Date: 03-09-2022
Location: ಬೆಂಗಳೂರು
“ಕೆಲವೊಮ್ಮೆ ಬಿನ್ನ ಬಾಶೆಗಳು ಪರಸ್ಪರ ಸಮಾನ ಅಂಶಗಳನ್ನು ಹಂಚಿಕೊಳ್ಳುತ್ತವೆ. ಬಿನ್ನ ಬಾಶೆಗಳು ಎಂದಾಗ ಅವು ಒಂದು ಬಾಶಾ ಮನೆತನಕ್ಕೆ ಸೇರಿದ ಬಾಶೆಗಳಾಗಿರಬಹುದು ಇಲ್ಲವೆ ಬಿನ್ನ ಬಾಶಾ ಮನೆತನಕ್ಕೆ ಸೇರಿರುವ ಬಾಶೆಗಳೂ ಆಗಬಹುದು” ಎನ್ನುತ್ತಾರೆ ಲೇಖಕ ಬಸವರಾಜ ಕೋಡಗುಂಟಿ. ಅವರು ತಮ್ಮ ತೊಡೆಯಬಾರದ ಲಿಪಿಯ ಬರೆಯಬಾರದು ಅಂಕಣದಲ್ಲಿ ಧ್ವನಿಗಳ ಬೆಳವಣಿಗೆಯ ಬಗೆಯನ್ನು ಚರ್ಚಿಸಿದ್ದಾರೆ.
ಕನ್ನಡ ಬಾಶೆ ಬಹುಕಾಲದಿಂದ ಬಹುವ್ಯಾಪಕ ಪರಿಸರದಲ್ಲಿ ಬಹುದೊಡ್ಡ ಸಂಕೆಯ ಮಂದಿ ಮಾತನಾಡುವ ಬಾಶೆ. ಸಹಜವಾಗಿ ದೊಡ್ಡ ಪ್ರಮಾಣದ ಬಿನ್ನತೆಗಳು ಬೆಳೆದಿವೆ, ಬೆಳೆಯುತ್ತಿವೆ. ದ್ವನಿಗೆ ಸಂಬಂದಿಸಿದ ಇಂತ ಒಂದು ಅಪರೂಪದ ಬೆಳವಣಿಗೆಯನ್ನು ಈಗಿನ ಬರವಣಿಗೆಯಲ್ಲಿ ತಿಳಿದುಕೊಳ್ಳಬಹುದು. ಪ್ರತಿಯೊಂದು ಬೆಳವಣಿಗೆ ಕೆಲಕೆಲವು ಬಿನ್ನ ವಲಯಗಳಲ್ಲಿ, ನೆಲೆಗಳಲ್ಲಿ ಮಹತ್ವವನ್ನು ಪಡೆದುಕೊಂಡಿರುತ್ತವೆ. ಈಗ ಮಾತನಾಡುತ್ತಿರುವ ಈ ದ್ವನಿಗಳ ಬೆಳವಣಿಗೆಯು ಬಾರತೀಯ ಬಾಶಿಕ ಪರಿಸರದ ಸಂದರ‍್ಬದಲ್ಲಿ ಬಹು ಮಹತ್ವದ ಬೆಳವಣಿಗೆ.
ಒಂದು ಬಾಶೆಯಲ್ಲಿ ಸಹಜವಾಗಿ ದ್ವನಿ ಮೊದಲಾಗಿ ಬಾಶೆಯ ಯಾವುದೆ ಹಂತದಲ್ಲಿ ಬೆಳವಣಿಗೆ ಸಹಜ. ಪರಸ್ಪರ ಬಾಶೆಗಳು ಒಡನಾಟದಲ್ಲಿ ಬದುಕಿರುವಾಗ ಪರಸ್ಪರ ಬಾಶೆಗಳ ಪ್ರಬಾವಕ್ಕೆ ಎರಡೂ ಬಾಶೆಗಳು ಸಹಜವಾಗಿ ಒಳಗಾಗುತ್ತವೆ. ಇದು ಕೂಡಿ ಬಾಳುವ ನಮ್ಮ ಬಾಶೆಗಳ ಕತೆಯನ್ನು ಸಾರಿ ಹೇಳುತ್ತವೆ. ಬಾಶೆಗಳ ಕೂಡುಬಾಳುವೆ ಇನ್ನೂ ಮುಂದುವರೆದು ಬಹುದೂರಕ್ಕೆ, ಬಹು ಆಳಕ್ಕೆ ಸಾಗುತ್ತದೆ. ಕೆಲವೊಮ್ಮೆ ಬಿನ್ನ ಬಾಶೆಗಳು ಪರಸ್ಪರ ಸಮಾನ ಅಂಶಗಳನ್ನು ಹಂಚಿಕೊಳ್ಳುತ್ತವೆ. ಬಿನ್ನ ಬಾಶೆಗಳು ಎಂದಾಗ ಅವು ಒಂದು ಬಾಶಾ ಮನೆತನಕ್ಕೆ ಸೇರಿದ ಬಾಶೆಗಳಾಗಿರಬಹುದು ಇಲ್ಲವೆ ಬಿನ್ನ ಬಾಶಾ ಮನೆತನಕ್ಕೆ ಸೇರಿರುವ ಬಾಶೆಗಳೂ ಆಗಬಹುದು. ಇಲ್ಲಿ ಮಾತನಾಡುತ್ತಿರುವ ದ್ವನಿ ಬೆಳವಣಿಗೆ ಅಂತ ವಿಶೇಶವಾದ ಬೆಳವಣಿಗೆಯಾಗಿದೆ.
ತಾಲುವಿನಲ್ಲಿ ಹುಟ್ಟುವ ‘ಚ್’ ಮತ್ತು ‘ಜ್’ ಈ ಎರಡು ದ್ವನಿಗಳು ಕನ್ನಡದಲ್ಲಿ ಬಳಕೆಯಲ್ಲಿವೆ. ಇವುಗಳೊಂದಿಗೆ ‘ಞ್’ ಎಂಬ ಅನುನಾಸಿಕ ದ್ವನಿಯೂ ಬಳಕೆಯಲ್ಲಿದೆ, ಆದರೆ ಇದು ಕೇವಲ ದ್ವನಿಯಾಗಿ ಬಳಕೆಯಲ್ಲಿದೆ, ದ್ವನಿಮಾ ಆಗಿಲ್ಲ. ಇರಲಿ. ಈ ತಾಲವ್ಯ ದ್ವನಿಗಳು ಹೆಚ್ಚಿನ ಬಾರತೀಯ ಬಾಶೆಗಳಲ್ಲಿ ಇವೆ. ಕನ್ನಡ ಮತ್ತು ಅದರ ಸುತ್ತಮುತ್ತಲು ಬಳಕೆಯಲ್ಲಿರುವ ಇತರ ಬಾಶೆಗಳಲ್ಲಿ ಇವು ಸಹಜವಾಗಿ ಬಳಕೆಯಲ್ಲಿವೆ. ಕನ್ನಡ ಬಾಶೆಗೆ ಹತ್ತಿರದಲ್ಲಿ ಬಳಕೆಯಲ್ಲಿ ಇರುವ ತೆಲುಗು, ಮರಾಟಿ ಬಾಶೆಗಳಲ್ಲಿಯೂ, ಹಾಗೆಯೆ ಓಡಿಯಾದಲ್ಲೂ ಇವು ಬಳಕೆಯಲ್ಲಿವೆ. ಈ ನಾಲ್ಕು ಬಾಶೆಗಳಲ್ಲಿ ಕನ್ನಡ ಮತ್ತು ತೆಲುಗು ಇವು ದ್ರಾವಿಡ ಮನೆತನಕ್ಕೆ ಸೇರಿದ ಬಾಶೆಗಳಾಗಿವೆ. ಮರಾಟಿ ಮತ್ತು ಓಡಿಯಾ ಇವು ಇಂಡೊ-ಆರ‍್ಯನ್ ಮನೆತನಕ್ಕೆ ಸೇರಿದವುಗಳಾಗಿವೆ.
ಇಲ್ಲಿ ‘ಚ್’ ಮತ್ತು ‘ಜ್’ ಎಂಬ ತಾಲವ್ಯ ದ್ವನಿಗಳ ಜೊತೆಗೆ ಇನ್ನೆರಡು ಇಂತದೆ ಇಲ್ಲವೆ ಇವುಗಳಿಗೆ ಸಮೀಪವಾಗಿರುವ ದ್ವನಿಗಳು ಬಳಕೆಯಲ್ಲಿವೆ.’ಕಾಚು’-’ಗಾಜು’ ಎಂಬ ಜೋಡಿ ಪದಗಳಲ್ಲಿ ಬರಹದಲ್ಲಿ ಈ ದ್ವನಿಗಳನ್ನು ಬರೆಯಲಾಗುವುದು. ದಕ್ಶಿಣ ಕರ‍್ನಾಟಕದ ತೆಂಗನ್ನಡಗಳಲ್ಲಿ ಮತ್ತು ಉತ್ತರ ಕರ‍್ನಾಟಕದ ಬಡಗನ್ನಡಗಳಲ್ಲಿ ಈ ದ್ವನಿಗಳ ಉಚ್ಚರಣೆಯಲ್ಲಿ ವ್ಯತ್ಯಾಸವಿದೆ. ತೆಂಗನ್ನಡಗಳಲ್ಲಿ ಈ ದ್ವನಿಗಳನ್ನು ಸಾಮಾನ್ಯವಾಗಿ ತಾಲವ್ಯ ದ್ವನಿಗಳಂತೆಯೆ ಉಚ್ಚರಿಸಲಾಗುವುದು. ಅಂದರೆ, ನಾಲಗೆಯ ನಡುಬಾಗವನ್ನು ಮೇಲಕ್ಕೆತ್ತಿ ಮೇಲಿನ ತಾಲುವಿಗೆ ತಾಕಿಸುವ ಮೂಲಕ ಈ ದ್ವನಿಯನ್ನು ಉಚ್ಚರಿಸಲಾಗುತ್ತದೆ. ಬಡಗನ್ನಡಗಳಲ್ಲಿಯೂ ಹೀಗೆ ಉಚ್ಚರಿಸುವ ತಾಲವ್ಯ ದ್ವನಿಗಳು ಬಳಕೆಯಲ್ಲಿವೆ.
ಆದರೆ, ಇಲ್ಲಿ ಕೊಟ್ಟ ಪದಗಳಲ್ಲಿ ಮತ್ತು ಇಂತದೆ ಹಲವು ಪದಗಳಲ್ಲಿ ತುಸು ಬಿನ್ನವಾದ ದ್ವನಿಗಳು ಬಳಕೆಯಾಗುತ್ತವೆ. ನಾಲಗೆಯ ನಡುಬಾಗದ ಬದಲು ಅದಕ್ಕಿಂತ ತುಸು ಮುಂದಿನ ಬಾಗ, ಅಂದರೆ ನಾಲಗೆಯ ಮೇಲ್ತುದಿಯನ್ನು ಇಲ್ಲವೆ ನಾಲಗೆಯ ತುದಿಯ ತುಸು ಹಿಂದಿನ ಬಾಗವನ್ನು ಮೇಲೆ ಅಂಗುಳಿಗೆ ತಾಕಿಸಿ ಅಲ್ಲಿ ನಾಲಗೆಯನ್ನು ತುಸು ತಾಲುವಿನ ಕಡೆ ಉರುಳಿಸಿ ದ್ವನಿಯನ್ನು ಉಚ್ಚರಿಸಲಾಗುತ್ತದೆ. ಇದು ತಾಲುವಿಗೆ ತಾಕುತ್ತದೆಯಾದರೂ ಇದು ವರ‍್ತ್ಸ ಬಾಗದಲ್ಲಿ ಮೊದಲು ತಾಕಿ ತಾಲುವಿನ ಕಡೆಗೆ ಜಾರುತ್ತದೆ. ಹಾಗಾಗಿ ಈ ದ್ವನಿ ತುಸು ಬಿನ್ನವಾಗುತ್ತದೆ. ಈ ದ್ವನಿಯನ್ನು ವರ‍್ತ್ಸ-ತಾಲವ್ಯ ದ್ವನಿ ಎಂದು ಗುರುತಿಸಲಾಗುತ್ತದೆ. ನಾಲಗೆಯು ವರ‍್ತ್ಸಕ್ಕೆ ಮೊದಲು ತಾಕಿ ನಂತರ ತಾಲವ್ಯದತ್ತ ಚಲಿಸುತ್ತದೆ. ಇದು ಕನ್ನಡದ ವಿಶಿಶ್ಟ ದ್ವನಿ. ಬಡಗನ್ನಡಗಳಲ್ಲಿ ಹೊರತುಪಡಿಸಿದರೆ ಇನ್ನಾವ ಕನ್ನಡಗಳಲ್ಲಿಯೂ ಈ ದ್ವನಿ ಉಚ್ಚಾರವಾಗುವುದಿಲ್ಲ.
ಈ ದ್ವನಿಗಳು ಬಳಕೆಯಾಗುವ ಪರಿಸರವನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಬೇಕಿದೆ. ಬೇಸರವೆಂದರೆ ತೀ.ನಂ. ಶ್ರೀಕಂಟಯ್ಯನವರು ಈ ದ್ವನಿಗಳನ್ನು ಗುರುತಿಸಿದ ನಂತರ ಇದರ ಬೆರಗನ್ನು ಎಂ.ಬಿ ಎಮಿನೊ ಅವರಲ್ಲಿ ಕಾಣಬಹುದು. ಆದರೆ, ಕನ್ನಡದಲ್ಲಿ ಆನಂತರ ಈ ದ್ವನಿಗಳ ಕುರಿತ ಅದ್ಯಯನವಾಗಲಿ, ಬರವಣಿಗೆಯಾಗಲಿ ಬರುವುದಿಲ್ಲ. ಹಾಗಾಗಿ, ಈ ದ್ವನಿಗಳ ಬಳಕೆಯನ್ನು ಇನ್ನೂ ಸರಿಯಾಗಿ ತಿಳಿದುಕೊಳ್ಳಬೇಕಿದೆ. ಪದದ ಯಾವ ಪರಿಸರದಲ್ಲಿ ಅಂದರೆ ಪದಮೊದಲು, ಪದನಡು ಈ ಎರಡೂ ಪರಿಸರಗಳಲ್ಲಿ ಮತ್ತು ಯಾವ ಪದಗಳಲ್ಲಿ ಅಂದರೆ ಮೂಲಕನ್ನಡ ಮತ್ತು ತೆಗೆದುಕೊಂಡ ಪದಗಳಲ್ಲಿ ಎಲ್ಲೆಲ್ಲಿ ಇವು ಬಳಕೆಯಾಗುತ್ತವೆ ಎಂಬುದನ್ನು ಅದ್ಯಯನ ಮಾಡಬೇಕಿದೆ. ಅದರೊಟ್ಟಿಗೆ ಈ ದ್ವನಿಗಳ ಬೆಳವಣಿಗೆಯಿಂದಾಗಿ ಪದಪರಿಸರಗಳಲ್ಲಿ ಬದಲಾವಣೆ ಏನಾದರೂ ಆಗಿದೆಯೆ ಎಂಬುದನ್ನೂ ತಿಳಿದುಕೊಳ್ಳಬೇಕು.
ಕನ್ನಡದ ವಿಶಿಶ್ಟ ದ್ವನಿಯೊಂದನ್ನು ವಿವರಿಸಲು ಮೇಲೆ ಬೇರೆ ಬಾಶೆಗಳ ಉಲ್ಲೇಕವನ್ನು ಮಾಡುವ ಅವಶ್ಯಕತೆ ಏನಿದೆ ಎಂಬ ಅನುಮಾನ ಬರಬಹುದು. ಈ ವಿಶಿಶ್ಟವಾದ ವರ‍್ತ್ಸ-ತಾಲವ್ಯ ದ್ವನಿಗಳು ಬಡಗನ್ನಡಗಳ ಹಾಗೆಯೆ ತೆಲಂಗಾಣದ ತೆಲುಗುಗಳಲ್ಲಿ, ತೆಂಕು ಮರಾಟಿಗಳಲ್ಲಿಯೂ ಬಳಕೆಯಲ್ಲಿವೆ. ಹಾಗೆಯೆ ತೆಲಂಗಾಣಕ್ಕೆ ಹೊಂದಿಕೊಂಡಿರುವ ಕೆಲವು ಓಡಿಯಾದ ಒಳನುಡಿಗಳಲ್ಲಿಯೂ ಇವು ಇವೆಯಂತೆ. ಈ ಮೇಲೆ ಹೇಳಿದಂತೆ ಬಾಶೆಗಳಲ್ಲಿ ಇತಿಹಾಸಿಕ ಬದಲಾವಣೆಗಳು ಸಹಜ. ಆದರೆ ಇಲ್ಲಿ ಕಂಡುಬರುತ್ತಿರುವ ಬದಲಾವಣೆಯು ನಾಲ್ಕು ಬಾಶೆಗಳನ್ನು ಒಳಗೊಂಡಿರುವಂತೆ ಇದೆ. ಇದರಲ್ಲಿ ಎರಡು ಬಾಶೆಗಳು ದ್ರಾವಿಡ ಮನೆತನಕ್ಕೆ ಸೇರಿದವುಗಳಾಗಿದ್ದರೆ ಇನ್ನೆರಡು ಇಂಡೊ-ಆರ‍್ಯನ್ ಮನೆತನಕ್ಕೆ ಸೇರಿದ ಬಾಶೆಗಳಾಗಿವೆ. ಹೀಗೆ ಒಂದು ಸಮಾನ ಲಕ್ಶಣ ಎರಡು ಬಿನ್ನ ಮನೆತನಗಳಿಗೆ ಸೇರುವ ಬಾಶೆಗಳಲ್ಲಿ ಬೆಳೆಯುವುದು ಅತ್ಯಂತ ಅಪರೂಪದ ಬೆಳವಣಿಗೆ. ಇಲ್ಲಿ ಉಲ್ಲೇಕಿಸಬೇಕಾದ ಮಹತ್ವದ ಅಂಶವೆಂದರೆ ಈ ದ್ವನಿಗಳು ಈ ಎರಡೂ ಬಾಶಾಮನೆತನಗಳಲ್ಲಿ ಬಳಕೆಯಲ್ಲಿ ಇಲ್ಲ. ಅಂದರೆ ಈ ಯಾವ ಬಾಶೆಯಲ್ಲಿಯೂ ಈ ದ್ವನಿಗಳು ಮೂಲದಿಂದ ಬೆಳೆದು ಬಂದವುಗಳಲ್ಲ. ಹಾಗೆ, ಬಾರತದಲ್ಲಿ ಕಾಶ್ಮೀರದ ಒಂದೆರಡು ಒಳನುಡಿಗಳಲ್ಲಿ ಈ ದ್ವನಿಗಳು ಬಳಕೆಯಲ್ಲಿವೆ ಎಂಬ ವರದಿ ಇದೆ. ಅದರ ಹೊರತಾಗಿ ಬಾರತದ ಇನ್ನಾವ ಬಾಶೆಗಳಲ್ಲಿಯೂ ಇವು ಬಳಕೆಯಲ್ಲಿ ಇಲ್ಲ. ಹಾಗಾದರೆ, ಈ ನಾಲ್ಕು ಬಾಶೆಗಳಲ್ಲಿ ಮಾತ್ರವೆ ಈ ದ್ವನಿಗಳು ಕಂಡುಬರುತ್ತವೆಯಾದರೆ, ಅದು ಕಂಡಿತವಾಗಿಯೂ ಇತ್ತೀಚನ ಬೆಳವಣಿಗೆಯೆ.
ಉತ್ತರದಿಂದ ದಕ್ಶಿಣದ ಕಡೆಗೆ ಬಂದ ಆರ‍್ಯನ್ ಬಾಶೆಗಳಾದ ಪ್ರಾಕ್ರುತ ಮತ್ತು ಸಂಸ್ಕ್ರುತಗಳು ಹೆಚ್ಚುಮಟ್ಟಿಗೆ ಕನ್ನಡದೊಂದಿಗೆ ಹಾಗೆ ತೆಲುಗಿನೊಂದಿಗೆ ಸಂಪರ‍್ಕವನ್ನು ಬೆಳೆಸಿಕೊಳ್ಳುತ್ತವೆ. ಈ ಸಂಪರ‍್ಕ ಕ್ರಮೇಣ ಸಂಬಂದವಾಗಿಯೂ ಬೆಳೆಯುತ್ತದೆ. ಎರಡೂ ಬಾಶೆಗಳು ಪರಸ್ಪರ ಬೆರೆಯುತ್ತವೆ. ಹೀಗೆ ಬಹು ಕಾಲ ಕೂಡುಬಾಳುವೆ ನಡೆಸಿದ ನಂತರ ಅವು ತಮ್ಮಗಳ ನಡುವಿನ ಬಿನ್ನತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ ಮತ್ತು ಒಂದುತನವನ್ನು ಹೆಚ್ಚುಗೊಳಿಸಿಕೊಳ್ಳುತ್ತವೆ. ಈ ಸಮಾನತೆಯನ್ನು ವಿಸ್ತರಿಸುವ ಪ್ರಕ್ರಿಯೆ ಪರಸ್ಪರ ಒಂದು ಸಮಾನ ಬೆಳವಣಿಗೆಯನ್ನು ಹುಟ್ಟಿಸಿಕೊಳ್ಳುವಶ್ಟು ಮುಂದಕ್ಕೆ ಬರುತ್ತದೆ.
ಈ ವಿಶಿಶ್ಟ ದ್ವನಿಯನ್ನು ಮೊದಲಿಗೆ ಗುರುತಿಸಿದವರು ತೀ.ನಂ. ಶ್ರೀಕಂಟಯ್ಯನವರು. ತಮ್ಮ ಒಂದು ಪ್ರಬಂದದಲ್ಲಿ ಇವುಗಳನ್ನು ಕುರಿತು ಬರೆದರು. ಆನಂತರ, ಎಂ.ಬಿ. ಎಮಿನೊ ಎಂಬ ಬಹುದೊಡ್ಡ ವಿದ್ವಾಂಸರು ಈ ಲೇಕನವನ್ನು ಬಳಸಿಕೊಂಡು ’ಬಾರತ ಒಂದು ಬಾಶಿಕ ಕ್ಶೇತ್ರ’ ಎಂಬ ತಮ್ಮ ಜಗದ್ವಿಕ್ಯಾತ ಪ್ರಬಂದವೊಂದರಲ್ಲಿ ಈ ದ್ವನಿಗಳನ್ನು ಪ್ರಸ್ತಾಪಿಸುತ್ತಾರೆ. ಇದರಲ್ಲಿ ಅವರು ಬಾರತದ ಇತರ ಕಡೆ ಕಂಡುಬರುವ ಇಂತ ಪರಸ್ಪರ ಬಾಶಾಮನೆತನಗಳ ಕೂಡುಬೆಳವಣಿಗೆಗಳನ್ನು ತೆಗೆದುಕೊಂಡು ಬಾರತದಾಗ ಬಾಶೆಗಳು ಹೀಗೆ ಕೂಡಿ-ಬೆರೆತು ಬದುಕಿವೆ ಎಂಬುದನ್ನು ತೋರಿಸಿ ಹೀಗೆ ಬಿನ್ನ ಮನೆತನದ ಬಾಶೆಗಳು ಪರಸ್ಪರ ಲಕ್ಶಣಗಳನ್ನು ಹಂಚಿಕೊಳ್ಳುವ ವಾತಾವರಣವನ್ನು ’ಬಾಶಿಕ ಕ್ಶೇತ್ರ’ ಎಂದು ಅವರು ಗುರುತಿಸಿದರು.
ಈ ಅಂಕಣದ ಹಿಂದಿನ ಬರಹಗಳು:ಈ ಅಂಕಣದ ಹಿಂದಿನ ಬರೆಹ:
ಊಶ್ಮ ದ್ವನಿಗಳೆನಿಸಿಕೊಂಬ ಸ್-ಶ್
ಗಿಡ್ಡಕ್ಕರ-ಉದ್ದಕ್ಕರ ನಡುವಿನ ಗೊಂದಲ
’ಹ್’ ದ್ವನಿಯ ಕತೆ
ದ್ವನಿ ಸಾತತ್ಯ- ಸ್ವರ-ವ್ಯಂಜ್ಯನ
ಬಾಶೆಯ ಬೆಳವಣಿಗೆಯನ್ನು ಅರಿತುಕೊಳ್ಳುವುದು ಹೇಗೆ?
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-2
ಕನ್ನಡ ಬಾಶೆಯ ಬೆಳವಣಿಗೆ- ಕೆಲವು ಬ್ರಮೆಗಳು-1
ಕನ್ನಡದ ಒಡೆತ
ಕನ್ನಡ ಪಳಮೆ
ಕನ್ನಡವು ಸ್ವತಂತ್ರಗೊಳ್ಳುತ್ತಿದ್ದ ಕಾಲ
ದ್ರಾವಿಡ ಬಾಶಾ ಮನೆತನ
ಕರ‍್ನಾಟಕ ಪ್ರದೇಶದ ಬಾಶಾ ಬಳಕೆ ಇತಿಹಾಸ ಮತ್ತು ಕನ್ನಡ ಬಳಕೆ
ಇತಿಹಾಸದುದ್ದಕ್ಕೂ ಕನ್ನಡ ಲಿಪಿಯ ಬಳುಕು
ಕನ್ನಡದಿಂದ ಬಾರತಕ್ಕೆ ದ್ವನಿವಿಗ್ನಾನದ ಮರುಪಸರಣ
ಸಂಸ್ಕ್ರುತದಲ್ಲಿ ಉಚ್ಚಾರವಾಗದ ಕನ್ನಡದಲ್ಲಿ ಉಚ್ಚಾರವಾಗುವ ದ್ವನಿಗಳು
ಕನ್ನಡದಾಗ ಬಿನ್ದು > ಬಿಂದು
ದೊಡ್ಡ ಉಸಿರು-ಸಣ್ಣ ಉಸಿರು
ಸಂಸ್ಕ್ರುತದಲ್ಲಿ ಉಚ್ಚಾರವಾಗುವ ಕನ್ನಡದಲ್ಲಿ ಉಚ್ಚಾರವಾಗದ ದ್ವನಿಗಳು
ಪೂರ‍್ವದಿಂದ ಕ್ರಿಶ್ಣಾಕೊಳ್ಳಕ್ಕೆ ಲಿಪಿಯ ಪಯಣ
ಬಾರತವ ಬರೆದ ಲಿಪಿಯ ಉದಯ
ಬಾಶೆ ಅರಿವ ಹರವು
ಕನ್ನಡದಾಗ ದ್ವನಿವಿಗ್ನಾನ
“ವಿಮರ್ಶಾ ಶಿಸ್ತಿಗೆ ಗ್ರಂಥ ಸಂಪಾದನಾಶಾಸ್ತ್ರದ ಒಂದು ಮುಖ್ಯ ಕೊಡುಗೆ ಈ ಸಂಶೋಧನಾ ವಿಮರ್ಶೆ,” ಎನ್ನುತ್ತಾರ...
"ಈ ಕಥೆಯಲ್ಲಿ ನಿರೂಪಕರೇ ಮುಖ್ಯಸ್ಥರಂತೆ ಕಂಡು ಬಂದರೂ ಖಳನಾಯಕ ಹೌದೇನೋ ಅನಿಸಿ ಮರೆಯಾಗುವುದು ಸಹ ಅಷ್ಟೇ ಸತ್ಯ. ಆದರ...
"ಸಾಮಾಜಿಕವಾಗಿ ಎಲ್ಲ ವ್ಯವಸ್ತೆಗಳು ಎಲ್ಲರಿಗೂ ಸಮಾನವಾಗಿ ಒದಗಬೇಕು ಎಂಬುದು. ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ಬಾ...
©2024 Book Brahma Private Limited.