್ತಿತ್ವವೂ ಇಲ್ಕದ ಜಾಗದಲ್ಲಿ ಪಂಜುರ್ಲಿಯ ಅಸ್ತಿತ್ವವಿದೆ ಎಂದು ಪ್ರಶ್ನೆಯಲ್ಲಿ ಕಾಣುವುದು, ಅದಕ್ಕಾಗಿ ಅಷ್ಟಮಂಗಲ, ಅಷ್ಟಮಂಗಲದ ನಂತರ ಬ್ರಹ್ಮಕಲಶ, ಪಂಜುರ್ಲಿ ಗುಡ್ಡದಲ್ಲಿರುವ ಮರ ಕಡಿದು ವ್ಯಾಪಾರ ಮಾಡುವುದು-ಇದರ ಸುತ್ತ ಪ್ರಕಟವಾಗುವ ಮಾನವ ಸ್ವಭಾವಗಳು, ವರ್ತಮಾನದಲ್ಲಿ ಎಲ್ಲೆಂದರಲ್ಲಿ ಇರುವ ಧರ್ಮೋದ್ಯಮ ಈ ಕಾದಂಬರಿಯ ವಸ್ತುವಾಗಿದೆ. ಇಲ್ಲಿನ 'ಧರ್ಮ ಯುದ್ಧ' ಸ್ವ ರಕ್ಷಣೆಗಾಗಿಯೂ ಅಲ್ಲ, ಅನ್ಯ ಆಕ್ರಮಣಕ್ಕಾಗಿಯೂ ಅಲ್ಲ.‌ ಧರ್ಮದ ಹೆಸರಿನಲ್ಲಿ ಧರ್ಮದ ಮೇಲೆಯೇ ನಡೆಯುವ ಯುದ್ಧ. ಕಾಡು ನಾಶ ಮಾಡದೆ ಇರುವುದು ಧರ್ಮ. ಆದರೆ ಪಂಜುರ್ಲಿಯ ಹೆಸರಿನಲ್ಲಿ‌ ಮರ‌ಕಡಿದು ಮಾರುವುದು ಧರ್ಮದ ವಿರುದ್ಧ ನಡೆಸುವ ಯುದ್ಧ. ಸತ್ಯವನ್ನು‌ ಎತ್ತಿ ಹಿಡಿಯುವುದು ಧರ್ಮ. ಆದರೆ ಸೂರಪ್ಪನ ಬಾವಿಗೆ ಕರಿಬೆಕ್ಕನ್ನು ತಳ್ಳಿದ್ದು ನಾನೇ;ಪಂಜುರ್ಲಿಯಲ್ಲ ಎಂದು ರಾಗುವೇ ಹೇಳಿದರೂ ರಾಗುವನ್ನು ಹುಚ್ಚನನ್ನಾಗಿ ಬಿಂಬಿಸಿ ಇಲ್ಲದ ಪಂಜುರ್ಲಿಯನ್ನು ಉಳಿಸಿಕೊಳ್ಳುವ ಮನೋಭಾವವು ಧರ್ಮದ ಮೇಲೆ ಧರ್ಮದ ಹೆಸರಿನಲ್ಲಿ ನಡೆಯುವ ಯುದ್ಧ.‌

ಇಡೀ ಕಥನವೇ ಧರ್ಮ ಮತ್ತು ಧರ್ಮದ ಹೆಸರಿನಲ್ಲಿ‌ ಪ್ರಕಟವಾಗುವ ಮಾನವ ದೌರ್ಬಲ್ಯ ಮತ್ತು ಮಾನವ ವಿಕೃತಿಗಳ ನಡುವಿನ ಸಂಘರ್ಷವಾಗಿದೆ. ವ್ಯಕ್ತಿ ಧರ್ಮ, ಸಂಸ್ಥಾ ಧರ್ಮ, ಧರ್ಮದ ಔದ್ಯಮಿಕ ರೂಪಗಳ ನಡುವಿನ ತಿಕ್ಕಾಟಗಳೇ ಕೃತಿಯ ಕೇಂದ್ರ. ವೆಂಕಪ್ಪ‌ ಮಾಷ್ಟ್ರು, ಹೆಗ್ಡೆಯಂತಹ ವ್ಯಕ್ತಿಗಳು ವ್ಯಕ್ತಿ ಧರ್ಮ ಅಥವಾ ಧರ್ಮದ ವೈಯಕ್ತಿಕ ರೂಪವನ್ನು ಪ್ರತಿನಿಧಿಸಿದರೆ, ಸೇಸಪ್ಪ, ಸುಕ್ಕಣ್ಣ, ಗುಂಡಾ ಭಟ್ಟ, ಕೋಟೆ ಮುಂತಾದವರು ಧರ್ಮದ ಔದ್ಯಮಿಕ ರೂಪವನ್ನು ಪ್ರತಿನಿಧಿಸುತ್ತಾರೆ. ಈ ಪ್ರತಿನಿಧಿತ್ವ ಅಧಿಕಾರ ಕೇಂದ್ರಿತ ರಾಜಕೀಯ ಹಪಹಪಿಕೆಯಾಗುವುದನ್ನೂ ಕಾದಂಬರಿಯು ಸೂಚಿಸುತ್ತದೆ. ಗಿರಿಜಕ್ಕ ಮತ್ತು ಲಕ್ಷ್ಮಿಯೊಂದಿಗಿನ ಸುಕ್ಕನ ವ್ಯವಹಾರಗಳು ಧರ್ಮೋದ್ಯಮವು ಅನೈತಿಕ ರಾಜಕೀಯವನ್ನು ಮಾತ್ರವಲ್ಲದೆ, ಅನೈತಿಕ ಜೀವನ ಪದ್ಧತಿಯನ್ನು ರೂಪಿಸಿ ಅದೆಲ್ಲವನ್ನೂ ಧರ್ಮದ ಹೆಸರಿನಲ್ಲಿ ಧಕ್ಕಿಸಿಕೊಳ್ಳುವುದನ್ನೂ ಸೂಚಿಸುತ್ತದೆ. ವ್ಯಕ್ತಿ ಧರ್ಮ ಮತ್ತು ಧರ್ಮೋದ್ಯಮಗಳೆರಡರ‌ ನಡುವೆ ಇರುವ ಸಾಂಸ್ಥಿಕ ಧರ್ಮವನ್ನು ಶ್ರೀಕಾಂತ ಭಟ್ಟರ ಪಾತ್ರವು ಪ್ರತಿನಿಧಿಸುತ್ತದೆ.‌ ವೇದ ಹೀಗೆ ಹೇಳಿದ, ಆಗಮ ಶಾಸ್ತ್ರ ಹೀಗೆ ಹೇಳಿದೆ;ನಾನದನ್ನು ಮೀರಲು ಆಗುವುದಿಲ್ಲ ಎನ್ನುವ ಶಿಸ್ತಿಗೆ ಶ್ರೀಕಾಂತ ಭಟ್ಟರು ಬದ್ಧ.

ಧರ್ಮದ ಈ ಮೂರೂ ನೆಲೆಗಳ ಅಸ್ತಿತ್ವದ ನಡುವಿನ ಸಂಘರ್ಷವೇ 'ಧರ್ಮ ಯುದ್ಧ'. ಆದರೆ ಇದರಲ್ಲಿ ಸಂಸ್ಥಾ ರೂಪಿ ಧರ್ಮದ ಪಾತ್ರ ಬಹಳವಿಲ್ಲ. ಸಂಸ್ಥಾ ರೂಪಿ ಧರ್ಮದ ಔದ್ಯಮಿಕ, ರಾಜಕೀಯಾತ್ಮಕ, ಅನೈತಿಕ ವರ್ತನೆಗಳ ಎದುರಿಗೆ ಸಂಘರ್ಷಕ್ಕಿಳಿಯುವುದು ಧರ್ಮದ ವೈಯಕ್ತಿಕ ರೂಪಗಳೇ. ಧರ್ಮದ ವೈಯಕ್ತಿಕ ರೂಪಕ್ಕೂ, ಔದ್ಯಮಿಕ ರೂಪಕ್ಕೂ ಪ್ರಧಾನವಾದ ಒಂದು ಸಾಮ್ಯತೆ ಇದೆ. ಎರಡೂ ಕೂಡ ಧರ್ಮದ ಸಂಸ್ಥಾ ರೂಪಿ ಶಿಸ್ತನ್ನು ನೆಚ್ಚಿಕೊಳ್ಳುವುದಿಲ್ಲ. ಆದರೆ ಧರ್ಮದ ವೈಯಕ್ತಿಕ ರೂಪಗಳು ಧರ್ಮವನ್ನು ಮಾನವ ಕಲ್ಯಾಣದ ವಸ್ತುವಾಗಿ ಪರಿಭಾವಿಸುವುದರಿಂದ ಅವು ಒಡೆಯುವ ಸಾಂಸ್ಥಿಕ ಶಿಸ್ತುಗಳು ಸಮಾಜವನ್ನು ಒಂದು ಉದಾತ್ತ ನೆಲೆಗೆ ತಲುಪಿಸುತ್ತವೆ. ಧರ್ಮದ ಔದ್ಯಮಿಕ ರೂಪಗಳು ಸ್ವಾರ್ಥ ಕೇಂದ್ರಿತ ಸಂಕುಚಿತ ಮನೋಭಾವದವುಗಳಾದ್ದರಿಂದ ಧರ್ಮದ ಸಾಂಸ್ಥಿಕ ಶಿಸ್ತನ್ನು ಒಡೆಯುವ ಅವುಗಳ‌ ನಿಲುವು ವ್ಯವಸ್ಥೆಯನ್ನು ವಿನಾಶದ ಕಡೆಗೆ ಕೊಂಡೊಯ್ಯುತ್ತದೆ. ಸ್ವತಃ ಅದು ತನ್ನನ್ನು ತಾನೇ ನಾಶ ಮಾಡಿಕೊಳ್ಳುವುದನ್ನು ಕೃತಿಯು ಮಾರ್ಮಿಕವಾಗಿ ಸೂಚಿಸುತ್ತದೆ. ಬ್ರಹ್ಮ‌ ಕಲಶವನ್ನು ಯಾರು ಎತ್ತಿ ಕೊಡಬೇಕು ಎನ್ನುವಲ್ಲಿ ಇರುವ ಅಧಿಕಾರದ ಅಹಂ ಮತ್ತು ಸ್ವಪ್ರತಿಷ್ಠೆಗಳು ಇಡೀ ಪ್ರಸಂಗವನ್ನು ಉಲ್ಟಾ ಮಾಡಿ ಬ್ರಹ್ಮಕಲಶದ ಕಾರ್ಯಕ್ರಮವನ್ನೆ ದಿಕ್ಕೆಡಿಸುತ್ತದೆ. ಧರ್ಮದ ಈ ಔದ್ಯಮಿಕ ಸ್ವರೂಪದಲ್ಲಿರುವ ಟೊಳ್ಳುತನ ಮತ್ತು ಬುದ್ಧಿಹೀನರೇ ಅದರ ನೇತೃತ್ವ ವಹಿಸುವುದು ಒಳಗಿನಿಂದಲೇ ಅದನ್ನು ಕುಸಿಯುವಂತೆ ಮಾಡುವುದನ್ನು ಕಾದಂಬರಿಯು ಹೇಳುತ್ತದೆ. ಕಾದಂಬರಿಯ ಪ್ರಾರಂಭವು,"ಸೀತಾಪುರದ ಶಾಲೆ, ವೆಂಕಪ್ಪ ಮಾಷ್ಟ್ರು" ಪ್ರಸ್ತಾವನೆಯ ಮೂಲಕ ಒಂದು ಅಭ್ಯುದಯದ ಸಂಕೇತದ ಮೂಲಕ ಆಗುತ್ತದೆ. ಕೃತಿಯ ಅಂತ್ಯವು ಧರ್ಮದ ಔದ್ಯಮಿಕ ರೂಪದ ಪಾತ್ರಗಳು ಪರಸ್ಪರ ಬಡಿದಾಡಿಕೊಳ್ಳುವ ವಿನಾಶದ ಸಂಕೇತದ ಮೂಲಕ ಆಗುತ್ತದೆ. ಶ್ರದ್ಧೆ, ನಂಬಿಕೆ, ಶಿಸ್ತು, ಉದಾತ್ತತೆ ಯಾವುದೂ ಇಲ್ಲದ ಧರ್ಮದ ಪ್ರತಿಪಾದನೆಯು ಕಾಣುವ ದುರಂತವನ್ನು ಕಾದಂಬರಿಯು ಅಪೂರ್ವ ಕಲಾಕೃತಿಯಾಗಿ ನಿರೂಪಿಸಿದೆ. ವರ್ತಮಾನಕ್ಕೆ ಸಾಹಿತಿಯು ಸ್ಪಂದಿಸಬಹುದಾದ ಅತ್ಯುತ್ತಮ ಮಾದರಿಯಾಗಿ ಕೃತಿಯು ನಿಲ್ಲುತ್ತದೆ.

-ಅರವಿಂದ ಚೊಕ್ಕಾಡಿ

ಅರವಿಂದ ಚೊಕ್ಕಾಡಿ ಅವರ ಲೇಖಕ ಪರಿಚಯ...
ನಾ. ಮೊಗಸಾಲೆ ಅವರ ಲೇಖಕ ಪರಿಚಯ...
ಧರ್ಮಯುದ್ಧ ಕೃತಿ ಪರಿಚಯ..

MORE FEATURES

ಕಾದಂಬರಿಯ ಕಟ್ಟುವಿಕೆ ಮಹಾಭಾರತವನ್ನು ನೆನಪಿಸಿತು…

23-11-2024 ಬೆಂಗಳೂರು

“ನಾನು ಇದನ್ನು ಓದುತ್ತಾ ಅಚ್ಚರಿಗೊಂಡಿದ್ದೇನೆ; ದಿಗ್ಭ್ರಾಂತನಾಗಿದ್ದೇನೆ; ಕಣ್ಣಂಚನ್ನು ಒದ್ದೆಯಾಗಿಸಿಕೊಂಡಿದ್ದೇನ...

ಇಲ್ಲಿ ಭಿನ್ನವಾದ ಕಥೆಯಿದೆ- ಜೀವಾನುನಭವವಿದೆ

23-11-2024 ಬೆಂಗಳೂರು

“ಸ್ವಲ್ಪ ಎಡವಿದರೂ ಕಥೆ ಕಾಮದಿಂದ - ಪ್ರೇಮಕ್ಕೂ ಪ್ರೇಮದಿಂದ - ಕಾಮಕ್ಕೂ ಹೊರಳಿಕೊಳ್ಳಬಹುದೆಂಬ ಎಚ್ಚರಿಕೆಯಿಂದಲೇ ನ...

ಬೇಸರವನ್ನೋಡಿಸುವ ತಾಕತ್ತಿನ ‘ಬೇಸೂರ್’

22-11-2024 ಬೆಂಗಳೂರು

"ಹಳೆಯ ದಿನಗಳೆಲ್ಲ ನೆನಪಾಗಲು ಕಾರಣವಾಗಿದ್ದು ಬೇಸೂರ್ ಎಂಬ ಕಥಾ ಸಂಕಲನ. ಮೊದಲಿಗೆ ಕುತೂಹಲ ಕೆರಳಿಸಿದ್ದು ಸಂಕಲನದ ಹ...