ನೆಲದ ಮೇಲಿದ್ದೇ ಆಗಸ ಮುಟ್ಟಬೇಕೆಂಬ ಹವಣಿಕೆಯ ‘ದಿಗಂತದ ಅಪ್ಪುಗೆ’


‌ಹೈಕು ಬಹಳ ಸೂಕ್ಷ್ಮವಾದ ರಚನೆ, ಛಂದಸ್ಸಿನ ನಿಯಮ ಪಾಲನೆ ಮಾಡಿಯೂ ಕಾವ್ಯ ಸೋಲದಂತೆ ಓದಿದೊಡನೆಯೇ ತಕ್ಷಣ ಸ್ಪೋಟಕತೆಯ ಗುಣ ಇರುವಂತೆ ಕವಿತೆಯನ್ನು ರಚಿಸುವದು ನಿಜವಾಗಿ ಕವಿಗೆ ಪಂಥಾಹ್ವಾನ. ಒಂದೆಡೆ ಛಂದೋ ನಿಯಮ ಪಾಲನೆ, ಇನ್ನೊಂದೆಡೆ ಕವಿತೆ ಕವಿತೆಯಾಗಿ ಪರಿಣಾಮ ಬೀರುವ ಅಗತ್ಯ ಇವೆರಡೂ ತೂಗಿಸಿಕೊಂಡು ಈ ಕಾವ್ಯ ರಚನೆಯಾಗಬೇಕೆಂಬುದು ನಿಯಮ ಎನ್ನುತ್ತಾರೆ ಯ.ಮಾ.ಯಾಕೊಳ್ಳಿ, ಸವದತ್ತಿ. ಕವಿ ಈಶ್ವರ ಮಮದಾಪೂರ ಅವರ ದಿಗಂತದ ಅಪ್ಪುಗೆ ಹೈಕುಗಳ ಸಂಕಲನದ ಬಗ್ಗೆ ಅವರು ಬರೆದ ಲೇಖನ ನಿಮ್ಮ ಓದಿಗಾಗಿ..

ಕೃತಿ: ದಿಗಂತದ ಅಪ್ಪುಗೆ
ಲೇಖಕ: ಈಶ್ವರ ಮಮದಾಪೂರ

ಹೈಕು ಜಪಾನಿ ಭಾಷೆಯಿಂದ ಕನ್ನಡ ಕಾವ್ಯ ಲೋಕಕ್ಕೆ ಬಂದ ಕಾವ್ಯ ಪ್ರಕಾರ ‌.ಅನ್ಯ ಭಾಷೆಯ ಈ‌ ಕಿರು ಕಾವ್ಯ‌ಪ್ರಕಾರವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ಅನೇಕ ಹಿರಿಯರು ಮಾಡುತ್ತಲೇ ಬಂದಿದ್ದಾರೆ.ಅದಕ್ಕೆ ಈಗ ಹೊಸ ಸೇರ್ಪಡೆಯಾಗಿರುವವರು ಗೋಕಾಕನ ಶ್ರೀ ಈಶ್ವರ ಮಮದಾಪೂರ ಅವರು.

ಕನ್ನಡದಲ್ಲಿ ಅನ್ಯ ದೇಶಿಯ ಕಾವ್ಯ ಪ್ರಕಾರಗಳಾದ ಹೈಕು, ಟಂಕಾ ,ಗಜಲ್ ಶಾಯಿರಿ ಇತ್ಯಾದಿ ಕಾವ್ಯ ಪ್ರಕಾರಗಳು ತುಂಬ ರಚನೆಯಾಗುತ್ತಿರುವದು ಕನ್ನಡ ಕಾವ್ಯ ಪ್ರಕಾರದ ಶ್ರೀಮಂತಿಕೆಯನ್ನು ಹೆಚ್ಚಿಸುತ್ತಿದೆ.

ಇವುಗಳಲ್ಲಿ ಹೈಕು ಬಹಳ ವಿಶಿಷ್ಟವಾದ ಕಾವ್ಯ ಪ್ರಕಾರ. ಅಂದರೆ ಹೀಗೆ ಬಂದಿರುವ ಕಾವ್ಯ ಪ್ರಕಾರಗಳಲ್ಲಿಯೇ ಗಾತ್ರದಲ್ಲಿ ತುಂಬ ಕಿರುದಾದುದು. ಪ್ರತಿ ಹೈಕಿನಲ್ಲಿ ಮೂರೇ ಸಾಲು , ಹದಿನೇಳೆ ಅಕ್ಷರ ಇರಬೇಕು ,ಅದೂ ಮೊದಲ ಸಾಲಲ್ಲಿ ಐದು, ಎರಡನೆಯ ಸಾಲಲ್ಲಿ‌ ಏಳು, ಕೊನೆಯ ಮೂರನೆಯ ಸಾಲಿನಲ್ಲಿ ಐದು ಸ್ವತಂತ್ರ ಉಚ್ಚಾರಾಂಶಗಳು ಇರಬೇಕು ಎನ್ನುವದು ಹೈಕಿನ ಚಂದಸ್ಸಿನ ನಿಯಮ. ಇದನ್ನು ಪಾಲಿಸಿ ಬರೆದರೆ ಅದು ಹೈಕು..ಇಲ್ಲದಿದ್ದರೆ ಹೈಕು ಮಾದರಿಯ ಚುಟುಕು ಎನಿಸುತ್ತದೆ. ೫/೭/೫ ಅಕ್ಷರಗಳು ಇರಬೇಕು ನಿಜ. ಆದರೆ ಒಂದು ಉದ್ದ ವಾಕ್ಯವನ್ನು ಹೀಗೆ ಅಕ್ಷರಾಂಶಗಳ ಮಾದರಿಯಲ್ಲಿ ಕತ್ತರಿಸಿಟ್ಟು ಹೈಕು ಎನಲಾಗದು. ಅಲ್ಲೊಂದು ಸುಂದರ ಕವಿತೆ, ಓದಿದೊಡನೆಯೆ ಬೆಳಕು, ಮಿಂಚು ಹರಿಯಬೇಕು, ಅದು ಛಂದಸ್ಸಿನ ನಿಯಮಗಳಿಗೆ ಬದ್ದವಾದರೆ ಸಾಕು ಎನ್ನುವ ವಿಚಾರ ಸಲ್ಲದು. ಹೀಗೆ ಕವಿತೆಯೊಂದನ್ನು ಅಕ್ಷರಗಳ ಮಿತಿಗೆ ಬಂಧಿಸುವದನ್ನು ಒಪ್ಪದ ಅನೇಕ ಶ್ರೇಷ್ಠ ಹೈಕುದಾರರು ೫/೭/೫ ರ ಮಿತಿಗೊಳಪಡದೆಯೂ ಹೈಕು ರಚಿಸಿದ್ದಾರೆ ಅಂತಹ ಉದಾಹರಣೆಯೆ ಪ್ರಾರಂಭದ ರಚನೆಗಳಲ್ಲಿ ಕಂಡು ಬರುತ್ತವೆ. ಆದರೆ ಸಮಕಾಲೀನದಲ್ಲಿ ಬರೆಯುವ ಹಲವರು ಈ ನಿಯಮವನ್ನು ಉಳಿಸಿಕೊಂಡು, ಕಾವ್ಯವನ್ನೂ ಉಳಿಸಿಕೊಂಡು ಹೈಕು ರಚನೆ ಮಾಡುತ್ತಿರುವದು ನಿಜಕ್ಕೂ ಉತ್ತಮ ಬೆಳವಣಿಗೆಯಾಗಿದೆ. ಈ ಕುರಿತ ವಿದ್ವಾಂಸರ‌ ಮಾತುಗಳಿವು.

‌ಹೈಕು ಬಹಳ ಸೂಕ್ಷ್ಮವಾದ ರಚನೆ, ಛಂದಸ್ಸಿನ ನಿಯಮ ಪಾಲನೆ ಮಾಡಿಯೂ ಕಾವ್ಯ ಸೋಲದಂತೆ ಓದಿದೊಡನೆಯೇ ತಕ್ಷಣ ಸ್ಪೋಟಕತೆಯ ಗುಣ ಇರುವಂತೆ ಕವಿತೆಯನ್ನು ರಚಿಸುವದು ನಿಜವಾಗಿ ಕವಿಗೆ ಪಂಥಾಹ್ವಾನ. ಒಂದೆಡೆ ಛಂದೋ ನಿಯಮ ಪಾಲನೆ, ಇನ್ನೊಂದೆಡೆ ಕವಿತೆ ಕವಿತೆಯಾಗಿ ಪರಿಣಾಮ ಬೀರುವ ಅಗತ್ಯ ಇವೆರಡೂ ತೂಗಿಸಿಕೊಂಡು ಈ ಕಾವ್ಯ ರಚನೆಯಾಗಬೇಕೆಂಬುದು ನಿಯಮ.

ಇಂತಹ ಕಾವ್ಯ ಪ್ರಕಾರವನ್ನು ಜಗತ್ತಿಗೆ ನೀಡಿದವರು ಜಪಾನಿಯರು, ಇದು17 ನೆಯ ಶತಮಾನದಲ್ಲಿಯೇ ಮೂಡಿತೆಂದೂ, ಬಾಸೋ,ಬುಸೋವ, ಆಸ್ಸಾಂ, ನೋಬೋರು (ಷಿಕಿ ಎಂದು ಹೆಸರುವಾಸಿ) ಮೊದಲಾದ ಕವಿಗಳು ಪ್ರಸಿದ್ಧಗೊಳಿಸಿದರೆಂದೂ ವಿದ್ವಾಂಸರು ಹೇಳುತ್ತಾರೆ. ಇದು ಬೌದ್ಧ ಮತ್ತು ಝೆನ್ ತತ್ವಗಳಿಂದ ಪ್ರಭಾವಿತವಾದುದು ಎಂತಲೂ ಗುರುತಿಸಿದ್ದಾರೆ..

" ಜಪಾನಿನಲ್ಲಿ 17 ನೆಯ ಶತಮಾನದಲ್ಲಿ ಹೈಕಾಯ ಎಂಬ ಲೋಕರಂಜನೆಯ ಕಾವ್ಯ ಪ್ರಯೋಗದ್ದೊಂದು ಮಹತ್ವದ ಭಾಗವಾಗಿ ೫/೭/೫ ಅಕ್ಷರಗಳ ಮೂರು ಸಾಲುಗಳ ಹೈಕು ಮೊಗದೋರಿತು. ಮದ್ಯದಲ್ಕಿ ಅನೇಕ ಸ್ತಿತ್ಯಂತರಗಳನ್ನು ಕಂಡಿತು .ಹೊಸ ಮಾರ್ಪಾಟಾಗಿ ಹಿನ್ನಡೆ ಅನುಭವಿಸಿ ಮತ್ತೆ ಮುನ್ನೆಲೆಗೆ ಬಂದು ಓಡಾಡಿತು. ಆದರೆ‌ ಮುಂದೆ ಹತ್ತೊಂಬತ್ತನೆಯ ಶತಮಾನದ ಕೊನೆಕೊನೆಗೆ ಪರಂಪರಾಗತ ಹೈಕು ಕಾವ್ಯ ಪದ್ದತಿಯಿಂದ ಬೇರ್ಪಡಿಸಿ ಹೈಕು ಪ್ರಕಾರಕ್ಕೆ ಪೂರ್ಣ ಪುನರುಜ್ಜೀವನ ನೀಡಿದ ಕವಿ ಮನಾಮೋರ್ ನೋಬೋರು ( ಈತನ ಕಾವ್ಯನಾಮ ಷಿಕಿ) "

(ಡಾ ಶಾರದಾ ಮುಳ್ಳೂರ ,ಮಂದಹಾಸ ಸಂಕಲನದ ಕವಿಯ ನುಡಿ ಪು ix)

ಈ ಕಾವ್ಯ ಪ್ರಕಾರದಲ್ಲಿ ಯಾವುದನ್ನು ಅಲ್ಲಿ syllabi, syllable ಎನ್ನುತ್ತಾರೆಯೋ ಒಂದು ಅಕ್ಷರವೆಂದು ಕನ್ನಡ ಕವಿಗಳು ಗ್ರಹಿಸಿದರು. ಹೀಗಾಗಿ ಕನ್ನಡ ಹೈಕುಗಳು ಮೊದಲ ಸಾಲು 5 ಅಕ್ಷರ,ಎರಡನೆಯ ಸಾಲು 7 ಅಕ್ಷರ ಮತ್ತು ಕೊನೆಯ ಸಾಲು 5 ಅಕ್ಷರ ಈ ನಿಯಮದಲ್ಲಿ ರಚನೆಯಾಗಿರುವದನ್ನು ಈ ಮೊದಲೇ ಚರ್ಚಿಸಿದೆ‌

ಹೈಕು ಎಲ್ಲಿಂದಲೇ ಬರಲಿ, ಅದು ಸದ್ಯಕ್ಕೆ ಕನ್ನಡದಲ್ಲಿ ತುಂಬ ಆಕರ್ಷಣೆಯಲ್ಲಿರುವ ಕಾವ್ಯ ಪ್ರಕಾರ ಎನ್ನಬಹುದು. ಈ‌ ಮೊದಲೆ ಹಿರಿಯರು ಸಂಕಲನ ತರುತ್ತಿದ್ದರೂ ಸಾಮಾಜಿಕ ಜಾಲತಾಣ ಬಂದ‌ಮೇಲೆ ಕವಿತೆಗಳ ಬರವಣಿಗೆ ತೀರ ಮುಕ್ತವಾಗಿದೆ. ಕವಿತೆ ಓದಲು, ಬರೆಯಲು ಮುದ್ರಣ ಮಾದ್ಯಮವನ್ನೇ ಅವಲಂಬಿಸಬೇಕಾದ ಅನಿವಾರ್ಯತೆಯೇನೂ ಈಗ ಇಲ್ಲ ಎನ್ನುವ ಕಾಲವೇ ಸೃಷ್ಟಿಯಾಗಿದೆ.ಆದರೆ ಇಲ್ಲಿ ರಚನೆಯಾಗುವ ಕವಿತೆ ಬಹು ಕಾಲ‌ ಮನಸ್ಸಿನ‌ ಮೇಲೆ ಉಳಿಯುಲಾರವು ಎನ್ನುವದು ಸತ್ಯವಾದರೂ ನಾವು ಬದುಕುತ್ತಿರುವ ಕಾಲವೂ ತತ್ ಸಮಯದ ಆನಂದವನ್ನೇ ನೆಚ್ಚಿರುವ ಕಾಲವಾದ್ದರಿಂದ ಇದು ಯಶಸ್ವಿಯಾಗಿಯೇ ಓಡುತ್ತಿದೆ. ಶಾಸ್ವತತೆಯ ಪ್ರಶ್ನೆಗೆ ಪಕ್ಕಾಗುವವರು ಇಲ್ಲಿ ರಚನೆಯಾದ ಬರಹವನ್ನು ಮತ್ತೆ ಮುದ್ರಣವರೂಪಕ್ಕಿಳಿಸಿ ಕನ್ನಡದ ಎಲ್ಲ ಓದುಗರ ಕೈಗೂ ಸಿಗುತ್ತಾರೆ.ಅದೆನೂ‌ ಮಹಾ ಸಮಸ್ಯೆಯಲ್ಲ. ಇದೆಲ್ಲ ಒಂದೊಂದು ಕಾಲಕ್ಕೆ ಆಗುವ ಸ್ತಿತ್ಯಂತರಗಳೇ.

ಕವಿ ಪರಿಚಯ:
ಹೈಕು ಬರೆಯುವದನ್ನು ಒಂದು ವ್ರತದಂತೆ‌ ಕಾಪಾಡಿಕೊಂಡು ಬಂದ ಕವಿ ಈಶ್ವರ ಮಮದಾಪೂರ ಅವರು. 1968ರಲ್ಲಿ ರಾಯಬಾಗ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಜನಿಸಿದ ವರು .ತಂದೆ ವಿರೂಪಾಕ್ಷಪ್ಪ ,ತಾಯಿ ರತ್ನವ್ವ, ಹಿಂದಿ ಭಾಷೆಯಲ್ಲಿ‌ ಪದವಿ‌ ಪಡೆದು‌, ಬೆಳಗಾವಿ ಕೆ.ಎಲ್ .ಇ .ಸಂಸ್ಥೆಯ ಟಿ. ಸಿ.ಹೆಚ್ . ತರಬೇತಿ ಪಡೆದುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ ಶ್ರೀ ಯುತರು ಸಾಮಾಜಿಕ, ಸಾಂಸ್ಕೃತಿಕ , ಸಾಹಿತ್ಯಕ ಸೇವೆಯಲ್ಲಿ ತೊಡಗಿಕೊಂಡು ರಾಜ್ಯಾದ್ಯಂತ ಗುರುತಿಸಿಕೊಂಡವರು . ಇವರ ವ್ಯಾಟ್ಸಾಪ್ ಸ್ನೇಹಕೂಟವು ರಾಜ್ಯಾದ್ಯಂತ ಸಾವಿರಾರು ಸ್ನೇಹಿತರನ್ನು ಹೊಂದಿದೆ ನೂರಾರು ಕವಿಗಳನ್ನು ಬೆಳೆಸಿದೆ.

ಹನಿಗವನ ,ಚುಟುಕು,ಗಜಲ್ ,ಶಾಯಿರಿ ಇವು ಇವರ ಪ್ರೀತಿಯ ಕಾವ್ಯ‌ ಪ್ರಕಾರಗಳು.

ಮಮದಾಪೂರ ಅವರ ಚುಟುಕುಗಳು, ಮಮದಾಪೂರ ಅವರ ಹನಿಗವಿತೆ ಗಳು , ಗೋರಿಯೊಳಗಿನ ಉಸಿರು ಗಜಲ್ ಸಂಕಲನ, ಇವು ಅವರ ಸ್ವತಂತ್ರ ಕೃತಿಗಳು. ಇದರೊಂದಿಗೆ ಕಾವ್ಯಯಾನ ಎಂಬ ಕವನ ಸಂಕಲನವನ್ನು ಸಂಪಾದನೆಯೊಂದಿಗೆ ಪ್ರಕಟಿಸಿದ್ದಾರೆ. ಕಾವ್ಯ ಕೂಟ ಎಂಬ ರಾಜ್ಯ ಮಟ್ಟದ ವ್ಯಾಟ್ಸಪ್ ಬಳಗ ಸಂಸ್ಥಾಪನೆ ಮಾಡಿದವರು. ತನ್ಮೂಲಕ ರಾಜ್ಯಾದ್ಯಂತ ಇವರ ಸ್ನೇಹಕೂಟ ವ್ಯಾಪಿಸಿದೆ. ಇವರಿಗೆ ಅನೇಕ ಪ್ರಶಸ್ತಿಗಳೂ ಸಂದಿದ್ದು ಉತ್ತಮ ಸಂಘಟಕರೂ ಆಗಿದ್ದಾರೆ.

ಇದೀಗ ಹೈಕು ಪ್ರಕಾರದಲ್ಲಿ ಹೊರತಂದ ಕೃತಿಯೇ " ದಿಗಂತದ ಅಪ್ಪುಗೆ". ಇದು ಈಶ್ವರ ಪ್ರಕಾಶನದಿಂದ 2022 ರಲ್ಲಿ ಮುದ್ರಣವಾಗಿದೆ. ಸಂಕಲನಕ್ಕೆ ನಾಡಿನ ಹಿರಿಯ ಗಜಲ್ ಕಾರ್ತಿ, ಶ್ರೇಷ್ಠ ಹೈಕು ಕವಿಯತ್ರಿಯರಾದ ಶ್ರೀಮತಿ ಅರುಣಾ ನರೇಂದ್ರ ಅವರ ಮುನ್ನುಡಿ ಬರೆದಿದ್ದು ಅರ್ಥಪೂರ್ಣವಾಗಿದೆ . ಈಚೆಗೆ ತುಂಬಾ ಹೆಸರು ಮಾಡಿರುವ, ಸಕ್ರಿಯರಾಗಿರುವ ವಿಮರ್ಶಕ ಮಿತ್ರ ಡಾ.ಮಲ್ಲಿನಾಥ ತಳವಾರ ಅವರ ಸದಾಶಯ, ಶ್ರೀಮತಿ ರತ್ನಾ ಕೃಷ್ಣ ಭಟ್ ಅವರ ಬೆನ್ನುಡಿಗಳು ಕೃತಿಯ ಅಂದ ಮತ್ತು ತೂಕಕ್ಕೆ ಮೆರಗು ನೀಡಿವೆ.

ಹೈಕು ಪದಕ್ಕೆ "ದಿಗಂತದ ಅಪ್ಪುಗೆ" ಎಂಬುದು ಸೂಕ್ತ ಶೀರ್ಷಿಕೆ. ನೆಲದ ಮೇಲಿದ್ದೇ ಆಗಸ ಮುಟ್ಟಬೇಕೆಂಬ ಹವಣಿಕೆ ಈ ಕಿರು ಕಾವ್ಯದ್ದು. ಇರುವದು ಮೂರೇ ಸಾಲು,ಅದು ವ್ಯಾಪಿಸುವ ವ್ಯಾಪ್ತಿ ಆಗಸದಷ್ಟು. ಹಾಗಾಗಿ ಈ ಸಂಕಲನಕ್ಕೆ ದಿಗಂತದ ಅಪ್ಪುಗೆ ಎಂದಿರುವದು ಸರಿಯಾಗಿಯೇ ಇದೆ.

ಅಪ್ಪನ ಚಿತ್ರಗಳೊಂದಿಗೆ ಇಲ್ಲಿನ ಹೈಕು ಆರಂಭವಾಗುತ್ತವೆ. ಅಪ್ಪ ಎಂದಿಗೂ ಅಷ್ಟಾಗಿ ಕಾವ್ಯದೊಳಕ್ಕೆ ಪ್ರವೇಶ ಪಡೆದವನಲ್ಲ. 'ಅವ್ವ' ಕಾವ್ಯ ಲೋಕದಲ್ಕಿ ರಾರಾಜಿಸಿದಷ್ಟು ಅಪ್ಪನ ಇರುವಿಕೆ ಡಾಳಾಗಿ ಕಾಣಿಸಲಾರದು. ಆದರೆ ಕವಿ ಮಮದಾಪೂರ ಅವರು ಅಪ್ಪನ ಕುರಿತು ತುಂಬಾ ಆಪ್ತವಾಗಿಯೇ ಇಲ್ಲಿ ದಾಖಲಿಸಿದ್ದಾರೆ.

ಅಪ್ಪನ ಶ್ರಮ, ತ್ಯಾಗ, ಮರೆತ ಬೆಳೆದ ಮಕ್ಕಳು ಅವನಿಗೆ ಕೃತಘ್ನರಾಗಿ ನಡೆದುಕೊಂಡದ್ದು ಕವಿಗೆ ಸಹನೆ ಇಲ್ಲ.

ಅಪ್ಪನ ಆಸೆ
ಮಗ ವಿದೇಶದಲ್ಲಿ
ಅಪ್ಪ ಅನಾಥ

ಹೀಗೆ ಮಕ್ಕಳನ್ನು ವಿದೇಶಕ್ಕೆ ಕಳಿಸಿ ಅನಾಥನಾದ ಅಪ್ಪನ ಚಿತ್ರ ಒಂದೆಡೆ ಇದ್ದರೆ; ಇನ್ನೊಂದೆಡೆ ಅವನ ಬೆವರೇ ಮಕ್ಕಳಿಗೆ ಸ್ಪೂರ್ತಿ ಎಂದು ಹೇಳಲು ಮರೆಯುವದಿಲ್ಲ.ನಾವೆಲ್ಲ ಹುಟ್ಟಿದೂರಿನಿಂದ ಹೊರಬಂದು ಬೇರೆಡೆ ಆಸರೆ ಕಟ್ಟಿಕೊಂಡವರು.ಆದರೆ ಜನ್ಮದೂರಿನ ನೆನಪು ಮಾಸದು .ಏಕೆಂದರೆ ಅಲ್ಲಿರುವ ಬೇರುಗಳು ಎಂದೂ ಕತ್ತರಿಸಲಾರವು.

ಜನ್ಮದೂರಿನ
ನೆನಪೆಂದೂ ಮಾಸದು
ಬೇರುಗಳಿವೆ

ಹೀಗೆ ಅವರ ಹೈಕುಗಳು ನಮ್ಮ‌ ಮೂಲವನ್ನು ಚಿಂತನೆಗೀಡು ಮಾಡುತ್ತವೆ.ಈಶ್ವರ ಅವರ ಹೈಕುಗಳಲ್ಲಿ ನಿಸರ್ಗದ ವೈಭವದ ಚಿತ್ರಗಳು ತುಂಬ ಸುಂದರವಾಗಿವೆ.

ಬೆಟ್ಟದ ಝರಿ
ನದಿಯಾಗಿ ಓಡಿತ್ತು
ಕಡಲಪ್ಪಿತ್ತು

ಹೀಗೆ ನಿಸರ್ಗದ ವೈಭವ ಚಿತ್ರಿತವಾದರೆ ಸ್ಬಾರ್ಥಿಮನುಷ್ಯ ನಿಸರ್ಗ ಹಾಳು ಮಾಡುತ್ತಿರುವ ಬಗ್ಗೆ ಆಕ್ರೋಶವಿದೆ.

ಪರಿಸರದ
ತಪ್ಪಿಲ್ಲ, ,ತಪ್ಪೆಲ್ಲವು
ನಮ್ಮ ಸ್ವಾರ್ಥದ್ದು

ಹುಡುಕುತ್ತಿದೆ
ಕಾಡು ತಿಂದವನನ್ನು
ಹಸಿದ ಹುಲಿ

ಇತ್ಯಾದಿ ಹೈಕುಗಳಲ್ಲಿ‌ಮನುಷ್ಯ ನಿಸರ್ಗದ ಮೇಲೆ ಮಾಡುತ್ತಿರುವ ಅನ್ಯಾಯ,ಇದರಿಂದ ಇಂದು ಕಾಡಿನ‌ ಕ್ರೂರ ಪ್ರಾಣಿಗಳು ಅವನನ್ನು ಅಟ್ಟಾಡಿಸಿಕೊಂಡು ಬೆನ್ನತ್ತುವದರಲ್ಕಿ ತಡವಿಲ್ಲ ಎಂಬುದರ ದರ್ಶನ ಇಲ್ಲಿದೆ. ಅನೇಕ ಸಲ ಕಾಡಾನೆ ಯಂತಹ ಪ್ರಾಣಿಗಳು ನಾಡಿಗೆ ನುಗ್ಗಿದ ಉದಾಹರಣೆ ನಮ್ಮ ಮುಂದಿದೆ.

ಪ್ರೀತಿ ಜಗದ ಬೆಳಕು ಎಂದು ನಂಬಿದ ಕವಿ ಈಶ್ವರ್ ಅವರು.

ಅರಿತು ನಡೆ
ಪ್ರೀತಿ ಜಗದ ಸತ್ಯ
ಪ್ರೇಮ ಬೆಳಕು

ಇದು ಅವರ ಕಾವ್ಯದ ಒಟ್ಟು ಸಾರ. ಗಜಲ್ ಕವಿಗಳು ಹೇಳುವಂತೆ ಲೋಕದಲ್ಲಿ ಎರಡು ಬಗೆಯ ಪ್ರೀತಿ ಇದೆ.ಒಂದು ಗಂಡು ಹೆಣ್ಣಿನ ನಡುವನ ಲೌಕಿಕ ಪ್ರೀತಿ.ಇನ್ನೊಂದು ಜಗಕ್ಕೆ ಒಳಿತಾಗಲಿ ಎನ್ನುವ ಲೋಕ ಪ್ರೀತಿ.ಈ ಎರಡೂ ಬಗೆಯ ಪ್ರೀತಿಗಳು ಅರಳಬೇಕಿವೆ. ಇಲ್ಲಿ ನಮಗೂ ಒಳತಾಗಬೇಕು ,ಜಗತ್ತಿಗೂ ಒಳ್ಳೆಯದಾಗಬೇಕು ಎಂದು ಸಾರುವದೇ ಎಲ್ಲ ಬಗೆಯ ಸಾಹಿತ್ಯದ ಸಾರವಾಗಿದೆ. ಕವಿಯ ಸುಂದರ ಒಲವಿನ ಚಿತ್ತಾರದ ನುಡಿಗಳಿಗೆ ಉದಾಹರಣೆಯಾಗಿ

ನೀನಿಟ್ಟ ಮುತ್ತು
ದೇಹವೆಲ್ಲಾ ಬೆವೆತ
ಮುತ್ತಿನ ಹನಿ

ಹೀಗೆ ಕವಿ ರಮ್ಯವಾಗಿ ಬರೆಯುತ್ತಾರೆ. ಅವಳು ಇಲ್ಲದ ಕಾವ್ಯ ಇರಲುಂಟೇ? ಇಲ್ಲಿ ಅವಳೂ ಮತ್ತೆ ಮತ್ತೆ ಹಾಜರಾಗಿದ್ದಾಳೆ ' ಅವಳು ' ಎಂಬ ಪದವೇ ಅದ್ಭುತ!. ಅವಳ ಬಿಟ್ಟು ಕವಿಯ ಜಗತ್ತೇ ಇಲ್ಲ.

ಅವಳೆಂದರೆ/ಪ್ರೇಮ ಸಾಗರದಾಳ/ನಾನಲ್ಲಿ ಮುತ್ತು.
ಅವಳೆಂದರೆ /ನಗುವಿನ ಕಡಲು / ತೇಲುತ್ತಿದ್ದೇನೆ
ಅವಳಿಲ್ಲದೆ/ ಚಲಿಸಲಾರೆ ನಾನು/ ಬತ್ತದ ನದಿ

ಹೀಗೆ ಅವಳಿಗೂ ಕವಿತೆಗೂ ಮುಗಿಯದ ನಂಟು ಎನ್ನುವದನ್ನು ಕವಿ ಸಾರಿದ್ದಾರೆ.

ಗುರು ಶಿಷ್ಯ ಸಂಬಂಧವನ್ನೂ ಇವರ ಹೈಕು ಚಿತ್ರಿಸಿದೆ. ಜಗತ್ತಿನ ಎಲ್ಲ ಸಂಬಂಧಗಳಲ್ಲಿ ತುಂಬ ಪವಿತ್ರವಾದದ್ದು ಗುರು ಶಿಷ್ಯ ಸಂಬಂಧ. ಸ್ವಾರ್ಥ ರಹಿತ ಸಂಬಂಧ. ಶರಣ ಸಾಹಿತ್ಯವನ್ನು ಮೆಚ್ಚದವರಾರು? ವಿಶೇಷ ಎಂದರೆ ಶರಣರ ಕುರಿತ ಹೈಕುಗಳು ಅಪರೂಪ. ಈಶ್ವರ ಮಮದಾಪೂರ ಅವರು

ವಚನಸಾರ
ಜ್ಞಾನದಾಗರವಿದು
ನಾಡ ಸಂಪತ್ತು

ಬಸವ ಜ್ಯೋತಿ
ಶೋಷಿತರ ಬೆಳಕು
ಕತ್ತಲು ನಾಶ

ಹೀಗೆ ವಚನಕಾರರು, ಅವರ‌ ಕಾಲದ ಮಹತ್ವವನ್ನುಚಿತ್ರಿಸಿದರೆ ಕೆಲ ಹೈಕುಗಳಲ್ಲಿ ಪುಸ್ತಕಗಳ ಬಣ್ಣನೆ ಇಲ್ಲಿದೆ. ಜಾತಿ ವ್ವವಸ್ಥೆ ವಿರೋಧ ಕುರಿತಂತೆ ಕೆಲ ಹೈಕುಗಳು ಇಲ್ಲಿವೆ, ಜಗತ್ತಿನಲ್ಲಿ ಯುದ್ಧ ಬೇಡ, ಹಿಂಸೆ ಕಡಿಮೆಯಾಗಲಿ ಇತ್ಯಾದಿ ಸಾರಿದ್ದಾರೆ.

ಕೆಲವು ಸಲ ಕವಿ ತಾತ್ವಿಕ ಚಿಂತನೆಯತ್ತಲೂ ಜಾರುತ್ತಾರೆ. ಸಹಜವಾಗಿಯೇ ಬದುಕಿನ ಚಿಂತನೆ ಮೂಡುತ್ತದೆ. ತತ್ವಪದಕಾರರಂತೆ 'ನಾಲ್ಕು ದಿನದ ಸಂತೆ' ಈ ಬದುಕು ಎಂಬ ಭಾವಕ್ಕೂ ಬಂದು ತಲುಪುತ್ತಾರೆ. ಇದು ಅವರ ಅನುಭವದ ಬೆಳಕು.

ಹುಟ್ಟು ಸಾವಿನ
ನಡುವೆ ಮೂರು ದಿನ
ನಿನ್ನ ಬದುಕು

ಇಂತಹ ರಚನೆಗಳನ್ನು ಗಮನಿಸಬೇಕು.

ಒಟ್ಟಾರೆ ಮನುಷ್ಯತ್ವ ನೆಲೆ ನಿಲ್ಲಬೇಕು ಶೋಷಿತರ ಶೋಷಣೆ ಕಡಿಮೆಯಾಗಬೇಕು, ಪ್ರೀತಿ ಹಂಚಬೇಕು ಎನ್ನುವದು ಕವಿಯ ಆಶಯ. ಎಲ್ಲೆಲ್ಲೂ ಪ್ರೀತಿ ಇದೆ.

ರವಿಯ ಚುಂಬನ
ಮಲ್ಲಿಗೆ ನಕ್ಕ‌ ಕ್ಷಣ
ಹಾಲು ಬೆಳಕು

ಎನ್ನುವ ಕವಿ ತಮ್ಮ ಸ್ವಂತ ಪ್ರೀತಿಯನ್ನೂ ಕವಿತೆಯಾಗಿಸದೇ ಬಿಟ್ಟಿಲ್ಲ

ಬದುಕೆಂದರೆ
ಪ್ರತಿ ಕ್ಷಣವೂ ಪ್ರೀತಿ
ಅಮೃತ ಪಾನ

ಎಂದು ನಂಬಿದ ಈ " ಪ್ರೇಮದ ಪ್ರವಾದಿಯ" ದಾರಿ ಇನ್ನಷ್ಟು ಹಸಿರಾಗಲಿ ಅವರ ಕವಿತೆ ಹರಿದು ಸುತ್ತಲಿನ ಜಗ ಬೆಳಗಲಿ ಎಂದು ಹಾರೈಸುತ್ತೇನೆ. ಎಲ್ಲ ಬಗೆಯ ಚಂದಸ್ಸಿನ ನಿಯಮ ಮುರಿಯದ ರಚನೆಗಳು ಇಲ್ಲಿಯವು ಎನ್ನಬಹುದು.

ಅಪರೂಪಕ್ಕೆ ಕೆಲವೊಮ್ಮೆ ಪುನರುಕ್ತತೆ, ಜಾಳು ಜಾಳು ರಚನೆ ಎನ್ನಿಸಿದರೂ ಅಂತಹ ಒಂದೆರಡು ರಚನೆ ಎಲ್ಲ ಸಂಕಲನದಲ್ಕಿಯೂ ಸಹಜವೇ ಎಂದು ಅವುಗಳನ್ನಾಚೆ ಸರಿಸಿಬಿಡಬೆಕು. ಬಹಳಷ್ಟು ಸರಳ ಸುಂದರ ರಚನೆಗಳನ್ನು ನೀಡಿದ ಕವಿ ಶ್ರೀ ಈಶ್ವರ ಮಮದಾಪೂರ ಅವರಿಗೆ ತುಂಬು ಹೃದಯದ ಅಭಿನಂದನೆಗಳು.

ಡಾ.ಯ.ಮಾ.ಯಾಕೊಳ್ಳಿ, ಸವದತ್ತಿ

MORE FEATURES

ಕಾವ್ಯಾನುವಾದ ಎಲ್ಲ ಕಾಲದಲ್ಲೂ ಅಗತ್ಯವಾದ ಕ್ರಿಯೆಯೇ

18-12-2024 ಬೆಂಗಳೂರು

"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...

ಕಾವ್ಯವನ್ನು ಕಣ್ಣಿನಿಂದ ಕಿವಿಗೆ ಹಸ್ತಾಂತರಿಸಿ ಹೃದಯಕ್ಕೆ ಮುಟ್ಟುವಂತೆ ಮಾಡಿದವರು ಕಂಬಾರರು

18-12-2024 ಬೆಂಗಳೂರು

“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...

ಅಖಂಡ ನಾಲ್ಕು ವರ್ಷಗಳ ಚಿಂತನ ಮಂಥನ ಪಾತ್ರಗಳ ಪರದಾಟ..

18-12-2024 ಬೆಂಗಳೂರು

“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...