ಆತ್ಮಾನುಸಂಧಾನಕ್ಕೆ ಮುನ್ನುಡಿಯೆಂಬ ಭಾವಾನುಸಂಧಾನ

Date: 21-09-2024

Location: ಬೆಂಗಳೂರು


“ಇಲ್ಲಿಯ ಕವಿತೆಗಳಿಗೆ ಬಹು ನಿಶ್ಚಿತವಾದ ನಡೆ ಮತ್ತು ಗುರಿಯಿದೆ. ಇದು ಹಲವು ಕವಿತೆಗಳಲ್ಲಿ ಅಮೂರ್ತದೆಡೆಗಿನ ಹುಡುಕಾಟವಾಗಿ, ಒಂದು ಒಳಗಿನ ತುಡಿತವೂ ಆಗಿ ಬೆಳೆವ ಪರಿ ಅನನ್ಯವಾಗಿದೆ. ಕವಿಗೆ ಶಬ್ದದೊಳಗಿನ ನಿಶ್ಯಬ್ದವನ್ನು ಹಿಡಿಯುವ, ಮೌನದೊಳಗಿನ ಮಾತನ್ನು ಆಲಿಸುವ ಆಕಾಂಕ್ಷೆ ಮೊಳೆಯುತ್ತಿದೆ” ಎನ್ನುತ್ತಾರೆ ಡಾ. ಸಂಧ್ಯಾ ಹೆಗಡೆ. ಅವರು ಎ.ಎನ್. ರಮೇಶ್ ಗುಬ್ಬಿ ಅವರ ‘ಆತ್ಮಾನುಸಂಧಾನ’ ಕವನ ಸಂಕಲನಕ್ಕೆ ಬರೆದ ಮುನ್ನುಡಿ ನಿಮ್ಮ ಓದಿಗಾಗಿ. 

ಇದು ರಮೇಶ್ ಗುಬ್ಬಿಯವರ 12 ನೇ ಕವನ ಸಂಕಲನ. 15 ನೇ ಕೃತಿ. ಜೀವನದ ಹಲವು ಸ್ತರಗಳನ್ನು ದಾಟಿಬಂದ ಜೀವವೊಂದು 'ಕವಿಭಾವ'ದಲ್ಲಿ ನಿಶ್ಚಿತವಾದ ನೆಲೆಯೊಂದರಲ್ಲಿ ನಿಂತು ನಿರ್ವಿಕಾರ ಭಾವದಿಂದ ತನ್ನ ಅನುಭವದ ಅನುಸಂಧಾನ ಮಾಡುವ ಪಕ್ವ ಮನಸೊಂದರ ಒಡನಾಟಕ್ಕೆ ಬರುವ ಅನುಭವಗಳನ್ನು ಇಲ್ಲಿಯ ಕವಿತೆಗಳು ನೀಡುತ್ತವೆ.

ರಮೇಶ್ ಗುಬ್ಬಿಯವರ ಇಲ್ಲಿಯ ತನಕದ ಕವಿತೆಗಳು ಜಗತ್ತನ್ನು ಬೆರಗಿನಿಂದ ನೋಡಿದ, ಜೀವನದ ಹಲವು ಸಂಗತಿಗಳನ್ನು ದಾಖಲಿಸಿದ ಕೃತಕೃತ್ಯತೆಯನ್ನು ಪಡೆದವುಗಳಾಗಿದ್ದವು. ಇದು ಅದಕ್ಕಿಂತಲೂ ಭಿನ್ನವಾದ ಪ್ರಯತ್ನ ಎಂಬುದು ಅವರ ಕಾವ್ಯಪ್ರಯಾಣವನ್ನು ಗಮನಿಸುತ್ತಿರುವ ಯಾರೇ ಆದರೂ ಒಪ್ಪತಕ್ಕ ಮಾತು. ರಮೇಶರವರ ಹೆಚ್ಚುಗಾರಿಕೆಯೆಂದರೆ ಇಲ್ಲಿಯ ಕವಿತೆಗಳು ಕೇವಲ ಕಾವ್ಯಪ್ರಯೋಗಗಳಾಗಿ ದಾಖಲುಗೊಂಡಿರುವಂಥವಲ್ಲ; ಬದಲಾಗಿ ಭಾವಾನುಸಂಧಾನದ ನೆಲೆಯಲ್ಲಿ ಅಭಿವ್ಯಕ್ತಿ ಪಡೆದ ಕಾವ್ಯ ಕುಸುಮಗಳು. ಇದರ ಓದೆಂಬ ಪರಾಗಸ್ಪರ್ಶ ಸುಗಂಧಭರಿತವಾಗಿ ನಮ್ಮೆದೆಯನ್ನು ಪಸರಿಸಿ ಅನುಭಾವವನ್ನೂ, ಅದ್ವಿತದ ಸಂವೇದನೆಯನ್ನು ತಾನೇ ತಾನಾಗಿ ಅರಳಿಸಬಲ್ಲ ಚೈತನ್ಯದಾಯಿ ಕಸುವುಳ್ಳಂಥವುಗಳು.

ಇಲ್ಲಿಯ ಕವಿತೆಗಳಿಗೆ ಬಹು ನಿಶ್ಚಿತವಾದ ನಡೆ ಮತ್ತು ಗುರಿಯಿದೆ. ಇದು ಹಲವು ಕವಿತೆಗಳಲ್ಲಿ ಅಮೂರ್ತದೆಡೆಗಿನ ಹುಡುಕಾಟವಾಗಿ, ಒಂದು ಒಳಗಿನ ತುಡಿತವೂ ಆಗಿ ಬೆಳೆವ ಪರಿ ಅನನ್ಯವಾಗಿದೆ. ಕವಿಗೆ ಶಬ್ದದೊಳಗಿನ ನಿಶ್ಯಬ್ದವನ್ನು ಹಿಡಿಯುವ, ಮೌನದೊಳಗಿನ ಮಾತನ್ನು ಆಲಿಸುವ ಆಕಾಂಕ್ಷೆ ಮೊಳೆಯುತ್ತಿದೆ. ಇದು ಈವರೆಗಿನ ವಾಸ್ತವದ ಬದುಕಿನ ವೇಗಕ್ಕಿಂತಲೂ 'ನಿಧಾನ ಶೃತಿ'ಯನ್ನು ಮೀಟುವ ತವಕವಾಗಿ ಕವಿಹೃದಯದ ಭಾವವನ್ನು ತೆರೆದು ತೋರುತ್ತಿದೆ. ಬದುಕಿನ ಸಾರ್ಥಕತೆ ಎಲ್ಲಿದೆ ಎಂದು ಕೇಳಿಕೊಂಡಾಗ, ಅದು ಮೆಲ್ಲನೆ ಪಿಸುನುಡಿಯಲ್ಲಿ ನುಡಿಯುತ್ತಿರುವ ಸತ್ಯ ವಾಸ್ತವತೆಗಿಂತ ದಿವ್ಯವಾದದ್ದರ ಇರುವಿಕೆಯಲ್ಲಿ ಕವಿಗೆ ಸ್ಪಷ್ಟವಾಗಿ ಗೋಚರವಾಗುತ್ತಿದೆ. ತುಂಬ ಸಂತೋಷದ ಸಂಗತಿ ಎಂದರೆ ಇಂತಹ ಸಂಗತಿಗಳನ್ನು ದಾಖಲಿಸುವಾಗ ಕೂಡಾ ರಮೇಶ್ ಗುಬ್ಬಿ ಯಾವುದೇ ಪೂರ್ವಾಗ್ರಹವಿಲ್ಲದ, ಯಾವುದೇ ಇಸಂಗಳಿಗೆ ಒಳಗಾಗದ, ಅನಿಸಿದ್ದನ್ನು ಅನಿಸಿದಂತೆ ಸೂಕ್ಷ್ಮವಾಗಿ ಗಮನಿಸಿ, ಅನುಭವಿಸಿ ಬರೆಯಬಲ್ಲ ಸಮತ್ವವನ್ನು ಸಾಧಿಸಿರುವುದು. ರಮೇಶರು ತಮ್ಮ ಕಾವ್ಯಕನ್ನಿಕೆಯನ್ನು ಕಂಡುಕೊಳ್ಳುವ ಪರಿಯೂ ವಿಶಿಷ್ಟವಾದದ್ದು 

"ಹುಟ್ಟಬೇಕೆಂದರೆ ಕವಿತೆ 

ಸಂತೆಯಿಂದ ಆಚೆಬಂದು 

ಏಕಾಂತದಲ್ಲಿ ಸಂತನಾಗಿ 

ಹೊಕ್ಕಬೇಕು ನಮ್ಮೊಳಗೆ ನಾವೆ"

ಮೇಲಿನ ಸಾಲುಗಳನ್ನು ಗಮನಿಸಿದರೆ ಭಿನ್ನವಾದ ಹುಡುಕಾಟದ ಮಾದರಿಯನ್ನು ದಾಖಲಿಸುವತ್ತ ಕವಿಯ ಚಿತ್ತ ಸನ್ನದ್ಧವಾದದ್ದರ ಹೊಳಹು ಸಿಗುತ್ತದೆ. 'ನಾನೃಷಿಃ ಕುರುತೇ ಕಾವ್ಯಂ' ಎಂಬ ಮಾತಿದೆ. ಕವಿತೆಯೆಂದರೆ ಒಂದು ಧ್ಯಾನ. ಒಂದು ಬೆರಗು!

 ಒಂದು ನಿಶಃಬ್ಬ ಮೌನ. ಒಂದು ತುಡಿತ. ಒಂದು ಮಿಡಿತ. ಇಲ್ಲಿಯ ಕವಿ ಇದನ್ನು ಅನುಭವಿಸುವ ತವಕದಲ್ಲಿದ್ದಾನೆ. ಹಾಗಾಗಿ ಆತನ ಬಯಕೆಯಿರುವುದು ಒಳಗಿದೆ ಏಕಾಂತವನ್ನು ಸಾಧಿಸುವಲ್ಲಿ, ಕವಿಯೆದೆಯ ಸಾರವನ್ನೇ ಧಾರೆಯಾಗಿ ಬಸಿದು, ಬದುಕ ಬೆಳಗಿಸುವ ಹಂಬಲ ರಮೇಶರ ಕವಿತೆಗಳಿಗಿವೆ. ಆದರೆ ಇದು ಕೇವಲ ಆದರ್ಶವಾಗಿ ಮಾತ್ರವಲ್ಲ; ಬದುಕಿನ ವಾಸ್ತವತೆಗೆ ಬೆನ್ನು ತೋರಿಸುವ ಪಲಾಯನವೂ ಅಲ್ಲ. 'ಕೊಳೆವ ಶವದ ಸತ್ಯ ಕಾಣಲು, ಗೋರಿಯ ಮೇಲೊಮ್ಮೆ ಕುಳಿತುಬಿಡು, ಹಾರುವ ಆತ್ಮದ ಭ್ರಾಂತಿ ಕಳೆಯಲು ಉರಿವ ಚಿತೆಯಲೊಮ್ಮೆ ಕಣ್ಣುನೆಡು" ಎನ್ನುವ ಧಾರ್ಷ್ಟ್ಯವೂ ಕವಿತೆಗಿದೆ. ಒಂದು ಬಹುದೊಡ್ಡ ತಾತ್ವಿಕ ಮಟ್ಟವನ್ನು ಮುಟ್ಟುವ ಕವಿತೆಗಳ ನಡೆ ವಿನಮ್ರತೆಯನ್ನು ಮಾನವೀಯತೆಯನ್ನು, ಸಮತ್ವವನ್ನು, ಸಮನ್ವಯವನ್ನು ಗಾಢವಾದ ಶ್ರದ್ಧೆಯಲ್ಲಿ ಸಾಧಿಸುವ ಹೆಚ್ಚುಗಾರಿಕೆಯನ್ನು ಇಲ್ಲಿಯ ಬಹುತೇಕ ಕವಿತೆಗಳು ಪಡೆದುಕೊಂಡಿವೆ.

“ಮಣ್ಣಾಗುವ ಮುನ್ನ ಕಲಿಯಬೇಕಿದೆ ಇನ್ನು

 ಭುವಿಯಾಗುವುದನ್ನು ಬಯಲಾಗುವುದನ್ನು 

ಏಳು-ಬೀಳುಗಳಲಿ ನಗುನಗುತ ಬಾಳುವುದನ್ನು

 ಮಣ್ಣಾದ ಮೇಲೂ ಬೆಳಗಿ ಬೆಳಕಾಗುವುದನ್ನ"

ಎಂದು ಹೇಳುವ ಕವಿತೆಯ ತಾತ್ವಿಕ ಎಚ್ಚರ ನಮ್ಮನ್ನು ಹೊಸ ಆಲೋಚನೆಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತದೆ. ಅದರ ದೈವದ ಹುಡುಕಾಟ ಮತ್ತು ಒಳಗನ್ನು 'ಕಂಡು'ಕೊಳ್ಳುವ ಪರಿ ಕೂಡಾ ಅನನ್ಯವಾದ ಸಾಹಿತ್ಯಕ ನಡೆಯಾಗಿ ದಾಖಲಾಗುತ್ತದೆ.

ಇಲ್ಲಿಯ ಕವಿತೆಗಳಲ್ಲಿ ತಾನೇನನ್ನೋ ವಿಶೇಷವಾದದ್ದನ್ನು ಹೇಳುತ್ತಿದ್ದೇನೆ ಎಂಬ 'ಅಹಂ' ಇಲ್ಲ, ಗೊತ್ತೆಂಬ ಗತ್ತು ಇಲ್ಲ. ನನಗನಿಸಿದ್ದು ನಿಮಗೂ ಅನಿಸಿರಬಹುದೆಂಬ ವಿನಯವಿದೆ. ಬದುಕನ್ನು ತೆರೆದ ಕಣ್ಣಿಂದ ನೋಡುವ ಕೌತುಕವಿದೆ. ತನಗಿಂತ ಹಿರಿದಾದ್ದರ ಕುರಿತ ವಿನಮ್ರತೆಯಿದೆ. ಶಕ್ತಿಯ ಆರಾಧನೆಯಿದೆ. ಇಹಕ್ಕೂ-ಪರಕ್ಕೂ ಬೆಸೆಯಬಲ್ಲ ನಂಟಿನ ಹೊಳಹಿದೆ. ಸಾದಾ-ಸೀದಾ ಎಂಬ ಮಾತುಗಳಲ್ಲಿ ಸಾದಾ-ಸೀದಾ ಅಲ್ಲದ ಅನೇಕ ಒಳನೋಟವಿದೆ. ಬದುಕಿಗೆ ಯಾವುದು ಮುಖ್ಯವಾಗಬೇಕು ಎಂಬ ದರ್ಶನವಿದೆ. ಒಟ್ಟಿನಲ್ಲಿ ರಮೇಶರ ಕವಿತೆಗಳು ವಿಶ್ವತೆಯೆಡೆಗಿನ ಪಯಣವಾಗಿ ಗಮನ ಸೆಳೆಯುವ ಉತ್ತಮೋತ್ತಮ ಪ್ರಯತ್ನ ಎಂಬಲ್ಲಿ ಎರಡು ಮಾತಿಲ್ಲ.

ರಮೇಶ್ ಗುಬ್ಬಿಯವರ ಈ ಆತ್ಮಾನುಸಂಧಾನದ ಬರವಣಿಗೆ ನಿರಂತರವಾಗಿರಲಿ. ಭಾವಾನುಸಂಧಾನದ ಕಾವ್ಯ ಮೆರವಣಿಗೆ ಚಿರಂತನವಾಗಿರಲಿ ಎಂದು ಹಾರೈಸುತ್ತ, ಇವರಿಂದ ಮತ್ತಷ್ಟು ಕೃತಿಗಳು ಮೂಡಿ ಬಂದು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಲಿ. ಕಾವ್ಯಾಸಕ್ತರ ಎದೆಗಳನ್ನು ಮುದಗೊಳಿಸಲಿ ಎಂದು ಶುಭ ಕೋರುತ್ತೇನೆ.

- ಡಾ. ಸಂಧ್ಯಾ ಹೆಗಡೆ, ದೊಡ್ಡಹೊಂಡ. 

ಕವಿಯತ್ರಿ, ಕಥೆಗಾರ್ತಿ, ಲೇಖಕಿ, ಮುಖ್ಯಸ್ಥರು, ಕನ್ನಡ ವಿಭಾಗ, 

ಎನ್.ಎಮ್.ಕೆ.ಆರ್.ವಿ. ಮಹಿಳಾ ಕಾಲೇಜು. ಬೆಂಗಳೂರು.

MORE NEWS

ಅಪರಾಧ ಪತ್ತೆಗಿಂತ ಅಪರಾಧ ತಡೆ ಬಹು ಮುಖ್ಯ; ಡಿ.ವಿ. ಗುರುಪ್ರಸಾದ್

21-06-2024 ಬೆಂಗಳೂರು

‘ಹೇಗೆ ಅಪರಾಧಗಳು ನಡೆಯುತ್ತವೆ ಎಂದು ಗೊತ್ತಾದರೆ ನಾವು ಆ ರೀತಿಯ ಅಪರಾಧಗಳಿಗೆ ಹೇಗೆ ಬಲಿಯಾಗದಿರಬಹುದು ಎಂಬ ತಿಳುವ...

ಈ ಕೃತಿ ಪ್ರಕಾಶ ಭಟ್ ಅವರ ಮೂರು ದಶಕಗಳ ಅನುಭವದ ಮೂಸೆಯಿಂದ ಬಂದಿರುವ ಪುಸ್ತಕ; ತೇಜಸ್ವಿ ಕಟ್ಟಿಮನಿ

21-06-2024 ಬೆಂಗಳೂರು

‘ಗ್ರಾಮ-ವಿಕಾಸದ ತಂತ್ರಗಳ ಜೊತೆ ಜೊತೆಯಲ್ಲಿ ಅದರಲ್ಲಿ ತೊಡಗಿರುವವರು ಹೇಗಿರಬೇಕು ಎನ್ನುವುದನ್ನು ಉದಾಹರಣೆಗಳೊಂದಿಗ...

ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನ ಲೋಕಾರ್ಪಣೆ

10-06-2024 ಬೆಂಗಳೂರು

ಬೆಂಗಳೂರು: ಸವಿರಾಜ್ ಆನಂದೂರು ಅವರ ‘ಗಂಡಸರನ್ನು ಕೊಲ್ಲಿರಿ’ ಕವನ ಸಂಕಲನವನ್ನು 2024 ಜೂನ್ 09ರಂದು ಕಲಾಗ್...