ಬಾರ್ಬರಾ ಕ್ರುಗರ್‌ - ಘೋಷಣೆಯೊಂದು ಆರ್ಟಾಗುವ ಮ್ಯಾಜಿಕ್

Date: 26-01-2021

Location: ಬೆಂಗಳೂರು


ಹಿರಿಯ ಪತ್ರಕರ್ತ-ಲೇಖಕ ರಾಜಾರಾಂ ತಲ್ಲೂರು ಅವರು ಜಾಗತಿಕ ಸಮಕಾಲೀನ ಕಲೆ ಮತ್ತು ಕಲಾವಿದರನ್ನು ಕುರಿತು ಬರೆಯುವ ಅಂಕಣ 'ಈಚೀಚೆ, ಇತ್ತೀಚೆ'. ಪ್ರತಿ ವಾರ ಪ್ರಕಟವಾಗುವ ಈ ಸರಣಿಯಲ್ಲಿ ಈ ಬಾರಿ ಅಮೆರಿಕದ ಇನ್ಸ್ಟಾಲೇಷನ್ ಆರ್ಟ್ ಕಲಾವಿದೆ ಬಾರ್ಬರಾ ಕ್ರುಗರ್ ಅವರ ಕಲಾಬದುಕಿನ ಕುರಿತು ಬರೆದಿದ್ದಾರೆ.

ಕಲಾವಿದ: ಬಾರ್ಬರಾ ಕ್ರುಗರ್ (Barbara Kruger)
ಜನನ: 26 ಜನವರಿ, 1945
ಶಿಕ್ಷಣ: ಸಿರಾಕ್ಯೂಸ್ ವಿವಿ ; ಪಾರ್ಸನ್ಸ್ ಸ್ಕೂಲ್ ಆಫ್ ಡಿಸೈನ್, ನ್ಯೂಯಾರ್ಕ್
ವಾಸ: ನ್ಯೂಯಾರ್ಕ್, ಲಾಸ್ ಏಂಜಲಿಸ್, ಅಮೆರಿಕ
ಕವಲು: ಕಾನ್ಸೆಪ್ಚುವಲ್ ಆರ್ಟ್, ಫೆಮಿನಿಸ್ಟ್ ಆರ್ಟ್, ದಿ ಪಿಕ್ಚರ್ ಜನರೇಶನ್
ವ್ಯವಸಾಯ: ಇನ್ಸ್ಟಾಲೇಷನ್ ಆರ್ಟ್, ಕೊಲ್ಯಾಜ್, ಸ್ಕ್ರೀನ್ ಪ್ರಿಂಟಿಂಗ್

ಬಾರ್ಬರಾ ಕ್ರುಗರ್ ಅವರ ಸಿ.ವಿ.ಗಾಗಿ ಇಲ್ಲಿ ಕ್ಲಿಕ್ ಮಾಡಿ:

ಬಾರ್ಬರಾ ಕ್ರುಗರ್ ಅವರ ಈ ಕಲಾವಿಧಾನವನ್ನು “ಹೆಕ್ಕಿತಂದ ಎಕ್ಸ್‌ಪ್ರೆಷನಿಸಂ” ಅನ್ನೋಣವೆ? ಪತ್ರಿಕೆಯ, ಕರಪತ್ರಗಳ, ಚೀರುವ ಬ್ಯಾನರ್ ಗಳ ತುಣುಕುಗಳಿಂದ ಹೆಕ್ಕಿತಂದ ಚಿತ್ರಗಳ ಮೇಲೆ ಕಣ್ಣಿಗೆ ರಾಚುವ ದೊಡ್ಡ ಅಕ್ಷರಗಳಲ್ಲಿ ಘೋಷಣೆಗಳು, ಪ್ರಶ್ನೆಗಳು, ತಾನುಕಂಡ ಸತ್ಯಗಳನ್ನು ಢಾಳಾಗಿ ಮುದ್ರಿಸುವ ಬಾರ್ಬರಾ ಅವರ ಅಕ್ಷರಗಳು ವೀಕ್ಷಕರಿಗೆ ಗುಂಡೇಟಿನಂತಿರುತ್ತವೆ. ಜುಗ್ಗತನದಿಂದ ಬಳಸಿದ ಆ ಶಬ್ದಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಮೂಡಿ ಯೋಚಿಸುವಂತೆ ಮಾಡುತ್ತವೆ, ಅವು ಹೊರಹೊಮ್ಮಿಸುವ ಕ್ಲೀಷೆಗಳು, ವ್ಯಂಗ್ಯಗಳು, ಸಾಂಸ್ಕೃತಿಕ -ಸಾಂಪ್ರದಾಯಿಕ ನಂಬಿಕೆಗಳನ್ನು ಮನಸ್ಸು ಮತ್ತೆ ಮತ್ತೆ ನಿಕಷಕ್ಕೆ ಹಿಡಿಯುವುದಕ್ಕೆ ಒತ್ತಾಯಿಸುತ್ತವೆ.

ಅಮೆರಿಕದ ನ್ಯೂಜರ್ಸಿಯಲ್ಲಿ ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದ ಬಾರ್ಬರಾಗೆ ಆರಂಭದ ಆಸಕ್ತಿ ಇದ್ದದ್ದು ಗ್ರಾಫಿಕ್ ಡಿಸೈನರ್ ಆಗಿ. ಸಿರಾಕ್ಯೂಸ್ ವಿವಿಯಲ್ಲಿ ಕಲಿಯುತ್ತಿದ್ದಾಗಲೇ ಇದಕ್ಕೆ ತಳಪಾಯ ಬಿದ್ದಿತ್ತು. ಇದಕ್ಕೊಂದು ರೂಪ ದೊರೆತದ್ದು ಪಾರ್ಸನ್ಸ್ ಡಿಸೈನ್ ಸ್ಕೂಲ್‌ನಲ್ಲಿ ಕಲಿಕೆ ಆರಂಭಿಸಿದಾಗ. ಕಲಿಕೆ ಮುಗಿಸಿದ ಬಳಿಕ ಮಾಡಂವಝೆಲ್ (mademoiselle) ಸೇರಿದಂತೆ ಒಂದಿಷ್ಟು ಪತ್ರಿಕೆಗಳಲ್ಲಿ ಡಿಸೈನರ್ ಆಗಿ ಯಶಸ್ವಿಯಾಗಿಯೇ ಕೆಲಸ ನಿರ್ವಹಿಸಿದ ಬಾರ್ಬರಾ, ಅದು ಬೇಸರ ಬಂದಾಗ ಅದನ್ನು ತೊರೆದು ಕಲಾವಿದೆ ಆದರು. ಆರಂಭದಲ್ಲಿ ತನ್ನದೇ ಫೋಟೊಗ್ರಾಫ್ ಗಳನ್ನು ಕಲಾಕೃತಿಗಳನ್ನಾಗಿಸಿದ ಆಕೆ ಮೊದಲ ಬಾರಿಗೆ ಅಮೆರಿಕದ ಗಮನ ಸೆಳೆದದ್ದು, 1973ರಲ್ಲಿ ವಿಟ್ನಿ ಮ್ಯೂಸಿಯಂನ ದ್ವೈವಾರ್ಷಿಕ ಕಲಾಪ್ರದರ್ಶನಕ್ಕೆ ಆಕೆಯ ಕಲಾಕೃತಿ ಆಯ್ಕೆಗೊಂಡಾಗ.

1970ರ ಹೊತ್ತಿಗೆ ತನ್ನದೇ ಫೋಟೋಗ್ರಫಿಯನ್ನು ಕಲಾಕೃತಿಯಾಗಿಸುವುದನ್ನು ತೊರೆದು ಸಿದ್ಧಚಿತ್ರಗಳಿಂದಲೇ (ಪತ್ರಿಕೆ-ಕರಪತ್ರಗಳಿಂದ) ಕಲಾಕೃತಿಗಳನ್ನು ರೂಪಿಸಲಾರಂಭಿಸಿದ ಆಕೆಯ ಚಿತ್ರಗಳು ಆಗ ಅಮೆರಿಕದ ಕೊಳ್ಳುಬಾಕತನ, ಫೆಮಿನಿಸಂ, ಸ್ವಾಯತ್ತೆ ಮತ್ತಿತರ ಸಮಕಾಲೀನ ಸಂಗತಿಗಳ ಕುರಿತು ಪ್ರತಿಕ್ರಿಯಿಸುತ್ತಿದ್ದವು.

1991 ರ ಹೊತ್ತಿಗೆ ತನ್ನ ಮೊದಲ ಏಕವ್ಯಕ್ತಿ ಕಲಾಪ್ರದರ್ಶನ ನೀಡಿದ ಕ್ರುಗರ್, ನಡುವೆ 1990ರ ಹೊತ್ತಿಗೆ ನ್ಯೂಸ್ ವೀಕ್, ಎಸ್ಕ್ವೈರ್ ಮತ್ತಿತರ ಪ್ರಮುಖ ಅಂತಾರಾಷ್ಟ್ರೀಯ ಮ್ಯಾಗಝೀನ್‌ಗಳ ಗ್ರಾಫಿಕ್ ಡಿಸೈನರ್ ಆಗಿಯೂ ಕೆಲಸ ಮಾಡಿದ್ದರು. ಈಗ ಅಮೆರಿಕದ ಕ್ಯಾಲಿಫೋರ್ನಿಯಾ, ಬರ್ಕಲೇ, ಚಿಕಾಗೋ ವಿವಿಗಳಲ್ಲಿ ಶಿಕ್ಷಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಬಾರ್ಬರಾ ಕವಿಯಾಗಿಯೂ ಮಿಂಚಿದ್ದಿದೆ; ಕಲಾವಿಮರ್ಶೆಯನ್ನೂ ನ್ಯೂಯಾರ್ಕ್ ಟೈಮ್ಸ್, ಆರ್ಟ್ ಫೋರಂ ಸೇರಿದಂತೆ ಹಲವು ಮಹತ್ವದ ನಿಯತಕಾಲಿಕಗಳಿಗೆ ಮಾಡಿದ್ದಿದೆ.

ಬಾರ್ಬರಾ ತನ್ನ ಕಲಾಕೃತಿಗಳಲ್ಲಿ ಹೆಚ್ಚಾಗಿ ಬಳಸುವ “ನೀನು”, “ನಿನ್ನ”, “ನಾನು”, “ನಮ್ಮ”, “ಅವರು” ಇತ್ಯಾದಿ ಸರ್ವನಾಮಗಳು ತಮ್ಮೊಂದಿಗೆ ತರುವ ಸಾಂಸ್ಕೃತಿಕ ಸಂರಚನೆಗಳು ಮತ್ತು ಅದರ ಹಿಂದಿರುವ ಅಧಿಕಾರ, ಐಡೆಂಟಿಟಿ, ಕೊಳ್ಳುಬಾಕತನ, ಲಿಂಗ ತಾರತಮ್ಯಗಳು ಅದರ ನೋಡುಗರನ್ನು ಯೋಚನೆಗೆ ಹಚ್ಚುವ ವಿಧ ಅನನ್ಯವಾದುದು. “I replicate certain words and watch them stray from or coincide with the notions of fact and fiction” ಎಂದಿದ್ದರು, ಬಾರ್ಬರಾ ಹಿಂದೊಮ್ಮೆ.

ಸಮಕಾಲೀನ ಮಾಧ್ಯಮಗಳು ಸಾಮಾನ್ಯವಾಗಿ ಬಳಸುವ, ಚೀರಲು ಉಪಯೋಗಿಸುವ ಶಬ್ದಗಳನ್ನೇ ಹೆಕ್ಕಿ ಚಿರಪರಿಚಿತ ಚಿತ್ರವೊಂದಕ್ಕೆ ಗ್ರಾಫಿಕ್ ಡಿಸೈನಿನ ತಂತ್ರಗಳನ್ನು ಬಳಸಿ ಅನಿರೀಕ್ಷಿತ ತಿರುವು ನೀಡುವ ಬಾರ್ಬರಾ ಅವರ “Your body is a battleground”, “I shop therefore I am” ನಂತಹ ಹೇಳಿಕೆಗಳು ಮೇನೋಟಕ್ಕೆ ಸರಳ ಚೀರು ಹೇಳಿಕೆಗಳೆನ್ನಿಸಿದರೂ ಕಲಾಕೃತಿಯ ಒಟ್ಟು ನೋಟದ ವೇಳೆಯಲ್ಲಿ ಬೇರೆಯೇ ಧ್ವನಿಗಳನ್ನು ಹೊಮ್ಮಿಸುತ್ತವೆ. ಅವರ ಇತ್ತೀಚಿನ ಕಟ್ಟಡಗಳಿಗೆ ದೊಡ್ಡಗಾತ್ರದ ಅಕ್ಷರ ಮುಸುಕು ತೊಡಿಸುವ ಕಲಾಕೃತಿಗಳೂ ಕೂಡ ಜಗತ್ತಿನ ಗಮನ ಸೆಳೆಯುತ್ತಿವೆ. ಮಾರುಕಟ್ಟೆಯಲ್ಲೂ ಯಶಸ್ವೀ ಕಲಾವಿದೆ ಆಗಿರುವ ಬಾರ್ಬರಾ ಅವರ Untitled (When I Hear the Word Culture I Take Out My Checkbook) ಕಲಾಕೃತಿ ಕ್ರಿಸ್ತೀ ಹರಾಜುಕಟ್ಟೆಯಲ್ಲಿ ಅಂದಾಜು 5.8ಕೋಟಿ ರೂ. ($9,02,500) ಗಳಿಸಿತ್ತು.

ಹೀಗೆ, ತನ್ನ ಕಲಾಕೃತಿಗಳ ಅನನ್ಯತೆಯ ಕಾರಣದಿಂದಾಗಿ ಸಮಕಾಲೀನ ಕಲಾಜಗತ್ತಿನಲ್ಲಿ ಫೆಮಿನಿಸಂ, ಆಧುನಿಕೋತ್ತರ ಮತ್ತು ಕಾನ್ಸೆಪ್ಚುವಲ್ ಕಲೆಯ ಸುದ್ದಿ ಬಂದಾಗ ದಾಟಿಹೋಗಲಾಗದ ಒಂದು ಹೆಸರು ಬಾರ್ಬರಾ ಕ್ರುಗರ್. ಜೆಫ್ ಕೂನ್ಸ್, ಸಿಂಡಿ ಷೆರ್ಮನ್, ಡೇಮಿಯನ್ ಹರ್ಸ್ಟ್ ಮತ್ತಿತರ ಮಹತ್ವದ ಕಲಾವಿದರ ಸಾಲಿನಲ್ಲಿ ಅವರೂ ನಿಲ್ಲುತ್ತಾರೆ.

ಬ್ರಿಟಿಷ್ ಕಲಾವಿಮರ್ಶಕಿ ಇವೊನಾ ಬ್ಲೇಜ್ವಿಕ್ ಜೊತೆ ಬಾರ್ಬರಾ ಕ್ರುಗರ್ ಮಾತುಕತೆ:

<iframe width="560" height="315" src="https://www.youtube.com/embed/pO_4frg7efQ" frameborder="0" allow="accelerometer; autoplay; clipboard-write; encrypted-media; gyroscope; picture-in-picture" allowfullscreen></iframe>

ಬಾರ್ಬರಾ ಕ್ರುಗರ್ ಬಗ್ಗೆ ಒಂದು ಪರಿಚಯ ಪಾಠ, ವೀಡಿಯೊ ಬ್ಲಾಗರ್ ಪವೋಲಾ ಕಾಸಾ ಅವರಿಂದ:

ಚಿತ್ರ ಶೀರ್ಷಿಕೆಗಳು:

ಬಾರ್ಬರಾ ಕ್ರುಗರ್ ಅವರ You are not yourself (1984)

ಬಾರ್ಬರಾ ಕ್ರುಗರ್ ಅವರ Your body is a battleground (1989)

ಬಾರ್ಬರಾ ಕ್ರುಗರ್ ಅವರ Belief+ Doubt ಇನ್ಸ್ಟಾಲೇಷನ್ (2012)

ಬಾರ್ಬರಾ ಕ್ರುಗರ್ ಅವರ Coleman Skatepark ಇನ್ಸ್ಟಾಲೇಷನ್ (2016)

ಬಾರ್ಬರಾ ಕ್ರುಗರ್ ಅವರ Face it green (2007)

ಬಾರ್ಬರಾ ಕ್ರುಗರ್ ಅವರ I shop therefore I am (1990)

ಬಾರ್ಬರಾ ಕ್ರುಗರ್ ಅವರ Blind idealism is… (2017)

ಬಾರ್ಬರಾ ಕ್ರುಗರ್ ಅವರ Untitled (Know nothing…) (1987)

ಬಾರ್ಬರಾ ಕ್ರುಗರ್ ಅವರ Untitled (Questions) (1990-2018)

ಬಾರ್ಬರಾ ಕ್ರುಗರ್ ಅವರ Untitled (who?) (2020)

ಬಾರ್ಬರಾ ಕ್ರುಗರ್ ಅವರ You invest in the divinity… (1982)

ಈ ಅಂಕಣದ ಹಿಂದಿನ ಬರೆಹಗಳು

ಭಾವನೆಯಿಂದ ವರ್ತನೆಯೆಡೆಗೆ -ಒಲಫರ್ ಎಲಿಯಾಸನ್

ಚರಿತ್ರೆಯ ನೆರಳಿನ ಬಂಡಾಯಗಾರ್ತಿ - ಕಾರಾ ವಾಕರ್

“ರಪ್ಪೆಂದು… ಮುಖಕ್ಕೆ ತಣ್ಣೀರು ರಾಚುವ ಸಾಂಟಿಯಾಗೊ ಸಿಯೆರಾ”

“ಪಾತ್ರಾನುಸಂಧಾನ ಮತ್ತು ಅದರಿಂದಾಚೆ: ಸಿಂಡಿ ಶೆರ್ಮನ್”

ಬ್ರಿಟಿಷ್ ಕಲಾಜಗತ್ತಿನ ’ಬ್ಯಾಡ್ ಗರ್ಲ್’ –ತ್ರೇಸಿ ಎಮಿನ್

ಕಲೆಯ ಬೀದಿಯಲ್ಲೊಬ್ಬ 'ಬೆಳದಿಂಗಳ ಬಾಲೆ' - ಬಾಂಕ್ಸಿ

“ಕಾನ್ಸೆಪ್ಚುವಲ್ ಆರ್ಟ್‌ನ ಪಿತಾಮಹ ಮಾರ್ಸೆಲ್ ದುಷಾಮ್ ”

“ಪ್ರತಿಯೊಬ್ಬ ವ್ಯಕ್ತಿಯೂ ಕಲಾವಿದನೇ; ಸಮಾಜವೇ ಶಿಲ್ಪ”

“ಅಮೂರ್ತದಿಂದ ನವಮೂರ್ತದತ್ತ – ಭಾರತವೇ ಸ್ಪೂರ್ತಿ”

“ಕಲಾಲೋಕದ ಡೊನಾಲ್ಡ್ ಟ್ರಂಪ್ – ಜೆಫ್ ಕೂನ್ಸ್”

“ಸಿಗ್ಮಾರ್ ಪೋಲ್ಕ್ ಎಂಬ ರಸಶಾಸ್ತ್ರಿಗೆ ಕಲೆಯೂ ವಿಮರ್ಶೆಯೇ”

“ಒಳಗಣ ಅನಂತ ಮತ್ತು ಹೊರಗಣ ಅನಂತ”

“ಪ್ಯಾಕ್ ಅಪ್“ – ಕ್ರಿಸ್ತೊ ಮತ್ತು ಜೇನ್ ಕ್ಲೋದ್ ದಂಪತಿ ಶೈಲಿ

ಜಗತ್ತಿಗೊಬ್ಬಳು ಸೂಜಿಮಲ್ಲಿ – ಕಿಮ್ ಸೂ ಜಾ

ವ್ಯಗ್ರತೆಯ ಒಳಹರಿವುಗಳ ಶೋಧ – ಮೋನಾ ಹಾಟಮ್

ಪರ್ಫಾರ್ಮಿಂಗ್ ಆರ್ಟ್ ನ ಹಿರಿಯಜ್ಜಿ – ಮಾರಿನಾ ಅಬ್ರಾಮೊವಿಚ್

ಸೈ ಗು-ಚಾಂಗ್ ಎಂಬ ’ಬೆಂಕಿಚೂರ್ಣ’

ಅನೀಶ್ ಕಪೂರ್ ಅವರ “ಕರಿ”ಗೆ ಅಂಟಿದ “ಗುಲಾಲಿ” ವಿವಾದ

ಅತಿವೇಗಕ್ಕೆ ಬೆಲೆ ತೆತ್ತ ಡೇಮಿಯನ್ ಹರ್ಸ್ಟ್

ಸೂರ್ಯಕಾಂತಿಯ ಹೊಸಮೊಳಕೆ… ಆಯ್ ವೇಯಿ ವೇಯಿ

ಆನ್ಸೆಲ್ಮ್ ಕೀಫರ್ ಕಟ್ಟಿಕೊಡುವ ವಿನಾಶದ ವಿಷಣ್ಣತೆ

ಕಟ್-ಕಾಪಿ-ಪೇಸ್ಟ್ ನಿಂದ ಸಿಟ್-ಥಿಂಕ್-ಆಕ್ಟ್ ನತ್ತ

MORE NEWS

ಕನ್ನಡ ವಿಮರ್ಶೆ 3

22-11-2024 ಬೆಂಗಳೂರು

“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...

ನಾನು ಕೊಂದ ಹುಡುಗಿ ಕಥೆಯಲ್ಲಡಗಿರುವ ಮೌಢ್ಯತೆ

20-11-2024 ಬೆಂಗಳೂರು

"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...

ಸಮಾನತೆಯ ವಿಚಾರ ಮತ್ತು ತಾಯ್ಮಾತಿನ ಶಿಕ್ಶಣ

18-11-2024 ಬೆಂಗಳೂರು

"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...