Date: 18-01-2023
Location: ಬೆಂಗಳೂರು
ವಿಶ್ವದ ಮೂಲೆ ಮೂಲೆಯಲ್ಲೂ ಇದೀಗ ಜೈಪುರದಲ್ಲಿ ನಾಳೆಯಿಂದ ನಡೆಯಲಿರುವ ಸಾಹಿತ್ಯ ಉತ್ಸವದ ಮಾತು. ಹೌದು, ಕ್ಲಾರ್ಕ್ಸ್ ಅಮೆರ್ ಅಂಗಳದಲ್ಲಿ ಅಕ್ಷರ ಜಾತ್ರೆಯಲ್ಲಿ ಪ್ರಪಂಚದ ವಿವಿಧ ಸಾಹಿತ್ಯದ ಪ್ರಕಾರಗಳ ಕಥೆಗಳು ಅನಾವರಣಗೊಳ್ಳಲಿವೆ.
16ನೇ ಆವೃತ್ತಿಯ ಈ ಉತ್ಸವದಲ್ಲಿ ಅನೇಕ ವಿಶೇಷತೆಗಳಿವೆ. ಹಲವು ಭಾಷೆಗಳ ವೈವಿಧ್ಯವನ್ನು ಸವಿಯಬಹುದು. 21ಭಾರತೀಯ ಮತ್ತು 14 ಅಂತರರಾಷ್ಟ್ರೀಯ ಭಾಷೆಗಳ ಗೋಷ್ಠಿಗಳು 5 ವೇದಿಕೆಗಳಲ್ಲಿ ನಡೆಯಲಿವೆ. ಸುಮಾರು 350ಕ್ಕೂ ಹೆಚ್ಚು ಭಾಷಣಗಳಿಗೆ ಆದ್ಯತೆ ನೀಡಲಾಗಿದೆ.
ಗುರುವಾರ ಬೆಳಗ್ಗೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಬಳಿಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಅಬ್ದುಲ್ ರಜಾಕ್ ಗುರ್ನಾ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಉತ್ಸವದ ಸ್ಥಾಪಕಿ ನಮಿತಾ ಗೋಖಲೆ, ವಿಲಿಯಂ ಡಾಲ್ರಿಂಪಲ್, ನಿರ್ಮಾಪಕ ಸಂಜಯ್ ಕೆ.ರಾಯ್ ಸೇರಿದಂತೆ ಹಲವರು ಇರಲಿದ್ದಾರೆ.
ಜೈಪುರ ಸಾಹಿತ್ಯ ಉತ್ಸವದ ಸಂಸ್ಥಾಪಕಿ ಮತ್ತು ಸಹ ನಿರ್ದೇಶಕಿ ನಮಿತಾ ಗೋಖಲೆ, "ಜೈಪುರ ಸಾಹಿತ್ಯ ಉತ್ಸವ ಪುಸ್ತಕಗಳು, ಆಲೋಚನೆಗಳ ವಸ್ತುವಾಗಿರಲಿದೆ. ವಿಶ್ವದ ಕೆಲವು ಶ್ರೇಷ್ಠ ಬರಹಗಾರರು ಹಾಗೂ ಯುವ ಧ್ವನಿ ಈ ಮೂಲಕ ಪರಿಚಯವಾಗಲಿದೆ” ಎನ್ನುತ್ತಾರೆ.
ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್, “ಮುಂದಿನ ಐದು ದಿನಗಳ ಕಾಲ ಸಾಹಿತ್ಯ ವಿಶ್ವವಿದ್ಯಾಲಯ ತೆರೆದುಕೊಳ್ಳಲಿದೆ. ಪ್ರಶಸ್ತಿ ಪುರಸ್ಕೃತರು, ಎಲ್ಲಾ ಪ್ರಕಾರದ ಸಾಹಿತ್ಯ ಬರಹಗಾರರು, ಚಿಂತಕರು, ವಿಜ್ಞಾನಿಗಳು, ಅರ್ಥಶಾಸ್ತ್ರಜ್ಞರು, ಕಲಾವಿದರು ಹಾಗೂ ಇತಿಹಾಸಕಾರರು ಒಂದೇ ಸೂರಿನಡಿ ಸಾವಿರಾರು ಭಾಷಣಗಳನ್ನು ಮಾಡಲಿದ್ದಾರೆ. ಜೈಪುರ ಸಾಹಿತ್ಯ ಉತ್ಸವದ ಹಬ್ಬವಾಗಲಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಟೀಮ್‌ವರ್ಕ್ ಆರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಜೈಪುರ ಸಾಹಿತ್ಯ ಉತ್ಸವದ ನಿರ್ಮಾಪಕ ಸಂಜೋಯ್ ಕೆ. ರಾಯ್, “ಭಾರತದ ಶ್ರೀಮಂತ ಸಾಹಿತ್ಯ ಪರಂಪರೆಯನ್ನು ವಿಭಿನ್ನ ಅಭಿಪ್ರಾಯಗಳ ಮೂಲಕ ಮತ್ತಷ್ಟು ಬಲಪಡಿಸುವ ಉದ್ದೇಶವನ್ನು 2023 ರ ಸಮ್ಮೇಳನ ಹೊಂದಿದೆ” ಎಂದಿದ್ದಾರೆ.
5 ದಿನಗಳ ಉತ್ಸವದಲ್ಲಿ ಸಾಹಿತ್ಯಿಕ ಪ್ರವಚನಗಳು, ಆಹ್ಲಾದಕರ ಸಂಗೀತ ಪ್ರದರ್ಶನಗಳು, ಕಲಾ ಪ್ರದರ್ಶನಗಳಿರಲಿವೆ. ಜೈಪುರ ಸಂಗೀತ ವೇದಿಕೆ, ನಾಳೆಯಿಂದ 21 ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಸಂಗೀತ, ಗಜಲ್‌ಗಳು, ಜಾಝ್‌ನಿಂದ ರಾಕ್ ಮತ್ತು ಬ್ಲೂಸ್‌ನವರೆಗೆ ವಿದ್ಯುನ್ಮಾನ ಪ್ರದರ್ಶನಗಳು ಇರಲಿದೆ. ಜನವರಿ 22 ರಂದು ಜೈಪುರದ ಅಂಬರ್ ಫೋರ್ಟ್‌ನ ಗಣೇಶ್ ಪೋಲ್‌ನಲ್ಲಿ ಹೆರಿಟೇಜ್ ಸಂಜೆಯನ್ನು ಆಯೋಜಿಸಲಾಗಿದೆ. ನೃತ್ಯಗ್ರಾಮ್ ಮತ್ತು ಚಿತ್ರಸೇನ ತಂಡದ ನೃತ್ಯಗಳು ಮನರಂಜನೆ ನೀಡಲಿವೆ.
ಜೊತೆಗೆ, ಉತ್ಸವವು ದಕ್ಷಿಣ ಏಷ್ಯಾದ ಅತಿದೊಡ್ಡ ಪ್ರಕಾಶನ ಸಮಾವೇಶವನ್ನು ಒಳಗೊಂಡಿರುತ್ತದೆ. ಇದು ಪ್ರಕಾಶಕರು, ಸಾಹಿತ್ಯ ಏಜೆಂಟ್‌ಗಳು, ಅನುವಾದ ಏಜೆನ್ಸಿಗಳು, ಬರಹಗಾರರು ಮತ್ತು ಪ್ರಪಂಚದಾದ್ಯಂತದ ಪ್ರಮುಖ ಉದ್ದಿಮೆದಾರರನ್ನು ಸಂಪರ್ಕಿಸಲಿದೆ. ಸಾಹಿತ್ಯ ಪ್ರದರ್ಶನದಲ್ಲಿ ಫೆಸ್ಟಿವಲ್‌ನ ಮೈಕ್ರೋಸೈಟ್‌ನಲ್ಲಿ ಲಭ್ಯವಿರುವ ಕೆಲವು ಪ್ರಮುಖ ಅವಧಿಗಳನ್ನು ಲೈವ್-ಸ್ಟ್ರೀಮ್ ಮಾಡಲಾಗುತ್ತದೆ. ಜಗತ್ತಿನಾದ್ಯಂತ ವೀಕ್ಷಿಸುವ ಪ್ರೇಕ್ಷಕರು ಈ ಸೆಷನ್‌ಗಳನ್ನು ಉಚಿತವಾಗಿ ವೀಕ್ಷಿಸಲು ಸಾಧ್ಯವಾಗುತ್ತದೆ.
ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...
16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...
ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...
©2024 Book Brahma Private Limited.