ನಿಗೂಢ, ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು..


“ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತಲೆಬುಡ ಗೊತ್ತಿಲ್ಲದ 'ಹುಲಿ ಪತ್ರಿಕೆ' ಆಗಾಗ ಬರುತ್ತಿತ್ತು. ವಿಶೇಷವೆಂದರೆ ಆ ಊರಲ್ಲಿ ನಡೆಯುತ್ತಿದ್ದ ಅನ್ಯಾಯ, ಅನಾಚಾರ, ಅವ್ಯವಹಾರಗಳನ್ನು ಎಳೆ ಎಳೆಯಾಗಿ ಮತ್ತು ನೇರವಾಗಿ ಬಿಚ್ಚಿಡುತ್ತಿದ್ದ ಪತ್ರಿಕೆ ಅದು” ಎನ್ನುತ್ತಾರೆ ನವೀನಕೃಷ್ಣ ಎಸ್. ಉಪ್ಪಿನಂಗಡಿ. ಅವರು ಅನುಷ್ ಎ. ಶೆಟ್ಟಿ ಅವರ 'ಹುಲಿ ಪ್ರತಿಕೆ' (ಭಾಗ 1& 2) ಕಾದಂಬರಿ ಕುರಿತು ಬರೆದ ವಿಮರ್ಶೆ ಇಲ್ಲಿದೆ.

ಕೃತಿ: ಹುಲಿ ಪ್ರತಿಕೆ (ಭಾಗ 1 & 2)
ಲೇಖಕರು:ಅನುಷ್ ಎ. ಶೆಟ್ಟಿ
ಪ್ರಕಾಶಕರು: ಅನುಗ್ರಹ ಪ್ರಕಾಶನ

ಸೂರ್ಯನು ಅಸ್ತಮಿಸಿ ನಿಶೆ ಆವರಿಸಿತ್ತು. ಸಣ್ಣನೇ ಗುಡುಗುವುದರಿಂದ ತೊಡಗಿ ಧೋ... ಎಂದು ಕಾರ್ಗಾಲದ ಮಳೆ ಸುರಿಯಲಾರಂಭಿಸಿತ್ತು. ಇದೇ ಕಾಲಕ್ಕೆ ಅನುಷ್ ಅವರ 'ಹುಲಿ ಪತ್ರಿಕೆ' ಕಾದಂಬರಿ ಹಿಡಿದು ಸಿಟ್ ಔಟ್‌ನಲ್ಲಿ ಕುಳಿತಿದ್ದೆ. ಎರಡೂ ಪುಸ್ತಕಗಳ ಮೇಲೆ ಕಣ್ಣು ಹಾಯಿಸಿದಾಗ ಕಾಕತಾಳೀಯವೆಂಬಂತೆ ಒಂದರಲ್ಲಿ "ಈ ಪುಸ್ತಕವನ್ನು ಓದುವಾಗ ನಿಮ್ಮ ಕಿಟಕಿಯಾಚೆ ಮಳೆಯಾಗುತ್ತಿರಲೆಂದು ಆಶಿಸುತ್ತೇನೆ" ಎಂದು ಬರೆದಿತ್ತು.

ಕೇರಳ ಮತ್ತು ಕರ್ನಾಟಕ ರಾಜ್ಯಗಳ ಗಡಿಯಲ್ಲಿದ್ದ ಯಾವುದೋ ಊರು ಅದು. ಆ ಊರಲ್ಲಿ ಸಂಪಾದಕರು, ವರದಿಗಾರರು ಯಾರೆಂದೇ ತಲೆಬುಡ ಗೊತ್ತಿಲ್ಲದ 'ಹುಲಿ ಪತ್ರಿಕೆ' ಆಗಾಗ ಬರುತ್ತಿತ್ತು. ವಿಶೇಷವೆಂದರೆ ಆ ಊರಲ್ಲಿ ನಡೆಯುತ್ತಿದ್ದ ಅನ್ಯಾಯ, ಅನಾಚಾರ, ಅವ್ಯವಹಾರಗಳನ್ನು ಎಳೆ ಎಳೆಯಾಗಿ ಮತ್ತು ನೇರವಾಗಿ ಬಿಚ್ಚಿಡುತ್ತಿದ್ದ ಪತ್ರಿಕೆ ಅದು. ಹೀಗಾಗಿ ಕಳ್ಳ ದಂಧೆಯಲ್ಲಿರುವವರಿಗೆ, ಅವರೊಂದಿಗೆ ಶಾಮೀಲಾದವರಿಗೆ, ವಂಚಿಸುವುದಕ್ಕೆಂದು ಹೊರಟವರಿಗೆ ತಮ್ಮ ಮುಖವಾಡ ಬಯಲಾದ ದಿಶೆಯಲ್ಲಿ, ಹಲವರ ನೈಜ ಮುಖದ ಅನಾವರಣವಾದ ಕಾರಣ ಪತ್ರಿಕೆಯ ಮೇಲೆ ದ್ವೇಷ... ಅಜ್ಞಾತವಾಗಿ ಪತ್ರಿಕೆಯನ್ನು ಯಾರು ನಡೆಸುತ್ತಿರಬಹುದೆಂದು ಹುಡುಕಹೊರಟ ಈ ಮಂದಿ. ಮತ್ತೊಂದೆಡೆ ಊರ ಪಟೇಲರ ಮಗ ನಾಪತ್ತೆ.. ಅವನನ್ನು ಹುಡುಕಲು ಹೊರಟ ಇನ್ನೂ ಕೆಲವು ಮಂದಿ. ಪಟೇಲರ ಮಗನ ವಿಚಿತ್ರ ವರ್ತನೆಗಳು, ಅವನ ಪ್ರಕರಣದ ಸುತ್ತ ಮತ್ತೊಂದಿಷ್ಟು ಅಜ್ಞಾತ ವಿಷಯಗಳು...

ಇದೆಲ್ಲದರ ಜೊತೆಗೆ ಲಂಡನ್ನಿಗೆ ಹೋಗುವೆನೆಂದು ಹೊರಟ ಯುವಕನೊಬ್ಬ ಮೂರು ವರ್ಷದ ಬಳಿಕ ಏಕಾಏಕಿ ಪ್ರತ್ಯಕ್ಷವಾಗುವುದು..ಮಾಣಿಯ ದೋಣಿಯಲ್ಲಿ ಕುಳಿತಿದ್ದವರಿಗೆ ಹುಲಿ ಕಾಣಿಸುವುದು.. ಅದನ್ನು ಹುಡುಕಲು ಬರುವ ಅರಣ್ಯ ಇಲಾಖೆಯವರು..ಪತ್ರಿಕೆಯ ಜಾಲವನ್ನು ಭೇದಿಸಲು ಬರುವ ಪತ್ತೇದಾರರು..ಇವುಗಳ ನಡುವೆ ಒಂದಿಷ್ಟು ಪರಿಸರ, ಪ್ರಕೃತಿಯ ಪರಿಚಯ..

ನಿಗೂಢ ಮತ್ತು ಪತ್ತೇದಾರಿಯ ಜಾಡಿನಲ್ಲಿ ಸಾಗುವ ಕಾದಂಬರಿಯಿದು. ಭಾಗ ಎರಡನ್ನು ಓದಬೇಕಿದ್ದರೆ ಒಂದನೇ ಭಾಗವನ್ನು ಓದಿರಬೇಕು. ಅನುಷ್ ಅವರು ತುಂಬಾ ಚೆನ್ನಾಗಿ ಬರೆಯುತ್ತಾರೆ. ಇಲ್ಲಿನ ನಿರೂಪಣಾ ಶೈಲಿ ಭಿನ್ನವಾಗಿದೆ; ಹಾಗೆಯೇ plot setting ಕೂಡ. ಎರಡು ಪುಸ್ತಕಗಳನ್ನು ಓದಲು ನಾವೆಣಿಸಿದಷ್ಟು ಸಮಯವಂತೂ ತೆಗೆದುಕೊಳ್ಳುವುದಿಲ್ಲ. ಈ ಪುಸ್ತಕಗಳನ್ನು ಪ್ರತಿಯೊಬ್ಬ ಪತ್ರಕರ್ತರು ಓದಬೇಕು. ನನಗಂತೂ ಈ ಓದು ತುಂಬಾ ಖುಷಿಕೊಟ್ಟಿತು. ಅನುಷ್ ಅವರು ಭವಿಷ್ಯದ ಉತ್ತಮ ಕಾದಂಬರಿಕಾರರಾಗುತ್ತಾರೆ ಎಂಬ ಭರವಸೆ ನನ್ನದು.

- ನವೀನಕೃಷ್ಣ ಎಸ್. ಉಪ್ಪಿನಂಗಡಿ

MORE FEATURES

ಯುವ ಜನಾಂಗ ಹೇಗಿರಬಾರದು ಎಂದು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವ ಕೃತಿ ‘ಬೇವಾಚ್’

21-09-2024 ಬೆಂಗಳೂರು

"ಕತ್ತಲಾಗುತ್ತಿದ್ದಂತೆ ನಗರದ ಚಿತ್ರಣ ಬದಲಾಗುವುದು ಸಹಜ, ಯಾವ್ಯಾವುದೊ ಉದ್ದೇಶಗಳಿಗೆ ಲೈವ್ ಬ್ಯಾಂಡಿಗೆ ಜನರು ಭೇಟಿ...

ಸ್ವಾಮಿರಾವ್ ಕುಲಕರ್ಣಿ ಅವರು ಬಹುಮುಖ ಪ್ರತಿಭಾವಂತರು

21-09-2024 ಬೆಂಗಳೂರು

“ಸ್ವಾಮಿರಾವ್ ಕುಲಕರ್ಣಿ ಅವರು ಕನ್ನಡ ಭಾಷೆ ಸಾಹಿತ್ಯ ನುಡಿಗಾಗಿ ತಮ್ಮದೇ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ....

ಬೆಳದಿಂಗಳನ್ನೇ ಕುಡಿದು ಬದುಕುವ ಪಕ್ಷಿ

20-09-2024 ಬೆಂಗಳೂರು

"ಈ ಹಕ್ಕಿಗೆ ಬೆಳದಿಂಗಳ ರಾತ್ರಿ ಎಂದರೆ ಬಹಳ ಇಷ್ಟ - ಆದರೆ, ಅದರ ಸೊಬಗನ್ನು ಸವಿಯಲು ಅಲ್ಲ, ಬದಲಿಕೆ ತೀಕ್ಷ್ಣವಾಗಿ,...