ದೇವರನಾಡಿನ ಪಯಣಕ್ಕೊಂದು ಕಾಲುದಾರಿ....


"ಸಾಮಾನ್ಯವಾಗಿ ಪ್ರವಾಸ ಕಥನಗಳು ಗದ್ಯದಲ್ಲಿರುತ್ತವೆ. ಆದರೆ ವಿ.ಕೃ. ಗೋಕಾಕರ ‘ಸಮುದ್ರಗೀತೆಗಳು’ ಪದ್ಯದಲ್ಲಿದೆ ಎಂಬುದು ಗಮನಿಸಬೇಕಾದ ಅಂಶ. ಪ್ರತಿಯೊಬ್ಬ ವ್ಯಕ್ತಿಗೂ ಪ್ರವಾಸದ ಅನುಭವ ವ್ಯಕ್ತಿ ವಿಶಿಷ್ಟ ಮನೋಧರ್ಮಕ್ಕೆ ಅನುಗುಣವಾಗಿ ಇರುತ್ತದೆ. ತಮ್ಮ ಅನುಭವದಲ್ಲಿ ಸಾರ್ವತ್ರಿಕತೆ ಇರಬಹುದಾದರೂ ಅದರಲ್ಲಿಯೂ ವ್ಯಕ್ತಿವಿಶಿಷ್ಟ ಪ್ರತ್ಯೇಕತೆ ಇರುತ್ತದೆ," ಎನ್ನುತ್ತಾರೆ ಶ್ರೀಧರ ಎಚ್.ಜಿ. ಅವರು ನವೀನಕೃಷ್ಣ ಎಸ್. ಉಪ್ಪಿನಂಗಡಿ ಅವರ ‘ಅಲೆದಾಟದ ಅಂತರಂಗ’ ದೇವರ ನಾಡಿಗೊಂದು ಪಯಣ ಎಂಬ ಪ್ರವಾಸ ಕಥನಕ್ಕೆ ಬರೆದ ಮುನ್ನುಡಿ.

ಶ್ರೀಯುತ ನವೀನಕೃಷ್ಣ ಎಸ್. ಉಪ್ಪಿನಂಗಡಿ ಇವರ ‘ಅಲೆದಾಟದ ಅಂತರಂಗ’ ದೇವರ ನಾಡಿಗೊಂದು ಪಯಣ ಎಂಬ ಪ್ರವಾಸ ಕಥನವು ಕೇರಳದ ಪ್ರಾಕೃತಿಕ ಸೌಂದರ್ಯವನ್ನು ಅನನ್ಯವಾದ ರೀತಿಯಲ್ಲಿ ಕಟ್ಟಿಕೊಡುತ್ತದೆ. 2024ರಲ್ಲಿ ‘ಹೆಜ್ಜೆ ಊರುವ ತವಕ’ ಎಂಬ ಪರಿಸರ ಸಂಬಂಧಿಯಾದ ಕೃತಿಯನ್ನು ನೀಡಿರುವ ಶ್ರೀಯುತ ನವೀನಕೃಷ್ಣ ಇವರು ಇನ್ನೊಂದು ಕೃತಿ ಪ್ರಕಟಣೆಗೆ ಅಣಿಯಾಗುತ್ತಿರುವುದು ಸಂತಸದ ವಿಷಯ.

ಸಾಮಾನ್ಯವಾಗಿ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಸಾಹಿತ್ಯದ ಬಗೆಗೆ ಆಸಕ್ತಿ ಇರುವುದು ಕಡಿಮೆ. ಇದಕ್ಕೆ ಅಪವಾದಗಳು ಇವೆ ಎಂಬ ಅರಿವು ನನಗಿದೆ. ಪ್ರಸ್ತುತ ಪುತ್ತೂರಿನ ವಿವೇಕಾನಂದ ಸ್ವಾಯತ್ತ ಕಾಲೇಜಿನಲ್ಲಿ ಪ್ರಥಮ ಎಂ.ಕಾಂ. ವಿದ್ಯಾರ್ಥಿಯಾಗಿ ಅಧ್ಯಯನ ಮಾಡುತ್ತಿರುವ ಇವರು ಸಾಹಿತ್ಯದ ಬಗೆಗೆ ಆಸಕ್ತಿಯನ್ನು ಬೆಳೆಸಿಕೊಂಡಿರುವುದು ಕುತೂಹಲದ ವಿಷಯ. ಪ್ರಥಮ ಬಿ.ಕಾಂ. ವಿದ್ಯಾರ್ಥಿಯಾಗಿದ್ದಾಗ ನವೀನಕೃಷ್ಣ ಇವರ ತರಗತಿಗೆ ಪಾಠಮಾಡುವ ಅವಕಾಶ ನನಗೆ ದೊರಕಿತ್ತು. ಆ ದಿನಗಳಿಂದಲೂ ಅವರು ಸಾಹಿತ್ಯದ ಬಗೆಗೆ ವಿಶೇಷ ಒಲವನ್ನು ಬೆಳೆಸಿಕೊಂಡಿದ್ದರು.

“ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ” ಎಂಬ ಗಾದೆಗೆ ಸರಿಹೊಂದುವಂತೆ ಚಿಕ್ಕಪ್ಪನ ಮನೆಯವರು ಉತ್ತರ ಭಾರತದ ಭರತ್ ರಾಥೋಡ್ ಕುಟುಂಬದವರ ಜೊತೆಗೆ ದೇವರನಾಡು ಕೇರಳದಲ್ಲಿ ಪ್ರವಾಸ ಹೋಗುವುದಕ್ಕೆ ಆಹ್ವಾನಿಸಿದರು. ಚಿಕ್ಕಪ್ಪನ ಆಹ್ವಾನದಿಂದ ಉತ್ಸಾಹಗೊಂಡ ನವೀನಕೃಷ್ಣ ಇವರು ರೈಲಿನಲ್ಲಿ ಅಣ್ಣನ ಮನೆಯಿರುವ ಪಾಲಕ್ಕಾಡನ್ನು ತಲುಪುವರು. ಮರುದಿನದಿಂದ ಇವರ ನಿಜವಾದ ಪ್ರವಾಸ ಆರಂಭವಾಗುವುದು. ಮೂರು ಅಥವಾ ನಾಲ್ಕು ದಿನದ ಪ್ರವಾಸದ ಅನುಭವಗಳು ಒಂದು ಕೃತಿಯಾಗಿ ರೂಪುಗೊಂಡಿರುವುದು ನಿಜಕ್ಕೂ ಬೆರಗನ್ನು ಉಂಟುಮಾಡುತ್ತದೆ.

“ದೇಶ ತಿರುಗಿ ನೋಡು ಕೋಶ ಓದಿ ನೋಡು” ಎಂಬ ಮಾತು ಪ್ರವಾಸವನ್ನೇ ಕುರಿತು ಹೇಳಿದಂತೆ ಕಾಣುತ್ತದೆ. ಪ್ರವಾಸ ಸಾಹಿತ್ಯವು ಒಂದು ಪ್ರದೇಶದ ಪ್ರಾಕೃತಿಕ ಸಂಪತ್ತು, ಸಂಸ್ಕೃತಿಯ ವಿವರಗಳನ್ನು ಸಾಕಷ್ಟು ವಿವರವಾಗಿ ನೀಡುತ್ತದೆ. ಸಾಮಾನ್ಯವಾಗಿ ಪ್ರವಾಸ ಕಥನಗಳು ಗದ್ಯದಲ್ಲಿರುತ್ತವೆ. ಆದರೆ ವಿ.ಕೃ. ಗೋಕಾಕರ ‘ಸಮುದ್ರಗೀತೆಗಳು’ ಪದ್ಯದಲ್ಲಿದೆ ಎಂಬುದು ಗಮನಿಸಬೇಕಾದ ಅಂಶ. ಪ್ರತಿಯೊಬ್ಬ ವ್ಯಕ್ತಿಗೂ ಪ್ರವಾಸದ ಅನುಭವ ವ್ಯಕ್ತಿ ವಿಶಿಷ್ಟ ಮನೋಧರ್ಮಕ್ಕೆ ಅನುಗುಣವಾಗಿ ಇರುತ್ತದೆ. ತಮ್ಮ ಅನುಭವದಲ್ಲಿ ಸಾರ್ವತ್ರಿಕತೆ ಇರಬಹುದಾದರೂ ಅದರಲ್ಲಿಯೂ ವ್ಯಕ್ತಿವಿಶಿಷ್ಟ ಪ್ರತ್ಯೇಕತೆ ಇರುತ್ತದೆ.

ಪ್ರವಾಸ ಕಥನದ ವ್ಯಾಪ್ತಿ ಜಿಲ್ಲೆಗಳಿಂದ ಹಿಡಿದು ಖಂಡಗಳವರೆಗೆ ವಿಸ್ತರಿಸಿದೆ. ಯುರೋಪಿನ ವಿವಿಧ ದೇಶಗಳು, ಅಮೆರಿಕಾ, ಜಪಾನ್, ರಷ್ಯಾ ಮುಂತಾದ ದೇಶಗಳ ಬಗೆಗೆ ಹಲವು ಪ್ರವಾಸ ಕಥನಗಳು ಬಂದಿವೆ. ದೀರ್ಘಕಾಲ ಒಂದು ದೇಶದಲ್ಲಿ ವಾಸಮಾಡಿ ಬರೆಯುವುದಕ್ಕೂ ಕೆಲವು ದಿನಗಳ ಮಟ್ಟಿಗೆ ಪ್ರವಾಸ ಮಾಡಿ ಬರೆಯುವುದಕ್ಕೂ ಒಂದಷ್ಟು ವ್ಯತ್ಯಾಸವಿದೆ. ಕ್ರಿ.ಶ. ಆರಂಭದ ಕಾಲದಿಂದಲೂ ಭಾರತಕ್ಕೆ ಅನೇಕ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದನ್ನು ಗಮನಿಸಬಹುದು. ಟಾಲೆಮಿ, ಮೆಗಾಸ್ತನೀಸ್, ಹ್ಯೂಯೆನ್‌ತ್ಸಾಂಗ್, ಅಬ್ದುಲ್ ರಜಾಕ್, ಆಲ್ಬೆರೂನಿ, ಮಾರ್ಕೊಪೋಲೊ, ಪಿಯತ್ರೋ ದೆಲ್ಲಾವೆಲ್ಲೆ ಮುಂತಾದವರ ಕಥನಗಳು ಭಾರತವನ್ನು, ಭಾರತೀಯ ಸಂಸ್ಕೃತಿಯನ್ನು ವಿಭಿನ್ನ ರೀತಿಯಲ್ಲಿ ಪರಿಚಯಿಸಿವೆ. 1890ರಲ್ಲಿ ಪ್ರಕಟವಾಗಿರುವ ಕರ್ಕಿ ವೆಂಕಟರಮಣ ಶಾಸ್ತ್ರಿಗಳ ‘ದಕ್ಷಿಣ ಯಾತ್ರಾ ಚರಿತ್ರೆ’ ಕನ್ನಡದ ಮೊದಲ ಪ್ರವಾಸ ಕೃತಿಯೆಂದು ಸ್ವೀಕೃತವಾಗಿದೆ.

ಶಿವರಾಮ ಕಾರಂತರ ಚಿತ್ರಮಯ ದಕ್ಷಿಣ ಕನ್ನಡ, ಚಿತ್ರಮಯ ದಕ್ಷಿಣ ಭಾರತ ಕೃತಿಗಳು ವಿಶಿಷ್ಟವಾಗಿವೆ. ಪ್ರವಾಸ ಕಥನಗಳನ್ನು ಅಧ್ಯಯನದ ಅನುಕೂಲಕ್ಕಾಗಿ ಪಶ್ಚಿಮ ಪ್ರವಾಸ, ಪೂರ್ವಪ್ರವಾಸ, ಸ್ವದೇಶಿ ಪ್ರವಾಸ ಮತ್ತು ಸ್ವರಾಜ್ಯ ಪ್ರವಾಸ ಎಂದು ವಿಂಗಡಿಸಲು ಸಾಧ್ಯ. ಸ್ವದೇಶ ಪ್ರವಾಸದಲ್ಲಿ ಕನ್ನಡಿಗರು ಹೊರರಾಜ್ಯದಲ್ಲಿ ಮಾಡಿದ ಪ್ರವಾಸವನ್ನು ಗುರುತಿಸಬಹುದು. ನವೀನಕೃಷ್ಣ ಅವರ ಪ್ರವಾಸವು ಈ ವರ್ಗದಲ್ಲಿ ಬರುತ್ತದೆ ಎನ್ನಬಹುದು.

ಕೃತಿಯ ಆರಂಭದಲ್ಲಿ ಪಾಲಕ್ಕಾಡ್ ಜಿಲ್ಲೆ, ಅಲ್ಲಿನ ಪ್ರಾಕೃತಿಕ ಸೌಂದರ್ಯ ಧಾರ್ಮಿಕ ಆಚರಣೆಗಳು, ಸಂಪ್ರದಾಯಗಳನ್ನು ತಮ್ಮ ಪ್ರವಾಸಕ್ಕೆ ಹಿನ್ನೆಲೆಯಾಗಿ ದಾಖಲಿಸಿದ್ದಾರೆ. ಆರಂಭದಲ್ಲಿ ಮಲಂಪುಳ ಆಣೆಕಟ್ಟಿನ ವರ್ಣನೆ ಬರುತ್ತದೆ. ನವೀನ ಅವರು ಅತ್ಯಂತ ಸೂಕ್ಷ್ಮವಾಗಿ ನಿಸರ್ಗವನ್ನು ಗಮನಿಸುವ ಗುಣವನ್ನು ಹೊಂದಿದ್ದಾರೆ. “ಮಲಂಪುಳ ಅಣೆಕಟ್ಟಿನ ನಿರ್ಮಾಣ ಸ್ಥಳೀಯರಿಗೆ ಹಲವು ಪ್ರಯೋಜನಗಳನ್ನು ತಂದಿದೆ. ಆದರೆ ಇದು ಪರಿಸರದ ಮೇಲೆ ಸ್ವಲ್ಪ ಅಡ್ಡಪರಿಣಾಮವನ್ನೂ ಬೀರಿದೆ. ಜಲಾಶಯದ ರಚನೆಯಿಂದ ಸಹಜವಾಗಿ ಇಲ್ಲಿರುವ ಕೆಲವು ಪ್ರದೇಶಗಳು ಮುಳುಗಡೆಯಾದವು. ಇದು ಸ್ಥಳೀಯ ಮರ, ಸಸ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರಿತು. ಅರಣ್ಯೀಕರಣ ಮತ್ತು ಸಂರಕ್ಷಣಾ ಕಾರ್ಯಕ್ರಮಗಳ ಮೂಲಕ ಈ ಪರಿಣಾಮಗಳನ್ನು ತಗ್ಗಿಸಲು ಪ್ರಯತ್ನ ಮಾಡಲಾಗಿದೆ. ಅಭಿವೃದ್ಧಿ ಬೇಕಿದ್ದರೆ ಒಂದಷ್ಟು ತ್ಯಾಗವೂ ಅನಿವಾರ್ಯವೇನೋ . . . !” ಲೇಖಕರ ಮಾತಿನಲ್ಲಿ ಅಭಿವೃದ್ಧಿ ಮತ್ತು ಪರಿಸರದ ನಡುವಣ ಸಂಘರ್ಷ ಮತ್ತು ಸಂಬಂಧದ ವಿವರಣೆ ಮಲಂಪುಳ ಅಣೆಕಟ್ಟು ಲೇಖನದಲ್ಲಿದೆ. ಕೃತಿಯಲ್ಲಿ ಪ್ರವಾಸದ ಸಮಯದಲ್ಲಿ ಸಿಗುವ ಇನ್ನಿತರ ಅಣೆಕಟ್ಟುಗಳಾದ ತುಂಬೂರ್ಮೊಳಿ ಅಣೆಕಟ್ಟು, ಮಟ್ಟುಪೆಟ್ಟಿ ಅಣೆಕಟ್ಟುಗಳ ಬಗೆಗೆ ವಿವರಗಳು ದೊರೆಯುತ್ತವೆ.

ಲೇಖಕರಿಗೆ ಅತ್ಯಂತ ಇಷ್ಟವಾದ ಇನ್ನೊಂದು ಆಸಕ್ತಿಯ ವಿಷಯ ಜಲಪಾತಗಳು. ದೇವರನಾಡು ಕೇರಳದಲ್ಲಿ ಹಲವು ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಅದಿರಪ್ಪಳ್ಳಿ ಜಲಪಾತವನ್ನು ಲೇಖಕರು 'ಭಾರತದ ನಯಾಗರ' ಎಂದು ಕರೆಯುತ್ತಾರೆ. ಚಾರ್ಪಾ ಜಲಪಾತ, ವಳಾಚಲ್ ಜಲಪಾತದ ವಿವರಗಳನ್ನು ನೋಡಬಹುದು. ಲೇಖಕರು ಜಲಪಾತವನ್ನು ಮಾತ್ರ ವಣ ðಸುವುದಿಲ್ಲ. ಜಲಪಾತಕ್ಕೆ ಕಾರಣವಾದ ನದಿಯ ಹುಟ್ಟು, ನದಿಯ ಹುಟ್ಟಿಗೆ ಇರುವ ಐತಿಹ್ಯ, ಪುರಾಣದ ಕಥೆಗಳನ್ನು ಸ್ವಾರಸ್ಯಕರವಾಗಿ ವಿವರಿಸುತ್ತಾರೆ.

ಧಾರ್ಮಿಕವಾಗಿ ಕೇರಳದಲ್ಲಿ ಹಲವು ಪ್ರಸಿದ್ಧ ದೇಗುಲಗಳಿವೆ. ತ್ರಿಕ್ಕಣದೇವನ್ ದೇವಸ್ಥಾನ ಕಾಟುಶ್ಯೇರಿ, ತ್ರಿಶ್ಯೂರಿನ ವಡಕ್ಕುಂನಾಥನ್ ಕ್ಷೇತ್ರ, ಶ್ರೀಕಚನಂಕುಲಂ ತಿರುಪುರೈಕ್ಕಲ್ ಶಿವ ಕಣ್ಣಕಿ ಭಗವತಿ ಕ್ಷೇತ್ರ, ಅಂಬಲಪ್ಪುಳ ಶ್ರೀಕೃಷ್ಣಸ್ವಾಮಿ ದೇವಸ್ಥಾನಗಳ ಬಗೆಗೆ ಪರಿಚಯಾತ್ಮಕ ವಿವರಣೆಯಿದೆ. ದೇಗುಲಗಳಿಗೆ ಸಂಬಂಧಿಸಿ ಇರುವ ಸ್ವಾರಸ್ಯಕರ ಕಥೆಗಳನ್ನು ಪೂರಕವಾಗಿ ವಿವರಿಸುವುದು ಲೇಖಕರ ಸೂಕ್ಷ್ಮ ಗ್ರಹಿಕೆಯನ್ನು ಸೂಚಿಸುತ್ತದೆ. ತ್ರಿಶ್ಯೂರಿನ ಪೂರಮ್ ಉತ್ಸವದ ವಿವರಣೆಯು ಸಾಕಷ್ಟು ವಿವರವಾಗಿ ಬಂದಿದೆ. ಸೆಖೆಯ ನಾಡಿನಲ್ಲಿ ನಿರ್ಮಾಣವಾಗಿರುವ ಸ್ನೋಪಾರ್ಕ್ ನ ರೋಚಕ ಅನುಭವವನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ತೆಂಗಿನ ರಾಜಧಾನಿ ಪೊಳ್ಳಾಚಿಯನ್ನು ವಿವರಿಸುವ ಸಂದರ್ಭದಲ್ಲಿ ಇದು ಬೆಲ್ಲ, ತರಕಾರಿ, ಹಾಲಿನ ಪ್ರಮುಖ ಉತ್ಪಾದನಾ ಕೇಂದ್ರ, ಮಾತ್ರವಲ್ಲ ಇದು ಏಷ್ಯಾದ ಅತಿದೊಡ್ಡ ಬೆಲ್ಲದ ಮಾರುಕಟ್ಟೆಗೆ ನೆಲೆಯಾಗಿದೆ ಎಂದು ಗುರುತಿಸುತ್ತಾರೆ.

ಅರಣ್ಯಗಳು ಲೇಖಕರ ಇನ್ನೊಂದು ಆಸಕ್ತಿಯ ಕ್ಷೇತ್ರ. ಕಾಡಿನಲ್ಲಿರುವ ಮರಗಳು, ಪಕ್ಷಿಗಳು, ಪ್ರಾಣಿಗಳು, ಉದ್ಯಾನವನಗಳಲ್ಲಿ ಕಾಣುವ ಚಿಟ್ಟೆಗಳನ್ನು ಅತ್ಯಂತ ಕುತೂಹಲದಿಂದ ಗಮನಿಸುತ್ತಾರೆ. ಉಡುಮಲೈಪೆಟ್ಟೈ ಅರಣ್ಯಗಳ ಹೆಬ್ಬಾಗಿಲು ಲೇಖನದಲ್ಲಿ ಇಲ್ಲಿನ ರಮಣೀಯ ಸೌಂದರ್ಯ, ಆಹ್ಲಾದಕರ ಹವಾಮಾನ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಗುರುತಿಸುತ್ತಾರೆ. ವರ್ತಮಾನದಲ್ಲಿ ಇಲ್ಲಿ ಹಲವಾರು ಸಣ್ಣ ಮತ್ತು ಮಧ್ಯಮಗಾತ್ರದ ಕೈಗಾರಿಕೆಗಳು ಕಾರ್ಯನಿರ್ವಹಿಸುತ್ತಿವೆ, ಕೈಗಾರಿಕೀಕರಣದ ಕಡೆಗೆ ಈ ಊರು ಬದಲಾಗುತ್ತಿದೆ ಎಂದು ಗುರುತಿಸುತ್ತಾರೆ. ಅಣ್ಣಾಮಲೈ ಹುಲಿಸಂರಕ್ಷಿತ ಅರಣ್ಯ, ಚಿನ್ನಾರ್ ವನ್ಯಜೀವಿ ಅಭಯಾರಣ್ಯ, ಇರವಿಕ್ಕುಳಂ ರಾಷ್ಟ್ರೀಯ ಉದ್ಯಾನವನ, ಕಾರ್ಮಿಲಗಿರಿ ಬೊಟಾನಿಕಲ್ ಉದ್ಯಾನವನ, ಕಾರ್ಮೆಲಗಿರಿ ಆನೆ ಉದ್ಯಾನವನ, ಕೆ.ಎಫ್.ಡಿ.ಸಿ. ಪ್ಲೋರಿಕಲ್ಚರ್ ಸೆಂಟರ್ ಮುಂತಾದ ಲೇಖನಗಳು ಸಸ್ಯಸಂಪತ್ತಿನ ಬಗ್ಗೆ ಲೇಖಕರಿಗೆ ಇರುವ ಅದಮ್ಯ ಪ್ರೀತಿಯನ್ನು ಸೂಚಿಸುತ್ತದೆ. ಪ್ರಾಕೃತಿಕ ಸೌಂದರ್ಯವನ್ನು ವಣ ðಸುವ ಸಂದರ್ಭದಲ್ಲಿ ನವೀನ ಅವರ ಮನಸ್ಸು ಉತ್ಸಾಹದ ಬುಗ್ಗೆಯಾಗುತ್ತದೆ. ‘ಪ್ರವಾಸಿಗರ ಸ್ವರ್ಗ ಮುನ್ನಾರ್’ ಲೇಖನದ ನಾಲ್ಕು ಮಾತುಗಳನ್ನು ಇಲ್ಲಿ ಗಮನಿಸಬಹುದು.

“ಹಸುರು ಬೆಟ್ಟಗಳ ಮೇಲೆ ಕವಿಯುವ ಮಂಜು. ತಾಜಾ ಗಾಳಿ ಹೊರಸೂಸುವ ಚಹಾ ಪರಿಮಳ. ಅಸಂಖ್ಯ ಜಲಪಾತಗಳು ಹೊರಡಿಸುವ ದೊಡ್ಡ ಧ್ವನಿ. ಎಲ್ಲಿ ನೋಡಿದರೂ ಶೃಂಗಾರಗೊಂಡು ಅಪ್ರತಿಮ ಚೆಲುವೆಯರಂತೆ ನಿಂತ ಚಹಾತೋಟಗಳು. ಎತ್ತರೆತ್ತರ ಶಿಖರಗಳು ಆಕಾಶದತ್ತ ನಾಚಿ ಚುಂಬಿಸುತ್ತಿರುವಂತೆ ಕಾಣುವ ಭೂದೃಶ್ಯ. ಜೀವಂತ ಚಿತ್ರಕಲೆಯನ್ನೇ ನೋಡುತ್ತಿರುವಂತೆ ಭಾಸವಾಗುವ ಸೊಬಗಿನ ಪ್ರದೇಶಗಳು. ಪ್ರತೀ ನೋಟವೂ ನೀಡುವ ಅಪೂರ್ವ ದೃಷ್ಟಿಕೋನ ನೈಸರ್ಗಿಕ ಅದ್ಭುತಗಳೇ ಮೇಳೈಸಿರುವ ಇದು ಮುನ್ನಾರ್ !” ಇಲ್ಲಿನದು ಕಾವ್ಯಾತ್ಮಕ ಶೈಲಿ.

ಮುನ್ನಾರ್ ಪ್ರದೇಶದಲ್ಲಿ ವಾಸಮಾಡುತ್ತಿರುವ ಬುಡಕಟ್ಟು ಸಮುದಾಯ, 1924ರಲ್ಲಿ ಬಂದ ಪ್ರವಾಹ, 2019ರಲ್ಲಿ ಬಂದ ಹಠಾತ್ ಪ್ರವಾಹ, ಭೂಕುಸಿತದ ವಿವರಗಳನ್ನು ನೀಡುತ್ತ ಪ್ರಾಕೃತಿಕವಾಗಿ ಆದ ಬದಲಾವಣೆಯನ್ನು ಗುರುತಿಸುತ್ತಾರೆ. ಚಹಾತೋಟಗಳ ಸೃಷ್ಟಿಯಿಂದ ಮುನ್ನಾರಿನ ಬಹುತೇಕ ಸ್ಥಳೀಯ ಸಸ್ಯ ಮತ್ತು ಪ್ರಾಣಿಗಳು ಕಣ್ಮರೆಯಾಗಿರುವುದನ್ನು ವಿಷಾದದಿಂದ ಗುರುತಿಸುತ್ತಾರೆ. ಈ ಸಂದರ್ಭದಲ್ಲಿ ಜೀವವೈವಿಧ್ಯವನ್ನು ಸಂರಕ್ಷಿಸುವ ಮತ್ತು ಮಾನವ ಚಟುವಟಿಕೆಗಳನ್ನು ಸಮತೋಲನದಲ್ಲಿ ನಿರ್ವಹಿಸುವ ಅನಿವಾರ್ಯತೆಯಿದೆ. ಬಹಳ ಸೂಕ್ಷ್ಮವಾಗಿ ಇಲ್ಲಿ ಅಭಿವೃದ್ಧಿಗಳನ್ನು ಮಾಡಬೇಕಾದ ಪರಿಸ್ಥಿತಿಯಿದೆ ಎಂಬ ಅಭಿಪ್ರಾಯ ಲೇಖಕರದು. ಅಭಿವೃದ್ಧಿ ಮತ್ತು ಪ್ರಕೃತಿಯ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಲೇಖಕರು ಅತ್ಯಂತ ಕಳಜಿಯಿಂದ ಗುರುತಿಸುತ್ತಾರೆ. ಮುನ್ನಾರಿನ ಟೀ ಫ್ಯಾಕ್ಟರಿಯನ್ನು ವಿವರಿಸುವ ಸಂದರ್ಭದಲ್ಲಿ ಮುನ್ನಾರಿಗೆ ಬ್ರಿಟಿಷರ ಕಾಲದಲ್ಲಿ ಟೀಬಂದ ಇತಿಹಾಸವನ್ನು ದಾಖಲಿಸುತ್ತಾರೆ.

ಹೌಸ್‌ಬೋಟ್ ಎಂಬ ಅದ್ಭುತ ಅನುಭವ, ಸಂಜೆಯ ವೇಳೆಗೆ ಅಲೆಪ್ಪಿ ಬೀಚ್ ಎಂಬ ಲೇಖನಗಳು ಅತ್ಯಂತ ಲವಲವಿಕೆಯಿಂದ ಓದಿಸಿಕೊಂಡು ಹೋಗುತ್ತದೆ. ತಮ್ಮ ಲೇಖನದ ನಡುವೆ ಸಾಂದರ್ಭಿಕವಾಗಿ ಸರಿಹೊಂದುವ ಕನ್ನಡ ಕವಿಗಳ ಸಾಲುಗಳನ್ನು ಉಲ್ಲೇಖಿಸುವುದು ಲೇಖಕರಿಗಿರುವ ಸಾಹಿತ್ಯ ಬಗೆಗಿನ ಅಭಿರುಚಿಯನ್ನು ಸೂಚಿಸುತ್ತದೆ. ಕೃತಿಯ ಕೊನೆಯಲ್ಲಿ ಬರುವ ಈಶಾ ಯೋಗಕೇಂದ್ರ, ಲೇಖನದಲ್ಲಿ ಅಲ್ಲಿನ ಸಂಪ್ರದಾಯ, ಆಚರಣೆಗಳ ಸಮಗ್ರ ವಿವರಗಳಿವೆ.

ಇಡಿಯಾಗಿ ಕೃತಿಯನ್ನು ಗಮನಿಸಿದರೆ ಲೇಖಕರ ಸೂಕ್ಷ್ಮಗ್ರಹಿಕೆ, ಪರಿಸರದ ಮೇಲಿನ ಪ್ರೀತಿ ನಿಚ್ಚಳವಾಗಿ ಕಾಣುತ್ತದೆ. ಇದೇ ಹೊತ್ತಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಾದಂತೆಲ್ಲ ಪರಿಸರದ ಮೂಲಸ್ವರೂಪಕ್ಕೆ ಧಕ್ಕೆಯಾಗುತ್ತಿರುವುದರ ಬಗೆಗೆ ಲೇಖಕರಿಗೆ ವಿಷಾದವಿದೆ. ಕೇರಳದ ಪಾಲಕ್ಕಾಡ್ ಪರಿಸರದ ಸಮಗ್ರ ಚಿತ್ರಣ ಈ ಕೃತಿಯಲ್ಲಿ ಸಿಗುತ್ತದೆ.

ಒಂದು ಸ್ಥಳೀಯ ಸಂಸ್ಕೃತಿ, ಪ್ರಾದೇಶಿಕ ಪರಿಸರವನ್ನು ಹೇಗೆ ಗಮನಿಸಬಹುದು ಎಂಬುದಕ್ಕೆ 'ಅಲೆದಾಟದ ಅಂತರಂಗ' ಒಂದು ಉತ್ತಮ ಮಾದರಿ ಕೃತಿ ಎಂಬುದರಲ್ಲಿ ಸಂಶಯವಿಲ್ಲ. ಈ ಕೃತಿ ಕೇವಲ ಒಂದು ಪ್ರದೇಶದ ವಿವರಗಳನ್ನು ಕಟ್ಟಿಕೊಡುವುದಿಲ್ಲ; ಬದಲಾಗಿ ಒಂದು ನಾಡಿನ ಸಾಂಸ್ಕೃತಿಕ ಆತ್ಮವನ್ನು ನಮ್ಮೆದುರು ತೆರೆದಿಡುತ್ತದೆ. ಅಭಿವೃದ್ಧಿ, ಪ್ರಕೃತಿ ಮತ್ತು ಮಾನವನ ನಡುವೆ ಇರಬೇಕಾದ ಸಂಬಂಧದ ಸೂಕ್ಷ್ಮಗಳನ್ನು ಕಥನದ ರೀತಿಯಲ್ಲಿ ತೆರೆದಿಡುತ್ತದೆ. ಕನ್ನಡ ಪ್ರವಾಸ ಸಾಹಿತ್ಯದ ವೈವಿಧ್ಯ ಮತ್ತು ಸತ್ವವನ್ನು ಇಂಥ ಕೃತಿಗಳು ಹೆಚ್ಚಿಸಿವೆ. ಆಧುನಿಕ ಕನ್ನಡ ಸಾಹಿತ್ಯದ ವೈವಿಧ್ಯವನ್ನು ಹೆಚ್ಚಿಸುವಲ್ಲಿ ಪ್ರವಾಸ ಸಾಹಿತ್ಯದ ಕೊಡುಗೆಯೂ ಇದೆ ಎಂದು ಧಾರಾಳವಾಗಿ ಹೇಳಬಹುದು.

- ಡಾ. ಶ್ರೀಧರ ಎಚ್.ಜಿ.
ಕುಲಸಚಿವರು, ಪರೀಕ್ಷಾಂಗ, ವಿವೇಕಾನಂದ ಕಾಲೇಜು, (ಸ್ವಾಯತ್ತ) ಪುತ್ತೂರು ದ.ಕ.

MORE FEATURES

ಭಾವೈಕ್ಯ ಭಾರತ ನಿರ್ಮಾಣಕ್ಕೆ ದಾರಿ ತೋರುವ ಮಹಾನ್ ಗ್ರಂಥ `ತೌಲನಿಕ ಧರ್ಮ ದರ್ಶನ’

29-11-2024 ಬೆಂಗಳೂರು

“ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ...

ಅಮ್ಮನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಕೃತಿಯಿದು

29-11-2024 ಬೆಂಗಳೂರು

"ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯ...

ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿಯಿದು

29-11-2024 ಬೆಂಗಳೂರು

"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ...