'ಅರಿವೇ ಗುರು' ಅನ್ನುತ್ತೀವಿ. ವೀರೇಶ ಕುರಿಯವರು ಶಿಕ್ಷಕರು.ಗುರುಗಳು ವಚನಗಳನ್ನು ಬರೆಯುವುದರಿಂದ ನಿಜವಾದ ಗುರು ಅವರು.ಇಂತಹ ಶಿಕ್ಷಕರು ಶಾಲೆಗೆ,ಸಮಾಜಕ್ಕೆ,ಊರಿಗೆ ಹೊಸ ಕಳೆ ತರುತ್ತಾರೆ.ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ.ಗುರುವೇ ಅರಿವಾದಾಗ ಅದು ಸಮಷ್ಠಿ ಪ್ರಜ್ಞೆಗೆ ಕಾರಣವಾಗುತ್ತದೆ. ಇಲ್ಲಿ ವೀರೇಶರವರು ವಚನಗಳ ಮೂಲಕ ಅರಿವನ್ನು ಗುರುವಾಗಿಸಿಕೊಂಡು, ಗುರುವಾಗಿ ಅರಿವನ್ನು ಬೆಳಗುವವರಾಗಿ ಗಮನ ಸೆಳೆಯುತ್ತಾರೆ ಎನ್ನುತ್ತಾರೆ ಸಾಹಿತಿ ಶಿವಕುಮಾರ ಮಾಲಿಪಾಟೀಲ್. ಅವರು ವೀರೇಶ ಕುರಿ ಅವರ ವಚನ ಜ್ಯೋತಿ ಸಂಕಲನದಲ್ಲಿ ಬರೆದ ಮುನ್ನುಡಿ ಹಾಗೂ ಗಂಗಾವತಿ ಪ್ರಾಣೇಶ ಅವರ ಬೆನ್ನುಡಿ ನಿಮ್ಮ ಓದಿಗಾಗಿ...
ವಿರೇಶ ಕುರಿಯವರ 'ವಚನ ಜ್ಯೋತಿ' ಎಂಬ ಆಧುನಿಕ ವಚನಗಳ ಪುಸ್ತಕಕ್ಕೆ ಮುನ್ನುಡಿ ಬರೆದುಕೊಡು ಎಂದು ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಶ್ರೀಗಳು ನನಗೆ ತಿಳಿಸಿದರು.ಅಪ್ಪೋರೆ ನಾನು ಅಷ್ಟು ದೊಡ್ಡ ಸಾಹಿತಿಯಲ್ಲ ಅಂದೆ,ಆದರೂ ಸಹ ಅವರು,ನಿನಗೆ ಆ ಸಾಮಾರ್ಥ್ಯ ಇದೆ ಬರೆದುಕೊಡು ಎಂದು ಅಪ್ಪಣೆ ಮಾಡಿದರು.
ಒಂದೆರಡು ದಿನಗಳ ನಂತರ ವೀರೇಶ ಕುರಿಯವರ ವಚನಗಳು ಕೋರಿಯರ್ ಮುಖಾಂತರ ನಮ್ಮ ಕೈ ಸೇರಿದವು.ಕೆಲ ವಚನಗಳನ್ನು ಓದಿದ ನಂತರ,ಇವುಗಳಿಗೆ ಬೇರೆ ಯಾರಾದರೂ ಹಿರಿಯರಿಂದ ಮುನ್ನುಡಿ ಬರೆಸೋಣ ಅಂದುಕೊಂಡೆ.ವೀರೇಶ ಅವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ.ಆದರೆ ಅವರು ಸರ್, ಅಪ್ಪೋರು ಹೇಳಿದ್ದಾರೆ,ನೀವೇ ಬರೆದುಕೊಡಿ ಎಂದು ಮನವಿ ಮಾಡಿದರು.ಹಾಗಾಗಿ ಧೈರ್ಯ ಮಾಡಿ ಬರೆದುಕೊಡಲು ತೀರ್ಮಾನಿಸಿದೆ.ಆದರೆ ನನ್ನಿಂದ ಮುನ್ನುಡಿ ಬರೆಸಿದ್ದು ಮಾತ್ರ ಗವಿಮಠದ ಸಾಕ್ಷಾತ್ ಶ್ರೀ ಗವಿಸಿದ್ದೇಶ್ವರರು!
ನಾನು ಒಮ್ಮೆ ಫೇಸ್‌ಬುಕ್‌ನಲ್ಲಿ ಬರೆದು ಹಾಕಿದ್ದೆ " ಸಾಮಾನ್ಯ ಜನರ ಅಸಮಾನ್ಯ ಜೀವನಾನುಭವವೇ ವಚನ ಸಾಹಿತ್ಯ"ಅಂತ. ನಡೆ-ನುಡಿ ಒಂದಾದ,ಅಂತರಂಗವೇ ಬಹಿರಂಗವಾದ ಜ್ಞಾನವೇ ಜಂಗಮವೆಂದು ಮನ್ನಣೆಕೊಟ್ಟ ಕಾಲದ ಸಾಹಿತ್ಯವದು.ಆಡಿದ ಮಾತು,ಮಾಡುವ ಕೆಲಸ ಒಂದಾಗಿರಬೇಕೆಂದು,ಆಚಾರವೇ ಸ್ವರ್ಗವೆಂದು,ದೇಹವೇ ದೇವಾಲಯವೆಂದು,ಕಾಯಕವೇ ಕೈಲಾಸವೆಂದು,ದೇಹದಲ್ಲಿ ದೇವರನ್ನು,ವೃತ್ತಿಯಲ್ಲಿ ಕೈಲಾಸವನ್ನು ಕಾಣಲು ಹೇಳಿದ ಕಾಲಘಟ್ಟವದು.
ವಚನಗಳೆಂದರೆ ಭಾಷೆ,ಆಣೆ,ಕೊಟ್ಟ ಮಾತು, ಪ್ರಮಾಣ,ಅಂತರಂಗದ ನುಡಿ.ವಚನ ಸಾಹಿತ್ಯವೆಂದರೆ ಸತ್ಯ ಪ್ರತಿಪಾದನೆಯ ಸಾಹಿತ್ಯ.ದಾಸೋಹ ತತ್ವದಲ್ಲಿ ಇಡೀ ಸಮಾಜ ಸಂತೃಪ್ತಿಯಿಂದ ಬದುಕಬೇಕು ಎಂಬ ಮಹಾನ್ ದಾಸೋಹ ತತ್ವವನ್ನು ಶರಣರು ಜಗತ್ತಿಗೆ ಬಳುವಳಿಯಾಗಿ ನೀಡಿದರು.
ಸಕಲ ಜೀವಿಗಳಿಗೆ ಲೇಸನ್ನು ಬಯಸುವದೇ ಧರ್ಮವೆಂದು ಸಾರಿದ ಲಕ್ಷಾಂತರ ಶರಣ ಸಂಕುಲದ ಪುಣ್ಯಭೂಮಿ ನಮ್ಮ ಕರ್ನಾಟಕ. ಅವರ ಕರ್ಮಭೂಮಿ ಕಲ್ಯಾಣ.ಸಮತೆಯ ಕಹಳೆಯೂದಿದ ಕಲ್ಯಾಣದ ಈ ಶರಣ ಜೀವಿಗಳಿಂದಲೇ ಜಗತ್ತಿನ ಮೊದಲ ಪಾರ್ಲಿಮೆಂಟ್(ಸಂಸತ್ತು) ಜನ್ಮ ತಾಳಿದ್ದು.ಬಸವ ಕಲ್ಯಾಣದ ಅನುಭವ ಮಂಟಪವೇ ಸಂಸತ್ತು. ಅಲ್ಲಿ ಸೇರಿದ ಶರಣರೆಲ್ಲ ಅನುಭಾವಿಗಳೇ ಹೊರತು ಜಾತಿ,ಹಣ,ಅಂತಸ್ತಿನ ಹಿನ್ನೆಲೆಯಿಂದ ಬಂದವರಾಗಿರಲಿಲ್ಲವೆಂಬುದು ವಿಶೇಷ .
ಈ ಅನುಭವ ಮಂಟಪದಲ್ಲಿ ಮನುಕುಲದ ಉದ್ದಾರಕ್ಕೆ ಏನು ಮಾಡಬೇಕೆಂಬುದನ್ನು ಸ್ಪಷ್ಟವಾಗಿ, ಜನಗಳ ಮನ ಮುಟ್ಟುವ ಹಾಗೆ ವಚನಗಳ ರೂಪದಲ್ಲಿ ಸರಳ ಭಾಷೆಯಲ್ಲಿ ಶರಣರು ಹೇಳಿ ಹೋದರು.ಸತ್ಯ ಮತ್ತು ಜನಪರ ಕಾಳಜಿಯುಳ್ಳ ವಚನಗಳ ಪ್ರಭಾವ ಶತಮಾನಗಳು ಕಳೆದರೂ ಕಡಿಮೆಯಾಗಿಲ್ಲ.ವಚನ ಸಾಹಿತ್ಯದ ಮೇಲೆ ನಿರಂತರ ಅಧ್ಯಯನ, ಸಂಶೋಧನೆಗಳು ನಡೆಯುತ್ತಲೇ ಇವೆ.ಅದು ವ್ಯಷ್ಠಿ,ಸಮಷ್ಠಿ ಬದುಕಿನ ಮೇಲೆ ತನ್ನ ಗಾಢ ಪ್ರಭಾವವನ್ನು ಬೀರುತ್ತಲೇ ಇದೆ.ಹಾಗಾಗಿ ಸಾವಿರಾರು ಜನರು ಇಂದಿಗೂ ಕೂಡ ವಚನಗಳನ್ನು ಬರೆಯುತ್ತಿದ್ದಾರೆ.ಡಾ.ಜಚನಿ, ಡಾ.ಮೂಜಗಂ,ಶ್ರೀ ಪಂಡಿತಾರಾಧ್ಯ ಶಿವಾಚಾರ್ಯರು,ಶ್ರೀ ಶಿವಮೂರ್ತಿ ಮುರುಘಾ ಶರಣರು,ಶ್ರೀ ಸಿಂಪಿ ಲಿಂಗಣ್ಣ,ಶ್ರೀ ಎಚ್ ತಿಪ್ಪೇರುದ್ರಸ್ವಾಮಿ, ಶ್ರೀ ಮಹದೇವ ಬಣಕಾರ ಮುಂತಾದವರು ವಚನಗಳನ್ನು ರಚಿಸಿದ್ದು,ಆಧುನಿಕ ವಚನಕಾರರಲ್ಲಿ ಗಮನ ಸೆಳೆದಿದ್ದಾರೆ.ನಮ್ಮ ಕೊಪ್ಪಳ ಜಿಲ್ಲೆಯವರಾದ ಡಾ.ಸಿದ್ದಯ್ಯ ಪುರಾಣಿಕರಂತೂ ಆಧುನಿಕ ವಚನಕಾರರಲ್ಲಿ ಪ್ರಸಿದ್ಧರಾಗಿದ್ದಾರೆ.ಕಲಬುರ್ಗಿ ಭಾಗದವರಾದ ಶ್ರೀ ಕಕ್ಕಯ್ಯ ಪೋಳ್ ರವರ ವಚನಗಳೂ ಕೂಡಾ ಸಾಕಷ್ಟು ಸುದ್ದಿ ಮಾಡಿವೆ.ಹೀಗೆ ಹಲವಾರು ವಚನ ಸಾಹಿತಿಗಳು, ವಚನ ಸಾಹಿತ್ಯದಿಂದ ಪ್ರಭಾವಿತರಾಗಿ ವಚನಗಳನ್ನು ಬರೆದಿದ್ದಾರೆ,ಬರೆಯುತ್ತಿದ್ದಾರೆ.ಅಂತವರ ಸಾಲಿಗೆ ಈಗ ಹೊಸ ಸೇರ್ಪಡೆ ವೀರೇಶ ಕುರಿ ಸೋಂಪೂರ ಅವರು.
ವೀರೇಶ ಕುರಿಯವರು ಗ್ರಾಮೀಣ ಪ್ರತಿಭೆ.ಅವರು ಶಿಕ್ಷಣವನ್ನು ಮುಂಡರಗಿ ಮಠ ಮತ್ತು ಗವಿಮಠ ಕೊಪ್ಪಳದಲ್ಲಿ ಪಡೆದಿದ್ದರಿಂದ ಅವರ ಮೇಲೆ ವಚನ ಸಾಹಿತ್ಯ ಹೆಚ್ಚಿಗೆ ಪ್ರಭಾವ ಬೀರಿರಬಹುದು.ಜೀವನದಲ್ಲಿ ಅನುಭವಿಸಿದ ಬಡತನ,ನೋವು,ಅವಮಾನ,ತಿರಸ್ಕಾರ,ಅನ್ಯಾಯಗಳಿಂದ ಅವರ ಅಭಿವ್ಯಕ್ತಿಗೆ ಕಿಡಿತಾಗಿ ವಚನ ಸಾಹಿತ್ಯ ಹೊರ ಬರಲು ಕಾರಣವಾಗಿರಬಹುದು. ಈ ಸ್ವಾರ್ಥ ಸಮಾಜದ ಮೇಲಿರುವ ಆಕ್ರೋಶವನ್ನು ಅವರು ತಮ್ಮ ವಚನಗಳಲ್ಲಿ ಬರೆಯುತ್ತಾ ಹೋಗಿದ್ದಾರೆ.
ವೀರೇಶ ಅವರ ಮೇಲೆ ಕೊಪ್ಪಳ ಶ್ರೀಗಳ ಪ್ರಭಾವ ಅಧಿಕವಾಗಿದೆ.ಹಾಗಾಗಿ ಇಪ್ಪತ್ತಕ್ಕೂ ಹೆಚ್ಚಿನ ವಚನಗಳನ್ನು ಅಭಿನವ ಶ್ರೀಗಳ ಕುರಿತಾಗಿ ಬರೆದಿದ್ದಾರೆ.ಗವಿಶ್ರೀಗಳೇ ಅವರ ಪಾಲಿಗೆ ದಾರಿ ತೋರಿಸುವ ದೇವರು.ಅವರ ಆಶೀರ್ವಾದದ ಬೆಳಕಲಿ ಬೆಳೆಯುವ ಭರವಸೆ ಮೂಡಿಸಿದ್ದಾರೆ.
ಅಭಿನವ ಶ್ರೀಗಳಿಗೆ ನಿಷ್ಠೆಯ ಶಿಷ್ಯನಾಗಿ,ಅಭಿಮಾನಿಯಾಗಿ ಅವರ ಆಶೀರ್ವಾದ, ಕರುಣೆಯಿಂದ,ಪ್ರೇರಣೆಯಿಂದ ನಾನು ಸಾಹಿತ್ಯ ಬರೆಯುತ್ತಿದ್ದೇನೆ ಎಂದು ವಚನಗಳಲ್ಲಿ ಹೇಳಿದ್ದಾರೆ.
'ಮಲ್ಲಿಗೆಯ ಮನವುಳ್ಳ ಶ್ರೀ ಅಭಿನವ ಗುರುವೆ
ಇಲ್ಲದಿರೆ ನಿಮ್ಮ ಕರುಣೆಯ ಕೃಪಾ ಕಟಾಕ್ಷ
ನಾ ಹುಲ್ಲಿಗೂ ಕಡೆಯೆಂದ ಪಾರ್ವತಿ ತನಯ'.
'ಬಂಧು ಬಳಗ ನೀವೆನಗೆ
ಬಂಧನವ ಕಳೆವ ಶ್ರೀ ಅಭಿನವ ಗುರುವೆ;
ಕಂದ ನಿಮ್ಮವನಿವನು,
ನೊಂದು ಬೆಂದು ಬಂದಿಹೆನು ನಿಮ್ಮಲಿ,
ತಂದೆಯಂತೆ ನನ್ನನ್ನು ಎಂದೆಂದಿಗೂ
ಮುಂದೆ ನಿಂತು ಹರಸಿರೆಂದ ಪಾರ್ವತಿ ತನಯ'.
ಹೀಗೆ ಶ್ರೀಗಳ ನೆರಳಲ್ಲಿ ಜ್ಞಾನದ ಬದುಕಿನ ವಚನಗಳನ್ನು ಐದು ಭಾಗವಾಗಿ ಬರೆದಿದ್ದಾರೆ.
'ಕಾಡುವ ಹಾಡುಗಳ ಮೋಡಿಗೊಳಗಾಗಿವೆ ಹೃನ್ಮನ
ಹಚ್ಚ ಹಸಿರಿನ ಸಿರಿಗೆ ಸೋತು ಹೋಗಿವೆ ಈ ನಯನ
ಉದಾತ್ತ ಸಾಹಿತ್ಯ ಸಂಪದಕೆ ಮಾಗಿ ಬಾಗಿದೆ ಭಾವನ
ಮಗುವಿನೊಡನೆ ಮಗುವಾಗಿ ಕಂಡೆ ನಾನು ದೇವನ
ಕತ್ತಲುಂಡ ಬೆಳಕಿನ ಬತ್ತಿಗಳ ಜೀವನವೇ ಪಾವನ
ಪಾರ್ವತಿ ತನಯ ಕಂಡುಂಡು ಬರೆದಾನ ಈ ವಚನ'.
ಈ ಮೇಲಿನ ವಚನಗಳಲ್ಲಿ ವೀರೇಶ ಅವರು ವಚನ ಸಾಹಿತ್ಯ ಯಾಕೆ ಬರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.ಸ್ವ ಅನುಭವವೇ ವಚನಗಳಿಗೆ ಶಕ್ತಿ.ವಚನಕಾರರಿಗೆ ಆತ್ಮ ನಿರೀಕ್ಷೆ ಮೊದಲ ಆಧ್ಯತೆಯಾಗಿರಬೇಕು.ತಾನು ಒಳಗೆ ಶುದ್ಧವಾಗುತ್ತಾ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಾನೆ.ವಚನಕಾರರಿಗೆ ತನ್ನ ಅರಿವೇ ತನಗೆ ಗುರು.ಆ ಗುರುವಿನ ಸ್ವ ಅನುಭವದಲ್ಲಿ ಮೂಡಿ ಬಂದ ಸಾಹಿತ್ಯ ಯಾವಾಗಲೂ ಮೋಡಿ ಮಾಡುತ್ತದೆ.ಜನಮಾನಸದಲ್ಲಿ ಉಳಿಯುತ್ತದೆ.
ಮಕ್ಕಳ ವಿಭಾಗದ ವಚನಗಳಲ್ಲಿ;
'ದುಡ್ಡು ಬೆವರಿನ ಸ್ವತ್ತು
ಒಡ್ಡು ರೈತರ ಗತ್ತು!
ಇದನರಿತು ನಡೆದವರ ಬಾಳದು ಮುತ್ತು'
ಈ ವಚನದಲ್ಲಿ ದುಡ್ಡು ಮತ್ತು ಒಡ್ಡಿನ ಮಹತ್ವವನ್ನು ನಮ್ಮ ಮಕ್ಕಳು ಮನಗಾಣಬೇಕೆಂದು ಬಹಳ ಅರ್ಥಪೂರ್ಣವಾಗಿ, ಮಾರ್ಮಿಕವಾಗಿ ಹೇಳಿದ್ದಾರೆ.
'ಇಲ್ಲಿ ಬೆಳಕಿದೆ,ಇಲ್ಲಿ ಕೊಳಕಿದೆ
ಜೊತೆ,ಜೊತೆಗೆ ತಳುಕು ಬಳುಕಿದೆ!
ಇದರೊಳು ನೀ ಬೆಳಕಿನ ಪುಳಕದಿ
ಭಾವದ ಜಳಕ ಮಾಡೆಂದ ಪಾರ್ವತಿ ತನಯ'.
ಜೀವನದಲ್ಲಿ ಕೊಳಕು,ತಳುಕು,ಬಳುಕು,ಹುಳುಕು ಇದ್ದರೂ ಸಹ ನಾವು ಬೆಳಕಿನ ಜಳಕ ಮಾಡಬೇಕು.ಕತ್ತಲೆಷ್ಟಿದ್ದರೂ ಸಹ ಸಣ್ಣ ಬೆಳಕು ಅದನ್ನೋಡಿಸುತ್ತದೆ.ಅದಕ್ಕೆ ಶರಣರು ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ,ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ ಎಂದಿದ್ದಾರೆ. ಕೊಳಕು,ಹುಳುಕು ಏನೇ ಇದ್ದರೂ ಸತ್ಯಕ್ಕಾಗಿ,ಸರಳ ಜೀವನಕ್ಕಾಗಿ ಈಜಬೇಕು,ಇದ್ದು ಜಯಿಸಬೇಕು ಎಂದು ದಾಸರು ಹೇಳಿದ್ದಾರೆ.
'ಬರೆದಂತೆ ಬದುಕುವವರ
ನುಡಿದಂತೆ ನಡೆಯುವವರ
ಕೇಡು ಕಂಡು ಸಿಡಿಯುವವರ
ಲೇಸಿಗಾಗಿ ಮಿಡಿಯುವವರ
ಪರರ ಖುಷಿಗೆ ನಲಿಯುವವರ
ಮಾನವತಗೆ ಒಲಿಯುವವರ
ಒಡನಾಟವೆನಗೆ ನಿಜ ಸ್ವರ್ಗ
ಸನ್ನಿಧಾನವೆಂದ ಪಾರ್ವತಿ ತನಯ'.
ಯಾರ ಒಡನಾಟ ಮಾಡಬೇಕೆಂದರೆ,ಅವರಿಂದ ನಿಜ ಸ್ವರ್ಗ ಸಿಗಬೇಕೆಂದು ವೀರೇಶ ಅವರು ಹೇಳಿದ್ದಾರೆ. ನೂರಾರು ಪುಸ್ತಕಗಳನ್ನು ಬರೆದು,ಬರೆದಂತೆ ಬದುಕದಿದ್ದರೆ ಅವರ ಸಾಹಿತ್ಯಕ್ಕೆ ಯಾವ ಬೆಲೆಯೂ ಇರುವುದಿಲ್ಲ.ಅದಕ್ಕೆ ಬಸವಣ್ಣನವರು ಹೇಳಿದ ಹಾಗೆ 'ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮದೇವನೆಂತೊಲಿವನಯ್ಯ?' ಎಂದು.ಹಾಗಾಗಿ "ದಿಟವ ನುಡಿಯುವುದು,ನುಡಿದಂತೆ ನಡೆಯುವುದು ಶರಣ ಪಥ".
ಹಾಗೆಯೆ,ಸಾರ್ವಜನಿಕರ ಜಾಗ,ಆಸ್ತಿ ನುಂಗುವ ನುಂಗಣ್ಣರಿಗೆ,ಅಕ್ರಮ ಗಣಿಗಾರಿಕೆ, ಅಕ್ರಮ ಮರಳು ದಂಧೆ,ಅರಣ್ಯ ನಾಶ ಮಾಡುವ ಖದೀಮರ ವಿರುದ್ಧ ಈ ಕೆಳಗಿನ ವಚನದಲ್ಲಿ ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ;
'ಅಡ್ಡಾಡುವ ಹಾದಿಗಳ,
ಗಿರಿ,ಗುಡ್ಡ ಬೆಟ್ಟಗಳ
ಹೊಳೆ,ಹಳ್ಳ ಕೊಳ್ಳಗಳ ,
ಕಾಡ ಗಿಡ ಮರಗಳ
ಅವರಪ್ಪನ ಮನೆಯ ಆಸ್ತಿ
ಮಾಡಿಕೊಂಡಿದ್ದಾರೆ ಕೆಲ ಭಂಡರು.
ಅಂತ ಭಂಡರಿಗೆ ಗುಂಡಿಕ್ಕಿ
ಉಡಾಯಿಸುವ ಗಂಡುಗಳ ದಂಡದು
ಧರಣಿಯಲಿ ಹಬ್ಬಿ ಹರಡಲೆಂದ ಪಾರ್ವತಿ ತನಯ'.
'ಆಸೆಯೆಂಬುದು ಅರಸಂಗಲ್ಲದೇ ಶಿವಭಕ್ತರಿಗುಂಟೆ ಅಯ್ಯಾ? ರೋಷವೆಂಬುದು ಯಮಧೂತರಿಗಲ್ಲದೇ ಅಜಾತರಿಗುಂಟೆ ಅಯ್ಯಾ? ಈಸಕ್ಕಿ ಆಸೆ ನಿಮಗೇಕೆ? ಈಶ್ವರನೊಪ್ಪ ಮಾರಯ್ಯ ಪ್ರಿಯ ಅಮರೇಶ್ವರ ಲಿಂಗಕ್ಕೆ ದೂರ ಮಾರಯ್ಯ'. ಎಂಬ ವಚನದ ಮೂಲಕ ಆಯ್ದಕ್ಕಿ ಲಕ್ಕಮ್ಮನು, ಹೆಚ್ಚಿಗೆ ಆಯ್ದು ತಂದ ಅಕ್ಕಿ ನಮಗೇಕೆ ಎಂದು ಪತಿ ಮಾರಯ್ಯನಿಗೆ ಪ್ರಶ್ನೆ ಮಾಡುತ್ತಾಳೆ.ಆ ನಿಸ್ವಾರ್ಥತೆ,ನಿರಪೇಕ್ಷತೆ ನಮ್ಮ ಸಮಾಜಕ್ಕೆ ಬೇಕಾಗಿದೆ.ಅನ್ಯರ ಸಾರ್ವಜನಿಕ ಆಸ್ತಿಯನ್ನು ಕಬಳಿಸುವ ದುಷ್ಟತನ ಬಿಡಬೇಕಾಗಿದೆ.ಅದಕ್ಕೆ ವೀರೇಶ ಅವರ ಇನ್ನೊಂದು ವಚನದಲ್ಲಿ;
'ಕುಡಿವ ನೀರು ಗೊಡಗು ಮಾಡದೆಲೆ
ಪರರ ಸ್ವತ್ತನು ತುಡುಗು ಮಾಡದೆಲೆ
ಪರೋಪಕಾರಿಯಾಗಿ ಪರಮಾನಂದವ
ಪಡೆಯೆಂದ ಪಾರ್ವತಿ ತನಯ'.
ನಿಜವಾದ ಸುಡಗಾಡು ಯಾವುದು ಎಂದು ಮಾರ್ಮಿಕವಾಗಿ ಈ ಕೆಳಗಿನ ವಚನದಲ್ಲಿ ಬರೆದಿದ್ದಾರೆ.
ವಿದ್ಯೆ,ವಿದ್ವತ್ತಿಗೆ ಮನ್ನಣೆ ಇರದ ಜಾಗ
ಸದ್ಗುಣ,ಸದಭಿರುಚಿಗೆ ನೆಲೆ ಇರದ ನೆಲ
ಸದ್ಭಾವದ ಅಭಾವವಿರುವ ಸ್ಥಳಗಳೆಲ್ಲ
ಸುಡುಗಾಡಿಗೂ ಕಡೆಯೆಂದ ಪಾರ್ವತಿ ತನಯ'.
ಹಾಗಾಗಿ ಮನಸ್ಸು ಹೂದೋಟ ಆಗಬೇಕು.ಹಣ್ಣಿನ ತೋಟ ಆಗಬೇಕು.ಆಗ ಎಲ್ಲರೂ ನಮ್ಮ ಹತ್ತಿರ ಬರುತ್ತಾರೆ. ನಮ್ಮ ಮನಸ್ಸು ಸ್ಮಶಾನ ಕಳೆ ಇದ್ದರೆ ಕೊನೆಗೆ ಅಷ್ಟೇ ಮಣ್ಣು ಹಾಕಲು ಸ್ಮಶಾನಕ್ಕೆ ಬರುತ್ತಾರೆ.
ಸಮಾಜವು ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಗತಿ ಸಾಧಿಸಬೇಕೆಂಬುದು ಶರಣರ ಆಶಯವಾಗಿತ್ತು.ಆ ಆಶಯಗಳನ್ನು ತುಂಬಿಕೊಂಡು 'ವಚನ ಜ್ಯೋತಿ' ಪುಸ್ತಕ ಹೊರ ಬರುತ್ತಿದೆ.
ಎಲ್ಲರೂ ವಚನಗಳನ್ನು ಬರೆಯಲು ಸಾಧ್ಯವಿಲ್ಲ. ಸಾಮಾಜಿಕ ಸ್ಪಂದನೆ,ಜನಪರ ಕಳಕಳಿ,ಅನ್ಯಾಯವನ್ನು ಪ್ರತಿಭಟಿಸುವ ಮನೋಭಾವ,ಮೌಢ್ಯತೆ ಒಪ್ಪದ ದಿಟ್ಟ ಮನಸ್ಸು, ಜೀವನದ ತಿರುಳನ್ನು ಅರ್ಥ ಮಾಡಿಕೊಂಡವರು ಮಾತ್ರ ವಚನಗಳನ್ನು ಬರೆಯಲು ಸಾಧ್ಯ.ಹಾಗಾಗಿ ಅಂತಹ ಗುಣಗಳು ವೀರೇಶ ಅವರಲ್ಲಿ ಇವೆ.ಇದರಿಂದಾಗಿ ಇಂತಹ ಪ್ರಬುದ್ಧ ವಚನಗಳು ಹೊರ ಹೊಮ್ಮಲು ಸಾಧ್ಯವಾಗಿದೆ.
'ಅರಿವೇ ಗುರು' ಅನ್ನುತ್ತೀವಿ. ವೀರೇಶ ಕುರಿಯವರು ಶಿಕ್ಷಕರು.ಗುರುಗಳು ವಚನಗಳನ್ನು ಬರೆಯುವುದರಿಂದ ನಿಜವಾದ ಗುರು ಅವರು.ಇಂತಹ ಶಿಕ್ಷಕರು ಶಾಲೆಗೆ,ಸಮಾಜಕ್ಕೆ,ಊರಿಗೆ ಹೊಸ ಕಳೆ ತರುತ್ತಾರೆ.ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ.ಗುರುವೇ ಅರಿವಾದಾಗ ಅದು ಸಮಷ್ಠಿ ಪ್ರಜ್ಞೆಗೆ ಕಾರಣವಾಗುತ್ತದೆ. ಇಲ್ಲಿ ವೀರೇಶರವರು ವಚನಗಳ ಮೂಲಕ ಅರಿವನ್ನು ಗುರುವಾಗಿಸಿಕೊಂಡು, ಗುರುವಾಗಿ ಅರಿವನ್ನು ಬೆಳಗುವವರಾಗಿ ಗಮನ ಸೆಳೆಯುತ್ತಾರೆ.
ವೀರೇಶ ಅವರ ವಚನಗಳಲ್ಲಿ ಶಬ್ದಗಳ ಮೇಲೆ ಹಿಡಿತವಿದೆ.ಮಾನವೀಯತೆಯ ತುಡಿತವಿದೆ.ಜನಪರ ಕಳಕಳಿ ಇದೆ. ಶ್ರೀಯುತ ಗಂಗಾವತಿ ಪ್ರಾಣೇಶ್ ರವರು ವೀರೇಶ್ ಅವರ ವಚನಗಳನ್ನು ಓದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಸ್ವ ಅನುಭವಿಸಿ ಬರೆದ ವಚನಗಳು ಸಮಾಜ ತಿದ್ದುವ ಆಶಾ ಭಾವನೆ ಹೊಂದಿವೆ.ಅವರ ಒಟ್ಟು ವಚನಗಳನ್ನು ಓದಿದ ಮೇಲೆ, ಅವರ ಸತತ ಅಧ್ಯಯನ ಹಾಗೂ ಪರಿಶ್ರಮದಿಂದ ಅವರು ನಮ್ಮ ಜಿಲ್ಲೆಗೆ ಮತ್ತೊಬ್ಬ "ಸಿದ್ದಯ್ಯ ಪುರಾಣಿಕ" ಆಗಬಹುದೆಂದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ.ಅಷ್ಟೊಂದು ಭರವಸೆ ಅವರ ಮೇಲೆ ಇದೆ.ಶ್ರೀ ಗವಿಸಿದ್ದೇಶ್ವರ ಶ್ರೀಗಳ ಆಶೀರ್ವಾದದ ಬಲವಿದೆ ಅವರಿಗೆ.ಹಾಗಾಗಿ ಕನ್ನಡ ಸಾಹಿತ್ಯ ಲೋಕಕ್ಕೆ ಅವರಿಂದ ಮತ್ತಷ್ಟು ಉತ್ತಮ ಸಾಹಿತ್ಯ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತಾ,ವೀರೇಶ ಅವರು ಎತ್ತರೆತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ.
-ಡಾ.ಶಿವಕುಮಾರ ಮಾಲಿಪಾಟೀಲ್
ದಂತ ವೈದ್ಯರು ಮತ್ತು ಸಾಹಿತಿಗಳು
ಗಂಗಾವತಿ
–
ಕಿರಿಯ ಮಿತ್ರ ವೀರೇಶ.ಬ.ಕುರಿ, ಸೋಂಪೂರ ಇವರು ಬರೆದ ಆಧುನಿಕ ವಚನಗಳ ಸಂಕಲನ 'ವಚನ ಜ್ಯೋತಿ' ಓದಿ,ಪ್ರೇಮ ಕವನಗಳನ್ನು ಹೊಸೆಯುತ್ತಾ ಕಂಡ ಕಂಡ ಹುಡುಗಿಯರ ಮೇಲೆಲ್ಲಾ ಕವನ ಗೀಚುತ್ತಾ ಓಡಾಡುವ ಮಜನೂ ತರಹದ ಕವಿಗಳೇ ಹೆಚ್ಚಿರುವ ಇಂದಿನ ಕವಿಗಳ ಹಿಂಡಿನಲ್ಲಿ ಮಿತ್ರ ವೀರೇಶ. ಬ.ಕುರಿ,ಸೋಂಪೂರ ಬಹು ವಿಭಿನ್ನವಾಗಿ ನಿಲ್ಲುತ್ತಾರೆ. ಅದೂ ಈ ವಯಸ್ಸಿನಲ್ಲಿ! ಬೆಳೆದ ಪರಿಸರವೋ,ಓದಿದ ಸಾಹಿತ್ಯದ ಪ್ರಭಾವವೋ,ಸುತ್ತಲೂ ನಡೆಯುತ್ತಿರುವ ಅಕ್ರಮ, ಅನ್ಯಾಯ, ಅತ್ಯಾಚಾರಗಳೋ, ವೀರೇಶರನ್ನು ಆಧ್ಯಾತ್ಮ, ತತ್ವದ ಕಡೆ ಸೆಳೆದಿರುವುದು ಈ 'ವಚನ ಜ್ಯೋತಿ' ಪುಸ್ತಕದ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ನಮ್ಮ ನಾಡಿನ ಹಿರಿಯ ಕವಿಗಳಾದ ಶ್ರೀಯುತ ಸಿದ್ದಯ್ಯ ಪುರಾಣಿಕರ 'ವಚನೋದ್ಯಾನ' ಕೃತಿಯನ್ನು ಹಲವೆಡೆ ಹೋಲುವ ಇಲ್ಲಿನ ವಚನಗಳು ಚಿಂತನೆಗೆ ಹಚ್ಚುತ್ತವೆ.ನಾವು ಅಂದುಕೊಂಡದ್ದನ್ನೇ ಕವಿ ಇಲ್ಲಿ ಅಕ್ಷರರೂಪ ಕೊಟ್ಟಿದ್ದಾನಲ್ಲ ಎಂಬ ಅನಿಸಿಕೆ.ಓದುವಾಗ ಇಂದಿನ ವ್ಯವಸ್ಥೆಯ ಕುರಿತು ನಮಗಿರುವ ಕಳಕಳಿಯೇ ಕವಿಗೆ ಇದೆಯೆಂದು ಓದುಗನಿಗೆ ಕವಿ ಆಪ್ತನಾಗುತ್ತಾನೆ.ನಾವು ಹೇಳಬೇಕೆಂದಿರುವುದನ್ನೇ ಕವಿ ಸುಂದರ ಪದ,ಪ್ರಾಸಗಳಲ್ಲಿ ಹಿಡಿದುಕೊಟ್ಟಿದ್ದಾನೆಂದು ಹೆಮ್ಮೆ ಎನಿಸುತ್ತದೆ.ಇಲ್ಲಿರುವ ಬಹಳಷ್ಟು ವಚನಗಳ ಸಮಸ್ಯೆ ಅಥವಾ ಹೂರಣವು ಹನ್ನೆರಡನೆಯ ಶತಮಾನದ ಬಸವಣ್ಣನವರ ವಚನಗಳಿಂದ ನಮ್ಮ ಮುಂದಿರುವ, ಈ ಪುಸ್ತಕದ ಕವಿ ವೀರೇಶರವರೆಗೂ ಹೀಗೆ ಸಾಗುತ್ತಾ ಬಂದಿದೆ ಎಂಬುದು ಸ್ಪಷ್ಟವಾಗುತ್ತದೆ.ನೆಲದ ಬಣ್ಣವೇ ನೀರಿಗೆ ಬರುತ್ತದೆ.ಬೆಳೆದ ಪರಿಸರದ ಪ್ರಭಾವವೇ ವ್ಯಕ್ತಿಗಳ ಮೇಲಾಗುತ್ತದೆ.ಇಲ್ಲಿ ವೀರೇಶ.ಬ.ಕುರಿ ಸೋಂಪೂರರವರ ರಚನೆಗಳಲ್ಲಿ ಸುತ್ತ ಪರಿಸರದ ಅವ್ಯವಸ್ಥೆ, ಅನಾಚಾರಗಳು ಅವರನ್ನು ಖಡ್ಗ,ಕತ್ತಿ ಹಿಡಿಸುವ ಬದಲಿಗೆ ಲೇಖನಿ ಹಿಡಿಸಿದೆ.ಅದರ ಮುಖಾಂತರ ವ್ಯಕ್ತಿ ವ್ಯವಸ್ಥೆಗಳನ್ನು ಕೊಚ್ಚುತ್ತಾ ತಮ್ಮ ಆಕ್ರೋಶ,ಅಸಹಾಯಕತೆ,ನಿರಾಶೆಗಳನ್ನು ಸರಳ ಸುಂದರ ಶಬ್ದಗಳಿಂದ ಓದುಗರ ಮೆಚ್ಚುಗೆ ಗಳಿಸಿದ್ದಾರೆ.
ವೀರೇಶ.ಬ.ಕುರಿ ಸೋಂಪೂರರವರು ಈ ಕೃತಿಯಲ್ಲಿ ವಚನಗಳನ್ನು ಒಟ್ಟು ಐದು ಭಾಗವಾಗಿ ವಿಂಗಡಿಸಿದ್ದಾರೆ.ಎಲ್ಲವುಗಳನ್ನೂ ಓದಿಸಿಕೊಂಡು ಹೋಗುವ ಗುಣ,ಶೈಲಿ ವಚನಗಳಿದೆ.
ವಿಧ ವಿಧದ ಜಿದ್ದಿಗೆ ಬಿದ್ದು
ಹದ ಮೀರಿದ ಹದ್ದುಗಳ ಆರಿಸಿ ತಂದರೆ
ಬಾಧೆಪಡುವಿರಯ್ಯ ಮುಂದೆ!
ಬೇಧ ಬುದ್ಧಿಯನರಿಯದ
ತೇದ ಗಂಧದ ಕೊರಡಿನಂತವರಿಗೆ
ಸುಧೆಯೊಲವಲಿ ಮತವ ನೀಡಿದರೆ
ಅದು ಮೇಧಿನಿಗೆ ಹಿತವೆಂದ ಪಾರ್ವತಿ ತನಯ.
ಚುನಾವಣೆಗಳಲ್ಲಿ ಎಂತವರನ್ನು ಆರಿಸಿ ತರಬೇಕೆನ್ನುವಲ್ಲಿ, " ತೇದ ಗಂಧದ ಕೊರಡಿನಂತವರ" ಎಂಬ ರೂಪಕ ಬಹಳ ಚೆನ್ನಾಗಿ ಮೂಡಿ ಬಂದಿದೆ.ಚುನಾವಣೆ ಬರುವ ಮುಂಚೆ ಊರಲ್ಲಿ ಅನೇಕ ಸಾತ್ವಿಕರಿದ್ದು, ಊರಿನ ಹಿತಕ್ಕೆ ಗಂಧದ ಕೊರಡಿನಂತೆ ಸೇವೆ ಸಲ್ಲಿಸುತ್ತಿರುತ್ತಾರೆ.ಆದರೆ,ಚುನಾವಣೆ ಬಂದಿತೆಂದರೆ ಕೆಲವರು ಎಲ್ಲೆಲ್ಲಿಂದಲೋ ಬಂದು ಎಂಟತ್ತು ದಿನ ಓಡಾಡಿ,ಹಣ ಸುರಿದು ಗೆದ್ದು ಬಂದ ನಂತರ ಆ ಊರನ್ನೇ ಮರೆತು ಬಿಡುತ್ತಾರೆ.ಮತ್ತೇ ಆ ಊರಿನ ಚಾಕರಿಗೆ ನಿಲ್ಲುವವರು ಆ ಊರಿನ ಸಾತ್ವಿಕರೇ, ಎಷ್ಟೋ ಕಡೆ ಇದು ನಡೆದ ಸತ್ಯವೇ ಆಗಿದೆ.ಇದಕ್ಕೆ ಕವಿ ವೀರೇಶ ಒಳ್ಳೆಯ ರೂಪಕ ನೀಡಿ ಈ ವಚನ ಬರೆದಿದ್ದಾರೆ.
ಹಾಗೆಯೇ ನೀತಿ ಬೋಧಕ ವಚನಗಳ ವಿಭಾಗದಲ್ಲಿ;
"ಬಾಲರೆಲ್ಲ ಕೂಡಿಕೊಂಡು
ಸಾಲ ಮಾಡಿ ಜೂಜಾಡುವ
ಕಾಲವಿದು ಘೋರವಯ್ಯ!!
ನೆಲದ ಸಕಲ ಹಿರಿಯರೆ,
ಜಾಲವಿದು ಬೆಳೆಯದಂತೆ
ಬಾಲವನ್ನು ಹೊಸಕಿ ಹಾಕಿ
ಮೂಲ ಘನತೆ ಕಾಯಿರೆಂದ ಪಾರ್ವತಿ ತನಯ".
ಈ ವಚನ ಬಹಳ ಚೆನ್ನಾಗಿದೆ. ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಶಾಲೆಗಳು ಇಲ್ಲದ್ದಕ್ಕೆ ಬಿಡಾಡಿಗಳಾಗಿರುವ ಕೆಲ ಶಾಲಾ ಬಾಲಕರು ಇಂತಹ ದುಶ್ಚಟಗಳಿಗೆ ದಾಸರಾಗುವ ಕಾಲ ಹತ್ತಿರವೇ ಇದೆ!
ಇನ್ನು ಸಮಾಜ ವಿಡಂಭನೆಯ ವಿಭಾಗದಲ್ಲಿ;
ತಮ್ಮಂತೆಲ್ಲರ ಕಾಣದವರು
ಕನಕನ ಭಕ್ತರು ಹೇಗಾಗುವರಯ್ಯ?
ಇವನಾರು,ಇವನಾರು ಎಂಬುವವರು
ಬಸವನ ಭಕ್ತರು ಹೇಗಾಗುವರಯ್ಯ?
ಅಹಿಂಸೆಯ ತಿರುಳ ಅರಿಯದವರು
ಮಹಾವೀರನ ಭಕ್ತರು ಹೇಗಾಗುವರಯ್ಯ?
ಯುದ್ಧದ ಹಾದಿಯ ಹಿಡಿದವರು
ಬುದ್ಧನ ಭಕ್ತರು ಹೇಗಾಗುವರಯ್ಯ?
ಭಾವೈಕ್ಯತೆಗೆ ಬಲ ತುಂಬದವರು
ಪೈಗಂಬರನ ಭಕ್ತರು ಹೇಗಾಗುವರಯ್ಯ?
ಕರುಣೆ ಇರದ ಕಪಟಿಗಳು
ಏಸುವಿನ ಭಕ್ತರು ಹೇಗಾಗುವರಯ್ಯ?
ಎಲ್ಲವೂ ಇದ್ದು, ಎದೆಯೊಳು ನೀತಿಯ ಸೆಲೆ ಬತ್ತಿದವರು
ಸತ್ಪತಕೆ ಸಲ್ಲರೆಂದ ಪಾರ್ವತಿ ತನಯ.
ಎಂಬ ವಚನವು;
'ಪೈಗಂಬರ', 'ಏಸು' ಎಲ್ಲರನ್ನೂ ಅವರು ನಂಬಿದ ತತ್ವಗಳೊಂದಿಗೆ ಹೆಸರಿಸಿ ಅವನ್ನು ಅನುಷ್ಟಾನಕ್ಕೆ ತರದಿದ್ದರೆ ಅವರಂತೆ ಹೇಗಾಗಲು ಸಾಧ್ಯ? ಎಂದೇ ಮಾರ್ಮಿಕವಾಗಿ ಪ್ರಶ್ನಿಸುತ್ತಾ,ಪೂರ್ವಿಕರನ್ನು ಸ್ಮರಿಸಿ ,ಪೂಜಿಸಿದರೆ ಸಾಲದು,ಅನುಸರಿಸಬೇಕೆಂದು,ಅವರ ಹಾದಿಯಲ್ಲಿಯೇ ನಡೆಯಬೇಕೆಂದು ತಿಳಿಸಿರುವ ಪರಿ ಮೆಚ್ಚುವಂತಿದೆ .ಎಲ್ಲಾ ವಚನಗಳು ಓದಿಸಿಕೊಂಡು ಹೋಗುತ್ತವೆ.ಒಟ್ಟಿನಲ್ಲಿ ವೀರೇಶ ಕುರಿ,ಸೋಂಪೂರ ರಲ್ಲಿ ಕವಿಯ ಕನಸುಗಳು,ಭಾವುಕನ ಭಾವನೆಗಳು,ಸಂತನ ಹೃದಯವೂ,ಶರಣರ ನಡೆಯೂ ಮೇಳೈಸಿವೆ.ಓದುಗರ ವಿಮರ್ಶಕರ ಬೆಂಬಲ,ಪ್ರೋತ್ಸಾಹ ಸಿಕ್ಕರೆ ಕನ್ನಡ ಸಾಹಿತ್ಯಕ್ಕೆ,21ನೇ ಶತಮಾನಕ್ಕೆ ಮತ್ತೊಬ್ಬ ವಚನಕಾರನು ದೊರಕಿದನೆಂದೇ ಹರ್ಷಿಸಬಹುದಾಗಿದೆ.
-ಶ್ರೀ ಗಂಗಾವತಿ ಪ್ರಾಣೇಶ
ಅಂತರಾಷ್ಟ್ರೀಯ ಹಾಸ್ಯ ಭಾಷಣಕಾರರು ಮತ್ತು ಅಂಕಣಕಾರರು.
ಗಂಗಾವತಿ
"ಒಂದು ಭಾಷಿಕ ಲೋಕದಲ್ಲಿ ಈಗಾಗಲೇ ಪ್ರಚಲಿತವಾಗಿರುವ, ಆಚರಣೆಯಲ್ಲಿರುವ ಸೂಕ್ಷ್ಮತೆ, ಸಂವೇದನೆ, ವಸ್ತುವಿಷಯ, ದೃಷ್ಟಿ...
“ಕಂಬಾರರ ಈ ಹೊಸ ಹಾಗೂ ಪರ್ಯಾಯ ಆಲೋಚನೆಗಳನ್ನು ಕನ್ನಡ ಸಾಹಿತ್ಯ ವಿಮರ್ಶೆ ಗುರುತಿಸಬೇಕಾದಷ್ಟು ಗುರುತಿಸಿಲ್ಲ. ಕಂಬ...
“ಹಗಲಿನಲ್ಲಿ ಇರುಳಿನಲ್ಲಿ ಕನಸಿನಲ್ಲಿ ಕನವರಿಕೆಯಲ್ಲಿ ಹೊತ್ತೂ ಗೊತ್ತೂ ಇಲ್ಲದ ಹೊತ್ತಿನಲ್ಲೂ ದುಸ್ವಪ್ನವಾಗಿ ಕಾಡಿ...
©2024 Book Brahma Private Limited.