ಮೂರೂ ಕಥನಗಳು ಮೂರು ದಿಕ್ಕಿನವು


"ಮೂರೂ ಕಥನಗಳು ಮೂರು ದಿಕ್ಕಿನವು. ಹಾಗಾಗಿ, ಒಟ್ಟು ಓದು ಸ್ವಲ್ಪ ಚದುರಿದಂತೆ ಅನ್ನಿಸಿದರೂ ಕುತೂಹಲಕರವಾಗಿತ್ತು," ಎನ್ನುತ್ತಾರೆ ರಾಜಾರಾಂ ತಲ್ಲೂರು. ಅವರು ಡಿ.ಎಸ್. ಚೌಗಲೆ ಅವರ ‘ಸದರಬಜಾರ್’, ಗೋವಿಂದರಾಜು ಕಲ್ಲೂರು ಅವರ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಹಾಗೂ ಶುಭದಾ ಎಚ್.ಎನ್ ಅವರ ‘ದೇವಿ ಕುರುಬತಿ’ ಕೃತಿ ಕುರಿತು ಬರೆದ ಟಿಪ್ಪಣಿ ನಿಮ್ಮ ಓದಿಗಾಗಿ.

ಹದಿನೈದು ದಿನಗಳಲ್ಲಿ ಮೂರು ಪುಸ್ತಕಗಳನ್ನು ಓದಿ ಮುಗಿಸಿದೆ. ಗೋವಿಂದರಾಜು ಅವರನ್ನು ಶಿವಮೊಗ್ಗದಲ್ಲಿ ಭೇಟಿ ಮಾಡಿದ್ದೆ. ಅಲ್ಲಿಂದ ಬರುವಾಗ, ಪ್ರಶಸ್ತಿ ವಿಜೇತರೆಲ್ಲರ (ಲಭ್ಯ) ಪುಸ್ತಕಗಳನ್ನು ಖರೀದಿಸಿ ತಂದಿದ್ದೆ. ಹಾಗೆ “ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು” ಸಣ್ಣ ಕಥೆಗಳ ಸಂಕಲನ ಓದಲು ಸಿಕ್ಕಿತು. ಡಿ. ಎಸ್. ಚೌಗಲೆ ಅವರ “ಸದರ್ ಬಜಾರ್” ಮತ್ತು ಮೊನ್ನೆಯಷ್ಟೇ ಬಂದಿಳಿದ “ದೇವಿ ಕುರುಬತಿ” ಕೂಡ ಓದಿ ಮುಗಿಸಿದೆ.

ಮೂರೂ ಕಥನಗಳು ಮೂರು ದಿಕ್ಕಿನವು. ಹಾಗಾಗಿ, ಒಟ್ಟು ಓದು ಸ್ವಲ್ಪ ಚದುರಿದಂತೆ ಅನ್ನಿಸಿದರೂ ಕುತೂಹಲಕರವಾಗಿತ್ತು. ಆ ಹಿನ್ನೆಲೆಯಲ್ಲಿ ಈ ಟಿಪ್ಪಣಿ:

ಸದರಬಜಾರ್:

ನಾಟಕಕಾರರಾಗಿ, ಕಲಾವಿದರಾಗಿ ಹೆಸರು ಮಾಡಿರುವ ನಿವೃತ್ತ ಉಪನ್ಯಾಸಕ ಡಿ ಎಸ್ ಚೌಗಲೆ ಅವರ ಚೊಚ್ಚಲ ಕಾದಂಬರಿ ಇದು. ಅವರೇ ಹೇಳಿಕೊಂಡಿರುವಂತೆ, ಮುಂದೆ ಬರೆಯಲಿರುವ ಬೃಹತ್ ಕ್ಯಾನ್ವಾಸ್‌ನ ಕಾದಂಬರಿಗೆ ಮೊದಲ ಹೆಜ್ಜೆ ಇದು. ನಿಯತಕಾಲಿಕಗಳಲ್ಲಿ ಬರುತ್ತಿದ್ದ ಹಳೆಯ ಧಾರಾವಾಹಿ ಕಾದಂಬರಿಗಳ ಶೈಲಿಯ ಈ ಕಾದಂಬರಿಯ ಹೆಚ್ಚುಗಾರಿಕೆ ಎಂದರೆ, ಅದು ಕಟ್ಟಿಕೊಡುವ (ಕೆಲವೊಮ್ಮೆ ಹಸಿಹಸಿ) ಚಿತ್ರಗಳು. ಇಲ್ಲಿ ಕೆಲವೊಮ್ಮೆ ಅವರಲ್ಲಿನ ನಾಟಕಕಾರ, ಚಿತ್ರ ಕಲಾವಿದ ಅವರಲ್ಲಿನ ಕಾದಂಬರಿಕಾರನನ್ನು ಹಿಂದಿಕ್ಕಿ ಹೊರಬಂದದ್ದು ಕಾಣಿಸುತ್ತದೆ. ತನ್ನ ಸುತ್ತಣ ಸಮಾಜದ ಜೊತೆ ಒಡನಾಟದ ದಟ್ಟ ಚಿತ್ರಣಗಳು ಇಲ್ಲಿವೆ. ಮಹಾರಾಷ್ಟ್ರ-ಕರ್ನಾಟಕ ಗಡಿಭಾಗದ ಬದುಕಿನ ಚಿತ್ರಣ ಇದು. ಇದನ್ನು ಬೆನ್ನುಡಿಯಲ್ಲಿ ರಾಜೇಂದ್ರ ಚೆನ್ನಿಯವರು “ಶಿಷ್ಟ ಸಮಾಜವು ನೋಡಬಯಸದ ಕೊಳೆಗೇರಿಗಳ, ವೇಶ್ಯಾವಾಟಿಕೆಗಳ, ಶ್ರಮಜೀವಿಗಳ ಬಡತನ, ಹತಾಶೆಗಳ ಜೊತೆಗೆ ಬದುಕಬೇಕೆನ್ನುವ ಛಲ ಇವುಗಳನ್ನು ಕೆಲವೊಮ್ಮೆ ಓದುಗರೆ ಶಾಕ್ ಆಗುವಂತಹ ವಿವರಗಳು ಹಾಗೂ ಭಾಷೆಯ ಮೂಲಕ ಬಿಚ್ಚಿಡುವ ಮಾದರಿ ಇದು” ಎಂದು ಗುರುತಿಸಿದ್ದಾರೆ. ನಾಟಕೀಯತೆಯೇ ಈ ಕಾದಂಬರಿಯ ಮೂಲಸೂತ್ರ.

ದೇವಿ ಕುರುಬತಿ:

ಇಜಿಪ್ತಿನ ಪೆರೋ ರಾಣಿ ಅನೆಪ್ ಬದುಕನ್ನು ಆಧರಿಸಿದ ಚಾರಿತ್ರಿಕ ಕಾದಂಬರಿ ಇದು. ಕ್ಲಿಯೊಪಾತ್ರ, ನೆಫರ್ತಿತಿ ಇತ್ಯಾದಿ ಚಿರಪರಿಚಿತ ಹೆಸರುಗಳ ಬಳಿಕ ಇದು ಹೊಸ ಹೆಸರಾದ ಕಾರಣ ಕುತೂಹಲ ಸಹಜವಾಗಿತ್ತು. ಲೇಖಕಿ ಈ ಕಾದಂಬರಿಯಲ್ಲಿ ವಾಸ್ತವಾಂಶಗಳು, ಚರಿತ್ರೆಯ ಆಧಾರ ಹಾಗು ಕಾದಂಬರಿಕಾರ್ತಿಯ ಕಲ್ಪನೆಗಳು ಮಿಳಿತವಾಗಿವೆ ಎಂದು ಹೇಳಿಕೊಂಡಿದ್ದಾರೆ. ಕ್ಯಾನ್ವಾಸ್ ಸ್ವಲ್ಪ ವಿಶಾಲವಾಗಿರುವುದರಿಂದ, ಚರಿತ್ರೆಯ ವರದಿಯಂತೆ ಪುಸ್ತಕ ಓದಿಸಿಕೊಂಡು ಹೋಗುತ್ತದೆ. ಹಾಗಂತ ಓದುವ ಕುತೂಹಲಕ್ಕೇನೂ ಕೊರತೆ ಇಲ್ಲ. ಕ್ರಿಸ್ತಪೂರ್ವದಲ್ಲೇ ಈಜಿಪ್ಟಿನ ನಾಗರಿಕತೆ, ಸಾಮಾಜಿಕ-ರಾಜಕೀಯ-ಆರ್ಥಿಕ ಬದುಕುಗಳೆಲ್ಲದರ ಸಮೃದ್ಧ ವಿವರಗಳು ಮತ್ತು ಹಲವು ಕಡೆ ಆಲಂಕಾರಿಕ ವಿವರಗಳು ಪುಸ್ತಕದ ಉದ್ದಕ್ಕೂ ಕಾಣಸಿಗುತ್ತವೆ. ಸ್ವತಃ ಲೇಖಕಿ ಈಜಿಪ್ಟ್‌ನಲ್ಲಿ ತಿರುಗಾಡಿ, ಮ್ಯೂಸಿಯಂಗಳನ್ನು ಸಂದರ್ಶಿಸಿ, ಇಜಿಪ್ಟಾಲಜಿ ಪರಿಣತರ ಜೊತೆ ಮಾತನಾಡಿರುವುದು...ಇವೆಲ್ಲ ಪುಸ್ತಕದ ಓದಿನ ಓಘಕ್ಕೆ ತನ್ನ ಕೊಡುಗೆ ನೀಡಿರುವುದು ಹಲವೆಡೆ ಕಾಣಿಸುತ್ತದೆ.

ಕುರುಬರ ನಾಯಕತ್ವದ ಕುರಿತು ಲೇಖಕಿ ಹೇಳಿರುವ ಮಾತುಗಳು ಕುತೂಹಲಕರ. “ಪ್ರಕೃತಿ ವೈಪರೀತ್ಯಗಳಲ್ಲಿ ತಮ್ಮ ಮಂದೆಯನ್ನು ಪಾಲಿಸುವ ಕುರುಬರಿಗೆ ಪ್ರಕೄತಿಯೇ ಹಲವು ಪಾಠಗಳನ್ನು ಕಲಿಸಿರಬಹುದು. ಅಪಾಯಗಳ ಮುನ್ನರಿವು, ಎಚ್ಚರ, ದೀರ್ಘ ನಡಿಗೆಯ ಸಾಮರ್ಥ್ಯ, ಇವೆಲ್ಲ ಅವರಿಗೆ ದಕ್ಕಿರಬಹುದು...ಅವರನ್ನು ಸಂವೇದನಾಶೀಲರನ್ನಾಗಿಸಬಹುದು, ಈ ಗುಣಗಳೇ ಅವರನ್ನು ಪ್ರಾಕೃತಿಕವಾಗಿ ನಾಯಕರನ್ನಾಗಿಸುವುದೇನೋ?”

ರಾಣಿ ಅನೆಪ್ ನೈಲ್ ನದಿಗೆ ಅಣೆಕಟ್ಟು ಕಟ್ಟಿಸಿದ್ದು, ಆಮದು-ರಫ್ತುಗಳಿಗೆ ಸುಂಕದ ನಿಯಂತ್ರಣ ತಂದದ್ದು, ಆಕೆಯ ಅತ್ತೆ ರಾಜಮಾತೆ ನುಕಿಯಳ ರಾಜಕೀಯ ತಂತ್ರಗಾರಿಕೆ, ಪೆರೋಗಳ ಸುಖಭೋಗದ ಬದುಕು, ಅಧಿಕಾರಶಾಹಿಯ ಭ್ರಷ್ಟಾಚಾರ...ಈ ಎಲ್ಲ ಚಿತ್ರಣಗಳೂ ಪುಸ್ತಕದ ಓದಿಗೆ ಪೂರಕವಾಗಿ ಚಿತ್ರಿತವಾಗಿವೆ.

ಪುಸ್ತಕದ ಒಂದು ದೊಡ್ಡ ಕೊರತೆ ಎಂದರೆ ಉಳಿದುಕೊಂಡಿರುವ ದೊಡ್ಡ ಪ್ರಮಾಣದ ಕಾಗುಣಿತ ದೋಷಗಳು. ಅವು ಸರಾಗ ಓದಿಗೆ ಅಡ್ಡಿ ಆಗುವಷ್ಟಿವೆ.

ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು:

ಎಂಟು ಸಣ್ಣ ಕಥೆಗಳ ಗುಚ್ಛ ಇದು. ಕಥೆಗಾರ ಸ್ನಾತಕೋತ್ತರ ವಿದ್ಯಾರ್ಥಿಯಾಗಿದ್ದಾಗ ಬರೆದು ಬಹುಮಾನ ಪಡೆದ “ಮೆಚ್ಚನಾ ಪರಮಾತ್ಮನು” ಇಂದ ಆರಂಭಗೊಳ್ಳುವ ಈ ಸಂಕಲನದ ಪ್ರತಿಯೊಂದೂ ಕಥೆ ಅದರ ಕಥನ ಶೈಲಿ, ಭಾಷೆ, ಹೆಣಿಗೆಗಳ ಕಾರಣಕ್ಕೆ ಓದಿಸಿಕೊಂಡು ಹೋಗುತ್ತವೆ. ನನಗೇಕೋ ಇದು ವಿಮರ್ಶಕ ಕಥೆ ಬರೆಯಲು ಕುಳಿತರೆ ಹೀಗೇ ಬರೆಯುತ್ತಾರೇನೋ ಅನ್ನಿಸುವಷ್ಟು “ಪರ್ಫೆಕ್ಟ್” ಕಥೆಗಳು ಅನ್ನಿಸಿದವು... ಎಷ್ಟರ ಮಟ್ಟಿಗೆಂದರೆ ಅಡುಗೆ ರೆಸಿಪಿ ಹೇಳುವಾಗ ಅಳತೆ ಸಮೇತ ಹೂರಣಗಳನ್ನು ಹೇಳುತ್ತಾರಲ್ಲ- ಅಷ್ಟು ಪರ್ಫೆಕ್ಟ್ ಕಥನಗಳಿವು. ಈ ಕಾರಣಕ್ಕಾಗಿಯೇ ಸಂಕಲನದ ಕೊನೆಯಲ್ಲಿ ಈ ಸಂಕಲನ ಯಾಕೋ ಬಹಳ “ಕೃತಕ” ಅನ್ನಿಸಿದರೂ ಅಚ್ಚರಿ ಇಲ್ಲ. ಅಷ್ಟು ಪರ್ಫೆಕ್ಷನ್‌ನ ಪ್ರಯತ್ನ ಇಲ್ಲಿ ಎದ್ದು ಕಾಣಿಸುವಷ್ಟಿದೆ (ಗಮನಿಸಿ: ಇದು ಈ ಪುಸ್ತಕಕ್ಕೆ ಪಾಸಿಟಿವ್ ಕಾಮೆಂಟ್)

“ಯಾಕಾಶಿ ಮಣೇವು” ಈ ಸಂಕಲನದಲ್ಲಿ ನನಗೆ ಇಷ್ಟವಾದ ಕಥೆ. “ಸಹೃದಯನನ್ನು ಅವನಿಗರಿವಿಲ್ಲದಂತೆಯೇ ಆತ್ಮಾವಲೋಕನಕ್ಕೆ ಒತ್ತಾಯಿಸುವ ಗುಣ ಒಳ್ಲೆಯ ಸಾಹಿತ್ಯದ ಮುಖ್ಯ ಲಕ್ಷಣ” (ಅದು ಈ ಕಥೆಗಳಲ್ಲಿದೆ) ಎಂಬ ರಘುನಾಥ ಚ.ಹ. ಅವರ ಮುನ್ನುಡಿಯ ಮಾತುಗಳು ನನ್ನವೂ ಕೂಡ.

 

 

 

MORE FEATURES

ಮರೆತು ಹೋದ ವಾಸ್ತವಗಳಿಗೆ ಬರಹದ ರೂಪ ಕೊಟ್ಟಿರುವುದು ಆಕಸ್ಮಿಕ: ಶ್ರೀಧರ್ ನಾಯಕ್

21-10-2024 ಬೆಂಗಳೂರು

“ನಾನು ಹತ್ತು ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಪುಸ್ತಕಗಳ ಓದು, ಪ್ರವಾಸ, ಛಾಯಾಚಿತ್ರಗ್ರಹಣ, ಇಂಗ್ಲಿ...

'ಸದರಬಜಾ‌ರ್' ಕಾದಂಬರಿಯ ವಸ್ತು ಎಂಬತ್ತನೆಯ ದಶಕದ್ದು

21-10-2024 ಬೆಂಗಳೂರು

“ಬೃಹತ್ ಕಾದಂಬರಿಯ ರಚನೆಯನ್ನು ಕೈಗೆತ್ತಿಕೊಳ್ಳುವ ಮುನ್ನ ಕ್ರಿಕೆಟ್ ಪರಿಭಾಷೆಯಲ್ಲಿ ಹೇಳುವಂತೆ, ಟೆಸ್ಟ್ ಕ್ರಿಕೆಟ...

ಹೂವು-ಹಣ್ಣು-ಹಸಿರು ತರಕಾರಿಗಳಿಲ್ಲದ ಜೀವನ ಬೇಗೆಯ ಬರಡು..

20-10-2024 ಬೆಂಗಳೂರು

“ಕಾಡು ನಾಡಾಗುತ್ತಿದೆ, ಹೊಲಗದ್ದೆಗಳು ನಿವೇಶನಗಳಾಗುತ್ತಿವೆ. ನೆಲದ ಕಸುವು ಇಲ್ಲವಾಗುತ್ತಿದೆ. ಬಗೆಬಗೆಯ ಹಣ್ಣು, ತ...