'ಬಿಸಿ ಬಿಸಿ ಬಾತು' ಮಕ್ಕಳ ಕೃತಿ ಬಿಡುಗಡೆ ಮತ್ತು ಪ್ರಶಸ್ತಿ ಪ್ರದಾನ

Date: 10-11-2024

Location: ಧಾರವಾಡ


ಧಾರವಾಡ: 'ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯ ಬಹು ಮುಖ್ಯವಾದ ಘಟ್ಟ. ಇಂದಿನ ಮಕ್ಕಳು ಅದರಿಂದ ವಂಚಿತರಾಗುತ್ತಿದ್ದಾರೆ.' ಎಂದು ಕವಯಿತ್ರಿ ಸವಿತಾ ನಾಗಭೂಷಣ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ‌ ಮಕ್ಕಳ ಕವಿ ರಾಜಶೇಖರ ಕುಕ್ಕುಂದಾ ಅವರ ಮಕ್ಕಳ ಕೃತಿ 'ಬಿಸಿ ಬಿಸಿ ಬಾತು' ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. 'ಮಕ್ಕಳನ್ನು ಆಟಕ್ಕೆ ಬಿಡದೆ ಪಠ್ಯವನ್ನು ಓದಿಸುವ ಈ ಕಾಲದ ಪರಿ ಅವರನ್ನು ಯಂತ್ರಮಾನವರನ್ನಾಗಿಸುತ್ತಿದೆ. ನಮಗೆ ಬಾಲ್ಯದಲ್ಲಿ ಇಂಥ ಕಠೋರ ನಿರ್ಭಂದಗಳಿರಲಿಲ್ಲ. ನಾವು ಬಯಲಿಗೆ ಬೀಳುತ್ತಿದ್ದವು. ಹಕ್ಕಿ ಗೂಡಿನಲ್ಲಿ ತತ್ತಿ, ಕೆರೆಯ ದಂಡೆಯಲಿ ಹಾರುವ ಕಪ್ಪೆ , ಹರಿದಾಡವ ಹಾವನ್ನು ಕಾಣುತ್ತಿದ್ದೆವು. ಇಂದಿನ ಮಕ್ಕಳಿಗೆ ಇಂಥ ಅವಕಾಶಗಳೇ ಇಲ್ಲ; ಅವರು ಮನೆಯಿಂದ ಹೊರಗೆ ಬಂದರೆ ಬೀದಿಯೇ. ಆಟದ ಬಯಲೇ ಇಲ್ಲದಂತಾಗುತ್ತಿದೆ. ಮಗುತನವನ್ನು ಇನ್ನೂ ಹಾಗೆ ಉಳಿಸಿಕೊಂಡು ಬಂದ ರಾಜಶೇಖರ ಕುಕ್ಕುಂದಾ ಅವರ ಕವಿತೆಗಳು ನಮ್ಮ ಬಾಲ್ಯದ ದಿನಗಳನ್ನು ನೆನಪಿಗೆ ತಂದು ಇಂದಿನ ಮಕ್ಕಳಿಗೂ ಸೆಳೆಯುವ ಉತ್ತಮ ರಚನೆಗಳಾಗಿವೆ. ಕವಿತೆಯ ಆಶಯ ಮನೋರಂಜನೆ ಮಾತ್ರ ಆಗದೇ ಅದರಿಂದ ಸಂದೇಶ ರವಾನೆಯೂ ಆಗಲಿ. ಅವರಿಂದ ಇನ್ನೂ ಉತ್ತಮ ಕೃತಿಗಳು ಹೊರಬರಲಿ ಎಂದು ಆಶಿಸುತ್ತೇನೆ.' ಎಂದರು.

ಈ ಸಲದ ಜಿ. ಬಿ. ಹೊಂಬಳ ಪ್ರಶಸ್ತಿಗೆ ಭಾಜನರಾದ ಕವಿ ರಾಜಶೇಖರ ಕುಕ್ಕುಂದಾ ಅವರು ಮಾತನಾಡಿ ಪ್ರತಿ ವರ್ಷ ತಮ್ಮ ಜನ್ಮದಿನದಂದು ಒಂದು ಕೃತಿ ಜನ್ಮ ತಾಳುವಂತೆ ಮಾಡುವ ಹೊಸ ಸಂಪ್ರದಾಯವನ್ನು ಹುಟ್ಟು ಹಾಕಿದ ನಿವೃತ್ತ ಗ್ರಂಥಪಾಲಕರಾದ ಜಿ.ಬಿ.ಹೊಂಬಳ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಹಲಗತ್ತಿಯವರು 'ಮಕ್ಕಳ ಸಾಹಿತ್ಯವನ್ನು ಜನಪ್ರಿಯಗೊಳಿಸುವತ್ತ ಆದ್ಯತೆ ನೀಡಬೇಕು. ಪ್ರಕಟಿತ ಪುಸ್ತಕಗಳು ಮಕ್ಕಳಿಗೆ ದೊರೆಯುವಂತಾಗಬೇಕು. ಎಂದರು.

ಮಕ್ಕಳ ಸಾಹಿತ್ಯಾಸಕ್ತರ ಗೆಳೆಯರ ಬಳಗ ಮತ್ತು ಚಿಲಿಪಿಲಿ ಪ್ರಕಾಶನ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಚಂದ್ರಕಾಂತ ಬೆಲ್ಲದ ವಹಿಸಿದ್ದರು. ಡಾ. ಆನಂದ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಸಾಹಿತಿಗಳಾದ ಡಾ. ಮಾಲತಿ ಪಟ್ಟಣಶೆಟ್ಟಿ, ಶ್ಯಾಮಸುಂದರ ಬಿದರಕುಂದಿ, ಡಾ. ಸಿ.ಯು. ಬೆಳ್ಳಕ್ಕಿ, ಡಾ. ಬಸು ಬೇವಿನಗಿಡದ, ರಾಜಕುಮಾರ ಕುಲಕರ್ಣಿ, ಅನಿಲ ಗುನ್ನಾಪುರ, ಪ್ರಕಾಶ ಕಡಮೆ, ನಿರ್ಮಲಾ ಶೆಟ್ಟರ್, ಶ್ರೀಧರ ಗಸ್ತಿ, ವಿಶಾಲ ಮ್ಯಾಸರ್ ಮುಂತಾದವರು ಉಪಸ್ಥಿತರಿದ್ದರು.

MORE NEWS

ಈ ಕಥಾ ಸಂಕಲನದಲ್ಲಿ ದಟ್ಟ ಕಾಡಿನ ರೌದ್ರ ವರ್ಣನೆ ಓದುಗರನ್ನು ಮೋಹಗೊಳಿಸುತ್ತದೆ‌

22-10-2024 ಬೆಂಗಳೂರು

“ಈ ಸಂಕಲನ ಮಲೆಯ ಮಹದೇಶ್ವರದ ತಪ್ಪಲಿನ ಗುಡ್ಡಗಾಡು ಜನರ ಬದುಕುಗಳ ಚಿತ್ರಣಗಳನ್ನು ಬಲು ನಿಖರವಾಗಿ ಕೊಡುತ್ತದೆ&rdqu...

ಈ ಕೃತಿ ಶ್ರೀಧರ ನಾಯಕ್ ಅವರ ಆತ್ಮಚರಿತ್ರೆಯ ಆಯ್ದ ಭಾಗವಿದ್ದಂತೆ

15-10-2024 ಬೆಂಗಳೂರು

“ಪತ್ರಿಕೋದ್ಯಮದಲ್ಲಿ ವರದಿಗಾರಿಕೆ ಎನ್ನುವುದು ವಾಸ್ತವಾಂಶಗಳನ್ನು ಜಾಗರೂಕವಾಗಿ, ನಿಖರವಾಗಿ ಮರು ಸೃಷ್ಟಿಸುವ ಕಲೆ&...

ಈ ಕವನ ಸಂಕಲನದಲ್ಲಿ ಬೇರೆ ಬೇರೆ ಆಸಕ್ತಿಯ ವಿಚಾರಗಳನ್ನು ಕಾಣಬಹುದು

15-10-2024 ಬೆಂಗಳೂರು

“ಭೂತಾಯಿಯ ಹೊರತಾಗಿ ಬಂದ ಕವನಗಳನ್ನೆಲ್ಲಾ ಸೇರಿಸಿ ಪ್ರತ್ಯೇಕವಾದ ಒಂದು ಕವನ ಸಂಕಲನವನ್ನು ಹೊರ ತರುವ ಆಲೋಚನೆ ಮನಸ್...