ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಮಹಿಳೆ


ಮಹಿಳೆಯೊಬ್ಬರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಬೇಕು ಎಂಬ ಚರ್ಚೆಗೆ ಜೀವ ಬಂದಿದೆ. ಶತಮಾನ ಪೂರೈಸಿರುವ ಈ ಸಂಸ್ಥೆಯು ಇದುವರೆಗೆ ಮಹಿಳಾ ಅಧ್ಯಕ್ಷರನ್ನು ಕಂಡಿಲ್ಲ. ಅಧಿಕಾರ-ಹಣ-ವರ್ಚಸ್ಸು ಇರುವ ಕ.ಸಾ.ಪ,ದಲ್ಲಿ  ಚುನಾವಣೆಯ ಬಲಾಬಲ ಪರೀಕ್ಷೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳಬಹುದೇ? ಅಂತಹ ಅವಕಾಶವನ್ನು ’ಮತ’ ಚಲಾಯಿಸುವ ಸದಸ್ಯರು ಒಪ್ಪಿಕೊಳ್ಳುವರೇ?  ಎಂದು ಕೇಳಿರುವ ಪತ್ರಕರ್ತ ದೇವು ಪತ್ತಾರ ಚರ್ಚೆಯನ್ನು ಆರಂಭಿಸಿದ್ದಾರೆ. ಬುಕ್‌ ಬ್ರಹ್ಮದಲ್ಲಿ ಈ ಬಗ್ಗೆ ಚರ್ಚೆ-ಸಂವಾದ ನಡೆಸಲಾಗುತ್ತದೆ.

ನೂರೈದು ವರ್ಷ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲ ವರುಷಗಳಿಂದ ಒಳ್ಳೆಯ ಕಾರಣಕ್ಕಾಗಿ ಸುದ್ದಿಯಾದದ್ದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ’ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ’ ಗುರುತಿಸಲಾಗುವ ಈ ಸಂಸ್ಥೆ ಹಾಗೆ ನಡೆದು ಕೊಂಡದ್ದು ಮಾತ್ರ ಅಪರೂಪದಲ್ಲಿ ಅಪರೂಪ. ಚಾರಿತ್ರಿಕ ಮಹತ್ವದ ಈ ಸಂಸ್ಥೆಯ ಆಡಳಿತ ಚುಕ್ಕಾಣಿ ಹಿಡಿದವರು ಇತ್ತೀಚಿನ ದಿನಗಳಲ್ಲಿ ಅದರ ಘನತೆಗೆ ತಕ್ಕಂತೆ ವರ್ತಿಸದೇ ಇರುವದಕ್ಕೂ ಸಾಕ್ಷಿಯಾಯಿತು. ಜಾತಿ ರಾಜಕಾರಣ, ಸ್ವಜನ ಪಕ್ಷಪಾತ, ಅಧಿಕಾರ ಲೋಲುಪತೆ ಸೇರಿದಂತೆ ಸಕ್ರಿಯ ರಾಜಕಾರಣದ ಎಲ್ಲ ರೋಗಗಳನ್ನೂ ಹೊಂದಿದೆ. ನಿಂತ ನೀರಾಗಿರುವುದರ ಜೊತೆಗೆ ಮಲೆತು ವಾಸನೆ ಬರುವ ಹಂತ ತಲುಪಿರುವ ಪರಿಷತ್ತು ಕಾಯಕಲ್ಪಕ್ಕಾಗಿ ಕಾಯುತ್ತ ನಿಂತಿದೆ. ಅಧಿಕಾರ-ಹಣಗಳೆರಡೂ ಒಂದೆಡೆ ಸೇರಿದ ಮೇಲೆ ಅದರ ಜೊತೆಗೆ ರಾಜಕಾರಣ ಕೂಡ ಸಹಜವಾಗಿಯೇ ಬಂದು ನಿಲ್ಲುತ್ತವೆ. ತೋಳ್ಬಲ-ಸಂಖ್ಯಾಬಲಗಳೇ ಮುಖ್ಯವಾದ ಮೇಲೆ ಆ ಮೂಲಕ ಆಯ್ಕೆಯಾಗಿ ಬಂದವರಿಂದ ಶಿಸ್ತು, ಸೌಜನ್ಯ, ಮೌಲ್ಯ, ಪ್ರಾಮಾಣಿಕತೆ ನಿರೀಕ್ಷಿಸುವುದು ದುರಾಸೆಯಾದೀತು.

ಇಂತಿಪ್ಪ ಈ ಸಾಹಿತ್ಯ ಪರಿಷತ್ತಿನ ಗದ್ದುಗೆಯಲ್ಲಿ ಕುಳಿತವರು ಮೂರನ್ನೂ ಬಿಡದೇ ಇದ್ದಿದ್ದರೆ ಚುನಾವಣೆ ನಡೆದು ಹೊಸ ಅಧ್ಯಕ್ಷರು ಬಂದು ಎರಡು ವರ್ಷ ಕಳೆಯ ಬೇಕಾಗಿತ್ತು. ಸಾಹಿತ್ಯಲೋಕದ ಪ್ರತಿನಿಧಿಯಂತೆ ವರ್ತಿಸದೆ ದುರಾಸೆಯಿಂದ ಬೈಲಾ ತಿದ್ದುಪಡಿ ಅದನ್ನು ತನ್ನ ಅವಧಿಗೇ ಅಳವಡಿಸಿ-ವಿಸ್ತರಿಸಿಕೊಂಡ ನಾಚಿಕೆಗೇಡಿನ ಸಂಗತಿಗೂ ಕಸಾಪ ಸಾಕ್ಷಿಯಾಯಿತು. ’ಕಪ್ಪುಚುಕ್ಕೆ’ ಬಳಿಯಲೂ ಕಾರಣವಾಯಿತು. ಹಿಂದೆಯೂ ಬೈಲಾ ತಿದ್ದುಪಡಿಯ ಚರ್ಚೆ ನಡೆದಿತ್ತು. ಆದರೆ ಅದಕ್ಕೆ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಆಗ ಅಧ್ಯಕ್ಷರಾಗಿದ್ದವರು ಮೂರನ್ನೂ ಬಿಡುವಷ್ಟು ಧೈರ್ಯವಂತರಾಗಿರಲಿಲ್ಲ. ಕನಿಷ್ಠ ಮಟ್ಟದ ಸ್ವಪ್ರಜ್ಞೆಯ ಜೊತೆಗೆ ಪರಿಷತ್ತಿನ ಘನತೆಯೂ ಅವರನ್ನು ತಮಗೆ ಬೇಕಾದಂತೆ ಮಾಡದೇ ಇರುವಂತೆ ತಡೆದಿತ್ತು. ಜೀವ ವಿರೋಧಿ- ಜನವಿರೋಧಿ ನಡೆ ನಡೆದುಕೊಳ್ಳಲೂ ಹಿಂದೇಟು ಹಾಕದ ಸ್ಥಿತಿಗೆ ಪರಿಷತ್ತು ತಲುಪಿದೆ. ಅದು ನಡೆಸುವ ವಾರ್ಷಿಕ ಕ್ರಿಯಾವಿಧಿಯ ಸಾಹಿತ್ಯ ಸಮ್ಮೇಳನದಲ್ಲಿಯೇ ಪರಿಷತ್ತಿನ ಅಧ್ಯಕ್ಷರ ನಡವಳಿಕೆ ಬಗ್ಗೆ ಬಹಿರಂಗ ಪ್ರತಿರೋಧವೂ ವ್ಯಕ್ತವಾಯಿತು. ತೋಯ್ದ ಮುಖ ನನ್ನದಲ್ಲ ಎಂದು ಒರೆಸಿಕೊಂಡದ್ದನ್ನೂ ಕನ್ನಡ ಜನತೆ ನೋಡಬೇಕಾಯಿತು.

ಇಂತಹ ಘನ ಇತಿಹಾಸ-ಪರಂಪರೆ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಮಹಿಳೆಯೊಬ್ಬರು ಅಧ್ಯಕ್ಷರಾದರೆ? ಎಂಬ ಪ್ರಶ್ನೆ ತೇಲಿಬಂದಿದೆ. ತೇಲಿ ಬಂದ ಮಾತು ಚರ್ಚೆ- ಸಂವಾದಕ್ಕೂ ಕಾರಣವಾಗಿದೆ. ಅಪರೂಪಕ್ಕೆ ಪರಿಷತ್ತು ಧನಾತ್ಮಕ ಕಾರಣಕ್ಕಾಗಿ ಚರ್ಚೆಗೆ ಒಳಗಾಗಿದೆ. ಅಥವಾ ಪರಿಷತ್ತಿನ ಬಗ್ಗೆ ಕಾಳಜಿ ಇರುವವರು ಧನಾತ್ಮಕ ನೆಲೆಯಲ್ಲಿ ಚರ್ಚೆ ಹುಟ್ಟು ಹಾಕಿದ್ದಾರೆ. ಅದರ ಫಲ-ಫಲಿತ ಧನಾತ್ಮಕವಾಗಿಯೇ ಇರಬೇಕು ಎಂದೇನಿಲ್ಲ. ಅಲ್ಲವೇ? ಪರಿಷತ್ತು ಘನತೆಯಿಂದ ವರ್ತಿಸಿದ್ದನ್ನೂ ನೋಡಿ ದೀರ್ಘ ಕಾಲವಾಗಿದೆ.

1905ರಲ್ಲಿ ಆರಂಭವಾದ ಕನ್ನಡ ಸಾಹಿತ್ಯ ಪರಿಷತ್ತು ಪ್ರತಿ ವರ್ಷ ವಾರ್ಷಿಕ ಸಮ್ಮೇಳನ ನಡೆಸುವ ಪರಿಪಾಠ ಇಟ್ಟುಕೊಂಡಿದೆ. ಆರಂಭದ ದಿನಗಳಲ್ಲಿ ಪರಿಷತ್ತಿನ ಅಧ್ಯಕ್ಷರೇ ಸಮ್ಮೇಳನದ ಅಧ್ಯಕ್ಷತೆಯನ್ನೂ ವಹಿಸುತ್ತಿದ್ದರು. ಕೆಲವರ್ಷಗಳ ನಂತರ ಈ ಪರಿಪಾಠ ಬದಲಾಯಿಸಿ, ಕನ್ನಡ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ ಸಾಹಿತಿ-ಲೇಖಕರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಗೆ ಬಂತು. ಕಳೆದು ನೂರೈದು ವರ್ಷಗಳಲ್ಲಿ ಪರಿಷತ್ತು ಇದುವರೆಗೆ ೮೫ ಸಮ್ಮೇಳನಗಳನ್ನು ನಡೆಸಿದೆ. ಈ ಸಮ್ಮೇಳನ ಅಧ್ಯಕ್ಷರ ಪಟ್ಟಿ ಮೇಲೆ ಕಣ್ಣು ಹಾಯಿಸಿದರೆ ಪರಿಷತ್ತಿನ ಪುರುಷ ಪ್ರಧಾನ ’ಮ್ಯಾಚೋ’ ಗುಣ ಢಾಳಾಗಿ ಎದ್ದು ಕಾಣುತ್ತದೆ. ಅಪರೂಪಕ್ಕೆ ಆಗಾಗ ಅಂದರೆ ಬೆರಳೆಣಿಕೆಗಿಂತ ಕಡಿಮೆ ಸಲ ಪರಿಷತ್ತು ತನ್ನದೇ ರೂಢಿಯನ್ನು ಮುರಿಯುವ ಧೈರ್ಯವನ್ನೂ ಮಾಡಿದೆ. 

ಉತ್ತರದ ಗಡಿಭಾಗದಲ್ಲಿ ಕನ್ನಡದ ಕೆಲಸ ಮಾಡಿದ ಲೇಖಕಿ, ಕನ್ನಡಕ್ಕಾಗಿ ಸಿಂಹಿಣಿಯಂತೆ ಹೋರಾಟ ಮಾಡುತ್ತಿದ್ದ ಜಯದೇವಿ ತಾಯಿ ಲಿಗಾಡೆ ಅವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ  ಆಯ್ಕೆ ಮಾಡಿತ್ತು. ಅಪ್ಪಟ ಕನ್ನಡದ ನೆಲ ಸಿದ್ಧರಾಮನ ಸೊನ್ನಲಿಗೆಯವರಾದ ತಾಯಿ ಲಿಗಾಡೆ ಅವರು ಏಕೀಕರಣ ಮತ್ತು ನಂತರದ ದಿನಗಳಲ್ಲಿ ನಡೆದ ಹೋರಾಟಗಳಲ್ಲಿ ಸಕ್ರಿಯರಾಗಿದ್ದವರು. ತಾಯಿಯ ಪದಗಳು, ಸಿದ್ಧರಾಮ ಪುರಾಣದಂತಹ ಗಮನಾರ್ಹ ಕೃತಿ ರಚಿಸಿದ ಜಯದೇವಿ ಅವರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿದ್ದರು. ಮಂಡ್ಯದಲ್ಲಿ (1972)ದಲ್ಲಿ ನಡೆದ 48ನೇ ಸಾಹಿತ್ಯ ಸಮ್ಮೇಳನಕ್ಕೆ ಜಯದೇವಿ ಅವರು ಅಧ್ಯಕ್ಷರಾಗಿದ್ದರು.

ಅದಾದ ಮೇಲೆ ಮತ್ತೊಮ್ಮೆ ಮಹಿಳೆಯೊಬ್ಬರಿಗೆ ಸಮ್ಮೇಳನದ ಅಧ್ಯಕ್ಷತೆಯ ಗೌರವ ದೊರೆತದ್ದು 1999ರಲ್ಲಿ. ಬಾಗಲಕೋಟೆಯಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷತೆಗೆ  ಹಿರಿಯ ಲೇಖಕಿ ಶಾಂತಾದೇವಿ ಮಾಳವಾಡ ಅವರನ್ನು ಆಯ್ಕೆ ಮಾಡಲಾಗಿತ್ತು.  ಅದಾದ ಮೇಲೆ 2003 ರಲ್ಲಿ ಮೂಡಬಿದರೆಯಲ್ಲಿ ನಡೆದ 71ನೇ ಸಾಹಿತ್ಯ ಸಮ್ಮೇಳನಕ್ಕೆ ಡಾ. ಕಮಲಾ ಹಂಪನಾ ಆಯ್ಕೆಯಾಗಿದ್ದರು. ಅದಲ್ಲದೆ ಗದಗದಲ್ಲಿ ನಡೆದ ಸಮ್ಮೇಳನದ ಅಧ್ಯಕ್ಷೆಯನ್ನಾಗಿ ಗೀತಾ ನಾಗಭೂಷಣ ಆಯ್ಕೆಯಾಗಿದ್ದರು. ಈ ನಾಲ್ಕು ಅಪರೂಪದ ಅಪವಾದಗಳನ್ನು ಹೊರತು ಪಡಿಸಿದರೆ ಪರಿಷತ್ತು ಅಂದರೆ ಅದರ ಅಧಿಕಾರದ ಚುಕ್ಕಾಣಿ ಹಿಡಿದವರು-ಪದಾಧಿಕಾರಿಗಳು ಅರ್ಧದಷ್ಟು ಕನ್ನಡಿಗರಿರುವ ಮಹಿಳೆಯರನ್ನು ಗಂಭೀರವಾಗಿ ಪರಿಗಣಿಸಿದ್ದೇ ಇಲ್ಲ. ಹಾಗೆಂದರೆ ಅದು ಪೂರ್ಣ ಸತ್ಯ ಅಲ್ಲ ಎಂದು ವಾದಿಸಬಹುದು. ಕಾರ್ಯಕಾರಿ ಮಂಡಳಿಯಲ್ಲಿ ’ಮಹಿಳಾ ಪ್ರತಿನಿಧಿ’ಯ ನೇಮಕ ಮತ್ತು ಮಹಿಳಾಸಾಹಿತ್ಯದ ಕುರಿತ ಚರ್ಚೆ-ಸಂವಾದ-ಗೋಷ್ಠಿ ನಡೆಸುವ ಔದಾರ್ಯವನ್ನು ಪರಿಷತ್ತು ತೋರಿಸುತ್ತಲೇ ಬಂದಿದೆ. 

ಇಂತಹ ಪುರುಷಪ್ರಧಾನ, ಯಜಮಾನಿಕೆಯನ್ನು ಹೊಂದಿರುವ ಕನ್ನಡದ- ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯ ಚುಕ್ಕಾಣಿ ಮಹಿಳೆಯೊಬ್ಬರಿಗೆ ಯಾಕೆ ಸಿಗಬಾರದು? ಎಂಬ ಪ್ರಶ್ನೆ ಸಕಾರಣ ಮತ್ತು ಸಕಾಲಿಕ.

ಆದರೆ, ಪ್ರಶ್ನೆ ಇರುವಷ್ಟು ಸುಲಭವಾಗಿ ಉತ್ತರ ಇರುವುದಿಲ್ಲ. ಉತ್ತರ-ದಕ್ಷಿಣ, ಪ್ರಬಲ ಸಮುದಾಯಗಳ ಹಿಡಿತದಲ್ಲಿ ಇರುವ ಹಣ + ಅಧಿಕಾರ ಇರುವ ಈ ಸ್ಥಾನ ಮಹಿಳೆಗೆ ಸಿಗಬಹುದೇ? ಎಂದು ಯೋಚಿಸಿದರೆ ’ಬೆಳಕಿನ ಕಿರಣ’ ಪರಿಷತ್ತಿನ ಸುತ್ತೆಲ್ಲೂ ಕಾಣಿಸುವುದಿಲ್ಲ. ಒಂದು ಲಕ್ಷಕ್ಕೂ ಹೆಚ್ಚು ಜನ ಸದಸ್ಯರನ್ನು ಹೊಂದಿರುವ ಪರಿಷತ್ತು ಚುನಾವಣಾ ರಾಜಕಾರಣದ ಅಖಾಡವಾಗಿದೆ. ತೋಳ್ಬಲ-ಧನಬಲ-ಜಾತಿಬಲ ಇಲ್ಲದವರಾರೂ ಪರಿಷತ್ತಿನ ಸುತ್ತ ಸುಳಿಯುವ ಹಾಗಿಲ್ಲ.

ಅಧ್ಯಕ್ಷರಾಗಲು ಅರ್ಹ ಮಹಿಳೆಯರಿಲ್ಲವೇ?

ಈಗ ಪರಿಷತ್ತಿನ ಅಧ್ಯಕ್ಷರಾಗಲು ಬೇಕಿರುವುದು ಸಾಹಿತ್ಯ ರಚನೆ, ಸಾಹಿತ್ಯದ ಒಡನಾಟ, ಸಾಹಿತ್ಯಾಸಕ್ತಿ, ಆಡಳಿತದ ಅನುಭವ ಯಾವುದೂ ಮುಖ್ಯವಲ್ಲ. ಇಂತಿಪ್ಪ ಸಕಾರಣ ಕಾರಣಗಳ ಅಗತ್ಯವೇ ಇಲ್ಲದ ಅಧ್ಯಕ್ಷ ಹುದ್ದೆಯು ಮಹಿಳೆಯರಿಗೆ ಪೈಪೋಟಿಯಾಚೆಗಿನ ಸಂಗತಿ ಎಂಬಂತೆ ಗೋಚರವಾಗುತ್ತಿದೆ.

ಮಹಿಳೆಯರಿಗೆ ಅಧಿಕಾರ ’ನೀಡುವ’ (?) ಔದಾರ್ಯ ಪರಿಷತ್ತಿನ ಸದಸ್ಯರು ತೋರಬಹುದೇ? ಚುನಾವಣೆಯಲ್ಲಿ ಇಬ್ಬರು ಮಹಿಳೆಯರು ನಿಂತರೆ ಅಥವಾ ಅವಿರೋಧ ಆಯ್ಕೆಯಾದರೆ ಮಾತ್ರ ಪರಿಷತ್ತು ಮಹಿಳಾ ಅಧ್ಯಕ್ಷೆಯನ್ನು ಕಾಣಬಹುದು. ಅದಿಲ್ಲದಿದ್ದರೆ ತೋಳ್ಬಲದ ಪೈಪೋಟಿಗೆ ಇಳಿದು ಮಹಿಳೆಯೊಬ್ಬರು ಅಧ್ಯಕ್ಷರಾಗುವುದು ಕಷ್ಟಸಾಧ್ಯದ ಸಂಗತಿ ಎಂದೇ ತೋರುತ್ತದೆ. ಈಗಿನ ದಿನಮಾನದಲ್ಲಿ ಚುನಾವಣೆ ನಡೆಯುವ ಹುದ್ದೆಗಳಿಗೆ ಅವಿರೋಧ ಆಯ್ಕೆ ನಿರೀಕ್ಷಿಸುವುದು ಅಸಾಧ್ಯವಾದ ಸಂಗತಿ. ಹೀಗಿರುವಾಗ ಉಳಿಯುವ ಒಂದೇ ಆಯ್ಕೆ ಎಂದರೆ ಇಬ್ಬರು ಮಹಿಳೆಯರನ್ನು ಚುನಾವಣೆಯ ಕಣಕ್ಕೆ ಇಳಿಸುವುದು ಅಥವಾ ಮಹಿಳೆಯರಿಬ್ಬರು ಚುನಾವಣೆಗೆ ಸ್ಪರ್ಧಿಸುವುದು. 

ಸಾರ್ವಜನಿಕ ಹುದ್ದೆಗಳಲ್ಲಿ ಅಂದರೆ ಅಧಿಕಾರ ನಡೆಸಿದ ಅನುಭವ, ಸಾಹಿತ್ಯದ ಆಸಕ್ತಿ, ಬರವಣಿಗೆಯಲ್ಲಿ ಆಸಕ್ತಿ ಇರುವ ಕೆಲವು ಮಹಿಳೆಯರು ಪರಿಷತ್ತಿನ ಅಧ್ಯಕ್ಷತೆ ವಹಿಸುವುದು ಸೂಕ್ತ ಎಂಬ ಅಭಿಪ್ರಾಯ ನಮ್ಮದು. 

ಹಿರಿಯ ಕಾದಂಬರಿಕಾರ್ತಿ-ಲೇಖಕಿ ವೀಣಾ ಶಾಂತೇಶ್ವರ ಅವರು ಧಾರವಾಡದ ಕರ್ನಾಟಕ ಕಾಲೇಜಿನ ಪ್ರಾಂಶುಪಾಲರಾಗಿದ್ದವರು. ಇಂಗ್ಲಿಷ್‌ ಸಾಹಿತ್ಯದ ಅಧ್ಯಾಪಕಿಯಾಗಿದ್ದ ವೀಣಾ ಶಾಂತೇಶ್ವರ ಅವರು ಕನ್ನಡದಲ್ಲಿ ಗಮನಾರ್ಹ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ವೀಣಾ ಶಾಂತೇಶ್ವರ ಅವರ ಅಧ್ಯಕ್ಷರಾದರೆ ತಪ್ಪೇನು?

ಸ್ವದೇಶಿ ಹೆಲಿಕ್ಯಾಪ್ಟರ್‌ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ವಿಜ್ಞಾನ ಲೇಖಕಿ-ಕತೆಗಾರ್ತಿ ನೇಮಿಚಂದ್ರ, ಕನ್ನಡ ಪತ್ರಿಕೋದ್ಯಮದಲ್ಲಿ ನಾಲ್ಕು ದಶಕಗಳ ಕಾರ್ಯನಿರ್ವಹಿಸಿದ, ಪತ್ರಿಕೆಯೊಂದರ ಸಂಪಾದಕರೂ ಆಗಿದ್ದ ಆರ್‌. ಪೂರ್ಣಿಮಾ, ಮಾತು-ಚಟುವಟಿಕೆ ಹಾಗೂ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕೆ. ನೀಲಾ, ತಮ್ಮ ಸೊಗಸಾದ ಕವಿತೆಗಳ ಮೂಲಕ ಗಮನ ಸೆಳೆದಿರುವ ಸವಿತಾ ನಾಗಭೂಷಣ, ವಿಮರ್ಶಕಿಯಾಗಿ ಚಿರಪರಿಚಿತರಿರುವ ಎಂ.ಎಸ್‌. ಆಶಾದೇವಿ.. ಹೀಗೆ ಪಟ್ಟಿಯನ್ನು ಬೆಳೆಸಬಹುದು.

ಪರಿಷತ್ತಿನ ಚುನಾವಣೆಯು ಇಂತಹ ’ಹೊಸ’ ಆಲೋಚನೆಗೆ ಇಂಬು ನೀಡುವಷ್ಟು ಪ್ರಗತಿಪರವಾಗಿದೆಯೇ ಎಂಬ ಪ್ರಶ್ನೆಗೆ ಕಾಲವೇ ಉತ್ತರ ನೀಡಲಿದೆ.

 


 

MORE FEATURES

ಅಮ್ಮನ ವ್ಯಕ್ತಿತ್ವವನ್ನು ಕಡೆದು ನಿಲ್ಲಿಸುವ ಕೃತಿಯಿದು

29-11-2024 ಬೆಂಗಳೂರು

"ಒಂದು ಕತೆಯ ಪಾತ್ರಗಳು, ಅವು ಬದುಕುತ್ತಿರುವ ಸಮಾಜ ಮತ್ತು ಕುಟುಂಬದ ಚಿತ್ರಣ, ಅವುಗಳ ಒಟ್ಟು ವ್ಯಕ್ತಿತ್ವದ ಅಭಿವ್ಯ...

ಬಹಳ ವಿಶಿಷ್ಟವಾದ ಸ್ತ್ರೀ ಸಂವೇದನೆಯ ದನಿಯಿದು

29-11-2024 ಬೆಂಗಳೂರು

"ಭಾವ ಸಮುದ್ರದಲ್ಲಿ ಮಿಂದೆದ್ದರೂ, ಎಲ್ಲಿಯೂ ಗೋಳು ಅನಿಸುವುದಿಲ್ಲ. ಒಬ್ಬ ಕಲಾವಿದೆಯ ಬದುಕನ್ನು ಇಷ್ಟು ತೀವ್ರವಾಗಿ ...

ಈ ಸಂಕಲನದ ಹೆಚ್ಚಿನ ಕವಿತೆಗಳ ಕೇಂದ್ರ ‘ಹಿಂಸೆ’

28-11-2024 ಬೆಂಗಳೂರು

"ಆತ್ಮವಾದರೋ ಅಲೆಮಾರಿಯಾಗಿ ಸುತ್ತುತ್ತಲೇ ಇರುತ್ತದೆ ಅದಕ್ಕೆ ದೇಹಭಾದೆಗಳಿಲ್ಲ, ಆದರೆ ಅದನ್ನು ಧರಿಸುವ ದೇಹಕ್ಕೆ ಮಾ...