ಭಾವೈಕ್ಯ ಭಾರತ ನಿರ್ಮಾಣಕ್ಕೆ ದಾರಿ ತೋರುವ ಮಹಾನ್ ಗ್ರಂಥ `ತೌಲನಿಕ ಧರ್ಮ ದರ್ಶನ’


“ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ, ಸಾಧನಾಮಾರ್ಗಗಳನ್ನು ಕುರಿತು ವಿವರವಾಗಿ ಗ್ರಂಥದಲ್ಲಿ ಲಿಖಿಸಲಾಗಿದೆ,” ಎನ್ನುತ್ತಾರೆ ಪ್ರಕಾಶ ಗಿರಿಮಲ್ಲನವರ ಅವರು ತೋಂಟದ ಸಿದ್ದರಾಮಯ್ಯ ಸ್ವಾಮಿ ಅವರ “ತೌಲನಿಕ ಧರ್ಮ ದರ್ಶನ” ಕೃತಿ ಕುರಿತು ಬರೆದ ವಿಮರ್ಶೆ.

ಜಗತ್ತಿನ ಬಹುತೇಕ ಜನರನ್ನು ಆಕರ್ಷಿಸಿದ ಒಂದು ವಿಷಯವೆಂದರೆ- ‘ಧರ್ಮ’. ಚಾರ್ವಾಕ, ಜೈನ, ಬೌದ್ಧದಂತಹ ನಿರೀಶ್ವರವಾದಿ ಧರ್ಮಗಳು ಹುಟ್ಟಿದರೂ ಧರ್ಮದ ಪರೀಧಿಯಿಂದ ಹೊರಹೋಗಲಾಗಲಿಲ್ಲ. ಈ ಹಿನ್ನೆಲೆಯಲ್ಲಿ ಆಸ್ತಿಕನೇ ಇರಲಿ, ನಾಸ್ತಿಕನೇ ಇರಲಿ, ಎಲ್ಲರೂ ಧರ್ಮದ ವರ್ತುಲದಲ್ಲಿಯೇ ಬದುಕು ಸಾಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಧರ್ಮದ ಕುರಿತು ಚಿಂತನೆಗಳು ಐದು ಸಾವಿರ ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಹೀಗಿದ್ದೂ ಧರ್ಮದ ನಿಜವಾದ ಸ್ವರೂಪ ಇನ್ನೂ ನಿಗೂಢವಾಗಿಯೇ ಉಳಿದಿದೆ. ಭಾರತದಲ್ಲಿ ಹುಟ್ಟಿದ ಅನೇಕ ಧರ್ಮಗಳ ಜೊತೆಗೆ ವಿದೇಶದಲ್ಲಿ ಹುಟ್ಟಿದ ಕ್ರೈಸ್ತ, ಇಸ್ಲಾಂ ಮೊದಲಾದ ಧರ್ಮಗಳು ಇಂದು ಭಾರತವನ್ನು ಆವರಿಸಿಕೊಂಡಿವೆ. ಹೀಗಾಗಿ ಭಾರತವು ಸರ್ವಧರ್ಮ ಸಮನ್ವಯದ ಸೇತುವೆಯಾಗಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಜಗತ್ತಿಗೆ ಒಂದು ಆದರ್ಶವನ್ನು ನೀಡುವ ದೇಶವಾಗಿದೆ. ಅಂತೆಯೇ ಸರ್ವಧರ್ಮ ಸಮನ್ವಯ, ಧರ್ಮ ನಿರಪೇಕ್ಷತಾವಾದ, ಮಾನವತಾವಾದ ಮೊದಲಾದ ಚಿಂತನೆಗಳು ಭಾರತದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಆದರೆ ಸಾಧಿಸುವ ಮಾರ್ಗಗಳು ಭಿನ್ನ ಎಂಬ ಹಿನ್ನೆಲೆಯಲ್ಲಿ ಬಿಹಾರ ಬೋಧಗಯಾ ಮಗಧ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾದ ಪ್ರೊ. ಯಾಕೂಬ್ ಮಸೀಹ್ ಅವರು ಬರೆದ ‘ತುಲನಾತ್ಮಕ್ ಧರ್ಮ ದರ್ಶನ್’ ಕೃತಿ ಒಂದು ಮೌಲಿಕ ಆಕರ ಗ್ರಂಥವಾಗಿದೆ. ಈ ಮಹತ್ವದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ನಮ್ಮ ನಾಡಿನ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಗದುಗಿನ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠದ ಪೂಜ್ಯ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು.

ಹಿಂದಿ ಭಾಷೆಯಲ್ಲಿ ಅಗಾಧವಾದ ಪಾಂಡಿತ್ಯವನ್ನು ಸಂಪಾದಿಸಿದ ಪೂಜ್ಯ ಶ್ರೀಗಳು ಈ ಹಿಂದೆ ವಿನೋಬಾ ಭಾವೆ ಅವರ ‘ಭಕ್ತಿದರ್ಶನ’, ‘ಇಸ್ಲಾಂ ಧರ್ಮದ ಸಂದೇಶ’, ಚಂದ್ರಧರ ಶರ್ಮ ಅವರ ‘ಭಾರತೀಯ ತತ್ವಶಾಸ್ತ್ರ ಮೊದಲಾದ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಭಾರತೀಯ ತತ್ವಶಾಸ್ತ್ರ'’ ಕೃತಿಗೆ ಕುವೆಂಪು ಭಾಷಾ ಭಾರತಿ ಶ್ರೇಷ್ಠ ಅನುವಾದ ಕೃತಿ ಎಂಬ ಪ್ರಶಸ್ತಿ ಪ್ರಾಪ್ತವಾಗಿತ್ತು. ಈ ವರ್ಷ ಪೂಜ್ಯರು ರಚಿಸಿದ ‘ತೌಲನಿಕ ಧರ್ಮ ದರ್ಶನ’ ಕೃತಿಗೆ ಕುವೆಂಪು ಭಾಷಾ ಭಾರತಿಯ ಶ್ರೇಷ್ಠ ಅನುವಾದ ಪ್ರಶಸ್ತಿ ಲಭ್ಯವಾಗಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ.

ಬಾಗಲಕೋಟೆಯಲ್ಲಿ ೨೦೨೩ರಲ್ಲಿ ಜರುಗಿದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪೂಜ್ಯ ಶ್ರೀ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಯ್ಕೆ ಆದ ಸಂದರ್ಭದಲ್ಲಿ, ಸಮ್ಮೇಳನದಲ್ಲಿ ಈ ಕೃತಿ ಲೋಕಾರ್ಪಣೆಗೊಂಡಿತು. ಕರೋನಾ ಸಂಕಷ್ಟ ಕಾಲದಲ್ಲಿ ಜಗತ್ತು ಬಂಧಿಯಾಗಿದ್ದ ಸಂದರ್ಭದಲ್ಲಿ ಶ್ರೀಗಳು ಸದ್ದುಗದ್ದಲವಿಲ್ಲದೆ ಪ್ರಸ್ತುತ ಬೃಹತ್ ಗ್ರಂಥವನ್ನು ಕನ್ನಡಕ್ಕೆ ಅನುವಾದಿಸಿ, ಕನ್ನಡ ಸಾರಸ್ವತ ಪ್ರಪಂಚಕ್ಕೆ ಮಹದುಪಕಾರ ಮಾಡಿದ್ದಾರೆ. ಈ ಕೃತಿಯ ಅನುವಾದದ ಔಚಿತ್ಯವನ್ನು ಕುರಿತು ಶ್ರೀಗಳು ಹೇಳುವ ನುಡಿಗಳು ಹೀಗಿವೆ:

‘ಜಾಗತಿಕ ಧರ್ಮಗಳ ಅಧ್ಯಯನ, ಧರ್ಮನಿರಪೇಕ್ಷತೆ, ಸರ್ವಧರ್ಮಗಳ ಸಮನ್ವಯ, ಧರ್ಮ ಸಹಿಷ್ಣುತೆ, ಮಾನವತಾವಾದ ಮತ್ತು ಧರ್ಮಗಳ ಏಕತೆ ಮುಂತಾದ ವಿಷಯಗಳನ್ನು ಕುರಿತು ಪ್ರಸ್ತುತ ಕೃತಿಯಲ್ಲಿ ಪ್ರೊ. ಯಾಕೂಬ್ ಮಸೀಹ್ ಅವರು ತಲಸ್ಪರ್ಶಿ ಅಧ್ಯಯನ ನಡೆಸುವುದಲ್ಲದೆ ವಿಮರ್ಶೆಗೂ ಒಳಪಡಿಸಿದ್ದಾರೆ. ಒಂದು ರೀತಿಯಲ್ಲಿ ಇದು ತೌಲನಿಕ ಅಧ್ಯಯನದ ಜೊತೆಗೆ ವಿಮರ್ಶಾತ್ಮಕ ಅಧ್ಯಯನವೂ ಆಗಿದೆ. ಎಲ್ಲ ಧರ್ಮಗಳಲ್ಲಿ ಸಾಮರಸ್ಯವನ್ನು ಉಂಟು ಮಾಡುವುದು ಇಂದಿನ ಅಗತ್ಯವೆಂಬುದನ್ನು ಅರಿತು ಈ ದಿಶೆಯಲ್ಲಿ ಅದ್ವೈತ ಸಿದ್ಧಾಂತವನ್ನು ಕುರಿತು ಅವರು ವಿಶೇಷವಾಗಿ ಉಲ್ಲೇಖಿಸಿದ್ದಾರೆ. ಜಗತ್ತಿನ ಎಂಟು ಧರ್ಮಗಳು ಪ್ರತಿಪಾದಿಸಿದ ದೇವರು, ಜಗತ್ತು, ಜೀವ, ಸ್ವರ್ಗ- ನರಕಗಳ ಪರಿಕಲ್ಪನೆ, ಕರ್ಮ-ಪುನರ್ಜನ್ಮ, ಸಾಧನಾಮಾರ್ಗಗಳನ್ನು ಕುರಿತು ವಿವರವಾಗಿ ಗ್ರಂಥದಲ್ಲಿ ಲಿಖಿಸಲಾಗಿದೆ’. ಇಡೀ ಕೃತಿಯ ಸಾರವನ್ನು ಸಂಕ್ಷಿಪ್ತವಾಗಿ ಶ್ರೀಗಳು ಇಲ್ಲಿ ಕಟ್ಟಿಕೊಟ್ಟಿದ್ದಾರೆ.

ಕೃತಿಯು ಒಟ್ಟು ಹದಿನಾರು ಅಧ್ಯಾಯಗಳಲ್ಲಿ ವಿಸ್ತಾರಗೊಂಡಿದೆ. ಧರ್ಮಗಳ ತೌಲನಿಕ ಅಧ್ಯಯನದ ಸ್ವರೂಪ, ಆಧಾರ ಮತ್ತು ಗುರಿಯಿಂದ ಪ್ರಾರಂಭವಾಗಿ, ಭಾರತೀಯ ಧರ್ಮ ಪರಂಪರೆ ಮತ್ತು ಹಿಂದೂಧರ್ಮ, ಜೈನ ಧರ್ಮ, ಬೌದ್ಧ ಧರ್ಮ, ಸಿಖ್ಖ ಧರ್ಮ, ಪಾರಸೀ ಧರ್ಮ, ಯಹೂದಿ ಧರ್ಮ, ಕ್ರೈಸ್ತ ಧರ್ಮ, ಇಸ್ಲಾಂ ಧರ್ಮಗಳ ಹುಟ್ಟು ಬೆಳವಣಿಗೆ, ತತ್ವ ಸಿದ್ಧಾಂತಗಳ ಕುರಿತು ಅಧಿಕೃತವಾದ ಮಾಹಿತಿಗಳನ್ನು ದಾಖಲಿಸಿದ್ದಾರೆ. ಆಯಾ ಧರ್ಮಗಳ ಬಗ್ಗೆ ಓದಿದಾಗ, ಆ ಧರ್ಮದ ಬಗೆಗೆ ಓದುಗರಲ್ಲಿ ಗೌರವ ಭಾವ ಬರುವ ರೀತಿಯಲ್ಲಿ ಭಾಷೆಯನ್ನು ಬಳಸಿದ್ದಾರೆ.

ಭಾರತದಲ್ಲಿ ಇಂದು ಹೆಚ್ಚು ನಡೆಯುತ್ತಿರುವುದು ಹಿಂದು ಮುಸ್ಲಿಂ ಗಲಾಟೆ. ಈ ವಿಷಯವಾಗಿ ಪರಿಹಾರೋಪಾಯದ ಅನೇಕ ಚಿಂತನೆಗಳನ್ನು ಇಲ್ಲಿ ಕೊಡಲಾಗಿದೆ. ಭಾರತೀಯ ಹಿಂದೂ ಚಿಂತಕರು ಈ ವಿಷಯದಲ್ಲಿ ಮಾಡಿದ ಪ್ರಯತ್ನಗಳನ್ನು ಇಲ್ಲಿ ಉದಾಹರಿಸಲಾಗಿದೆ.

‘ಇಸ್ಲಾಮಿನ ಆಘಾತವನ್ನು ಎದುರಿಸುವುದಕ್ಕಾಗಿ ಭಕ್ತಿಗಂಗೆಯ ಪ್ರವಾಹವೇ ಹರಿದಿತ್ತು. ಇದೇ ರೀತಿ ೧೯ನೇ ಶತಮಾನದಲ್ಲಿ ಕ್ರೈಸ್ತ ಧರ್ಮವು ಹಿಂದುತ್ವವನ್ನು ಆಹ್ವಾನಿಸಿ ಕೆರಳಿಸಿತು. ಈ ಕ್ರೈಸ್ತ ಧರ್ಮವನ್ನು ಎದುರಿಸುವುದಕ್ಕಾಗಿ ಸನಾತನ ಹಿಂದೂಧರ್ಮವು ತನ್ನ ವಿಶ್ವವ್ಯಾಪಿ ರೂಪವನ್ನು ಪ್ರಕಟಿಸಿತು. ಬ್ರಹ್ಮಸಮಾಜ, ಶ್ರೀರಾಮಕೃಷ್ಣಾಶ್ರಮ, ಆರ್ಯಸಮಾಜ ಮುಂತಾದವು ಸನಾತನ ಹಿಂದೂ ಧರ್ಮದ ಬಗ್ಗೆ ಜನರು ಯೋಚಿಸುವಂತೆ ಮಾಡಿದ ಕ್ರಾಂತಿಗಳಾಗಿವೆ. (ಪು. ೭೯)

ರಾಜಾರಾಮ ಮೋಹನರಾಯರು ಇಸ್ಲಾಮಿನ ಏಕೇಶ್ವರವಾದ ಮತ್ತು ಕ್ರೈಸ್ತರ ನೈತಿಕತೆಯನ್ನು ಅವರು ಉಪನಿಷತ್ತುಗಳಲ್ಲಿ ಗುರುತಿಸಿದರು. ಆದ್ದರಿಂದ ಉಪನಿಷತ್ತುಗಳ ಜ್ಞಾನಾಧಾರಿತ ವಿಶ್ವವ್ಯಾಪೀ ಹಿಂದುತ್ವದ ಸ್ಥಾಪನೆಯನ್ನು ರಾಜಾರಾಮ ಮೋಹನರಾಯರು ಮಾಡಿದರು. (ಪು. ೮೦) ‘ರಾಮಕೃಷ್ಣ ಪರಮಹಂಸರು ‘ಎಲ್ಲ ಧರ್ಮಗಳೂ ಸತ್ಯ, ಅವೆಲ್ಲವೂ ಒಂದೇ ಅಂತಿಮ ಸ್ಥಿತಿಯನ್ನು ಹೊಂದುವ ವಿಭಿನ್ನ ಮಾರ್ಗಗಳಾಗಿವೆ’ ಪು. ೮೨) ರಾಮಕೃಷ್ಣರು ಈ ವಿಶ್ವಧರ್ಮ ವಿಶ್ವಸೌಹಾರ್ದ ಮತ್ತು ವಿಶ್ವಕಲ್ಯಾಣದ ಸಂದೇಶವನ್ನು ಸಾರಲು ತಮ್ಮ ಪರಮ ಶಿಷ್ಯ ವಿವೇಕಾನಂದರನ್ನು ಸಿದ್ಧಗೊಳಿಸಿದ ವಿವರಣೆಗಳನ್ನು ತುಂಬ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದಾರೆ.

ಜೈನ, ಬೌದ್ಧ ಮತ್ತು ಹಿಂದೂ ಧರ್ಮಗಳಲ್ಲಿರುವ ಸಾಮ್ಯ-ವೈಷಮ್ಯಗಳನ್ನು ಕುರಿತು ತಲಸ್ಪರ್ಶಿಯಾದ ಚಿಂತನೆಗಳನ್ನು ನೀಡಿದ್ದಾರೆ.

‘ಗುರುನಾನಕರು ಮೂರ್ತಿಪೂಜೆ, ಧರ್ಮಾಂಧತೆ, ವರ್ಣವಿಚಾರಗಳ ಹಿನ್ನೆಲೆಯಲ್ಲಿ ನಡೆಯುವ ಸಾಮಾಜಿಕ ಬಹಿಷ್ಕಾರ ಅಥವಾ ಜಾತಿಯ ಆಧಾರದಲ್ಲಿ ನಡೆಸುವ ಏಕಾಧಿಕಾರ, ಸತಿಪದ್ಧತಿ, ಮಾದಕ ವಸ್ತುಗಳ ಸೇವನೆ, ತಂಬಾಕು, ತೀರ್ಥಕ್ಷೇತ್ರಗಳಿಗೆ ತೀರ್ಥಯಾತ್ರೆ ಹೊರಡುವುದು ಇದೇ ಮೊದಲಾದವುಗಳ ವಿರುದ್ಧ ಧ್ವನಿ ಎತ್ತಿದರು. ಸತ್ಯ, ನ್ಯಾಯ, ಪ್ರಾಮಾಣಿಕತೆ, ದಾನ, ಪಕ್ಷಪಾತವಿಲ್ಲದಿರುವ ಭಾವ, ಕೃತಜ್ಞತೆ ಮುಂತಾದವುಗಳ ಪರವಾಗಿ ತಮ್ಮ ಅಭಿಪ್ರಾಯಗಳನ್ನು ಸ್ಪಷ್ಟಪಡಿಸಿದರು. ಗುರುನಾನಕರು ಇಸ್ಲಾಂ ಮತ್ತು ಹಿಂದೂ ಧರ್ಮಗಳಲ್ಲಿರುವ ಧರ್ಮಾಂಧತೆ ಮತ್ತು ಕೆಟ್ಟ ಆಚರಣೆಗಳನ್ನು ದೂರ ಮಾಡಿ ಎರಡೂ ಧರ್ಮಗಳಲ್ಲಿರುವ ಒಳ್ಳೆಯ ವಿಚಾರಗಳನ್ನು ಸಂರಕ್ಷಣೆ ಮಾಡುವ ಪ್ರಯತ್ನ ಮಾಡಿದರು.’ (ಪು. ೧೭೪) ಈ ವಿವರಗಳನ್ನು ಗಮನಿಸಿದರೆ ಲಿಂಗಾಯತ ಧರ್ಮಕ್ಕೂ ಸಿಖ್ ಧರ್ಮಕ್ಕೂ ಎಷ್ಟು ಸಾಮ್ಯತೆ ಇದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ.

ಕ್ರೈಸ್ತ ಧರ್ಮ ಮತ್ತು ಹಿಂದೂ ಧರ್ಮದ ಹೋಲಿಕೆ ಕುರಿತು ಲೇಖಕರ ನಿರ್ಣಯಗಳು ತುಂಬ ಮೌಲಿಕವಾಗಿವೆ. ‘ಭಗವದ್ಗೀತೆ, ರಾಮಾನುಜ ಮತ್ತು ಭಕ್ತಿಯಲ್ಲಿ ನಿಹಿತವಾದ ಸೇಶ್ವರವಾದವನ್ನು ಗಮನದಲ್ಲಿಟ್ಟುಕೊಂಡು ಹಿಂದೂ ಮತ್ತು ಕ್ರೈಸ್ತ ಧರ್ಮಗಳನ್ನು ಜೋಡಿಸಬಹುದಾಗಿದೆ. ಏಕೆಂದರೆ ಈ ಎರಡರಲ್ಲಿ ಏಕೇಶ್ವರವಾದ, ಅವತಾರವಾದ, ಅನುಗ್ರಹಾವಲಂಬಿತ ಮೋಕ್ಷ ಮತ್ತು ಸ್ವರ್ಗಪ್ರಾಪ್ತಿಯ ಸಿದ್ಧಾಂತಗಳನ್ನು ಗುರುತಿಸಲಾಗಿದೆ. ಈ ಮೇಲಿನ ಮಾತುಗಳಲ್ಲಿ ಸಾಮ್ಯವಿದ್ದರೂ ಈ ಎರಡುರ ಮಧ್ಯದಲ್ಲಿ ಅಂತರ(ವೈಷಮ್ಯ)ವೂ ಉಂಟು’ (ಪು. ೨೫೬) ಎಂದು ಹತ್ತು ಪ್ರಮುಖ ಅಂಶಗಳನ್ನು ತೌಲನಿಕವಾಗಿ ನಿರೂಪಿಸಿದ್ದಾರೆ.

ಶ್ರೀಗಳು ಮಾಡಿದ ಕನ್ನಡ ಅನುವಾದವು ಎಷ್ಟು ಶ್ರೇಷ್ಠಮಟ್ಟದ್ದು, ಗುಣಮಟ್ಟದ್ದು ಎಂಬುದನ್ನು ಗಮನಿಸಲು ಮೂಲ ಹಿಂದಿಯ ಒಂದು ಚಿಕ್ಕ ವಿಷಯವನ್ನು ಇಲ್ಲಿ ನೋಡಬಹುದು. ಪಾರಸೀ ಧರ್ಮವನ್ನು ಕುರಿತು ಹೇಳುವ ಸಂದರ್ಭದಲ್ಲಿ, ಆ ಧರ್ಮದಲ್ಲಿ ಬರುವ ‘ಅಹರಿಮನ್’ ಸ್ವರೂಪವನ್ನು ಕುರಿತು ಮೂಲ ಲೇಖಕರ ಪಠ್ಯ ಮತ್ತು ಅನುವಾದ ಪಠ್ಯವನ್ನು ಇಲ್ಲಿ ಕೊಡಲಾಗಿದೆ.

इस अहरिमन के स्वरूप को इस प्रकार वर्णित किया जा सकता है ।

'अहरिमन ईश्वर का विरोधी, मानवों का शत्रु, झूठ का रचयिता, धोखेबाज एवं विश्वासघाती, राक्षसों का सरदार और नरक का स्वामी है ।'

यह ठोक है कि जराथुस्त्रा ने आन्तरिक वासनाओं को मानव का शत्रु माना है, पर अशुभ की व्यावहारिक वास्तविकता भी स्वीकार की है । युंग के अनुसार बुराई वास्तव में मानव में रहती हैं, पर मानव के लिए इस बात को स्वीकार करना दुःखमय प्रतीत होता है । इसलिये प्रायः मानव अपने मन की बुराइयों पर विजय प्राप्त करने के लिये वे उनका ( बुराइयों का ) बाह्यारोपण कर देते हैं । अतः जिसे अहरिमन कहा गया है वह वास्तव में मानव में अन्तर्निहित कुत्सित भावमायें ही हैं जो शुभ अहूर मज़्दा के आदेश को पालन करने में रोड़े अँटकाती रहती हैं । ठीक इसके विपरीत भारतीय परम्परा है जिसके अनुसार तृष्णा ही मानव की सबसे बड़ी बाधा है जिसके कारण मानव अपना मोक्ष नहीं प्राप्त कर सकता है । अतः भारतीय परम्परा के अनुसार, मानव को अपनी साधना के आधार पर आन्तरिक तृष्णा और उसके वासस्थान 'अहंभाव' को हटाने पर ही मोक्ष प्राप्त हो सकता है ।

यह ठोक है कि नैतिक जीवन पर ध्यान देने से है । पर पारसी धर्म में अहूर मज़्दा और अहरिमन के चाहिये, क्योंकि अन्त में अहरिमन का विलयन हो जाता है। अशुभ की वास्तविकता स्पष्ट हो जाती द्वैत को अन्तिम तत्त्व नहीं स्वीकारना जिस प्रकार भारतीय धर्मदर्शन सान्त माना जाता है, पर इसे अन्तिम सत्ता में अज्ञान की व्यावहारिक वास्तविकता मान ली जाती है, पर इसे ठीक उसी प्रकार अशुभ की व्यावहारिक वास्तविकता पायी जाती है, नहीं स्वीकारा गया है, क्योंकि अहरिमन के विनाश और अहूर मज्दा की अन्तिम विजय की बात कही गयी है । इसलिये अन्त में अहूर मज़्दा को अन्तिम, अनन्त, नित्य, स्वयम्भू (खुदा अर्थात् जो खुद से हो ) सत्ता ही स्वीकारी गयी हैं । अतः, पारसी धर्म वास्तव में एकेश्वरवादी ही है ।

ಈ ‘ಅಹರಿಮನ’ನ ಸ್ವರೂಪವನ್ನು ಹೀಗೆ ವರ್ಣಿಸಲಾಗಿದೆ. ‘ಅಹರಿಮನ್‌ನು ಈಶ್ವರನ ವಿರೋಧಿ, ಮನುಷ್ಯನ ಶತ್ರು, ಮಿಥ್ಯೆಯನ್ನು ಸೃಷ್ಟಿಸುವವ, ವಿಶ್ವಾಸಘಾತಿ ಮತ್ತು ಮೋಸಗಾರ, ರಾಕ್ಷಸರ ರಾಜ ಮತ್ತು ನರಕದ ಒಡೆಯನಾಗಿದ್ದಾನೆ.’

ಝರತುಷ್ಟ್ರನು ಅಂತರಂಗದ ವಾಸನೆಗಳನ್ನು ಮನುಷ್ಯನ ಶತ್ರು ಎಂದು ಹೇಳಿದ್ದರೂ ಅಶುಭದ ವ್ಯಾವಹಾರಿಕ ಅಸ್ತಿತ್ವವನ್ನು ಒಪ್ಪಿಕೊಂಡಿದ್ದಾನೆ. ‘ಯುಂಗ್’ನ ಪ್ರಕಾರ ಅಶುಭ(ಕೆಟ್ಟದ್ದು)ವು ವಾಸ್ತವದಲ್ಲಿ ಮಾನವನಲ್ಲಿರುತ್ತದೆ. ಆದರೆ ಈ ಸತ್ಯವನ್ನು ಒಪ್ಪಿಕೊಳ್ಳುವುದು ಮನುಷ್ಯನಿಗೆ ದುಃಖದಾಯಕವಾಗುತ್ತದೆ. ಆದ್ದರಿಂದ ಬಹುಶಃ ಮನುಷ್ಯರು ತನ್ನ ಮನಸ್ಸಿನ ಕೇಡುಗಳ ಮೇಲೆ ವಿಜಯ ಸಾಧಿಸಲು ಅವುಗಳ ಬಾಹ್ಯರೋಪಣ ಮಾಡುತ್ತಾರೆ. ಯಾವುದನ್ನು ನಾವು ಅಹರಿಮನ್ ಎಂದು ಕರೆಯುತ್ತೇವೆಯೋ ಅದು ವಾಸ್ತವದಲ್ಲಿ ಮನುಷ್ಯನಲ್ಲಿ ಅಂತರ್ನಿಹಿತವಾಗಿರುವ ಕುತ್ಸಿತ ಭಾವನೆಗಳೇ ಆಗಿವೆ. ಅವು ಶುಭ ಅಹುರ ಮಜ್ದಾನ ಆದೇಶಗಳನ್ನು ಪಾಲನೆ ಮಾಡುವಲ್ಲಿ ಅಡೆತಡೆಯನ್ನುಂಟು ಮಾಡುತ್ತವೆ. ಇದಕ್ಕೆ ವಿರುದ್ಧ ಎಂಬಂತೆ ಭಾರತೀಯ ಪರಂಪರೆ ಇದೆ. ಇದರ ಪ್ರಕಾರ ಆಶೆ(ತೃಷ್ಣೆ)ಯೇ ಮನುಷ್ಯನ ಬಹುದೊಡ್ಡ ಅಡೆತಡೆಯಾಗಿದೆ. ಇದರ ಕಾರಣದಿಂದಾಗಿ ಮನುಷ್ಯನು ತನ್ನ ಮೋಕ್ಷವನ್ನು ಪ್ರಾಪ್ತ ಮಾಡಿಕೊಳ್ಳಲಾರನು. ಭಾರತೀಯ ಪರಂಪರೆಯ ಪ್ರಕಾರ ಮನುಷ್ಯನು ತನ್ನ ಸಾಧನೆಯಿಂದ ಆಂತರಿಕ ಆಶೆ(ತೃಷ್ಣೆ)ಯನ್ನು ಮತ್ತು ಅದರ ವಾಸಸ್ಥಾನವಾಗಿರುವ ‘ಅಹಂಭಾವ’ವನ್ನು ದೂರ ಮಾಡಿದಾಗಲೇ ಮೋಕ್ಷವು ಸಾಧ್ಯವಾಗುತ್ತದೆ.

ನೈತಿಕ ಜೀವನದ ಕಡೆಗೆ ಗಮನ ಹರಿಸಿದರೆ ಅಶುಭದ ವಾಸ್ತವಿಕತೆಯ ಅರಿವಾಗುತ್ತದೆ. ಪಾರಸೀ ಧರ್ಮದಲ್ಲಿ ಅಹುರ ಮಜ್ದಾ ಮತ್ತು ಅಹರಿಮನ್‌ರ ದ್ವೈತವನ್ನು ಅಂತಿಮ ತತ್ವವೆಂದು ಒಪ್ಪಬೇಕಾಗಿಲ್ಲ. ಏಕೆಂದರೆ ಕೊನೆಯಲ್ಲಿ ಅಹರಿಮನ್‌ನ ನಾಶವಾಗುತ್ತದೆ. ಭಾರತೀಯ ಧರ್ಮದರ್ಶನದಲ್ಲಿ ಅಜ್ಞಾನದ ವ್ಯಾಹಾರಿಕ ಅಸ್ತಿತ್ವವನ್ನು ಒಪ್ಪಿಕೊಂಡು ಅದನ್ನು ‘ಸಾಂತ’ವೆಂದು ತಿಳಿದಂತೆ ಅಶುಭದ ವ್ಯವಹಾರಿಕ ವಾಸ್ತವಿಕತೆ (ಅಸ್ತಿತ್ವ) ಕಂಡು ಬರುತ್ತದೆ. ಇದನ್ನು ಅಂತಿಮ ಸತ್ತು ಎಂದು ತಿಳಿಯಲಾಗಿಲ್ಲ, ಏಕೆಂದರೆ ಅಹರಿಮನ್‌ನ ವಿನಾಶ ಮತ್ತು ಅಹುರ ಮಜ್ದಾನ ಅಂತಿಮ ವಿಜಯದ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದ್ದರಿಂದ ಕೊನೆಗೆ ಅಹುರ ಮಜ್ದಾನನ್ನು ಅನಂತ, ನಿತ್ಯ, ಸ್ವಯಂಭೂ ಮತ್ತು ಅಂತಿಮ ಸತ್ ಎಂದು ಒಪ್ಪಲಾಗಿದೆ. ಆದ್ದರಿಂದ ಪಾರಸೀ ಧರ್ಮವು ವಾಸ್ತವದಲ್ಲಿ ಏಕೇಶ್ವರವಾದಿಯೇ ಆಗಿದೆ. (ಪು. ೨೦೦) ಮೂಲ ಪಠ್ಯವನ್ನು ಶ್ರೀಗಳು ಎಷ್ಟು ಅರ್ಥಪೂರ್ಣವಾಗಿ ಅನುವಾದಿಸಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ.

ಧರ್ಮಗಳ ಮೂಲ ಸಿದ್ಧಾಂತ (ಪ್ರತ್ಯಯ)ಗಳ ತೌಲನಿಕ ಮತ್ತು ವಿಮರ್ಶಾತ್ಮಕ ಅಧ್ಯಯನ ಎಂಬ ಅಧ್ಯಾಯ ಓದುಗರ ಗಮನ ಸೆಳೆಯುವ ಮತ್ತು ಚಿಂತನೆಗೆ ಹಚ್ಚುವ ಪ್ರಮುಖ ಅಧ್ಯಾಯವಾಗಿದೆ. ಭಾರತೀಯ ಅಧ್ಯಾತ್ಮ ಪರಂಪರೆ ಮತ್ತು ಪ್ರವಾದಿಗಳ ಪರಂಪರೆ (ಏಸು-ಪೈಗಂಬರ್) ಹಿನ್ನೆಲೆಯಲ್ಲಿ ಈಶ್ವರನ ವಿಚಾರ, ಮನುಷ್ಯನ ವಿಚಾರ, ಸೃಷ್ಟಿಯ ವಿಚಾರ, ದೇಹ ಮತ್ತು ಆತ್ಮಗಳ ಸ್ಥಿತಿ, ಮೋಕ್ಷ ವಿಚಾರ ಮೊದಲಾದವುಗಳನ್ನು ತುಂಬ ತೂಕಬದ್ಧವಾಗಿ, ಆಯಾ ಧರ್ಮಗಳ ಚಿಂತನೆಗಳನ್ನು ತೂಗಿ ನೋಡುವ ಪ್ರಯತ್ನ ಮಾಡಿದ್ದಾರೆ.

ಇಂದು ನಮ್ಮ ಭಾರತಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಬೇಕಾಗಿರುವುದು ಸಹಿಷ್ಣುತೆ. ಈ ವಿಷಯ ಕುರಿತು ಧರ್ಮದ ವ್ಯಾಪಕತೆ ಮತ್ತು ಸಹಿಷ್ಣುತೆ ಎಂಬ ಅಧ್ಯಾಯದಲ್ಲಿ ಅತ್ಯಂತ ಸೋದಾಹರಣವಾಗಿ ಮಾನವ ಕುಲವನ್ನು ಏಕಬಂಧದಲ್ಲಿ ಕೂಡಿಡುವ ಮಾರ್ಗೋಪಾಯಗಳು ಏನು ಎಂಬುದನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ.

‘ಸರ್ವಧರ್ಮ ಸಮನ್ವಯ’ ಎಂಬ ಅಧ್ಯಾಯವೂ ಪ್ರಸ್ತುತ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸುವ ನಿಟ್ಟಿನಲ್ಲಿ ಅನೇಕ ಚಿಂತನಪರ ಆಲೋಚನೆಗಳನ್ನು ವಿವರಿಸುತ್ತದೆ. ಆಯಾ ಧರ್ಮದವರು ತಮ್ಮ ಧರ್ಮವೇ ಶ್ರೇಷ್ಠ; ಉಳಿದ ಧರ್ಮಗಳು ಕನಿಷ್ಠ ಎಂಬ ಭಾವನೆಯನ್ನು ಬೆಳೆಸುವ ನಿಟ್ಟಿನಲ್ಲಿ ಬರಹಗಳನ್ನು ಬರೆಯುತ್ತಾರೆ. ಆದರೆ ಈ ಕೃತಿಯ ಲೇಖಕರು ಗಾಂಧೀಜಿಯವರ ‘ನಾನು ಗೀತೆಯ ಮೇಲೆ ವಿಶ್ವಾಸವಿರಿಸಿದಂತೆ ಬೈಬಲ್ ಮೇಲೆಯೂ ವಿಶ್ವಾಸವಿಡುತ್ತೇನೆ. ನಾನು ನನ್ನ ಧರ್ಮದಂತೆ ವಿಶ್ವದ ಎಲ್ಲ ಮಹಾನ್ ಧರ್ಮಗಳನ್ನೂ ಒಪ್ಪಿಕೊಳ್ಳುತ್ತೇನೆ. ಯಾವುದೇ ಧರ್ಮ ವಿಶೇಷವನ್ನು ಅದೇ ಧರ್ಮದ ಅನುಯಾಯಿಗಳು ಉಪಹಾಸ ಮಾಡುವುದನ್ನು ಕಂಡು ನನಗೆ ಬಹಳ ದುಃಖವಾಗುತ್ತದೆ’ ಎಂಬ ಮಾತನ್ನು ಉಲ್ಲೇಖಿಸುತ್ತ ಪರಂಪರಾಗತ ಧರ್ಮಗಳ ಸ್ವರೂಪವೇ ತಮ್ಮ ತಮ್ಮಲ್ಲಿ ಜಗಳವಾಡುವುದು, ವೈಜ್ಞಾನಿಕ ಜ್ಞಾನ ಪ್ರಸಾರದಲ್ಲಿ ಅಡೆ ತಡೆ ಉಂಟು ಮಾಡುವುದು, ಸಮಸ್ಯೆಗಳನ್ನು ಹುಟ್ಟು ಹಾಕುವುದು ಆಗಿದೆ ಎಂದು ಹೇಳುತ್ತಾರೆ. ಕೊನೆಯಲ್ಲಿ ‘ಮಾನವತಾವಾದದ ಮೂಲಕವೇ ವಿಶ್ವದ ಐಕ್ಯತೆ, ವೈಜ್ಞಾನಿಕ ಜ್ಞಾನದ ಪ್ರಸಾರ, ಮಾನವೀಯ ಮೌಲ್ಯಗಳ ಸಂರಕ್ಷಣೆ, ಸಂವರ್ಧನೆ ಮತ್ತು ವಿತರಣೆ ಸಾಧ್ಯವಿರುವುದರಿಂದ ಅದುವೇ ನಿಜವಾದ ಧರ್ಮ ಮತ್ತು ಸಮಾಜದರ್ಶನವಾಗಿದೆ’ (ಪು. ೩೮೭) ಎಂಬ ನಿರ್ಣಯಕ್ಕೆ ಬರುತ್ತಾರೆ.

‘ಮಾನವತಾವಾದ’ ಮತ್ತು ‘ಧರ್ಮನಿರಪೇಕ್ಷತಾವಾದ’ ಎಂಬ ಎರಡು ಅಧ್ಯಾಯಗಳು ತುಂಬ ಅಧ್ಯಯನಯೋಗ್ಯವಾಗಿವೆ. ಮಾನವೀಯತೆ ಆಧಾರದ ಮೇಲೆಯೂ ಪ್ರತಿಯೊಂದು ಧರ್ಮದ ಮೂಲಮಾನವನ್ನು ಗುರುತಿಸಬಹುದಾಗಿದೆ. ಮಾನವೀಯತೆ ಇಲ್ಲದ ಧರ್ಮ ಅದು ಧರ್ಮವೇ ಅಲ್ಲ. ಇಂತಹ ಮಾನವೀಯತೆಯನ್ನು ಸಾಮಾಜಿಕ ಬದುಕಿನಲ್ಲಿ ರೂಢಿಯಲ್ಲಿ ತರಬೇಕಾದರೆ ಸೆಕ್ಯುಲರಿಸಂ ಕೂಡ ಅನಿವರ‍್ಯವೇ ಆಗಿದೆ.

ಹೊರದೇಶದಲ್ಲಿ ಹುಟ್ಟಿದ ಧರ್ಮಗಳಿಗೂ ಭಾರತದಲ್ಲಿ ಅಸ್ತಿತ್ವಕ್ಕೆ ಬಂದ ಹಿಂದೂ ಜೈನ ಬೌದ್ಧ ಸಿಖ್ ಮೊದಲಾದ ಧರ್ಮಗಳ ತತ್ವ ಸಿದ್ಧಾಂತಗಳನ್ನು ತುಲನೆಯ ನಿಕಷಕ್ಕೆ ಒಡ್ಡಿ, ಎಲ್ಲ ಧರ್ಮಗಳ ಅಂತಿಮ ಗುರಿ ಒಂದೇ ಆಗಿದ್ದರೂ ಸಾಧಿಸುವ ಮಾರ್ಗಗಳು ಭಿನ್ನವಾಗಿವೆ. ಹೀಗಿದ್ದೂ ಇಡೀ ಜಗತ್ತಿನ ಎಲ್ಲ ಧರ್ಮಗಳ ಅಧ್ಯಯನ ಮಾಡುವ ಕಾಲಕ್ಕೆ, ಭಾರತೀಯ ಧರ್ಮಗಳನ್ನೂ ಅಧ್ಯಯನ ತೆಕ್ಕೆಗೆ ತೆಗೆದುಕೊಳ್ಳಲೇ ಬೇಕಾದ ಸತ್ವ ಮತ್ತು ಸಾಮರ್ಥ್ಯ ಇವುಗಳಲ್ಲಿದೆ ಎಂಬುದನ್ನು ಪ್ರತಿಪಾದಿಸಿದ್ದಾರೆ.

ಈ ಕೃತಿಗೆ ಮೌಲಿಕವಾದ ಮುನ್ನುಡಿ ತೋರಣ ಕಟ್ಟಿದ ಹಿರಿಯ ವಿದ್ವಾಂಸರಾದ ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ಮೂಲ ಲೇಖಕ ಯಾಕೂಬ್ ಮಸೀಹ ಅವರ ಕಿರುಪರಿಚಯವನ್ನೂ ನೀಡಿದ್ದಾರೆ. ೧೯೧೬ರಲ್ಲಿ ಜನಿಸಿದ ಯಾಕೂಬ್ ಅವರು ಮಗಧ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತçದ ಪ್ರಾಧ್ಯಾಪಕರಾಗಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ೨೩ಕ್ಕೂ ಹೆಚ್ಚು ಗ್ರಂಥಗಳನ್ನು ರಚಿಸಿದ್ದಾರೆ. ಇವರು ರಚಿಸಿದ ಕೃತಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿವೆ. ಹೀಗೆ ಖ್ಯಾತಿ ಪಡೆದ ಮೂರು ದಶಕಗಳ ಹಿಂದಿನ ಮಹತ್ವದ ಕೃತಿಯೇ ‘ತುಲನಾತ್ಮಕ್ ಧರ್ಮ ದರ್ಶನ್’ ಕೃತಿ. ಈ ಕೃತಿಯನ್ನು ಡಾ. ತೋಂಟದ ಸಿದ್ಧರಾಮ ಶ್ರೀಗಳು ಅನುವಾದಿಸಿದ ಬಗೆಯನ್ನು ಕುರಿತು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ‘ತತ್ವಶಾಸ್ತ್ರದಲ್ಲಿ ಕಾಶಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದ ಅತ್ಯುನ್ನತ ಪದವಿಗಳನ್ನು ಪಡೆದಿರುವ ಸಿದ್ಧರಾಮ ಶ್ರೀಗಳಂಥವರು ಮಾತ್ರ ಇಂಥ ಕೃತಿ ರಚಿಸಲು ಸಾಧ್ಯ. ಅವರಿಗೆ ಕನ್ನಡ ಭಾಷೆಯ ಮೇಲಿರುವ ಗತಿ, ವಿಷಯ ನಿರೂಪಣೆ, ವಿಶ್ಲೇಷಣಾ ವೈಖರಿ, ಅಂತರ್ ಧರ್ಮೀಯ ಶಾಸ್ತ್ರ ಗ್ರಂಥಗಳ ಉಲ್ಲೇಖ, ತೌಲನಿಕ ನಿರ್ಣಯ ಮುಂತಾದವನ್ನು ನೋಡಿ ಆಶ್ಚರ್ಯವಾಗಿತ್ತು’ (ಮುನ್ನುಡಿ ಪು. ೧೦) ಎಂದು ಹೇಳಿರುವುದು ಅವರ ಗುಣಗ್ರಾಹಿ ವ್ಯಕ್ತಿತ್ವಕ್ಕೆ ನಿದರ್ಶನವಾಗಿದೆ. ಜಗತ್ತಿನ ಬಹುತೇಕ ಧರ್ಮಗಳನ್ನು ತೌಲನಿಕ ಚಿಂತನೆಗೆ ಒಳಗು ಮಾಡಿದ ಯಾಕೂಬ್ ಅವರು ಕರ್ನಾಟಕದಲ್ಲಿ ಹುಟ್ಟಿದ ಲಿಂಗಾಯತ ಧರ್ಮದ ಬಗ್ಗೆ ಚಕಾರ ಶಬ್ದವನ್ನೂ ಬರೆಯುವುದಿಲ್ಲ. ಯಾಕೂಬ್ ಅವರಷ್ಟೇ ಏಕೆ ಡಾ. ರಾಧಾಕೃಷ್ಣನ್ ಕೂಡ ಮೈಸೂರಿನಲ್ಲಿ ಕಾಲ ಕಳೆದಿದ್ದರೂ ಲಿಂಗಾಯತ ಧರ್ಮದ ಬಗ್ಗೆ ಕೇವಲ ಒಂದೆರಡು ಸಾಲುಗಳಲ್ಲಿ ಬರೆದು ಮುಗಿಸುತ್ತಾರೆ. ಉತ್ತರ ಭಾರತದ ಬಹುತೇಕ ತತ್ವಶಾಸ್ತ್ರದ ವಿದ್ವಾಂಸರಿಗೆ ಲಿಂಗಾಯತ ಧರ್ಮದ ಪರಿಚಯವೇ ಇಲ್ಲ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಅನುವಾದ ಕೃತಿಯ ಅನುಬಂಧವಾಗಿ ಲಿಂಗಾಯತ ಧರ್ಮ ಕುರಿತು ಒಂದು ಪರಿಚಯಾತ್ಮಕ ಲೇಖನವನ್ನಾದರೂ ಕೊಡಬಹುದಾಗಿತ್ತು ಎಂಬ ಅಭಿಪ್ರಾಯವನ್ನು ಸಿದ್ಧಲಿಂಗ ಪಟ್ಟಣಶೆಟ್ಟಿ ಅವರು ವ್ಯಕ್ತಪಡಿಸಿದ್ದಾರೆ. ಪ್ರಾಯಶಃ ಭವಿಷ್ಯದ ದಿನಗಳಲ್ಲಿ ತಮಿಳು, ತೆಲುಗು, ಮಲಯಾಳಂ ವಿದ್ವಾಂಸರು ಕನ್ನಡ ಕೃತಿಯನ್ನೇ ಅನುವಾದಕ್ಕೆ ತೆಗೆದುಕೊಂಡರೆ, ಲಿಂಗಾಯತ ಧರ್ಮದ ಕುರಿತಾದ ಅನುಬಂಧ ಭಾರತೀಯರಲ್ಲಿ ಒಂದು ಹೊಸ ಬಂಧವನ್ನು ಬೆಸೆಯಲಿ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಮುಂದಿನ ಆವೃತ್ತಿಗಳಲ್ಲಿ ಈ ವಿಷಯವನ್ನು ಶ್ರೀಗಳು ಸೇರಿಸಿದರೆ, ಔಚಿತ್ಯಪೂರ್ಣವಾಗುವುದು.

ಇಂತಹ ಧರ್ಮ ಧರ್ಮಗಳನ್ನು ಬೆಸೆಯುವ, ಸಮಾಜ ಸಮಾಜಗಳನ್ನು ಕೂಡಿಸುವ ಬಾಂಧವ್ಯದ ಮಹತ್ವದ ಕೃತಿಗಳು ಶ್ರೀಗಳಿಂದ ಮತ್ತೆ ಮತ್ತೆ ರಚನೆಗೊಳ್ಳಲಿ, ಅಸಂಗತ ವಾತಾವರಣದಲ್ಲಿ ಬದುಕುತ್ತಿರುವ ಭಾರತೀಯ ಮನಸ್ಸುಗಳಿಗೆ ಶಾಂತಿಯ ಸಿಂಚನವನ್ನು ನೀಡುವಂತಾಗಲಿ ಎಂದು ಪ್ರಾರ್ಥಿಸುವೆ.

- ಪ್ರಕಾಶ ಗಿರಿಮಲ್ಲನವರ

 

MORE FEATURES

ಅಮ್ಮನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಕೃತಿಯಿದು

29-11-2024 ಬೆಂಗಳೂರು

"ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯ...

ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿಯಿದು

29-11-2024 ಬೆಂಗಳೂರು

"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ...

ಈ ಸಂಕಲನದ ಹೆಚ್ಚಿನ ಕವಿತೆಗಳ ಕೇಂದ್ರ ‘ಹಿಂಸೆ’

28-11-2024 ಬೆಂಗಳೂರು

"ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾ...