ಕನ್ನಡ ಸಾಹಿತ್ಯದ ಪರಿಸ್ಥಿತಿ ಬಿಗಡಾಯಿಸಿದೆ: ಟಿ.ಎಸ್. ರಮಾನಂದ


''ಕನ್ನಡ ಸಾಹಿತ್ಯದ ಪರಿಸ್ಥಿತಿ ಬಿಗಡಾಯಿಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಹೆಗ್ಗಳಿಕೆಯನ್ನು ಎಷ್ಟು ದಿವಸ ಹೇಳಿಕೊಂಡಿರಲು ಸಾಧ್ಯ? ಪಂಪನೊಬ್ಬನ ಉಲ್ಲೇಖವನ್ನು ನಮ್ಮ ಮಕ್ಕಳು ಎಷ್ಟು ದಿನ ಕೇಳಿಸಿಕೊಂಡಾರು? ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ, ಕೆ.ಎಸ್.ಎನ್, ಪೂಚಂತೆ, ಭೈರಪ್ಪ, ಯಶವಂತ ಚಿತ್ತಾಲ, ತರಾಸು, ಅನಕೃ ಮುಂತಾದ ಕೆಲವೇ ಕೆಲವು ಹೆಸರುಗಳ ಬಲದಿಂದ ಕನ್ನಡ ಸಾಹಿತ್ಯ ಎಷ್ಟು ದಿನ ಬೆಳಗೀತು,” ಎನ್ನುತ್ತಾರೆ ಲೇಖಕ ಟಿ.ಎಸ್.ರಮಾನಂದ. ಅವರು ತಮ್ಮ ‘ನಿರಂತರ’ ಕೃತಿಗೆ ಬರೆದಿರುವ ಬಿನ್ನಹ ನಿಮ್ಮ ಓದಿಗಾಗಿ...

ಕನ್ನಡದ ಓದುಗರಿಗೆ ನಮಿಸುತ್ತ ಕೆಲವು ಮಾತುಗಳನ್ನು ಬಿನ್ನೈಸುವೆ. ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಬರಹಗಾರರ ಮುಂದೆ ಅನೇಕ ಸವಾಲುಗಳಿವೆ. ಮೊದಲನೆಯದಾಗಿ ನಾವು ಯಾರಿಗಾಗಿ ಬರೆಯುತ್ತೇವೆ ಮತ್ತು ಯಾರಾದರೂ ಓದುವರೊ ಎನ್ನುವ ಪ್ರಶ್ನೆ, ವೃದ್ಧರಿಗೆ ವಯೋಸಹಜ ನಿರಾಸಕ್ತಿ, ಮಧ್ಯವಯಸ್ಕರಿಗೆ ಬಿಡುವಿಲ್ಲ, ಯುವಕರಿಗೆ ಮತ್ತು ಮಕ್ಕಳಿಗೆ ಕನ್ನಡ ಓದಲು ಬರುವುದಿಲ್ಲ. ಗೃಹಿಣಿಯರು ದೂರದರ್ಶನದ ಧಾರಾವಾಹಿಗಳು ಮತ್ತು ವಾಟ್ಸ್ ಆಪ್ ಸಂದೇಶಗಳಲ್ಲಿ ಮುಳುಗಿಹೋಗಿದ್ದಾರೆ. ಆದರೂ ಕೆಲವೊಂದು ವೆಬ್‌ ಸೈಟುಗಳಲ್ಲಿ ಪುಂಖಾನುಪುಂಖವಾಗಿ ಕನ್ನಡ ಸಾಹಿತ್ಯದ ಹೆರಿಗೆಯಾಗುತ್ತಿದೆ. ನೆಂಟರಿಷ್ಟರು, ಗೆಳೆಯರು, ಪರಿಚಿತರು ಅಪರಿಚಿತರೆನ್ನದೆ ಪ್ರಕಟಿತ ಕೃತಿಗಳನ್ನು ಓದಲು ಮತ್ತು ಅಭಿಪ್ರಾಯ ದಾಖಲಿಸಲು ವೆಬ್‌ ಸೈಟ್ ಲೇಖಕರು ದಂಬಾಲು ಬೀಳುವ ಪರಿಸ್ಥಿತಿ. ಗಂಭೀರ ಸಾಹಿತಿಗಳಿಗೆ ಸಮಕಾಲೀನ ಬದುಕನ್ನು ದಾಖಲಿಸುವ ಜವಾಬ್ದಾರಿ. ಬದುಕಿನ, ಮತ್ತು ಜಗತ್ತಿನ ಪರಮಸತ್ಯ ಗೋಚರಿಸಿರುವುದೆನ್ನುವ ಭ್ರಮೆಯಲ್ಲಿರುವ ಸಾಹಿತಿಗೆ ತನ್ನ ಅರಿವನ್ನು ಹಂಚಿಕೊಳ್ಳುವ ತವಕ.

ಈ ಮಧ್ಯೆ ಸಾಹಿತ್ಯಲೋಕದೊಳಗಿನ ಗುಂಪುಗಳು, ಸಾಹಿತಿಯು ಯಾವ ಗುಂಪಿಗೆ ಸೇರಿರುವನೋ, ಆ ಗುಂಪಿನ ಸದಸ್ಯರು ಮಾತ್ರ ಅವನ ಬರಹವನ್ನು ಓದುವರು. ಜಾತಿ, ಧರ್ಮ ಪಂಥಗಳೊಂದಿಗೆ ಎಡ ಬಲ ಮಧ್ಯಮ ಎನ್ನುವ ಪ್ರಬೇಧಗಳು. ಈ ನಡುವೆ ಸಾಹಿತ್ಯ ಲೋಕದವರಿಗೆ ಅಪರಿಚಿತರಾದ, ಸಾಹಿತ್ಯ ಲೋಕಕ್ಕೆ ಹೊರಗಿನ ನನ್ನಂತಹ ಅಸ್ಪಶ್ಯರ ದಾಳಿ, ಇದೆಲ್ಲದರ ನಡುವೆ ಬಂಡವಾಳ ತೊಡಗಿಸಿದ ಪ್ರಕಾಶಕರ ಸ್ಥಿತಿ?

ಕನ್ನಡ ಸಾಹಿತ್ಯದ ಪರಿಸ್ಥಿತಿ ಬಿಗಡಾಯಿಸಿದೆ. ಎಂಟು ಜ್ಞಾನಪೀಠ ಪ್ರಶಸ್ತಿಗಳ ಹೆಗ್ಗಳಿಕೆಯನ್ನು ಎಷ್ಟು ದಿವಸ ಹೇಳಿಕೊಂಡಿರಲು ಸಾಧ್ಯ? ಪಂಪನೊಬ್ಬನ ಉಲ್ಲೇಖವನ್ನು ನಮ್ಮ ಮಕ್ಕಳು ಎಷ್ಟು ದಿನ ಕೇಳಿಸಿಕೊಂಡಾರು? ಕುವೆಂಪು, ಬೇಂದ್ರೆ, ಶಿವರಾಮ ಕಾರಂತ, ಮಾಸ್ತಿ, ಕೆ.ಎಸ್.ಎನ್, ಪೂಚಂತೆ, ಭೈರಪ್ಪ, ಯಶವಂತ ಚಿತ್ತಾಲ, ತರಾಸು, ಅನಕೃ ಮುಂತಾದ ಕೆಲವೇ ಕೆಲವು ಹೆಸರುಗಳ ಬಲದಿಂದ ಕನ್ನಡ ಸಾಹಿತ್ಯ ಎಷ್ಟು ದಿನ ಬೆಳಗಿತು. ಕನ್ನಡ ಸಾಹಿತ್ಯದ ಇತ್ತೀಚಿನ ಇಪ್ಪತ್ತೈದು ವರ್ಷಗಳ ಅವಧಿಯಲ್ಲಿ ನಾಲ್ಕುಕಾಲ ನಿಲ್ಲಬಲ್ಲ ಕೃತಿಗಳು ಏಕೆ ಸೃಷ್ಟಿಯಾಗಲಿಲ್ಲ? ಸಾಹಿತಿಗಳಿಗೆ ಅವಶ್ಯವಿರುವ ಜೀವನಾನುಭವದ ಕೊರತೆಯೆ? ಪ್ರಸಕ್ತಕಾಲದ ಜೀವನವೇ ಸತ್ವರಹಿತವೆ? ಆಧುನಿಕ ಜಗತ್ತಿನಲ್ಲಿ ಸುಲಭಲಭ್ಯವಿರುವ ಸುಖೋಪಭೋಗಗಳಲ್ಲಿ ಸಾಹಿತಿಗಳೆಲ್ಲರೂ ಮುಳುಗಿ ಹೋಗಿಬಿಟ್ಟಿರುವರೆ? ಮನದಲ್ಲಿ ಅಚೊತ್ತುವಷ್ಟು ಗಟ್ಟಿ ಪಾತ್ರಗಳು ದೊರೆಯುತ್ತಿಲ್ಲವೊ? ಲೇಖಕನು ಇನ್ನೊಬ್ಬರ ಬದುಕಿನೊಳಗೆ ಮನದೊಳಗೆ ಪ್ರವೇಶಿಸುವ ಶಕ್ತಿ ಕಳೆದುಕೊಂಡನೊ? ಹಾಗಾಗಿಯೇ ನವ್ಯ ಚಳುವಳಿ, ದಲಿತ ಸಂವೇದನೆಯ ಲೇಖಕರು ತೀರ ವ್ಯಕ್ತಿಗತ ಬದುಕಿನ ಜಂಜಡಗಳನ್ನು ಜಗದ ಜಂಜಡಗಳೆಂದು ಬಗೆದರೋ- ಗೊತ್ತಿಲ್ಲ. ಜಾತಿ-ಧರ್ಮ-ಪಂಥದ ಪರಿಧಿಯಿಂದ ಹೊರಬಂದು ಬರೆಯುವವರು ಕಡಿಮೆಯಾಗಿಬಿಟ್ಟಿದ್ದಾರೆ. ಹೆಣ್ಣಿನ ತಳಮಳಗಳನ್ನು ಆಕೆ ಮಾತ್ರ ಅರ್ಥ ಮಾಡಿಕೊಳ್ಳಬಲ್ಲಳು. ದಲಿತನು ಮಾತ್ರ ಶೋಷಣೆಯ ಬಗ್ಗೆ ಬರೆಯಬಲ್ಲ, ಮುಸಲ್ಮಾನನು ರಚಿಸುವ ಸಾಹಿತ್ಯ ಮಾತ್ರ ಮುಸ್ಲಿಮ್ ಸಂವೇದನೆಯದು- ಇಂತಹ ಭ್ರಮೆ ಆವರಿಸಿರುವಾಗ ನನ್ನ ಜಾತಿ ಮತ್ತು ಸಮಾಜದ ಹೊರಗಿನ ಬದುಕು ಕುರಿತು ಬರೆಯುವುದು ದುಸ್ತರವಾಗಿಬಿಟ್ಟಿದೆ.

ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ, ಮೂರು ಶತಮಾನದ ಐದು ಪೀಳಿಗೆಯ ಹೆಣ್ಣಿನ ಬದುಕನ್ನು ಚಿತ್ರಿಸುವ ಈ ನನ್ನ ಪ್ರಯತ್ನ ದುಃಸಾಹಸವೇ ಸರಿ. ಕರ್ನಾಟಕದ ಮೂಲ ಜನಂಗವಾದ, ಅಚ್ಚ ಕನ್ನಡದ ಜಾತಿಯೆನಿಸಿರುವ ಕುರುಬ ಜನಾಂಗದ ಕುಟುಂಬವೊಂದರ ಚಿತ್ರ ಕಟ್ಟಿಕೊಡುವಲ್ಲಿ ಎಷ್ಟರಮಟ್ಟಿಗೆ ಸಫಲನಾಗಿರುವೆನೋ- ಅದನ್ನು ಓದುಗರು ಹೇಳಬೇಕು.

ಮೊದಲೆಲ್ಲ ವಿಮರ್ಶಕರ ನುಡಿಗಳಿಗೆ ತುಂಬಾ ಬೆಲೆಯಿರುತ್ತಿತ್ತು. ಈಗ ಕಾಲ ಬದಲಾಗಿದೆ. ಹಳೆಗನ್ನಡ ಮತ್ತು ನಡುಗನ್ನಡ ಕವಿಗಳ ಸಾಹಿತ್ಯ ಕುರಿತು ವಸ್ತುನಿಷ್ಟವಾಗಿ ವಿಮರ್ಶೆ ಮಾಡಬಹುದೇ ಹೊರತು ಸಮಕಾಲೀನ ಕೃತಿಗಳನ್ನು ಕುರಿತು ವಸ್ತುನಿಷ್ಟ ಅಭಿಪ್ರಾಯ ವ್ಯಕ್ತಪಡಿಸುವುದು ತುಂಬಾ ಕಠಿಣವಾಗಿದೆ. ಜಾತಿ, ಮತ, ಪಂಥ, ಗುಂಪುಗಳ ಪ್ರಭಾವದಿಂದ ಹೊರಬಂದು ಒಂದು ಸಾಹಿತ್ಯಕೃತಿಯನ್ನು ಓದುವುದು ಕೂಡ ಕಷ್ಟವೆನಿಸಿದೆ. ಹಾಗಾಗಿ ಈ ಯಾವುದೇ ಪ್ರಭಾವಕ್ಕೊಳಗಾಗದ ಓದುಗನ ಅಭಿಪ್ರಾಯವೇ ನನ್ನಂತಹ ಅನಾಮಿಕ ಲೇಖಕರಿಗೆ ಅಮೂಲ್ಯವಾಗುವುದು.

ಮಾನ್ಯ ಕನ್ನಡ ಸಾಹಿತ್ಯಾಸಕ್ತರೇ 'ನಿರಂತರ' ಕಾದಂಬರಿಯನ್ನು ತಾವು ಓದಿದಲ್ಲಿ, ದಯಮಾಡಿ ಪೂರ್ವಾಗ್ರಹ ಪೀಡಿತರಾಗದೆ ನಿಷ್ಪಕ್ಷಪಾತವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದರೆ ಲೇಖಕನು ಧನ್ಯ.

- ಟಿ.ಎಸ್. ರಮಾನಂದ

MORE FEATURES

ವಾರದ ಲೇಖಕ ವಿಶೇಷದಲ್ಲಿ ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚಾರ್ಯ

29-09-2024 ಬೆಂಗಳೂರು

ಬುಕ್ ಬ್ರಹ್ಮದ ವಾರದ ಲೇಖಕ ಸರಣಿಯಲ್ಲಿ ಮೂಡಿಬಂದ ಕವಿ, ಕನ್ನಡದ ಖ್ಯಾತ ವಿದ್ವಾಂಸ, ನಾಟಕಕಾರ, ಸಾಹಿತಿ ಶ್ರೀ ರಂಗ ಆದ್ಯಾಚ...

ಕೃತಕ ಬುದ್ಧಿಮತ್ತೆ ಪತ್ರಿಕಾಲೋಕ ಪ್ರವೇಶ ಮಾಡಿದೆ...

29-09-2024 ಬೆಂಗಳೂರು

“ದೇಶದ ಮಾಧ್ಯಮ ಕ್ಷೇತ್ರ ಇಂದು ವಿಸ್ತ್ರತವಾಗಿ ಬೆಳವಣಿಗೆ ಕಂಡಿದೆ. ಈ ನಿಟ್ಟಿನಲ್ಲಿ ಮಾಧ್ಯಮ ಕ್ಷೇತ್ರದ ಬೆಳವಣಿಗೆ...

ಪ್ರತಿಯೊಬ್ಬನಿಗೂ ತನ್ನ ನಿರ್ಧಾರವೇ ಸರಿ ಕಾಣುವುದು ಅವನ ತಪ್ಪಲ್ಲ

29-09-2024 ಬೆಂಗಳೂರು

"ಜೀವನವನ್ನೇ ನರಕ ಮಾಡಿದ ತಂದೆಗೆ ತನ್ನ ಕಿಡ್ನಿ ಕೊಡದಿರಲು ಮಗನಿಗೆ ಅವನದೇ ಆದ ಕಾರಣಗಳು ! ಕಿಡ್ನಿ ಬಯಸಿದವ ,ಅದನ್ನ...